keyboard_backspace

ಆನ್‌ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!

Google Oneindia Kannada News

ಅವಶ್ಯಕತೆಗೆ ಅನುಗುಣವಾಗಿ ಆನ್‌ಲೈನ್ ನಲ್ಲಿ ಐದು ನಿಮಿಷದಲ್ಲಿ ಸಾಲ ಕೊಡುವ ಆಪ್‌ ಗಳು ನೂರಾರು ಇವೆ. ಆನ್‌ ಲೈನ್ ಲೋನ್ ಆಪ್ ಅಂತ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹುಡುಕಿದ ಕೂಡಲೇ ಸಾಲ ಕೊಡಲು ಸರದಿ ಸಾಲಲ್ಲಿ ನಿಲ್ಲುತ್ತವೆ.

ಆಪ್‌ ಡೌನ್ ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆ ಮುಗಿಸುವ ವೇಳೆಗೆ ನೀವು ಬಯಿಸಿದ ಸಾಲ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬಿದ್ದಿರುತ್ತದೆ. ಅಂಗೈಯಲ್ಲೇ ತುರ್ತು ಸಾಲ ಸಿಗುತ್ತೆ ಅಂತ ಭಾವಿಸಿ ಈ ಆಪ್‌ಗಳಲ್ಲಿ ಸಾಲ ಪಡೆದರೆ ನಿಮ್ಮ ಬದುಕೇ ಬೀದಿಗೆ ಬರುತ್ತದೆ.

ಈ ಆಪ್‌ ತುರ್ತು ಸಾಲ ಗೌರವಯುತ ಬದುಕಿಗೆ ತೂತು ಮಾಡುತ್ತದೆ. ಮೂರೇ ಕ್ಷಣದಲ್ಲಿ ಮೂರು ಕಾಸಿಗೆ ಬೆಲೆಯಿಲ್ಲದಂತೆ ಮರ್ಯಾದೆ ಆನ್‌ಲೈನ್ ನಲ್ಲೇ ಹರಾಜು ಆಗಿರುತ್ತದೆ. ತುರ್ತು ಸಾಲ ಮತ್ತು ಆನ್‌ಲೈನ್ ಆಪ್‌ಗಳ ಸುತ್ತ ನಡೆಯುತ್ತಿರುವ ವಂಚನೆ, ಮೋಸ, ಕಪಟ- ನಾಟಕ ಕುರಿತ ಸಮಗ್ರ ವರದಿ ಇಲ್ಲಿದೆ ನೋಡಿ.

ತುರ್ತು ಸಾಲ ಯಾರಿಗೆ ಬೇಡ ?:

ತುರ್ತು ಸಾಲ ಯಾರಿಗೆ ಬೇಡ ?:

ಹಣದ ತುರ್ತು ಅವಶ್ಯಕತೆ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಲ ಬಿದ್ದೇ ಬೀಳುತ್ತದೆ. ಕೈಯಲ್ಲಿ ಹಣ ಇಲ್ಲದಿದ್ದಾಗ ಸಂಬಂಧಿಕರು, ಸ್ನೇಹಿತರ ಬಳಿ ಸಾಲ ಕೇಳಿ ಪಡೆಯುವುದು ಮಾಮೂಲಿ. ಆದರೆ ಸ್ನೇಹಿತರು ಸಂಬಂಧಿಕರಿಂದ ಸಾಲ ಪಡೆದರೆ ಅವಮಾನ, ಅಪ್ಪಿ ತಪ್ಪಿ ಹೇಳಿದ ಸಮಯಕ್ಕೆ ಕೊಡಲಿಲ್ಲ ಎಂದರೆ ಮರ್ಯಾದೆ ಹೋಗುತ್ತದೆ ಎಂದು ಅಂಜುವರೇ ಜಾಸ್ತಿ. ಹೀಗಾಗಿ ಬಡ್ಡಿ ಜಾಸ್ತಿಯಾದರೂ ಪರವಾಗಿಲ್ಲ, ಒಡವೆ ಅಡವಿಟ್ಟು ಗಿರವಿ ಅಂಗಡಿಗಳಲ್ಲಿ ಸಾಲ ಮಾಡುವರೇ ಜಾಸ್ತಿ. ಇನ್ನು ಬ್ಯಾಂಕ್ ಗಳಲ್ಲಿ ತುರ್ತು ಸಾಲ ಪಡೆಯುವುದು ಕನಸಿನ ಮಾತು. ಜನರಿಗೆ ತುರ್ತು ಸಾಲ ಅಗತ್ಯತೆ ಬಗ್ಗೆ ಅರಿತುಕೊಂಡು ಹುಟ್ಟಿಕೊಂಡಿದ್ದೇ ಆನ್‌ಲೈನ್ ಲೋನ್ ಆಪ್‌ಗಳು.

ಐದು ನಿಮಿಷದಲ್ಲಿ ಸಾಲ:

ಐದು ನಿಮಿಷದಲ್ಲಿ ಸಾಲ:

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆನ್‌ಲೈನ್ ಲೋನ್ ಆಪ್ ಅಂತ ಟೈಪ್ ಮಾಡಿದರೆ ಸಾಕು. ನೂರಾರು ಆಪ್ ಗಳ ಸಾಲು ಕಣ್ಣೆದುರು ಬರುತ್ತವೆ. ನಿಮಿಗಷ್ಟವಾದ ಆಪ್ ಡೌನ್‌ಲೋಡ್ ಮಾಡುವ ಪ್ರಕ್ರಿಯೆ ಮುಗಿಸುವ ವೇಳೆಗೆ , ನೀವು ಯಾರು? ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳು ಎಷ್ಟು ಮಂದಿ? ಎಲ್ಲಾ ಮಾಹಿತಿಯನ್ನು ಆಪ್‌ ಕದ್ದಿರುತ್ತದೆ. ನೀವು ತುರ್ತು ಸಾಲ ಆಯ್ಕೆ ಮಾಡಿಕೊಂಡರೆ, ನಿಮ್ಮ ಆಧಾರ್, ಪಾನ್ ನಂಬರ್, ಬ್ಯಾಂಕ್ ಖಾತೆ ವಿವರ ಜತೆಗೆ ಲೈವ್ ಪೋಟೋಗಳನ್ನು ಕೂಡ ಆಪ್ ತೆಗೆದುಕೊಳ್ಳುತ್ತದೆ. ಆನ್‌ಲೈನ್ ನಲ್ಲಿ ಅರ್ಜಿ ತುಂಬಿದ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತ ಬಿದ್ದಿರುತ್ತದೆ. ಕನಿಷ್ಠ ಐದು ಸಾವಿರ ದಿಂದ ಐವತ್ತು ಸಾವಿರ ವರೆಗೂ ಸಾಲ ನೀಡುವ ಆಪ್‌ಗಳು ನೂರಾರು ಇವೆ.

ಒಂದು ವಾರ ಕಾಲಮಿತಿ:

ಒಂದು ವಾರ ಕಾಲಮಿತಿ:

ಹೀಗೆ ಆನ್‌ಲೈನ್ ಆಪ್‌ ಗಳು ಕೊಡುವ ಸಾಲದ ಪ್ರಮಾಣ ಕನಿಷ್ಠ ಐದು ಸಾವಿರದಿಂದ ಐವತ್ತು ಸಾವಿರ ವರೆಗೂ ನೀಡುತ್ತವೆ. ಆದರೆ ಸಾಲದ ಕಂತುಗಳು ಒಂದು ವಾರಕ್ಕೆ ಶುರುವಾಗುತ್ತವೆ. ಸಾಲ ಪಡೆದ ಬಳಿಕ ನಿಗದಿತ ಕಂತಿನಂತೆ ಪಾವತಿ ಮಾಡಲೇಬೇಕು. ತಪ್ಪಿದಲ್ಲಿ ಕ್ಷಣಕ್ಕೊಂದು ಕರೆ ಮಾಡಿ ಚಿತ್ರಹಿಂಸೆ ನೀಡುತ್ತಾರೆ. ಐದು ಸಾವಿರ ರೂ.ನಿಂದ ಹತ್ತು ಸಾವಿರ ವರೆಗಿನ ಸಾಲಗಳಿಗೆ ಮರ ಪಾವತಿಯ ಕಾಲಮಿತಿ ಕೇವಲ ಒಂದು ವಾರ ಅಷ್ಟೇ. ಅದನ್ನು ಮೀರಿದರೆ ಆಗುವ ಕಥೆಯೇ ಬೇರೆ. ಮೊದಲು ಕಾಲ್ ಸೆಂಟರ್ ನಿಂದ ಕರೆ ಮಾಡಿ ಬಾಯಿಗೆ ಬಂದಂತೆ ಬೈದು ಹಿಂಸೆ ಕೊಡುತ್ತಾರೆ. ಇದಾಗಿಯೂ ಪಾವತಿಸದಿದ್ದರೆ ಅಮೇಲೆ ಆಗುವುದೇ ಬೇರೆ !

ಆಧಾರ ವಿಲ್ಲದೇ ಸಾಲ:

ಆಧಾರ ವಿಲ್ಲದೇ ಸಾಲ:

ಆನ್‌ಲೈನ್ ಸಾಲ ಕೊಡುವ ಮೈಕ್ರೋ ಫೈನಾನ್ಸ್ ಕಂಪನಿಯ ಆಪ್‌ಗಳು ಯಾವ ಆಧಾರ ಇಲ್ಲದೇ ಸಾಲ ಕೊಡುತ್ತವೆ. ಹೀಗಾಗಿ ಮೊಬೈಲ್ ಬಳಸಲು ಗೊತ್ತಿರುವ ಬಹುತೇಕರು ಆನ್‌ಲೈನ್ ಸಾಲಕ್ಕೆಕೈ ಹಾಕುತ್ತಾರೆ. ಅಚ್ಚರಿ ಏನೆಂದರೆ ಸಾಲದ ಪ್ರಮಾಣ ಆಪ್ ಗಳೇ ನಿರ್ಣಯಿಸುತ್ತದೆ. ನಿಮ್ಮ ಹೆಸರು, ವಿಳಾಸ, ನೀವು ಮಾಡುತ್ತಿರುವ ಕೆಲಸ, ನಿಮ್ಮ ಮೊಬೈಲ್ ನಲ್ಲಿರುವ ವ್ಯಕ್ತಿಗಳ ಹಿನ್ನೆಲೆ ಎಲ್ಲವನ್ನೂ ಆರ್ಟಿಫಿಷಿಯಲ್ ಇಂಟೆಲ್‌ಜೆನ್ಸಿ ತಂತ್ರಜ್ಞಾನವೇ ಅಧ್ಯಯನ ಮಾಡಿ ಈ ವ್ಯಕ್ತಿಗೆ ಇಷ್ಟು ಸಾಲ ಕೊಡಬಹುದು ಎಂಬ ಮಾಹಿತಿಯನ್ನು ಒದಗಿಸುತ್ತದೆ. ಹೆಸರು, ವಿಳಾಸ, ಆನ್‌ಲೈನ್ ದಾಖಲೆ ಸಲ್ಲಿಕೆ ಬಿಟ್ಟರೆ ಬೇರೆ ಯಾವ ಆಧಾರ ಕೇಳುವುದಿಲ್ಲ. ಇಷ್ಟನ್ನೇ ನಂಬಿ ಸಾಲ ಕೊಡುತ್ತಾರೆ.

ಕಪಟ ಮೋಸ ಕಡಿತ:

ಕಪಟ ಮೋಸ ಕಡಿತ:

ಆನ್‌ಲೈನ್ ಸಾಲ ಕಪಟ ಮೋಸ. ಒಬ್ಬ ವ್ಯಕ್ತಿ ಮೂರು ಸಾವಿರ ಕಿರು ಸಾಲಕ್ಕೆ ಅರ್ಜಿ ಹಾಕಿದರೆ, ಮೂರು ಸಾವಿರ ರೂ. ಸಾಲ ಮಂಜೂರು ಆಗಿರುತ್ತದೆ. ಶೇ. 36 ರಷ್ಟು ಬಡ್ಡಿ ದರ ವಿಧಿಸುತ್ತವೆ. ಅದೂ ಒಂದು ವಾರಕ್ಕೆ. ಜಿಎಸ್ ಟಿ, ಸೇವಾ ಶುಲ್ಕ ಅಂತ ಸೇರಿಸಿ ಕೈಗೆ ಕೊಡುವುದು ಕೇವಲ 1800 ರೂ. ಮಾತ್ರ. ಉಳಿದ 1200 ರೂಪಾಯಿ ಬಡ್ಡಿ ರೂಪದಲ್ಲಿ ಕಡಿತಗೊಳಿಸಿರುತ್ತಾರೆ. ಕಟ್ಟಬೇಕಾದರೆ ಮೂರು ಸಾವಿರ ಕಟ್ಟಲೇಬೇಕು. ಅಂದರೆ 1800 ರೂಪಾಯಿಗೆ 1200 ರೂಪಾಯಿ ಬಡ್ಡಿ !

ಮಾನ ಹರಾಜು:

ಮಾನ ಹರಾಜು:

ಆನ್‌ಲೈನ್ ತುರ್ತು ಸಾಲಕ್ಕೆ ಅರ್ಜಿ ಹಾಕುವ ವ್ಯಕ್ತಿಗಳ ವಿವರ ಜತೆಗೆ ಮೊಬೈಲ್‌ ನಲ್ಲಿರುವ ಎಲ್ಲಾ ದತ್ತಾಂಶಗಳನ್ನು ಆಪ್‌ಗಳು ಕದ್ದಿರುತ್ತವೆ. ಸಂಪರ್ಕ ಸಂಖ್ಯೆ, ಸಂದೇಶಗಳ ಸಮೇತ ಎಲ್ಲಾ ಮಾಹಿತಿ ಕಳುವು ಆಗಿರುತ್ತದೆ. ಒಂದು ವೇಳೆ ಕಾಲಮಿತಿಯಲ್ಲಿ ಸಾಲ ಪಾವತಿಸದಿದ್ದರೆ, ಅವರಿಗೆ ಮೊದಲ ಹಂತದಲ್ಲಿ ಕರೆ ಮಾಡಿ ಬಾಯಿಗೆ ಬಂದಂಗೆ ಮಾತಾಡಿ ಮಾನ ಹರಾಜು ಹಾಕುತ್ತಾರೆ. ಬಳಿಕ ಅವರ ಸಂಪರ್ಕದಲ್ಲಿರುವ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಇಂತಹ ವ್ಯಕ್ತಿ ಸಾಲ ಪಡೆದು ಮೋಸ ಮಾಡಿದ್ದಾರೆ. ನೀವಾದರೂ ಕೊಡಿಸಿ ಎಂದು ಹೇಳಿ ಮರ್ಯಾದೆ ತೆಗೆಯುತ್ತಾರೆ.

ಇಷ್ಟಕ್ಕೆ ಬಿಡದೇ ಅಂತಿಮವಾಗಿ ಸಾಲ ಪಡೆದು ಕಾಲಮಿತಿಯಲ್ಲಿ ಕಂತು ಪಾವತಿಸದಿದ್ದಲ್ಲಿ ಅವರ ಭಾವಚಿತ್ರ ಬಳಸಿ ವಂಚಕ, 420, ಚೀಟರ್, ಎಂಬ ಅಡಿ ಬರಹ ಬರೆದು, ಸಂಪರ್ಕದಲ್ಲಿರುವ ಎಲ್ಲರ ವಾಟ್ಸಪ್, ಟೆಲಿಗ್ರಾಪ್, ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಗಳಿಗೆ ಸಂದೇಶ ರವಾನಿಸಲಾಗುತ್ತದೆ. ಅಷ್ಟೋ ಮುಂದಿಗೆ ಸಂದೇಶ ಮೂರು ಕಾಸಿಗೆ ಮರ್ಯಾದೆ ಇಲ್ಲದಂತೆ ಮಾನ ಹರಾಜು ಹಾಕುತ್ತವೆ. ಹೀಗೆ ಮರ್ಯಾದೆ ತೆಗೆಯುವ ಗುತ್ತಿಗೆಯನ್ನು ಕೆಲವು ಕಾಲ್ ಸೆಂಟರ್‌ ಗಳಿಗೆ ನೀಡಿದ್ದು, ಈ ಮೈಕ್ರೋ ಫೈನಾನ್ಸ್ ಆಪ್‌ ಗಳು ಡೀ ಫಾಲ್ಟರ್ ವಸೂಲಿ ಕಾರ್ಯವನ್ನು ಗುತ್ತಿಗೆ ನೀಡುತ್ತವೆ.

ಮಾಹಿತಿ ಕಳ್ಳತನ:

ಮಾಹಿತಿ ಕಳ್ಳತನ:

ಆನ್‌ಲೈನ್‌ ನಲ್ಲೇ ತುರ್ತು ಸಾಲ ನೀಡುವ ಈ ಆಪ್‌ಗಳು ಯಾರಿಗೂ ಗೊತ್ತಿಲ್ಲದಂತೆ ಮಹಾ ಅಪರಾಧ ಎಸಗುತ್ತಿವೆ. ಸಾಲ ಬಯಸಿ ಅರ್ಜಿ ಹಾಕುವರ ಎಲ್ಲಾ ವಿವರ ಜತೆಗೆ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಮೊಬೈಲ್ ನಂಬರ್ ಸಮೇತ ಎಲ್ಲಾ ಮಾಹಿತಿ ಕಳುವು ಮಾಡುತ್ತಿವೆ. ಸಾಲಕ್ಕೆ ಅರ್ಜಿ ಹಾಕುವರ ಜತೆಗೆ ಇತರರ ದತ್ತಾಂಶ ಕದ್ದಿರುವ ಸಂಬಂಧ ಈಗಾಗಲೇ ಬೆಂಗಳೂರಿನ ಸಿಐಡಿ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಈ ಸಂಬಂಧ ಕೇಸು ದಾಖಲಿಸಿದ್ದಾರೆ. ಆಪ್‌ ನ್ನು ಡೌನ್‌ಲೋಡ್ ಮಾಡಿಕೊಳ್ಳುವ ವೇಳೆ ಇಡೀ ಮೊಬೈಲ್‌ನಲ್ಲಿರುವ ಸಂಪೂರ್ಣ ದತ್ತಾಂಶವನ್ನು ಆಪ್‌ಗಳು ಪಡೆದುಕೊಂಡಿರುತ್ತವೆ. ಐಟಿ ಕಾಯ್ದೆ ಅಡಿ ಇದು ಅಪರಾಧ. ಆದರೂ ಸಾಲ ಕೊಡುವ ಆನ್‌ಲೈನ್ ಮೈಕ್ರೋ ಫೈನಾನ್ಸ್ ಕಂಪನಿಗಳು ಮೋಸ ಹೀಗೆ ಮೋಸ ಮಾಡುತ್ತಿವೆ.

ಸಿಸಿಬಿ ಮೊದಲ ಕೇಸು:

ಸಿಸಿಬಿ ಮೊದಲ ಕೇಸು:

ಕಿರು ಸಾಲ ಪಡೆದ ವ್ಯಕ್ತಿಗಳ ದತ್ತಾಂಶ ಕದ್ದು, ಕಾನೂನುಬಾಹಿರ ಬಡ್ಡಿ ವಸೂಲಿ ಮಾಡುತ್ತಿರುವ ಆನ್‌ಲೈನ್ ಆಪ್‌ಗಳ ವಿರುದ್ಧ ರಾಜ್ಯದಲ್ಲಿ ಮೊದಲು ಸಿಸಿಬಿ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿಪರ್ಯಾಸ ಎಂದರೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಂಜನ್ ಕುಮಾರ್ ಮತ್ತು ಹರೀಶ್ ತಂಡ ಈ ವಂಚಕ ಆಪ್‌ಗಳ ವಿರುದ್ಧ ಸಮರ ಸಾರಿದೆ. ಮಸನೋ ಇಚ್ಛೆ ಬಡ್ಡಿ ವಸೂಲಿ ಮಾಡುವ ಜತೆಗೆ ದತ್ತಾಂಶ ಕಳವು ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಆಪ್ ಗಳ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಸುಮಾರು ಇಪ್ಪತ್ತೈದು ವಂಚಕ ಆಪ್‌ ಗಳ ಆರ್ಥಿಕ ವಹಿವಾಟಿನ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಇತ್ತಿಚೆಗೆ ಕೆಲವಡೆ ದಾಳಿ ನಡೆಸಿದ್ದರು. ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 300 ಕ್ಕೂ ಹೆಚ್ಚು ಆನ್‌ಲೈನ್ ಸಾಲ ಕೊಡುವ ಆಪ್‌ಗಳಿವೆ. ಜನರನ್ನು ಸುಲಿಗೆ ಮಾಡುವ ಜತೆಗೆ ಮಾಹಿತಿ ಕದ್ದು ಮೂರು ಕಾಸಿಗೆ ಮಾನ ಹರಾಜು ಹಾಕುತ್ತಿವೆ.

ಸಿಐಡಿ ಪೊಲೀಸರಿಂದ ದಾಳಿ:

ಸಿಐಡಿ ಪೊಲೀಸರಿಂದ ದಾಳಿ:

ಬಿಡಿಗಾಸು ಸಾಲಕ್ಕೆ ದುಪ್ಪಟ್ಟು ಬಡ್ಡಿ ವಿಧಿಸಿ ಮೋಸ ಮಾಡಿದ್ದ ಮೈಕ್ರೋ ಫೈನಾನ್ಸ್ ಆಪ್‌ ಗಳನ್ನು ನಿರ್ವಹಿಸುತ್ತಿದ್ದ ಬೆಂಗಳೂರಿನ ನಾಲ್ಕು ಕಂಪನಿಗಳ ಮೇಲೆ ಸಿಐಡಿ ಸೈಬರ್ ವಿಭಾಗದ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮ್ಯಾಡ್‌ ಎಲಿಪಾಂಟ್ ಟೆಕ್ನಾಲಜೀಸ್, ಪ್ರೆ. ಲಿ, ಬಾರಾಯಾಂಕ್ಷಿ ಟೆಕ್ನಾಲಜೀಸ್ ಪ್ರೆ. ಲಿ, ಫ್ಯಾಪಿಟೈಸ್ ಟೆಕ್ನಾಲಜೀಸ್ ಪ್ರೆ. ಲಿ, ಮತ್ತು ವಿಝ್ ಪ್ರೋ ಸಲ್ಯೂಷನ್ಸ್ ಪ್ರೆ. ವಿರುದ್ಧ ಕೇಸು ದಾಖಲಿಸಿದ್ದಾರೆ. ನಾಲ್ಕು ಕಂಪನಿಗಳ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಹಾಗೂ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆನ್‌ಲೈನ್‌ ನಲ್ಲಿ ಸಾಲ ಪಡೆದು ಮೋಸ ಹೋದವರು ಸಿಐಡಿ ಸೈಬರ್ ಪೊಲೀಸ್ ಘಟಕ ಸಂಪರ್ಕಿಸಲು ಕೋರಲಾಗಿದೆ.

ವಿದೇಶಿ ಹೂಡಿಕೆ:

ವಿದೇಶಿ ಹೂಡಿಕೆ:

ಕೊರೊನಾದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾದವರು ಸಹಜವಾಗಿ ಆನ್‌ಲೈನ್‌ ನಲ್ಲಿ ತುರ್ತು ಸಾಲ ತೆಗೆದುಕೊಳ್ಳುವ ಪ್ರಮಾಣ ಜಾಸ್ತಿಯಾಗಿದೆ. ಇದನ್ನೇ ಅರಿತ ವಿದೇಶಿಯರು ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಕಡಿಮೆ ಮೊತ್ತ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿರುವ ಈ ಕಂಪನಿಗಳು ನೂರಾರು ಆಪ್‌ ಗಳ ಮೂಲಕ ತನ್ನ ಕಾರ್ಯ ಜಾಲ ವಿಸ್ತರಿಸಿವೆ. ದೇಶದಲ್ಲಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಿಯಮಗಳ ನೆಪದಲ್ಲಿ ಕಾನೂನು ಬಾಹಿರವಾಗಿ ಬಡ್ಡಿ ದಂಧೆ ನಡೆಸುವ ಕಾರ್ಯದಲ್ಲಿ ತೊಡಗಿವೆ.

ಆರ್‌ಬಿಐ ಎಚ್ಚರಿಕೆ:

ಆರ್‌ಬಿಐ ಎಚ್ಚರಿಕೆ:

ಆನ್‌ಲೈನ್ ಮೂಲಕ ತುರ್ತು ಸಾಲ ನೀಡುವ ಆಪ್‌ ಗಳ ಬಗ್ಗೆ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ ಬ್ಯಾಂಕ್ ಎಚ್ಚೆತ್ತುಕೊಂಡಿದೆ. ಡಿಜಿಟಲ್ ಸಾಲ ನೀಡುವ ಆಪ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ತುರ್ತು ಸಾಲ ನೀಡಿ ಸಾಲಗಾರರಿಂದ ಅಧಿಕ ಬಡ್ಡಿ ವಸೂಲಿ ಮಾಡುವ ಜತೆಗೆ ಅವರ ದತ್ತಾಂಶ ಕದ್ದು ಮಾನ ಹರಾಜು ಹಾಕಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ನೊಂದಾಯಿತ ಬ್ಯಾಂಕ್ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ಹಣಕಾಸು ಸಂಸ್ಥೆಗಳು ಮಾತ್ರ ಅರ್ಹತೆ ಹೊಂದಿರುತ್ತವೆ. ಆನ್‌ಲೈನ್ ನಲ್ಲಿ ತುರ್ತು ಸಾಲ ನೀಡುವಂತಹ ಕಾನೂನು ಬಾಹಿರ ಆಪ್‌ ಗಳು ಬೀಸುವ ಬಲೆಗೆ ಬೀಳದಂತೆ ಆರ್‌ಬಿಐ ಮುಖ್ಯ ಜನರಲ್ ಮ್ಯಾನೇಜರ್ ಯೋಗೇಶ್ ದಯಾಳ್ ಮನವಿ ಮಾಡಿದ್ದಾರೆ. ಆರ್‌ಬಿಐ ನೋಂದಾಯಿತ ಡಿಜಿಟಲ್ ಸಾಲ ಕೊಡುವ ಸಂಸ್ಥೆಗಳಲ್ಲಿ ಮಾತ್ರ ಸಾಲ ಪಡೆಯಬೇಕು. ಕಾನೂನು ಬಾಹಿರವಾಗಿ ಹೆಚ್ಚುವರಿ ಶುಲ್ಕಗಳ ಜತೆಗೆ ದುಬಾರಿ ಬಡ್ಡಿ ವಸೂಲಿ ಮಾಡುತ್ತಿರುವ ಆನ್‌ಲೈನ್ ಆಪ್‌ ಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ತನಿಖಾ ಸಂಸ್ಥೆಗಳಿಗೆ ದೂರು ನೀಡಲು ಆರ್‌ಬಿಐ ಕೋರಿದೆ. ಈ ಆನ್‌ಲೈನ್ ಆಪ್‌ಗಳು ಯಾವುವೂ ಸಹಹ ನಿಯಮದ ಪ್ರಕಾರ ಆರ್‌ಬಿಐನಲ್ಲಿ ನೋಂದಣಿ ಮಾಡಿಲ್ಲ. ಅವಷ್ಟೇ ಈ ಕೃತ್ಯದಲ್ಲಿ ತೊಡಗಿವೆ.

ಸೈಬರಾಬಾದ್ ಪೊಲೀಸರ ದಾಳಿ:

ಸೈಬರಾಬಾದ್ ಪೊಲೀಸರ ದಾಳಿ:

ಆನ್‌ಲೈನ್ ಸಾಲ ನೀಡುವ ಆಪ್ ಗಳ ವಿರುದ್ಧ ನೆರೆ ರಾಷ್ಟ್ರ ತೆಲಂಗಾಣದಲ್ಲಿ ಸೈಬರಾಬಾದ್ ಪೊಲೀಸರು ಸಮರ ಸಾರಿದ್ದಾರೆ. ದೆಹಲಿ, ಗುರಂಗಾವ್ ಸೇರಿದಂತೆ ನಾನಾ ಕಡೆ ದಾಳಿ ನಡೆಸಿ ಹದಿನೇಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಾರು ಹದಿನೇಳು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ.

ಹಣ ವಸೂಲಿ ಮಾಡಿ ಜನರಿಗೆ ಹಿಂಸೆ ಕೊಡಲು ಸುಮಾರು ಸಾವಿರಕ್ಕೂ ಹೆಚ್ಚು ಮಂದಿಯನ್ನು ನೇಮಿಸಿಕೊಂಡು ಅಕ್ರಮ ವಹಿವಾಟು ನಡೆಸುತ್ತಿದ್ದರು ಎಂಬ ಸಂಗತಿಯನ್ನು ಸೈಬರಾಬಾದ್ ಕಮೀಷನರ್ ಸಜ್ಜನರ್ ಹೇಳಿಕೆ ನೀಡಿದ್ದರು.ಇದೀಗ ಕರ್ನಾಟಕ ಪೊಲೀಸರು ಕೂಡ ಕಾನೂನು ಬಾಹಿರ ಲೋನ್ ಆಪ್‌ ಗಳ ವಿರುದ್ಧ ಸಮರ ಸಾರಿದ್ದಾರೆ.

ಒಂದು ಪ್ರಕರಣದ ವಿವರ:

ಒಂದು ಪ್ರಕರಣದ ವಿವರ:

ಇತ್ತೀಚೆಗೆ ವ್ಯಕ್ತಿಯೊಬ್ಬರು ಐದು ಸಾವಿರ ರೂಪಾಯಿ ಸಾಲ ಪಡೆದಿದ್ದರು. ಒಂದು ವಾರದಲ್ಲಿ ಪಾವತಿ ಮಾಡುವಂತೆ ಸೂಚಿಸಿದ್ದರು. ಅನಿವಾರ್ಯ ಕಾರಣದಿಂದ ಸಾಲ ಪಾವತಿ ಮಾಡಲು ಆಗಿರಲಿಲ್ಲ. ALP CASH ಹೆಸರಿನ ಆಪ್ ಮೂಲಕ ಸಾಲ ಪಡೆದಿದ್ದ ಯುವಕನನ್ನು ಡೀಫಾಲ್ಟರ್ ಎಂದು ಬಿಂಬಿಸಿ ಆತನ ಪೋಟೋ ದುರ್ಬಳಕೆ ಮಾಡಿಕೊಂಡು ಆತನ ಮೊಬೈಲ್‌ ನಲ್ಲಿರುವ ಎಲ್ಲಾ ಸ್ನೇಹಿತರಿಗೂ ಸಂದೇಶ ರವಾನಿಸಿದ್ದಾರೆ. ಈತ ಸಾಲ ಪಡೆದು ಮೋಸ ಮಾಡಿದ್ದಾರೆ ಎಂಬ ಒಕ್ಕಣೆ ಬರೆದು ಪೋಟೋ ನೋಡಿ ಸ್ನೇಹಿತರು ಮತ್ತು ಸಂಬಂಧಿಕರು ಗಾಬರಿಯಾಗಿದ್ದಾರೆ.. ಇನ್ನೂ ಕೆಳ ಹಂತಕ್ಕೆ ಇಳಿಯುವ ಆಪ್ ಗಳು ನಿಮ್ಮ ಸ್ನೇಹಿತ ಸಾಲ ಪಡೆದು ತೀರಿಸಲಾಗಿಲ್ಲ. ನೀವು ಪಾವತಿ ಮಾಡಿ ಎಂಬ ಸಂದೇಶಗಳು ರವಾನಿಸುತ್ತವೆ !

ಒನ್ಇಂಡಿಯಾ ಕನ್ನಡ ಕಳಕಳಿ

ಒನ್ಇಂಡಿಯಾ ಕನ್ನಡ ಕಳಕಳಿ

ತುರ್ತು ಸಾಲ ಪಡೆಯಬೇಕಾದರೆ ಆರ್‌ಬಿಐ ನೊಂದಾಯಿತ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಮಾತ್ರ ತೆಗೆದುಕೊಳ್ಳಿ. ತುರ್ತು ಸಾಲ ಎಂದು ಆನ್‌ಲೈನ್ ಆಪ್‌ಗಳ ಮೂಲಕ ಸಾಲ ಪಡೆದರೆ, ಮೂರು ಕಾಸಿಗೆ ಮಾನ ಬೀದಿಯಲ್ಲಿ ಹರಾಜಾಗುತ್ತದೆ. ಒಮ್ಮೆ ಹೋದ ಮಾನ ವಾಪಸು ಪಡೆಯಲು ಸಾಧ್ಯವಿಲ್ಲ. ಆರ್‌ಬಿಐ ನೊಂದಾಯಿತ ಸಾಲ ಸಂಸ್ಥೆಗಳಿಂದ ಹೆಚ್ಚುವರಿ ಬಡ್ಡಿ ವಸೂಲಿ ಮಾಡಿದರೆ ಅಂತಹ ಸಂಸ್ಥೆಗಳ ವಿರುದ್ಧ ಆರ್‌ಬಿಐ ಅಥವಾ ಸ್ಥಳೀಯ ತನಿಖಾ ಸಂಸ್ಥೆಗಳಿಗೆ ದೂರು ನೀಡಬಹುದು. ಹೀಗಾಗಿ ಅನಧಿಕೃತ ಆಪ್‌ಗಳಲ್ಲಿ ಸಾಲ ಪಡೆದು ಸಂಪೂರ್ಣ ಖಾಸಗಿ ವಿವರ ಕಳ್ಳತನಕ್ಕೆ ಅವಕಾಶ ನೀಡಬೇಡಿ ಎಂಬುದು ಒನ್ಇಂಡಿಯಾ ಕನ್ನಡ ಕಳಕಳಿ.

English summary
Instant loan app scam: desc: online Money lending Apps are illegally taking high interest and violating RBI rules. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X