ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಗೀತೆಗೆ ಕತ್ತರಿ : ಮುಂದಲೆಯ ಕೊಯ್ದು, ಮುಡಿಗೆ ಹೂವು ಮುಡಿಸಿದಂತೆ

By ಡಾ. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಬೆಂಗಳೂರು
|
Google Oneindia Kannada News
ಜಯಭಾರತ ಜನನಿಯ ತನುಜಾತೆ... ನಾಡಗೀತೆಯ ವಿಕಟರೂಪ ನೋಡಿ ನಾನು ದಂಗುಬಡಿದು ಹೋದೆ. ಕುವೆಂಪುರವರಂಥ ಶ್ರೇಷ್ಠ ಕವಿಯಾಬ್ಬರ ಪ್ರಖ್ಯಾತ ಗೀತೆಯನ್ನು, ಅವರಿಲ್ಲದಿರುವಾಗ ಸರಕಾರ ಅರ್ಧಕ್ಕರ್ಧ ಕತ್ತರಿಸಿ ಹಾಕಿ ಉಳಿದರ್ಧಕ್ಕೆ ನಾಡಗೀತೆಯ ಗೌರವ (?) ಕೊಡಲು ಹೊರಟಿದೆ. ಸರಕಾರಕ್ಕೆ ಈ ಅಧಿಕಾರ ಕೊಟ್ಟವರು ಯಾರು ? ಇಂಥ ವಿಲಕ್ಷಣ ಸಂಗತಿ ಹಿಂದೆ ಎಲ್ಲೂ ನಡೆದಿಲ್ಲ. ಸರಕಾರ ತೆಗೆದು ಹಾಕಿರುವ ಸಾಲುಗಳ ಸಂಖ್ಯೆ ಇಪ್ಪತ್ತೊಂದು. ಅದರಲ್ಲಿಯೂ ನಾಡಿನ ಸಂತರ, ಸಮಾಜ ಸುಧಾರಕರ, ಕವಿಗಳ, ಶಿಲ್ಪಿಗಳ, ಆಚಾರ್ಯರ ಹೆಸರು ಇರುವ ಭಾಗವನ್ನೇ ತೆಗೆದು ಹಾಕಲಾಗಿದೆ. ಉಳಿಸಿಕೊಂಡಿರುವ ಭಾಗದಲ್ಲಿ ಭಾರತ ದೇಶಕ್ಕೆ ಸಂಬಂಧಿಸಿದ ಸಾಲುಗಳೇ ಹೆಚ್ಚು ಇವೆ, ಕರ್ನಾಟಕದ್ದಲ್ಲ.

Dr. N.S. Lakshminarayana Bhattaಹಿರಿಯ ಕವಿಯಾಬ್ಬರಿಗೆ ಸರಕಾರ ಸಲ್ಲಿಸುತ್ತಿರುವ ಈ 'ಗೌರವ’ ಪುರಂದರರ ಕೀರ್ತನೆಯಾಂದನ್ನು ನೆನಪಿಸುವಂತಿದೆ. 'ಮಾನಭಂಗವ ಮಾಡಿ ಮತ್ತೆ ಉಪಚಾರವ ಏನ ಮಾಡಿದರಲ್ಲಿ ಇರಬಾರದಯ್ಯ’ ಎಂದು ಮಾನವಂತರಿಗೆ ಎಚ್ಚರಿಕೆ ಹೇಳುವ ಕೀರ್ತನೆ ಅದು. ಒಬ್ಬ ಮರ್ಯಾದಸ್ಥ ಮನುಷ್ಯನಿಗೆ ಗೌರವ ತೋರಿಸುವ ನೆಪದಲ್ಲಿ ಅವನನ್ನು ಅವಮಾನಿಸುವುದು ತಪ್ಪು. ಹಾಗೆ ಮಾಡಿದರೆ ಅದು 'ಮುಂದಲೆಯ ಕೊಯ್ದು, ಮುಡಿಗೆ ಹೂವು ಮುಡಿಸಿದಂತೆ’ ಅಥವಾ 'ತೊಗಲ ಮೂಗ್ಹರಿದು ಚಿನ್ನದ ಮೂಗನ್ನಿಟ್ಟಂತೆ’. ಕುವೆಂಪು ಕವಿತೆಯನ್ನು ಎರಡು ಹೋಳು ಮಾಡಿ ಒಂದನ್ನು ನಾಡಗೀತೆ ಎಂದು ಕರೆದು ಇನ್ನೊಂದನ್ನು ಮರೆಗೆ ತಳ್ಳುವ ಅಧಿಕಾರವನ್ನು ಸರಕಾರಕ್ಕೆ ಯಾರು ಕೊಟ್ಟರು? ಕುವೆಂಪು ಒಬ್ಬರನ್ನು ಬಿಟ್ಟು ಬೇರೆ ಯಾರಿಗೂ ಇಂಥದಕ್ಕೆ ಸಮ್ಮತಿ ನೀಡುವ ಅಧಿಕಾರವಿಲ್ಲ. ಅವರು ಇದನ್ನು ಒಪ್ಪುತ್ತಿರಲಿಲ್ಲ. ಯಾವ ಕವಿಯೇ ಆಗಲಿ ಕೀರ್ತಿಯ ಆಸೆಯಿಂದ ಇದಕ್ಕೆ ಒಪ್ಪಿದರೆ ಅವನೊಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗಿಬಿಡುತ್ತಾನೆ ಅಷ್ಟೆ. ಕುವೆಂಪು ತಾವೇ ಹೇಳಿಕೊಂಡಂತೆ ' ಕೀರ್ತಿಶನಿ’ಯನ್ನು ಆಚೆ ತಳ್ಳಿ 'ಯಶೋಲಕ್ಷ್ಮಿ’ಯನ್ನು ಪುರಸ್ಕರಿಸಿದವರು. ಅವರು ಇದಕ್ಕೆ ಒಪ್ಪುವುದು ಸಾಧ್ಯವೇ ಇರಲಿಲ್ಲ.


ಸರಕಾರ ಆಯ್ದ ಭಾಗದಲ್ಲಿ ಇನ್ನೊಂದು ನ್ಯೂನತೆ ಇದೆ. ಕುವೆಂಪು ' ರಾಮಾಯಣದರ್ಶನಂ’ ಮಹಾಕಾವ್ಯ ಬರೆದವರು. ರಾಮನಂಥ ಉದಾತ್ತ ವ್ಯಕ್ತಿತ್ವವೊಂದನ್ನು ಭಕ್ತಿಯಿಂದ ಪರಿಭಾವಿಸಿ ಬರೆದ ಕಾವ್ಯ ಅದು. ಕುವೆಂಪು ಅವರಿಗೂ ಆ ಕೃತಿಯ ಬಗ್ಗೆ ಹೆಚ್ಚು ಅಭಿಮಾನವಿತ್ತು. ಅವರೇ ಅದನ್ನು ತಮ್ಮ ಮೇರುಕೃತಿ ಎಂದು ಹೇಳಿಕೊಂಡಿದ್ದಾರೆ. ಅದರಲ್ಲಿ ರಾಮನನ್ನು ಒಬ್ಬ ಅವತಾರ ಪುರುಷನನ್ನಾಗಿ ಆರಾಧಿಸಲಾಗಿದೆ. ಅಂಥ ರಾಮನ(ರಾಘವನ) ಹೆಸರೂ ಸರಕಾರಿ ಭಾಗದಲ್ಲಿ ಕಾಣೆಯಾಗಿದೆ. ಕುವೆಂಪು ಅವರು ಮೊದಲಿಗೆ ಒಪ್ಪದಿದ್ದ ಮಧ್ವರ ಹೆಸರು ಬಿಟ್ಟದ್ದೇ ತಪ್ಪು ಎಂದು ಹಲವರು ಭಾವಿಸುವುದಾದರೆ ಅವರು ಸ್ವತಃ ಒಂದು ಮಹಾಕಾವ್ಯ ಬರೆದು ಕೊಂಡಾಡಿದ ರಾಮನ ಹೆಸರನ್ನು(ಅವರು ಸೇರಿಸಿದ್ದರೂ) ಸರಕಾರ ತೆಗೆದು ಹಾಕಿರುವ ಕೃತ್ಯ ಶೋಚನೀಯ.

ಸರಕಾರದ ಈ ಕತ್ತರಿ ಪ್ರಯೋಗ ಕುವೆಂಪು ಅವರಿಗೆ ಮಾತ್ರವೇ ಮಾಡುವ ಅವಮಾನವಲ್ಲ , ಕವಿಕುಲಕ್ಕೇ ಮಾಡುವ ಅವಮಾನ. ಯಾವ ಕವಿಯೂ ಇಂಥ ಅಕೃತ್ಯವನ್ನು ಒಪ್ಪಲಾರ. ಕವಿತೆಯೆಂದರೆ ಕವಿಯ ಪ್ರತಿನಿಧಿ. ಕವಿ ಮರೆಯಾಗಿರುವಾಗ, ಕವಿತೆಗೆ ಮಾಡುವ ಅವಮಾನ ಕವಿಗೇ ಮಾಡುವ ಅವಮಾನ.

ಬಹುಶಃ ಒಂದು ರಾಜ್ಯ ಬಿಟ್ಟರೆ ಭಾರತದ ಬೇರೆ ಯಾವ ರಾಜ್ಯಗಳಲ್ಲೂ ನಾಡಗೀತೆ ಎಂದು ಸ್ವೀಕೃತವಾದ ಕವಿತೆಯೇನೂ ಇಲ್ಲ. ಅಂಥ ಗೀತೆಯಾಂದು ಇರಲೇಬೇಕೆಂದು ಸರಕಾರ ಭಾವಿಸುವುದಾದರೆ ನಮ್ಮೊಂದಿಗಿರುವ ಡಾ. ಜಿ.ಎಸ್‌. ಶಿವರುದ್ರಪ್ಪ, ಚೆನ್ನವೀರ ಕಣವಿಯಂಥ ಹಿರಿಯ ಕವಿಗಳಲ್ಲಿ ಯಾರಾದರೊಬ್ಬರಿಗೆ ಪುಟ್ಟ ನಾಡಗೀತೆಯಾಂದನ್ನು ಬರೆದು ಕೊಡಲು ಸರಕಾರ ಕೇಳಿಕೊಳ್ಳಬಹುದು. ನಿಸಾರರ ನಿತ್ಯೋತ್ಸವ ಕವಿತೆಯನ್ನು ಪರಿಶೀಲಿಸಬಹುದು. ಹಿಂದೆ ಸಭೆಗಳಲ್ಲೂ, ಶಾಲೆಗಳಲ್ಲೂ ಪ್ರಾರ್ಥನೆಯಂತೆ ಬಳಕೆಯಾಗುತ್ತಿದ್ದ ಡಿವಿಜಿಯವರ 'ವನಸುಮದೊಳೆನ್ನ ಜೀವನವು’ ಎಂಬ ಪುಟ್ಟ ಕವಿತೆಯನ್ನು ಆರಿಸಿಕೊಳ್ಳಬಹುದು. ನಾಡಗೀತೆ ಯಾರದ್ದಾದರೇನು ಅದೊಂದು ಉತ್ತಮ ಕವಿತೆಯಾಗಿದ್ದು ನಾಡಿನ ಘನತೆಯನ್ನು ಎತ್ತಿ ಹಿಡಿಯುವಂತಾದರೆ ಸರಿ.

ಕುವೆಂಪು ಜನ್ಮ ಶತಮಾನೋತ್ಸವದ ಸಂಭ್ರಮದ ಸಂದರ್ಭದಲ್ಲಿ ಅವರ ಕವಿತೆಯನ್ನು ತುಂಡರಿಸುವ ಕೆಲಸ ಹೇಯವಾದದ್ದು. ಇಷ್ಟಾಗಿಯೂ ಸರಕಾರ ಹಾಗೆ ಮಾಡುವುದಾದರೆ ಸಾಹಿತಿಗಳು ನ್ಯಾಯಾಲಯಕ್ಕೆ ಹೋಗಿಯಾದರೂ ಇದನ್ನು ತಡೆಯಲು ಯತ್ನಿಸಬೇಕು.

English summary
Dr. Lakshminarayana Bhatta takes serious exceptions for editing Kuvempus poem. He also suggests poets and writers in Karnataka to seek justice in the court of Law
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X