ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 16 ಸಾವಿರ ಪೊಲೀಸರ ನೇಮಕಾತಿ: ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 21: "ದೇಶದ ಪ್ರಗತಿಗೆ ಶಾಂತಿ ಸುವ್ಯವಸ್ಥೆ ಅವಶ್ಯಕ. ಶಾಂತಿ ಇಲ್ಲದಿದ್ದರೆ ದೇಶದ ಪ್ರಗತಿ ಇಲ್ಲ. ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಪ್ರಗತಿಗೆ ಪೊಲೀಸ್ ಸೇವೆ ಅಗತ್ಯ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಹಳೇ ಸಿ.ಆರ್‌. ಮೈದಾನದಲ್ಲಿ ಆಯೋಜಿಸಲಾದ 'ಪೋಲಿಸ್ ಸಂಸ್ಮರಣಾ ದಿನಾಚರಣೆ' ಕಾರ್ಯಕ್ರಮದ‌ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ವಿಶ್ವದ ಹಲವು ರಾಷ್ಟ್ರಗಳು ಆಂತರಿಕ ಕ್ಷೋಭೆ, ಭಯೋತ್ಪಾದಕರ ಕೈಗೆ ಸಿಲುಕಿ ಅಲ್ಲಿನ ಮನುಷ್ಯರ ಬದುಕು ಶಾಂತಿಯುತವಾಗಿಲ್ಲ," ಎಂದರು.

"ದೇಶದ ಎಲ್ಲಾ ಹಂತದ ಪೊಲೀಸರು ಜನರು ಭಯರಹಿತ ಜೀವನ ನಡಿಸಲು ಶ್ರಮ ಪಡುತ್ತಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ವಿದೇಶದಿಂದ ಎದುರಾಗುವ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಾರೆ. ನಾಗರಿಕರು ಕಾನೂನು ಕಾಪಾಡುವಲ್ಲಿ ಪೊಲೀಸರಿಗೆ ಸಹರಿಸಬೇಕು. ಪೊಲೀಸರು ಕುಟುಂಬವನ್ನು ಮರೆತು ಹಗಲಿರುಳು ದುಡಿಯುತ್ತಾರೆ," ಎಂದು ಶ್ಲಾಘಿಸಿದರು.

16,000 Reserve Police To Be Recruited In Karnataka Says CM Basavaraj Bommai

"ರಾಜ್ಯ ಸರ್ಕಾರ ಪೊಲೀಸರಿಗೆ ದೊರಕಬೇಕಾದ ಸವಲತ್ತುಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಮರು ಪ್ರಾರಂಭಿಸಿದ್ದೇವೆ. ಪೊಲೀಸರ ಸೇವೆ ಉತ್ತಮಗೊಳಿಸಲು ಪ್ರಯತ್ನ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಮಾತ್ರ ಪದೋನ್ನತಿ ಎಂಬ ಭಾವನೆ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇತ್ತು. ಆದರೆ ಕೆಳ ಹಂತದ ಸಿಬ್ಬಂದಿಗೆ ಪದೋನ್ನತಿ ನೀಡಲಾಗಿದೆ," ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

"ರಾಜ್ಯದಲ್ಲಿ 16 ಸಾವಿರ ಪೊಲೀಸರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರು ಚಿಕಿತ್ಸೆ ಪಡೆಯಲು ಅನುದಾನ ಒದಗಿಸಲಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ. ಕಾನೂನಿನ ಬಲವನ್ನು ಪೊಲೀಸರಿಗೆ ನೀಡಲಾಗುತ್ತಿದೆ," ಎಂದರು.

"ಅನೇಕ ಯುವಜನರು ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ತಡೆಗಾಗಿ ಕಾಯ್ದೆಯನ್ನು ತರಲಾಗಿದೆ. ಗ್ಯಾಂಬ್ಲಿಂಗ್ ಕ್ಲಬ್‌ಗಳ ವಿರುದ್ಧ ಸಶಕ್ತ ಕಾನೂನು ತರಲಾಗಿದೆ. ಎಫ್‌ಎಸ್‌ಎಲ್‌ ಲ್ಯಾಬ್‌ಗಳನ್ನು ಪ್ರಾದೇಶಿಕ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆಫೀಸರ್ ಆನ್‌ಕ್ರೈಮ್ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ," ಎಂದು ತಿಳಿಸಿದರು.

16,000 Reserve Police To Be Recruited In Karnataka Says CM Basavaraj Bommai

"ಈಗಾಗಲೇ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷದಲ್ಲಿ 11 ಸಾವಿರ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಮಹಿಳೆಯರ ಆತ್ಮರಕ್ಷಣೆಗಾಗಿ ತರಬೇತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೆಎಸ್‌ಆರ್‌ಪಿ ಪಡೆ ಹಾಗೂ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿಗಳ ಸೇವೆ ಹಾಗೂ ಅನುಭವವನ್ನು ಬಳಸಿಕೊಂಡು ಈ ತರಬೇತಿಯನ್ನು ಒದಗಿಸಲಾಗುವುದು," ಎಂದು ತಿಳಿಸಿದರು.

"ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ನಾಗರಿಕರ ಸುರಕ್ಷತೆಗಾಗಿ ಪೊಲೀಸರು ಮಾಡುವ ಸೇವೆ, ತ್ಯಾಗವನ್ನು ಸ್ಮರಣೆ ಮಾಡಬೇಕು. ನಮ್ಮ ನಾಗರಿಕ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವಿದು. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇರಳ ಪ್ರವಾಹಕ್ಕೆ ಸ್ಪಂದನೆ
"ಕೇರಳ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಆಗಿರುವ ಸಂಕಷ್ಟಕ್ಕೆ ರಾಜ್ಯದ ಜನತೆ ಹಾಗೂ ಕರ್ನಾಟಕ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ, ಸಹಕಾರವನ್ನು ಒದಗಿಸಲಾಗುವುದು," ಎಂದು ಈ ಸಂದರ್ಭದಲ್ಲಿ ಹೇಳಿದರು.

ಉತ್ತರಾಖಂಡದಲ್ಲಿ ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳ ತಂಡ
"ಉತ್ತರಾಖಂಡದಲ್ಲಿಯೂ ಭಾರೀ ಮಳೆಗೆ ಭೂಕುಸಿತ ಸಂಭವಿಸುತ್ತಿದೆ. ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ನೆರವು ಒದಗಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ," ಎಂದು ಸಿಎಂ ತಿಳಿಸಿದರು.

ವಿಧಾನ್ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಡಾ ಆಯುಕ್ತ ನಾಗೇಶ್ ಕಲಬುರ್ಗಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಇತರೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮಪರ್ಪಿಸಿದರು.

English summary
16,000 reserve police to be recruited in Karnataka says CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X