keyboard_backspace

ವಿಪಕ್ಷಗಳ ಸಭಾತ್ಯಾಗದ ಮಧ್ಯೆ ವಿಧಾನ ಪರಿಷತ್‌ನಲ್ಲಿ ಮಹತ್ವದ ವಿಧೇಯಕ ಪಾಸ್!

Google Oneindia Kannada News

ಬೆಂಗಳೂರು, ಸೆ. 17: ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗದ ನಡುವೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ'ವನ್ನು ವಿಧಾನ ಪರಿಷತ್‌ ಅಂಗೀಕರಿಸಿದೆ.

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಮಂಡಿಸಿದ್ದರು. ವಿಧೇಯಕದ ಮೇಲೆ ಮಾತನಾಡಿದ ವಿರೋಧ ನಾಯಕ ಎಸ್.ಆರ್. ಪಾಟೀಲ್ ಅವರು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿದರು.

ವಿಧೇಯಕದ ಕುರಿತು ಮಾತನಾಡಿದ ಎಸ್‌.ಆರ್. ಪಾಟೀಲ್, "ವಿಧೇಯಕಕ್ಕೆ ನಮ್ಮ ವಿರೋಧವಿದೆ, ಚುನಾವಣಾ ಆಯೋಗಕ್ಕೆ ನೀಡಿದ ಅಧಿಕಾರ ವಾಪಸ್ ಪಡೆದರೆ ಹೇಗೆ? ಇದರಿಂದ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಮನಸ್ಸೋ ಇಚ್ಛೆ ಆಗಲಿದೆ, ಸಂವಿಧಾನದಲ್ಲಿ ಪಾರದರ್ಶಕ ಕೆಲಸಕ್ಕೆ ಚುನಾವಣಾ ಆಯೋಗಗಳನ್ನು ರಚಿಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಅಧಿಕಾರ ವಾಪಸ್ ಪಡೆಯುತ್ತಿರುವುದು ಸರಿಯಲ್ಲ" ಎಂದರು.

ಚುನಾವಣಾ ಆಯೋಗವನ್ನೇ ತೆಗೆದು ಬಿಡಿ!

ಚುನಾವಣಾ ಆಯೋಗವನ್ನೇ ತೆಗೆದು ಬಿಡಿ!

ಐಟಿ, ಇಡಿ, ಸಿಬಿಐ, ಚುನಾವಣಾ ಆಯೋಗ, ನ್ಯಾಯಾಲಯ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳು, ಇಂತಹ ಸಂಸ್ಥೆಗಳ ಅಧಿಕಾರ ವಾಪಸ್ ಪಡೆಯುವುದು ಸರಿಯಲ್ಲ. ರಾಜ್ಯ ಚುನಾವಣಾ ಆಯೋಗದ ಮೇಲೆ ನಮಗೆ ನಂಬಿಕೆ ಇದೆ. ಅವರು ಕ್ಷೇತ್ರ ವಿಂಗಡಣೆ ಮಾಡುತ್ತಿದ್ದು, ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಕೆಲಸ ಮಾಡುತ್ತಿದ್ದಾರೆ, ಅದನ್ನು ನಿಮ್ಮ ಅಧೀನದ ಸಮಿತಿಗೆ ಕೊಟ್ಟರೆ ನೀವು ಹೇಳಿದಂತೆ ಸಮಿತಿ ಮಾಡಿ ಕೊಡಲಿದೆ. ಅಲ್ಲಿಗೆ ಅಧಿಕಾರವನ್ನು ಸರ್ಕಾರವೇ ನೇರವಾಗಿ ಪಡೆದಂತಾಗಲಿದೆ. ಹಾಗಾದರೆ ಚುನಾವಣಾ ಆಯೋಗವನ್ನೇ ತೆಗೆದುಬಿಡಿ" ಎಂದು ಎಸ್‌.ಆರ್‌. ಪಾಟೀಲ್ ಟೀಕಿಸಿದರು.

ಜೊತೆಗೆ, "ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳ ದುರ್ಬಳಕೆ ಈಗ ಆಗುತ್ತಿದೆ. ಸಂವಿಧಾನಾತ್ಮಕ ಸಂಸ್ಥೆಗಳ ಕಾಲು, ಕೈ, ಕುತ್ತಿಗೆ ತೆಗೆಯುವ ಕೆಲಸ ಮಾಡುತ್ತಿದ್ದೀರಿ, ಇದರ ಅಗತ್ಯವೇನು? ಮೀಸಲಾತಿ, ಮರುವಿಂಗಡಣೆ ಅವರು ಮಾಡಲಿ ಬಿಡಿ, ನೀವು ತಿದ್ದುಪಡಿ ಮೂಲಕ ಚುನಾವಣಾ ಆಯೋಗಕ್ಕೆ ಅಗೌರವ ತೋರುತ್ತಿದೆ, ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ, ನಾನಿಲ್ಲಿ ಬಂದಿರುವುದಕ್ಕೆ ಸಂವಿಧಾನದ ನಿಯಮವೇ ಕಾರಣ, ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದರೆ ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲ ಎನ್ನುವಂತಾಗಲಿದೆ ಹಾಗಾಗಿ ಈ ಬಿಲ್ ವಾಪಸ್ ಪಡೆಯಿರಿ" ಎಂದು ಎಸ್.ಆರ್. ಪಾಟೀಲ್ ಆಗ್ರಹಿಸಿದರು.

ಸರ್ಕಾರದ ಸಮಜಾಯಿಷಿ ಹೀಗಿತ್ತು!

ಸರ್ಕಾರದ ಸಮಜಾಯಿಷಿ ಹೀಗಿತ್ತು!

ವಿಧೇಯಕದ ಕುರಿತು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, "ಆಡಳಿತ ನಡೆಸುವವರು ಶಾಶ್ವತ ಅಲ್ಲ, ಸಾಂವಿಧಾನಿಕ ಸಂಸ್ಥೆಗಳು ಶಾಶ್ವತ, ಹಾಗಾಗಿ ಇವನ್ನು ಉಳಿಸಬೇಕಿದೆ.‌ ನಾನು ಮಾಧುಸ್ವಾಮಿ ಅವರಲ್ಲಿ ನಜೀರ್ ಸಾಬ್ ಅವರನ್ನು ಕಾಣುತ್ತಿದ್ದೇನೆ. ನಿಮ್ಮ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳ ಬಲಪಡಿಸದೇ ಇದ್ದಲ್ಲಿ ಯಾರಿಂದ ನಂಬಲಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸಿಎಂ ಬೊಮ್ಮಾಯಿ ಸಮಾಜವಾದಿ ಹಿನ್ನಲೆಯವರು. ನಾವು ನಿಮ್ಮಿಂದ ಒಳ್ಳೆಯದನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ನನ್ನಲ್ಲಿ ನಜೀರ್ ಸಾಬ್ ಅವರನ್ನು ನೋಡುತ್ತಿದ್ದೀರಿ, ಅಂದು ನಜೀರ್ ಸಾಬ್ ಅವರಿಗೂ ಇದೇ ಸ್ಥಿತಿ ಇತ್ತು. ಹೆಗಡೆ ಕಾಲದಲ್ಲಿ ನಜೀರ್ ಸಾಬ್ ಇದೇ ಸ್ಥಿತಿಯಲ್ಲಿದ್ದರು. ಮೀಸಲಾತಿಗೂ ಚುನಾವಣಾ ಆಯೋಗಕ್ಕೂ ಸಂಬಂಧ ಇಲ್ಲ. ಯಾರಾದರೂ ಒಬ್ಬರು ದೂರು ಕೊಟ್ಟರೆ ಪರಿಶೀಲಿಸಬೇಕು. ಉತ್ತರ ಹೇಳಬೇಕಲ್ಲವೇ? ತಕರಾರು ಬಂದಾಗ ನ್ಯಾಯ ಒದಗಿಸಿಕೊಡಬೇಕಲ್ಲವೇ? ಒಬ್ಬ ಸಮಿತಿ ಬದಲು ಹಲವು ಸದಸ್ಯರನ್ನು ಒಳಗೊಂಡ ಅಡಾಕ್ ಸಮಿತಿ ರಚಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ನಜೀರ್ ಸಾಬ್ ಕಾಲದಲ್ಲಿ ಏನಿತ್ತೋ ಅದನ್ನೇ ಸೇರಿಸಿದ್ದೇವೆ!

ನಜೀರ್ ಸಾಬ್ ಕಾಲದಲ್ಲಿ ಏನಿತ್ತೋ ಅದನ್ನೇ ಸೇರಿಸಿದ್ದೇವೆ!

ಈ ಬಾರಿ ಕ್ಷೇತ್ರ ಮರುವಿಂಗಡಣೆ ನಿರೀಕ್ಷೆ ಇರಲಿಲ್ಲ, ಹೊಸ ಜನಸಂಖ್ಯೆ ಗಣತಿ ನಂತರ ಮಾಡಬೇಕು, 2022 ಕ್ಕೆ ನಿರೀಕ್ಷೆ ಮಾಡಿದ್ದೆವು ಆದರೆ ಈಗಲೇ ಮಾಡುತ್ತಿದ್ದಾರೆ. ಅವೈಜ್ಞಾಕವಾಗಿ ಮರು ವಿಂಗಡಣೆ ಮಾಡಲಾಗಿದೆ. ಇದರಿಂದ ತಕರಾರು ಅರ್ಜಿ ಹೆಚ್ಚಾಗುತ್ತಿವೆ. ಹೀಗಾದಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೆಗಡೆ, ನಜೀರ್ ಸಾಬ್, ದೇವೇಗೌಡ ಕಾಲದಲ್ಲಿ ಏನಿತ್ತೋ, ಅದನ್ನೇ ನಾವು ಈಗ ವಿಧೇಯಕದಲ್ಲಿ ಸೇರಿಸಿದ್ದೇವೆ. ಬೇರೆ ಏನಿಲ್ಲ. ಚುನಾವಣೆ ಆಯೋಗವೇ ಚುನಾವಣೆ ಮಾಡಲಿದೆ, ಚುನಾವಣಾ ಆಯೋಗ ಮೀಸಲಾತಿ ಮಾಡಲು ಸಾಧ್ಯವಿಲ್ಲ. ಅದನ್ನು ಸರ್ಕಾರವೇ ಕೊಡುವುದು. ಹಳೆ ಜಿಲ್ಲಾ ಪರಿಷತ್ ಕಾಯ್ದೆ ಇದ್ದಲ್ಲಿಗೆ ಹೋಗಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ವಿಧೇಯಕವನ್ನು ಸಮರ್ಥಿಸಿಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ವೆಂಕಟೇಶ್, "ಕೋರ್ಟ್ ಗೆ ಹೋಗುವ ಒಂದು ದಿನ ಮೊದಲು ಬರುತ್ತೀರಾ? ಹಿಂದೆ ಬಿಬಿಎಂಪಿ ಕಾಯ್ದೆಯ ವುಚಾರದಲ್ಲಿಯೂ ಹಾಗೆಯೇ ಮಾಡಿದಿರಿ ಆದರೆ ಇನ್ನೂ ಚುಮಾವಣೆ ಮಾಡಿಲ್ಲ, ಈಗ ಈ ಕಾಯ್ದೆ ತರುತ್ತಿದ್ದೀರಿ.ಇದೂ ಕೂಡ ಚುನಾವಣೆ ಮುಂದೂಡುವ ತಂತ್ರ" ಎಂದು ಟೀಕಿಸಿದರು.

ಪಂಚಾಯಿತಿ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ?

ಪಂಚಾಯಿತಿ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ?

ಕಾಂಗ್ರೆಸ್ ಸದಸ್ಯ, ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಮಾತ‌ನಾಡಿ ಈಗಿನ ಸರ್ಕಾರ ಬಂದಿದ್ದು ಹೇಗೆ ಗೊತ್ತು ಎಂದು ಆಪರೇಷನ್ ಕಮಲದ ಕುರಿತು ಪರೋಕ್ಷ ಪ್ರಸ್ತಾಪ ಮಾಡಿದರು. "ನಿಮ್ಮಲ್ಲಿ ಪೈಲ್ವಾನರು ಇರಲಿಲ್ಲ ಹಾಗಾಗಿ ನಮ್ಮಲ್ಲಿನ ಒಳ್ಳೆಯ ಪೈಲ್ವಾನರನ್ನು ಕರೆದುಕೊಂಡು ಹೋಗಿ ಗೆದ್ದಿರಿ. ಇದನ್ನೇ ಇಲ್ಲಿ ತರಲು ಹೊರಟಿದ್ದೀರಾ? ನೀವು ಹೇಳಿದಂತೆ ಕೇಳಬೇಕು. ಮೀಸಲಾತಿ ನಿಮಗೆ ಬೇಕಾದ ರೀತಿ ಮಾಡುತ್ತೀದ್ದೀರಿ. ಚುನಾವಣಾ ಗಿಮಿಕ್ ಸಲುವಾಗಿ ತರುತ್ತಿರುವ ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಚುನಾವಣೆ ಗೆಲ್ಲಲು ನೀವು ಇಂತಹ ಕೆಲಸ ಮಾಡುತ್ತಿದ್ದೀರಿ, ಚುನಾವಣೆ ಮುಂದೂಡಲು ಮುಂದಾಗಿದ್ದೀರಿ" ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಒಂದೂ ಕಾಲು ವರ್ಷಕ್ಕೆ ಮೈತ್ರಿ ಸರ್ಕಾರದ ಕಾಲೆಳೆದಿದ್ದೀರಿ ಎಂದು ಟಾಂಗ್ ನೀಡಿದರು. ಸರ್ಕಾರದ ನಿಲುವನ್ನು ಖಂಡಿಸಿದ ಜೆಡಿಎಸ್ ಸದಸ್ಯರು ಬಿಲ್ ವಿರೋಧಿಸಿ ಸಭಾತ್ಯಾಗ ಮಾಡಿದರು.

ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗದ ಮಧ್ಯೆ ವಿಧೇಯಕ ಅಂಗೀಕಾರ!

ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗದ ಮಧ್ಯೆ ವಿಧೇಯಕ ಅಂಗೀಕಾರ!

ಸುದೀರ್ಘ ಚರ್ಚೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು, "ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಲು ಈ ಕಾಯ್ದೆ ತರಲಾಗಿದೆ ಹಾಗಾಗಿ ಬಿಲ್ ಪಾಸ್ ಮಾಡಿಕೊಡಿ" ಎಂದು ಸದನಕ್ಕೆ ಮನವಿ ಮಾಡಿದರು.

ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ವಾಪಸ್ ಪಡೆಯುವ ನಿರೀಕ್ಷೆ ಇತ್ತು. ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಇವರಿಗೆ ನಂಬಿಕೆ ಇಲ್ಲ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಮುಂದೂಡುವ ಹುನ್ನಾರದಿಂದ ಈ ಬಿಲ್ ತರಲಾಗಿದೆ. ಸಂವಿಧಾನ ವಿರೋಧಿ ವಿಧೇಯಕ ಇದಾಗಿದೆ. ಹಾಗಾಗಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಸದನದಿಂದ ಹೊರನಡೆದರು. ಪ್ರತಿಪಕ್ಷಗಳ ಸಭಾತ್ಯಾಗ ಕುರಿತು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಮಧ್ಯಪ್ರವೇಶಿಸಿ ಆಯನೂರು ಕೈಹಿಡಿದು ಮಾತನಾಡದಂತೆ ಸಚಿವ ಮಾಧುಸ್ವಾಮಿ ನಿಲ್ಲಿಸಿದ್ದು ಕಂಡು ಬಂತು.

ನಂತರ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿಮತದ ಮೂಲಕ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು. ವಿಧೇಯಕ ಅಂಗೀಕಾರದ ಬಳಿಕ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆವರೆಗೆ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಮುಂದೂಡಿಕೆ ಮಾಡಿದರು.

English summary
Karnataka Legislative Council has approved the 'Karnataka Gram Swaraj and the Panchayat Raj Amendment Act. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X