ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Life After Corona: ಸರಳ ಜೀವನ ನಡೆಸಿ, ಚಿಂತೆ ಮಾಡೋದು ಬಿಡಿ

By ಗಾಯತ್ರಿ ಚಂದ್ರಶೇಖರ್, ಮೈಸೂರು
|
Google Oneindia Kannada News

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

Recommended Video

ಕೊರೊನ ನಿಯಮಗಳನ್ನು ಮೀರದೆ ಇದರ ಉಪಯೋಗ ಪಡೆದುಕೊಳ್ಳಬೇಕು - R Ashok | Oneindia Kannada

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ಮೈಸೂರಿನ ಗೃಹಿಣಿ ಗಾಯತ್ರಿ ಚಂದ್ರಶೇಖರ್ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.. ಇದು ಈ ಸರಣಿಯ 13ನೇ ಲೇಖನವಾಗಿದೆ.

ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ

ಅಯ್ಯೋ ಹೇಗಪ್ಪಾ ಮುಂದೆ..... ಅನ್ನಿಸಿದ್ದಿದೆ

ಅಯ್ಯೋ ಹೇಗಪ್ಪಾ ಮುಂದೆ..... ಅನ್ನಿಸಿದ್ದಿದೆ

ಕರೋನಾ ಸೃಷ್ಟಿಸಿರುವ ಈ ಬಿಕಟ್ಟನ್ನು ವೈಯುಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಕರೋನಾ ಎಂಬ ಸಾಂಕ್ರಾಮಿಕ ರೋಗವೊಂದು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಎಂದೂ ಕೇಳರಿಯದ, ಕಂಡರಿಯದ ಭಯಾನಕವಾದ ಚಿಕಿತ್ಸೆಯೇ ಇಲ್ಲದ ಕಾಯಿಲೆಯೊಂದು ರುದ್ರನರ್ತನ ಮಾಡುತ್ತಿದೆ. ಮುಂದೇನು? ಹೇಗೆ ಇದನ್ನು ಎದುರಿಸೋದು ಅನ್ನೋ ಅತಂತ್ರ ಭಾವನೆ, ಭಯ ಎಲ್ಲರಲ್ಲಿ ಮನೆಮಾಡಿದೆ. ವೈಯುಕ್ತಿಕವಾಗಿ ಎದುರಿಸುವುದು ಮೊದಮೊದಲು ಬಹಳ ಕಷ್ಟವೇ ಆಯಿತು. ವಾಕಿಂಗ್ ಹೋಗುವಂತಿಲ್ಲ. ಮನಕ್ಕೆ ಖುಷಿಕೊಡುತ್ತಿದ್ದ ಭಜನೆ, ದೇವರನಾಮದ ಕಲಿಕೆಗೆ ಕತ್ತರಿ. ಹಲವು ವರ್ಷಗಳಿಂದ ನಡೆಸುತ್ತಿದ್ದ, ಅದರಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಮಹಿಳಾ ಸಂಘದ ಚಟುವಟಿಕೆಗಳಿಗೆ ವಿರಾಮ. ಕಿಟ್ಟಿಪಾರ್ಟಿಯಂತೂ ಅನಿರ್ದಿಷ್ಟಕಾಲ ನಿಂತೇ ಹೋಗಿದೆ. ಸದಾ ಸ್ನೇಹ ಬಯಸುವ ಸ್ವಭಾವದ ನನಗೆ ಗೆಳತಿಯರನ್ನು ನೋಡದೇ ಇರುವುದಾದರೂ ಹೇಗೆ. ಹೊರಗೆ ಹೋಗುವಂತಿಲ್ಲ, ಯಾರೂ ನಮ್ಮ ಮನೆಗೆ ಬರುವಂತಿಲ್ಲ, ಅಯ್ಯೋ ಹೇಗಪ್ಪಾ ಮುಂದೆ..... ಅನ್ನಿಸಿದ್ದೂ ಇದೆ.

ಆದರೆ ಇದೇನೂ ಶಾಶ್ವತ ಅಲ್ಲವಲ್ಲ. ಮುಂದೆಲ್ಲಾ ಹೀಗೇ ಇರಬೇಕಾಗಿಲ್ಲ. ಈ ಬಿಕ್ಕಟ್ಟು ಮುಂದೊಂದು ದಿನ ದೂರವಾಗೇ ಆಗುತ್ತೆ ಎಂಬ ಆಶಾಭಾವನೆಯಿಂದ ಇದ್ದೀನೆ. ಅದೇಕೋ ಗೊತ್ತಿಲ್ಲ, ಈ ರೀತಿ ಬದುಕುವುದು ಈಗೀಗ ಕಷ್ಟ ಅನ್ನಿಸುತ್ತಿಲ್ಲ. ವಾಕಿಂಗ್ ಟೆರೇಸ್ ಮೇಲೆ ಹೋಗಿ ರೇಡಿಯೋ ಕೇಳುತ್ತಾ ಮಾಡ್ತೀನಿ. ನಂತರ ಕೆಳಗೆ ಬಂದು ಬಾಕಿ ಕೆಲಸ. ಕೆಲಸದವಳಿಗೆ ಸಂಬಳ ಸಹಿತ ರಜೆ ಕೊಟ್ಟಿದ್ದೀನಿ. ನಾನು ಇಲ್ಲಿ ನಿಂತರೆ ಮನೆ ಒಡತಿ, ಇಲ್ಲಿ ನಿಂತರೆ ಕೆಲಸದವಳು ಅಂತ ಏಕಪಾತ್ರಾಭಿನಯ ಮಾಡ್ತಾ ಇದ್ದೀನಿ. ಪಾತ್ರೆ, ಬಟ್ಟೆ, ಗುಡಿಸುವುದು, ಒರೆಸುವುದು ಎಲ್ಲವೂ ಅಚ್ಚುಕಟ್ಟಾಗಿ ನಡಿತಾ ಇದೆ. ನನ್ನ ಯಜಮಾನರು ಕೈ ಜೋಡಿಸುತ್ತಾರೆ. ಇಬ್ಬರೂ ದಿನದ ಕೆಲಸ ಮುಗಿಸಿದ ಮೇಲೆ ನನ್ನ ಕಾರ್ಯಕ್ಷೇತ್ರವಾದ ಅಡಿಗೆ ಮನೆಗೆ ಹೋಗ್ತೀನಿ. ಶುಚಿ ರುಚಿಯಾದ ಉಪಹಾರ ಅಡಿಗೆ ಎಲ್ಲವನ್ನೂ ಇಷ್ಟಪಟ್ಟು ಮಾಡಿಕೊಡ್ತೀನಿ. ಮದುವೆಯಾಗಿ ಬಂದಾಗಿನಿಂದ ಒಂದು ದಿನವೂ ಮನೆಕೆಲಸ ಮಾಡಿಕೊಳ್ಳದ ನಾನು ಈಗ ಎಲ್ಲಾ ಕೆಲಸಗಳನ್ನೂ ಮಾಡ್ತಾ ಇದ್ದೀನಿ. ಲಕಲಕ ಅಂತ ಹೊಳೆಯುತ್ತಿರುವ ನೆಲ, ಪಾತ್ರೆಗಳು, ಬಟ್ಟೆಗಳನ್ನು ನೋಡಿದಾಗ ಅವ್ಯಕ್ತ ಆನಂದ. ಇನ್ನುಳಿದ ಸಮಯವನ್ನು ನನಗೆ ಬಹು ಪ್ರಿಯವಾದ ಓದು, ಬರವಣಿಗೆ, ರೇಡಿಯೋ ಕಾರ್ಯಕ್ರಮಗಳನ್ನು ಕೊಡುವುದು, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.. ಹೀಗೆ ಕಳೀತಾ ಇದ್ದೀನಿ.

#LifeAfterCorona: ಮುಂದಿನ ಸವಾಲುಗಳು ಜಟಿಲ ಹಾಗೂ ಅನೂಹ್ಯ#LifeAfterCorona: ಮುಂದಿನ ಸವಾಲುಗಳು ಜಟಿಲ ಹಾಗೂ ಅನೂಹ್ಯ

ಸರ್ಕಾರದ ವ್ಯವಸ್ಥೆ ಬಗ್ಗೆ ಹೆಮ್ಮೆ ಇದೆ.

ಸರ್ಕಾರದ ವ್ಯವಸ್ಥೆ ಬಗ್ಗೆ ಹೆಮ್ಮೆ ಇದೆ.

ಇನ್ನು ಸರ್ಕಾರ ಇಂಥ ಸಂಕಷ್ಟದ ದಿನಗಳಲ್ಲೂ ಜನಸಾಮಾನ್ಯರಿಗೆ ತೊಂದರೆ ಆಗದಂತೆ ದಿನಬಳಕೆಯ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ನಿರ್ಬಂಧ ಹೇರಿಲ್ಲ. ತರಕಾರಿ, ದಿನಸಿ, ಹಣ್ಣುಹಂಪಲುಗಳು, ಔಷಧಿಗಳು ಎಲ್ಲವೂ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿರುವುದು ಸ್ತುತ್ಯಾರ್ಹ.

ಎಲ್ಲಾ ಸವಲತ್ತುಗಳನ್ನೂ ಒದಗಿಸಿ, ಹೊರ ಬರಬೇಡಿ, ನೆಮ್ಮದಿಯಾಗಿ ಮನೆಯಲ್ಲಿರಿ, ಆರೋಗ್ಯದಿಂದಿರಿ, ನಿಮ್ಮ ಜವಾಬ್ದಾರಿ ನಮಗೆ ಬಿಡಿ ಎನ್ನುತ್ತಿರುವ ಸರ್ಕಾರದ ಬಗ್ಗೆ ಹೆಮ್ಮೆ ಇದೆ.

ಆದರೆ ದುಃಖದ ಸಂಗತಿ ಏನಪ್ಪಾ ಅಂದ್ರೆ, ಸಹಸ್ರಾರು ಜನರು ನಿರ್ಗತಿಕರಾಗಿ ತುತ್ತು ಅನ್ನಕ್ಕೆ ಪರದಾಡೋ ಸ್ಥಿತಿ ಬಂದೊದಗಿದೆ. ರೈತರು, ದಿನಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿರುವುದು ತುಂಬಾ ಶೋಚನೀಯ ಸಂಗತಿ. ಅವರ ಸಂಕಷ್ಟವನ್ನು ಪರಿಹರಿಸುವಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೈಜೋಡಿಸೋಣ. ಕಂಡದ್ದನ್ನೆಲ್ಲಾ ಕೊಳ್ಳುವ, ಅಗತ್ಯಕ್ಕಿಂತ ಹೆಚ್ಚು ಅಡಿಗೆ ತಯಾರಿಸಿ ಬಿಸಾಕುವ ಅಭ್ಯಾಸ ಬಿಟ್ಟು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಜೀವನ ನಡೆಸಿದರೆ ಈಗ ಬಂದಿರುವ ಬಿಕ್ಕಟ್ಟನ್ನು ಎದುರಿಸುವುದು ಸುಲಭವಾದೀತು. ಏನಂತೀರಾ?

ಇದರ ಕೊನೆ ಯಾವಾಗ ಹೇಗೆ?

ಇದರ ಕೊನೆ ಯಾವಾಗ ಹೇಗೆ?

2. ವೈದ್ಯಲೋಕದ ಸವಾಲನ್ನು ಹೇಗೆ ಅಥೈಸುತ್ತೀರಾ? ಇದರ ಕೊನೆ ಯಾವಾಗ ಹೇಗೆ ಆಗಬಹುದೆನ್ನಿಸುತ್ತಿದೆ.

ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಅಕ್ಷರಶಃ ಸತ್ಯ. ಯಾವುದಾದರೂ ಕಾಯಿಲೆ ಬಂದಾಗ ಅಥವಾ ಅಪಘಾತವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದಾಗ ನಾವೆಲ್ಲಾ ನಂಬುವುದು ಆ ಕಣ್ಣಿಗೆ ಕಾಣದ ದೇವರನ್ನು ಹಾಗೂ ಕಣ್ಣೆದುರಿಗೆ ಇರುವ ವೈದ್ಯ ದೇವರನ್ನು. ನೊಂದ ರೋಗಿಗೆ ಬದುಕಿನಲ್ಲಿ ಭರವಸೆ ಮೂಡಿಸಲು ತನಗೆ ಎಷ್ಟೇ ಕಷ್ಟ ಇದ್ದರೂ, ನಿದ್ರೆ ಇಲ್ಲದಿದ್ದರೂ ಲೆಕ್ಕಿಸದೇ ನಂಬಿ ಬಂದವರ ಬದುಕು ಹಸನುಗೊಳಿಸಲು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ, ಅವರ ವೃತ್ತಿಗೆ ಗೌರವ ಸಲ್ಲಿಸಲೇಬೇಕು.

ನೀವೆಲ್ಲಾ ಕಣ್ಣಾರೆ ನೋಡ್ತಾ ಇದ್ದೀರಿ ಇಂದು ಕೋವಿಡ್-19 ವೈದ್ಯಲೋಕಕ್ಕೆ ದೊಡ್ಡ ಸವಾಲೇಸರಿ. ಇದು ಅಷ್ಟು ಸುಲಭವಾಗಿ ನಿರ್ಮೂಲನೆಯಾಗೋ ಸೋಂಕಲ್ಲ. ರಕ್ತ ಬೀಜಾಸುರನಂತೆ ಕ್ಷಣ ಮಾತ್ರದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡ್ತಾನೆ ಇದೆ. ಇದಕ್ಕೆ ಯಾವುದೇ ಚಿಕಿತ್ಸೆಯಾಗಲೀ ಲಸಿಕೆಯಾಗಲೀ ಇದುವರೆಗೆ ಆವಿಷ್ಕಾರ ಆಗಿಲ್ಲ. ಒಂದು ಬಲವಾದ ನಂಬಿಕೆಯಂತೂ ನನಗಿದೆ. ನಮ್ಮ ಜನರಲ್ಲಿ ಅಗಾಧ ಬುದ್ಧಿವಂತಿಕೆ ಇದೆ. ಮೈಯಲ್ಲಿ ಕಸುವಿದೆ. ಕಂಡುಹಿಡಿಯಲೇ ಬೇಕೆಂಬ ಛಲವಿದೆ. ಇದಕ್ಕೆ ಔಷಧಿ ಕಂಡುಹಿಡಿದೇ ಹಿಡಿಯುತ್ತಾರೆ. ಅನುಮಾನವೇ ಇಲ್ಲ. ಲಸಿಕೆ ಕಂಡುಹಿಡಿದರೆ ಅರ್ಧ ಸಮಸ್ಯೆ ಪರಿಹಾರವಾದಂತೆಯೆ. ಅದಕ್ಕೆ ಸಮಯ ಬೇಕು. ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಾ ಇದೆ. ಇನ್ನು 3-4 ತಿಂಗಳಾದರೂ ಆದೀತೇನೋ. ಆ ದಿನಕ್ಕಾಗಿ ಕಾಯೋಣ. ನಿರಾಶೆ ಬೇಡ. ಯಾಕೆ ಅಂದ್ರೆ, ನಿರಾಶಾಭಾವನೆ ನಿರ್ನಾಮದ ಪ್ರಥಮ ಹೆಜ್ಜೆ. "Be Optimistic". ಅಲ್ಲಿಯವರೆಗೆ ಸರ್ಕಾರ ಹೇಳಿದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ.

Life after corona: ಕೊರೊನಾ ಕೊಟ್ಟ ಹೊಡೆತ ಮರೆಯುವಂತಿಲ್ಲLife after corona: ಕೊರೊನಾ ಕೊಟ್ಟ ಹೊಡೆತ ಮರೆಯುವಂತಿಲ್ಲ

ಮೊದಲು ಜೀವ ಉಳಿಯಲಿ, ಆಮೇಲೆ ಮುಂದಿನ ಚಿಂತನೆ

ಮೊದಲು ಜೀವ ಉಳಿಯಲಿ, ಆಮೇಲೆ ಮುಂದಿನ ಚಿಂತನೆ

3. ಕರೋನಾ ನಂತರ ಹಳೆಯ ವ್ಯವಸ್ಥೆಯೇ ಬಲಗೊಳ್ಳುತ್ತದೆ. ಶ್ರೀಮಂತ ಹಾಗೂ ಆಳುವ ವ್ಯವಸ್ಥೆಗಳು ಪ್ರಬಲವಾಗುತ್ತಾರೆ ಎಂಬ ವಿಶ್ಲೇಷಣೆ ಇದೆ. ನಿಮಗೆ ಏನನ್ನಿಸುತ್ತದೆ?

ಸಧ್ಯದ ಪರಿಸ್ಥಿತಿ ಬಹಳ ಬಿಗಡಾಯಿಸಿರುವುದರಿಂದ ಭವಿಷ್ಯದ ಬಗ್ಗೆ ಕರಾಳ ಛಾಯೆ ಮೂಡಿ ಕೆಟ್ಟ ಆಲೋಚನೆಗಳು ಬರುವುದು ಸಹಜ. ಆದರೆ ನಾನು ಒಬ್ಬ ಗೃಹಿಣಿಯಾಗಿ ಈ ಪ್ರಶ್ನೆಗೆ ಹೆಚ್ಚು ಅರ್ಥೈಸಲಾರೆ. ನನ್ನ ಕೇಳಿದರೆ, ಹಾಗಾಗಲಾರದೇನೋ ಅನ್ನಿಸುತ್ತಿದೆ. ಈಗಾಗಲೇ ಮನುಷ್ಯ ಚಿಂತನಶೀಲನಾಗುತ್ತಿದ್ದಾನೆ. ಜೀವನದ ಮೌಲ್ಯಗಳ ಬಗ್ಗೆ ಅವನಿಗೆ ಅರಿವಾಗಿದೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವುದನ್ನು ನೋಡ್ತಾ ಇದ್ದೀರಿ. ಜೀವನ ಮಾಡಲು ಯಾವುದು ಅತ್ಯಗತ್ಯ, ಯಾವುದು ಇಲ್ಲದೆಯೂ ಬದುಕು ನಡೆಸಬಹುದು ಹೀಗೆ ಚಿಂತಿಸುವ ಶಕ್ತಿ ಬೆಳಸಿಕೊಳ್ಳುತ್ತಿದ್ದಾನೆ. ಜೀವಿಸುವುದಕ್ಕೆ ಬಡತನ, ಸಿರಿತನ ಮಾನದಂಡವಲ್ಲ ಎಂಬ ಹಂತಕ್ಕೆ ತಲುಪಿಬಿಟ್ಟಿದ್ದಾನೆ. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಕಂಡುಹಿಡಿಯುವುದರೊಳಗೆ ಇನ್ನೂ ಸಮಯ ಹಿಡಿಯುತ್ತೆ. ತಿಂಗಳಾನುಗಟ್ಟಲೆ ಲಾಕ್‌ಡೌನ್ ನಿಂದಾಗಿ ಜಾಗತಿಕ ಮಟ್ಟದ ಆರ್ಥಿಕ ವ್ಯವಸ್ಥೆಯ ಮೇಲೆ ಬಲವಾದ ಹೊಡೆತ ಬಿದ್ದಿರುವುದಂತೂ ನಿಜ. ಆರ್ಥಿಕ ಸಂಕಷ್ಟ ಪ್ರಬಲವಾಗಿ ಕಾಡುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ. ಏನೇ ಆದರೂ ಮಾನವನ ಮಾನವೀಯತೆ ಮೇಲುಗೈ ಪಡೆಯಬಹುದೆಂದು ನನ್ನ ಅನಿಸಿಕೆ. ಸಂಯಮ ಸಹನೆಯಿಂದ ಕಾದು ನೋಡೋಣ. ಮೊದಲು ಜೀವ ಉಳಿಯಲಿ, ಆಮೇಲೆ ಮುಂದಿನ ಚಿಂತನೆ. ಅಲ್ಲವೇ?

ಇದಕ್ಕಿರೋ ರಾಮಬಾಣ ಅಂದ್ರೆ- ಸಹನೆ, ತಾಳ್ಮೆ.

ಇದಕ್ಕಿರೋ ರಾಮಬಾಣ ಅಂದ್ರೆ- ಸಹನೆ, ತಾಳ್ಮೆ.

4. ಮುಂದಿನ ಕೆಲವು ದಿನಗಳಲ್ಲಿ ಕರೋನಾ ಒಡ್ಡುವ ಸಮಸ್ಯೆಗಳು ಹೇಗಿರಬಹುದು. ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮಗೆಲ್ಲಾ ಗೊತ್ತು. ಯಾವುದೇ ಚಿಕಿತ್ಸೆಯೇ ಇಲ್ಲದ ವೈರಾಣುವಿನೊಂದಿಗೆ ನಾವು ಹೋರಾಟ ನಡೆಸ್ತಾ ಇದೀವಿ. ಮಿಂಚಿನ ಓಟದಲ್ಲಿ ಜನರಿಂದ ಜನರಿಗೆ ಹರಡಿ ಜೀವಗಳನ್ನು ಬಲಿತೆಗೆದುಕೊಳ್ತಾ ಇದೆ. ಇದಕ್ಕೆ ಲಸಿಕೆ ದೊರೆಯುವವರೆಗೂ ವೈರಸ್ ಹೊಡೆತದಿಂದಾ ಆಗ್ತಾ ಇರೋ ಸಂಕಷ್ಟಗಳನ್ನು ಅನಿವಾರ್ಯವಾಗಿ ಎದುರಿಸಲೇ ಬೇಕು. ಬೇರೆ ದಾರಿಯೇ ಇಲ್ಲ. ಇದು ಎಲ್ಲಿಗೆ ಹೋಗಿ ತಲುಪುತ್ತೋ ಇನ್ನೂ ಎಷ್ಟು ದಿನ ಈ ಹೋರಾಟವೋ .. ಉಹೂಂ.. ಯಾರಿಗೂ ಗೊತ್ತಿಲ್ಲ. ಆತಂಕ, ಭಯ, ಅಸ್ಥಿರತೆ, ಮಾನಸಿಕ ತುಮುಲ, ಅಧೈರ್ಯತೆ ಮನೆ ಮಾಡಿಬಿಟ್ಟಿದೆ. ಹಾಗಾದ್ರೆ ಇವಕ್ಕೆಲ್ಲಾ ಪರಿಹಾರ ಇಲ್ಲವೇ ಎಂದು ನೀವು ಕೇಳಬಹುದು. ಯಾಕಿಲ್ಲಾ? ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಅದನ್ನು ಬೇರೆ ಎಲ್ಲೂ ಹುಡುಕಿಕೊಂಡು ಹೋಗ್ಬೇಕಾಗಿಲ್ಲ. ನಿಮ್ಮೊಳಗೇ ಇದೆ. ಮೊದಲು ಚಿಂತೆ ಮಾಡೋದು ಬಿಡಿ.

ಈ ವಿಷಮ ಪರಿಸ್ಥಿತಿಯನ್ನು ಮೆಟ್ಟಿನಿಲ್ಲುವ ಧೈರ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಇದಕ್ಕಿರೋ ರಾಮಬಾಣ ಅಂದ್ರೆ- ಸಹನೆ, ತಾಳ್ಮೆ. "ತಾಳಿದವನು ಬಾಳಿಯಾನು" ಎಂಬ ಉಕ್ತಿ ನಿಮಗೆಲ್ಲಾ ಗೊತ್ತಿದೆ. ಡಾಕ್ಟರ್ ಕೊಟ್ಟ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿ. ಅನವಶ್ಯಕ ಓಡಾಟ ಬೇಡ. ಹೋಟೆಲ್, ಮಾಲ್, ಸಿನಿಮಾ ಮಂದಿರಗಳು, ಸಾರ್ವಜನಿಕ ಜನಜಂಗುಳಿ ಇರೋ ಸ್ಥಳಗಳಿಂದ ಸಧ್ಯಕ್ಕೆ ದೂರ ಇರಿ. ಮನರಂಜನೆ ನೆಪದಲ್ಲಿ ಹೊರಹೋಗಿ ವೈರಸ್ ತಂದುಕೊಳ್ಳಬೇಡಿ. ನಿಮಗಷ್ಟೇ ಅಲ್ಲ ಸುತ್ತ ಮುತ್ತಲಿರುವವರಿಗೂ ಹರಡೀತು. ನಿಮ್ಮ ಜೀವಕ್ಕೆ ಕುತ್ತು ತಂದೀತು, ಜೋಕೆ. ನೀವೂ ಬದುಕಿ, ಬೇರೆಯವರನ್ನೂ ಬದುಕಲು ಬಿಡಿ. ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳದೇ ಸರಳ ಜೀವನ ನಡೆಸಿ. ಕಂಡದ್ದನ್ನೆಲ್ಲಾ ಕೊಳ್ಳುವುದಕ್ಕೆ ಕಡಿವಾಣ ಇರಲಿ. ಆಪತ್ತಿಗಾಗಿ ಸ್ವಲ್ಪ ಹಣ ಕೂಡಿಡಿ. ಮುಂದೆ ಬರುವ ಸಂಕಷ್ಟಗಳಿಗೆ ಅದು ಸಹಾಯವಾಗುತ್ತದೆ.

ದುಡಿಯುವ ವ್ಯಕ್ತಿ ಹೆದರಿ ಬಂಧಿಯಾಗುವುದು ಸರಿಯಲ್ಲ

ದುಡಿಯುವ ವ್ಯಕ್ತಿ ಹೆದರಿ ಬಂಧಿಯಾಗುವುದು ಸರಿಯಲ್ಲ

ಈ ಪರಿಸ್ಥಿತಿ ಇನ್ನೂ ಎಷ್ಟು ಕಾಲ ಮುಂದುವರಿಯುತ್ತೋ ಯಾರಿಗೂ ಗೊತ್ತಿಲ್ಲ. ಇಷ್ಟೊಂದು ದೀರ್ಘಕಾಲದ ಲಾಕ್‌ಡೌನ್ ವ್ಯವಸ್ಥೆ ಒಳ್ಳೆಯದೂ ಅಲ್ಲ. ಒಬ್ಬ ದುಡಿಯುವ ವ್ಯಕ್ತಿ ವೈರಸ್‌ಗೆ ಹೆದರಿ 24 ಗಂಟೆಗಳೂ ಮನೆಯೊಳಗೆ ಬಂಧಿಯಾಗಿರುವುದು ಆರೋಗ್ಯಕರ ಬೆಳವಣೆಗೆಯಂತೂ ಅಲ್ಲ. ಆರ್ಥಿಕ ದೃಷ್ಠಿಯಿಂದಲೂ ಸರಿಯಲ್ಲ. ಹೊರ ಬರಲೇಬೇಕು. ಆದರೆ ಸರ್ಕಾರದ ಸಲಹೆಗಳನ್ನು ಪಾಲಿಸಿ. ವ್ಯಾಕ್ಸಿನ್ ತಯಾರಾಗೋವರೆಗೆ ಜಾಗ್ರತೆವಹಿಸಲೇ ಬೇಕು. ವೈರಸ್ ಸೋಂಕಿತರಿಂದ ದೂರವಿರಿ. ಆಗಾಗ್ಗೆ ಸಾಬೂನಿನಿಂದ ಕೈ ತೊಳೆಯಿರಿ. ಸ್ವಚ್ಛತೆ ಕಾಪಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲೇ ಇರಿ. ಆರೋಗ್ಯವಾಗಿರಿ. ಲಾಕ್ ಡೌನ್, ಕರ್ಫ್ಯೂ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸೋಣ. ಕರೋನಾ ಸರಪಳಿಯನ್ನು ತುಂಡರಿಸೋಣ. ಈ ಮೂಲಕ ಕೋವಿಡ್-೧೯ ವೈರಾಣುವನ್ನು ಹೊಡೆದೋಡಿಸೋಣ. ನೆಮ್ಮದಿಯ ಜೀವನ ನಡೆಸೋಣ.

Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...

ಲೇಖಕಿಯ ಪರಿಚಯ

ಲೇಖಕಿಯ ಪರಿಚಯ

ಶ್ರೀಮತಿ ಗಾಯತ್ರಿ ಚಂದ್ರಶೇಖರ್
ವಯಸ್ಸು: 63 ವರ್ಷ
ಮೂಲ ಸ್ಥಳ: ಮಲೆನಾಡಿನ ನರಸಿಂಹರಾಜಪುರ, ಚಿಕ್ಕಮಗಳೂರು ಜಿಲ್ಲೆ.
ಪ್ರಸ್ತುತವಾಸ: ಮೈಸೂರು
ಸ್ನಾತಕೋತ್ತರ ಶಿಕ್ಷಣ: ಬಿ. ಆರ್. ಪ್ರಾಜೆಕ್ಟ್, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ.
ನಂತರದಲ್ಲಿ ಶಿವಮೊಗ್ಗ ದೇಶಿಯ ವಿದ್ಯಾಲಯ ಶಾಲಾ ಕಾಲೇಜು ಹಾಗೂ ಸಹ್ಯಾದ್ರಿ ಕಾಲೇಜು, ಮಂಗಳೂರಿನ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದೇನೆ.

ಹವ್ಯಾಸಗಳು:
ಚಿಕ್ಕಂದಿನಿಂದಲೂ ಚರ್ಚಾಸ್ಪರ್ಧೆ, ಆಶುಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತೇನೆ.
ರೇಡಿಯೋದಲ್ಲಿ ವಿಷಯಾದಾರಿತ ಕಾರ್ಯಕ್ರಮಗಳನ್ನು ನೀಡಿರುತ್ತೇನೆ.
ಹಲವಾರು ದೂರದರ್ಶನ ಗೇಮ್ ಶೋಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುತ್ತೇನೆ.
ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಮೈಸೂರು ಯಶಸ್ವಿನಿ ಮಹಿಳಾ ಸಂಘದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

English summary
#LifeAfterCorona: How will be life after Corona menance gets over. Homemaker From Mysuru, fromer Lecterur in Shivamogga Gayatri Chandrashekar's insights on how to fight Coronavirus is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X