keyboard_backspace

ಗೃಹ ಸಚಿವರೇ ಐಎಂಎ ವಂಚನೆ ಪ್ರಕರಣದ ಪರಿಹಾರಕ್ಕೆ ಕಾಲಮಿತಿ ಫಿಕ್ಸ್ ಮಾಡುವಿರಾ ?

Google Oneindia Kannada News

ಬೆಂಗಳೂರು, ಆ. 28: ಐಎಂಎನಲ್ಲಿ ಹೂಡಿಕೆ ಮಾಡಿ. ಕಡಿಮೆ ಬೆಲೆಗೆ ಚಿನ್ನವೇ ತೆಗೆದುಕೊಂಡು ಹೋಗಿ. ಇಲ್ಲವೇ ಬಡ್ಡಿ ಸಮೇತ ಹಣ ಕೊಡುವ ಆಸೆ ಹುಟ್ಟಿಸಿ ಹುಟ್ಟಿಕೊಂಡ ಐಎಂಎನಿಂದ ಬೀದಿಗೆ ಬಿದ್ದವರು ಬರೋಬ್ಬರಿ ಒಂದು ಲಕ್ಷ ಮಂದಿ. ಮನ್ಸೂರ್ ಆಲಿಖಾನ್ ಎಂಬ ವಂಚಕ ಮತ್ತು ಪಟಾಲಂ ಸಾರ್ವಜನಿಕರಿಂದ ಸ್ವೀಕರಿಸಿದ್ದು ಸರಿ ಸುಮಾರು 2900 ಕೋಟಿ ರೂ. ಎಸ್ಐಟಿ ತನಿಖೆ, ಸಿಬಿಐ ದಾಳಿ, ಇಡಿ ಕಾರ್ಯಾಚರಣೆಗೆ ತುತ್ತಾಗಿರುವ ಐಎಂಎನಿಂದ ಜನರಿಗೆ ಕೊಡಲು ಸದ್ಯ ತುರ್ತಾಗಿ ಉಳಿದಿರುವ ಮೊತ್ತ ನೂರು ಕೋಟಿ ರೂ. ಉಳಿದ 400 ಕೋಟಿ ರೂ. ಮೌಲ್ಯದ ಆಸ್ತಿಗಳು ತನಗೆ ಸೇರಿದ್ದು ಎಂದು ಮನ್ಸೂರ್ ಖಾನ್ ಕಾನೂನು ಸಮರ ಆರಂಭಿಸಿದ್ದಾನೆ. ಖಾನ್ ಸ್ಥಿರಾಸ್ತಿ ಮಾರಾಟ ಮಾಡಿ ಮೋಸ ಹೋದವರಿಗೆ ಅಸಲು ಪಾವತಿಸಲ ಇನ್ನೂ ಒಂದು ಸಾವಿರ ಕೋಟಿ ಬೇಕು ! ಆಸ್ತಿ ಮಾಲಿಕತ್ವ ಸಂಬಂಧ ಖಾನ್ ಸಲ್ಲಿಸಿರುವ ದಾವೆಯಲ್ಲ ಗೆದ್ದರೆ, ಹೂಡಿಕೆದಾರರ ಕಥೆ ಮುಗಿದಂತೆ ! ಇದು ಐಎಂಎ ವಂಚನೆಯ ಇವತ್ತಿನ ವಸ್ತುಸ್ಥಿತಿ !

ಐಎಂಎ ಎಂಬ ವಂಚಕ ಕಂಪನಿ ಹುಟ್ಟು

ಐಎಂಎ ಎಂಬ ವಂಚಕ ಕಂಪನಿ ಹುಟ್ಟು

ರಾಜ್ಯದಲ್ಲಿ ಬಡ ಜನರಿಗೆ ಮೋಸ ಮಾಡುವ ಬ್ಲೇಡ್ ಸ್ಕೀಮ್ ಗಳು ಒಂದೆರಡಲ್ಲ. ಬರೋಬ್ಬರಿ 45 ಕ್ಕೂ ಅಧಿಕ ಬ್ಲೇಡ್ ಸ್ಕೀಮ್ ಗಳಿಗೆ ಲಕ್ಷಾಂತರ ಮಂದಿ ಬಲಿಯಾಗಿ ಬೀದಿಗೆ ಬಿದ್ದಿದ್ದಾರೆ. ಕಳೆದ ಒಂದು ದಶಕದಲ್ಲಿ ನಡೆದ ಈ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಒಂದು ಸಮುದಾಯದ ಅತಿ ಹೆಚ್ಚು ಜನರಿಗೆ ಉಂಡೆನಾಮ ಹಾಕಿದ್ದು ಐಎಂಎ ಕಂಪನಿ.

ಮನ್ಸೂರ್ ಆಲಿಖಾನ್ ಮತ್ತು ಇಲಿಯಾಸ್ ಎಂಬುವರು ಸೇರಿ 2006 ರಲ್ಲಿ ಇಲಿಯಾಸ್- ಮನ್ಸೂರ್- ಅಡ್ವೈಸರಿ ಎಂಬ ಕಂಪನಿಯನ್ನು ಅವರದ್ದೇ ಹೆಸರಿನಲ್ಲಿ ಹುಟ್ಟು ಹಾಕಿದ್ದರು.

ಈ ಕಂಪನಿ ನಷ್ಟಹೊಂದಿದ ಮೇಲೆ 2008 ರಲ್ಲಿ ಮನ್ಸೂರ್ ಐ ಮಾನಿಟರಿ ಅಡ್ವೈಸರಿ ಎಂಬ ಕಂಪನಿಯನ್ನು ಹುಟ್ಟು ಹಾಕಿದ. ಧರ್ಮಗುರುಗಳ ಸಂಪರ್ಕ ಬೆಳೆಸಿ ಐಎಎಂ ವಂಚಕ ಹೂಡಿಕೆ ಮಾಡುವಂತೆ ಭಾಷಣ ಬಿಗಿಸಿದ. ಹೀಗೆ ಹೂಡಿಕೆ ಮಾಡಿಸಿಕೊಂಡ ಹಣದಲ್ಲಿ ಐಎಂಎ ಜ್ಯುವೆಲರಿ, ಐಎಂಎ ಬುಲಿಯನ್ಸ್ ಐಎಂಎ ಗೋಲ್ಡ್, ಮಲ್ಬರಿ ಗ್ರೀನ್ಸ್, ಫ್ರಂಟ್ ಲೈನ್ ಫಾರ್ಮಾ ಹೀಗೆ ಮನಸಿಗೆ ತೋಚಿದ ಉದ್ಯಮಗಳನ್ನು ಸ್ಥಾಪನೆ ಮಾಡಿದ.

ಚಿನ್ನದ ಮೇಲೆ ಆಸೆಗೆ ಬಿದ್ದ ಜನರ ಮಹಾ ಹೂಡಿಕೆ

ಚಿನ್ನದ ಮೇಲೆ ಆಸೆಗೆ ಬಿದ್ದ ಜನರ ಮಹಾ ಹೂಡಿಕೆ

ಮನ್ಸೂರ್ ಆಲಿಖಾನ್ ಜನರಿಗೆ ಬ್ಲೇಡ್ ಸ್ಕೀಮ್ ಪರಿಚಯಿಸಿ ಹೂಡಿಕೆ ಮಾಡಿಸಿಕೊಂಡ ಬಳಿಕ ನಂಬಿಕೆ ಬರುವಂತೆ ನಾನಾ ಸಂಸ್ಥೆಗಳನ್ನು ಸ್ಥಾಪನೆ ಮಾಡುತ್ತಲೇ ಇದ್ದ. ಈತನ ಶ್ರೀಮಂತಿಕೆ ನೋಡಿ ರಾಜಕಾರಣಿಗಳ ಬಾಂಧವ್ಯ ಬೆಳೆಸಿದರು, ರೋಷನ್ ಬೇಗ್, ಜಮೀರ್ ಅಹಮದ್ ಖಾನ್ ಸಂಪರ್ಕ ದಿಂದ ನಾಡನ್ನು ಆಳಿದ ನಾಯಕರು ಖಾನ್ ಮನೆಯೂಟಕ್ಕೆ ಹೋಗಿ ಬರುವಂತೆ ಆಯಿತು.

ಹೀಗಾಗಿ ಹೂಡಿಕೆ ಮಾಡಿದ ಜನರಲ್ಲಿ ಈ ಮೂಲಕ ದೊಡ್ಡ ನಂಬಿಕೆ ಹುಟ್ಟಿ ಹಾಕಿದ. ಐಎಂಎ ಗೋಲ್ಡ್, ಐಎಂಎ ಜ್ಯುವೆಲರಿ ಮೂಲಕ ಒಂದಷ್ಟು ಹೂಡಿಕೆದಾರರಿಗೆ ಹಣ ವಾಪಸು ಮಾಡುತ್ತಿದ್ದರಿಂದ ಯಾರೂ ಸೊಲ್ಲೆತ್ತುತ್ತಿರಲಿಲ್ಲ. ಹೀಗಾಗಿ ಐಎಂಎ ನಿರ್ದೇಶಕರ ಪಟ್ಟಿ ಕೂಡ 30 ರ ಗಡಿ ದಾಟಿತ್ತು. ಮನ್ಸೂರ್ ಆಲಿಖಾನ್ ಐಎಂಎ ಸಾಮ್ರಾಜ್ಯ ನೋಡಿ ವಿಪರ್ಯಾಸವೆಂದರೆ ಪೊಲೀಸರು ಕೂಡ ಹೂಡಿಕೆ ಮಾಡಿದ್ದರು.

ಪೊಲೀಸರಿಂದ ಹೆಜ್ಜೆ ಹೆಜ್ಜೂ ತಪ್ಪು ನಡೆ

ಪೊಲೀಸರಿಂದ ಹೆಜ್ಜೆ ಹೆಜ್ಜೂ ತಪ್ಪು ನಡೆ

ಐಎಂಎ ಬೇನಾಮಿ ವಹಿವಾಟಿನ ಬಗ್ಗೆ ಆರ್‌ಬಿಐ ಎಚ್ಚರಿಕೆ ನೀಡಿತ್ತು. ಕಂದಾಯ ಇಲಾಖೆಗೆ ಪತ್ರ ಬರೆದು ಐಎಂಎ ವಹಿವಾಟಿನ ಬಗ್ಗೆ ತನಿಖೆ ನಡೆಸಲು ಸೂಚಿಸಿತ್ತು. ಮನ್ಸೂರ್ ಖಾನ್ ಜತೆ ಶಾಮೀಲಾದ ಬೆಂಗಳೂರು ನಗರ ಜಿಲ್ಲೆಯ ಕಂದಾಯ ಅಧಿಕಾರಿಗಳು ಎಲ್ಲಾ ವಹಿವಾಟು ಸರಿಯಾಗಿಯೇ ಇದೆ ಎಂದು ವರದಿ ನೀಡಿದ್ದರು.

ಇದಕ್ಕೂ ಮೊದಲು ಬೆಂಗಳೂರು ಪೊಲೀಸರು ಅಕ್ರಮ ಲಾಭ ಮಾಡಿಕೊಂಡು ಮನ್ಸೂರ್ ಖಾನ್ ಬೋಗಸ್ ಹೂಡಿಕೆ ಸ್ಕೀಮ್ ಗಳು ಕಾನೂನು ಬದ್ಧವಾಗಿವೆ ಎಂಬ ಮುದ್ರೆ ಒತ್ತಿದ್ದರು. ಹೀಗಾಗಿ ಅಕ್ರಮದ ಬಗ್ಗೆ ಆರ್‌ಬಿಐ ಎಚ್ಚರಿಕೆ ನೀಡಿದರೂ, ಕಮರ್ಷಿಯಲ್ ಪೊಲೀಸ್ ಠಾಣಾ ಯಿಂದ ಹಿಡಿದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೂ ಐಎಂಎ ಅಕ್ರಮ ಮುಚ್ಚಿ ಹಾಕಲು ಏನೆಲ್ಲಾ ಅಗಬೇಕಿತ್ತು ಎಲ್ಲವೋ ಆದವು. ರಾಜಕಾರಣಿಗಳ ಸಾಂಗತ್ಯ ಗಳಿಸಿದ್ದ ಮನ್ಸೂರ್ ಆಲಿ ಖಾನ್ ತನಿಖೆ ಉರುಳಿನಿಂದ ತಪ್ಪಿಸಿಕೊಂಡಿದ್ದ.

2018 ರಲ್ಲಿ ಎಸ್ಕೇಪ್ ಆದ ಆಲಿಖಾನ್

2018 ರಲ್ಲಿ ಎಸ್ಕೇಪ್ ಆದ ಆಲಿಖಾನ್

ಹಣ ಹೂಡಿಕೆ ಮಾಡಿದವರಿಗೆ ವಾಪಸು ನೀಡದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಆಸಕ್ತಿ ವಹಿಸುತ್ತಿರಲಿಲ್ಲ. ಹೂಡಿಕೆ ಮಾಡಿದವರು ಅಸಲು ಬಂದರೆ ಸಾಕು ಎಂಬ ನಿಲುವು ತಾಳಿದರು. ಹೀಗಾಗಿ ಎಲ್ಲೂ ದೂರುಗಳು ಸ್ವೀಕಾರವಾಗಲಿಲಿಲ್ಲ. ಸಾವಿರಾರು ಜನ ಐಎಂಎ ಮುಂದೆ ಜಮಾಯಿಸಿ ಮನ್ಸೂರ್ ಖಾನ್ ಪ್ರಶ್ನೆ ಮಾಡಲು ಮುಂದಾದ ವೇಳೆ ರಾತ್ರೋ ರಾತ್ರಿ ಬೆಂಗಳೂರು ಬಿಟ್ಟು ಎಸ್ಕೇಪ್ ಆದ. ಮನ್ಸೂರ್ ಖಾನ್ ಪರಾರಿಯಾಗಿರುವ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು.

ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಐಎಂಎ ಮುಂದೆ ಜಮಾಯಿಸಿ ಪ್ರತಿಭಟನೆಗೆ ಆರಂಭಿಸಿದರು. ದೂರದಲ್ಲಿ ಕೂತು "ನನಗೆ ರೋಷನ್ ಬೋಗ್ ಮೋಸ ಮಾಡಿದರು. ಕೋಟ್ಯಂತರ ತೆಗೆದುಕೊಂಡು ವಂಚನೆ ಮಾಡಿದರು ಎಂಬ ವಿಡಿಯೋ ಬಿಟ್ಟು ನಾಟಕ ಆರಂಭಿಸಿದ. ಅಷ್ಟರಲ್ಲಿ ಮೋಸ ಹೋದವರ ಆಕ್ರೋಶ ಮುಗಿಲು ಮುಟ್ಟಿತ್ತು. ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿತು. ಐಎಂಎ ಆಸ್ತಿಗಳನ್ನು ಜಪ್ತಿ ಮಾಡಿತು.

ನೂರಾರು ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿತು. ಈ ಪ್ರಕರಣದಲ್ಲಿ ಹಲವು ರಾಜಕಾರಣಗಳ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತು. ಮನ್ಸೂರ್ ಆಲಿಖಾನ್ ಸೇರಿದಂತೆ ಅವರ ಪಟಾಲಂ ಬಂಧನಕ್ಕೆ ಒಳಗಾಯಿತು. ಐಎಂಎ ಬೇನಾಮಿ ವಹಿವಾಟು ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿದರು.

ಇನ್ನು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಕೂಡ ಸಿಬಿಐ ಬಂಧಿಸಿತ್ತು. ಇತ್ತೀಚೆಗೆ ಇಡಿ ಅಧಿಕಾರಿಗಳು ರೋಷನ್ ಬೇಗ್ ಮತ್ತು ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ ಮೇಲೆ ದಾಳಿ ಮಾಡಿತು. ಇನ್ನೊಂದಡೆ ಸಿಬಿಐ ಈವರೆಗೂ ನಾಲ್ಕು ಪ್ರಕರಣ ದಾಖಲಿಸಿದ್ದು, ಕೆಲವು ಪ್ರಕರಣಗಳಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ತನಿಖೆ ಮುಂದುವರೆದಿದ್ದು, ಜಾಮೀನು ಮೇಲೆ ಬಿಡುಗಡೆಯಾಗಿರುವ ಮನ್ಸೂರ್ ಖಾನ್ ಇದೀಗ ಜಪ್ತಿಯಾಗಿರುವ ಸ್ಥಿರಾಸ್ತಿಗಾಗಿ ಕಾನೂನು ಸಮರ ಆರಂಭಿಸಿದ್ದಾನೆ.

ಐಎಂಎ ಪರಿಹಾರ ಮತ್ತು ಸಕ್ಷಮ ಪ್ರಾಧಿಕಾರ

ಐಎಂಎ ಪರಿಹಾರ ಮತ್ತು ಸಕ್ಷಮ ಪ್ರಾಧಿಕಾರ

ಇನ್ನು ಐಎಂಎ ನಿಂದ ವಂಚನೆ ಪ್ರಕರಣ ಸಂಬಂಧ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅಧ್ಯಕ್ಷತೆಯಲ್ಲಿ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ. ಸದ್ಯಕ್ಕೆ ನೂರು ಕೋಟಿ ರೂ. ಮೊತ್ತವನ್ನು ಮೋಸಹೋದವರಿಗೆ ಮೊದಲ ಹಂತದಲ್ಲಿ ಸಕ್ಷಮ ಪ್ರಾಧಿಕಾರ ಅರ್ಹರಿಂದ ಅರ್ಜಿಗಳನ್ನು ಸ್ವೀಕರಿಸಿ ಬಿಡುಗಡೆ ಮಾಡುವ ಪ್ರತಿಕ್ರಿಯೆ ಆರಂಭಿಸಿದೆ.

ಐಎಂಎ ಸಕ್ಷಮ ಪ್ರಾಧಿಕಾರದ ಪ್ರಕಾರ ಮನ್ಸೂರ್ ಖಾನ್ ಬರೋಬ್ಬರಿ ಒಂದು ಲಕ್ಷ ಮಂದಿಗೆ 2900 ಕೋಟಿ ರೂ. ವಂಚನೆ ಮಾಡಿದ್ದಾನೆ. ಅದರಲ್ಲಿ 1400 ಕೋಟಿ ರೂ. ವಾಪಸು ರೂಪದಲ್ಲಿ ಪಾವತಿ ಮಾಡಿದ್ದಾರೆ. ಇನ್ನು 1500 ಕೋಟಿ ರೂ. ಪಾವತಿಸಬೇಕಿದ್ದು, ಸದ್ಯ ಐಎಎಂ ಸಕ್ಷಮ ಪ್ರಾಧಿಕಾರದ ಬಳಿ ಇರುವುದು ಕೇವಲ 100 ಕೋಟಿ.

ಮನ್ಸೂರ್ ಖಾನ್ ಜಪ್ತಿ ಆಸ್ತಿಯನ್ನು ಮಾರಾಟ ಮಾಡಿದರೂ ಬರುವ 400 ಕೋಟಿ ರೂ. ಹೊಂದಿಸಿದರೂ ಬಾಕಿ ಒಂದು ಸಾವಿರ ಕೋಟಿ ರೂ. ಪಾವತಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಇನ್ನು ಹೂಡಿಕೆ ಮಾಡಿದವರಿಗೆ ಮೊದಲ ಹಂತದಲ್ಲಿಅರ್ಹರಿಗೆ ತಲಾ 50 ಸಾವಿರ ರೂ. ಬ್ಯಾಂಕ್ ಖಾತೆಗಳಿಗೆ ರವಾನಿಸುವ ಪ್ರಕ್ರಿಯೆಗೆ ಸಕ್ಷಮ ಪ್ರಾಧಿಕಾರ ಚಾಲನೆ ನೀಡಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೂ ಹಲವು ತಿಂಗಳು ತಡವಾಗಲಿದೆ.

ಸದ್ಯಕ್ಕೆಂತೂ ಹೂಡಿಕೆ ಮಾಡಿದ ಹಣದಲ್ಲಿ ಶೇ. 30 ರಷ್ಟು ಹಣ ಸಿಗುವುದು ಕಷ್ಟ. ಇನ್ನೂ ಅದಕ್ಕಾಗಿ ಮನ್ಸೂರ್ ಖಾನ್ ಆಸ್ತಿ ವಿಚಾರವಾಗಿ ಸಲ್ಲಿಸಿರುವ ಪ್ರಕರಣಗಳು ಇತ್ಯರ್ಥವಾಗಬೇಕು. ಹರಾಜು ಪ್ರಕ್ರಿಯೆ ಮುಗಿಸಿ ಸಕ್ಷಮ ಪ್ರಾಧಿಕಾರ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು. ಹೀಗಾಗಿ ಇನ್ನೂ ಹಲವು ವರ್ಷಗಳೇ ಉರುಳಬಹುದು.

ಎಷ್ಟು ಅಕ್ರಮಗಳಿಗೆ ಹಾದಿ

ಎಷ್ಟು ಅಕ್ರಮಗಳಿಗೆ ಹಾದಿ

ರಾಜ್ಯದಲ್ಲಿ ಕಳೆದ ಒಂದೂವರೆ ದಶಕದಲ್ಲಿ 45 ಕ್ಕೂ ಹೆಚ್ಚು ಅಕ್ರಮಗಳು ನಡೆದಿವೆ. ಯಾವ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ಐಎಂಎ ಅಕ್ರಮವನ್ನು ದೇಶದ ಉನ್ನತ ತನಿಖಾ ಸಂಸ್ಥೆಗಳು ತನಿಖೆ ನಡೆಸಿದರೂ ಜನರಿಗೆ ಹಣ ಸಿಗುವ ಭರವಸೆ ಸಿಗುತ್ತಿಲ್ಲ.

ರಾಜ್ಯದಲ್ಲಿ ಬಡವರ ರಕ್ತ ಹೀರುವ ಬ್ಲೇಡ್ ಸ್ಕೀಮ್ ಪರಿಚಯಿಸುವ ವಂಚಕರ ವಿರುದ್ಧ ನಿಗಾ ಇಡುವ ವ್ಯವಸ್ಥೆ ರಾಜ್ಯದಲ್ಲಿ ಇಲ್ಲ. ಎಷ್ಟೋ ಆರ್ಥಿಕ ಅಪರಾಧಗಳು ಕಣ್ಣೆದುರು ನಡೆಯುತ್ತಿದ್ದರೂ, ತಮಗೂ ಅದಕ್ಕೂ ಸಂಬಂಧ ಇಲ್ಲದಂತೆ ಪೊಲೀಸರು ವರ್ತನೆ ಮಾಡಿರುವ ಉದಾಹರಣೆಗಳಿವೆ.

ಒಂದು ಆರ್ಥಿಕ ಅಪರಾಧ ನಡೆಯಲು ಅವಕಾಶ ಮಾಡಿಕೊಟ್ಟು ತನಿಖೆ ನಡೆಸುವುದಕ್ಕಿಂತಲೂ ಅದು ತಲೆಯೆತ್ತದಂತೆ ಕ್ರಮ ವಹಿಸುವುದು ಗೃಹ ಇಲಾಖೆಯ ಜವಾಬ್ಧಾರಿ. ಪೊಲೀಸರ ಕರ್ತವ್ಯ. ರಾಜ್ಯದ ಗೃಹ ಸಚಿವರಾಗಿರುವ ಅರಗ ಜ್ಞಾನೇಂದ್ರ ಅವರೇ ಐಎಎಂ ದ ಪರಿಹಾರ ವಿತರಣೆಗೆ ಕಾಲಮಿತಿ ನಿಗದಿ ಮಾಡಿ. ಪ್ರಕರಣದ ಸಮಗ್ರ ತನಿಖೆ ಸತ್ಯಾಂಶಗಳನ್ನು ಅರಿತು ಪರಿಹಾರ ಕುರಿತು ಏರ್ಪಟ್ಟಿರುವ ಗೊಂದಲಗಳನ್ನು ಪರಿಹರಿಸಿ. ಆರ್ಥಿಕ ಅಪರಾಧದಲ್ಲಿ ಮೋಸ ಹೋದವರಿಗೆ ನ್ಯಾಯ ಕೊಡಿಸುವ ಹೊಣೆಗಾರಿಕೆ ನಿಮ್ಮದೇ ಅಲ್ಲವೇ ?

English summary
Here's the details of the one lakh investors who got cheated in the IMA fraud case will get relief. know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X