keyboard_backspace

ಕೊಡಗಿನಲ್ಲಿದ್ದ ಟಾಟಾದ 1300 ಎಕರೆ ಜಾಗ ಸರ್ಕಾರದ ಪಾಲಾಗಿದ್ದು ಹೇಗೆ?

Google Oneindia Kannada News

ಮಡಿಕೇರಿ, ಡಿಸೆಂಬರ್ 11: ಕೊಡಗಿನ ಸುಮಾರು 1300 ಎಕರೆ ಪ್ರದೇಶವನ್ನು ಟೀ, ಕಾಫಿ ಬೆಳೆಯಲು ಕಂಪನಿಯೊಂದಕ್ಕೆ ಬ್ರಿಟಿಷರ ಕಾಲದಲ್ಲಿ ನೀಡಲಾಗಿತ್ತು. ಇದೀಗ ಟಾಟಾ ಕಂಪನಿಯ ಒಡೆತನದಲ್ಲಿರುವ ಈ ಜಾಗವನ್ನು ಸರ್ಕಾರಕ್ಕೆ ಒಪ್ಪಿಸುವಂತೆ ವಿರಾಜಪೇಟೆ ನ್ಯಾಯಾಲಯ ತೀರ್ಪು ನೀಡುವುದರೊಂದಿಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ವ್ಯಾಜ್ಯಕ್ಕೆ ತೆರೆ ಬಿದ್ದಂತಾಗಿದೆ.

ಇಷ್ಟಕ್ಕೂ ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿರುವ ಆ 1300 ಎಕರೆ ಪ್ರದೇಶ ಯಾವುದು? ಯಾರಿಗೆ ಸೇರಿದ್ದು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ಅಂದಿನ ಬ್ರಿಟಿಷ್ ಕಾಲಕ್ಕೆ ಎಳೆದೊಯ್ಯುತ್ತದೆ. ಬ್ರಿಟಿಷರು ಕಾಫಿ ಮತ್ತು ಟೀ ಬೆಳೆಯನ್ನು ಕೊಡಗಿನಲ್ಲಿ ಬೆಳೆಯಲು ಹಲವು ರೀತಿಯ ಪ್ರಯೋಗಗಳನ್ನು ಮಾಡಿದ್ದರು. ಅವರ ಕಾಲದಲ್ಲಿ ನಿರ್ಮಿಸಲಾದ ಕಾಫಿ ತೋಟಗಳು ಇನ್ನೂ ಇವೆ.

 1300 ಎಕರೆ ಜಾಗ 999 ವರ್ಷಗಳಿಗೆ ಲೀಸ್

1300 ಎಕರೆ ಜಾಗ 999 ವರ್ಷಗಳಿಗೆ ಲೀಸ್

ಅವತ್ತಿನ ಕಾಲದಲ್ಲಿ ಅಂದರೆ 1914 ಮತ್ತು 1915ರ ಕಾಲವಿರಬಹುದು. ಅವತ್ತು ಕೊಡಗಿನಲ್ಲಿ ಕಾಫಿ ಮತ್ತು ಟೀ ಬೆಳೆಯಲೆಂದೇ ಬ್ರಿಟಿಷ್ ಸರ್ಕಾರ ಮೆಕ್ ಡೋಗಲ್ ಗ್ಲೆನ್ ಲೋರ್ನಾ ಲಿಮಿಟೆಡ್ ಎಂಬ ಕಂಪನಿಗೆ 1300 ಎಕರೆ ಪ್ರದೇಶವನ್ನು 999 ವರ್ಷಗಳಿಗೆ ಲೀಸ್ ಆಧಾರದ ಒಪ್ಪಂದದಲ್ಲಿ ನಿಗದಿತ ಬಾಡಿಗೆಗೆ ನೀಡಿತ್ತು. ಜತೆಗೆ ಅದನ್ನು ಬದಲಾಯಿಸುವ ಅಧಿಕಾರವನ್ನು ಕೂಡ ಬ್ರಿಟಿಷ್ ಸರ್ಕಾರ ತನ್ನ ಬಳಿಯೇ ಇಟ್ಟುಕೊಂಡಿತ್ತು.

 ಟಾಟಾ ಕಾಫಿ ಲಿಮಿಟೆಡ್ ವಶದಲ್ಲಿದ್ದ ಎಸ್ಟೇಟ್‍

ಟಾಟಾ ಕಾಫಿ ಲಿಮಿಟೆಡ್ ವಶದಲ್ಲಿದ್ದ ಎಸ್ಟೇಟ್‍

ಆ ಕಾಲದಲ್ಲಿ ಈ ಪ್ರದೇಶ ದಟ್ಟ ಕಾಡುಗಳಿಂದ ಕೂಡಿದ್ದರಿಂದ ಕಾಫಿ ಮತ್ತು ಟೀ ಬೆಳೆಯಬೇಕಾದರೆ ಮರಗಳನ್ನು ತೆಗೆದು ಬಿಸಿಲು ಬೀಳುವಂತೆ ಮಾಡಬೇಕಾಗಿತ್ತು. ಹೀಗಾಗಿ ಮರಗಳನ್ನು ಕಡಿದು ಅವುಗಳ ಮೌಲ್ಯವನ್ನು ಅರಣ್ಯ ಇಲಾಖೆಯಿಂದ ನಿಗದಿಪಡಿಸಿ ಅದನ್ನು ಸರ್ಕಾರಕ್ಕೆ ಪಾವತಿಸುವಂತೆಯೂ ನಿರ್ಬಂಧ ಹೇರಿತ್ತು. ಇಷ್ಟೇ ಅಲ್ಲದೆ ಕಂಪನಿಯು ಸ್ಥಳೀಯ ಕಂದಾಯವನ್ನು ಕಟ್ಟುವಂತೆಯೂ ಸೂಚಿಸಲಾಗಿತ್ತು. ಬ್ರಿಟಿಷ್ ಸರ್ಕಾರದ ಕೃಪಾಕಟಾಕ್ಷದಲ್ಲಿ ಬ್ರಿಟಿಷ್ ಮೂಲದ ಕಂಪನಿಯು ಕೊಡಗಿನಲ್ಲಿ ಎಸ್ಟೇಟ್ ನಿರ್ಮಾಣ ಮಾಡಿ ಕಾಫಿ ಮತ್ತು ಟೀ ಬೆಳೆಯಲು ಆರಂಭಿಸಿತು.

ಈ ಎಸ್ಟೇಟ್‍ ಅವತ್ತಿನಿಂದ ಇವತ್ತಿನ ತನಕ ಹಲವು ಬದಲಾವಣೆ ಕಂಡಿದೆ. ಮೊದಲಿಗಿದ್ದ ಗ್ಲೆನ್ ಲೋರ್ನಾ ಕಂಪನಿ ಬಳಿಕ 1928ರಲ್ಲಿ ಅನಾರ್ಕಲ್ ಟೀ ಕಂಪನಿಗೆ ಗೇಣಿ ಆಧಾರದಲ್ಲಿ ನೀಡಿತು. ಅದಾದ ಬಳಿಕ 1985ರಲ್ಲಿ ಇದರ ಒಡೆತನವನ್ನು ಕನ್ಸಾಲಿಡೇಟೆಡ್ ಕಾಫಿ ಲಿಮಿಟೆಡ್‍ (ಸಿಸಿಎಲ್) ವಹಿಸಿಕೊಂಡಿತ್ತು. ಒಂದಷ್ಟು ವರ್ಷಗಳ ಬಳಿಕ ಅದನ್ನು ಟಾಟಾ ಕಾಫಿ ಲಿಮಿಟೆಡ್ ವಹಿಸಿಕೊಂಡು, ನಡೆಸಿಕೊಂಡು ಹೋಗುತ್ತಿತ್ತು.

 ಆರ್‌ಟಿಸಿಯಲ್ಲಿ ರೆಡೀಮ್ ಸಾಗು ಎಂದು ಬದಲಾವಣೆ

ಆರ್‌ಟಿಸಿಯಲ್ಲಿ ರೆಡೀಮ್ ಸಾಗು ಎಂದು ಬದಲಾವಣೆ

ಇದೆಲ್ಲದರ ನಡುವೆ 1940ರಲ್ಲಿ ಆಗಿನ ಕೂರ್ಗ್ ಕಮೀಷನರ್ 999 ವರ್ಷಗಳ ಅವಧಿಯನ್ನು 99 ವರ್ಷಗಳ ಅವಧಿಗೆ ಸೀಮಿತಗೊಳಿಸಿ ಬದಲಾವಣೆ ಮಾಡಿತ್ತು. ಆ ನಂತರದಲ್ಲಿ ಬಂದ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿದ್ದು, 2006ರಲ್ಲಿ ಲೀಸ್ ಅವಧಿಯನ್ನು 99 ವರ್ಷಕ್ಕೆ ಸೀಮಿತಗೊಳಿಸಿತ್ತು. ಜತೆಗೆ ಮರದ ಮೌಲ್ಯ ಗೇಣಿಯ ಬಾಡಿಗೆ ಸೇರಿ 520 ಕೋಟಿ ರೂ. ಹಣವನ್ನು ಸರ್ಕಾರಕ್ಕೆ ಪಾವತಿಸುವಂತೆಯೂ ಸೂಚಿಸಲಾಗಿತ್ತು. ಆದರೆ ಕಂಪನಿಯು ಇಡೀ 1300 ಎಕರೆ ಪ್ರದೇಶವನ್ನು ತನ್ನ ಒಡೆತನಕ್ಕೆ ವಹಿಸಿಕೊಳ್ಳಲು ಏನೆಲ್ಲ ಮಾಡಬಹುದೋ ಅದೆಲ್ಲ ಕಸರತ್ತುಗಳನ್ನು ಮಾಡಲು ಮುಂದಾಗಿತ್ತು.

ಹಿಂದಿನ ದಾಖಲೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿತ್ತು. ದಾಖಲೆಯಲ್ಲಿ ಇದ್ದಂತಹ ಪೈಸಾರಿ ಮೀಸಲು ಅರಣ್ಯ ಎಂಬುದಾಗಿ ಇದ್ದುದನ್ನು ಬದಲಾಯಿಸಿ ರೆಡೀಮ್ ಸಾಗು ಎಂದು ಮಾಡಿತ್ತು. ಇದು 2006 ಏಪ್ರಿಲ್ 7ರಂದು ಸರ್ಕಾರದ ಗಮನಕ್ಕೆ ಬಂದು ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆ ವಿರೋಧ ವ್ಯಕ್ತಪಡಿಸಿ ಕಾನೂನು ಬಾಹಿರವಾಗಿ ಆರ್‌ಟಿಸಿಯಲ್ಲಿ ಎಂಸಿ ನಿಬಂಧನೆಯನ್ನು ರೆಡೀಮ್ ಸಾಗು ಮಾಡಿದ್ದನ್ನು ಸರಿಪಡಿಸುವಂತೆ ಸೂಚಿಸಿತ್ತಲ್ಲದೆ, ಕಂದಾಯ ದಾಖಲೆಗಳಲ್ಲಿ ಅದೇ ರೀತಿಯಲ್ಲಿ ಸರಿಪಡಿಸಿತ್ತು.

 ಹಲವು ವರ್ಷಗಳ ಸರ್ಕಾರ- ಕಂಪನಿಯ ವ್ಯಾಜ್ಯಕ್ಕೆ ತೆರೆ

ಹಲವು ವರ್ಷಗಳ ಸರ್ಕಾರ- ಕಂಪನಿಯ ವ್ಯಾಜ್ಯಕ್ಕೆ ತೆರೆ

ಇದು ಕಂಪನಿಯ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಇದನ್ನು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಟಾಟಾ ಕಂಪನಿ ಮತ್ತು ಗೆನ್ ಲೋರ್ನಾ ಪ್ರಶ್ನಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್‍, ಪ್ರಕರಣದ ವಿಚಾರಣೆಯನ್ನು ವಿರಾಜಪೇಟೆ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಜಿ. ಲೋಕೇಶ್, ಟಾಟಾ ಸಂಸ್ಥೆ ಸ್ವಾಧೀನದಲ್ಲಿರುವ 1300 ಎಕರೆ ಪ್ರದೇಶವನ್ನು ಸರ್ಕಾರಕ್ಕೆ ಬಿಟ್ಟು ಕೊಡುವಂತೆ ತೀರ್ಪು ನೀಡಿದ್ದಾರೆ. ಆ ಮೂಲಕ ಹಲವು ವರ್ಷಗಳ ವ್ಯಾಜ್ಯಕ್ಕೆ ತೆರೆಬಿದ್ದಂತಾಗಿದೆ. ಮುಂದೆ ನ್ಯಾಯಾಲಯದ ಆದೇಶ ತಹಶೀಲ್ದಾರಗೆ ತಲುಪುತ್ತಿದ್ದಂತೆಯೇ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ.

English summary
The Virajpet court has verdicted to hand over the 1300 acres of land owned by Tata to the government.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X