ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಭೂಮಿಯಿಂದ ನಾನು ರಿಟೈರಾಗ್ತೇನೆ : ಮಾಸ್ಟರ್‌ ಹಿರಣ್ಣಯ್ಯ

By Staff
|
Google Oneindia Kannada News

ಮೈಸೂರು : ನನ್ನಪ್ಪ ನಟಿಸುತ್ತಿರುವಾಗಲೇ ಸತ್ತರು. ಆ ರೀತಿಯ ಸಾವು ನನಗೆ ಬೇಡ. ಅದಕ್ಕೇ ಜನಮನದಲ್ಲಿರುವಾಗಲೇ ನಾನು ರಿಟೈರಾಗುತ್ತೇನೆ. ಐದು ದಶಕಗಳ ಕಾಲ ರಂಗ ಸೇವೆ ಸಲ್ಲಿಸಿರುವ ಮಾಸ್ಟರ್‌ ಹಿರಣ್ಣಯ್ಯ ಆಡಿರುವ ಮಾತಿದು.

ಅಶಕ್ತ ಕಲಾವಿದರ ಸಹಾಯಾರ್ಥ ಬೆಂಗಳೂರಿನ ಸೃಷ್ಟಿ ವೇದಿಕೆ ಮೈಸೂರಲ್ಲಿ ಶುಕ್ರವಾರದಿಂದ ಯೋಜಿಸಿರುವ ಎರಡು ದಿನಗಳ ರಂಗೋತ್ಸವದ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಸ್ಟರ್‌ ಈ ವಿಷಯ ತಿಳಿಸಿದರು. ಹಾಗಂತ ಅವರು ಸುಮ್ಮನೆ ಕೂರಲೂ ಒಲ್ಲರು. ಅವರು ಮುಂದೇನು ಮಾಡುತ್ತಾರೆ ಎಂಬುದನ್ನೂ ಹೇಳಿದರು...

ಈಗಾಗಲೇ ದತ್ತು ಪಾತ್ರವೊಂದನ್ನು ಬಿಟ್ಟು ಮಿಕ್ಕೆಲ್ಲಾ ಪಾತ್ರಗಳನ್ನು ಮಗನಿಗೆ ವಹಿಸಿ ಕೊಟ್ಟಿದ್ದೇನೆ. ಜನರ ಮನಸ್ಸಿನಲ್ಲಿ ನಾನು ಹಸುರಾಗಿರುವಾಗಲೇ ಪರದೆಯಿಂದ ಜಾರಿಕೊಳ್ಳುವುದು ನನ್ನ ಬಯಕೆ. ನಾನು ಹಾದು ಬಂದ ಹಾದಿಯನ್ನು ಮೆಲುಕು ಹಾಕಲು ಈಟಿವಿ ವೇದಿಕೆ ಹಾಕಿ ಕೊಟ್ಟಿತು. ಆಗಲೇ ನನ್ನಲ್ಲಿ ಆತ್ಮಕಥೆ ಬರೆಯುವ ಇರಾದೆ ಮೊಳೆಯಿತು. ಇನ್ನೊಂದು ಕಡೆ ನನ್ನ ಮಗ ನಾಟಕದ ಚರಿತ್ರೆ ಬರೆಯುವಂತೆ ಒತ್ತಾಯಿಸುತ್ತಿದ್ದಾನೆ. ನಾನು ಬಂದಾಗ ಇದ್ದ ರಂಗ ಪರಿಸರಕ್ಕೂ, ಈಗಿನ ಸ್ಥಿತಿಗೂ ಸಾಕಷ್ಟು ಬದಲಾವಣೆಯಾಗಿದೆ. ಅದನ್ನು ಪುಸ್ತಕವಾಗಿಸಬೇಕೆಂಬುದು ಮಗನ ಬಯಕೆ. ರಿಟೈರಾದ ಮೇಲೆ ಈ ಎರಡೂ ಕೆಲಸವನ್ನು ಮಾಡುತ್ತೇನೆ.

ಇವತ್ತಿನ ನಾಟಕದ ಬಗ್ಗೆ ಕೇಳಿದಾಗ- ಕೆಲವು ಅಶ್ಲೀಲ ನಾಟಕಗಳನ್ನು ಕಂಡರೆ ಬೇಸರವಾಗುತ್ತದೆ. ಇತರೆ ತಂಡಗಳು ಇಂಥಾ ಪ್ರಯೋಗಗಳಿಗೆ ಒಳ್ಳೆಯ ರಂಗ ಪ್ರಯೋಗಗಳಿಂದಲೇ ಉತ್ತರ ಕೊಡಬೇಕಾಗುತ್ತದೆ. ತಪಸ್ಸು, ತ್ಯಾಗ, ಅರ್ಪಣೆ- ಈ ಮೂರೂ ಮನೋಭಾವಗಳನ್ನು ರಂಗಕರ್ಮಿ ಇಟ್ಟುಕೊಂಡಿದ್ದರೆ ಮಾತ್ರ ಜನ ಆತನನ್ನು ಸ್ವೀಕರಿಸೋದು ಎಂದು ಹಿರಣ್ಣಯ್ಯ ಹೇಳಿದರು.

ಅಂದಹಾಗೆ, ಹಿರಣ್ಣಯ್ಯ ರಿಟೈರಾದರೂ ಅವರ ನಾಟಕಗಳು ಕಿರುತೆರೆ ಮೇಲೆ ಮೂಡಲಿವೆ. ಇವರ ನಾಟಕಗಳನ್ನು ವಿಡಿಯೋ ಕೆಸೆಟ್ಟಿಗೆ ತುಂಬಿಸಿ, ಅದನ್ನು ಪ್ರಸಾರ ಮಾಡುವ ಈಟಿವಿಯ ಕೋರಿಕೆಗೆ ಹಿರಣ್ಣಯ್ಯ ಅನುಮತಿ ಕೊಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X