• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪ ಮಗನ ಮುಖಾಮುಖಿಗೆ ಸುಗಂಧಿ ಸೇತುವೆ

By Super
|

ಮನೆಮುಂದೆ ಕಾದು ಕುಳಿತೂ ಕುಳಿತೂ ಸುಸ್ತಾಗಿ ಸೋಮಯಾಜಿಗಳು ಆನಂದನ ಆಫೀಸಿನ ಹತ್ತಿರ ಹೋದರು. ಆನಂದ ಅಲ್ಲಿದ್ದ. ಕಾದಿದ್ದರಿಂದ ಬೇಸರವೂ ಸುಸ್ತೂ ಒಟ್ಟಿಗೇ ಆಗಿತ್ತು. ಬೀಗದ ಕೈ ಗೂಡಲ್ಲಿಟ್ಟು ಬರೋಕೆ ಏನು? ಎಂದು ರೇಗಿ ಬೀಗದೆಸಳು ಇಸಕೊಂಡರು. ಆನಂದನಿಗೆ ಒಂದು ಕ್ಷಣ ಅವರನ್ನು ನಿಲ್ಲಿಸಿ ಕೇಳಿಯೇಬಿಡಬೇಕು. ನೀವು ಸುಗಂಧಿಯ ಮನೆಗೆ ಹೋದದ್ದು ಹೌದಾ? ಎಂದು ವಿಚಾರಿಸಬೇಕು ಅನ್ನಿಸಿತು. ಆದರೆ ಕೇಳುವ ಧೈರ್ಯವಾಗಲಿಲ್ಲ.

ಬೀಗದ ಕೈ ತೆಗೆದುಕೊಂಡು ಸೋಮಯಾಜಿಗಳು ಅತ್ತ ಹೋಗುತ್ತಿದ್ದಂತೆ ಆನಂದನಿಗೆ ಇದ್ದಕ್ಕಿದ್ದ ಹಾಗೆ ಸುಗಂಧಿ ಕೊಟ್ಟ ಕಾಗದವನ್ನು ತಾನು ಒಡೆದು ಓದಿ ಎಲ್ಲಿಟ್ಟೆ ಅನ್ನುವುದು ನೆನಪಾಗಲಿಲ್ಲ. ಜೇಬಲ್ಲಿ ಹುಡುಕಿದ, ಸಿಗಲಿಲ್ಲ. ಮನೆಯಲ್ಲೆಲ್ಲಾದರೂ ಇಟ್ಟು ಬಂದಿರಬಹುದೆ? ಅದು ಅಪ್ಪಯ್ಯನ ಕೈಗೆ ಸಿಕ್ಕಿದರೆ? ಅದನ್ನು ತಾನು ಒಡೆದು ಓದಿದ್ದು ಅವರಿಗೆ ಗೊತ್ತಾಗುತ್ತದಲ್ಲವೇ? ಒಂದು ವೇಳೆ ಗೊತ್ತಾದರೆ ಅದರ ಪರಿಣಾಮ ಏನಾಗಬಹುದು? ಅವರ ಗುಟ್ಟುಗಳು ತನಗೆ ಗೊತ್ತಾದ ನಂತರವೂ ಅವರನ್ನು ಎದುರಿಸುವ ಧೈರ್ಯ ತನಗೆ ಇರುತ್ತದಾ? ಅಥವಾ ಅವರಿಗೆ ತನ್ನನ್ನು ಎದುರಿಸುವ ನೈತಿಕ ಶಕ್ತಿ ಉಳಿಯುತ್ತದಾ? ಮಗನನ್ನು ಎದುರಿಸುವುದಕ್ಕೆ ನೈತಿಕವಾಗಿ ಯಾವ ಅರ್ಹತೆಯೂ ಇಲ್ಲದ ಅಪ್ಪಯ್ಯನನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಇಲ್ಲ, ಅವರಿಗೆ ಆ ಪತ್ರ ಸಿಗಬಾರದು. ಅಂದರೆ ಅಪ್ಪಯ್ಯ ಮನೆಗೆ ಹೋಗುವ ಮೊದಲೇ ತಾನು ಮನೆಗೆ ಓಡಿಹೋಗಬೇಕು. ಅವರು ಬಾಗಿಲು ತೆಗೆಯುವ ಮೊದಲೇ ತಾನು ಅಲ್ಲಿರಬೇಕು.

ಆನಂದ ತಾನು ಬರೆಯುತ್ತಿದ್ದ ಪೆನ್ನಿನ ಮುಚ್ಚಳವನ್ನೂ ಹಾಕದೆ ಹೊರಗೆ ಬಂದು ಪಕ್ಕದ ಅಂಗಡಿಯ ಶ್ರೀಪತಿಯ ಲೂನಾ ಎತ್ತಿಕೊಂಡು ಮನೆಕಡೆ ಓಡಿಸಿದ. ಅಂಗಡಿಗೂ ಮನೆಗೆ ನಡೆದುಹೋದರೆ ಇಪ್ಪತ್ತು ನಿಮಿಷದ ಹಾದಿ. ಲೂನಾದಲ್ಲಾದರೆ ನಾಲ್ಕು ನಿಮಿಷ. ಆನಂದನಿಗೆ ದಾರಿಯಲ್ಲೆಲ್ಲೂ ಸೋಮಯಾಜಿಗಳು ಕಾಣಿಸಲಿಲ್ಲ. ಮನೆಗೆ ನಡೆದು ಹೊರಟಿದ್ದ ಅವರನ್ನು ಅತ್ತ ಕಡೆ ಜೀಪಿನಲ್ಲಿ ಹೋಗುತ್ತಿದ್ದ ರಾಮಣ್ಣ ಜೀಪಿಗೆ ಹತ್ತಿಸಿಕೊಂಡಿದ್ದ. ಹೀಗಾಗಿ ಆನಂದ ಮನೆ ಮುಂದೆ ಲೂನಾ ನಿಲ್ಲಿಸಿ, ಒಳಗೆ ಕಾಲಿಡುವ ಹೊತ್ತಿಗೆ ಸೋಮಯಾಜಿಗಳು ಆನಂದ ಟೇಬಲ್ಲಿನ ಮೇಲೆ ಬಿಟ್ಟುಹೋಗಿದ್ದ ಸುಗಂಧಿಯ ಪತ್ರವನ್ನು ಓದಿ ಮುಗಿಸಿದ್ದರು. ಅವರ ಮುಖದಲ್ಲಿ ವಿನೂತನ ಖುಷಿ ಮತ್ತು ಆತ್ಮವಿಶ್ವಾಸ ಮಿನುಗುತ್ತಿತ್ತು. ಜೊತೆಗೇ, ಅರೆಬರೆ ಪಶ್ಚಾತ್ತಾಪ ಕೂಡ.

ಆನಂದ ಅಪ್ಪಯ್ಯನನ್ನು ಆ ಸ್ಥಿತಿಯಲ್ಲಿ ಯಾವತ್ತೂ ನೋಡಿರಲಿಲ್ಲ. ತಮ್ಮ ಕಠೋರ ತಪಸ್ಸು ಮತ್ತು ಕರ್ಮಠ ಶ್ರದ್ಧೆಯಲ್ಲಿ ಮುಳುಗಿಹೋದಂತೆ ಕಾಣುತ್ತಿದ್ದ ಅಪ್ಪಯ್ಯನ ಒಳಗೂ ಸುಗಂಧಿಯನ್ನು ರಮಿಸಬಲ್ಲ ರೋಮಾಂಚನ ಇರುವುದಕ್ಕೆ ಸಾಧ್ಯವೇ ಎಂದು ಆಶ್ಚರ್ಯಪಡುತ್ತಾ ಆನಂದ ಅಪ್ಪಾಜಿಯನ್ನು ಮಾತಾಡಿಸುವ ಗೋಜಿಗೂ ಹೋಗದೆ ನೇರವಾಗಿ ಒಳಗೆ ನುಗ್ಗಿದ. ಆ ಪತ್ರವನ್ನು ತಾನು ಓದಿಯೇ ಇಲ್ಲ ಎಂಬಂತೆ ತನ್ನ ರೂಮಿನಿಂದ ಯಾವುದೋ ಪುಸ್ತಕವನ್ನು ಎತ್ತಿಕೊಂಡು ತಾನು ಬಂದಿದ್ದೇ ಆ ಪುಸ್ತಕಕ್ಕಾಗಿ ಎಂಬಂತೆ ಹೊರಗೆ ಹೆಜ್ಜೆಹಾಕಿದ.

ಸೋಮಯಾಜಿಗಳು ಬೇರೆಯೇ ಥರ ಯೋಚಿಸುತ್ತಿದ್ದರು. ಈ ಪತ್ರವನ್ನು ಆನಂದ ಓದಿಯೇ ಇರುತ್ತಾನೆ. ಓದಿದ್ದರೆ ಅವನು ಏನಂದುಕೊಂಡಿರುತ್ತಾನೆ. ತನ್ನ ಬಗ್ಗೆ ಅವನ ಭಾವನೆ ಬದಲಾಗಿರುತ್ತದೆಯೇ? ತನ್ನನ್ನು ಆತ ಅಪಾರ್ಥ ಮಾಡಿಕೊಂಡಿರುತ್ತಾನಾ? ಈಗ ಅದು ಇತ್ಯರ್ಥವಾಗದೆ ಹೋದರೆ ತಮ್ಮಿಬ್ಬರ ನಡುವೆ ಅಂಥದ್ದೊಂದು ಅನುಮಾನ ಸದಾ ಹೆಪ್ಪುಗಟ್ಟಿಕೊಂಡಿರುತ್ತದೆ. ಅದನ್ನು ಒಡೆಯುವುದಕ್ಕೆ ಯಾವ ಸಮಜಾಯಿಷಿಯಿಂದಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಅದನ್ನು ಈಗಲೇ ಒಡೆದುಬಿಡಬೇಕು.

ಅವರಿಗೆ ಸೊಸೆಯನ್ನು ಆಸೆಯಿಂದ ನೋಡುವ ಮಾವಂದಿರು ನೆನಪಾದರು. ಅದೇನೂ ಪುರಾಣಗಳಲ್ಲಿ ಪ್ರಸ್ತಾಪವಾಗದ ಸಂಬಂಧವೇನಲ್ಲ. ರೈಭ್ಯ ಮಹರ್ಷಿ ತನ್ನ ಸೊಸೆ ವಿಶಾಖಳನ್ನೇ ಬಯಸಿದ್ದನಲ್ಲ. ಅದಕ್ಕೋಸ್ಕರ ತನ್ನ ಮಗನನ್ನೇ ಕೊಂದನಲ್ಲ. ಅದೇನು ನಿಜವಾಗಿ ನಡೆಯಿತೋ ಪುರಾಣವನ್ನು ತಿರುಚಿ ಹೇಳಿದ್ದೋ ಸೋಮಯಾಜಿಗಳಿಗೆ ಹೊಳೆಯಲಿಲ್ಲ. ಆದರೆ ಅವರಿಗೆ ತಕ್ಷಣ ಅನ್ನಿಸಿದ್ದು ; ಆನಂದನನ್ನು ತಡೆದು ಅವನ ಮನಸ್ಸಿನಲ್ಲಿ ಮೂಡಿರಬಹುದಾದ ಅನುಮಾನವನ್ನು ಒರೆಸಿಹಾಕಬೇಕು.

'ಆನಂದ ... ಒಂದು ನಿಮಿಷ ನಿಂತುಕೋ" ಸೋಮಯಾಜಿಗಳು ಗಂಭೀರವಾಗಿ ಕರೆದರು. ಪುರೋಹಿತರ ಧ್ವನಿ ಯಾವತ್ತೂ ಒಡೆಯಬಾರದು. ಆದರೆ ತನ್ನ ದನಿ ಒಡೆದಿದೆ ಅಂತ ಅವರಿಗೇ ಅನ್ನಿಸಿತು.

ಆನಂದ ಹೊಸಿಲು ದಾಟುತ್ತಿದ್ದವನು ತಿರುಗಿ ನೋಡಿದ. ಕಣ್ಣಲ್ಲೇ ಏನು ಎಂಬಂತೆ ಕೇಳಿದ. 'ಬಾ, ಇಲ್ಲಿ" ಅಂದರು ಸೋಮಯಾಜಿ. ಆನಂದ ನಿಧಾನವಾಗಿ ಅವರ ಬಳಿಗೆ ನಡೆದುಬಂದ. ಅವನ ಕೈಗೆ ಸುಗಂಧಿ ಬರೆದ ಪತ್ರವನ್ನಿಡುತ್ತಾ ಸೋಮಯಾಜಿ ಕೇಳಿದರು; 'ಓದಿದ್ಯಾ ಇದನ್ನ... ಸುಗಂಧಿ ಬರೆದದ್ದು... ಮೊನ್ನೆ ಇಲ್ಲಿಗೆ ಬಂದಿದ್ದಳು. ಏನೇನೋ ಹರಟಿದಳು. ನಾನು ಯಾವುದಕ್ಕೂ ಗಮನ ಕೊಡಲಿಲ್ಲ. ತುಂಬ ಹೊತ್ತು ಹೊರಗೆ ಕೂತಿದ್ದಳು. ಕೊನೆಗೆ ನಾನು ಗದರಿಸಿ ಕಳುಹಿಸಿದೆ".

ಆನಂದನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಪತ್ರವನ್ನು ಕೈಗೆ ತೆಗೆದುಕೊಂಡರೆ ತಾನು ಓದಿಲ್ಲ ಅಂತ ಹೇಳಿದಂತಾಗುತ್ತದೆ. ತಾನು ಓದಿದ್ದೇನೆ ಅಂತ ಅಪ್ಪಯ್ಯನಿಗೆ ಗೊತ್ತಿದೆ. ತೆಗೆದುಕೊಳ್ಳದೇ ಇದ್ದರೆ ಓದಿದ್ದೇನೆ ಅಂತ ಒಪ್ಪಿಕೊಂಡ ಹಾಗಾಗುತ್ತದೆ. ಅದಕ್ಕೇನಾದರೂ ಹೇಳಬೇಕಾಗುತ್ತದೆ. ಎರಡೂ ಸಾಧ್ಯವಿಲ್ಲ ಅನ್ನಿಸಿ ಆನಂದ ಬೇರೆಯೇ ಪ್ರಶ್ನೆ ಹಾಕಿದ. ಆ ಪ್ರಶ್ನೆ ಅಪ್ಪಯ್ಯನನ್ನು ಗೊಂದಲಕ್ಕೀಡು ಮಾಡುತ್ತದೆ ಅಂತ ಗೊತ್ತಿದ್ದೂ ಕೇಳಿದ;

'ಸುಗಂಧಿ ಬಂದಿದ್ಳಾ? ನೀವೇ ಅವಳ ಮನೆಗೆ ಹೋಗಿದ್ರಂತೆ... ತಿಮ್ಮಪ್ಪ ಹೇಳಿದ" ಅಂದ್ರೆ ತಿಮ್ಮಪ್ಪ ನೋಡಿಬಿಟ್ಟಿದ್ದಾನೆ. ನೋಡಿಲ್ಲ ಅಂತ ತಾನಂದುಕೊಂಡರೂ ನೋಡಿದ್ದಾನೆ. ಅಂದರೆ ಊರತುಂಬ ಪ್ರಚಾರ ಮಾಡಿರುತ್ತಾನೆ. ಅಥವಾ ತನ್ನ ಮಂತ್ರಶಕ್ತಿಗೆ ಹೆದರಿ ಮಾಡದೇ ಇದ್ದರೂ ಇದ್ದಾನು. ಆದರೆ ಆನಂದನಿಗೆ ಹೇಳಿಬಿಟ್ಟಿದ್ದಾನೆ. ಇದರಿಂದ ಪಾರಾಗುವ ಏಕೈಕ ದಾರಿಯೆಂದರೆ ಹೋಗಿದ್ದೇನೆ ಅಂತ ಒಪ್ಪಿಕೊಂಡುಬಿಡುವುದು. ಆನಂದನನ್ನು ನೇರವಾಗಿ ಎದುರಿಸುವುದು;

'ಹೌದು. ಹೋಗಿದ್ದುಂಟು... ನಿನ್ನಿಂದಾಗಿ ಇಡೀ ಊರತುಂಬೆಲ್ಲ ಕೆಟ್ಟ ಹೆಸರು. ಪೌರೋಹಿತ್ಯಕ್ಕೆ ಕರೆಯುವುದನ್ನೂ ನಿಲ್ಲಿಸಿದ್ದಾರೆ. ನಿನಗೆ ಅವಳದ್ದೆಂಥದು ಸಹವಾಸ. ಬೇಕಿದ್ದರೆ ನಮ್ಮ ಜಾತಿಯದ್ದೇ ಹುಡುಗಿ ನೋಡಿ ಮದುವೆ ಆಗಲಿಕ್ಕಾಗುವುದಿಲ್ಲವಾ? ಅವಳಿಗೆ ಬೈಯಲಿಕ್ಕೆ ಅಂತ ಹೋಗಿದ್ದೆ....."

ಆನಂದ ಮಾತಾಡಲಿಲ್ಲ. ಅವನಿಗೆ ಆಘಾತವಾಗಿತ್ತು. ತನ್ನ ಪ್ರೇಮವನ್ನು ಅಪ್ಪಯ್ಯ ತಮ್ಮ ವೃತ್ತಿಯಾಂದಿಗೆ ಸಮೀಕರಿಸುತ್ತಿದ್ದಾರೆ. ತಮ್ಮ ಮಾತು ಆನಂದನನ್ನು ನಾಟಲಿಲ್ಲವೇನೋ ಎಂಬ ಅನುಮಾನದಲ್ಲಿ ಸೋಮಯಾಜಿಗಳು ಮತ್ತೆ ಮಾತು ಆರಂಭಿಸಿದರು; 'ನಿನ್ನನ್ನು ಅವಳು ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಅಂಥ ಹುಡುಗಿಯರಿಗೆ ಬೇರೇನು ಕೆಲಸವಿರುತ್ತೆ. ಅದಕ್ಕೇ ಅವಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಇನ್ನೊಂದು ಸಲ ನಿನ್ನ ಕಡೆ ತಲೆ ಹಾಕಿದರೆ ನಾನು ಸುಮ್ಮನಿರೋಲ್ಲ ಅಂತ ಹೇಳಿದ್ದೇನೆ. ನಾನು ಯಾರು ಅಂತ ತೋರಿಸ್ತೇನೆ".

ಆನಂದನಿಗೆ ನಗು ಬಂತು. ಅದರ ಬೆನ್ನಿಗೇ ಸಿಟ್ಟು ಬಂತು. ಹಾಗಿದ್ದರೆ ಅಪ್ಪಾಜಿಗೆ ಹೆದರಿ ಆಕೆ ತನಗೆ ಬಾಗಿಲು ತೆರೆಯಲಿಲ್ಲ ಅಂತ ಕಾಣುತ್ತೆ.ಇವತ್ತು ರಾತ್ರಿ ಅವಳಿಗೆ ಅಪ್ಪಯ್ಯನ ಭೂತ ಬಿಡಿಸಬೇಕು. ಅವಳನ್ನು ಮನೆಗೆ ಕರೆತರಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಆನಂದ ಸುಮ್ಮನೆ ನಿಂತ. ಸೋಮಯಾಜಿಗಳು ಬೇಸರಿಸಿಕೊಂಡವರಂತೆ ನಿಟ್ಟುಸಿರಿಟ್ಟರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more