• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೌಭಾಗ್ಯಗಳನರಸಿ ದೌರ್ಭಾಗ್ಯಕಿಡಹುದಮ್‌ ಅಭಿಶಾಪ ನರಕುಲಕೆ !

By Super
|

ವಿಶ್ವ ದೊಡ್ಡದಾದರೂ ಮನುಷ್ಯನ ಮನಸ್ಸು ಮಾತ್ರ ಸಣ್ಣದು. ನಿಜವಾಗಿಯೂ ನಾವು ವಾಸ್ತವಿಕತೆಯನ್ನು ಎದುರಿಸುತ್ತಿದ್ದೇವೆಯೇ? ಅದು ನಿಜವಾದರೆ, ನಮಗೆ ಎದುರಾಗುವ ಸಮಸ್ಯೆಗಳ ಮೇಲೆ ಪ್ರೀತಿ ಹುಟ್ಟಬೇಕು. ಆದರೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಂದಾಗ ಮನಸ್ಸು ನಿಯಂತ್ರಣವನ್ನು ಕಳೆದುಕೊಳ್ಳುವುದು ಮನಸ್ಸಿನ ಗುಣ. ಇದಕ್ಕೆಲ್ಲ ಮುಖ್ಯವಾದ ಕಾರಣ ವಾಸ್ತವಿಕತೆಯನ್ನು ಮರೆತು ಕನಸೆಂಬ ಕತ್ತಲೆಯ ಅರಮನೆಯನ್ನು ಕಟ್ಟಿ , ಅಲ್ಲಿ ಹಗಲುಗನಸನ್ನು ಕಾಣುವುದು. ಈ ಪರಿಸ್ಥಿತಿಯ ತಾಯಿ, ಡಾಂಭಿಕತನ ಅಥವಾ ಕೃತ್ರಿಮ ನಡವಳಿಕೆ (artificial character).

ಡಾಂಭಿಕತನ ಅಥವಾ show off ಮನುಷ್ಯನ ಹುಟ್ಟುಗುಣಗಳಲ್ಲಿ ಇರುವ ಒಂದು ದೌರ್ಬಲ್ಯ. ಒಣ ಪ್ರತಿಷ್ಠೆ ಮತ್ತು ಅಹಂಭಾವಗಳೆ ಈ ದೌರ್ಬಲ್ಯಗಳ ಮೂಲ. ಬಹುತೇಕ ಜನರಿಗೆ ಸ್ವಪ್ರತಿಷ್ಠೆ ಮತ್ತು ಜಂಭಗಳಂತಹ ಪ್ರಬಲವಾದ ಪ್ರವೃತ್ತಿಗಳನ್ನು ಮೆಟ್ಟಿ ನಿಲ್ಲುವುದು ಕಷ್ಟಕರ ಕೆಲಸ. ಆದ್ದರಿಂದ ಅವರು, ಹಮ್ಮು-ಬಿಮ್ಮುಗಳಿಂದ ಬೀಗುತ್ತಾ, ವಾಸ್ತವಿಕವಾಗಿ ತಮ್ಮಲ್ಲಿಲ್ಲದ ಶಕ್ತಿ-ಸಾಮರ್ಥ್ಯಗಳು, ಸಿದ್ಧಿ-ಸಾಧನೆಗಳು, ಹಿರಿಮೆ-ಗರಿಮೆಗಳು, ಹೆಗ್ಗಳಿಕೆ-ಶ್ರೇಷ್ಠತೆಗಳು ತಮ್ಮಲ್ಲಿವೆಯೆಂದು ಬಾಹ್ಯ ಜಗತ್ತಿಗೆ ಮನವರಿಕೆ ಮಾಡಿಕೊಡಲು ಪಣ ತೊಟ್ಟಿರುತ್ತಾರೆ. ಈ ಗುಣ ವ್ಯಕ್ತಿಗಳ ವಿಭಿನ್ನ ಮನೋವೃತ್ತಿಗಳಿಂದ ಅವಕಾಶ ಪಡೆದು ಅವರ ನಡೆ-ನುಡಿಗಳನ್ನು ರೂಪಿಸುತ್ತವೆ.

ದಿನನಿತ್ಯದ ಜೀವನದಲ್ಲಿ ಹಲವಾರು ಮುಖವಾಡಗಳನ್ನು ಹಾಕಿಕೊಳ್ಳುವ ನಾವು, ಸಹಜತೆಯನ್ನು ಮರೆತು, ಅಸ್ವಾಭಾವಿಕತೆಯನ್ನು ಪ್ರೀತಿಸುವ ಮಹಾಶಯರಾಗುತ್ತಿದ್ದೇವೆ.

ಪೂಜ್ಯ ಡಿ. ವಿ. ಗುಂಡಪ್ಪನವರು ಹೇಳುವ ಹಾಗೆ-

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ

ಜಗಕೆ ಕಾಣಿಪದೊಂದು, ಮನೆಯ ಜನಕೊಂದು।

ಸೊಗಸಿನೇಳಡಸಿಗೊಂದು, ತನ್ನಾತ್ಮಕ್ಕಿನ್ನೊಂದು

ಬಗೆಯೆಷ್ಟೋ ಮೊಗವಷ್ಟು ಮಂಕುತಿಮ್ಮ ।।

ಮನುಷ್ಯನಿಗೆ (ಗಂಡಿಗಾಗಲಿ, ಹೆಣ್ಣಿಗಾಗಲಿ) ಇರುವ ಮುಖಗಳು ನಾಲ್ಕು. ಲೋಕಕ್ಕೆ ಕಾಣಿಸುವದು ಒಂದು ಮುಖ. ತನ್ನ ಮನೆಯ ಜನಕ್ಕೆ, ತಂದೆ-ತಾಯಿಗಳಿಗೆ, ಗಂಡ-ಹೆಂಡತಿಗೆ, ಮಕ್ಕಳಿಗೆ ಮುಂತಾದವರಿಗೆ ಕಾಣಿಸುವುದು ಇನ್ನೊಂದು. ತಾನು ಹೇಗಿರಬೇಕೆಂದು ತನ್ನ ಸೊಗಸಿನ ಬಯಕೆ ಪೂರೈಕೆಗಾಗಿ ಮನಸ್ಸಿನಲ್ಲೆ ಗಾಳಿ ಗೋಪುರ ಕಟ್ಟಿಕೊಳ್ಳುವುದು ಮೂರನೆಯದು. ತಾನು ನಿಜವಾಗಿ ಇವಕ್ಕೆಲ್ಲ ಆಧಾರವಾಗಿ ಇರುವುದೊಂದು ಮುಖ. ಹೀಗೆ ಮನುಷ್ಯನ ರೀತಿಗಳೆಷ್ಟೋ ಅಷ್ಟು ಮುಖಗಳಿವೆ ಅವನಿಗೆ.

ಹಾಗೆಯೇ ಹೇಳುತ್ತಾ ಹೋದರೆ, ಡಿ. ವಿ. ಜಿ ಯವರ ಪ್ರಕಾರ-

ಸ್ವಾಭಾವಿಕವ ಮರೆತು, ನಭಕೇಣಿ ಹೂಡುವದುಮ್‌

ಅಭಾಸವನು ಸತ್ಯವೆಂದು ಬೆಮಿಸುವುದುಮ್‌।

ಸೌಭಾಗ್ಯಗಳನರಸಿ ದೌರ್ಭಾಗ್ಯಕಿಡಹುದಮ್‌

ಅಭಿಶಾಪ ನರಕುಲಕೆ ಮಂಕುತಿಮ್ಮ ।।

ಆಕಾಶದಲ್ಲಿ ಮೂಡಿಬರುವ ಕಾಮನಬಿಲ್ಲು , ಸೂರ್ಯ ಕಿರಣಗಳ ಮಳೆಯ ಹನಿಗಳ ಮೇಲೆ ಬಿದ್ದು ಆಗಿರುವ ಒಂದು ಪ್ರಕಾಶ. ಅದು ನಮ್ಮ ಕೈಗೆ ಸಿಗುವುದಿಲ್ಲ. ಈ ರೀತಿ ಇರುವ ಸ್ವಾಭಾವಿಕವಾದ, ಪ್ರಕೃತಿ ಸಹಜವಾದ ಒಂದು ಪರಿಣಾಮದ ರೀತಿಯನ್ನು ಮರೆತು ಕಾಮನಬಿಲ್ಲಿನ ಮೇಲೆ ಹತ್ತುತ್ತೇನೆಂದು ಏಣಿ ಹಾಕಲು ಹೋಗುವವರಿಗೆ ಏನು ಹೇಳಬೇಕು? ಕಾಮನಬಿಲ್ಲು ಕೈಗೆ ಸಿಗುವುದೇ? ಹಾಗೆ ನಾವುಗಳು ಸತ್ಯ ಯಾವುದು, ನ್ಯಾಯ ಯಾವುದು, ಒಳ್ಳೆಯದು ಯಾವುದು ಎಂಬುದನ್ನು ತಿಳಿಯ ಹೊರಟರೂ ಸರಿಯಾದ ಮಾರ್ಗವನ್ನು ಅನುಸರಿಸದೆ ಅವುಗಳನ್ನು ಪಡೆಯಲಾರದೆ ಹೋಗುತ್ತೇವೆ. ಆ ಸೌಭಾಗ್ಯಗಳು ಬೇಕೆಂದು ಆಸೆ ಪಟ್ಟರೂ ನಾವು ದೌರ್ಭಾಗ್ಯಕ್ಕೆ ಈಡಾಗುತ್ತೇವೆ. ಇದು ಮಾನವಕುಲಕ್ಕೆ ಇರುವ ಒಂದು ಶಾಪ.

ಡಾಂಭಿಕತೆ ಲೋಕವ್ಯಾಪಿ. ಅದು ಮನೆಯಿಂದ ಹಿಡಿದು ಆಫೀಸ್‌, ಮದುವೆ, ಶುಭ-ಸಮಾರಂಭ ಎಲ್ಲೆಡೆಯೆಲ್ಲಿಯೂ ಕಾಣಿಸುತ್ತದೆ. ಡಾಂಭಿಕತೆ ನಮ್ಮ ಕಾಲದಲ್ಲಿ ಸ್ವಲ್ಪ ಹೆಚ್ಚಾಗಿರಬಹುದು. ಅದು ಎಲ್ಲಾ ಕಾಲದಲ್ಲಿಯೂ ಎಲ್ಲಾ ದೇಶಗಳಲ್ಲಿಯೂ ಇದ್ದದ್ದೇ. ಜಗತ್ತಿನ ಬುದ್ಧಿಜೀವಿಗಳು ಸೂತ್ರೀಕರಿಸುವಂತೆ ಜೀವನದ ಪ್ರತಿಯಾಂದು ರಂಗದಲ್ಲಿಯೂ ಪ್ರತಿಯಾಬ್ಬನೂ ಇತರರು ತನ್ನನ್ನು ಏನೆಂದು ತಿಳಿದುಕೊಳ್ಳಬೇಕೆಂದು ಬಯಸುವನು. ಅದಕ್ಕೆ ಅನುಗುಣವಾದ ವ್ಯಕ್ತಿತ್ವವನ್ನು ಬಹುರೂಪವಾಗಿ ಧರಿಸುತ್ತಾನೆ. ನಿಜವಾಗಿ ಸಮಾಜವು ಅಂತಹ ವ್ಯಕ್ತಿಗಳಿಂದ ತುಂಬಿಹೋಗಿದೆಯೆಂದು ಹೇಳಬಹುದು.

ಡಾಂಭಿಕತನದಲ್ಲಿ ಹಲವಾರು ವಿಧ. ಕೆಲವರು ತಮ್ಮ ಶೀಲವಂತಿಕೆಯ, ಪ್ರಾಮಾಣಿಕತೆಯ, ಉದಾರತೆಯ, ಔದಾರ್ಯದ ಬಾಹ್ಯ ಅಭಿವ್ಯಕ್ತಿಯಿಂದ ಕಂಗೊಳಿಸುವರು. ಇವರುಗಳ ನಡೆ-ನುಡಿಗಳ ನಡುವೆ ಸಾಮರಸ್ಯ ಕಂಡುಬರದು. ತಮ್ಮಂತಹ ಪ್ರಾಮಾಣಿಕ ನಿಸ್ಪೃಹ ವ್ಯಕ್ತಿಗಳೂ, ಉದಾರ ಚರಿತರೂ, ಉದಾರಿಗಳೂ ಜಗತ್ತಿನಲ್ಲಿಯೇ ಇಲ್ಲವೆಂದು ಅಡಿಗಡಿಗೂ ಜಂಭಕೊಚ್ಚು ತ್ತಿರುತ್ತಾರೆ. ಇವರ ಚಾರಿತ್ರ್ಯ ಶುದ್ಧ ವಾಗಾಡಂಬರ.

ಹಾಗೆಯೆ ಸಮಾಜದಲ್ಲಿ ಶ್ರೀಮಂತಿಕೆಯ ಮುಖವಾಡ ಧರಿಸಿ ಮೆರೆಯುವವರಿಗೂ ಕೊರತೆಯಿಲ್ಲ. ತಾವೇ ಕಡುಬಡವರಾದರೂ, ಸಾಲ-ಸೋಲ ಮಾಡಿ ಉತ್ತಮ ಪೋಷಾಕುಗಳನ್ನು ಧರಿಸಿ ಒಣ ಪ್ರತಿಷ್ಠೆಗಾಗಿ ದುಂದು ವೆಚ್ಚ ಮಾಡುತ್ತಾ ಶ್ರೀಮಂತರಂತೆ ಹುಸಿ ಠೀವಿಯಿಂದ ನಡೆದಾಡುವರು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ, ಇವರುಗಳು ತಮ್ಮನ್ನು ತಾವೆ ಮರೆತುಕೊಳ್ಳುವರು.

‘ಡಾಂಭಿಕತೆ’-ಜಗತ್ತಿನ ಮಾರುಕಟ್ಟೆಯಲ್ಲಿ ಹಿತ್ತಾಳೆಯನ್ನು ಚಿನ್ನವೆಂದು ಮಾರಾಟ ಮಾಡಲು ಬಳಸುವ ತಂತ್ರ. ಆತ್ಮ ವಂಚನೆಯಿಂದ ನಮಗುಂಟಾಗುವ ಹಾನಿ ಅಷ್ಟಿಷ್ಟಲ್ಲ. ಅದು ನಮ್ಮಲ್ಲಿ ಇರಬಹುದಾದ ಸದ್ಗುಣಗಳ ಬೇರನ್ನೇ ಅಲುಗಾಡಿಸಿ ನಮ್ಮ ಇಡೀ ವ್ಯಕ್ತಿತ್ವವನ್ನೇ ನಾಶಗೊಳಿಸುತ್ತದೆ. ಕಾಲಾನುಕಾಲದಲ್ಲಿ ಆತ್ಮ ವಂಚನೆಯಿಂದ ನಮಗೆ ನಾವೇ ಪರಕಾಯರಾಗಿ ಬಿಡುತ್ತೇವೆ! ಡಾಂಭಿಕತನದ ದುರಂತ ಇದು. ಈ ವಿಚಾರದ ಬಗ್ಗೆ ಡಿ. ವಿ. ಜಿ ಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳುತ್ತಾರೆ-

ತಂಗಳುಣಿಸಾದೊಡಂ ಸಾಕೆನುವನುಪವಾಸಿ

ಸಿಂಗಾರ ಸಂಗಾತಿ ಬೇಕುಂಡವನಿಗೆ।

ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ

ಹಿಂಗದಾಯೆದೆ ಚಿಲುಮೆ ಮಂಕುತಿಮ್ಮ ।।

ಉಪವಾಸ ಇರುವವನಿಗೆ ತಂಗಳೂಟ ಸಿಕ್ಕಿದರೆ ಸಾಕೆನ್ನುತ್ತಿರುತ್ತಾನೆ. ಹಾಗೆ ಊಟ ಸಿಕ್ಕಿ ಹೊಟ್ಟೆ ತುಂಬಿದ ಮೇಲೆ ಮೈಮೇಲೆ ಹಾಕಿಕೊಳ್ಳಲು ಬಟ್ಟೆ, ಸಿಂಗಾರ ಎಲ್ಲ ಬೇಕು. ಅದೂ ಆದ ಬಳಿಕ ಸಂಗಾತಿ ಬೇಕು. ಇದೆಲ್ಲ ಸಿಕ್ಕಿದರೆ ಸಂಗಾತಿಯನ್ನು ಸಂತೋಷಪಡಿಸಲು ತನ್ನ ಇಷ್ಟೆಲ್ಲ ಸಂಸಾರವನ್ನು ನಿಭಾಯಿಸಲು ಹಣ ಬೇಕು. ಹತ್ತು ಜನರ ಮಧ್ಯೆ ತಾನು ಮುಖ್ಯನೆನಿಸಿಕೊಳ್ಳಲು ಪದವಿ, ಪ್ರತಿಷ್ಠೆ ಬೇಕು. ಹೀಗೆ ಆ ಎದೆಯ ಆಸೆಯು ಚಿಲುಮೆ ಬತ್ತುವುದಿಲ್ಲ. ಒಂದಾದ ಮೇಲೊಂದಕ್ಕೆ ಹಾತೊರೆಯುತ್ತಲೇ ಇರುತ್ತದೆ. ಈ ಮನ್ನಣೆಯ ದಾಹವನ್ನು ಪಡೆಯಲು ಮನುಷ್ಯ ಏನನ್ನ್ನು ಮಾಡಲೂ ಹೇಸುವುದಿಲ್ಲ. ಡಾಂಭಿಕತನವೂ ಈ ದಾಹವನ್ನು ನೀಗಿಸಲು ಕಂಡು ಕೊಂಡ ಜಲ. ಇದು ಅವನನ್ನು ನಾಶದ ದಾರಿಗೆ ಕೊಂಡೊಯ್ಯುತ್ತದೆ.

ನಟನೆ, ಬೂಟಾಟಿಕೆಗಳಿಗೆ ಮನ ಸೋಲುವ ಜಗತ್ತು ಡಾಂಭಿಕತನಕ್ಕೆ ಪುರಸ್ಕಾರ ನೀಡುವಂತೆ ಕಂಡುಬರುವುದಾದರೂ, ಕೆಲವೊಮ್ಮೆ ನಿಜವಾದ ಶ್ರೇಷ್ಠತೆ ಅರ್ಹತೆಗಳಿಗೆ ಬೆಲೆಯೇ ಇಲ್ಲವೇನೋ ಎನಿಸುವುದಾದರೂ, ಅದಕ್ಕೆ ಶಾಶ್ವತ ಜಯವಿಲ್ಲ. ಎಂದಿದ್ದರೂ ಸತ್ಯಕ್ಕೆ ಅಂತಿಮ ಜಯ. ಒಂದಲ್ಲ ಒಂದು ದಿನ ಸತ್ಯ ಹೊರಬಿದ್ದಾಗ ಡಾಂಭಿಕತನದ ಬೂಟಾಟಿಕೆ ಒಡೆಯುತ್ತದೆ. ಆಗ ಡಾಂಭಿಕ ವ್ಯಕ್ತಿ ತೀರ ಸಣ್ಣ ಮನುಷ್ಯನಾಗಿ ಕಾಣಿಸುತ್ತಾನೆ. ಇದ್ದದ್ದು ಹೋಗುವುದಿಲ್ಲ, ಇಲ್ಲದ್ದು ಬರುವುದಿಲ್ಲ-ಎಂದಿದ್ದರೂ ಚಿನ್ನ ಚಿನ್ನವೇ, ಹಿತ್ತಾಳೆ ಹಿತ್ತಾಳೆಯೇ. ಆದರೆ ಲೋಹಗಳ ರಾಜ ಬಂಗಾರಕ್ಕಿರುವಂತೆ ಹಿತ್ತಾಳೆಗೂ ತನ್ನದೇ ಆದ ಬೆಲೆಯಿದೆ. ಹಿತ್ತಾಳೆಯು ಚಿನ್ನದಂತಾಗಲು ಎಷ್ಟೇ ಪ್ರಯತ್ನಿಸಿದರೂ ಚಿನ್ನವಾಗುವುದಿಲ್ಲ. ಅಷ್ಟೇ ಅಲ್ಲ, ಈ ವ್ಯರ್ಥ ಪ್ರಯತ್ನದಿಂದ ಹಿತ್ತಾಳೆಯು ಹಿತ್ತಾಳೆಯಾಗಿಯೂ ಇರದೇ ಮೂಲ ಬೆಲೆಯನ್ನು ಕೂಡ ಕಳೆದುಕೊಳ್ಳುತ್ತದೆ.

ನಿಜವಾದ ಸಮಸ್ಯೆ ಉಂಟಾಗುವುದು ಹೇಗೆ ಎಂದರೆ ನಾವು ನಮ್ಮ ಜೀವನದಲ್ಲಿ ಇದ್ದದ್ದನ್ನು ಇದ್ದ ಹಾಗೆ (ವಸ್ತು ಸ್ಥಿತಿ-what is) ನೋಡುವ ಅಥವಾ ಸ್ವೀಕರಿಸುವ ಸಾಮರ್ಥ್ಯವನ್ನು ಕಳೆದು ಕೊಂಡಾಗ. ಅದರ ಬದಲಾಗಿ, ನಾವು ಈಗ ಬಯಸುತ್ತಿರುವುದು ನಮ್ಮ ಜೀವನ ಹೇಗಿರಬೇಕೆಂದು ?(what it should be).

ನಮ್ಮ ಬಾಹ್ಯ ವರ್ತನೆ ಕೇವಲ ನಟನೆಯಾಗಿರದೆ, ನೈಜತೆಯನ್ನು ಸಾರುವಂತಿರಬೇಕು. ಪಾಟೀಲ್‌ ಪುಟ್ಟಪ್ಪನವರು ಹೇಳುವ ಹಾಗೆ, ನಾವೆಲ್ಲ ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನದಲ್ಲಿ ಬಹಳ ಸೌಮ್ಯ ಹಾಗೂ ಒಳ್ಳೆಯ ರೀತಿಯಲ್ಲಿ ವರ್ತಿಸುತ್ತೇವೆ. ಅದೇ, ಹೊರಗೆ ಬಂದರೆ ಪ್ರಾಣಿಯ ಹಾಗೆ ಮತ್ತೆ ನಮ್ಮ ನಿಜ ರೂಪವನ್ನು ಪ್ರದರ್ಶಿಸುತ್ತೇವೆ. ಇಲ್ಲಿ, ದೇವಸ್ಥಾನದೊಳಗೆ ಇರುವ ವರ್ತನೆಗಿಂತ, ಹೊರಗೆ ಯಾವ ರೀತಿ ಇರುತ್ತೇವೆ ಎಂಬುದು ಮುಖ್ಯ. ಇದನ್ನು ನಾವುಗಳು ಅರಿತುಕೊಳ್ಳಬೇಕು. ಅಂತರಂಗ-ಬಹಿರಂಗಗಳ ಭ್ರಷ್ಟತೆಯಾಗಿರುವುದು ಇಂದಿನ ನರಕುಲದ ಪರಿಸ್ಥಿತಿ. ತೋರಿಕೆ ಎನ್ನುವುದು ನಮ್ಮ ಆಂತರಿಕ ಪೊಳ್ಳುತನವನ್ನು ಮುಚ್ಚಿಹಾಕುವಂತಹ ಮುಖವಾಡ. ಈ ಸತ್ವವಿಲ್ಲದ ಬೂಟಾಟಿಕೆಯೇ ಡಂಭಾಚಾರ-ಅರ್ಥಾತ್‌ ಡಾಂಭಿಕತೆ.

ಆದ್ದರಿಂದ ನಾವು ನಮ್ಮ ಶಕ್ತಿ ಸಾಮರ್ಥ್ಯಗಳ ಸ್ಥಿತಿ-ಗತಿಗಳ ಇತಿಮಿತಿಗಳನ್ನು ಸದಾ ಗಮನದಲ್ಲಿಟ್ಟುಕೊಂಡು ವಾಸ್ತವಿಕ ದೃಷ್ಟಿಯಿಂದ ನಮಗೆ ಸಹಜವಾದ, ಸ್ವಾಭಾವಿಕವಾದ ರೀತಿಯಲ್ಲಿ ನಡೆದುಕೊಳ್ಳಬೇಕು. ನಮ್ಮಲ್ಲಿ ಉತ್ತಮವಾದುದು ಎಂದು ಯಾವ ಗುಣವಾದರೂ ಅನಿಸಿದಲ್ಲಿ, ಅದು ಒಂದಲ್ಲ ಒಂದು ದಿನ ಬೆಳಕಿಗೆ ಬಂದೇ ಬರುತ್ತದೆ. ನಮಗೆ ನ್ಯಾಯವಾಗಿ ದೊರೆಕಲೇ ಬೇಕಾದ ನಮ್ಮ ಮೂಲ ಬೆಲೆ ನಮಗೆ ದೊರಕಿಯೇ ದೊರಕುತ್ತದೆ. ಆದರೆ ಅದು ದೊರಕುವಲ್ಲಿ ಸ್ವಲ್ಪ ತಡವಾಗಬಹುದು.

ನಮ್ಮ ಮುಖವೇ ನಮಗೆ ಸಾಕು. ಮುಖವಾಡ ಬೇಡ. ಬೂಟಾಟಿಕೆ, ಡಾಂಭಿಕತೆಗಳನ್ನು ವರ್ಜಿಸಿ, ನಾವು ನಾವಾಗಿಯೇ ಬಾಳುವುದರಿಂದ ನಮಗೂ ಹಿತ, ಪರರಿಗೂ ಹಿತ. ಲೋಕದ ಬಾಳು ರಸವಾಗುತ್ತದೆ.

English summary
Gururaj writes on artificial character in every human being
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X