ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ.ಜಿ.ಲಿಂಗಪ್ಪ-ಬಿ.ವಿ.ಕಾರಂತರ ಬಸಿರು, ಬಾಲಮುರಳಿಕೃಷ್ಣ ಹೆಸರು

By Staff
|
Google Oneindia Kannada News

Dr. Balamurali Krishna‘ಹಂಸಗೀತೆ’ ಸಿನಿಮಾಕ್ಕೆ ಸಂಗೀತದ ಮಾಧುರ್ಯ ತುಂಬಿದ್ದು ಟಿ.ಜಿ.ಲಿಂಗಪ್ಪ ಹಾಗೂ ಬಿ.ವಿ.ಕಾರಂತ. ಆದರೆ, ಹೆಸರು ಮಾತ್ರ ಬಾಲಮುರಳೀಕೃಷ್ಣ ಅವರದು. ಇಷ್ಟು ದಿನದವರೆಗೆ ಗುಟ್ಟಾಗಿದ್ದ ಈ ರಹಸ್ಯವನ್ನು ಬಯಲು ಮಾಡಿದ್ದು ವಯೋವೃದ್ಧ ನಿರ್ದೇಶಕ ಜಿ.ವಿ.ಅಯ್ಯರ್‌.

‘ಸ್ಪಂದನ’ ರಂಗ ಸಂಘಟನೆ ಮಂಗಳವಾರ ಹಮ್ಮಿಕೊಂಡಿದ್ದ - ಹಿರಿಯ ರಂಗಕರ್ಮಿ ಬಿ. ವಿ. ಕಾರಂತರಿಗೆ ವಿಶಿಷ್ಟ ಗೌರವಾರ್ಪಣೆ ಮತ್ತು ರಂಗ ಕಲಾವಿದ ಬಿ. ಜಯಶ್ರೀ ಅವರು ಹಾಡಿರುವ ರಂಗ ಗೀತೆಗಳ ಕ್ಯಾಸೆಟ್‌ ಹಾಗೂ ಸಿ.ಡಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ವಿ.ಅಯ್ಯರ್‌ ಹಳೆಯ ರಹಸ್ಯವೊಂದನ್ನು ಬಿಡಿಸಿಟ್ಟು ನೆರೆದಿದ್ದ ಸಹೃದಯರ ದಂಗುಬಡಿಸಿದರು.

ಅಯ್ಯರ್‌ ಹೇಳಿದ್ದಿಷ್ಟು-
ಹಂಸಗೀತೆ ಚಿತ್ರಕ್ಕೆ ಸಂಗೀತ ನೀಡಿದ್ದು ಟಿ.ಜಿ.ಲಿಂಗಪ್ಪ . ಆದರೆ, ಹಿನ್ನೆಲೆ ಸಂಗೀತಕ್ಕೆ ಬಿ.ವಿ.ಕಾರಂತರನ್ನು ಬಳಸಿಕೊಳ್ಳುವ ಚಿತ್ರದ ನಿರ್ದೇಶಕ ಅಯ್ಯರ್‌ ಅವರ ಪ್ರಸ್ತಾವನೆಯನ್ನು ಲಿಂಗಪ್ಪ ಬಲವಾಗಿ ವಿರೋಧಿಸಿದರು. ಕೊನೆಗೆ ಲಿಂಗಪ್ಪನವರನ್ನು ಕೈಬಿಟ್ಟ ಅಯ್ಯರ್‌, ಕಾರಂತರಿಂದ ಹಿನ್ನೆಲೆ ಸಂಗೀತ ಮಾಡಿಸಿದರು. ಟೈಟಲ್‌ ಕಾರ್ಡ್‌ನಲ್ಲಿ ಹೆಸರು ಹಾಕಿಸಿಕೊಳ್ಳಲು ಲಿಂಗಪ್ಪ ಹಾಗೂ ಕಾರಂತ ಇಬ್ಬರೂ ಒಪ್ಪಲಿಲ್ಲ . ಆಗ ತಮ್ಮ ಹೆಸರೇ ಹಾಕುವಂತೆ ಬಾಲಮುರಳೀ ಕೃಷ್ಣ ಕೇಳಿದರು.

ಬಾಲಮುರಳೀಕೃಷ್ಣ ಹಂಸಗೀತೆ ಚಿತ್ರದ ಸಂಗೀತ ನಿರ್ದೇಶಕರಾದದ್ದು ಹೀಗೆ!

ಕಾರಂತರ ಅನುಪಸ್ಥಿತಿ
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭಕ್ಕೆ ಹಿರಿಯ ರಂಗಕರ್ಮಿ ಬಿ. ವಿ.. ಕಾರಂತರು ಅನಾರೋಗ್ಯದ ಕಾರಣ ಆಗಮಿಸಿರಲಿಲ್ಲ. ಕಾರ್ಯಕ್ರಮದಲ್ಲಿ ಸಂಭ್ರಮದ ಬೆಳಕಿರಲಿಲ್ಲ. ‘ಕಾರಂತರೇ ನಿಮಗಿದೋ ನಮನ’ ಸಮಾರಂಭದಲ್ಲಿ ನೆನಪಿನಾಳದಿಂದ ಹೊಮ್ಮಿದ ಬಣ್ಣದ ಬದುಕಿನ ಹಾಡುಗಳನ್ನು ಹಾಡುವ ಮೂಲಕ ಕಾರಂತರಿಗೆ ವಂದನೆ ಸಲ್ಲಿಸಲಾಯಿತು.

ಬಣ್ಣದ ಬದುಕಿನ ಚಿನ್ನದ ಹಾಡುಗಳು ಎಂಬ ಈ ಕ್ಯಾಸೆಟ್‌ನ್ನು ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯ ಮತ್ತು ಸಿಡಿಯನ್ನು ನಿವೃತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ ಬಿಡುಗಡೆ ಮಾಡಿದರು. ಕನ್ನಡ ರಂಗ ಸಂಗೀತಕ್ಕೆ ಅನನ್ಯ ಕೊಡುಗೆ ನೀಡಿದ ಜಿ.ವಿ. ಅಯ್ಯರ್‌, ಏಣಗಿ ಬಾಳಪ್ಪ, ಜಿ. ವಿ.ಇ . ಮಾಲತಮ್ಮ, ಪರಮಶಿವನ್‌, ಸುಭದ್ರಮ್ಮ ಮನ್ಸೂರ್‌ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಯ್ಯರ್‌ ಅವರನ್ನು ಹೊರತು ಪಡಿಸಿ ಎಲ್ಲರೂ ತಮ್ಮ ರಂಗಬದುಕಿನ ದಿನಗಳನ್ನು ನೆನೆಸಿಕೊಂಡು ಹಾಡುಗಳನ್ನು ಹಾಡಿದರು.

ಬಿ. ಜಯಶ್ರೀ ರಂಗಗೀತೆಗಳ ಪರಂಪರೆ ಬಿಂಬಿಸುವ ರಂಗ ರೂಪಕವನ್ನು ನಿರ್ದೇಶಿಸಿ ಪ್ರದರ್ಶಿಸಿದರು. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ನನ್ನ ಪ್ರೀತಿಯ ಹುಡುಗಿ ಚಿತ್ರದಲ್ಲಿ ಕಾರ್‌ ಕಾರ್‌ ಹಾಡಿನಿಂದ ಮತ್ತಷ್ಟು ಪ್ರಸಿದ್ಧಿ ಪಡೆದಿರುವ ಬಿ. ಜಯಶ್ರೀ ಹಾಡುಗಳು ಈಗ ಕ್ಯಾಸೆಟ್‌ ಹಾಗೂ ಸಿ.ಡಿ. ರೂಪದಲ್ಲಿ ಲಭ್ಯ. ರಂಗಭೂಮಿಯಲ್ಲಿ ದಶಕಗಳ ಕಾಲ ದುಡಿದಿರುವ ಅನುಭವ ಬಿ. ಜಯಶ್ರೀ ಅವರದು. ಅವರು ತಮ್ಮ ವೃತ್ತಿ ಬದುಕಿನಲ್ಲಿ ಹಾಡಿರುವ ಹಾಡುಗಳಲ್ಲಿ ಕೆಲವನ್ನು ಮಾತ್ರ ಕ್ಯಾಸೆಟ್‌ಗೆ ಅಳವಡಿಸಲಾಗಿದೆ. ಕ್ಯಾಸೆಟ್‌ನಲ್ಲಿ ಹಳೆಯ ಹಾಗೂ ಹೊಸ ಗೀತೆಗಳು ಸೇರಿದಂತೆ ಒಟ್ಟು 20 ರಂಗ ಗೀತೆಗಳಿವೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X