• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ

|

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

'ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಈ ಸರಣಿಯಲ್ಲಿ ಮೊದಲ ಲೇಖನವಾಗಿ ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

#LifeAfterCorona: ಭವಿಷ್ಯ ಇನ್ನೂ ಭಯಾನಕವಾಗಿರಲಿದೆ: ನೋಮ್ ಚಾಮ್ಸ್ಕಿ

ಕೊರೊನಾ ಸುತ್ತ ಸುಳ್ಳು ಸುದ್ದಿಗಳು, ಅಸಹ್ಯಕರ ರೀತಿಯಲ್ಲಿ ಮಾಹಿತಿ ಹಂಚಿಕೆಯಿಂದಾಗಿ ಗೋಜಲಾಗಿರುವ ಸನ್ನಿವೇಶದಲ್ಲಿ ಸಮುದಾಯಕ್ಕೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು. ಸತೀಶ್ ಚಪ್ಪರಿಕೆ ಅವರ ಅಭಿಪ್ರಾಯ ಮುಂದೆ ಓದಿ..

ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಈ ಬಿಕ್ಕಟ್ಟನ್ನು ಒಂದು ವೈಯಕ್ತಿಕ ಸಮಸ್ಯೆ ಅಥವಾ ಸವಾಲು ಎಂದು ಯಾವ ಕ್ಷಣದಲ್ಲೂ ಭಾವಿಸಲು ನನ್ನ ಕೈಲಾಗಲಿಲ್ಲ. ಇದು ನಮ್ಮ ಇಡೀ ಸಂಸ್ಥೆ, ಸಮಾಜ, ದೇಶ, ಜಗತ್ತಿನಲ್ಲಿ ಎಲ್ಲರ ಮೇಲೂ ಬಂದೆರಗಿದ ಮಹಾನ್ ಬಿಕ್ಕಟ್ಟು. ಇಂತಹ ಹೊತ್ತಿನಲ್ಲಿ ಮನುಷ್ಯನಾದ ಯಾವುದೇ ವ್ಯಕ್ತಿ ವೈಯಕ್ತಿಕ ನೆಲೆಯಲ್ಲಿ ತನ್ನನ್ನು ತಾನು ಮಾತ್ರ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ಸಂಸ್ಥೆ, ಸಮಾಜ, ದೇಶ ಮತ್ತು ಜಗತ್ತಾಗಿ ಈ ಬಿಕ್ಕಟ್ಟನ್ನು ಸಾಮೂಹಿಕವಾಗಿ ಎದುರಿಸಬೇಕಾಗುತ್ತದೆ. ಮಾನವೀಯ ನೆಲೆಯಲ್ಲಿ ನಿಂತು ನಾವೆಲ್ಲರೂ ಪರಸ್ಪರ ಒಂದಾಗಿ ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ನಾವು ನಡೆಸುವ ಫರ್ಬೆಂಡನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನ ನಿರ್ಧಾರ ತೆಗೆದುಕೊಂಡೆವು. ದೇಶದಲ್ಲಿ ಮೊದಲ ಬಾರಿಗೆ ''ಜನತಾ ಕರ್ಫ್ಯೂ'' ಆರಂಭವಾಗುವ ಮೊದಲೇ ನಮ್ಮ ಸಂಸ್ಥೆಯಲ್ಲಿ ''ವರ್ಕ್ ಫ್ರಂ ಹೋಮ್'' ಜಾರಿಗೆ ತಂದಾಗಿತ್ತು. ಅದರ ಮೂಲ ಉದ್ದೇಶ ''ದೈಹಿಕ ಅಂತರ'' ಕಾದುಕೊಳ್ಳುವುದಾಗಿತ್ತು. ನಾವು ಎರಡು ವಾರ ಮೊದಲೇ ನಿರ್ಧಾರ ಕೈಗೊಂಡ ಕಾರಣ, ಸರ್ಕಾರದ ಲಾಕ್ ಡೌನ್ ಸಂಸ್ಥೆಯ ಕಾರ್ಯ ನಿರ್ವಹಣೆಯ ಮೇಲೆ ಅಂತಹ ದೊಡ್ಡ ಪರಿಣಾಮ ಬೀರಲಿಲ್ಲ. ಈಗ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿಯೂ ಅವರವರ ಮನೆಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಎಲ್ಲ ಐವ್ವತ್ತು ಸಿಬ್ಬಂದಿಯೂ ಝೂಂ ಮೀಟಿಂಗ್ ನಲ್ಲಿ ಕಲೆಯುತ್ತೇವೆ. ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ನಮ್ಮ ಕಚೇರಿ ವರ್ಚುವಲ್ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸಂಸ್ಥೆ ಒಂದು ಸಾಫ್ಟ್ ವೇರ್ ಮತ್ತು ಡಿಜಿಟಲ್ ಮಾರ್ಕೇಟಿಂಗ್ ಸಂಸ್ಥೆಯಾದ ಕಾರಣ ಇದು ಸುಲಭವಾಯಿತು. ಬೇರೆ ಉತ್ಪಾದನಾ ಘಟಕಗಳಂತಾಗಿದ್ದರೆ, ನಮಗೂ ಕಷ್ಟವಾಗುತ್ತಿತ್ತು. ಆದರೀಗ, ಇಡೀ ತಂಡವೇ ವರ್ಚುವಲ್ ಮೋಡ್ ಗೆ ಹೊಂದಿಕೊಂಡಿದೆ. ಕೆಲಸ ನಡೆಯುತ್ತಿದೆ.

ಮಾಧ್ಯಮಲೋಕದ ಆತಂಕ

ಮಾಧ್ಯಮಲೋಕದ ಆತಂಕ

ಇನ್ನು ತೀರಾ ವೈಯಕ್ತಿಕ ನೆಲೆಯಲ್ಲಿ ನೋಡಿದರೆ, ಒಬ್ಬ ಪತ್ರಕರ್ತನಾಗಿ ಎರಡೂವರೆ ದಶಕಗಳ ಕಾಲ ಕೆಲಸ ಮಾಡಿದ್ದ ನನಗೆ ಒಟ್ಟಾರೆ ಮಾಧ್ಯಮ ಲೋಕ ಮುಳುಗಿ ಹೋಗುತ್ತಿದೆ ಎಂಬ ನೋವು ಕಾಡುತ್ತಿದೆ. ಮಾಧ್ಯಮ ಲೋಕದಲ್ಲಿ ಅದೆಷ್ಟೋ ಜನ ಸ್ನೇಹಿತರು ಕೆಲಸ ಕಳೆದುಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಒಂದು ಅಂದಾಜಿನ ಪ್ರಕಾರ ಮಾಧ್ಯಮ ಲೋಕದಲ್ಲಿ ಶೇಕಡಾ 30-40 ಪತ್ರಕರ್ತರು ಕೆಲಸ ಕಳೆದುಕೊಳ್ಳಲಿದ್ದಾರೆ. ಇದು ತುಂಬಾ ನೋವುಂಟು ಮಾಡುತ್ತಿದೆ. ಮಾಧ್ಯಮದಂತೆಯೇ ಆಟೋ ಮೊಬೈಲ್, ಏವಿಯೇಷನ್, ಹಾಸ್ಪಿಟಾಲಿಟಿಯಂತಹ ಅನೇಕ ಔದ್ಯೋಗಿಕ ವಲಯಗಳು ಕಂಗೆಟ್ಟು ಹೋಗಿವೆ. ಕೊರೊನಾ ಪರಿಣಾಮ ಈ ವಲಯಗಳ ಮೇಲೆ ಕನಿಷ್ಠ ಇನ್ನು ಎರಡು-ಮೂರು ವರ್ಷ ಇರಲಿದೆ. ಇನ್ನು ಅಸಂಘಟಿತ ವಲಯದಲ್ಲಿನ ಪರಿಸ್ಥಿತಿ ಕಣ್ಣೀರು ತರಿಸುತ್ತಿದೆ. ಈ ದೇಶದ ರೈತರು, ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿರುವುದನ್ನು ಕಂಡಾಗ ದೇಶದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ.

#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ

ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಜಾಗತಿಕ ಮಟ್ಟದಲ್ಲಿನ ವೈದ್ಯಲೋಕಕ್ಕೆ ಕೋವಿಡ್-19 ಸದ್ಯದ ಮಟ್ಟಿಗೆ ಒಂದು ದೊಡ್ಡ ಸವಾಲೇ ಆಗಿದೆ. ಒಬ್ಬ ವಿಜ್ಞಾನ ವಿದ್ಯಾರ್ಥಿಯಾಗಿ ನಾನು ಈ ಸನ್ನಿವೇಶವನ್ನು ಅರ್ಥ ಮಾಡಿಕೊಂಡಂತೆ, ಈಗಿನ ಲಾಕ್ ಡೌನ್ ಮತ್ತು ಸೋಷಿಯಲ್ ಡಿಸ್ಟೆನ್ಸ್ ಒಂದು ತಾತ್ಕಾಲಿಕ ಪರಿಹಾರ. ಇದರ ಮೂಲಕ ರೋಗ ಹರಡದಂತೆ ತಡೆಯಬಹುದು ಅಷ್ಟೇ. ಕೋವಿಡ್-19 ವೈರಸ್ ಇನ್ನಿಲ್ಲವಾಗುವಂತೆ ಮಟ್ಟಹಾಕಲು ಸಾಧ್ಯವಿಲ್ಲ. ಆ ಹಂತ ತಲುಪಬೇಕಿದರೆ ಕೋವಿಡ್-19 ವೈರಸ್ ನಾಶ ಮಾಡುವ ಲಸಿಕೆಯ ಆವಿಷ್ಕಾರವಾಗಬೇಕು. ಅದಕ್ಕೆ ಇನ್ನೂ ಕನಿಷ್ಠ ಐದಾರು ತಿಂಗಳು ಬೇಕಾದೀತು. ಅಲ್ಲಿಯವರೆಗೆ ಈ ಗೊಂದಲ ಮುಂದುವರಿಯಲಿದೆ.

ಅದರರ್ಥ ಇನ್ನೂ ಐದಾರು ತಿಂಗಳು ಲಾಕ್ ಡೌನ್ ಮಾಡಬೇಕು ಎಂದಲ್ಲ. ಆರ್ಥಿಕ ವ್ಯವಸ್ಥೆಯ ನಿರ್ವಹಣೆ ದೃಷ್ಟಿಯಲ್ಲಿ ಯಾವುದೇ ದೇಶ ಅಷ್ಟೊಂದು ದೀರ್ಘ ಕಾಲ ಲಾಕ್ ಡೌನ್ ಮಾಡಿಕೊಂಡು ಇರಲು ಸಾಧ್ಯವಿಲ್ಲ. ಆ ಹಿನ್ನಲೆಯಲ್ಲಿ ಇದು ಎರಡು ದೋಣಿಯ ಮೇಲಿನ ಪಯಣ. ಒಂದು, ಕೋವಿಡ್-19 ವೈರಸ್ ಹರಡದಂತೆ ನೋಡಿಕೊಳ್ಳುತ್ತಲೇ ಅದಕ್ಕೆ ತಕ್ಕುದಾದ ಲಸಿಕೆ ಹುಡುಕಬೇಕು. ಆಮೇಲೆ ಆ ಲಸಿಕೆಯನ್ನು ಹೇಗೆ ಬಳಸಬೇಕು ಎನ್ನುವುದನ್ನು ನಿರ್ಧರಿಸಿ ಅದರ ಉಪಯೋಗ ಶುರುವಾದ ಮೇಲೆ ಮಾತ್ರ ಮನುಷ್ಯರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ. ಇದರ ಜೊತೆ-ಜೊತೆಯಲ್ಲಿ ಆರ್ಥಿಕ ವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳಬೇಕು. ಇದು ಪ್ರತಿಯೊಂದು ದೇಶದ ಮುಂದಿರುವ ಸವಾಲು. ಅದನ್ನು ಆಯಾ ಸರ್ಕಾರ ಹೇಗೆ ನಿರ್ವಹಿಸುತ್ತದೆ ಎನ್ನುವುದರ ಮೇಲೆ ಅವರವರ ಭವಿಷ್ಯ ನಿರ್ಧಾರವಾಗುತ್ತದೆ.

ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆಯೇ?

ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆಯೇ?

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ಆ ಸಾಧ್ಯತೆ ಬಹಳಷ್ಟಿದೆ. ಏಕೆಂದರೆ ಕೊರೊನಾ ಪೂರ್ವದಲ್ಲಿಯೇ ನಮ್ಮ ವ್ಯವಸ್ಥೆ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಕೆಲವು ದಶಕಗಳಾಗಿವೆ. ಭಾರತದಂತಹ ದೇಶದಲ್ಲಿ ಸಂಪತ್ತಿನ ಹಂಚಿಕೆಯ ಅಸಮತೋಲನ ಈಗ ಗಗನಕ್ಕೇರಿ ನಿಂತಿದೆ. ದೇಶದಲ್ಲಿರುವ ನೂರು ಚಿಲ್ಲರೆ ಬಿಲಿಯಾಧಿಪತಿಗಳು ಒಟ್ಟಾರೆ ದೇಶದ ಸಂಪತ್ತಿನ ಶೇಕಡಾ ಎಪ್ಪತ್ತರಷ್ಟು ಭಾಗದ ಒಡೆಯರಾಗಿದ್ದಾರೆ. ಇನ್ನು ಆಳುವವರು ಮತ್ತು ಸರ್ಕಾರ ಇಂತಹ ಬಿಲಿಯಾಧಿಪತಿಗಳ ಕೈಯಾಳಾಗಿಯೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್-19ರಂತಹ ವೈರಸ್ ಸುನಾಮಿ ಅಪ್ಪಳಿಸಿದೆ. ಈಗ ಕೂಡ ವೈರಸ್ ಅಲೆಯಲ್ಲಿ ಕೊಚ್ಚಿ ಹೋಗುವುದು ನಮ್ಮ ದೇಶದ ಶೇಕಡಾ ೪೦ರಷ್ಟು ಇರುವ ಬಡವರೇ. ಆ ಪೈಕಿ ಹಲವರು ನೇರವಾಗಿ ಸಾವನ್ನಪ್ಪಬಹುದು ಅಥವಾ ಆರ್ಥಿಕವಾಗಿ ಜರ್ಝರಿತವಾಗಿ ಜೀವ ಕಳೆದುಕೊಳ್ಳಬಹುದು.

ಇದೆಂತಹ ವ್ಯವಸ್ಥೆಯೆಂದರೆ ಬಡವರು ಮತ್ತಷ್ಟು ಬಡವರಾಗಿ ಹಾಗೂ ಶ್ರೀಮಂತರು ಮತ್ತಷ್ಟು ಸಂಪತ್ತನ್ನು ದೋಚಿಕೊಳ್ಳಲು ಅನುಕೂಲವಾಗುವ ಸ್ಥಿತಿ. ಇಂತಹ ಸಂಕಟ ಬಂದಾಗಲೆಲ್ಲಾ ಸಿರಿವಂತ ಸಮುದಾಯ ಪರೋಕ್ಷವಾಗಿ ಅದರ ಉಪಯೋಗ ಮಾಡಿಕೊಂಡಿದೆ. ಆದರೆ, ದೇಶದ ದೀರ್ಘ ಆರ್ಥಿಕ ಆರೋಗ್ಯದ ದೃಷ್ಟಿಯಲ್ಲಿ ಅದು ಉತ್ತಮ ಬೆಳವಣಿಗೆಯಲ್ಲ. ಯಾವುದೇ ದೇಶದ ಆರ್ಥಿಕ ಪಿರಮಿಡ್ ನಿಂತಿರುವುದೇ ತಳದಲ್ಲಿರುವ ಬಡವರ ಬುನಾದಿಯ ಮೇಲೆಯೇ.

ಅಂತಹ ಪಿರಮಿಡ್ ನ ಬುನಾದಿ ಸಡಿಲಗೊಂಡರೆ ಒಂದು ದಿನ ಅದು ಕುಸಿದು ಬೀಳುತ್ತದೆ. ಅದನ್ನು ಆಡಳಿತ ನಡೆಸುವವರು ಮತ್ತು ಸಿರಿವಂತರು ಅರ್ಥ ಮಾಡಿಕೊಂಡು ಕನಿಷ್ಠ ಈಗಲಾದರೂ ಸಂಪತ್ತನ್ನು ಹಂಚಿ, ಆರ್ಥಿಕ ಅಸಮಾನತೆಯನ್ನು ಒಂದಷ್ಟರ ಮಟ್ಟಿಗೆ ಹೋಗಲಾಡಿಸಬೇಕು. ಈ ದೇಶದ ಶೇಕಡಾ ನಲವತ್ತರಷ್ಟು ಬಡಜೀವಿಗಳ ಬದುಕು ಸಮೃದ್ಧವಾಗುವಂತಾಗಲು ನಮ್ಮ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಗಟ್ಟಿಯಾಗಬೇಕು ಮತ್ತು ಬಹಳಷ್ಟು ಸುಧಾರಣೆಗೆ ಒಳಗಾಗಬೇಕು. ಆ ನಿಟ್ಟಿನಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳಲು ಮತ್ತು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಇದು ಸಕಾಲ. ತಿದ್ದಿಕೊಳ್ಳುವುದು ಅಥವಾ ಬಿಡುವುದು ನಮಗೇ ಬಿಟ್ಟಿದ್ದು.

ಕೊರೊನಾ ಒಡ್ಡುವ ಸವಾಲುಗಳು

ಕೊರೊನಾ ಒಡ್ಡುವ ಸವಾಲುಗಳು

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಮುಂದಿನ ಕೆಲವು ದಿನಗಳಲ್ಲ. ಮುಂದಿನ ಎರಡು-ಮೂರು ವರ್ಷಗಳು ಕೋವಿಡ್-19 ಪರಿಣಾಮಗಳು ಇಡೀ ಜಗತ್ತನ್ನೇ ಕಾಡಲಿದೆ. ಹಾಗಿರುವಾಗ ನಾವು ಪ್ರತಿಯೊಬ್ಬರೂ ವೈಯಕ್ತಿಕ ನೆಲೆಯಲ್ಲಿ ಆ ಪರಿಣಾಮಗಳನ್ನು ಎದುರಿಸಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ತಕ್ಷಣ, ಆರೋಗ್ಯ ಕಾಪಾಡಿಕೊಳ್ಳಬೇಕು. ಜೊತೆಯಲ್ಲಿಯೇ ಆರ್ಥಿಕ ಹೊಡೆತಗಳಿಗೆ ನಾವು ಮತ್ತು ನಮ್ಮ-ನಮ್ಮ ಕುಟುಂಬ ಕುಸಿಯದಂತೆ ನಿರ್ವಹಣೆ ಮಾಡಿಕೊಳ್ಳಲೇಬೇಕು. ಬದುಕಲ್ಲಿ ಸಾಕಷ್ಟು ಬದಲಾವಣೆ ಮತ್ತು ಅಡ್ಜಸ್ಟ್ ಮೆಂಟ್ ಗಳಿಗೆ ಪ್ರತಿಯೊಬ್ಬರೂ ಸಿದ್ಧರಾಗಬೇಕು.

ಅದರಲ್ಲಂತೂ ಇಎಂಐ ಆಧರಿಸಿದ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮವರ್ಗ ನಾಜೂಕಾಗಿ ದಿನ ದೂಡುವ ಕಾಲ ಇದು. ನೀವು ಉದ್ಯೋಗಿಗಳಾಗಿದ್ದರೆ ನಿಮ್ಮ ಉದ್ಯೋಗ ಉಳಿಯುತ್ತದೆ ಎಂಬ ಗ್ಯಾರಂಟಿ ಇಲ್ಲ. ಯಾವ ಕ್ಷಣದಲ್ಲಿ ಯಾವ ಸಂಸ್ಥೆ ಯಾರನ್ನು ಬೇಕಾದರೂ ಕೆಲಸದಿಂದ ತೆಗೆದು ಹಾಕಬಹುದು. ಏಕೆಂದರೆ ಕೋವಿಡ್-19 ಆರ್ಥಿಕ ಹೊಡೆತಕ್ಕೆ ಪ್ರತಿಯೊಂದು ಕಂಪೆನಿಯೂ ಸಿಕ್ಕಿ ಹಾಕಿಕೊಂಡಿದೆ. ಅಕಸ್ಮಾತ್ ನಿಮ್ಮ ಕೆಲಸ ಉಳಿದರೂ, ಖರ್ಚನ್ನು ಅರ್ಧಕ್ಕೆ ಇಳಿಸಿ. ಇದ್ದುದರಲ್ಲಿಯೇ ಸಾಕಷ್ಟು ಉಳಿತಾಯ ಮಾಡಿಕೊಂಡು ಹಾಗೂ-ಹೀಗೆ ಇನ್ನೆರಡೋ ಅಥವಾ ಮೂರೋ ವರ್ಷ ತಳ್ಳಿ. ಯಾವುದೇ ಕಾರಣಕ್ಕೆ ಕೈ ಕಾಲಿ ಮಾಡಿಕೊಳ್ಳಬೇಡಿ. ಅನಗತ್ಯ ವೆಚ್ಚ ಎಲ್ಲೂ ಮಾಡಬೇಡಿ. ಹೊಸ ಕಾರು, ಮನೆಯ ಕನಸು ಕಾಣಬೇಡಿ. ಅಗತ್ಯವಿದ್ದಲ್ಲಿ ಮಾತ್ರ ಹೊಸ ಬಟ್ಟೆ ಕೊಂಡುಕೊಳ್ಳಿ. ಇಲ್ಲವಾದಲ್ಲಿ ಆರೋಗ್ಯ, ಶಿಕ್ಷಣಕ್ಕೆ ಮಾತ್ರ ಅಗತ್ಯವಿದ್ದಷ್ಟು ಖರ್ಚು ಮಾಡಿ.

ಇನ್ನು ಉದ್ಯೋಗ ಕಳೆದುಕೊಂಡರೆ ಗಾಭರಿಯಾಗಬೇಡಿ. ಇದು ಬದುಕಿನ ಅಂತ್ಯವಲ್ಲ. ಹೊಸದರ ಆರಂಭ. ಒಂದು ಬಾಗಿಲು ಮುಚ್ಚಿದರೆ, ಮತ್ತೊಂದು ಬಾಗಿಲು ಖಂಡಿತ ತೆಗೆದುಕೊಳ್ಳುತ್ತದೆ. ಆದರೆ, ತೆರೆಯುವ ಬಾಗಿಲುಗಳನ್ನು ಗುರುತಿಸುವ ಶಕ್ತಿ ನಿಮ್ಮಲ್ಲಿರಬೇಕು. ತಾಳ್ಮೆ, ಧೈರ್ಯ ಮತ್ತು ಛಲ ಇಟ್ಟುಕೊಳ್ಳಿ. ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಳ್ಳಿ. ನೀವೊಬ್ಬ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಕೆಲಸ ಕಳೆದುಕೊಂಡರೆ, ನಿಮಗೆ ಬೇರೆ ಯಾವುದಾದರೂ ಸ್ಕಿಲ್ ಸೆಟ್ ಇದ್ದಲ್ಲಿ ಅದನ್ನು ಬಳಸಿ ಬದುಕು ಕಟ್ಟಿಕೊಳ್ಳಲು ಹಿಂಜರಿಯಬೇಡಿ. ಒಬ್ಬ ಪತ್ರಕರ್ತನಾಗಿದ್ದರೆ, ಕೆಲಸ ಹೋದರೆ ಕಿರಾಣಿ ಅಂಗಡಿ ಅಥವಾ ಚಹಾ ಕೆಫೆ ತೆಗೆಯಲು ಕೂಡ ಹಿಂಜರಿಯಬೇಡಿ. ಬದುಕಿಗೆ ಒಗ್ಗುವ ಕಲೆ ಮತ್ತು ಭರವಸೆಯನ್ನು ಇಟ್ಟಕೊಳ್ಳುವ ಮನಸ್ಸು ಈವತ್ತಿನ ತುರ್ತು. ಅದು ನಿಮಗಿರಲಿ. ನನಗೂ ಇರಲಿ.

ಸತೀಶ್ ಚಪ್ಪರಿಕೆ-ಸಂಕ್ಷಿಪ್ತ ಪರಿಚಯ

ಸತೀಶ್ ಚಪ್ಪರಿಕೆ-ಸಂಕ್ಷಿಪ್ತ ಪರಿಚಯ

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ 'ಬ್ರಿಟಿಷ್ ಶಿಪ್ಪಿಂಗ್ ಸ್ಕಾಲರ್‌ಷಿಪ್' ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಪುಟ್ಟ ಊರು ಚಪ್ಪರಿಕೆಯ ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೊಟೇಲ್ ಉದ್ಯಮದ ಹಿನ್ನಲೆಯಲ್ಲಿ ಕ್ರಮೇಣ ಬೆಂಗಳೂರಿಗೆ ಬಂದು ನೆಲೆಸಿದವರು.

ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ `ಪ್ರಜಾವಾಣಿ' ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಕಳೆದ 6 ವರ್ಷಗಳಿಂದ ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಸಂಸ್ಥೆ 'ಫರ್ಬೆಂಡೆನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್'ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ 'ಪ್ರಜಾವಾಣಿ' ಮತ್ತು 'ಹಫಿಂಗ್ಟನ್ ಪೋಸ್ಟ್' (ಇಂಗ್ಲಿಷ್)ನಲ್ಲಿ ಅಂಕಣಗಳನ್ನು ಬರೆದಿದ್ದಾರೆ.

ಮೂರು ದಶಕಗಳ ಹಿಂದೆ 'ಪ್ರಜಾವಾಣಿ' ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಬೆಳಕಿಗೆ ಬಂದ ಅವರ ಮತ್ತೊಂದು ಮೌನಕಣಿವೆ' (ಪರಿಸರ ಲೇಖನಗಳು), 'ಹಸಿರು ಹಾದಿ' (ಅ.ನ.ಯಲ್ಲಪ್ಪರೆಡ್ಡಿ ಆತ್ಮಕತೆ), ವಿಶ್ವಕಪ್ ಕ್ರಿಕೆಟ್ (ಕ್ರಿಕೆಟ್ ಕುರಿತ ಕೃತಿ), ಬೇರು (ಕಥಾ ಸಂಕಲನ), ಥೇಮ್ಸ್ ತಟದ ತವಕ ತಲ್ಲಣ (ಪ್ರವಾಸ ಕಥನ), ದೇವಕಾರು (ಜನಪರ ಲೇಖನಗಳ ಸಂಗ್ರಹ), ಮುಸಾಫಿ‌ರ್ (ಅಂಕಣ ಬರೆಹಗಳ ಸಂಗ್ರಹ) ಮತ್ತು 'ಪಾಂಜಿ ಭಾಯಿ ಎ ಬಯೋಗ್ರಫಿ' (ಇಂಗ್ಲಿಷ್) ಕೃತಿಗಳು ಪ್ರಕಟವಾಗಿವೆ. ಈ ಪೈಕಿ 'ಥೇಮ್ಸ್ ತಟದ ತವಕ ತಲ್ಲಣ'ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. 18 ವರ್ಷಗಳ ದೀರ್ಘ ಕಾಲದ ನಂತರ ಅವರ ಎರಡನೇ ಕತಾ ಸಂಕಲನ ‘ವರ್ಜಿನ್ ಮೊಹಿತೊ' ಇತ್ತಿಚೆಗೆ ಪ್ರಕಟವಾಗಿದೆ.

English summary
#LifeAfterCorona: How will be life after Corona menance gets over. Senior Journalist Satish Chapparike's insights on how to fight Coronavirus is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more