keyboard_backspace

ಎಷ್ಟೆಲ್ಲಾ ಮಾಡಿದ್ರೂ ಸುರೇಶ್ ಕುಮಾರ್‌ಗೆ ಸಚಿವ ಸ್ಥಾನ ಕೈ ತಪ್ಪಿದ್ದೇಕೆ?

Google Oneindia Kannada News

ಬೆಂಗಳೂರು, ಆ. 04: ಕೊರೊನಾ ಕಷ್ಟದಲ್ಲಿ ವಿದ್ಯಾಗಮ ಜಾರಿ ಮಾಡಿದ ಏಕೈಕ ವ್ಯಕ್ತಿ. ಖಾಸಗಿ ಶಾಲಾ ಶುಲ್ಕ ಕಡಿಮೆ ಮಾಡಿದ ಸಾರ್ಥಕತೆ, ಪರೀಕ್ಷೆ ಇಲ್ಲದೇ ಪಿಯುಸಿ ಪಾಸು ಮಾಡಿದ ಹಿರಿಮೆ, ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಎಲ್ಲರೂ ಪಾಸ್ ಷರತ್ತಿನೊಂದಿಗೆ ದೇಶದಲ್ಲಿ ಪರೀಕ್ಷೆ ನಡೆಸಿದ ಹೆಗ್ಗಳಿಕೆ. ಇನ್ನು ಅತಿ ಹಿಂದುಳಿದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿದ ಪರಿಶ್ರಮ. ಸಾಧನೆಗಳೇ ಒಂದು ಪುಸ್ತಕ ರೂಪದಲ್ಲಿ ಹೊರ ಬಂದರೂ ಸಚಿವ ಸ್ಥಾನ ಮಾತ್ರ ಸಿಗಲಿಲ್ಲ!

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಚಿವ ಸ್ಥಾನ ಕಳೆದು ಕೊಂಡಿದ್ದಾರೆ. ಸುರೇಶ್ ಕುಮಾರ್ ಎರಡು ವರ್ಷದಲ್ಲಿ ಮಾಡಿದ ಸಾಧನೆಗಳ ಪೈಕಿ ಒಂದನ್ನೂ ಹೈಕಮಾಂಡ್ ಪರಿಗಣಿಸಿದಂತೆ ಕಾಣುತ್ತಿಲ್ಲ. ಕೊರೊನಾ ಬಂದ ದಿನದಿಂದಲೂ ಮೊನ್ನೆ ಪಿಯುಸಿ ಫಲಿತಾಂಶ ಬರುವ ತನಕ ಒಂದಲ್ಲಾ ಒಂದು ರೂಪದಲ್ಲಿ ಸುದ್ದಿಕೇಂದ್ರದಲ್ಲಿದ್ದ ಏಕೈಕ ಸಚಿವರು. ಇವರ ಅನುಭವ ಮತ್ತು ಪ್ರತಿಭೆ ಗುರುತಿಸಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಶಿಕ್ಷಣ ಖಾತೆಯನ್ನು ನೀಡಿದ್ದರು. ಜತೆಗೆ ರಾಜ್ಯದ ಅತಿ ಹಿಂದುಳಿದ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನೀಡಿದ್ದರು.

ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ

ಎರಡು ಕ್ಷೇತ್ರದಲ್ಲಿ ಎರಡು ವರ್ಷ ಮಾಡಿದ ಅಭೂತ ಪೂರ್ವ ಸೇವೆಗೆ ಆದ್ಯತೆ ನೀಡದ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನ ಕಸಿದುಕೊಂಡಿದ್ದಾರೆ. ಸಚಿವ ಸ್ಥಾನದಿಂದ ನಿರ್ಗಮನ ಖಾಯಂ ಆಗುತ್ತಿದ್ದಂತೆ "ಎರಡು ವರ್ಷ ನನಗೆ ಸಹಕರಿಸಿದ ಎಲ್ಲರಿಗೂ ಹುತ್ಪೂರ್ವಕ ಧನ್ಯವಾದಗಳು" ಎಂದು ಸುರೇಶ್ ಕುಮಾರ್ ನೆನಪಿಸಿಕೊಂಡಿದ್ದಾರೆ.

ಸುರೇಶ್ ಕುಮಾರ್ ಅವರ ಅಭಿಮಾನಿ ಬಳಗ "ಖಾಸಗಿ ಶಿಕ್ಷಣ ಮಾಫಿಯಾ ಸಚಿವ ಸ್ಥಾನವನ್ನು ಕಸಿದುಕೊಂಡಿತು' ಎಂಬ ಅಭಿಪ್ರಾಯಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದೆ.

ಇದ್ದಿರಲೂಬಹುದು. ಶಿಕ್ಷಣ ಸಚಿವರು ಮಾಡಿರುವ ಎಲ್ಲಾ ಸಂಗತಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಅರ್‌ಎಸ್‌ಎಸ್‌ ನಾಯಕರಿಗೆ ತಿಳಿಸಿರಬಹುದು. ದಾಖಲೆಗಳ ಸಮೇತ ದೂರು ನೀಡಿರಬಹುದು. ಅಂತೂ ಎಲ್ಲರನ್ನೂ ಪಾಸು ಮಾಡವ ಷರತ್ತು ವಿಧಿಸಿ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿ ದಾಖಲೆ ಸೃಷ್ಟಿಸಿದ ಮಾಜಿ ಸಚಿವ ಸುರೇಶ್ ಕುಮಾರ್‌ಗೆ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಿಸುವ ಭಾಗ್ಯ ಸಿಗಲಿಲ್ಲ. ಈ ಬೇಸರ ಶಿಕ್ಷಣ ಸಚಿವರಿಗೂ ಕಾಡುತ್ತಿರಬಹುದು.

ಕೊರೊನಾ ಪರಿಹಾರ 5000 ರೂ. ಪಡೆಯಲು ಶಿಕ್ಷಕರು ಏನು ಮಾಡಬೇಕು?ಕೊರೊನಾ ಪರಿಹಾರ 5000 ರೂ. ಪಡೆಯಲು ಶಿಕ್ಷಕರು ಏನು ಮಾಡಬೇಕು?

ಆದರೆ, ಸುರೇಶ್ ಕುಮಾರ್ ಮಾಡಿರುವ ಎಡವಟ್ಟು ತೀರ್ಮಾನಗಳಿಂದ ಶಾಲೆಗಳು ಹೈರಾಣ ಆಗಿವೆ. ಶಿಕ್ಷಣ ವ್ಯವಸ್ಥೆಯೂ ಮಲಗಿದೆ. ಕೊರೊನಾ ಸೋಂಕು ಪೂರ್ಣ ನಿರ್ನಾಮ ವಾದರೂ ಉದ್ಭಸಿರುವ ಸಮಸ್ಯೆಗಳು ಕೊರೊನಾ ಸೋಂಕು ಮುಗಿದರೂ ಶಿಕ್ಷಣ ಕ್ಷೇತ್ರ ಚೇತರಿಸಿಕೊಳ್ಳುವುದಿಲ್ಲ. ಎಂದು ಕ್ಯಾಮ್ಸ್ ಕರ್ನಾಟಕ ಸಂಘಟನೆ ಟ್ವೀಟ್ ಮಾಡಿದೆ.

ಸುರೇಶ್ ಕುಮಾರ್ ಕೊಟ್ಟ ಉಡುಗೊರೆಗಳು

ಸುರೇಶ್ ಕುಮಾರ್ ಕೊಟ್ಟ ಉಡುಗೊರೆಗಳು

ಸಚಿವ ಸ್ಥಾನ ಕಳೆದುಕೊಂಡ ಬೇಸರದಲ್ಲಿ ಸುರೇಶ್ ಕುಮಾರ್ ಇದ್ದಾರೆ. ಆದರೆ, ಸುರೇಶ್ ಕುಮಾರ್ ಮಾಡಿರುವ ಎಡವಟ್ಟು ತೀರ್ಮಾನಗಳಿಂದ ಉದ್ಭವಿಸಿರುವ ಸಮಸ್ಯೆಗಳು ಕೊರೊನಾ ಸಂಪೂರ್ಣ ವಾಸಿಯಾಗಿ ಹತ್ತು ವರ್ಷವಾದರು ಬೇಕು ಎನ್ನುತ್ತಾರೆ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು. ಸುರೇಶ್ ಕುಮಾರ್ ಮೇಲ್ನೋಟಕ್ಕೆ ಜನಪರ ಎಂದು ಬಿಂಬಿಸುತ್ತಾರೆ. ಆದರೆ ಶೈಕ್ಷಣಿಕ ವಿಚಾರವಾಗಿ ಅವರು ತೆಗೆದುಕೊಂಡ ತೀರ್ಮಾನಗಳು ಪೋಷಕರಿಗೆ ಒಳಿತಾಗಿಲ್ಲ. ಖಾಸಗಿ ಶಾಲೆಗಳಿಗೂ ನೆರವಾಗಲಿಲ್ಲ. ಇನ್ನು ಸರ್ಕಾರಿ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲಿಲ್ಲ ಎಂಬ ಅಪವಾದಗಳು ಕೇಳಿಬರುತ್ತಿವೆ.

ಶುಲ್ಕ ವಸೂಲಿಗೂ ಆದೇಶ: ಪೋಷಕರಿಗೂ ನೆರವು

ಶುಲ್ಕ ವಸೂಲಿಗೂ ಆದೇಶ: ಪೋಷಕರಿಗೂ ನೆರವು

ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶುಲ್ಕ ವಿವಾದ ರಾಜ್ಯದಲ್ಲಿ ಭುಗಿಲೆದ್ದಿತು. ನಾನು ಜನಪರ ಕಾಳಜಿ ವಹಿಸುವವ ಎಂದು ಶಾಲಾ ಶುಲ್ಕವನ್ನು ಮಾತ್ರ ವಸೂಲಿ ಮಾಡಬೇಕು. ಅದರಲ್ಲಿ ಶೇ.30 ರಷ್ಟು ರಿಯಾಯಿತಿ ನೀಡಬೇಕು ಎಂದು ಸುರೇಶ್ ಕುಮಾರ್ ತೀರ್ಮಾನ ತೆಗೆದುಕೊಂಡಿದ್ದರು. ಒಟ್ಟಾರೆ ಶುಲ್ಕದಲ್ಲಿ ಶೇ. 20 ರಷ್ಟು ಶುಲ್ಕದಲ್ಲಿ ವಿನಾಯಿತಿ ನೀಡತ್ತೇವೆ ಎಂಬ ಶಾಲೆಗಳ ಪ್ರಸ್ತಾಪವನ್ನು ಸಚಿವರು ನಿರಾಕರಿಸಿದರು. ಇದರಿಂದ ರೊಚ್ಚಿಗೆದ್ದ ಖಾಸಗಿ ಆಡಳಿತ ಮಂಡಳಿಗಳು ಶಿಕ್ಷಣ ಸಚಿವರ ತೀರ್ಮಾನ ವಿರುದ್ಧ ಹೈಕೋರ್ಟ್ ಮೊರೆ ಹೋದರು.

ಹೀಗಾಗಿ ಮಧ್ಯಮ ವರ್ಗದ ಶಾಲೆಗಳು ಮಾತ್ರ ಶುಲ್ಕ ರಿಯಾಯಿತಿ ನೀಡಿದವರು. ಸಿಬಿಎಸ್ ಐ , ಐಸಿಎಸ್ ಸಿ ಕಾರ್ಪೋರೇಟ್ ಶಾಲೆಗಳು ಎಂದಿನಂತೆ ಶುಲ್ಕ ವಸೂಲಿ ಮಾಡಿದರೂ ಏನೂ ಕ್ರಮ ಜರುಗಿಸದೇ ವಿಫಲರಾದರು. ವೈಜ್ಞಾನಿಕ ತೀರ್ಮಾನ ಕೈಗೊಳ್ಳದ ಕಾರಣ ಶುಲ್ಕ ರಿಯಾಯಿತಿ ಗೊಂದಲ ಇಂದಿಗೂ ಬೂದಿ ಮುಚ್ಚಿದ ಕೆಂಡತಂದೆ ಮುಂದುವರೆಯಿತು.

ವಿದ್ಯಾಗಮ, ದೂರದರ್ಶನ ಪಾಠ ಪ್ರಚಾರಕ್ಕೆ ಸೀಮಿತ

ವಿದ್ಯಾಗಮ, ದೂರದರ್ಶನ ಪಾಠ ಪ್ರಚಾರಕ್ಕೆ ಸೀಮಿತ

ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಗಮ, ದೂರದರ್ಶನದಿಂದ ಪಾಠ ಎಂದು ದೊಡ್ಡ ಮಟ್ಟದಲ್ಲಿ ಶಿಕ್ಷಣ ಸಚಿವರು ಪ್ರಚಾರ ಮಾಡಿದರು. ವಾಸ್ತವದಲ್ಲಿ ಲಕ್ಷಾಂತರ ಮಂದಿ ಶಾಲೆಯಿಂದ ಹೊರಗೆ ಉಳಿದರು. ಬರೀ ಮಾಧ್ಯಮ ಹೇಳಿಕೆಗಳಿಂದ ಯೋಜನೆ ಜಾರಿಗೊಳಿಸಲು ಮುಂದಾದರು. ಮಕ್ಕಳು ಶಾಲೆಯಿಂದ ದೂರ ಉಳಿದಿದ್ದು, ಇದೀಗ ಹೈಕೋರ್ಟ್ ಎಲ್ಲಾ ಮಕ್ಕಳ ದಾಖಲಾತಿ ಮಾಡಿರುವ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸುವಂತಾಯಿತು. ವಿದ್ಯಾಗಮ, ದೂರದರ್ಶನ ಪಾಠ ಕೇವಲ ಪ್ರಚಾರಕ್ಕೆ ಸೀಮಿತವಾಯಿತು. ಸರ್ಕಾರಿ ಮಕ್ಕಳಿಗೆ ಆನ್‌ಲೈನ್ ಘೋಷಣೆ ಮಾಡಿದರೆ ವಿನಃ ಯಾವ ಮೂಲ ಸೌಲಭ್ಯ ಇಲ್ಲದ ಸರ್ಕಾರಿ ಶಾಲೆಗಳಲ್ಲಿ ಆನ್‌ ಲೈನ್ ಪಾಠ ಶಿಸ್ತುಬದ್ಧವಾಗಿ ಜಾರಿಮಾಡಲಾಗಲಿಲ್ಲ ಎಂಬುದರಲ್ಲಿ ಹುರಳಿಲ್ಲ.

ಕೋವಿಡ್ ನಿರ್ವಹಣೆ ಮುಂದಾಲೋಚನೆ ಇಲ್ಲ

ಕೋವಿಡ್ ನಿರ್ವಹಣೆ ಮುಂದಾಲೋಚನೆ ಇಲ್ಲ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೋವಿಡ್ ನಿರ್ವಹಣೆ ಕೇವಲ ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದು ಎಂಬಂತೆ ಬಿಂಬಿಸಿಕೊಂಡರು. ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾದ ವಿಶೇಷ ಊರುಗಳಿಗೆ ಭೇಟಿ ಮಾಡಿ ರಾಜ್ಯದ ಗಮನ ಸೆಳೆದರೇ ಹೊರತು ಮಕ್ಕಳ ರಕ್ಷಣೆ, ಸಂಕಷ್ಟಕ್ಕೆ ಒಳಗಾಗರುವ ಶಿಕ್ಷಣದ ವ್ಯವಸ್ಥೆ ಸರಿ ಪಡಿಸುವತ್ತ ಚಿತ್ತ ಹರಿಸಲಿಲ್ಲ. ಹೀಗಾಗಿ ಒಂದೂವರೆ ವರ್ಷದಿಂದ ಶಾಲೆಗಳು ತೆಗೆಯದಿದ್ದರೂ, ಕನಿಷ್ಠ ಪಕ್ಷ ಕೊರೊನಾದಿಂದ ಎದುರಾಗಲಿರುವ ಸಮಸ್ಯೆ ಎದುರಿಸಲು ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಪ್ರಗತಿಗಾಗಲೀ, ಅಭಿವೃದ್ಧಿಗಾಗಲೀ ಶ್ರಮಿಸಲೇ ಇಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ನೆರವಿಗೆ ದಾವಿಸಲಿಲ್ಲ. ಖಾಸಗಿ ಶಾಲೆ ಶಿಕ್ಷಕರು ಬೀದಿಗೆ ಇಳಿದು ಹೋರಾಟ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಧ್ಯ ಪ್ರವೇಶಿಸಿ ತಲಾ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದರು.

ಆಕ್ಸಿಜನ್ ವಿವಾದದಲ್ಲಿ ಮಾರಣ ಹೋಮ

ಆಕ್ಸಿಜನ್ ವಿವಾದದಲ್ಲಿ ಮಾರಣ ಹೋಮ

ಬಿಜೆಪಿ ಸಚಿವ ಸಂಪುಟದಲ್ಲಿ ಅತಿ ಹಿರಿಯ, ಪ್ರಜ್ಞಾವಂತ ಸಚಿವರು ಎಂಬ ಖ್ಯಾತಿ ಗಳಿಸಿದ್ದ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆ ಉಸ್ತುವಾರಿ ವಹಿಸಿದ್ದರು. ಆದರೆ ಆಕ್ಸಿಜನ್ ಬಿಕ್ಕಟ್ಟಿನಿಂದ ನಡೆದ ಮಾರಣ ಹೋಮದಿಂದ ಇಡೀ ರಾಜ್ಯ ಬಿಜೆಪಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ತಲೆ ತಗ್ಗಿಸುವ ಘಟನೆಗೆ ಸಾಕ್ಷಿ ಆಯಿತು. ಒಬ್ಬ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡುವ ಶಕ್ತಿಯಿದ್ದರೂ ಅದನ್ನು ನಿರ್ವಹಣೆ ಮಾಡಲಿಲ್ಲ. ಪದೇ ಪದೇ ಚಾಮರಾಜನಗರಕ್ಕೆ ಭೇಟಿ ಮಾಡಿ ಅಧಿಕಾರಿಗಳ ಸಭೆ ನಡೆಸಿದರೂ ಕಾರ್ಯಗತ ಮಾಡುವಲ್ಲಿ ಸುರೇಶ್ ಕುಮಾರ್ ಎಡವಿ ಬಿದ್ದರು.

ಆರ್.ಆರ್. ನೋಂದಣಿ ಹೆಸರಿನಲ್ಲಿ ಭ್ರಷ್ಟಾಚಾರ

ಆರ್.ಆರ್. ನೋಂದಣಿ ಹೆಸರಿನಲ್ಲಿ ಭ್ರಷ್ಟಾಚಾರ

ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಖಾಸಗಿ ಶಾಲೆಗಳು ನೋಂದಣಿ ಪ್ರಕ್ರಿಯೆ ಮಾಡಿಸಲೇಬೇಕೆಂಬ ಸುತ್ತೋಲೆ ಹೊರಡಿಸಿದರು. ಆರ್.ಆರ್. ನೀಡಬೇಕಾದರೆ ಅಗ್ನಿ ಸುರಕ್ಷತಾ ಹಾಗೂ ಕಟ್ಟಡ ಗುಣಮಟ್ಟ ಸುರಕ್ಷತಾ ನಿಯಮ ಪಾಲಿಸಬೇಕು ಎಂಬ ಷರತ್ತುಗಳನ್ನು ಖಾಸಗಿ ಶಾಲೆಗಳಿಗೆ ಸೀಮಿತಗೊಳಿಸಿದರು. ಇದನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ನಾಂದಿ ಹಾಡಿತು. ಹೀಗಾಗಿ ಇಡೀ ಖಾಸಗಿ ಶಾಲೆ ಮತ್ತು ಶಿಕ್ಷಕ ಸಮುದಾಯ ಶಿಕ್ಷಣ ಸಚಿವರ ಆಡಳಿತ ನೀತಿಯ ವಿರುದ್ಧ ತಿರುಗಿ ಬಿದ್ದಿದ್ದು ವಾಸ್ತವ. ಆರ್.ಆರ್. ನೋಂದಣಿ ಹೆಸರಿನಲ್ಲಿ ಖಾಸಗಿ ಶಾಲೆಗಳಿಂದ ವಸೂಲಿಗೆ ಹಾದಿ ಮಾಡಿಕೊಟ್ಟರು ಎಂಬ ಆರೋಪಕ್ಕೆ ಗುರಿಯಾಗಬೇಕಾಯಿತು. ಪ್ರಾಮಾಣಕ ಸಚಿವರು ಮಾಡಿದ ಆದೇಶವೇ ಅಧಿಕಾರಿಗಳಿಗೆ ಬಂಡವಾಳವಾಯಿತು.

ಆರ್‌ಟಿಇ ಹಣ ಮರು ಪಾವತಿ ಮಾಡಲೇ ಇಲ್ಲ

ಆರ್‌ಟಿಇ ಹಣ ಮರು ಪಾವತಿ ಮಾಡಲೇ ಇಲ್ಲ

ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಶಾಲೆಗಳ ರಕ್ಷಣೆ ವಿಚಾರದಲ್ಲಿ ಕನಿಷ್ಠ ಆರ್‌ಟಿಇ ಶುಲ್ಕ ಬಿಡುಗಡೆ ಮಾಡಬೇಕಿತ್ತು. ಇನ್ನೂ ಸಹ ಖಾಸಗಿ ಶಾಲೆಗಳಲ್ಲಿ ಓದಿದ ಆರ್‌ಟಿಇ ಮಕ್ಕಳ ಶುಲ್ಕ ಪಾವತಿಗೆ ಅನುಮೋದನೆ ನೀಡಲಿಲ್ಲ. ಇದರಿಂದ ಅನೇಕ ಶಾಲೆಗಳು ಸಂಕಷ್ಟಕ್ಕೆ ಒಳಗಾದವು. ಹಣ ವಿದ್ದರೂ ಬಿಡುಗಡೆ ಮಾಡದೇ ಅನುಸರಿಸಿದ ವಿಳಂಬ ನೀತಿಯಿಂದ ಶಿಕ್ಷಣ ಸಚಿವರು ಟೀಕೆಗೆ ಗುರಿಯಾಗಬೇಕಾಯಿತು.

ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿಲ್ಲ

ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿಲ್ಲ

ರಾಜ್ಯದಲ್ಲಿ ಪಠ್ಯ ಪುಸ್ತಕ ಸರಿಯಿಲ್ಲ ಎಂದು National Council of Educational Research and Training ಸಂಸ್ಥೆ ಹೇಳಿ ಐದು ವರ್ಷ ಕಳೆದರೂ ಪಠ್ಯ ಕ್ರಮ ಪರಿಷ್ಕರಣೆ ಮಾಡಲಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತುದಿಗಾಲಲ್ಲಿ ನಿಂತಿರುವ ರಾಜ್ಯದಲ್ಲಿ ಬಹು ಮುಖ್ಯವಾಗಿ ಆಗಬೇಕಿದ್ದ ಪಠ್ಯ ಕ್ರಮ ಬದಲಾಗಲೇ ಇಲ್ಲ. ಒಂದೂವರೆ ವರ್ಷ ಕೊರೊನಾ ಸಮಯವೇ ಪಠ್ಯಕ್ರಮ ಪರಿಷ್ಕರಣೆಗೆ ಸೂಕ್ತವಾಗಿತ್ತು. ಕನಿಷ್ಠ ಒಂದು ಸಮಿತಿ ರಚಿಸಿ ಪರಿಷ್ಕರಣೆಗೆ ಮುಂದಾಗಲಿಲ್ಲ. ವಿಪರ್ಯಾಸವೆಂದರೆ ಎರಡು ವರ್ಷದಿಂದ ಸರಿಯಾಗಿ ಪಠ್ಯ ಪುಸ್ತಕಗಳು ವಿತರಣೆಯೂ ಆಗಲಿಲ್ಲ.

ಕೊನೆಯಲ್ಲೂ ಬಾಂಬ್ ಹಾಕಿ ನಿರ್ಗಮನ

ಕೊನೆಯಲ್ಲೂ ಬಾಂಬ್ ಹಾಕಿ ನಿರ್ಗಮನ

ರಾಜ್ಯದಲ್ಲಿರುವ ಕನ್ನಡ ಶಾಲೆಗಳಲ್ಲಿ ಪಸ್ತಾವನೆ ಮೇರೆಗೆ ಆಂಗ್ಲ ಮಾಧ್ಯಮವನ್ನು ತೆರೆಯುವಂತೆ ಆದೇಶ ಹೊರಡಿಸಿ ಶಿಕ್ಷಣ ಸಚಿವರು ತಮ್ಮ ಸ್ಥಾನದಿಂದ ನಿರ್ಗಮಿಸಿದ್ದಾರೆ. ಇದೀಗ ರಾಜ್ಯದಲ್ಲಿರುವ 40 ಸಾವಿರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಾಲೆಗಳಿವೆ. ಸುಮಾರು ಐವತ್ತು ಸಾವಿರ ಶಿಕ್ಷಕರ ಕೊರತೆ ಎದುರಿಸುತ್ತಿದ್ದಾರೆ. ಒಬ್ಬ ಶಿಕ್ಷಕರಿಂದ ಒಂದು ಶಾಲೆ ನಡೆಯುತ್ತಿರುವ ಅನೇಕ ಉದಾಹರಣೆಗಳಿವೆ. ಆಂಗ್ಲ ಭಾಷೆ ಬೋಧನೆಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೇ ಇದೀಗ ಆಂಗ್ಲ ಮಾಧ್ಯಮ ತೆರೆಯುವ ಕಸರತ್ತು ಶಿಕ್ಷಣ ಇಲಾಖೆ ಆರಂಭಿಸಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆಂಗ್ಲ ಭಾಷೆಯನ್ನು ಪ್ರಾಥಮಿಕ ಹಂತದಲ್ಲಿಯೇ ಒಂದು ಭಾಷೆಯನ್ನಾಗಿ ಅಳವಡಿಸಲು ಬಹುತೇಕರು ವಿರೊಧಿಸಿ ಕನ್ನಡ ಪ್ರೇಮ ಮೆರೆದಿದ್ದರು. ಇದೀಗ ಶಿಕ್ಷಕರೇ ಈಲ್ಲದೇ ಆಂಗ್ಲ ಮಾಧ್ಯಮ ಶಾಲೆಗಳ ತೆರೆಯಲು ಸೂಚಿಸಿ ನಿರ್ಗಮಿಸಿದ್ದಾರೆ. ಯಾವ ಪೂರ್ವ ತಯಾರಿ ಇಲ್ಲದೇ ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಹೊರಟಿದೆ.

ಎಲ್ಲರೂ ಪಾಸಾಗುವ ಷರತ್ತಿನೊಂದಿಗೆ ಪರೀಕ್ಷೆ

ಎಲ್ಲರೂ ಪಾಸಾಗುವ ಷರತ್ತಿನೊಂದಿಗೆ ಪರೀಕ್ಷೆ

ಕೋವಿಡ್ ನಿಂದ ಶಾಲೆಗಳು ನಡೆಯಲಿಲ್ಲ. ಹೀಗಾಗಿ ಪಿಯುಸಿ ಮಕ್ಕಳ ಪರೀಕ್ಷೆ ರದ್ದು ಮಾಡಿ ಉದಾರತೆ ಮರೆದ ಶಿಕ್ಷಣ ಸಚಿವರು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿ ದಾಖಲೆ ನಿರ್ಮಿಸಿದರು. ಕೋವಿಡ್ ಕಾಲದಲ್ಲೂ ಆರು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು. ಕೊನೆ ಹಂತದಲ್ಲಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರಿಚಯಿಸಿದರು. ಅನುತ್ತೀರ್ಣ ಮಾಡದ ಮೇಲೆ ಪರೀಕ್ಷೆ ಮಾಡಿ ನೂರಾರು ಕೋಟಿ ವೆಚ್ಚ ಮಾಡಿದ್ದು ಯಾಕೆ ಎಂಬುದಕ್ಕೆ ಈಗಲೂ ಉತ್ತರ ಸಿಕ್ಕಿಲ್ಲ. ವಿಪರ್ಯಾಸವೆಂದರೆ ಪರೀಕ್ಷೆ ನಡೆಸಿ ಯಶಸ್ಸು ಸಾಧಿಸಿದ್ದ ಸುರೇಶ್ ಕುಮಾರ್ ಫಲಿತಾಂಶವನ್ನು ಪ್ರಕಟಿಸಲಾಗದೇ ಹೊರನಡೆಯುತ್ತಿರುವುದು ಮಾತ್ರ ಎಲ್ಲರಿಗೂ ಬೇಸರ ತರಿಸಿದೆ.

English summary
Ex Education Minister S. Suresh Kumar contribution for Education sector: know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X