ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಪರಿಷತ್ತು ಮಾಡಬೇಕಾದ್ದೇನು... ಅನಂತಮೂರ್ತಿ ಹೇಳುತ್ತಾರೆ...

By Super
|
Google Oneindia Kannada News

ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯ ಚಟುವಟಿಕೆಗಳ ವ್ಯಾಪ್ತಿ ಯನ್ನು ವಿಸ್ತರಿಸಿಕೊಳ್ಳಬೇಕಾದ ಅಗತ್ಯದ ಕುರಿತು ಪ್ರತಿಪಾದಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಯು.ಆರ್‌.ಅನಂತಮೂರ್ತಿ, ಹಳ್ಳಿ ಹಳ್ಳಿಯಲ್ಲಿ ಅಕ್ಷರ ಜ್ಞಾನ ಮೂಡಿಸುವ ಮೂಲಕ ಕನ್ನಡ ಜಾಗೃತಿ ಮೂಡಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಷರ ಸಂಸ್ಕೃತಿ ಪ್ರಸರಣದ ಕಾರ್ಯವನ್ನು ಕಸಾಪ ತನ್ನ ಚಟುವಟಿಕೆಗಳ ಭಾಗವೆಂದೇ ತಿಳಿಯಬೇಕಿದೆ. ಕನ್ನಡ ಬಾರದವರೆಲ್ಲರೂ ಕರ್ನಾಟಕದಲ್ಲಿ ಅನಕ್ಷರಸ್ಥರೇ. ಅವರಲ್ಲಿ ಕನ್ನಡ ಬೀಜ ಬಿತ್ತುವ ಕೆಲಸವನ್ನು ಪರಿಷತ್ತು ಮಾಡಬೇಕಿದೆ. ಇದೇನೂ ಉಗ್ರ ಸ್ವರೂಪದಿಂದ ಆಗಬೇಕಿಲ್ಲ ಎಂದು ಬೆಳಗಾವಿಯಲ್ಲಿ ನಡೆದ ಸಾಹಿತಿಯಾಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಹೃದಯರೊಂದಿಗೆ ಮುಖಾಮುಖಿಯಾದ ಅನಂತಮೂರ್ತಿ ಹೇಳಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುರುವಾರ (ಏ.25) ಈ ಕಾರ್ಯಕ್ರಮ ಏರ್ಪಡಿಸಿತ್ತು .

ಸಂಸ್ಕೃತಿಯ ವಿಷಯದಲ್ಲಿ ಇವತ್ತಿಗೂ ಗ್ರಾಮೀಣರು ಸಿರಿವಂತರು. ಇಂಗ್ಲೀಷ್‌ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದರಿಂದ ಮಕ್ಕಳಿಗೆ ಕನ್ನಡ- ಇಂಗ್ಲೀಷ್‌ ಎರಡೂ ಭಾಷೆಯೂ ಸರಿಯಾಗಿ ಬರುವುದಿಲ್ಲ . ಇದು ಸಾಂಸ್ಕೃತಿಕ ದರಿದ್ರತನ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತ್ಯ ಸಂವಾದದಲ್ಲಿ ಮೂಡಿಬಂದ ಮಿಂಚುಗಳು :

ಸಮಾನತೆಯ ಹಸಿವು, ಆಧ್ಯಾತ್ಮಿಕತೆಯ ಹಸಿವು ಹಾಗೂ ಆಧುನಿಕತೆಯ ಹಸಿವು ಸಮಾನವಾಗಿರಬೇಕು. ಅಂತಹ ವಾತಾವರಣವನ್ನು ಸಾಹಿತ್ಯ ಪರಿಷತ್‌ ಸೃಷ್ಟಿಸಬೇಕು.
ನಮ್ಮ ಕನ್ನಡದ ಅಸ್ತಿತ್ವವನ್ನು ಉಳಿಸಿಕೊಂಡೇ ನಾವು ವಿಶ್ವ ಮಾನವರಾಗಬೇಕು. ಆದರೆ, ಜಾಗತೀಕರಣ ಸಂದರ್ಭದಲ್ಲಿ ಭಾರತ ತನ್ನ ಸಂಸ್ಕೃತಿ, ಭಾಷೆ ಹಾಗೂ ಸ್ಥಳೀಯತೆಯನ್ನು ಬಿಟ್ಟುಕೊಡುತ್ತಿದೆ. ನಮ್ಮದನ್ನು ಬಿಟ್ಟುಕೊಟ್ಟು ಜಾಗತಿಕರಾಗುವುದು ಅಪಾಯಕರ.
ಜಗತ್ತಿನ ಯಾವ ಭಾಷೆಯಲ್ಲೂ ಇರದ ಸಮೃದ್ಧ ಸಾಹಿತ್ಯ ಕನ್ನಡದಲ್ಲಿದೆ. ಜಗತ್ತಿನ ಯಾವ ಸಾಹಿತ್ಯಕ್ಕೂ ಸಾಟಿಯಾಗಬಲ್ಲ ಸಾಹಿತ್ಯವೂ ನಮ್ಮಲ್ಲಿದೆ. ಇದಕ್ಕಾಗಿ ಕನ್ನಡಿಗರು ಗರ್ವ ಪಡಬೇಕು.
21 ನೇ ಶತಮಾನದಲ್ಲಿ ಆಧ್ಯಾತ್ಮಿಕತೆಯ ಹಸಿವು ಬೆಳೆಯುವುದು ಮತೀಯತೆಯ ಮೂಲಕ ಅಲ್ಲ , ಸಾಹಿತ್ಯ ಕೃತಿಗಳ ಮೂಲಕ. ಸಾಹಿತ್ಯ ಸೃಷ್ಟಿಯಾಗುವುದು ಆಂದೋಲನಗಳ ಮೂಲಕ ಅಲ್ಲ , ತಪಸ್ಸಿನ ಮೂಲಕ. ವಾಲ್ಮೀಕಿ ಮಾಡಿದಂಥ ತಪಸ್ಸಿನಿಂದ ಶ್ರೇಷ್ಠ ಕೃತಿಗಳು ಜನಿಸುತ್ತವೆ. ನಮ್ಮ ತಪಸ್ಸು ಜಗತ್ತನ್ನು ಕಾಣುವ ತಪಸ್ಸಾಗಬೇಕು.
ಸಾಹಿತ್ಯ ಪರಿಷತ್ತಿಗೆ ಹರಿಕೃಷ್ಣ ಪುನರೂರು ಅವರಂಥ ಅಧ್ಯಕ್ಷರ ಜರೂರಿತ್ತು . ಅವರು ಅತ್ಯಂತ ಕ್ರಿಯಾಶೀಲರು. ಆದರೆ, ಆತ ಲೇಖಕನೂ ಆಗಿದ್ದರೆ ಚೆನ್ನಾಗಿತ್ತು .

ಸಂವಾದ ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು, ರಾಜ್ಯದಲ್ಲಿ 300 ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸಲು ಮುಖ್ಯಮಂತ್ರಿಗಳು ನಾಟಕೀಯವಾಗಿ ತಡೆ ಆದೇಶ ನೀಡಿದ್ದರೂ, ಶಾಲೆ ಆರಂಭವಾಗಿವೆ ಎಂದರು. ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ಎಂ.ಹರದಗಟ್ಟಿ , ತಾಲ್ಲೂಕು ಕಸಾಪ ಅಧ್ಯಕ್ಷ ಎಚ್‌.ಐ.ತಿಮ್ಮಾಪುರ ಕಾರ್ಯಕ್ರಮದಲ್ಲಿ ಹಾಜರಿದ್ದರು.

English summary
Discussion program held in Belgaum with jnana peetha awardee Dr. U.R .Ananthamurthy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X