ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಭ್ರಷ್ಟ ಸಮಾಜದಲ್ಲಿ ಸೃಜನಶೀಲತೆ ಕಟ್ಟಿಕೊಂಡು ಬಾಳುವುದು ಕಷ್ಟ ಕಷ್ಟ’

By Staff
|
Google Oneindia Kannada News

ಬೆಂಗಳೂರು: ಎಲ್ಲಿ ನೋಡಿದರೂ ಬಸ್ಸು ಕಾರು, ಹೊಗೆ. ಈ ಗೊಂದಲಗಳ ನಡುವೆ, ಸಮಾಜದಲ್ಲಿರುವ ಹತ್ತು ಮಂದಿಗೆ ಸರಿಯಾಗಿ ಬದುಕಬೇಕು ಎನ್ನುವ ಆಸೆ. ಅದರ ನಡುವೆ ಸೃಜನಶೀಲತೆಯನ್ನು ಉಳಿಸಿಕೊಂಡು ಎದೆಯ ತೇವವನ್ನು ಕಾಯ್ದಿಟ್ಟುಕೊಳ್ಳುವುದು ಹೇಗೆ...?

ಈ ಪ್ರಶ್ನೆಯ ನಡುವೆಯೇ ಭ್ರಷ್ಟಾಚಾರದ ಪಿಡುಗು ಬೇರೆ. ಪ್ರಾಮಾಣಿಕರಾಗಿದ್ದರೆ ಈಗಿನ ಕಾಲದಲ್ಲಿ ಚೆಂದಾಗಿ ಬಾಳಲಿಕ್ಕಾಗುವುದಿಲ್ಲ ಸ್ವಾಮೀ.. ಅನ್ನುವಷ್ಟರ ಮಟ್ಟಿಗೆ ಅಪ್ರಾಮಾಣಿಕತೆ ರಾಜಾ ರೋಷವಾಗಿ ಮೆರೆಯುತ್ತಿದೆ. ಹೀಗಿರುವಾಗ ಸೃಜನಶೀಲತೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದೇ ದೊಡ್ಡ ಚಿಂತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ರಾಜಕೀಯದಿಂದ ಸಾರ್ವಜನಿಕ ಕ್ಷೇತ್ರದವರೆಗೆ ಮೊಯ್ಲಿ ಗುರುತಿಸಿಕೊಂಡಿದ್ದರೂ, ತಮ್ಮ ಕಾದಂಬರಿ ಹಾಗೂ ಮಹಾಕಾವ್ಯದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಸರು ಮಾಡಿದವರು. ‘ಕೊಟ್ಟ’ ಕಾದಂಬರಿ ಹಾಗೂ ‘ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯದ ಮೂಲಕ ತಮ್ಮೊಳಗಿನ ಸಾಹಿತಿಯನ್ನೂ ಜನರ ಮುಂದಿಟ್ಟವರು. ಗೊರೂರು ಪ್ರತಿಷ್ಠಾನವು ಈ ವರ್ಷದ ಅಂಬೇಡ್ಕರ್‌ ಪ್ರಶಸ್ತಿಯನ್ನು ವೀರಪ್ಪ ಮೊಯ್ಲಿ ಅವರಿಗೆ ನೀಡಿ ಅಭಿನಂದಿ ಸಿದೆ. ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಮೊಯ್ಲಿ ಪ್ರಾಮಾಣಿಕತೆಯ ಬಗ್ಗೆ ಕಳಕಳಿಯ ಮಾತಾಡಿದರು.

ಪ್ರಶಸ್ತಿ ಬಂದ ಬಗ್ಗೆ ಮೊಯ್ಲಿ ಅವರಿಗೆ ಸಂತೋಷವಿದ್ದರೂ, ಈ ಪ್ರಶಸ್ತಿ, ಹೊಗಳಿಕೆಯಿಂದ ಸೃಜನಶೀಲತೆ ಎಲ್ಲಿ ಕುಗ್ಗಿ ಹೋಗುವುದೋ ಎಂಬ ಅನುಮಾನವೂ ತಮಗಿದೆ ಎಂದರು. ಸಾಹಿತಿಗಳಾಗಲೀ, ಕಲಾವಿದರಾಗಲೀ, ಎಲ್ಲಿಯವರೆಗೆ ಸಾರ್ವಕಾಲಿಕ ವ್ಯಕ್ತಿಗಳಾಗುವುದಿಲ್ಲವೋ, ಅಲ್ಲಿಯವರೆಗೆ ಜೀವನ ಪರಿವರ್ತನೆ ಸಾಧ್ಯವಾಗುವುದಿಲ್ಲ ಎಂದು ಮೊಯ್ಲಿ ಅಭಿಪ್ರಾಯಪಟ್ಟರು.

ಅಂಬೇಡ್ಕರ್‌ ಪ್ರಶಸ್ತಿಯನ್ನು ವಿತರಿಸಲು ಹಿರಿಯ ಸಾಹಿತಿಪ್ರೊ. ಎ.ಎನ್‌. ಮೂರ್ತಿರಾವ್‌ ಬರಬೇಕಿತ್ತು. ಆದರೆ ಕಾರಣಾಂತರದಿಂದ ಸಮಾರಂಭಕ್ಕೆ ಅವರು ಬರಲಿಲ್ಲ. ಅರಣ್ಯ ಸಚಿವ ಎಚ್‌. ಕೆ. ರಂಗನಾಥ್‌, ಹಿರಿಯ ಲೇಖಕ ಮತ್ತೂರು ಕೃಷ್ಣ ಮೂರ್ತಿ ಅವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಇನ್ಫೋ ಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ ಅವರಿಗೆ ವರ್ಷದ ಲೇಖಕಿ ಪ್ರಶಸ್ತಿ ನೀಡಿ ಗೌರವಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X