keyboard_backspace

ಹೌದು ಮುಖ್ಯಮಂತ್ರಿ ಬೊಮ್ಮಾಯಿಗೆ ಭರವಸೆ ಕೊಟ್ಟಿದ್ದೇನೆ, ಆದರೆ?: ಎಚ್‌.ಡಿ. ದೇವೇಗೌಡ!

Google Oneindia Kannada News

ಬೆಂಗಳೂರು, ಆ. 13: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಬಂದಿದ್ದು ಬಿಜೆಪಿಯಲ್ಲಿ ಚರ್ಚೆ ಹುಟ್ಟು ಹಾಕಿದೆ. ಈ ಭೇಟಿ ಬಗ್ಗೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಮೊದಲ ಸಲ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದೇ ವಿಚಾರದ ಬಗ್ಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅಸಮಾಧಾನದ ಬಗ್ಗೆಯೂ ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ದೇವೇಗೌಡರು ಅಭಿನಂದಿಸಿರುವುದು ಕುತೂಹಲ ಮೂಡಿಸಿದೆ. ಸಂಸತ್ ಕಲಾಪದ ಬಗ್ಗೆಯೂ ದೇವೇಗೌಡರು ಮಾತನಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಟ್ಟಿರುವ ಭರವಸೆಯ ಏನು? ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಬೆಂಬಲದ ಕುರಿತು ಮತ್ತೊಮ್ಮೆ ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರನ್ನು ಬಿಜೆಪಿ ನಾಯಕರು ಭೇಟಿ ಮಾಡಿದ್ದರು. ಅವರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೂ ಒಬ್ಬರು. ಹೀಗೆ ದೇವೇಗೌಡರನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಕೇಳಿ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅದರಲ್ಲಿಯೂ ಪ್ರಧಾನಿ ಮೋದಿ ಅವರನ್ನು ದೇವೇಗೌಡರು ಹೊಗಳಿರುವುದು ವಿಶೇಷ. ಅಷ್ಟಕ್ಕೂ ಪ್ರಧಾನಿ ಮೋದಿ ಬಗ್ಗೆ ದೇವೇಗೌಡರು ಹೇಳಿದ್ದೇನು?

ಇದು ನ್ಯಾಯವೋ, ತಂತ್ರವೋ ಗೊತ್ತಿಲ್ಲ!

ಇದು ನ್ಯಾಯವೋ, ತಂತ್ರವೋ ಗೊತ್ತಿಲ್ಲ!

ನವದೆಹಲಿಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಧಾನಿ ಮೋದಿ ಕುರಿತು ಹೀಗೆ ಹೇಳಿದ್ದಾರೆ. "ಮೋದಿಯವರು ಮೊದಲ ಬಾರಿಗೆ ತಮ್ಮ ಸಂಪುಟದಲ್ಲಿ 12 ಮಹಿಳೆಯರಿಗೆ, 8 ಜನ ಎಸ್‌ಸಿ ಹಾಗೂ 12 ಜನ ಎಸ್‌ಟಿ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ತಮ್ಮ ಸಂಪುಟದಲ್ಲಿ ಇವರಿಗೆಲ್ಲ ಅವಕಾಶ ನೀಡಿದ್ದಾರೆ. ಆದರೆ ಇದು ಸಾಮಾಜಿಕ ನ್ಯಾಯವೋ? ಚುನಾವಣಾ ತಂತ್ರವೋ? ಎಂಬುದು ನನಗೆ ಗೊತ್ತಿಲ್ಲ. ಅದೇನೆ ಇದ್ದರೂ ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನಾನು ಪ್ರಧಾನಿಯಾಗಿದ್ದಾಗಲು ಇಂತಹದ್ದೇ ಅವಕಾಶ ಸೃಷ್ಟಿಸಿದ್ದೆ" ಎಂದು ಹೇಳಿದ್ದಾರೆ.

ಅಷ್ಟು ಕೆಳ ಮಟ್ಟಕ್ಕೆ ನನ್ನನ್ನು ಇಳಿಸಬೇಡಿ

ಅಷ್ಟು ಕೆಳ ಮಟ್ಟಕ್ಕೆ ನನ್ನನ್ನು ಇಳಿಸಬೇಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದ ಬಳಿಕ ಬಿಜೆಪಿ ಶಾಸಕ ಪ್ರೀತಂ ಗೌಡ ಅಸಮಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು, "ಅಷ್ಟು ಕೆಳಮಟ್ಟಕ್ಕೆ ನನ್ನನ್ನು ಇಳಿಸಬೇಡಿ. ನೀವು ಕೂಡ ಈ ಬಗ್ಗೆ ನನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಬೇಡಿ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಡಿಯೂರಪ್ಪ ಮಾರ್ಗದರ್ಶನದಿಂದ ಬೊಮ್ಮಾಯಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಗೊಂದಲಗಳನ್ನು ನಿಭಾಯಿಸಲು ಬೊಮ್ಮಾಯಿ ಸಮರ್ಥರಿದ್ದಾರೆ ಎಂದು ಕೊಂಡಿದ್ದೇನೆ. ಸಿನೀಯರ್ ಬೊಮ್ಮಾಯಿ ನಾನು ಉತ್ತಮ ಗೆಳೆಯರು" ಎಂದು ಹೇಳಿದ್ದಾರೆ. ಜೊತೆಗೆ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬೆಂಬಲ ಕೊಡುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲವಿದೆ!

ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲವಿದೆ!

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ಮನೆಗೆ ಬಂದಿದ್ದರು. ಹೌದು, ನನ್ನಿಂದ ಸರಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದಿದ್ದೇನೆ ಅಷ್ಟೇ. ನಾನು ಹೇಳಿರುವುದು ನೆಲ-ಜಲ-ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ ಎಂದು. ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲದಕ್ಕೂ ಸಿದ್ಧ" ಎಂದು ದೇವೇಗೌಡರು ಹೇಳಿದ್ದಾರೆ. ಮತ್ತೆ ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲವಿದೆ ಎಂದು ದೇವೇಗೌಡರು ಹೇಳಿರುವುದು ಕುತೂಹಲ ಮೂಡಿಸಿದೆ. ಜೊತೆಗೆ ಲೋಕಸಭಾ ಧಿವೇಶನದ ಬಗ್ಗೆಯೂ ದೇವೇಗೌಡರು ಮಾತನಾಡಿದ್ದಾರೆ.

ಗೈರಾಗಿಲ್ಲ, ಆದರೆ ಚರ್ಚೆಗೆ ಅವಕಾಶವೂ ಸಿಗಲಿಲ್ಲ!

ಗೈರಾಗಿಲ್ಲ, ಆದರೆ ಚರ್ಚೆಗೆ ಅವಕಾಶವೂ ಸಿಗಲಿಲ್ಲ!

ಈ ಬಾರಿ ಅಧಿವೇಶದಲ್ಲಿ ನಾನು ಒಂದು ದಿನವೂ ಗೈರು ಆಗಿಲ್ಲ ಎಲ್ಲಾ ದಿನದ ಕಲಾಪಗಳಲ್ಲಿ ಭಾಗಿಯಾಗಿದ್ದೇನೆ. ಶನಿವಾರ ರಜಾ ಇದ್ದಾಗ ನಾನು ವಾರಾಣಸಿಗೆ ಹೋಗಿ ಬಂದೆ. ಕಲಾಪದಲ್ಲಿ ಯಾವುದೇ ವಿಷಯಗಳು ಚರ್ಚೆಯಾಗಿಲ್ಲ. ಚರ್ಚೆ ಮಾಡಲು ನಮ್ಮ ವಿರೋಧ ಪಕ್ಷಗಳು ಹಾಗು ಆಡಳಿತ ಪಕ್ಷಗಳು ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಎಲ್ಲಾ ಪಕ್ಷಗಳ ನಾಯಕರು ಒಟ್ಟಿಗೆ ಸೇರಿ ಚರ್ಚೆ ನಡೆಸಬೇಕು. ಮುಂದಿನ ಅಧಿವೇಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ನಾನು ಒಂದೇ ಒಂದು ದಿನ ಗೈರಾಗದೇ ಇದ್ದರೂ, ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಮಯ ಸಿಗಬಹದು ಎಂದುಕೊಂಡಿದ್ದೇನೆ ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

English summary
JDS Suprimo HD Deve Gowda has said that he would support the Basavaraj Bommai government on land-water-language issue. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X