ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಜುಕೇಷನ್ ಎಡವಟ್ಟು ! ಸೀರಿಯಸ್ ಜೋಕ್

By * ಇಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

ಪ್ರತಿ ವರ್ಷ ಜೂನ್ ತಿಂಗಳು ಬಂತೂಂದ್ರೆ ತಂದೆ ತಾಯಿಯರಿಗೆ ಆಗಾಗ್ಗೆ ಶಾಕ್ ಹೊಡೆಸಿಕೊಂಡು ಮೈಯೆಲ್ಲಾ ಜುಂ ಅನ್ನೋ ಟೈಮ್.

ಜೂನ್ ತಿಂಗಳು ಅಂದ್ರೆ ಸ್ಕೂಲು ಶುರು. ಅದಕ್ಕೆ ಮುಂಚೆ ಅವರಿವರ ಕೈಕಾಲು ಹಿಡಿದು, ಮಾನ ಬಿಟ್ಟು ಹಲ್ಲು ಕಿರಿದು ನಿಮ್ಮ ಸೂಲ್ಕ್ ಲಲ್ಲಿ ಸೀಟು ಕೊಡಿ ಅಂತ ಅಂಗಲಾಚುವ ಸಮಯ.

ಎಲ್‌ಕೆಜಿ ಸ್ಕೂಲಿಗೆ ಸೇರಿಸೋಣವೆಂದು ನಮ್ಮ ಪುಟ್ಟನ್ನ ಕರಕೊಂಡು ಹೋದ್ರೆ ಹೆಡ್ಮೇಡಮ್ ನನ್ನ ಮತ್ತು ಹೆಂಡ್ತೀನ ಇಂಟರ್ ವ್ಯೂಗೆ ಕರೆದ್ರು. 'ಚೆನ್ನಾಗಿ ಪ್ರಿಪೇರ್ ಮಾಡ್ಕೊಂಡ್ ಬನ್ನಿ. ನಿಮ್ಮ ಹುಡುಗನ ಫ್ಯೂಚರ್ ನಿಮ್ಮ ಪರ್ಫಾರ್‍ಮೆಂಸ್ ಮೇಲೆ ಹೋಗುತ್ತೆ' ಅಂದಾಗ ಇಬ್ಬರಿಗೂ ಪಕ್ಕದಲ್ಲೇ ಸಿಡಿಲು ಹೊಡೆದಂಗಾಯಿತು.

ನಮ್ಮ ನಮ್ಮ ಪರೀಕ್ಷೆ, ಕೆಲಸಗಳಿಗೇ ರಾತ್ರಿಯೆಲ್ಲಾ ಓದಿರಲಿಲ್ಲ. ಹೇಗೋ ಅದೂ ಇದೂ ಉರು ಹೊಡ್ದು ಕಂಬೈಂಡ್ ಸ್ಟಡಿ ಮಾಡಿದ್ವಿ.

ಹೆಡ್ಮೇಡಮ್ ರೂಮಿಗೆ ಹೋದಾಗ ಕಣ್ಣಿನಿಂದಲೇ ಕುರ್ಚಿಯ ಕಡೆ ಸನ್ನೆ ಮಾಡಿದರು. ಇನ್ನೂ ನರ್ವಸ್ ಆಯ್ತು; ಎದೆ ಡವಡವ ಹೊಡಕೊಳ್ತಿತ್ತು. ಬೆವರೂ ಸುರೀತಿತ್ತು.

ಅವರು ಕೇಳಿದ ಪ್ರಶ್ನೆ ಡೇಲ್ ಸ್ಟೈನ್ ಬೌನ್ಸರ್ ತರಹ ತಲೆ ಮೇಲೆ ಹಾರಿ ಹೋಯಿತು.

* ಒಸಾಮ ಬಿನ್ ಲಾಡೆನ್‌ನನ್ನು ಯಾವ ತಿಂಗಳಲ್ಲಿ ಅಮೇರಿಕನ್ನರು ಕೊಂದರು?
* ಒಬಾಮನ ಕೆಜಿ ಸ್ಕೂಲ್ಕ್ ನ ಹೆಸರು ಏನು?
* ಕಸಬ್ ಮಿಯಾ ಭಾರತದಲ್ಲಿ ಎಷ್ಟು ವರ್ಷದಿಂದ ಇದ್ದಾನೆ?
* ಐಸ್ಕ್ರೀಮ್ ನಲ್ಲಿ ಎಷ್ಟು % ಕೊಬ್ಬಿದೆ?
* 'ಊಲಾಲ, ಊಲಾಲ' ಹಾಡಿಗೆ ಯಾರ್‍ಯಾರು ಡ್ಯಾನ್ಸ್ ಮಾಡಿದ್ರು?

'ಇದೆಲ್ಲಾ ಬೇಕಾ' ಎಂದು ಇವಳು ಕೇಳಿದ್ದಕ್ಕೆ ಹೆಡ್ ಮೇಡಮ್ ರೊಚ್ಚಿಗೊಂಡು, ನಿಮ್ಮ ವಯಸ್ಸಿನವರಿಗೆ ಬೇಡದಿರಬಹುದು, ಮಕ್ಕಳು ಇದೆಲ್ಲಾ ಖಂಡಿತವಾಗಿ ಕೇಜಿಯಲ್ಲೇ ಕಲೀಬೇಕು. ಅದಿಲ್ದಿದ್ರೆ ಮುಂದೆ ಅವರೂ ನಿಮ್ಮ ಹಾಗೆ ಆಗ್ತಾರೇ ಅಂತ ಕೊಂಕು ನುಡಿದು ಕುಹಕ ನಗೆ ನಕ್ಕರು.

ಪರ್‍ವಾಗಿಲ್ಲ.. ನಾವು ತಿದ್ಕೋತೀವಿ. ಪುಟ್ಟನಿಗೆ ಅಡ್ಮಿಷನ್ ಕೊಡಿ ಅಂತ ಅಂಗಲಾಚಿದೆವು. ನೀವಿಬ್ಬರೂ ನೋಡಿದ್ರೆ ಬ್ರೈಟ್ ಪೇರೆಂಟ್ಸ್ ತರಾ ಕಾಣಿಸ್ತೀರಿ. ಸರಿ ಕೊಡ್ತೀನಿ ಅಂತು ಪುಣ್ಯಾತ್ಗಿತ್ತಿ.

ಫಾರ್ಮ್ ಫಿಲ್ ಮಾಡಿ ಫೀಸ್ ಕಟ್ಟಿ ಅಂದ್ರು. ನಮ್ಮಿಬ್ಬರಿಗೂ ಸ್ವರ್ಗ ಬರೀ ಮೂರೇ ಗೇಣು ಅನ್ನಿಸ್ತು; ಸ್ವಲ್ಪ ಹೊತ್ತಷ್ಟೆ. ಅಲ್ಲಿಂದ ಯಾರೋ ಕುತ್ತಿಗೆ ಹಿಡಿದು ತಳ್ಳಿದ ಹಾಗೆ ಆಯ್ತು.

ಪುಟ್ಟನ ಅಡ್ಮಿಷನ್ ಫೀಸ್ : ಎಲ್ಕೆಜಿ

ವರ್ಷದ ಫೀಸ್.... 25,000 ರು.
ಬಿಲ್ಡಿಂಗ್ ಫೀಸ್.... 30,000
ಫೌಂಡರಸ್ ಡೇ.....50,000
ಪುಸ್ತಕ...........20,000

ಇತರೆ:
ಷೂಸ್ (ನಾಲ್ಕು ಜೊತೆ)......5000
ಪ್ರಾಜೆಕ್ಟ್ ವರ್ಕ್...........2000
ಎಯ್ಡ್ಸ್ ರನ್............4000
ಗ್ರೀನ್ ರನ್.............4000
ಕಂಪ್ಯೂಟರ್ ಕ್ಲಾಸ್.........10,000

ಎಲ್ಲಾ ಸೇರಿ.......1,50,000/ ರುಪಾಯಿ.

ಪುಟ್ಟನ ಕೈಲಿ ಈ ವಯಸ್ಸಿನಲ್ಲೇ ಕೀಬೋರ್ಡ್ ಮತ್ತು ಮೌಸ್ ಹಿಡಿಯುವುದಕ್ಕೆ ಆಗುತ್ತಾ ಅಂತ ನಾನು ಅನುಮಾನಿಸಿದಾಗ, 'ಬಿಲ್ ಗೇಟ್ಸ್ ಸಣ್ಣ ವಯಸಿನಲ್ಲೇ ಕಂಪ್ಯೂಟರ್ ಕಲಿತು ಮೇಧಾವಿ ಆಗಲಿಲ್ಲವೇ' ಎಂದು ಮೂದಲಿಸಿದರು ಹೆಡ್ ಮೇಡಮ್.

ಬಿಲ್ ಗೇಟ್ಸ್ ಕಾಲೇಜ್ ಡ್ರಾಪೌಟ್ ಅಂತ ಹೇಳಲು ಹೊರಟವನು ನನ್ನವಳ ಕೆಂಗಣ್ಣು ನೋಡಿ ಸುಮ್ಮನಾದೆ. ಇಲ್ದಿದ್ರೆ ನಮ್ಮ ಪುಟ್ಟ ಎಲ್ಕೆಜಿ ಸೇರುವ ಮೊದಲೇ ಸ್ಕೂಲ್ ಡ್ರಾಪೌಟ್ ಆಗಿರೋವ್ನು.

ಮೆತ್ತಗೆ ಫೌಂಡರ್ ಯಾರು ಅಂತ ಕೇಳ್ದೆ ಕ್ಲರ್ಕ್ ನ: 'ಹೆಡ್ಮೇಡಮ್ ತಂದೆ' ಅಂದ!

ನಾವಿಬ್ಬರೂ ಓಡ್ಹೋಗಿ ಪಿ.ಎಫ್. ನಿಂದ ಲೋನ್ ತಂದು ಪುಟ್ಟನ್ನ ಸ್ಕೂಲ್ಗೆ ಹಾಕಿದ್ದಾಯಿತು.

ಪುಟ್ಟನ ಪ್ರಾಜೆಕ್ಟ್ ವರ್ಕ್ ; ಹಾಳೇಲಿ ಬಣ್ಣದ ಪೆನ್ಸಿಲ್ನಲ್ಲಿ ಗೀಚೋದು. ಅದನ್ನು ಅವನು ಮನೆಗೆ ಬಂದ ತಕ್ಷಣ ನಾವು ಫ್ರೇಮ್ ಹಾಕಿ ಕೋಟ್ ಹ್ಯಾಂಗರ್‍ಗೆ ತಗಲು ಹಾಕಿಡಬೇಕು. ಇಲ್ದಿದ್ರೆ ವರ್ಷದ ಕೊನೆಯಲ್ಲಿ ಮಾರ್ಕಸ್ ಸಿಗಲ್ಲ. ಪುಟ್ಟ ಸ್ಕೂಲ್ ಸೇರುವ ಮೊದಲೇ ಡ್ರಾಯಿಂಗ್ನಲ್ಲಿ ಗ್ರ್ಯಾಜುಯೇಟ್ ಆಗಿದ್ದ. ಮನೆಗೋಡೆಗಳೇ ಅವನ ಪ್ರಾಜೆಕ್ಟ್‌ನ ಲ್ಯಾಬ್ !

ಪ್ರಮೋಷನ್ನಾಗಿ ಪುಟ್ಟ ಯುಕೆಜಿಗೆ ಹೋದಾಗ ಅವನ ಫೀಸ್ಗೂ ಪ್ರಮೋಷನ್ ಆಯ್ತು. ಎಲ್ಲವೂ ಇನ್ನೆರೆಡು ಸಾವಿರ ಮೇಲೇರಿತು. ಮತ್ತೆ ಫೌಂಡರ್ಸ್ ಬರ್ಥ್ ಡೇ. ಇದು ಯಾರ್‍ದೆಂದು ಕೇಳ್ದೆ. ಹೆಡ್ ಮೇಡಂನ ತಾಯಿದು ಅಂದ ಕ್ಲರ್ಕ್ ! ಹೆಡ್ ಮೇಡಂಗೆ ಫೌಂಡರ್ಸ್ ಮೇಲೆ ಎಂಥಾ ಪ್ರೀತಿ ಅಂತೀರಿ!

ಪುಟ್ಟನ ಓದು ಮುಗಿಯುವಷ್ಟರಲ್ಲಿ ನಾವು ಚೊಂಬು ಹಿಡಿಯೋದ್ರಲ್ಲಿ ಅನುಮಾನವೇ ಇಲ್ಲ ಎಂದು ಖಚಿತವಾಯಿತು.

ಇದಾಗಿ ಎರಡು ತಿಂಗಳಿಗೆ ನನ್ನ ದೊಡ್ಡ ಅಣ್ಣನ ಮಗ ವಾಸು ಕಾಲೇಜ್ ಸೇರ್‍ದ. ನಾನು ಆವತ್ತು ಅಲ್ಲೇ ಇದ್ದೆ.

ವಾಸುವಿನ ಖರ್ಚು ಏನೇನು ಇಲ್ಲ ಅಂತ ಅನ್ನಸ್ತು ಪುಟ್ಟನ ಖರ್ಚು ಕಂಪೇರ್ ಮಾಡಿದ್ರೆ. ವಾಸುವಿಗೆ ಪುಸ್ತಕದ ಖರ್ಚೇ ಇಲ್ಲ. ಒಂದು ನೋಟ್ ಬುಕ್ ಸುರುಳಿ ಸುತ್ಕೊಂಡ್ ಹೋದ್ರೆ ಮುಗೀತು. ಟೆಸ್ಟ್ ಬುಕ್ಕಿಲ್ಲ; ಫೌಂಡರ್‍ಸ್ ಡೇ ಕಾಟ ಇಲ್ಲ. ಮಕ್ಕಳನ್ನ ಎಲ್ ಕೇಜಿ, ಯೂಕೇಜಿ ಬದ್ಲು ಸೀದಾ ಕಾಲೇಜ್ಗೇ ಹಾಕ್ಬೇಕು ಅಂತ ಹೇಳ್ದೆ ನಮ್ಮಣ್ಣಂಗೆ. ಅವ್ನು ತಲೇ ಆಡಿಸಿ ನನ್ ಕಗೆ ಒಂದು ಸಣ್ಣ ಕಾಗ್ದ ಕೊಟ್ಟ.

ರೇಬಾನ್ ಕೂಲಿಂಗ್ ಗ್ಲಾಸ್..........20,000
ಅನ್‌ಡ್ರಾಯ್ಡ್ ಮೊಬೈಲ್.............15,000
ಹಯಬೂಸ ಮೊಬೈಕ್..............2,00,000
ಲೆನೋವೊ ಲ್ಯಾಪ್ಟಾಪ್.............45,000
ಪಾಕೆಟ್ ಮನಿ, ವರ್ಷಕ್ಕೆ ..........20,000

ಇತರೆ:
ಕಾಲೇಜ್ ಫೀಸ್.................30,000

ಒಟ್ಟು.....3,30,000/

ಅದರಲ್ಲಿ ಪುಸ್ತಕದ ಹೆಸರೇ ಇಲ್ಲ!

ನಮ್ಮಣ್ಣನ್ನ ಕೇಳ್ದೆ, ಇಷ್ಟು ದುಡ್ಡು ಹೇಗೆ ಮ್ಯಾನೇಜ್ ಮಾಡ್ದೆ ಅಂತ. ಇಷ್ಟು ಹಣ ಒಂದೇ ಸಲ ಸಿಗ್ಬೇಕೂಂದ್ರೆ ಬ್ಯಾಂಕ್ ಕೊಳ್ಳೇ ಹೊಡೀಬೇಕು ಇಲ್ಲ ಮಲ್ಯನ ಮನೇಗೋ ಅಥವಾ ಕರ್ನಾಟಕ ಗವರ್ನಮೆಂಟ್ ಅಫಿಶಿಯಲ್ ಮನೇಗೆ ಕನ್ನಾ ಹೊಡೀಬೇಕು.

ನಾನೂ ಹಾಗೇ ಮಾಡ್ದೇ ಅಂತಿಟ್ಕೊ, ಅಂದ. ನಮ್ಮ ಅತ್ತೆ, ಮಾವ ಕಾಶೀಗೆ ಹೋಗ್ಬೇಕೂಂತ ಲೈಫ್ ಸೇವಿಂಗ್ಸ್ ಇಟ್ಟಿದ್ರು. ವಾಸೂನ್ನ ಕರಕೊಂಡ್ ಹೋಗಿ ಅವ್ನು ಕೊಟ್ಟಿರೋ ಲಿಸ್ಟ್ ನಲ್ಲಿರೋ ಸಾಮಾನ್ನೆಲ್ಲಾ ತೊಗೊಂಡು ಬಂದೀದಾರೆ. ಡಿಸ್ಕವರಿ ಚ್ಯಾನಲ್ನಲ್ಲಿ ಮುಂದಿನ ವಾರ ಒಂದು ಘಂಟೆ ಕಾಲ ವಾರಣಾಸಿ ತೋರಿಸ್ತಾರಂತೆ. ಮೊಮ್ಮಗನ್ನ ಮದ್ಯೆ ಕೂಡಿಸ್ಕೊಂಡು ಅವರಿಬ್ಬರು ಕಾಶಿ ಯಾತ್ರೆ ಮನೇಲೇ ಮಾಡ್ತಾರೆ!

English summary
It is big test for parents to pass in LKG admission exam given by reputed schools in Bangalore. Cost of education in Karnataka drastically increase which has become burden to parents writes ER Ramacahndran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X