ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಟ್ಟೂರಜ್ಜ, ನಿಮ್ಮ ಮೆಚ್ಚಿನ ಸಿನೆಮಾ ಹೀರೋಯಿನ್‌ ಯಾರು ?

By Staff
|
Google Oneindia Kannada News

*ಎಂ. ವಿನೋದಿನಿ

Nittur Shrinivasa Raoವೇದಿಕೆಯ ಒಂದು ಕುರ್ಚಿಯಲ್ಲಿ ಶತಾಯುಷಿ ನಿಟ್ಟೂರು ಶ್ರೀನಿವಾಸ ರಾಯರು. ಇನ್ನೊಂದು ಕುರ್ಚಿಯಲ್ಲಿ ಶಬ್ದ ಬ್ರಹ್ಮ ಜಿ. ವೆಂಕಟಸುಬ್ಬಯ್ಯ. ಸಭಾಂಗಣ ತುಳುಕುವ ಹಾಗೆ ನೆರೆದ ಸಹೃದಯರು. ಅದು ಜಯನಗರದ ನೆಹರೂ ಸ್ಮಾರಕ ವಿದ್ಯಾ ಕೇಂದ್ರ. ಶನಿವಾರ ಸಂಜೆಯನ್ನು ಸುಂದರಗೊಳಿಸಿದ ಆ ಕಾರ್ಯಕ್ರಮದ ಹೆಸರು ‘ಸಂವಾದ’.

‘ಶ್ರೀನಿವಾಸ ರಾಯರೇ ನಿಮ್ಮ ಅಚ್ಚು ಮೆಚ್ಚಿನ ಸಿನೆಮಾ ಹೀರೋಯಿನ್‌ ಯಾರು ?’, ‘ವೆಂಕಟಸುಬ್ಬಯ್ಯನವರೇ, ನೀವು ಯಾರನ್ನೂ ಲವ್‌ ಮಾಡಿಲ್ವಾ, ಅಥವಾ ಹಾಗೇನಾದರೂ ಮಾಡಿ ಕೈಕೊಟ್ಟದ್ದುಂಟಾ...’ ಹೀಗೆ ತೂರಿ ಬರುವ ಪ್ರಶ್ನೆಗಳು, ಅದಕ್ಕೆ ಹಿರಿಯರಿಬ್ಬರ ಉತ್ತರಗಳು ಆ ಸಭಾಂಗಣವನ್ನು ಸ್ನೇಹಿತರ ಹರಟೆ ಕಟ್ಟೆಯನ್ನಾಗಿಸಿತ್ತು.

‘ಮಹಾರಾಜಾ ಕಾಲೇಜಿನಲ್ಲಿ ಲವ್‌ ಮಾಡಲಿಕ್ಕೆ ಪುರುಸೊತ್ತೇ ಇರಲಿಲ್ಲ. ಅಲ್ಲದೆ ಮಾವನ ಮಗಳನ್ನೇ ಮದುವೆಯಾಗಿದ್ದರಿಂದ ಮನಸ್ಸು ಹಾಗೆಲ್ಲಾ ಅಲೆದಾಡಲಿಲ್ಲ. ಇದು ನನಗೆ ಈವರೆಗೆ ಹೊಳೀಲೇ ಇಲ್ವೇ ಅಂತ ಈಗನಿಸುತ್ತದೆ’ ಎಂದಾಗ ಸಭೆಯಲ್ಲಿ ನಗು. ನಿಟ್ಟೂರರಂತೂ ನೆಚ್ಚಿನ ತಾರೆ ಶಾಂತಾ ಅಪ್ಟೆ ಎಂದಾಗ ಸಭೆಯ ತುಂಬಾ ಗದ್ದಲದ ನಗು.

ನಿಟ್ಟೂರರ ಯಶಸ್ಸಿನ ಹಿಂದಿದ್ದ ಆಕೆ...

ವಾತಾವರಣವನ್ನು ಕೊನೆವರೆಗೂ ನಗುವಿನ ಸೂತ್ರದಲ್ಲೇ ಬಂಧಿಸಿದ್ದು ‘ಸಂವಾದ’ದ ಕಾರ್ಯದರ್ಶಿ ಶ್ರೀನಿವಾಸ ವೈದ್ಯ. ಅನೌಪಚಾರಿಕ ಚರ್ಚೆಯನ್ನು ಆರಂಭಿಸಬೇಕು ಅಂತ ವೈದ್ಯರು ನಿಟ್ಟೂರರಿಗೆ ಒಂದು ಪ್ರಶ್ನೆ ಕೇಳಿದರು. ‘ನೀವು ನ್ಯಾಯಮೂರ್ತಿಗಳಾಗಿದ್ದವರು, ಹಲವು ಜವಾಬ್ದಾರಿಗಳನ್ನು ನಿಭಾಯಿಸಿದವರು. ಓಡಾಟ ಹೆಚ್ಚು. ಚರಂತಿ ಮಠದ ಸ್ವಾಮೀಜಿ ಹಾಗಿದ್ದ ನಿಮ್ಮನ್ನು ಕಟ್ಟಿಕೊಂಡ ನಿಮ್ಮ ಪತ್ನಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು...’ ಪ್ರಶ್ನೆ ಲಘುವಾಗಿದ್ದರೂ ಉತ್ತರಿಸಲು ಬಾಯ್ತೆಗೆದ ನಿಟ್ಟೂರರು ಹಾಗೇ ಬಿಕ್ಕಳಿಸಿದರು. ‘ಅವರು ಹೋಗಿ 15 ವರ್ಷ ಮೇಲಾಯಿತು. ಎಂದೂ ಯಾವುದಕ್ಕೂ ಆಸೆ ಪಟ್ಟವರಲ್ಲ. ಪ್ರತಿ ನಿಮಿಷವೂ ನನ್ನ ಮನಸ್ಸಿನಲ್ಲಿದ್ದಾರೆ. ಅವರು ಮಾದರಿ ಹೆಂಗಸಾಗಿದ್ದರು...’ ಮುಂದೆ ನಿಟ್ಟೂರರಿಗೆ ಮಾತಾಡಲಿಕ್ಕಾಗಲಿಲ್ಲ.

ಮತ್ತೆ ಮಾತು ಭ್ರಷ್ಟಾಚಾರದಂತಹ ಪ್ರಸ್ತುತ ಸಾಮಾಜಿಕ ಸಂಗತಿಗಳ ಬಗ್ಗೆ ತಿರುಗಿತು. ನಾಗರಿಕನೊಬ್ಬ ತನ್ನ ಕೆಲಸಗಳಿಗಾಗಿ ಕಚೇರಿಗೆ ಹೋಗುವಾಗ ಆತನ ಜೊತೆ ಲಂಚವನ್ನು ವಿರೋಧಿಸುವ ಹತ್ತು ಮಂದಿ ಸ್ವಯಂ ಸೇವಕರು ಹೋಗಬೇಕು. ಇಂತಹ ಬೃಹತ್‌ ಆಂದೋಳನದಿಂದ ಭ್ರಷ್ಟಾಚಾರ ನಿರ್ಮೂಲನ ಸಾಧ್ಯ. ಇಲ್ಲವಾದಲ್ಲಿ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಕುಸಿಯುತ್ತಿರುವ ಜನರ ನೀತಿ ಮಟ್ಟ, ಹೆಚ್ಚುತ್ತಿರುವ ಲಂಚದ ಹಾವಳಿಯ ಬಗ್ಗೆ ನಿಟ್ಟೂರರು ಬೇಜಾರು ಮಾಡಿಕೊಂಡರು.

‘ಕಂಜೂಸ್‌ ಪಾರ್ಟಿ’

ನಿಮ್ಮ ನಶ್ಯದ ಚಟದ ಬಗ್ಗೆ ಹೇಳಿ... ಕೀಟಲೆಯ ಪ್ರಶ್ನೆ ಹಾರಿಬಂತು. ‘ಚಟ ಇಲ್ಲಪ್ಪಾ...ಯಾರಾದರೂ ಕೊಟ್ಟರೆ ಒಂದು ಚಿಟಿಕೆ ಹಾಕಿಕೊಳ್ಳುತ್ತೇನೆ. ಖರೀದಿಸಿ ನಶ್ಯ ಏರಿಸಿದ್ದೇ ಇಲ್ಲ ’ ಎಂದು ನಿಟ್ಟೂರಜ್ಜ ಹೇಳಿದಾಗ, ‘ಓಹ್‌ ನೀವು ಕಂಜೂಸ್‌’ ಅಂತ ಸಭೆಯಲ್ಲೊಬ್ಬರು ನಿಟ್ಟೂರಜ್ಜನ ರೇಗಿಸಿದರು.

ಇಗೋ-ಕನ್ನಡ ಖ್ಯಾತಿಯ ವೆಂಕಟಸುಬ್ಬಯ್ಯನವರಿಗಂತೂ ಕನ್ನಡ ಶಬ್ದಗಳ ಕುರಿತ ಹಲವು ಪ್ರಶ್ನೆಗಳು ಎದುರಾದವು. ನಿಮಗೆ ಅರಳು ಮರುಳಾಗಿದೆಯೇ ಎಂಬ ಪ್ರಶ್ನೆಯನ್ನು ತಿದ್ದಿ, ಅರಳು-ಮರಳು ಪದ ತಪ್ಪು. ಅದು ಅರಿವು- ಮರಳು ಎಂದಾಗಬೇಕು, ನಂಗೆಂದೂ ಅರಿವು-ಮರಳಾಗಿಲ್ಲ ಎಂದರು. ಆದರೆ ಅರಳು-ಮರಳಾದವರಿಗೆ ತಮಗೆ ಹಾಗಾಗಿದೆ ಎಂಬ ಅರಿವು ಇರುವುದಿಲ್ಲವಂತಲ್ಲ... ಎಂದು ಶ್ರೀನಿವಾಸ ವೈದ್ಯರು ಅವರನ್ನು ರೇಗಿಸಿದರು.

ಸಂವಾದದ ಆರಂಭದಲ್ಲಿಯೇ ನಿಮ್ಮ ಶತಾಯುಷ್ಯದ ಗುಟ್ಟೇನು ಎಂಬ ಪ್ರಶ್ನೆಯನ್ನು ನಿಷೇಧಿಸಲಾಗಿತ್ತು. ಸಾಹಿತಿ, ಪ್ರೊ. ಬಿ. ಸಿ. ರಾಮಚಂದ್ರಶರ್ಮ, ಜಯಂತ ಕಾಯ್ಕಿಣಿ, ಉಮಾರಾವ್‌, ಪತ್ರಿಕಾ ಅಕಾಡೆಮಿ ಮಾಜಿ ಅಧ್ಯಕ್ಷ ಗರುಡನ ಗಿರಿ ನಾಗರಾಜ್‌, ಎಲ್‌. ಜಿ. ಸುಮಿತ್ರ, ಗುಲ್ಬರ್ಗ ವಿವಿಯ ಮಾಜಿ ಉಪ ಕುಲಪತಿ ಚೆಲ್ವರಾಜ್‌, ಸಂಸ್ಕೃತ ವಿದ್ವಾಂಸ ಕೃಷ್ಣಮಾಚಾರ್ಯ ಮತ್ತಿತರ ಹಿರಿಯರು ಸಭಿಕರ ಸಾಲಿನಲ್ಲಿದ್ದರು. ಸುಮಾರು ನೂರೈವತ್ತಕ್ಕೂ ಹೆಚ್ಚು ಮಂದಿ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X