ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲತಾಯಿ ದೆಸೆಯಿಂದ ಕುರುಡನಾದ ಅಶೋಕ ಪುತ್ರ

By Staff
|
Google Oneindia Kannada News

*ಎಂ.ವಿ.ನಾಗರಾಜ ರಾವ್‌

Mourya King Ashokaಸಾಮ್ರಾಟ ಅಶೋಕನ ಹಿರಿಯ ಮಗ ಕುನಾಲ. ಸುಂದರಾಂಗ, ಗುಣವಂತ. ತನ್ನ ಪತ್ನಿ ಶರತ್‌ಶ್ರೀ ಜೊತೆ ಉಜ್ಜಯಿನಿಯಲ್ಲಿ ವಾಸಿಸುತ್ತಿದ್ದ. ಅಶೋಕನಿಗೆ ತನ್ನ ಮಗ ಸದಾ ಅಧ್ಯಯನ ಶೀಲನಾಗಿರಬೇಕೆಂಬುದು ಆಸೆ. ಒಂದು ದಿನ ಅವನು ಕುನಾಲನಿಗೆ ಪ್ರಾಕೃತ ಭಾಷೆಯಲ್ಲಿ ಚೆನ್ನಾಗಿ ಅಧ್ಯಯನ ಮಾಡು ಎಂದು ಪತ್ರ ಬರೆದ. ಆ ಸಮಯದಲ್ಲಿ ಕುನಾಲನ ಮಲತಾಯಿ ರಾಣಿ ತಿಷ್ಯರಕ್ಷಿತಾ ಹತ್ತಿರದಲ್ಲೇ ಇದ್ದಳು. ಅಧ್ಯಯನ ಎಂಬ ಶಬ್ದಕ್ಕೆ ಪ್ರಾಕೃತದಲ್ಲಿ ಅಧಿಲು ಎಂದು ಬರೆಯಲಾಗಿತ್ತು. ರಾಣಿಗೆ ಕುನಾಲನ ಬಗ್ಗೆ ಒಲವು ಇರಲಿಲ್ಲ.

ಇದೇ ಅವಕಾಶವನ್ನು ಉಪಯೋಗಿಸಿಕೊಂಡು ರಾಜನಿಗೆ ತಿಳಿಯದಂತೆ ಕಣ್ಣು ಕಪ್ಪಿನಿಂದ ಅಧೀಲು ಶಬ್ದವನ್ನು ಅಂಧೀಲು ಎಂದು ತಿದ್ದಿದಳು. ಕೇವಲ ಒಂದು ಸೊನ್ನೆಯಿಂದ ಶಬ್ದದ ಅರ್ಥವೇ ಬದಲಾಯಿತು. ಅಧ್ಯಯನ ಮಾಡು ಎನ್ನುವುದರ ಬದಲಾಗಿ ಕುರುಡನಾಗು ಎಂದು ಅರ್ಥವಾಯಿತು.

ಪಾಟಲಿಪುತ್ರದ ಸಾಮ್ರಾಟನ ಮೊಹರಾದ ಲಕೋಟೆಯನ್ನು ದೂತ ಕುನಾಲನಿಗೆ ಜೋಪಾನವಾಗಿ ತಲುಪಿಸಿದನು. ಕುನಾಲ ಮತ್ತು ಶರತ್‌ಶ್ರೀ ಇಬ್ಬರೂ ಸಾಮ್ರಾಟನ ಪತ್ರವನ್ನು ಕುತೂಹಲದಿಂದ ಒಡೆದು ಓದಿದರು. ಅದರ ಒಕ್ಕಣೆಯನ್ನು ಓದಿ ಇಬ್ಬರಿಗೂ ಆಕಾಶವೇ ಕಳಚಿ ಬಿದ್ದಂತಾಯಿತು. ಪತ್ರದಲ್ಲಿ ಅಶೋಕನ ಹಸ್ತಾಕ್ಷರ ಮತ್ತು ರಾಜಮುದ್ರೆ ಇತ್ತು. ಆದ್ದರಿಂದ ಅವರು ಪತ್ರವನ್ನು ನಿಜ ಎಂದೇ ತಿಳಿದರು.

ತಂದೆಗೆ ತನ್ನ ಮೇಲೆ ಇಂಥ ಕೋಪ ಬರಲು ಕಾರಣವೇನೆಂದು ಕುನಾಲನಿಗೆ ತಿಳಿಯಲಿಲ್ಲ . ಆದರೆ ತಂದೆಯ ಆಜ್ಞೆಯೇ ಅಲ್ಲದೆ ಅದು ರಾಜಾಜ್ಞೆಯೂ ಹೌದು. ಕುನಾಲ ಒಂದು ಅಗ್ಗಿಷ್ಟಿಕೆಯನ್ನು ತರಿಸಿದನು. ಅದರಲ್ಲಿ ಒಂದು ಕಬ್ಬಿಣದ ಸಲಾಕೆಯನ್ನು ಮಿಣಮಿಣನೆ ಕಾಯಿಸಿದನು. ಹೆಂಡತಿ ಮತ್ತು ಆಪ್ತರು ಅವನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಕುನಾಲ ಒಂದಿಷ್ಟೂ ಅಳುಕದೆ ಕಾಯಿಸಿದ ಸಲಾಕಿಯಿಂದ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡನು. ಈಗ ಕುನಾಲ ತಂದೆಯ ಆಣತಿಯಂತೆ ಕುರುಡನಾದನು.

ರಾಜ್ಯದ ಸುಖ- ವೈಭವಗಳಲ್ಲಿ ಅವನಿಗೆ ವಿರಕ್ತಿ ಉಂಟಾಯಿತು. ತಂದೆ ತನ್ನ ಮೇಲೆ ಕೋಪಗೊಂಡಿರುವುದರಿಂದ ಅರಮನೆಯಲ್ಲಿರುವುದು ಅವನಿಗೆ ಇಷ್ಟವಾಗಲಿಲ್ಲ . ಪತಿ-ಪತ್ನಿ ನಗರದಿಂದ ಹೊರನಡೆದರು. ಅಶೋಕನಿಗೆ ಇದಾವುದೂ ತಿಳಿದಿರಲಿಲ್ಲ. ವೃದ್ಧಾಪ್ಯದ ಕಾರಣದಿಂದ ಅವನ ಆರೋಗ್ಯ ಹದಗೆಟ್ಟಿತು. ಅಶೋಕ ಈಗ ಕುನಾಲನನ್ನು ನೋಡಲು ಅಪೇಕ್ಷಿಸಿದನು. ಅವನಿಗೆ ಭಟರಿಂದ ನಿಜ ಸಂಗತಿ ತಿಳಿಯಿತು. ಅಶೋಕ ದುಃಖಿಸಿದನು. ವರ್ಷಗಳು ಉರುಳಿದವು. ಕುನಾಲನಿಗೆ ಒಬ್ಬ ಮಗ ಹುಟ್ಟಿದನು. ಕುನಾಲ ಊರೂರು ಸುತ್ತುತ್ತಾ ಪಾಟಲೀಪುತ್ರಕ್ಕೆ ಬಂದನು. ತನ್ನ ತಂದೆಯನ್ನು ಕಾಣಲು ಅರಮನೆಗೆ ಪತ್ನಿ ಮತ್ತು ಮಗನ ಜೊತೆ ಹೋದನು. ಅಶೋಕನಿಗೆ ಅವನನ್ನು ಆ ಕೂಡಲೇ ಗುರುತಿಸಲಾಗಲಿಲ್ಲ.

ಕೊನೆಗೆ ಮಗ ಸೊಸೆ ಮತ್ತು ಮೊಮ್ಮಗನನ್ನು ಕಂಡು ಸಂತೋಷಗೊಂಡನು. ವಿಷಯ ತಿಳಿದು ಪತ್ನಿ ತಿಷ್ಯರಕ್ಷಿತಳನ್ನು ಸೆರೆಮನೆಗೆ ಕಳುಹಿಸಿದನು. ತನ್ನ ಮೊಮ್ಮಗನಿಗೆ ರಾಜ್ಯ ಪಟ್ಟಾಭಿಷೇಕ ಮಾಡಿದನು. ಈಗ ಅವನಿಗೆ ಸಮಾಧಾನವಾಯಿತು.

ನೀತಿ : ತಂದೆಯ ಮಾತು ಮಗನಿಗೆ ವೇದ ವಾಕ್ಯ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X