ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಘು ಹಾಸ್ಯ : ಕೃಷಿಗಾರಿಕೆ - ಅಂದು, ಇಂದು

By * ಇ.ಆರ್. ರಾಮಚಂದ್ರನ್, ಮೈಸೂರು
|
Google Oneindia Kannada News

ಅನಾದಿ ಕಾಲದಿಂದಲೂ ಭಾರತ ಕೃಷಿಗಾರಿಕೆ ಅವಲಂಬಿತ ದೇಶ. ಆಗಿನ ಕಾಲಕ್ಕೂ ಇತ್ತೀಚಿಗೂ ಕೃಷಿಗಾರಿಕೆಯಲ್ಲಿ ವ್ಯತ್ಯಾಸ ಕಂಡುಬರುವುದೇನು? ಒಂದು ಝಲಕ್; ನೋಡೋಣ ಬನ್ನಿ........

ಆಂದು:
ಮಹಾರಾಜ: ರೈತ ಬಾಂಧವರೇ! ನಾವು ಮತ್ತು ನಮ್ಮ ಮಂತ್ರಿ ನಿಮ್ಮ ಸುಖ ದುಃಖ ವಿಚಾರಿಸಲು ಬಂದಿದ್ದೇವೆ. ನೀವೆಲ್ಲರೂ ಕುಶಲವೇ? ಮಕ್ಕಳು ಮರಿಗಳೆಲ್ಲ ಕ್ಷೇಮವೇ?

ರೈತ: ಮಹಾಪ್ರಭುಗಳು ಆಗಾಗ್ಗೆ ನಮ್ಮನ್ನು ಬಂದು ವಿಚಾರಿಸಿಕೊಂಡು ಹೋಗುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ತಮ್ಮ ಅನುಗ್ರಹದಿಂದ ಮತ್ತು ದೇವರ ಕೃಪೆಯಿಂದ ನಾವೆಲ್ಲರೂ ಆರೋಗ್ಯ ಹಾಗೂ ಸಂತೋಷವಾಗಿದ್ದೇವೆ.

ಮ: ನಿಮ್ಮ ಕೃಷಿಗಾರಿಕೆಗೆ ಬೇಕಾದ ಬೀಜಗಳು ಸಕಾಲಕ್ಕೆ ಸಿಗುತ್ತಿದೆಯೇ? ಸಾಗುವಳಿ ಹೇಗೆ ಸಾಗುತ್ತಿದೆ? ನಿಮ್ಮ ಹೊಲ ಗದ್ದೆಗಳಿಗೆ ಮತ್ತು ಕುಡಿಯುವುದಕ್ಕೆ ನೀರು?

ರೈ: ಬೀಜಗಳು ಸರಿಯಾಗಿ ಸಿಗುವ ಹಾಗೆ ಮಂತ್ರಿಗಳು ವ್ಯವಸ್ಥೆ ಮಾಡಿದ್ದರು. ತಾವೆ ಖುದ್ದಾಗಿ ನಿಂತು ತೋಡಿಸಿದ ಕಾಲುವೆಗಳಲ್ಲಿ ನೀರು ಚೆನ್ನಾಗಿ ಹರಿದು ಬಂದು ಈ ವರ್ಷ ಬೆಳೆ ಚೆನ್ನಾಗಿ ಬರುವ ನಿರೀಕ್ಷೆಯಿದೆ. ಕೊಳಗಳಲ್ಲಿ, ಬಾವಿಗಳಲ್ಲಿ ಕುಡಿಯುವ ನೀರು ಯಥೇಚ್ಚವಾಗಿ ತುಂಬಿ ನಿಂತಿದೆ ಪ್ರಭುಗಳೇ. ಕುಡಿಯುವ ನೀರಿಗೆ ತೊಂದರೆಯೇನಿಲ್ಲ.'

ಮ: ಬಹಳ ಸಂತೋಷ! ನೀವು ಬೆಳೆಸಿದ ಧಾನ್ಯ, ತರಕಾರಿ ಹಣ್ಣು ಏನೂ ಹಾನಿಯಾಗದಂತೆ, ಕ್ರಿಮಿ ಕೀಟಗಳು ಬರದಂತೆ ನೋಡಿಕೊಳ್ಳಿ.

ರೈ: ಅದಕ್ಕೆ ಮಂತ್ರಿಗಳು ಆವಾಗಲೇ ವ್ಯವಸ್ಥೆ ಮಾಡಿದ್ದಾರೆ ಪ್ರಭುಗಳೇ! ಔಷಧಿ ಹೊಡಿಯುವರು ಬಂದು ಒಮ್ಮೆನೋಡಿಕೊಂಡು ಹೋಗಿದ್ದಾರೆ.

ಮ: ನಿಮ್ಮ ಪಶು, ಪಕ್ಷಿಗಳ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಬೆಳೆಯುವ ಮಕ್ಕಳಿಗೆ ಹಾಲು ಅತ್ಯಗತ್ಯ.

ರೈ; ಅವುಗಳೆಲ್ಲವೂ ಆರೋಗ್ಯ ವಾಗಿದ್ದು ನಮ್ಮ ಮಕ್ಕಳೂ ಕ್ಷೇಮ ವಾಗಿದ್ದಾರೆ ಪ್ರಭು!

ಮ: ಎಲ್ಲವೂ ಕೇಳಿ ಸಂತೋಷವಾಯಿತು. ನಾವು ಮತ್ತೆ ಬರುತ್ತೇವೆ. ಏನಾದರೂ ಸಮಸ್ಯೆಗಳು ಬಂದರೆ ನಮಗೆ ತಿಳಿಸಿ. ನಾವು ಪರಿಹಾರ ಮಾಡಿಕೊಡುತ್ತೇವೆ.

ರೈ; ನಮ್ಮೆಲ್ಲರನ್ನೂ ತಮ್ಮ ಕುಟುಂಬದವರೇ ಅನ್ನುವ ಹಾಗೆ ನೋಡಿಕೊಳ್ಳುತ್ತಿರುವ ತಮ್ಮನ್ನು ದೇವರು ಸದಾ ಆರೋಗ್ಯದಿಂದಿಟ್ಟರಲಿ ಎಂದೆ ನಮ್ಮೆಲ್ಲರ ಪ್ರಾರ್ಥನೆ ಪ್ರಭುಗಳೇ!

ಇಂದು:

ಪ್ರಧಾನ ಮಂತ್ರಿ: ರೈತ ಬಾಂಧವರೇ! ನಾನು ಮತ್ತು ನಮ್ಮ ಕೃಷಿ ಮಂತ್ರಿ ಶರದ್ ಪವಾರ್ ನಿಮ್ಮ ಸುಖ ದುಃಖ ವಿಚಾರಿಸಲು ಬಂದಿದ್ದೇವೆ. ನೀವೆಲ್ಲಾ ಕುಶಲವೇ?

ರೈತ: ಕುಶಲ ಎಲ್ಲಿಬಂತು..? ಏನೋ ಬದುಕೀದೀವಿ...ಮಹಾರಾಷ್ಟ್ರದ ಹಾಗೇ ಇಲ್ಲೂ ಸೂಸೈಡ್ ಗಳು ಆಗ್ತಿವೆ...

ನಿಮ್ಮನ್ನು ನೋಡಿ ಬಹಳ ವರ್ಷಗಳೇ ಆಯಿತು. ನೀವು ಟಿವಿ ಯಲ್ಲೂ ಜಾಸ್ತಿ ಬರೋದಿಲ್ಲ. ಐಪಿಎಲ್ ನಡೆಯುವ ಟೈಮ್ ನಲ್ಲಿ ಆಗಾಗ್ಗೆ ಕೃಷಿ ಮಂತ್ರಿಗಳು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ.. ನೀವೇ ಬಂದಿರೋದು ನೋಡಿದ್ರೆ ಎಲೆಕ್ಷನ್ ಹತ್ತಿರ ಬಂತೂ ಅನ್ಸುತ್ತೇ..

ಪ್ರ. ಮಂ: ಅಯ್ಯೋ! ಇಲ್ಲ.. ನಿಮ್ಮ ಸುಖ ದುಃಖ ವಿಚಾರಿಸಿಕೊಂಡು ಹೋಗೋಣಾಂತಲೇ ಬಂದ್ವಿ.. ನೀವೇ ನಮ್ಮ ರಾಷ್ಟ್ರದ ಬೆನ್ನೆಲುಬಲ್ಲವೇ...? ಕೃಷಿ ಮಾಡುವುದಕ್ಕೆ ಬೇಕಾದ ಬೀಜಗಳು ಸಕಾಲಕ್ಕೆ ಸಿಗುತ್ತಿದೆಯೇ? ನಿಮ್ಮ ಹೊಲ ಗದ್ದೆಗಳಿಗೆ ಸರಿಯಾಗಿ ನೀರು ಬರುತ್ತಿದೆಯೇ?

ರೈತ: ನಮ್ಮ ಬೆನ್ನು ಮೂಳೆ ಯಾವಾಗ್ಲೋ ಮುರಿದು ಹೋಗಿದೆ ಪ್ರಧಾನಿಯವರೇ..ಹೋದ ವರ್ಷ ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ನವರುರು ಕೊಟ್ಟ ಬೀಜಗಳಲ್ಲಿ ಅರ್ಧಕ್ಕರ್ಧ ಹುಳತಿಂದು ಹೋಗಿದ್ದವು. ಅವುಗಳಿಂದ ಎನೂ ಪ್ರಯೋಜನವಾಗಲಿಲ್ಲ. ಈ ವರ್ಷ ಮಾನ್ಸೂನ್ ಚೆನ್ನಾಗಿ ಬರತ್ತೇಂತ ಐಎಂಡಿ ಮುನ್ಸೂಚನೆ ಕೊಟ್ಟಾಗ್ನಿಂದ ಒಂದು ತೊಟ್ಟೂ ಮಳೆಯಾಗಿಲ್ಲ...

ಪ್ರ. ಮಂ: ಐ ಸೀ.. ಬೋರ್‍ವೆಲ್ ನೀರನ್ನು ಪಂಪ್ ಮಾಡಲು ವ್ಯವಸ್ಥೆ ಮಾಡಿತ್ತಲ್ಲಾ..?

ರೈ: ನಾವು 3 ವರ್ಷದಿಂದ 3 ಫೇಸ್ ಪವರ್ ನೋಡೇ ಇಲ್ಲ. ಪವಾರ್ ಸಾಹೇಬ್ರು ದಿನಾ ಅವರ ಐಪಿಎಲ್, ಓಡಿಐ ಮ್ಯಾಚ್ ಗಳಿಗೆ, ಸ್ಟೇಡಿಯಂನಲ್ಲಿ ಫ್ಲಡ್ ಲೈಟ್ ಉಪಯೋಗಿಸ್ತಾರೆ! ನಮ್ಮ ಹಳ್ಳಿಗಳಲ್ಲಿ ದಿನಕ್ಕೆ ಇಪ್ಪತ್ತು ಗಂಟೆ ಪವರ್ ಕಟ್....

ಪ್ರ. ಮಂ: ಅಯ್ಯೋ! ಅದಕ್ಕೆ ಸರಿಯಾದ ವ್ಯವಸ್ಥೆ ಮಾಡುತ್ತೇವೆ ಯೋಚನೆ ಮಾಡಬೇಡಿ. ಕುಡಿಯುವ ನೀರಿಗೆ ಪ್ರಾಬ್ಲಂ ಏನಿಲ್ವಲ್ಲ?

ರೈ; ಕೊಳವೆಲ್ಲಾ ಬತ್ತಿ ಹೋಗಿಸಿ, ಡೆವೆಲಪರ್ಸ್ ಅಲ್ಲೇ ಲೇಔಟ್ ಮಾಡಿ ಸೈಟ್ ಗಳನ್ನ ಮಾರುತ್ತಾ ಇದಾರೆ...

ಪ್ರ. ಮಂ: ಶಿವ ಶಿವ! ನಿಮಗೆಲ್ಲಾ ಮಹಾತ್ಮ ಗಾಂಧಿ ರೂರಲ್ ಎಂಪಾಯಿಮೆಂಟ್ ಗ್ಯಾರಂಟಿ ಸ್ಕೀಮಿನಲ್ಲಿ ಕೆಲಸ ಏರ್ಪಾಡು ಮಾಡಿದೆಯಲ್ಲಾ. ಅಲ್ಲಿ ಕೆಲಸ ಸಿಕ್ಕಿರಬೇಕಲ್ಲಾ..?

ರೈ; ಅಲ್ಲಿ ಮೈಮುರಿಯೋಷ್ಟು ದುಡಿದಿದ್ದಾಯಿತು. ಕೈಗಿನ್ನೂ ಒಂದು ಕಾಸು ಬಂದಿಲ್ಲ.. ಅದರಲ್ಲೂ ಅರ್ಧಕ್ಕರ್ಧ ಸೂಪರ್ ವೈಸರ್ಸ್ ಗೆ ಹೋಗಿ ಮಿಕ್ಕಿದ್ದು ನಮ್ಮ ಕೈಗೆ ಬರುತ್ತೆ.

ಪ್ರ. ಮಂ: ಛೆ! ಛೆ! ಯಾಕೆ ಹೀಗಾಯ್ತು... ನಿಮಗೆ ಇನ್ನು ಯಾವ ರೀತಿ ಸಹಾಯ ಮಾಡಬಹುದು? ಹೇಳಿ.

ರೈ: ಪವಾರ್ ಅವರು ಕ್ರಿಕೆಟ್ನಲ್ಲಿ ಒಂದು ಪವಾಡವನ್ನೇ ಮಾಡಿದ್ದಾರೆ. ನಾವೆಲ್ಲಾ ಈಗ ಬಿಪಿಎಲ್ ನಲ್ಲಿ ಮಾಂಟೆಕ್ ಅಹ್ಲುವಾಲಿಯ ಸೂತ್ರ ಪ್ರಕಾರ ದಿನಕ್ಕೆ 32/ ರೂಪಾಯೀಲಿ ಬದುಕೀದೀವಿ... ನಮ್ಮ ಹುಡುಗರನ್ನೂ ಐಪಿಎಲ್ ಕ್ರಿಕೆಟ್ ಗೆ ಆಯ್ಕೆಮಾಡಿ ನಮಗೆಲ್ಲಾ ತಲಾ ಎರೆಡೆರೆಡು ಕೋಟಿ ರೂಪಾಯಿ ಕೊಡಿಸಿದರೆ ನಿಮಗೆ ಪುಣ್ಯ ಬರುತ್ತೆ. ನಮ್ಮುಡುಗ್ರು ಕ್ರಿಕೆಟ್ ಜೊತೆಗೆ ಫೀಲ್ಡ್ ಗುಡಿಸಿ, ಸಾರಿಸ್ತಾರೆ. ನೀವು ಹೇಳಿದಷ್ಟು ಪಿಚ್ ಗೆ ನೀರು ಹಾಕ್ತಾರೆ.. ಈ ಮದ್ಯೆ ಅವ್ರೂ ಡ್ಯಾನ್ಸ್, ಡಿಸ್ಕೋ, ಪಿಸ್ಕೋ ಏನೇನೋ ಕಲ್ತೀದಾರೆ... ನೀವು ಇದನ್ನು ಖಂಡಿತಾ ಮಾಡ್ಕೊಡ್ಬೇಕು.. ಇದೇ ರೈತರಿಗೆ ನೀವು ಮಾಡುವ ದೊಡ್ಡ ಉಪಕಾರ..

ಪ್ರ. ಮಂ: ಪವಾರವ್ರೇ ! ಈ ಸಲಹೆಗೆ ನೀವು ಏನು ಹೇಳು....

ಪವಾರ್: ( ಪ್ರ.ಮಂತ್ರಿಯ ಕೈಯನ್ನು ಎಳೆಯುತ್ತಾ): ಬೇಗ ಹೋಗೋಣ ಬನ್ನಿ! ಮುಂದಿನ ಮೀಟಿಂಗ್ಗೆ ಲೇಟಾಯ್ತು!

English summary
Here is Satire comparision of Agriculture ministry administration during the King's rule with UPA Man Mohan singh rule with agriculture minister Sharad Pawar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X