ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ

By ಬಿ. ಸುರೇಶ, ಚಿತ್ರಕರ್ಮಿ
|
Google Oneindia Kannada News

'ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಈ ಸರಣಿಯಲ್ಲಿ ಎರಡನೇ ಲೇಖನವಾಗಿ ಹಿರಿಯ ಚಿತ್ರಕರ್ಮಿ ಬಿ. ಸುರೇಶ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ಜನ ಸಮುದಾಯಕ್ಕೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು ಎಂಬ ನಂಬಿಕೆ, ವಿಶ್ವಾಸ ನಮ್ಮಲಿದೆ.

#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಕೊರೊನಾ ನಂತರ ಜನಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುವ ಮಾತುಗಳಿವೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ. ಈ ನಿಟ್ಟಿನಲ್ಲಿ ಬಿ. ಸುರೇಶ ಅವರ ಅಭಿಪ್ರಾಯ ಮುಂದೆ ಓದಿ..

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಬಿ.ಸುರೇಶ: ಕಳೆದ ಒಂದು ತಿಂಗಳ ಅವಧಿಯಲ್ಲಿ ಬದುಕಿನ ಕ್ರಮ ಸಂಪೂರ್ಣ ಪಲ್ಲಟವಾಗಿದೆ.
- ಹಗಲು ಸೂರ್ಯ ಹುಟ್ಟುವ ಮೊದಲೇ ಮಾಡುತ್ತಿದ್ದ ಕಾಲ್ನಡಿಗೆ, ವ್ಯಾಯಾಮಗಳು ಯಾವುದೋ ಉದ್ಯಾನವನದಲ್ಲಿ ಅಥವಾ ಗರಡಿಮನೆಯಲ್ಲಿ ಆಗುತ್ತಿತ್ತು. ಈಗ ಹಗಲು ಇರುಳು ಮನೆಯೊಳಗೆ ಇರಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಒಂದು ಗಂಟೆ ಮೀರಿ ನಡೆಯುತ್ತಿದ್ದ ವ್ಯಾಯಾಮ ಮನೆಯೊಳಗೆ ಅರ್ಧ ಗಂಟೆ ಸಹ ದಾಟುವುದಿಲ್ಲ... ಇದರಿಂದಾಗಿ ದೈಹಿಕವಾಗಿ ಆಗಿರುವ ಪಲ್ಲಟ ದೊಡ್ಡದು.

- ಭೌತಿಕ ವಿವರಗಳನ್ನು ಮತ್ತಷ್ಟು ಗಮನಿಸುವುದಾದರೆ ಪ್ರತಿದಿನ ನಿಗದಿತ ಸಮಯಕ್ಕೆ ಕಚೇರಿಗೋ, ಚಿತ್ರೀಕರಣಕ್ಕೋ, ಸಿನಿಮಾ - ಧಾರಾವಾಹಿ ಕುರಿತ ಸಭೆಯೋ, ಬರವಣಿಗೆಯೋ ನಡೆಯುತ್ತಿತ್ತು. ದಿನವೊಂದಕ್ಕೆ ಕನಿಷ್ಟ ಹದಿನಾಲ್ಕು ಗಂಟೆಯ ಕೆಲಸ ಸತತವಾಗಿ ಮಾಡಿ, ನಂತರ ನಾಲ್ಕು ಗಂಟೆ 'ನನ್ನ ಓದು, ನನ್ನ ಸಿನಿಮಾ ನೋಡುವ' ಕೆಲಸ ಮಾಡುತ್ತಿದ್ದೆ. ಈಗ ಅದೆಲ್ಲವೂ ಬಂದ್ ಆಗಿದೆ.

ಈಗೆಲ್ಲವೂ ಮನೆಯಲ್ಲಿಯೇ. ಸಭೆಗಳು ಜೂ಼ಮ್ ಅಥವಾ ಸ್ಕೈಪ್ ಅಥವಾ ಮೈಕ್ರೋಸಾಫ್ಟ್ ಟೀಮ್ಸ್ ಮೂಲಕ ದಿನಕ್ಕೊಂದರಂತೆ ನಡೆಯುತ್ತವೆ. ಬರವಣಿಗೆಯೂ ನಿರಂತರವಾಗಿ ನಿಗದಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಒಂದಷ್ಟು ನಡೆಯುತ್ತಿದೆ. ಆದರೆ ಈ ಕೆಲಸಗಳ ಜೊತೆಗೆ ಮನೆಗೆಲಸಗಳು ಸೇರಿಕೊಂಡಿವೆ. ಕಸ ಹೊಡೆಯುವುದು, ಪಾತ್ರೆ ತೊಳೆಯುವುದು, ಬಟ್ಟೆಗಳನ್ನು ಒಗೆಯುವ - ಒಣ ಹಾಕುವ - ಮಡಚಿಡುವ ಕೆಲಸಗಳು, ಅಡಿಗೆಗೆ ಬೇಕಾದ ಸಹಾಯ, ಕೈ ತೋಟದ ಗಿಡಗಳ ಆರೈಕೆ, ಮನೆಗೆ ಬೇಕಾದ ಸಾಮಗ್ರಿ ತರುವುದು, ಇತ್ಯಾದಿ ಹಲವು ಕೆಲಸಗಳು ಸೇರಿಕೊಂಡಿವೆ. ಮನೆಯವರೆಲ್ಲರೂ ಹಂಚಿಕೊಂಡು ಈ ಕೆಲಸಗಳನ್ನು ಮಾಡುತ್ತಿದ್ದೇವೆ. ಇದು ನಮ್ಮ ನಡುವಿನ ತಿಳುವಳಿಕೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಜೊತೆಗೆ ಸಂಸಾರ ಎನ್ನುವುದು ಸಂದೇಶಗಳ ಮೂಲಕ ನಡೆಯುವುದರ ಬದಲಿಗೆ ಮುಖಾಮುಖಿ ಭೇಟಿಯ ಮೂಲಕ ನಡೆಯುತ್ತಿದೆ. ನಾನು, ನನ್ನ ಮಡದಿ, ಮಗಳು ಒಂದೇ ವೃತ್ತಿಯವರಾದ್ದರಿಂದ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಸುಲಭ. ಇದರಿಂದಾಗಿ ಜಗಳಗಳಿಲ್ಲದ, ನಗು ತುಂಬಿದ ಮನೆ ನಮ್ಮದಾಗಿದೆ.

ಈ ಲಾಕ್ಡೌನ್ ಇನ್ನೂ ಅದೆಷ್ಟು ದಿನ ಇರಬಹುದು ಎಂದು ತಿಳಿದಿಲ್ಲವಾದರೂ ಈಗ ಕಳೆದಿರುವ ಒಂದು ತಿಂಗಳು ನಮ್ಮನ್ನು ಧಾವಂತಗಳಿಂದ ಸಾವಧಾನಕ್ಕೆ ಮತ್ತು ಅರಿತು ನಡೆಯುವ ಸ್ಥಿತಿಗೆ ತಂದಿದೆ.

ಈ ಲಾಕ್ಡೌನ್ ದೊಡ್ಡ ಕಲಿಕೆಯ ಅವಕಾಶ

ಈ ಲಾಕ್ಡೌನ್ ದೊಡ್ಡ ಕಲಿಕೆಯ ಅವಕಾಶ

- ಬೌದ್ಧಿಕವಾಗಿ ಈ ಲಾಕ್ಡೌನ್ ದೊಡ್ಡ ಕಲಿಕೆಯ ಅವಕಾಶ. ಓದಲೆಂದು ತಂದಿಟ್ಟುಕೊಂಡಿದ್ದ ರಾಶಿ ಪುಸ್ತಕಗಳನ್ನು ಓದುವ, ಬಿಡುವಾದಾಗ ನೋಡಲೆಂದು ಜೋಡಿಸಿಟ್ಟುಕೊಂಡಿದ್ದ ಸಿನಿಮಾಗಳನ್ನು ನೋಡುವ ಅವಕಾಶ ದೊರೆತಿದೆ. ಈ ಓದುವಿಕೆ ಮತ್ತು ನೋಡುವಿಕೆ ನಮ್ಮ ಕಲಿಕೆಯ ಹಸಿವಿಗೆ ಒದಗಿದ ಬಹುದೊಡ್ಡ ಇಂಧನ. ಆ ದೃಷ್ಟಿಯಿಂದ ನಾನು ಈ ಲಾಕ್ಡೌನ್ ಅನ್ನು ಆನಂದಿಸುತ್ತಿದ್ದೇನೆ.

- ಆರ್ಥಿಕವಾಗಿ ಈ ಲಾಕ್ಡೌನ್ ದೊಡ್ಡ ಹೊಡೆತ. ನಾನು ನನ್ನಂತೆ ಹಲವರು ದಿನಗೂಲಿ ಲೆಕ್ಕದವರು. ಅಂದು ದುಡಿದದ್ದಕ್ಕೆ ಮಾತ್ರ ನಮಗೆ ಆದಾಯ. ಈಗ ಆದಾಯ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಇದು ಕೆಲವು ದಿನ (ನನ್ನ ವಿಷಯದಲ್ಲಿ ಮೊದಲ ತಿಂಗಳು) ಹೆಚ್ಚು ತೊಂದರೆ ಕೊಡದೆ ಇರಬಹುದು. ಆದರೆ ಮಳೆಗಾಲಕ್ಕೆಂದು ಇರುವೆಯಂತೆ ಜೋಡಿಸಿಕೊಂಡಿದ್ದ ಸಂಗ್ರಹಗಳು ಖಾಲಿಯಾಗೇ ಆಗುತ್ತವೆ. ಆಗ ಪ್ರತಿ ಹೆಜ್ಜೆಯೂ ಕಷ್ಟ. ಇನ್ಯಾವತ್ತೋ ಧುತ್ತೆಂದು ವಿದ್ಯುತ್, ನೀರು, ಇತ್ಯಾದಿ ಬಿಲ್ಲುಗಳು, ಸಾಲದ ಕಂತುಗಳು ರಕ್ಕಸ ನಗುವಿನೊಂದಿಗೆ ಎದುರಿಗೆ ಬಂದರೆ ದಿಕ್ಕಾಪಾಲಾಗುವ ಸ್ಥಿತಿ ಬರಬಹುದು. ಆ ದಿನ ಬಂದಾಗ ಏನು ಮಾಡುವುದೆಂಬ ಪ್ರಶ್ನೆಗೆ ಸಧ್ಯಕ್ಕಂತೂ ಉತ್ತರವಿಲ್ಲ. ಆತಂಕ ಇದೆ.

- ನನ್ನ ಸುತ್ತಲೂ ಇದೇ ಬಗೆಯ ಆತಂಕದಲ್ಲಿ ಇರುವ, ದಿನದ ಖರ್ಚು ನಿಭಾಯಿಸುವುದಕ್ಕೂ ಪರದಾಡುತ್ತಿರುವ ಹಲವು ದಿನಗೂಲಿ ಜನರಿದ್ದಾರೆ. ಅವರೆಲ್ಲರ ಕಷ್ಟ ಮತ್ತಷ್ಟು ದೊಡ್ಡದಾಗಲಿದೆ. ಶಾಲಾ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಮನೆಯಲ್ಲಿ ಇರುವ ಹಿರಿಯರ ವೈದ್ಯಕೀಯ ಖರ್ಚು, ಇತ್ಯಾದಿಗಳ ನಿರ್ವಹಣೆಯ ಜೊತೆಗೆ ಸಂಸಾರದ ನಿಭಾವಣೆ ಖಂಡಿತ ದುಸ್ತರವಾಗಲಿದೆ. ಈ ಬಗೆಯ ಕಷ್ಟದಲ್ಲಿ ಇರುವ ಮನರಂಜನಾ ಜಗತ್ತಿನ ಜನರನ್ನು ನಮ್ಮ ರಾಜಕಾರಣಿಗಳು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಈಗ ಬಂದಿರುವ ಕಷ್ಟಕ್ಕೆ ಪರಿಹಾರ ಒದಗಿಸುವ ಯಾವ ಮಾರ್ಗವೂ ನಮ್ಮ ನಾಯಕರ ಬಳಿ ಇಲ್ಲ. ಕೆಲವು ಪೋಷಕ ಕಲಾವಿದರು ಹಾಗೂ ಕಾರ್ಮಿಕರಂತೂ ಅದಾಗಲೇ ಕಣ್ಣೀರಿಡುತ್ತಿದ್ದಾರೆ.

ನಮ್ಮಂತಹ ಕೆಲವರು ಮಾಡುವ ಸಹಾಯ ರಾವಣಾಸುರನಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ನಮ್ಮ ಸರ್ಕಾರಗಳು ಈ ಮನರಂಜನಾ ಜಗತ್ತಿನ ಜನರಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಮಾಡಬೇಕು. ಕಷ್ಟ ಕಾಲದಲ್ಲಿ ಈ ಜಗತ್ತಿನ ಜನ ಆ ನಿಧಿಯ ಸಹಾಯ ಪಡೆಯುವಂತಾಗಬೇಕು. ಆ ದಿನ ಬೇಗ ಬರಲಿ. ಆ ಬಗೆಯ ಯೋಚನೆ ಮಾಡುವಂತಹ ನಾಯಕರು ಜನಪ್ರತಿನಿಧಿಗಳಾಗಲಿ, ಈಗಿರುವ "ಮನೆಹಾಳರು" ಬೇಗ ಅಧಿಕಾರದಿಂದ ದೂರ ಸರಿಯಲಿ ಎಂದು ಹಾರೈಸೋಣ

#LifeAfterCorona: ಭವಿಷ್ಯ ಇನ್ನೂ ಭಯಾನಕವಾಗಿರಲಿದೆ: ನೋಮ್ ಚಾಮ್ಸ್ಕಿ#LifeAfterCorona: ಭವಿಷ್ಯ ಇನ್ನೂ ಭಯಾನಕವಾಗಿರಲಿದೆ: ನೋಮ್ ಚಾಮ್ಸ್ಕಿ

ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು

ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು

2. ವೈದ್ಯಲೋಕದ ಈ ಸವಾಲನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಬಿ.ಸುರೇಶ - ಇದು ಕೇವಲ ವೈದ್ಯಲೋಕದ ಸವಾಲು ಅಲ್ಲ. ಮನುಕುಲದ ಸವಾಲು. ಇಂತಹ ಸವಾಲುಗಳನ್ನು ಈ ಜಗತ್ತು ಮತ್ತೆ ಮತ್ತೆ ಎದುರಿಸುತ್ತಲೇ ಬಂದಿದೆ. ಕಾಲರ, ಮಲೇರಿಯಾ, ಪೋಲಿಯೋ - ಹೀಗೆ ಇನ್ನೂ ಹಲವು ಖಾಯಿಲೆಗಳಿಗೆ ವೈಜ್ಞಾನಿಕ ಚಿಂತಕರು ಉತ್ತರ ಹುಡುಕಿದ್ದಾರೆ. ಕೆಲವು ಖಾಯಿಲೆಗಳಿಗೆ ಔಷಧಿ, ವ್ಯಾಕ್ಸಿನ್ ಸಿಗುವುದಕ್ಕೆ ಹಲವಾರು ಶತಮಾನ ಆಗಿದ್ದಿದೆ. ಈ ನೋವೆಲ್ ಕೊರೋನಾ ಅಥವಾ ಕೋವಿಡ್19ಗೆ ಸಹ ವ್ಯಾಕ್ಸಿನ್ ಅಥವಾ ಔಷಧಿ ಹುಡುಕುವ ಪ್ರಯತ್ನ ನಡೆದಿದೆ.

ಇದಕ್ಕೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಪ್ರಯೋಗಗಳು ನಡೆಯುತ್ತಿವೆ ಎಂದು WHO ವಕ್ತಾರರು ಹೇಳಿದ್ದಾರೆ. ಆದರೆ ಆ ದಿನ ಎಂದು ಬರಬಹುದು ಎನ್ನುವುದನ್ನು ಊಹಿಸುವುದು ಕಷ್ಟ. ಹಾಗೆ ಏನೇನೋ ಊಹೆ ಮಾಡಿ ನಿಮ್ಮ ವೆಬ್ ಮ್ಯಾಗಜೀನ್ ಓದುಗರಲ್ಲಿ "ಸುಳ್ಳು ಕನಸು" ಬಿತ್ತಬಾರದು. ಆಗುವುದು ಆಗಬಹುದಾದ ಕಾಲಕ್ಕೆ ಆಗುತ್ತದೆ. ಪ್ರತಿಯೊಬ್ಬರೂ ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕು. ಯಾರೋ ಹೇಳಿದರೆಂದು ಗೋಮೂತ್ರ ಕುಡಿಯುವುದು ಅಥವಾ ಮತ್ಯಾವುದೋ ಔಷಧಿ ತೆಗೆದುಕೊಳ್ಳುವ ಪ್ರಯೋಗ ಮಾಡಬಾರದು. ಸಾಧ್ಯವಾದಷ್ಟು ತಮ್ಮ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ಕೊಡಬೇಕು, ಅಷ್ಟೇ.

ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆಯೇ?

ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆಯೇ?

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ಬಿ.ಸುರೇಶ - ಮೇಲಿನ ಪ್ರಶ್ನೆಯಲ್ಲಿ ತಾವು ಗುರುತಿಸಿರುವುದು ಈ ಜಗತ್ತು ಕಂಡ ಶ್ರೇಷ್ಟ ಸಮಾಜ ಚಿಂತಕ ನೋಮ್ ಚಾಮ್ಸ್ಕಿ ಅವರದ್ದು. ಆತ ಇತಿಹಾಸದ ನಡೆಗಳ ಮೂಲಕ ಹಾಗೂ ಸಾಮಾಜಿಕ ಚಲನೆಗಳ ಹಿಂದಿನ ಕಾರಣಗಳನ್ನು ಅಳೆಯುವ ಮೂಲಕ ಈ ಮಾತಾಡಿರುತ್ತಾರೆ. ಚಾಮ್ಸ್ಕಿ ಮಾತನ್ನು ಅಲ್ಲಗಳೆಯುವಂತಿಲ್ಲ.

ಆದರೆ, ನನಗೆ ನನ್ನದೇ ಆದ ಕೆಲವು ಅನುಮಾನಗಳಿವೆ. ಈ ಕೋವಿಡ್19 ಮಾರಿಯ ಬಿರುಗಾಳಿ ಮುಗಿದ ನಂತರ ಜಾಗತಿಕ ಲೆಕ್ಕಾಚಾರಗಳೇ ತಲೆಕೆಳಗಾಗುವ ಸಾಧ್ಯತೆ ಇದೆ. ಕಳೆದ ಮುವ್ವತ್ತು ವರ್ಷಗಳಲ್ಲಿ ಕಂಡ ಗ್ಲೋಬಲೈಸೇಷನ್ ಅನ್ನುವುದು, ಮುಕ್ತ ಮಾರುಕಟ್ಟೆ ಅನ್ನುವುದು ಸರ್ವೀಸ್ ಮತ್ತು ಕಮ್ಯೂನಿಕೇಷನ್ಸ್ ಉದ್ಯಮಗಳ ಮೇಲಾಟಕ್ಕೆ ಕಾರಣವಾಗಿತ್ತು. ಇನ್ನುಳಿದ ಹಲವು ಉದ್ಯಮಗಳು ಹಿಂದೆ ಸರಿದಿದ್ದವು. ಆದರೆ ಕೋವಿಡ್19 ತೀರಾ ಸ್ಪಷ್ಟವಾಗಿ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಗಳನ್ನು ಮಾಡುವ ಉದ್ಯಮಗಳನ್ನು ಗಟ್ಟಿಗೊಳಿಸಲಿದೆ. ಆ ಉದ್ಯಮಗಳು ಬೃಹತ್ ಲಾಭ ಮಾಡುತ್ತವೆ ಮತ್ತು ಜಾಗತಿಕ ಅಧಿಕಾರ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುತ್ತವೆ ಎನಿಸುತ್ತದೆ. ಹೀಗಾಗಿ ಇನ್ನು ಮುಂದೆ ನಾವು ಚರಿತ್ರೆಯ ಲೆಕ್ಕಾಚಾರವನ್ನು 'ಕೋವಿಡ್ ಮುಂಚೆ ಮತ್ತು ಕೋವಿಡ್ ನಂತರ' ಎಂದು ನೋಡಬೇಕಾಗಬಹುದು.

ಇದೇ ಕಾಲಘಟ್ಟದಲ್ಲಿ ಸದಾ ಪ್ರಯಾಣ ಬಯಸುತ್ತಿದ್ದ, ಆ ಮೂಲಕ ಯಾವುದೋ ಮೂಲೆಗೆ ಯಾರನ್ನೋ ಬರಹೇಳಿ ಅಧಿಕಾರ ಪ್ರದರ್ಶಿಸುತ್ತಿದ್ದ ವ್ಯವಸ್ಥೆ ಸಹ ಸಂಪೂರ್ಣ ಪಲ್ಲಟಗೊಳ್ಳಬಹುದು. ಮುಂಬರುವ ಕಾಲದಲ್ಲಿ ಕೇವಲ ಇಂಟರ್ನೆಟ್ ಮೂಲಕ ಸಭೆಗಳು ನಡೆದು, ವ್ಯಾಪಾರಕ್ಕಾಗಿ ಜನ ಊರು ತಿರುಗುವುದು ತಪ್ಪಿ ಹೋಗಬಹುದು. ಇದರಿಂದಾಗಿ ಒಟ್ಟಾರೆ ವೈಮಾನಿಕ ಸಾರಿಗೆ ವ್ಯವಸ್ಥೆ (ಅದಾಗಲೇ ಅದು ಭಾರತದಲ್ಲಿ ನಷ್ಟದಲ್ಲಿದೆ ಎಂಬುದನ್ನು ಮರೆಯದೆ) ಮಲ್ಟಿಪ್ಲೇಯರ್ ಬದಲಿಗೆ ಮನೋಪ್ಲೇಯರ್ ಸ್ಥಿತಿ ತಲುಪಬಹುದು.
ಹೀಗೇ ಇನ್ನೂ ಹಲವು ಉದ್ಯಮಗಳು ಈ ಕೋವಿಡ್19 ಮಾರಿಯ ಬಿರುಗಾಳಿಯಲ್ಲಿ ಪಲ್ಲಟಗೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಮುದ್ರಣ ಮಾಧ್ಯಮ, ಮನರಂಜನಾ ಮಾಧ್ಯಮ ಮುಂತಾದವು ಹೊಸ ದಾರಿ ಹುಡುಕಿಕೊಳ್ಳಬೇಕಾದ ಕಾಲಘಟ್ಟ ಸನಿಹದಲ್ಲಿದೆ ಎಂದು ನನ್ನ ಭಾವನೆ.

#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು?

ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು?

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಬಿ.ಸುರೇಶ - ಈ ಕೊರೋನ ಬಿರುಗಾಳಿಯು ಒಡ್ಡಿರುವ ಸವಾಲುಗಳು ಅನೇಕ. ಅದರಲ್ಲಿ ಬಹುಮುಖ್ಯವಾದುದು ಒಕ್ಕೂಟ ವ್ಯವಸ್ಥೆ. ಕೇಂದ್ರ ಸರ್ಕಾರವು ಜಿಎಸ್ಟಿ ಎಂಬ ತೆರಿಗೆ ವ್ಯವಸ್ಥೆ ತಂದ ಬೆನ್ನಲ್ಲೇ ಆಯಾ ರಾಜ್ಯಗಳಿಗೆ ಇದ್ದ ಆದಾಯ ಮೂಲಗಳೆಲ್ಲವೂ ಕೇಂದ್ರದ ಕಡೆಗೆ ಹೊರಳಿದೆ. ಇದಲ್ಲದೆ ಆರೋಗ್ಯ, ಶಿಕ್ಷಣ ಮುಂತಾದ ಹಲವು ವಿಭಾಗಗಳು ರಾಜ್ಯದ ಕಣ್ಗಾವಲಿನ ಬದಲಿಗೆ ಕೇಂದ್ರದ ಕೈಗೆ ಸಾಗಿದೆ. ಇದರಿಂದಾಗಿ ಕೋವಿಡ್ 19 ತರಹದ ಕಾಲದಲ್ಲಿ ರಾಜ್ಯಗಳು ವಿಪತ್ತು ನಿರ್ವಹಣೆಗೆ ಬೇಕಾದಷ್ಟು ಹಣವಿಲ್ಲದೆ ಕೇಂದ್ರದ ಸಹಾಯಕ್ಕೆ ಮೊರೆ ಇಡುತ್ತಿವೆ.

ಈ ಪರಿಸ್ಥಿತಿಯಲ್ಲಿ ಒಟ್ಟಾರೆಯಾಗಿ ಒಕ್ಕೂಟ ವ್ಯವಸ್ಥೆಯ ನಿರ್ವಹಣೆಗೆ ಮಾಡಿಕೊಂಡಿರುವ ಎಲ್ಲಾ ಕಾಯಿದೆಗಳ ಮರುಪರಿಶೀಲನೆ ಆಗುವುದು ಅಗತ್ಯ. ಆಯಾ ರಾಜ್ಯಗಳು ಆರ್ಥಿಕ ಸ್ವಾಯತ್ತತೆ ಪಡೆಯುವಂತಹ ಮತ್ತು ಕೇಂದ್ರೀಕೃತ ಎಲ್ಲಾ ವ್ಯವಸ್ಥೆಗಳನ್ನೂ ಬದಲಿಸಿ ಆಯಾ ರಾಜ್ಯಗಳೇ ನಡೆಸುವಂತಹ ವ್ಯವಸ್ಥೆ ತರಬೇಕಿದೆ. ಹಾಗೆ ಮಾಡದೆ ಹೋದರೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳು ಬಹುತೇಕ ಆದಾಯವನ್ನು ಕೇಂದ್ರಕ್ಕೆ ದಾಟಿಸಿ, ತಮಗೆ ಕೇಂದ್ರವು ಯಾವಾಗ ಹಣ ಬಿಡುಗಡೆ ಮಾಡುತ್ತದೋ ಎಂದು ಕಾಯುವಂತಾಗಿದೆ.

ಇದು ಸಂಪೂರ್ಣ ಬದಲಾಗಬೇಕು. ಎಲ್ಲಾ ತೆರಿಗೆ ಸಂಗ್ರಹವೂ ಆಯಾ ರಾಜ್ಯ ಸರ್ಕಾರಗಳ ಬೊಕ್ಕಸ ಸೇರುವ ಬದಲಾವಣೆ ಬೇಗ ಬರಬೇಕು. ಅದಾಗದೆ ಹೋದರೆ ಇಡಿಯಾಗಿ ಭಾರತದ ಒಕ್ಕೂಟ ವ್ಯವಸ್ಥೆಯೇ ಒಡೆದು ಹೋಗುವ ಕಾಲ ಬಂದು ಬಿಡಬಹುದು. ಈ ಮಾತಾಡುವಾಗ ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಸಹ ನೆನೆಯಬೇಕು. ರಾಜ್ಯದ ಆಡಳಿತ ಭಾಷೆಯ ಮೇಲೆ ಹಿಂದಿಯು ಸವಾರಿ ಮಾಡುವುದನ್ನು ಕೂಡಲೇ ತಪ್ಪಿಸಬೇಕು. ಆಯಾ ರಾಜ್ಯಗಳು ತಮ್ಮ ಆಡಳಿತ ಭಾಷೆಯಲ್ಲಿಯೇ ಕೇಂದ್ರದ ಜೊತೆಗೆ ವ್ಯವಹರಿಸುವ ಹಾಗೆ ಆಗಬೇಕು. ಕೇಂದ್ರವು ಎಲ್ಲಾ ರಾಜ್ಯಗಳ ಜೊತೆಗೆ ಆಯಾ ರಾಜ್ಯದ ಆಡಳಿತ ಭಾಷೆಯಲ್ಲಿಯೇ ವ್ಯವಹರಿಸುವ ಹಾಗಾಗಬೇಕು. ಆ ಕಾಲ ಬರದೆ ಹೋದರೆ ಸ್ಥಳೀಯ ಭಾಷೆಗಳ ಹೋರಾಟದ ಕಾರಣವಾಗಿಯೇ ಒಕ್ಕೂಟ ವ್ಯವಸ್ಥೆಯ ವಿರೋಧಿ ಹೋರಾಟ ಸಹ ಹುಟ್ಟಬಹುದು.

ಕೋವಿಡ್ 19 ಎಂಬ ಬಿರುಗಾಳಿಯು ತಣ್ಣಗಾಗುವ ಕಾಲಕ್ಕೆ ಅದಾಗಲೇ ಮೂರನೆಯ ಪ್ರಶ್ನೆಗೆ ಉತ್ತರಿಸುತ್ತಾ ಹಲವು ವಿಷಯ ಹೇಳಿದ್ದೇನೆ. ಆಗ ಚರ್ಚಿಸಿದ ವಿಷಯಗಳನ್ನು ಗಮನಿಸುತ್ತಲೇ ಮನರಂಜನಾ ಮಾಧ್ಯಮಗಳಲ್ಲಿ ಆಗಬಹುದಾದ ಪಲ್ಲಟ ಗಮನಿಸಬಹುದು. ಮತ್ತೆ ಮೊದಲಿನ ಹಾಗೆ ಸಿನಿಮಾದ ಪ್ರದರ್ಶನ ಮಂದಿರಗಳು ಕೆಲಸ ಮಾಡುವಂತಾಗಲೂ ಜೂನ್ ತಿಂಗಳ ಕೊನೆಯ ವರೆಗೆ ಕಾಯಬೇಕಾಗಬಹುದು. ಅಷ್ಟಾಗಿ ಸರ್ಕಾರದ ಆಜ್ಞೆಯಂತೆ ಸಿನಿಮಾ ಮಂದಿರ ತೆಗೆದರೂ ಜನ ಅದರೊಳಗೆ ಹೋಗುವಂತಹ ನಂಬಿಕೆ ಮರಳಿ ಬರುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗಬಹುದು. ಅಲ್ಲಿಯವರೆಗೆ ಎಂತಹ ಸ್ಟಾರ್ ಮೌಲ್ಯ ಇರುವ ಸಿನಿಮಾ ಬಂದರು ಆಮದನಿ ಕಷ್ಟವೇ.

ಸಿನಿಮಾದ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ

ಸಿನಿಮಾದ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ

ಈ ಹಿನ್ನೆಲೆಯಲ್ಲಿ ಸಿನಿಮಾ ವ್ಯಾಪಾರಸ್ಥರು ಸಕಾಲ ಬರುವವರೆಗೆ ಬಿಡುಗಡೆಗೆ ಕಾಯುವುದಕ್ಕೆ ಸಿದ್ಧರಾಗಬೇಕು. ಈ ಕಾಯುವ ಅವಧಿಯಲ್ಲಿ ಆಗುವ ಹೆಚ್ಚುವರಿ ಬಡ್ಡಿಗಳನ್ನು ನಿಭಾಯಿಸುವ ಶಕ್ತಿ ಪಡೆಯಬೇಕು. ಆದರೆ ಹೀಗೆ ಕಾಯುವ ಸ್ಥೈರ್ಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ ಸಿನಿಮಾ ಮಂದಿರಗಳು ಬಾಗಿಲು ತೆಗೆದ ನಂತರ ಬಿಡುಗಡೆಗೆ ಸಿದ್ಧವಾಗಿರುವ ಹಲವು ಸಿನಿಮಾಗಳು ಪ್ರವಾಹದೋಪಾದಿಯಲ್ಲಿ ಬಂದು ಕಳೆದು ಹೋಗಬಹುದು. ಇಂತಹವರೆಲ್ಲಾ ಡಿಜಿಟಲ್ ಪ್ಲಾಟ್ಫಾರಂ ಮೂಲಕವೇ ಆದಾಯ ಪಡೆಯುವ ಪ್ರಯತ್ನ ಮಾಡಬೇಕು. ಅಲ್ಲಿಯೂ ಡಿಮ್ಯಾಂಡ್ಗಿಂತ ಸಪ್ಲೈ ಹೆಚ್ಚಾಗಿ ಸಿನಿಮಾದ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ. ಅದರಿಂದ ಒಟ್ಟು ಉದ್ಯಮಕ್ಕೆ ಆಗಬಹುದಾದ ನಷ್ಟ ಬೃಹತ್ತಾದ್ದು. ಇದನ್ನು ಎದುರಿಸಲು ಉದ್ಯಮವು ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕಾಗುತ್ತದೆ.

ನಿರ್ಮಾಪಕರು ಪ್ರಾಣ ಕಳೆದುಕೊಳ್ಳದಂತೆ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಆಯಾ ಸಮಾಜದ್ದೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಚಿಂತನೆ ಆಗಬೇಕಿದೆ.

ಇದೇ ಕಾಲಘಟ್ಟದಲ್ಲಿ ಬಾಗಿಲು ಮುಚ್ಚಿರುವ ಸಿನಿಮಾ ಮಂದಿರಗಳ ನಿರ್ವಹಣೆ ಮತ್ತು ಹಲವು ಬಿಲ್ಲುಗಳನ್ನು ಕಟ್ಟಬೇಕಾದ ಪ್ರದರ್ಶನ ವಿಭಾಗದವರ ಕಷ್ಟವೂ ದೊಡ್ಡದು. ಆ ವಿವರಗಳನ್ನು ನಾನು ಮಾತಾಡುವುದಕ್ಕಿಂತ ಪ್ರದರ್ಶನ ಮಂದಿರದವರೇ ಮಾತಾಡುವುದು ಒಳಿತು. ಆದರೆ ಆ ಜನರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರವು ನೇರವಾಗಿ ಸಹಾಯ ಮಾಡಬೇಕಾಗಬಹುದು. ಅದಕ್ಕೆ ಬೇಕಾದ ಬೃಹತ್ ಹಣ ಸರ್ಕಾರದ ಖಜಾನೆಯಲ್ಲಿ ಇಲ್ಲ. ಹೀಗಾಗಿ ಸರ್ಕಾರದ ಎದುರಿಗೆ ಇಂತಹ ಹಲವು ಸಂಕಷ್ಟದಲ್ಲಿ ಇರುವ ಉದ್ಯಮಗಳ ಪ್ರಶ್ನೆ ಬರುತ್ತದೆ. ಅದನ್ನು ನಿರ್ವಹಿಸುವ ಚಾಕಚಾಕ್ಯತೆ, ತಿಳುವಳಿಕೆ ಇರುವ ಮಂತ್ರಿಮಂಡಲ ನಮ್ಮಲ್ಲಿ ಇದ್ದಂತಿಲ್ಲ. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಉಳಿದವರು ವಿಪತ್ತು ನಿರ್ವಹಣೆ ಬಲ್ಲವರಲ್ಲ. ಹಾಗಾಗಿ ಎಲ್ಲಾ ಪಕ್ಷಗಳ ಹಿರಿಯರು ಇರುವ ಸಮಿತಿಗಳನ್ನು ವಿಪತ್ತು ನಿರ್ವಹಣೆಗೆ ರಚಿಸಬೇಕಾಗಬಹುದು.

ಟೆಲಿವಿಷನ್ ಲೋಕಕ್ಕೆ ತರಬಹುದಾದ ಪಲ್ಲಟ

ಟೆಲಿವಿಷನ್ ಲೋಕಕ್ಕೆ ತರಬಹುದಾದ ಪಲ್ಲಟ

ಈ ಮಾತಿನ ಬೆನ್ನಲ್ಲೇ ನಾನು ಈ ಮುಂಚೆ ಹೇಳಿದ ಒಕ್ಕೂಟ ವ್ಯವಸ್ಥೆಯ ಸಮಸ್ಯೆಯು ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರಿಕೃತ ಅಧಿಕಾರಗಳೆಲ್ಲವೂ ವಿಕೇಂದ್ರೀಕೃತ ಆಗುವ ಕಾಲ ಕೋವಿಡ್ 19 ನಂತರ ಬರಬಹುದು ಎಂದು ಆಶಿಸುತ್ತೇನೆ.

ಈ ಕೋವಿಡ್ 19ರ ಬಿರುಗಾಳಿ ಟೆಲಿವಿಷನ್ ಲೋಕಕ್ಕೆ ತರಬಹುದಾದ ಪಲ್ಲಟಗಳು ಇನ್ನೂ ಬೃಹತ್ತಾದ್ದು. ತಿಂಗಳುಗಳ ಕಾಲ ಹೊಸ ಕಾರ್ಯಕ್ರಮ ತಯಾರಿಸಲಾಗದ ವಾಹಿನಿಗಳು ಡಬ್ಬಿಂಗ್ ಕಾರ್ಯಕ್ರಮ ಪ್ರಸಾರ ಮಾಡಲು ಶುರು ಮಾಡಬಹುದು. ಅದರಿಂದ ಸ್ಥಳೀಯ ಟೆಲಿವಿಷನ್ ಉದ್ಯಮಕ್ಕೆ ಆಗಬಹುದಾದ ಹೊಡೆತ ಬೃಹತ್ತಾದ್ದು. ಬಹುತೇಕರು ಬದಲಿ ವೃತ್ತಿಗಳನ್ನು ಅರಸಬೇಕಾಗಬಹುದು. ಹಲವು ಪ್ರಧಾನ ಕಲಾವಿದರು ಕೇವಲ ತಮ್ಮ ಕಂಠ ಮಾತ್ರ ದಾನ ಮಾಡುವ ಹಾಗೆ ಆಗಬಹುದು.

ಈ ಎಲ್ಲಾ "ಬಹುದು" ಗಳು ಆಗದಿರಲಿ ಎಂದು ಆಶಿಸುವುದನ್ನು ಹೊರತುಪಡಿಸಿ ಈ ಉದ್ಯಮದವರಿಗೆ ಬೇರೆ ದಾರಿಯಿಲ್ಲ. ಅದಾಗಲೇ ಕಾರ್ಪೊರೇಟ್ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವಾಹಿನಿಗಳು ಸ್ಥಳೀಯ ಸಮಸ್ಯೆಗಳನ್ನು ಕುರಿತು ಅನುಕಂಪ ಸಹ ವ್ಯಕ್ತಪಡಿಸುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳೇ ಈ ಉದ್ಯಮಗಳನ್ನು ನೆಚ್ಚಿಕೊಂಡವರ ಕ್ಷೇಮಾಭಿವೃದ್ಧಿಗೆ ವಾಹಿನಿಯವರಿಂದ ಪ್ರತೀ ಕಾರ್ಯಕ್ರಮಕ್ಕೆ ಇಷ್ಟು ಎಂಬ ಲೆಕ್ಕದಲ್ಲಿ ಸಂಗ್ರಹಿಸಿ ಶಾಶ್ವತ ನಿಧಿ ರೂಪಿಸಬೇಕಿದೆ. ಆದರೆ ಟೆಲಿವಿಷನ್ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಹೀಗಾಗಿ ಸಂಕಟಕ್ಕೆ ಬೀಳುವವರದು ಅರಣ್ಯ ರೋದನ ಆಗುವ ಸಾಧ್ಯತೆ ಹೆಚ್ಚು.

ಹೀಗೆ ಕೋವಿಡ್ 19ರ ಪರಿಣಾಮ ಕುರಿತು ನಾನು ಹೇಳಬಹುದಾದ ಇನ್ನೂ ಹಲವು ವಿಷಯಗಳಿವೆ. ಅದು ಈ ವೆಬ್ ಸಂಚಿಕೆಯ ವ್ಯಾಪ್ತಿಗೆ ದೊಡ್ಡದಾಗಬಹುದೆಂದು ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದೆ ನಡೆಯಬಹುದಾದ ಪ್ರತಿಕ್ರಿಯೆಗಳ ಮೂಲಕ ಅಗತ್ಯ ಇದ್ದರೆ ಮಾತಾಡುವ

English summary
#LifeAfterCorona: How will be life after Corona menance gets over. Actor, Director Bee Suresh insights on how Film, TV Industry fight Coronavirus, how is Life shifts can be handled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X