ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರವ್ಯಾಸನ ತಾಳೆಗರಿ ಕಾಪಿಡುವವರು ಬೇಕಾಗಿದ್ದಾರೆ !

By Staff
|
Google Oneindia Kannada News

ಗದಗ : ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಅಂತ ಕುವೆಂಪು ಬರೆದು ವರ್ಷಗಳೇ ಕಳೆದಿವೆ. ಹೀಗಿದ್ದೂ ಕುಮಾರ ವ್ಯಾಸ ತಾಳೆಗರಿ ಮೇಲೆ ಬರೆದ ಪದ್ಯಗಳು ಸರ್ಕಾರದ ತಿಜೋರಿಗೆ ಯಾಕೆ ದಕ್ಕಿಲ್ಲ ? ಯಾಕೆಂದರೆ, ತಾಳೆಗರಿಗಳು ಗದಗಿನ ಕೋಳೀವಾಡದಲ್ಲೇ ಇವೆ. 700 ವರ್ಷಗಳ ಕಾಲ ಹೆಣಗಾಡಿ ಅವನ್ನು ಕಾಪಿಟ್ಟರೂ, ಈಗ ಅವು ಹಾಳಾಗತೊಡಗಿವೆ. ಆದರಿದನ್ನು ಸರ್ಕಾರ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ.

ಕುಮಾರ ವ್ಯಾಸ ಅಂತಲೇ ಹೆಸರಾದ ಗದುಗಿನ ನಾರಾಯಣಪ್ಪನವರ ವಂಶದ ಈಗಿನ ಕುಡಿ ದತ್ತಾತ್ರೇಯ ಪಾಟೀಲ ಅದೇ ಕೋಳೀವಾಡದಲ್ಲೀಗ ಪೋಸ್ಟ್‌ ಮಾಸ್ಟರ್‌. ಇವರ ಪೂರ್ವಜರು ಕಪ್ಪು ಡಬ್ಬದಲ್ಲಿ ತಾಳೆ ಗರಿಗಳನ್ನು ಇಷ್ಟು ವರ್ಷ ಇಟ್ಟು ರಕ್ಷಿಸಿದ್ದರು. ಈಗ ಅವು ಕಳೆಗುಂದುತ್ತಿವೆ. ಈ ಗರಿಗಳು ಹಾಳಾಗದಿರಲೆಂದು ಪಾಟೀಲರು ಕುಮಾರ ವ್ಯಾಸನ ಹೆಸರಲ್ಲೇ ಒಂದು ಟ್ರಸ್ಟ್‌ ಕಟ್ಟಿಕೊಂಡು ಕಳೆದ ಎರಡು ವರ್ಷಗಳಿಂದ ಮಂತ್ರಿ ಮಹೋದಯರ ಕಚೇರಿಗೆ ಎಡತಾಕಿದ್ದಾರೆ. ಕುಮಾರ ವ್ಯಾಸನ ಕೈಬರಹದಲ್ಲಿರುವ ಗದುಗಿನ ಭಾರತದ ತಾಳೆಗರಿಗಳನ್ನು ಕಾಪಾಡಿ ಅಂತ ಅಲವತ್ತುಕೊಂಡಿದ್ದಾರೆ. ಆದರೆ ಎಲ್ಲಾ ಪ್ರಯತ್ನಗಳೂ ಹೊಳೆಯಲ್ಲಿ ಹುಣಿಸೆ ತೊಳೆದಂತಾಗಿದೆ.

ಅಧಿಕೃತರಾದವರು ಬರದೆ, ಯಾರೋ ಬಂದು ತಾಳೆಗರಿಗಳನ್ನು ರಕ್ಷಿಸಿ ಅಂದರೆ ನಮ್ಮ ಕೈಲಿ ಅದು ಸಾಧ್ಯವಿಲ್ಲ ಅಂತ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಕೋಳೀವಾಡದಲ್ಲಿರುವ ಕುಮಾರ ವ್ಯಾಸನ ಮನೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು. ತಾಳೆಗರಿಗಳನ್ನು ಹಾಳಾಗದಂತೆ ಕಾಪಾಡಬೇಕು ಅಥವಾ ಮೈಕ್ರೋ ಫಿಲ್ಮ್‌ ಆಗಿ ಪರಿವರ್ತಿಸುವುದರ ಮೂಲಕ ಜನರಿಗೆ ನೋಡಲು ಸಿಗುವಂತೆ ಮಾಡಬೇಕು- ಇದು ಸರ್ಕಾರಕ್ಕೆ ಪಾಟೀಲ್‌ ಮಾಡಿರುವ ಆಗ್ರಹ. ಎಷ್ಟೆಲ್ಲ ಅಲೆದಾಡಿದರೂ ಸರ್ಕಾರದಿಂದ ದಮಡಿ ಸಹಾಯ ಸಿಕ್ಕದ್ದರಿಂದ ಹತಾಶರಾಗಿರುವ ಪಾಟೀಲ್‌, ಇನ್ಫೋಸಿಸ್‌ ದತ್ತಿಯ ಸುಧಾಮೂರ್ತಿ ಅವರಲ್ಲಿ ಈ ಮೊರೆಯನ್ನು ಹೇಳುವ ಯೋಚನೆ ಮಾಡಿದ್ದಾರೆ. ಅವರಾದರೂ ಈ ಒಳ್ಳೆಯ ಕೆಲಸಕ್ಕೆ ಸಹಾಯ ಮಾಡುವರೆಂಬ ಭರವಸೆ ಪಾಟೀಲರದ್ದು.

ಮಹಾಭಾರತದ 10 ಪರ್ವಗಳನ್ನು 8000 ಭಾಮಿನಿ ಷಟ್ಪದಿ ಪದ್ಯಗಳ ಮೂಲಕ ರಚಿಸಿರುವ ಕುಮಾರ ವ್ಯಾಸ ಕಾವ್ಯಕ್ಕೆ ಹೊಸ ವೇಗವನ್ನು ದಕ್ಕಿಸಿಕೊಟ್ಟ ಕವಿ. ಅಂದಹಾಗೆ, ಗದುಗಿನ ನಾರಣಪ್ಪ ಉರುಫ್‌ ಕುಮಾರ ವ್ಯಾಸನ ವೃತ್ತಿ ಏನಾಗಿತ್ತು ನಿಮಗೆ ಗೊತ್ತೆ? ಪಾಟೀಲರು ಹೇಳುವ ಪ್ರಕಾರ, ವಿಜಯನಗರದ ಸೇನೆಯ ಆನೆ ಪಾಳಯದಲ್ಲಿ ಮುಖ್ಯ ಲೆಕ್ಕಿಗನಾಗಿ ಕುಮಾರ ವ್ಯಾಸ ಕೆಲಸ ಮಾಡಿದ್ದ. ಈತನದು ಗ್ರಾಮ ಲೆಕ್ಕಿಗರ ವಂಶ.

ಪಾಟೀಲರ ಬಗ್ಗೆ ಅಪನಂಬಿಕೆಯಿದ್ದರೆ, ಸರ್ಕಾರ ಕನಿಷ್ಠ ತಾಳೆಗರಿಗಳನ್ನು ಪರಿಶೀಲಿಸುವ ಕೆಲಸವನ್ನಾದರೂ ಮಾಡಬಹುದಿತ್ತು. ಕನ್ನಡ ಸಾಹಿತ್ಯಕ್ಕೆ ಮರೆಯಲಾಗದ ಕೊಡುಗೆ ಕೊಟ್ಟ ಕವಿಯ ಹಸ್ತ ಬರಹದ ಬಗ್ಗೆ ಈ ಪರಿಯ ನಿರ್ಲಕ್ಷ್ಯ ಸಲ್ಲದು. ಅಲ್ಲವೇ?

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X