ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: ನಿಮಗಾಗಿ, ನಿಮ್ಮವರ ಒಳಿತಿಗಾಗಿ ಮುಂಜಾಗ್ರತೆ ವಹಿಸಿ

By ಜಯಲಕ್ಷ್ಮಿ ಪಾಟೀಲ್, ಹಿರಿಯ ಕಲಾವಿದೆ
|
Google Oneindia Kannada News

ಈ ಕೊರೊನಾ ವೈರಸ್ ಹಬ್ಬಿದ ಕಡೆಯಲ್ಲೆಲ್ಲ 98% ಜನರಲ್ಲಿ ಒಂಥದರದ ದುಗುಡ, ಆರೋಗ್ಯದ ಬಗ್ಗೆ ಧಿಡೀರ್ ಕಾಳಜಿ, ಭವಿಷ್ಯದ ದಿನಗಳ ಬಗ್ಗೆ ಅತಂತ್ರತೆ ಮತ್ತು ಸ್ವಲ್ಪೇ ಸ್ವಲ್ಪ ಮಟ್ಟಿಗಾದರೂ ಸರಿ ತುಸು ನೆಮ್ಮದಿಯನ್ನು ತುಂಬಿದೆ. ಆದರೆ ಈ ನೆಮ್ಮದಿ ಅನ್ನುವುದು ತುಂಬಾ ಅಲ್ಪಾಯುಷಿ.

ಜಗತ್ತಿನಾದ್ಯಂತ ಮನುಜರಿಂದಲೇ ಅನೇಕ ರೀತಿಯಲ್ಲಿ ಅಪಾರವಾಗಿ ಘಾಸಿಗೊಂಡು ಮಲೀನಗೊಂಡ ಪ್ರಕೃತಿಯು ಆಯಾ ಪ್ರದೇಶಗಳಲ್ಲಿ ಲಾಕ್‍ಡೌನ್ ಇರುವಷ್ಟು ದಿನಗಳ ಕಾಲ ತಿತ್ತಿತುಂಬಿದ್ದ ಮಾಲಿನ್ಯವನ್ನು ಕರಗಿಸಿಕೊಂಡು ತುಸು ಸರಾಗವಾಗಿ ಉಸಿರಾಡಿಕೊಂಡಿರುತ್ತದೆ ಅನ್ನುವುದು ಮೊದಲನೇ ತಾತ್ಕಾಲಿಕ ನೆಮ್ಮದಿಯಾದರೆ ಎರಡನೇಯದು, ಮನೆಯಲ್ಲಿ ಎಷ್ಟೇ ಅನಿವಾರ್ಯತೆ ಇದೆಯೆಂದರೂ ಉದ್ಯೋಗದ ಒತ್ತಡ ಮತ್ತು ಅನಿವಾರ್ಯತೆಗಳಿಂದಾಗಿ ಕುಟುಂಬದೊಂದಿಗೆ ಸಮಯ ವ್ಯಯಿಸಲಾಗದವರೆಲ್ಲ ದಿನ ಎರಡು ದಿನವಲ್ಲ ತಿಂಗಳು ಪೂರ್ತಿ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಇರ್ತಿವಲ್ಲ ಅನ್ನೋದು.

#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ

ಆದರೆ ಈ ಎರಡನೇಯದು ತೀರಾ ವಯಕ್ತಿಕ, ಸಾರ್ವತ್ರಿಕ ಮಾತಲ್ಲ. ಅಂದಂದಿಗೆ ದುಡಿದರೇ ಅಂದಂದಿನ ಊಟ ಎನ್ನುವ ಪರಿಸ್ಥಿತಿ ಇರುವ ಮನೆಗಳಿಗೆ ಹೀಗೆ ಮನೆಯಲ್ಲಿ ಕಾಲುಕಟ್ಟಿಕೊಂಡು ಬಿದ್ದಿರುವಂಥ ನರಕ ಇನ್ನೊಂದಿಲ್ಲ ಮತ್ತು ಅಂಥವರ ಸಂಖ್ಯೆ ಹೆಚ್ಚಿದೆ...ಇನ್ನು ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರಗಳು ಮುಂದಿವೆ...

ನಿಮ್ಮ ಉತ್ತರಗಳನ್ನು ಸರಣಿ ರೂಪದಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ. ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ

ಕೊರೊನಾ ನೆರಳಲ್ಲೇ ಕಾಶಿ, ಶಿರಡಿ ಪ್ರವಾಸ ತಯಾರಿ

ಕೊರೊನಾ ನೆರಳಲ್ಲೇ ಕಾಶಿ, ಶಿರಡಿ ಪ್ರವಾಸ ತಯಾರಿ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಮಾರ್ಚ್ 18ರಂದು ನಾನು ನನ್ನ ಪತಿ ಮತ್ತು ಮಗಳು ಕಾಶಿ ಮತ್ತು ಶಿರ್ಡಿಗೆ ಹೋಗಿ ಬರಲು ನಿಶ್ಚಯಿಸಿ ತಿಂಗಳಿಗೂ ಮುಂಚೆಯೇ ವಿಮಾನ, ಟ್ರೇನುಗಳ ಟಿಕೆಟ್ ಮತ್ತು ಹೊಟೆಲ್ ರೂಮ್ ಬುಕ್ ಮಾಡಿಸಿದ್ದೆವು. ಆಗಿನ್ನೂ ಭಾರತಕ್ಕೆ ಕೊರೊನಾ ಕಾಲಿಟ್ಟಿರಲಿಲ್ಲ ಅಥವಾ ಭಾರತ ಇನ್ನೂ ಎಚ್ಚೆತ್ತುಕೊಂಡಿರಲಿಲ್ಲ. ನಾವುಗಳೂ ನಿರಾಳವಾಗಿದ್ದೆವು.

ಹೀಗಾಗಿ ಕಾಶಿಯಲ್ಲಿ ಕಾಣಸಿಗುತ್ತಾರೆ ಎನ್ನುವ ಅಘೋರಿಗಳನ್ನು, ಅಲ್ಲಿನ ಗಂಗಾ ಆರತಿ ನೋಡಬೇಕು, ಮತ್ತು ಖ್ಯಾತ ಶಹನಾಯಿ ವಾದಕರಾದ ಬಿಸ್ಮಿಲ್ಲಾ ಖಾನ್ ಸಾಹೇಬರ ಮನೆ ಅಲ್ಲಿದೆ, ಅವರೀಗಿಲ್ಲದಿದ್ದರೂ ಅವರ ಮನೆಗೆ ಹೋಗಿ ಬರಬೇಕು, ವಿಶ್ವನಾಥನ ದರ್ಶನ ಪಡೆದು ಅಲ್ಲಿಂದ ಶಿರ್ಡಿಗೆ ಹೋಗಿ ಬಾಬಾ ದರ್ಶನ ಪಡೆಯಬೇಕು ಅನ್ನೊ ಆಸೆ ನಮ್ಮದಾಗಿತ್ತು..

ಆದರೆ ನಮ್ಮ ಪ್ರಯಾಣಕ್ಕಿನ್ನೂ ವಾರವಿದೆ ಎನ್ನುವಾಗಲೆ ವಿದೇಶದಿಂದ ನಮ್ಮಲ್ಲಿ ಕೊರೊನಾ ವಲಸೆ ಬರದಿರುವಂತೆ, ಹರಡಂದತೆ ಮುನ್ನೆಚ್ಚರಿಕೆಯಾಗಿ, ಯಾರೂ ತಮ್ಮ ಸ್ಥಳದಿಂದ ಬೇರೆಡೆ ಹೋಗಬಾರದು, ಎಲ್ಲ ವಿಮಾನಗಳು ರದ್ದುಗೊಳಿಸಲಾಗುವುದು ಎನ್ನುವ ಸರಕಾರದ ಆದೇಶ ಹೊರಬಂತು.

ವಿಮಾನ ಪ್ರಯಾಣದ ವೆಚ್ಚ, ಮೊದಲೇ ಕಟ್ಟಿದ್ದ ಹೊಟೆಲ್ ರೂಮಿನ ಸಂಪೂರ್ಣ ಬಾಡಿಗೆಯ ಮೊತ್ತ ಎಲ್ಲ ಸೇರಿ ಸುಮಾರು ನಲವತ್ತು ಸಾವಿರದಷ್ಟು ಕೈಬಿಟ್ಟವು... ಬಿಡು ಕಷ್ಟಪಟ್ಟು ಮತ್ತೆ ಹಣ ಗಳಿಸೇವು, ಜೀವ ಹೋದರೆ ಗಳಿಸಿಕೊಳ್ಳಲಾದೀತೇ ಎಂದು ಸಮಾಧಾನಪಟ್ಟುಕೊಂಡೆವು. (ನಮ್ಮ ಪ್ರಯಾಣವನ್ನು ರದ್ದುಗೊಳಿಸಲು ಕಾರಣವಾದ ನನ್ನಿಬ್ಬರೂ ಮಕ್ಕಳನ್ನು ಪ್ರೀತಿಯಿಂದ ಕೃತಜ್ಞತೆಯಿಂದ ನೆನೆಯುತ್ತೇನೆ ಇಲ್ಲಿ.)

ಶುರುವಿನಲ್ಲಿ ಲಾಕ್ಡೌನ್ ಬಂದ ಖುಷಿ

ಶುರುವಿನಲ್ಲಿ ಲಾಕ್ಡೌನ್ ಬಂದ ಖುಷಿ

ಕೊರೊನಾದಿಂದ ಎಲ್ಲರೂ ಸಾಯೋದಿಲ್ಲ ಬದುಕುಳಿಯುವ ಸಾಧ್ಯತೆ ಹೆಚ್ಚಿದೆ, ಅಶಕ್ತರಿಗೆ ಕಷ್ಟವಾಗಬಹುದು, ಆರೋಗ್ಯವಂತರು ಇದರಿಂದ ಪಾರಾಗಬಹುದು ಎನ್ನುವ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಅರ್ಧ ನಿರಾಳವಾಗಿದ್ದು ಸುಳ್ಳಲ್ಲ. ಚಲೊ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರಾಯಿತು, ಆಗ ಯಾವುದೇ ಸಮಸ್ಯೆ ಇರದು ಎನ್ನುವ ಧೈರ್ಯ ಬಂತು.

#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ

ತಕ್ಷಣ ಒಂದು ನೀರು ತುಂಬಿದ ಬಕೇಟ್ ಮತ್ತು ಲಿಕ್ವಿಡ್ ಸೋಪನ್ನು ಮನೆಯಾಚೆ ಕಂಪೌಂಡಿನ ಒಳಗಿಟ್ಟೆ. ಅಕಸ್ಮಾತ್ ಯಾರಾದರೂ ನಮ್ಮ ಮನೆಗೆ ಬರುವ ಅನಿವಾರ್ಯತೆ ಬಂದಲ್ಲಿ ಅವರು ಮನೆಯಾಚೆಯೇ ಕೈ ಕಾಲು ಮುಖಗಳನ್ನು ತೊಳೆದೇ ಬರಬೇಕು ಅನ್ನುವ ನಿಯಮ ಮಾಡಿಕೊಂಡೆ. ಈ ಕುರಿತು ಫೇಸ್‍ಬುಕ್ಕಲ್ಲಿ ಪೋಸ್ಟ್ ಕೂಡಾ ಹಾಕಿದೆ. ಆಚೆ ಹೋಗಬೇಕಾದ ಪ್ರಸಂಗ ಬಂದರೆ ಇರಲಿ ಎಂದು ಮನೆಯಲ್ಲಿ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಾಟಲಿಗಳನ್ನು ತಂದರು ನನ್ನ ಪತಿ. ಗಂಡ ಮತ್ತು ಮಗ ಕೆಲಸಕ್ಕೆ ಹೋಗಿ ಮನೆಗೆ ಬರುವವರಿಗೂ ನೆಮ್ಮದಿಯಿಲ್ಲ ಜೀವಕ್ಕೆ. ಸಹೋದ್ಯೋಗಿಗಳೊಡನೆ ಹತ್ತಿರ ಹತ್ತಿರ ಕುಳಿತುಕೊಳ್ಳುತ್ತಿಲ್ಲ ತಾನೆ ಪದೆ ಪದೆ ಕೇಳಿ ತಲೆ ತಿಂದೆ.

ಇದಾಗಿ ಸ್ವಲ್ಪ ದಿನಕ್ಕೇನೇ ಲಾಕ್‍ಡೌನ್ ಘೋಷಣೆಯಾಯಿತು. ಶುರುವಿನಲ್ಲಿ ಎಲ್ಲರೂ ಒಟ್ಟಿಗಿದ್ದೇವೆ ಎನ್ನುವ ವಯಕ್ತಿಕ ಖುಷಿ. ಆದರೆ ಮೊದಲಿನಂತೆ ಮನೆಗೆ ಏನಾದರೂ ಬೇಕಾದರೆ ಆಚೆ ಹೋಗಿಬರುವಂತಿಲ್ಲ, ತರುವಂತಿಲ್ಲ. ವಾರೊಪ್ಪತ್ತಿನಲ್ಲಿ ಪತಿಗೆ ಅವರ ಆಫೀಸಿನಿಂದ ಮೇಲ್ ಬಂತು; ಲಾಕ್‍ಡೌನ್ ನಿಂದಾಗಿ ಪೂರ್ಣ ಸಂಬಳ ಕೊಡಲಾಗುವುದಿಲ್ಲ ಎಂದು. ನಮ್ಮಂಥ ಮಧ್ಯಮ ವರ್ಗದವರು ಇಂಥ ಬಿಕ್ಕಟ್ಟಿನ ದಿನಗಳನ್ನು ತಿಂಗಳೊಪ್ಪತ್ತು ಆತಂಕವಿಲ್ಲದೆ ನಿಭಾಯಿಸಬಲ್ಲೆವು ನಿಜ. ಆದ್ರೆ ಮುಂದುವರೆದ ಈ ಲಾಕ್‍ಡೌನ್ ಮೇ 3ರ ನಂತರವೂ ಮುಂದುವರೆದಿದ್ದೇ ಆದಲ್ಲಿ ಏನು ಮಾಡುವುದು..? ನಿಜಕ್ಕೂ ತೋಚುತ್ತಿಲ್ಲ. ಯಾವುದರಲ್ಲೆಲ್ಲ ಕಡಿತಗೊಳಿಸಬೇಕು? ಏನು ಮಾಡಿದರೆ ತುಸು ನೆಮ್ಮದಿಯಿಂದ ಜೀವನ ಮಾಡಬಹುದು ಎಂದೆಲ್ಲ ಯೋಚಿಸಿದರೇ ಮೈಂಡ್ ಬ್ಲಾಕ್ ಆಗಿಬಿಡುತ್ತದೆ.

ದಿನಗೂಲಿ ಕೆಲಸಗಾರರ ಸ್ಥಿತಿ ಅದೆಷ್ಟು ಅತಂತ್ರ

ದಿನಗೂಲಿ ಕೆಲಸಗಾರರ ಸ್ಥಿತಿ ಅದೆಷ್ಟು ಅತಂತ್ರ

ತಿಂಗಳ ಸಂಬಳದವರ ಸ್ಥಿತಿಯೇ ಹೀಗಿರಬೇಕಾದರೆ ಇನ್ನು ಪಾಪ ದಿನಗೂಲಿ ಕೆಲಸಗಾರರ ಸ್ಥಿತಿ ಅದೆಷ್ಟು ಅತಂತ್ರ! ಹೀಗನಿಸಿದ್ದೇ ನಮ್ಮ ಲೇಔಟಿನಲ್ಲಿರುವ ಮನೆಗೆಲಸದವರ ಕುಟುಂಬಗಳು ನೆನಪಾಗಿ, ನಮ್ಮನೆ ಕೆಲಸ ಮಾಡುವ ಕವಿತಾಗೆ ಫೋನ್ ಮಾಡಿ ವಿಚಾರಿಸಿದೆ ಎಷ್ಟು ಕುಟುಂಬಗಳಿವೆ ಹೇಗೆ ನಡೀತಿದೆ ಅವರ ಜೀವನ ಎಂದು. ಅವರಲ್ಲಿ ಬಹುತೇಕ ಕುಟುಂಬಗಳು ಈಗಲೇ ಏನೂ ಇಲ್ಲದೆ ಪರಿಪಾಟಲು ಪಡ್ತಿದಾರೆ ಅಂತ ಗೊತ್ತಾಗಿ, ನಮ್ಮ ಏರಿಯಾದ ವಾಟ್ಸಾಪ್ ಗ್ರುಪ್ಪಲ್ಲಿ, 'ಅವರಿಗೆಲ್ಲ ಸಹಾಯ ಮಾಡೋಣ ಅಂತಿದೀನಿ, ಜೊತೆಯಾಗಿ' ಎಂದು ಕೇಳಿಕೊಂಡೆ.

ನೂರು ಮನೆಗಳಿರುವ ನಮ್ಮ ಏರಿಯಾದಲ್ಲಿ ಕೇವಲ ಹನ್ನೆರಡು ಮನೆಯವರು ಮುಂದೆ ಬಂದರು. ಅವರೆಲ್ಲರಿಂದ ಆನ್‍ಲೈನ್ ಮುಖಾಂತರ ಹಣ ಸಂಗ್ರಹಿಸಿ, ನಾನು ನನ್ನ ಪತಿ ಅಗತ್ಯದ ದಿನಸಿ ತಂದುಕೊಟ್ಟೆವು.ಲೇಔಟಿನಲ್ಲಿ ಉಳಿದವರಿಗೆಲ್ಲ, 'ಸರಕಾರ ಬಡಬಗ್ಗರಿಗೆಲ್ಲ ಸಹಾಯ ಮಾಡುತ್ತಿದೆ ಮತ್ತು ಕೆಲ ಸರಕಾರೇತರ ಸಂಸ್ಥೆಗಳೂ ಸಹಾಯಕ್ಕೆ ಮುಂದಾಗಿವೆಯಾದ್ದರಿಂದ ನಮ್ಮ ನೆರವು ಅನಾವಶ್ಯಕ ಎಂಬ ಭಾವನೆ ಇರಬೇಕು. ಇಲ್ಲವೇ ಅವರಲ್ಲಿ ಕೆಲವರು ವಯಕ್ತಿಕವಾಗಿ ತಮ್ಮ ಮನೆಗೆಲಸದವರಿಗೆ ಸಹಾಯ ಮಾಡಿರಲೂಬಹುದು. ಏನೋ ಒಟ್ಟಿನಲ್ಲಿ ಕೆಲವರಷ್ಟೆ ಸಹಾಯಕ್ಕೆ ಮುಂದಾದರು. ನನಗೆ ತುಂಬಾ ಸಂಕಟವನ್ನುಂಟು ಮಾಡಿದ ವಿಷಯವೆಂದರೆ, ದಿನಸಿ ಹಂಚುವ ದಿನದಂದು ಪಕ್ಕದ ಓಣಿಯಿಂದಲೂ ಬಡಜನ ಬಂದು, ನಾವು ತಂದ ದಿನಸಿ ಸಾಲದೆ ಹೋಗಿದ್ದು ಮತ್ತು ಪ್ರಕೃತಿ ವಿಕೋಪಗಳ ಕಾಲದಲ್ಲಿ ನೆರೆ ಹಾವಳಿ ಇತ್ಯಾದಿಗಳಿಗೆಲ್ಲ ಎಲ್ಲರೂ ಒಟ್ಟಾಗಿ ಟೆಂಪೊಗಳಲ್ಲಿ ತುಂಬಿ ತುಂಬಿ ಸಾಮಗ್ರಿಗಳನ್ನು ಕಳುಹಿಸಿದ್ದ ನಮ್ಮ ಲೇಔಟಿನ ಜನ ನಮ್ಮವರದೆ ಸಹಾಯಕ್ಕೆ ಮುಂದಾಗಲು ಹಿಂಜರಿದ್ದಿದ್ದ್ಯಾಕೆ ಎನ್ನುವುದು.

ನಮ್ಮ ಲೇಔಟಿನಲ್ಲೇ ಕ್ವಾರಂಟೈನ್ ಸುದ್ದಿ

ನಮ್ಮ ಲೇಔಟಿನಲ್ಲೇ ಕ್ವಾರಂಟೈನ್ ಸುದ್ದಿ

ಇದಕ್ಕೂ ಮೊದಲು ನಮ್ಮ ಲೇಔಟಲ್ಲಿ ವಿದೇಶದಿಂದ ಮರಳಿ ಬಂದಿದ್ದ ಒಬ್ಬರು ಬಾಡಿಗೆದಾರರು ಕ್ವಾರಂಟೈನ್ ಆದ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲ ಮನೆಗೂ ಹಬ್ಬಿ ಒಂದಿಷ್ಟು ಜನರಂತೂ ಅದೆಷ್ಟು ಉದ್ವಿಗ್ನರಾಗಿದ್ದರೆಂದರೆ ಕೊರೊನಾ ತಮ್ಮ ಮನೆಗೇ ನುಗ್ಗಿಬಿಟ್ಟಿದೆ ಅನ್ನುವಂತೆ ಆಡತೊಡಗಿದರು. ನಾವು ಒಂದ್ ನಾಲ್ಕು ಜನ ಉದ್ವಿಗ್ನಗೊಂಡ ಅವರನ್ನೆಲ್ಲ ಸಮಾಧಾನಗೊಳಿಸಲು ಮತ್ತು ಕೊರಂಟೈನ್ ಆದ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ನಮ್ಮ ಇದ್ದಬದ್ದ ಬುದ್ದಿಯನ್ನೆಲ್ಲ ಖರ್ಚು ಮಾಡಬೇಕಾಯ್ತು ಮತ್ತು ಅಂಥ ಕೆಲವರೊಂದಿಗೆ ನಿಷ್ಠುರ ಕಟ್ಟಿಕೊಳ್ಳಬೇಕಾಯ್ತು. ಹದಿನಾಲ್ಕನೇ ದಿನ ಆತನಿಗೆ ಕೊರೊನ ಸೋಂಕು ತಾಗಿಲ್ಲ ಎಂದಾದಾಗ ಒಬ್ಬರೂ ತುಟಿ ಎರಡು ಮಾಡಲಿಲ್ಲ.

#LifeAfterCorona: ಇನ್ನಷ್ಟು ಆರ್ಥಿಕ ಕುಸಿತಕ್ಕೆ ಸಿದ್ಧರಾಗಬೇಕಿದೆ#LifeAfterCorona: ಇನ್ನಷ್ಟು ಆರ್ಥಿಕ ಕುಸಿತಕ್ಕೆ ಸಿದ್ಧರಾಗಬೇಕಿದೆ

ಪ್ರತಿ ತಿಂಗಳ ಮೂರನೇ ಭಾನುವಾರ ಜಯನಗರದ ಸಿರಿಸಂಪಿಗೆಯಲ್ಲಿ ನಮ್ಮ ಈ ಹೊತ್ತಿಗೆಯಿಂದ ಪುಸ್ತಕವೊಂದರ ಚರ್ಚೆಯಾಗುವುದು ವಾಡಿಕೆ. ಅದೀಗ ಸಾಧ್ಯವಾಗುವಂತಿರಲಿಲ್ಲವಾದ್ದರಿಂದ ಈ ತಿಂಗಳು ಬಂಕ್ ಮಾಡೋಕೂ ಮನಸ್ಸಾಗದೆ ಕೊನೆಗೆ, ಕವನಗಳನ್ನು ಓದಿ ಅವುಗಳ ವಿಡಿಯೊ ಮಾಡಿ ಆನ್‍ಲೈನಿನಲ್ಲಿ ಈ ತಿಂಗಳ ಚರ್ಚೆ ಎಂದು ನಿರ್ಧಾರಿಸಿದೆ. ಅಂದುಕೊಂಡಂತೆ, ಕವಿತೆ ಓದಿದ ವಿಡಿಯೊಗಳನ್ನೂ ಕಳಿಸಿಕೊಟ್ಟರು ಓದಿದವರೆಲ್ಲ. ಈ ಹೊತ್ತಿಗೆಗಾಗಿ ನಾನು ಪ್ರತಿ ತಿಂಗಳೂ ಮಾಡುವ ತಯಾರಿಗೂ ಮೂರು ಪಟ್ಟು ಹೆಚ್ಚು ಕೆಲಸ ಈ ಬಾರಿ! ಅಷ್ಟೂ ವಿಡಿಯೊಗಳ ಎಡಿಟಿಂಗ್, ಅಪ್‍ಲೋಡ್, ಶೇರ್ ಅಂತೆಲ್ಲ ಮನೆಗೆಲಸಗಳ ನಡುವೆ ಇದೂ ಸೇರಿ ಸುಸ್ತಾಗಿಹೋದೆ.

ಏನೇನು ಬದಲಾವಣೆಗಳಾಗ್ತವೊ ಗೊತ್ತಿಲ್ಲ

ಏನೇನು ಬದಲಾವಣೆಗಳಾಗ್ತವೊ ಗೊತ್ತಿಲ್ಲ

ಇನ್ನು ಜನದನಿ. ಜನದನಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸುತ್ತಿರುವಂಥ ಸಂಸ್ಥೆ. ಅದೂ ನಿಶ್ಚಲವೀಗ. ಅಭಿನಯದಿಂದ ಸ್ವಲ್ಪ ಕಾಲ ದೂರ ಸರಿದಿದ್ದೆನಾದ್ದರಿಂದ ಅದೀಗ ಈ ಕಾರಣದಿಂದಾಗಿ ಸ್ಥಗಿತಗೊಂಡಿದೆ ಎನ್ನುವ ಸಂಕಟವಿಲ್ಲ. ಮನೆಯಲ್ಲಿ ಮೊದಲು ಎರಡು ಹೊತ್ತು ಅಡುಗೆಯಾಗುತ್ತಿತ್ತು. ಈಗ ಮೂರೂ ಹೊತ್ತು. ಜೊತೆಗೆ ಸಂಜೆಗೆ ಚಹಾದ ಜೊತೆಗೆ ತಿನ್ನಲು ಏನಾದರೂ ಬೇಕು ಎನ್ನುವ ಡಿಮ್ಯಾಂಡ್ ಎರಡು ದಿನಕ್ಕೊಮ್ಮೆಯಾದರೂ ಇರುತ್ತೆ! ಇದೆಲ್ಲದಕ್ಕೂ ಸ್ಟ್ರೆಸ್ ಬಸ್ಟರ್ ಅಂತೇನಾದ್ರು ಬೇಕು ಅಂತಂದುಕೊಂಡು ನಾಟಕಗಳ ಪುಟ್ಟ ಭಾಗಗಳನ್ನಾಯ್ದುಕೊಂಡು ಅಭಿನಯಿಸಿ ವಿಡಿಯೊ ಮಾಡೋದು ಹಂಚ್ಕೊಳ್ಳೋದು, ಓದಬೇಕೆಂದು ಪಲ್ಲಂಗದ ಪಕ್ಕದಲ್ಲಿ ಎತ್ತಿಕೊಂಡ ಪುಸ್ತಕಗಳನ್ನು ಓದೋದು, ಹೊತ್ತಲ್ಲದ ಹೊತ್ತಲ್ಲಿ ಮಲಗೋದು, ಏಳೋದು ಸಧ್ಯಕ್ಕಂತೂ ಹೀಗೆ ನಡೀತಿದೆ ಬದುಕಿನ ಬಂಡಿ. ಕೊರೊನಾ ಆರ್ಭಟ ಕಮ್ಮಿಯಾಗದಿದ್ದಲ್ಲಿ ಇನ್ನೂ ಏನೇನು ಬದಲಾವಣೆಗಳಾಗ್ತವೊ ಗೊತ್ತಿಲ್ಲ.

ಅರ್ಧ ಭರವಸೆ, ಅರ್ಧ ಅನುಮಾನ -ಈಗಿನ ಪರಿಸ್ಥಿತಿ

ಅರ್ಧ ಭರವಸೆ, ಅರ್ಧ ಅನುಮಾನ -ಈಗಿನ ಪರಿಸ್ಥಿತಿ

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ? ಹೇಗೆ ಅರ್ಥೈಸೋದು...?

ತನ್ನ ಪಾಡಿಗೆ ತಾನು ದಾರಿಯಲ್ಲಿ ಹೋಗುತ್ತಿದ್ದ ಅಮಾಯಕನಿಗೆ ಯಾರೋ ಯಾವುದೋ ಮಾಯದಲ್ಲಿ ಮತ್ತು ಬರಿಸಿ ಎಲ್ಲೋ ಯಾವುದೋ ಕಾಡಲ್ಲಿ ತಂದೆಸೆದಂತಿದೆ. ಮತ್ತು ಕಳೆದು ತಾನೆಲ್ಲಿದ್ದೇನೆಂದೂ ಅರಿಯದೆ ಮರಳಿ ತನ್ನೂರಿಗೆ ಹೋಗಲು ದಾರಿ ಕಾಣದೆ ಹತ್ತೂ ಕಡೆ ಹರಿದಾಡಿ ದಿಕ್ಕು ತೋಚದೆ ಎದುರಿಗಿರುವ ಒಂದು ದಾರಿ ಹಿಡಿದು ಮುನ್ನಡೆದು, ಅದಲ್ಲವೆಂದುಕೊಂಡು ಇನ್ನೊಂದು ಮತ್ತೊಂದು ದಾರಿ ಹುಡುಕುತ್ತಾ, ಪರದಾಡುತ್ತಾ, ಎಲ್ಲೋ ಮಿಣುಕು ಬೆಳಕು ಕಂಡಂತಾಗಿ, ಅರ್ಧ ಭರವಸೆ, ಅರ್ಧ ಅನುಮಾನದಿಂದ ಅತ್ತ ಸಾಗುತ್ತಾ....

#LifeAfterCorona:ಅಪನಂಬಿಕೆಯ ಲೋಕವನ್ನು ಸೃಷ್ಟಿಸಿದೆ#LifeAfterCorona:ಅಪನಂಬಿಕೆಯ ಲೋಕವನ್ನು ಸೃಷ್ಟಿಸಿದೆ

ಹೀಗಿರಬಹುದು ವೈದ್ಯಕೀಯ ಲೋಕದೆದುರಿನ ಸವಾಲು ಅನ್ನುವುದು ನನ್ನ ಅಂದಾಜು. ಕಾರಣ, ಇವತ್ತು ಪ್ಲೇಗಿನಂತಹ ಸಾಂಕ್ರಾಮಿಕ ಮಾರಿಯ ಬಗ್ಗೆ ನಮಗೆಲ್ಲ ಕೇಳಿ ಗೊತ್ತೇ ವಿನಹ, ನೋಡಿ, ಅನುಭವಿಸಿ ಗೊತ್ತಿಲ್ಲ. ಅಂಥಾ ಭಯಾನಕವಾದ ಸೋಂಕಿನ ಕಾಯಿಲೆಗೆ ಮದ್ದು ಕಂಡು ಹಿಡಿಯಲು ಶತಶತಮಾನಗಳೇ ಬೇಕಾದವು. ಇನ್ನು ಕಾಲರಾ, ಕುಷ್ಟರೋಗ, ಕ್ಷಯ, ಹಂದಿಜ್ವರ, ಇತ್ಯಾದಿಗಳಿಗೂ ಮದ್ದು ಕಂಡುಹಿಡಿಯಲೂ ಸುಮಾರು ವರ್ಷಗಳೇ ಬೇಕಾದವು. ಹೀಗಿರುವಾಗ ಕೊರೊನಾ ತಡೆಗಟ್ಟಲು ತ್ವರಿತವಾಗಿ ಏನಾದರು ಉಪಾಯ ಸಿಕ್ಕೀತು ಎನ್ನುವುದು ಅನುಮಾನ. ಸಿಕ್ಕಿದ್ದೇ ಆದರೆ ಅದಕ್ಕಿಂತ ನೆಮ್ಮದಿಯ ಸಂಗತಿ ಸಧ್ಯಕ್ಕೆ ಮತ್ತೊಂದಿಲ್ಲ ಜಗಕೆ.

ಆಗಾಗ ಬರುವ ರೋಗಕ್ಕೆ ಮದ್ದು ಸಿಗುವ ಭರವಸೆಯಿದೆ

ಆಗಾಗ ಬರುವ ರೋಗಕ್ಕೆ ಮದ್ದು ಸಿಗುವ ಭರವಸೆಯಿದೆ

ನಾನು ಈ ಮೊದಲೆ ಮೇಲೆ ಹೇಳಿದಂತೆ, ನಮಗೆಲ್ಲ ಈಗಾಗಲೇ ಗೊತ್ತಾಗಿರುವಂತೆ ಈ ಕೊರೊನಾ ಅನ್ನೋದು ಬಂದ್ರೆ ಪ್ರಾಣ ಹೋಗಿಯೇ ಬಿಡುತ್ತೆ ಅಂತೇನೂ ಅಲ್ಲವಾದರೂ ಹೋಗುವ ಸಾಧ್ಯತೆ ಇರುವಂಥದ್ದು. ಅದಕ್ಕೆ ನಿದರ್ಶನ ಎಂಬಂತೆ ಬದುಕುಳಿದವರ ಮತ್ತು ಸತ್ತವರ ಎರಡೂ ರೀತಿಯ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುತ್ತಿದ್ದೇವೆ, ನೋಡುತ್ತಿದ್ದೇವೆ. ಭಾರತದಲ್ಲಿ ಸಧ್ಯಕ್ಕೆ ಸಾವಿನ ಸಂಖ್ಯೆ ಹೆಚ್ಚಿಲ್ಲ ಎನ್ನುವುದು ಕೊಂಚ ಸಮಾಧಾನ ಕೊಡುತ್ತದಾದರೂ ಜಾಗತಿಕ ಮಟ್ಟದಲ್ಲಿ ನೋಡಿದರೆ ಭಯವಾಗುತ್ತದೆ. ಇದರಿಂದ ಯಾರಿಗೂ ಸಾವು ಬಾರದಂತಾಗಲಿ ಅನ್ನುವ ಆಶಯ ಎಲ್ಲರದೂ ಆಗಿದೆ.

ನಾನು ವಿಜ್ಞಾನಿಯಾಗಲಿ, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದವಳಾಗಲಿ ಅಲ್ಲವಾದ್ದರಿಂದ ಕೊನೆ ಯಾವಾಗ ಹೇಗಾಗುತ್ತದೆ ಅನ್ನುವುದರ ಅಂದಾಜಿಲ್ಲ ನನಗೆ. ಆದರೆ ಸುದ್ದಿ ಮಾಧ್ಯಮಗಳ ಮುಖಾಂತರ ಕೇಳಿ ತಿಳಿದುಕೊಂಡ ಹಾಗೆ ಇದು ಪ್ಲೇಗಿನಂತೆ ಸಂಪೂರ್ಣ ನಶಿಸಿ ಹೋಗದೆ, ಮಲೇರಿಯಾ ಟೈಫಡ್‍ಗಳಂತೆ ಆಗಾಗ ಕಾಣಿಸಿಕೊಳ್ಳುವುದಂತೆ. ಆದಷ್ಟು ಬೇಗ ಇದಕ್ಕೆ ಮದ್ದು ಕಂಡುಹಿಡಿದಲ್ಲಿ, ಅಕಸ್ಮಾತ್ ಯಾರಿಗಾದರೂ ಕೊರೊನಾ ಸೋಂಕು ತಾಗಿದಲ್ಲಿ ಅದು ಹರಡದಂತೆ, ಸಾವು ಬರದಂತೆ, ಆರೋಗ್ಯ ಮರುಕಳಿಸುವಂತೆ ಆ ಮದ್ದು ಕೆಲಸ ಮಾಡುತ್ತದೆ ಎಂದು ಭಾವಿಸಿರುವೆ. ಮನುಷ್ಯ ಶಸ್ತ್ರಾಸ್ತ್ರಗಳ ತಯಾರಿಕೆಗೆ, ಸಂಗ್ರಹಕ್ಕೆ ಕೊಡುವ ಮಹತ್ವದಷ್ಟು ಪರಿಸರ ಸಂರಕ್ಷಣೆಗೂ, ಆರೋಗ್ಯಕ್ಕೂಕೊಟ್ಟಲ್ಲಿ, ಈ ಭೂಮಿಯ ಮೇಲೆ ಜೀವ ಸಂಕುಲದ ಅಂತ್ಯದ ಶರವೇಗ ತಗ್ಗೀತು.

ವೈದ್ಯಕೀಯ ಸಿಬ್ಬಂದಿ ಸಂರಕ್ಷಣೆಗೆ ಹೆಚ್ಚಿನ ಗಮನ

ವೈದ್ಯಕೀಯ ಸಿಬ್ಬಂದಿ ಸಂರಕ್ಷಣೆಗೆ ಹೆಚ್ಚಿನ ಗಮನ

ಪಾಪ ಈಗ ವೈದ್ಯಕೀಯ ಕೆಲಸದಲ್ಲಿರುವವರೆಲ್ಲ ತಮ್ಮ ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡೇ ಸೋಂಕಿತರನ್ನು ಗುಣಪಡಿಸಲು ಶ್ರಮಿಸುತ್ತಿದ್ದಾರೆ. ಅವರಿಗೂ ಸೋಂಕು ತಗುಲದಂತೆ ಇರುವುದು ಹೇಗೆ ಎನ್ನುವುದು ಸಧ್ಯದ ಸವಾಲು. ಮನೆಯಲ್ಲಿ ಎಳೆ ಕಂದಮ್ಮಗಳಿದ್ದರೂ ಅವರನ್ನು ಬಿಟ್ಟು ಬಂದು ದಿನಕ್ಕೆ ಹನ್ನೆರಡು ತಾಸುಗಳ ಕೆಲಸ ಮಾಡಬೇಕು. ರಕ್ಷಣೆಗಾಗಿ ಹಾಕಿಕೊಂಡ ದಿರಿಸು, ಮಾಸ್ಕ್, ಗ್ಲೌಸ್ ಗಳನ್ನೆಲ್ಲ ಅವರೆಲ್ಲ ಈ ಹನ್ನೆರಡು ಗಂಟೆ ಕಾಲ ತೆಗೆದು ಮತ್ತೆ ಧರಿಸುವಂತಿಲ್ಲವಾದ್ದರಿಂದ ಹಸಿವು, ಬಾಯಾರಿಕೆ, ಮೂತ್ರ ಮತ್ತೊಂದು ಯಾವುದಕ್ಕೂ ಅವಕಾಶವಿಲ್ಲ. ಇದು ಅವರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆಯೋ ಗೊತ್ತಿಲ್ಲ. ಇದು ಸಾಲದು ಅಂತ ಮನೆಗೆ ಹೋದ ಮೇಲೆಯೂ ಮಕ್ಕಳಿಂದ, ಮನೆಯವರಿಂದ ದೂರವೇ ಇರುವ ಅನಿವಾರ್ಯತೆ ಅವರಿಗೆಲ್ಲ. ಇತರರನ್ನು ಬದುಕಿಸುವ ಸಾಹಸದಲ್ಲಿ ಕೆಲವರೀಗಾಗಲೇ ಸೋಂಕು ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಇದು ಮುಂದುವರಿಯದಂತೆ ಅವರ ಸಂರಕ್ಷಣೆ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗಿರುವುದು ಮದ್ದು ಕಂಡು ಹಿಡಿಯುವ ಕೆಲಸದಷ್ಟೇ ತುರ್ತಿನ ಕೆಲಸವಾಗಿದೆ.

#LifeAfterCorona: Science is God ಎಂದ ಮಠ ಗುರುಪ್ರಸಾದ್#LifeAfterCorona: Science is God ಎಂದ ಮಠ ಗುರುಪ್ರಸಾದ್

ಶ್ರೀಮಂತ ಇನ್ನಷ್ಟು ಪ್ರಬಲನಾಗ್ತಾನೆ

ಶ್ರೀಮಂತ ಇನ್ನಷ್ಟು ಪ್ರಬಲನಾಗ್ತಾನೆ

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ನಿಜ. ಇದು ಎಂದಿನಿಂದಲೂ ಇದ್ದಿದ್ದೇ ಹೀಗೆ. ಶ್ರೀಮಂತರು ಅಂದರೆ ಧನಬಲವುಳ್ಳವರು, ಆಳುವವರು ಎಂದರೆ ಅಧಿಕಾರಬಲವುಳ್ಳವರು. ಅವರು ಇಂಥ ಹೊತ್ತಲ್ಲಿ ದುರ್ಬಲರಾಗೋದಾದ್ರೂ ಹೇಗೆ?! ಶ್ರೀಮಂತ ಹೆಚ್ಚು ಶ್ರೀಮಂತನಾಗದಿದ್ದರೂ ಖಂಡಿತ ಬಡವನಾಗುವುದಿಲ್ಲ. ಆದರೆ ಬಡವ ಇಂಥ ಪರಿಸ್ಥಿತಿಯಲ್ಲಿ ಇನ್ನಷ್ಟು ಬಡವನಾಗ್ತಾನೆ, ಅಸಹಾಯಕನಾಗ್ತಾನೆ, ಹತಾಶನಾಗ್ತಾನೆ. ಆಗ ಸಹಜವಾಗಿಯೇ ಶ್ರೀಮಂತ ಇನ್ನಷ್ಟು ಪ್ರಬಲನಾಗ್ತಾನೆ.

ಜಾಗತಿಕ ಮಟ್ಟದಲ್ಲಿ, ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಇಂಥಾ ಹೊತ್ತಲ್ಲಿ ಎಲ್ಲ ಉದ್ಯಮಗಳು ಸ್ಥಗಿತಗೊಳ್ಳುವ ಕಾರಣದಿಂದಾಗಿ ಆರ್ಥಿಕ ಕುಸಿತ ಚೇತರಿಸಿಕೊಳ್ಳಲು ಆಳುವ ವ್ಯವಸ್ಥೆಯ ನೆರವು ಅನಿವಾರ್ಯ. ಹೀಗಾಗಿ ಆಯಾ ಮಟ್ಟದಲ್ಲಿ ಆಳುವ ವ್ಯವಸ್ಥೆ ಪ್ರಬಲಗೊಳ್ಳುತ್ತೆ. ಇದರೊಂದಿಗೇ ಆಳುವ ವ್ಯವಸ್ಥೆ ಮತ್ತು ಆಳುವ ಮನಸ್ಥಿತಿಗಳ ವಿರುದ್ಧದ ಹೋರಾಟವೂ ಅನವರತ ನಡೆದುಕೊಂಡೇ ಬಂದಿದೆ. ಅಂಥ ಅನವರತ ಹೋರಾಟಗಳಿಂದಲೇ ಪ್ರಜಾಪ್ರಭುತ್ವದ ದೇಶವಾದ ನಮ್ಮಲ್ಲಿ ವ್ಯವಸ್ಥೆ ತೀರಾ ಲಂಗುಲಗಾಮುಗಳಿಲ್ಲದಂತೆ ಆಡಲು ಸಾಧ್ಯವಾಗದೆ ಇರೋದು.
ಇನ್ನು ಹಳೆಯ ವ್ಯವಸ್ಥೆ ಎಂದರೆ ಯಾವುದು? ಕೃಷಿ ಪ್ರಧಾನ ವ್ಯವಸ್ಥೆಯಾ? ಅಥವಾ ಜಾಗತೀಕರಣದಿಂದಾಗಿ ಬದಲಾದ ಎಲ್ಲ ಕ್ಷೇತ್ರಗಳಲ್ಲಿನ ಮೊದಲಿನ ವ್ಯವಸ್ಥೆಯಾ?

ನೋಮ್ ಚಾಮ್ಸ್ಕಿ ಓದಿ ಎದೆ ನಡುಗಿದಂತಾಯಿತು

ನೋಮ್ ಚಾಮ್ಸ್ಕಿ ಓದಿ ಎದೆ ನಡುಗಿದಂತಾಯಿತು

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಅಮೇರಿಕಾದ ಖ್ಯಾತ ಭಾಷಾಶಾಸ್ತ್ರಜ್ಞ ಮತ್ತು ರಾಜಕೀಯ ವಿಶ್ಲೇಷಕರಾದ ನೋಮ್ ಚಾಮ್ಸ್ಕಿ ಅವರ ನಮ್ಮ ಮುಂದಿನ ದಿನಗಳ ಕುರಿತ ಮಾತುಗಳನ್ನು ನಿಮ್ಮ ಒನ್ಇಂಡಿಯಾ ಕನ್ನಡದಲ್ಲಿ ಓದಿದೆ. ಓದಿದ್ದೇ ಎದೆ ನಡುಗಿದಂತಾಯಿತು. ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸುವುದಕ್ಕಾಗಿ, ಜಗತ್ತನ್ನು ಗೆದ್ದು ತಮ್ಮ ತಮ್ಮ ಮುಷ್ಠಿಯಲ್ಲಿಟ್ಟುಕೊಳ್ಳಲು ಬಯಸುವ ಪರಮಾಣುವನ್ನು ಹೊಂದಿದ ದೇಶಗಳು ಈಗಲಾದರೂ ಎಚ್ಚೆತ್ತುಕೊಂಡು, ಹಾಗೇನಾದರೂ ಹುಂಬತನದಿಂದ ಅವುಗಳನ್ನು ತಾವು ಪ್ರಯೋಗಿಸಿದಲ್ಲಿ, ಅದರ ಸಾರ್ಥಕತೆ ಅನುಭವಿಸಲು ತಾವೇ ಇರುವುದಿಲ್ಲ ಎನ್ನುವ ಸತ್ಯವನ್ನರಿತುಕೊಂಡು ಅವುಗಳನ್ನು ನಾಶ ಪಡಿಸಿಬಿಡಲಿ ಎಂದು ಮನಸ್ಸು ಮುಗ್ಧವಾಗಿ ಆಶಿಸುತ್ತದೆ.

#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ

ಜಗತ್ತಿನ/ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ನನಗೆ ತುಂಬಾ ಏನು ಆಳವಾದ ತಿಳುವಳಿಕೆ ಇಲ್ಲವಾದ್ದರಿಂದ ಈ ಕುರಿತು ಹೆಚ್ಚಿಗೇನೂ ಹೇಳಲಾರೆ. ಹೀಗಾಗಿ ನನಗೆ ತೋಚಿದಷ್ಟು ಹೇಳುವುದಾದರೆ ಇಷ್ಟು ದಿನಗಳ ಕಾಲದ ಲಾಕ್‍ಡೌನ್ ಕಾರಣದಿಂದಾಗಿ ಸ್ಥಗಿತಗೊಂಡ ಉದ್ಯಮಗಳು, ಜಗತ್ತಿನಾದ್ಯಂತ ಕುಸಿದ ಆರ್ಥಿಕ ಸುಧಾರಣೆಗಾಗಿ ಈ ದಿನಗಳ ನಷ್ಟವನ್ನು ತುಂಬಿಕೊಳ್ಳಲು ಸಹಜವಾಗಿಯೇ ಮುಂದಾಗುವುದರಿಂದ ಎಲ್ಲದರ ಬೆಲೆಗಳು ಕೆಳ ಮಧ್ಯಮವರ್ಗದವರ ಕೈಗೆಟುಕದಷ್ಟು ಹೆಚ್ಚಾಗಲಿವೆ ಮತ್ತು ದುಡಿವ ವರ್ಗದ ಸಂಬಳದಲ್ಲಿ ಇಳಿಕೆ ಕಂಡು ಬರುತ್ತದೆ ಎನಿಸುತ್ತಿದೆ. ಈ ಕಾರಣದಿಂದಾಗಿ ಬಡ ಕಾರ್ಮಿಕರ ಸ್ಥಿತಿ ಇನ್ನೂ ಶೋಚನೀಯವಾಗಲಿದೆ ಅನಿಸುತ್ತಲಿದೆ. ಇದಾಗಬಾರದು ಎಂದರೆ ದೇಶದಲ್ಲಿರೊ ಟಾಪ್ ಟೆನ್ ಶ್ರೀಮಂತರು ಮತ್ತು ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟಿರುವ ಶ್ರೀಮಂತರು ತುಸು ಉದಾರ ಮನಸಿನಿಂದ ಮುಂದೆ ಬಂದಲ್ಲಿ ಆರ್ಥಿಕ ಅಸಮತೋಲನತೆಯನ್ನು ತಕ್ಕ ಮಟ್ಟಿಗೆ ತಡೆಯಬಹುದು ಅನಿಸುತ್ತಿದೆ.

ಇದು ತಕ್ಷಣಕ್ಕೆ ನಿವಾರಣೆಯಾಗಿ ಹೋಗುವ ಸೋಂಕಲ್ಲ. ಈ ಲಾಕ್‍ಡೌನ್ ಅವಧಿ ಮುಗಿಯುತ್ತಿದ್ದಂತೆಯೇ ಜನ ಯಾವತ್ತಾದರೂ ಹೊರಗಿನ ಪ್ರಪಂಚ ಕಂಡಿದ್ದೆವೋ ಇಲ್ಲವೋ ಎಂಬಂತೆ ಬೀದಿಗಿಳಿಯುತ್ತಾರೆ. ಪಾರ್ಟಿ, ಸಿನಿಮಾ, ಮದುವೆ, ಇತರ ಸಮಾರಂಭಗಳು ಎಲ್ಲವೂ ಇಂದಿಲ್ಲದಿದ್ದರೆ ಎಂದೂ ಇಲ್ಲ ಎಂಬಂತೆ ಶುರುವಾಗುತ್ತವೆ. ಆಗ ಇಷ್ಟು ದಿನ ವಹಿಸಿದ್ದ ಎಚ್ಚರಿಕೆ ಎಲ್ಲವೂ ಗಾಳಿಗೆ ತೂರಿದಂತಾಗಿ ಮನೆ ಮನೆಯಲ್ಲೂ ಕೊರೊನಾ ಸೋಂಕಿನಿಂದ ಜನ ಪರದಾಡುವಂತಾಗುತ್ತದೆ.

ಬದುಕು ಎಂದಿನಂತೆ ನಿರಾಳವಾಗಿ ಸಾಗಲಿ ಎಂಬ ಆಶಯ

ಬದುಕು ಎಂದಿನಂತೆ ನಿರಾಳವಾಗಿ ಸಾಗಲಿ ಎಂಬ ಆಶಯ

ಹಾಗಂತ ಈ ಲಾಕ್‍ಡೌನ್ ಮುಂದುವರೆದಿದ್ದೇ ಆದರೆ ಉದ್ಯೋಗವಿಲ್ಲದೆ ಹೊಟ್ಟೆಗೆ ಹಿಟ್ಟು, ನೆತ್ತಿಯ ಸೂರಿಗೆ ಬಾಡಿಗೆ, ತೆರಿಗೆಗಳನ್ನು ತುಂಬುವುದಾದರೂ ಹೇಗೆ?! ಹಾಗೆಲ್ಲ ಆಗಬಾರದು ಎನ್ನುವುದಾದರೆ ಲಾಕ್‍ಡೌನ್ ಅವಧಿ ಮುಗಿದ ಮೇಲೆ ನಾವುಗಳು ಇನ್ನಷ್ಟು ಎಚ್ಚರಿಕೆಯಿಂದ ವರ್ತಿಸಬೇಕಾದ ಅನಿವಾರ್ಯತೆ ಇದೆ. ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಂಡು ಇತರರೊಂದಿಗೆ ಅಂತರ ಕಾಯ್ದುಕೊಂಡೇ ಒಟ್ಟಿಗೆ ಕೆಲಸ ಮಾಡುವುದು, ಆಗಾಗ ತಪ್ಪದೆ ಸೋಪಿನಿಂದ ಕೈ ತೊಳೆದುಕೊಳ್ಳುವುದು, ಕೆಲಸದ ಎಲ್ಲ ಜಾಗಗಳಲ್ಲೂ ಈಗ ನಡೆಯುತ್ತಿರುವಂತೆ ಆರೋಗ್ಯ ತಪಾಸಣೆ ನಡೆಸುವುದನ್ನು ಕಡ್ದಾಯಗೊಳಿಸುವುದು ಮತ್ತು ಅನುಮಾನ ಬಂದಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯಾಗುವಂತೆ ನೋಡಿಕೊಳ್ಳುವುದು ಆಗಬೇಕಿದೆ.

ಇದರ ಜೊತೆಗೆನೇ ಆಸ್ಪತ್ರೆಗಳಲ್ಲಿ ಅಗತ್ಯದ ವ್ಯವಸ್ಥೆ ಇರುವುದೂ ಅಷ್ಟೇ ಮುಖ್ಯ. ಇನ್ನು ಮನರಂಜನೆಯ ವಿಷಯ. ಅದಕ್ಕಾಗಿ ನಾವುಗಳು ಹೊರಗೆ ಹೋಗಲೇಬೇಕಾದಂಥ ಅನಿವಾರ್ಯತೆ ಇಂದಿನ ತಾಂತ್ರಿಕ ಯುಗದಲ್ಲಿ ಖಂಡಿತ ಇಲ್ಲ. ಮನರಂಜನೆ, ಮೋಜಿಗೆಂದು ಸ್ವಲ್ಪ ಕಾಲ ಹೊರಗೆ ಹೋಗದಿದ್ದಲ್ಲಿ ನಾವ್ಯಾರೂ ಸಾಯುವುದಿಲ್ಲ. ಆದರೆ ಹೋಗದೆ ಇರಲು ನಮ್ಮಿಂದಾಗದು ಎಂದು ಹೊರಟಿದ್ದೇ ಆದರೆ ನಾವು ಮಾತ್ರವಲ್ಲ ನಮ್ಮ ಜೊತೆಗಿರುವ ಕುಟುಂಬದವರೂ ಸ್ನೇಹಿತರೂ ಸಾಯೋದು ನಿಶ್ಚಿತ. ಆದ ಕಾರಣ ಎಲ್ಲ ತಿಳಿಯಾಗುವವರೆಗೆ ನಾವೆಲ್ಲ ನಮಗಾಗಿ, ನಮ್ಮವರ ಒಳಿತಿಗಾಗಿ ಮುಂಜಾಗ್ರತೆಯಿಂದಿರಬೇಕಿದೆ. ಇರೋಣ. ಎಲ್ಲವನ್ನೂ ಸ್ವಚ್ಛ ಮಾಡಿಯೇ ಬಳಸುವ ಈಗಿನ ಅಭ್ಯಾಸ ಮನೆಮನೆಗಳಲ್ಲೂ ಅನವರತ ಮುಂದುವರೆಯಲಿ. ಎಲ್ಲರ ಬದುಕು ಎಂದಿನಂತೆ ನಿರಾಳವಾಗಿ ಸಾಗುವಂತಾಗಲಿ ಎಂದು ಆಶಿಸುತ್ತೇನೆ.

English summary
#LifeAfterCorona: Kannada thearte and Film Actress Jayalaxmi Patil writes about why Prevention and Precaution is much needed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X