• search
  • Live TV
keyboard_backspace

ಯಡಿಯೂರಪ್ಪ ರಾಜ್ಯ ಪ್ರವಾಸ ತಡೆಯಲು ಕಸರತ್ತು ಆರಂಭಿಸಿದ ಬಿಜೆಪಿ ಹೈಕಮಾಂಡ್?

Google Oneindia Kannada News

ಬೆಂಗಳೂರು, ಸೆ. 01: ರಾಜ್ಯ ನಾಯಕತ್ವದ ಬದಲಾವಣೆ ಬಳಿಕವೂ ಬಿಜೆಪಿ ಹೈಕಮಾಂಡ್ ತಾನು ಅಂದು ಕೊಂಡಂತೆ ಕರ್ನಾಟಕದಲ್ಲಿ ಮಾಡಲು ಆಗುತ್ತಿಲ್ಲ. ಶತಾಯ ಗತಾಯ ದೆಹಲಿಯಿಂದಲೇ ರಾಜ್ಯ ಬಿಜೆಪಿಯನ್ನು ನಿಯಂತ್ರಣ ಮಾಡಬೇಕು ಎಂಬ ಗುರಿಯನ್ನು ಬಿಜೆಪಿ ಹೈಕಮಾಂಡ್ ಇಟ್ಟುಕೊಂಡಂತಿದೆ. ಹೀಗಾಗಿಯೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸುವ ಮೂಲಕ ಪ್ರಯೋಗ ಶುರು ಮಾಡಿತ್ತು. ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿದೆ. ಆದರೆ ಇದೇ ವೇಳೆ ಯಡಿಯೂರಪ್ಪ ಕೊಟ್ಟಿರುವ ಹೇಳಿಕೆಯೊಂದು ರಾಜ್ಯ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿ ಬಣಕ್ಕೆ ಇರುಸು ಮುರುಸನ್ನುಂಟು ಮಾಡಿದೆ.

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವ ಮೊಡಲು ಯಡಿಯೂರಪ್ಪ ಅವರು ಕೊಟ್ಟಿದ್ದ ಹೇಳಿಕೆ ಬಹಳಷ್ಟು ಅರ್ಥಗಳನ್ನು ಒಳಗೊಂಡಿತ್ತು. ಯಾವುದೇ ರಾಜ್ಯದ ರಾಜ್ಯಪಾಲರಾಗಿ ತಾವು ಹೋಗುವುದಿಲ್ಲ, ಬದಲಿಗೆ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದರು ಯಡಿಯೂರಪ್ಪ. ಅವರು ಯಾವುದಾರೂ ಒಂದು ರಾಜ್ಯದ ರಾಜ್ಯಪಾಲರಾಗಿ ಹೋಗಿದ್ದರೆ ಬಿಜೆಪಿ ಹೈಕಮಾಂಡ್ ನಿರಾಳವಾಗಿರುತ್ತಿತ್ತು. ಆದರೆ ಹಾಗೆ ಆಗಲಿಲ್ಲ.

ನುಂಗಲಾರದ ತುತ್ತಾದ ಯಡಿಯೂರಪ್ಪ ನಿರ್ಧಾರ!

ನುಂಗಲಾರದ ತುತ್ತಾದ ಯಡಿಯೂರಪ್ಪ ನಿರ್ಧಾರ!

ಅಧಿಕಾರದಿಂದ ಕೆಳಗಿಳಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಣೇಶ ಹಬ್ಬದ ನಂತರ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದ್ದರು. ಆದರೆ ಅವರ ನಿರ್ಧಾರಕ್ಕೆ ಪಕ್ಷದ ಹೈಕಮಾಂಡ್‌ನಿಂದಲೇ ಆಕ್ಷೇಪ ವ್ಯಕ್ತವಾಗಿದೆ ಎಂಬ ಮಾಹಿತಿ ಬಂದಿದೆ.

ಇದಕ್ಕು ಮೊದಲೇ ಅಂದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ತಾವು ರಾಜ್ಯಾದ್ಯಂತ ಪ್ರವಾಸ ಮಾಡಿ, ಮತ್ತೆೆ ಪಕ್ಷ ಸಂಘಟಿಸಿ 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆೆ ತರುತ್ತೇನೆ ಎಂದು ಘೊಷಣೆ ಮಾಡಿದ್ದರು. ಇದು ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿದೆ ಎಂಬ ಮಾಹಿತಿಯಿದೆ. ಅದಕ್ಕೆ ಕಾರಣವೂ ಇದೆ.

ಪ್ರವಾಸದಿಂದ ತಪ್ಪು ಸಂದೇಶ ರವಾನೆ?

ಪ್ರವಾಸದಿಂದ ತಪ್ಪು ಸಂದೇಶ ರವಾನೆ?

ಈಗ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಿದಲ್ಲಿ ತಪ್ಪು ಸಂದೇಶ ರವಾನೆ ಆದಂತಾಗುತ್ತದೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿದೆ.

ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡುವುದರಿಂದ ಬಿಜೆಪಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಂತಾಗುತ್ತದೆ. ಹೀಗಾಗಿ ಹಾಲಿ ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂಬ ಅನುಮಾನ ಮೂಡಿಸಿದಂತಾಗುತ್ತದೆ. ಜೊತೆಗೆ ಆಡಳಿತ ಪಕ್ಷದ ಬಗ್ಗೆೆ ಜನರಿಗೆ ಗೊಂದಲ ಸೃಷ್ಟಿಯಾಗುತ್ತದೆ ಎಂಬುದು ಹೈಕಮಾಂಡ್ ಅಭಿಪ್ರಾಯವಾಗಿದೆಯಂತೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ.

ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ತಡೆ!

ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ತಡೆ!

ಈ ಸಂದರ್ಭದಲ್ಲಿ ಯಾವುದೇ ಅಧಿಕೃತ ಕಾರಣವಿಲ್ಲದೇ ರಾಜ್ಯ ಪ್ರವಾಸ ನಡೆಸುವುದು ಸೂಕ್ತವಲ್ಲ ಎಂದು ಬಿಜೆಪಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದೆ. ಹೀಗಾಗಿ ಗಣೇಶ ಚತುರ್ಥಿ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರು ಕೈಗೊಳ್ಳಲು ಉದ್ದೇಶಿಸಿರುವ ರಾಜ್ಯ ಪ್ರವಾಸ ನಡೆಸದಂತೆ ತಡೆಯುವ ಪ್ರಯತ್ನಗಳನ್ನು ಬಿಜೆಪಿ ಹೈಕಮಾಂಡ್ ಮಾಡುತ್ತಿದೆ. ಈ ವಿಚಾರವನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮೂಲಕ ಯಡಿಯೂರಪ್ಪ ಅವರಿಗೆ ರವಾನಿಸಿದೆ ಎನ್ನಲಾಗುತ್ತಿದೆ.

ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್ ಅವರು ಬಿ.ವೈ. ವಿಜಯೇಂದ್ರ ಮೂಲಕ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆೆ ತಡೆ ಹಾಕುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

ಹೈಕಮಾಂಡ್ ಸೂಚನೆ ಒಪ್ಪುತ್ತಾರಾ ಯಡಿಯೂರಪ್ಪ?

ಹೈಕಮಾಂಡ್ ಸೂಚನೆ ಒಪ್ಪುತ್ತಾರಾ ಯಡಿಯೂರಪ್ಪ?

ಅಧಿಕಾರ ತ್ಯಾಗದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಒಬ್ಬರೇ ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಲು ಉದ್ದೇಶಿಸಿದ್ದರು ಎನ್ನಲಾಗಿದೆ. ಆದರೆ, ಅವರ ಏಕಾಂಗಿ ಪ್ರವಾಸಕ್ಕೆೆ ಬಿಜೆಪಿ ರಾಜ್ಯ ಘಟಕದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪ್ರವಾಸದ ಬಗ್ಗೆ ಗಣೇಶ ಹಬ್ಬದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಿ, ಪ್ರವಾಸ ಕೈಗೊಳ್ಳಲು ಯಡಿಯೂರಪ್ಪ ಅವರು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಬಂದಿದೆ.

2022ರ ಜನವರಿಯಲ್ಲಿ ವಿಧಾನ ಪರಿಷತ್ತಿಗೆ 25 ಸ್ಥಳೀಯ ಸಂಸ್ಥೆೆಗಳಿಂದ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಅದೇ ವೇಳೆ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ಆ ಸಂದರ್ಭದಲ್ಲಿ ಪಕ್ಷದ ಎಲ್ಲಾ ನಾಯಕರೂ ಸೇರಿಕೊಂಡು ರಾಜ್ಯ ಪ್ರವಾಸ ಮಾಡಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆಗ ಮಾಜಿ ಸಿಎಂ ಯಡಿಯೂರಪ್ಪ ಅವರೂ ಒಂದು ತಂಡದ ನಾಯಕತ್ವ ವಹಿಸಿಕೊಂಡು ರಾಜ್ಯ ಪ್ರವಾಸ ನಡೆಸಲು ಸೂಚಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪುತ್ತಾರಾ? ಎಂಬುದು ಸದ್ಯದ ಪ್ರಶ್ನೆಯಾಗಿದೆ!

English summary
It is reported that BJP high command tried to stop Former chief minister B.S. Yediyurappa's tour in the state. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X