keyboard_backspace

ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಸಿಎಂ ಬೊಮ್ಮಾಯಿ ಭಾಷಣದ ಸಮಗ್ರ ಯಥಾವತ್ ರೂಪ!

Google Oneindia Kannada News

ಬೆಂಗಳೂರು, ಆ. 15: ಕರುನಾಡು ಸೇರಿದಂತೆ ಇಡೀ ಭಾರತ ದೇಶ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಡಿನ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಲವು ನೂತನ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಮಾಡಿದ್ದಾರೆ. ಅವರ ಭಾಷಣದ ಯಥಾವತ್ ಸಮಗ್ರ ರೂಪವನ್ನು 'ಒನ್‌ಇಂಡಿಯಾ ಕನ್ನಡ' ನಿಮ್ಮ ಮುಂದಿಡುತ್ತಿದೆ. ಸಂಪೂರ್ಣ ಭಾಷಣ ಇಲ್ಲಿ ನಿಮ್ಮೆದುರಿಗಿದೆ...!

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಭಾರತ ದೇಶ ವಸಾಹತುಶಾಹಿ ಶಕ್ತಿಗಳಿಂದ ಬಿಡುಗಡೆಗೊಂಡು ಸ್ವತಂತ್ರ ರಾಷ್ಟ್ರವಾಗಿ 75ನೇ ವರ್ಷ ಪ್ರವೇಶಿಸಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಡಿನ ಜನತೆಗೆ ಸಂದೇಶ ನೀಡುವ ಸದಾವಕಾಶ ದೊರೆತದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆ ಸಲ್ಲಿಸುವ ಅವಕಾಶ ದೊರಕಿಸಿಕೊಟ್ಟ ರಾಜ್ಯದ ಜನತೆ, ನಮ್ಮ ಪಕ್ಷದ ವರಿಷ್ಠ ನಾಯಕರು ಮತ್ತು ಎಲ್ಲಾ ಹಿತೈಷಿಗಳಿಗೆ ನಾನು ಚಿರಋಣಿಯಾಗಿದ್ದೇನೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿಕೊಂಡ ಭಾರತ ಕಳೆದ 75 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿ ಗಮನಾರ್ಹವಾದುದು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ನಮ್ಮ ದೇಶ ಪ್ರಗತಿಯ ಹೊಸ ಮಜಲನ್ನೇ ತಲುಪಿದೆ. ವಿಶ್ವಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. 'ಭಾರತ ಜನನಿಯ ತನುಜಾತೆ'ಯಾದ ಕರ್ನಾಟಕವೂ ಅಭಿವೃದ್ಧಿಯ ಪಥದಲ್ಲಿ ಕಳೆದ ಏಳೂವರೆ ದಶಕಗಳಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಭಾಷೆ, ಸಂಸ್ಕೃತಿ, ಕಲೆ, ಶಿಕ್ಷಣ, ಆರ್ಥಿಕತೆ, ವಾಣಿಜ್ಯೋದ್ಯಮ, ಉದ್ಯೋಗ ಸೃಜನೆ, ಜೀವನ ಮಟ್ಟ ಸುಧಾರಣೆ ಹೀಗೆ ಪ್ರತಿ ವಲಯದಲ್ಲಿಯೂ ಕರ್ನಾಟಕದ ಮುನ್ನಡೆ ಅನನ್ಯವಾದುದು. ಇವೆಲ್ಲಾ ನಾವು ಹೆಮ್ಮೆ ಪಡಬಹುದಾದ ಸಂಗತಿಗಳು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಪ್ರಧಾನಿ ಮೋದಿಜಿ ಅವರ ಕರೆಯಂತೆ 2021ರ ಮಾರ್ಚ್ 12 ರಂದೇ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು, ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥ, ಮಂಡ್ಯ ಜಿಲ್ಲೆಯ ಶಿವಪುರಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಬಿಂಬಿಸುವ ವಿವಿಧ ಕಾರ್ಯಕ್ರಮಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದಾದ್ಯಂತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅಮೃತ ಮಹೋತ್ಸವದ ಸಂದರ್ಭವನ್ನು ಸ್ಮರಣೀಯಗೊಳಿಸಲಾಗುತ್ತಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ವಲ್ಲಭಬಾಯೀ ಪಟೇಲ್, ಭಗತ್ ಸಿಂಗ್, ಮೌಲನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರೂ ಮೊದಲಾದ ಮಹನೀಯರ ಹೋರಾಟ ಚರಿತ್ರಾರ್ಹವಾದುದು. ಕನ್ನಡ ನಾಡಿನಲ್ಲಿ ಕಿತ್ತೂರು ವೀರರಾಣಿ ಚೆನ್ನಮ್ಮ, ವೀರಸಂಗೊಳ್ಳಿ ರಾಯಣ್ಣ ಮೊದಲಾದವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಸಾಮ್ರಾಜ್ಯಶಾಹಿ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟ ರೋಮಾಂಚನಕಾರಿಯಾದದ್ದು. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ತ್ಯಾಗ ಹಾಗೂ ಬಲಿದಾನ ಮಾಡಿದ ಎಲ್ಲಾ ಸ್ವಾತಂತ್ರ್ಯ ಯೋಧರಿಗೆ ಕೃತಜ್ಞತಾ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅಪಾರ ಬೆಲೆತೆತ್ತು ಗಳಿಸಿರುವ ಸ್ವಾತಂತ್ರ್ಯವನ್ನು ನಿರಂತರ ಕಾಪಾಡಿಕೊಂಡು ಹೋಗುವ ಪ್ರತಿಜ್ಞೆ ಮಾಡುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ನಾವೆಲ್ಲಾ ಆಚರಿಸೋಣ ಎಂದು ಕರೆ ಕೊಡುತ್ತೇನೆ.

 ಬಿಜೆಪಿ ಸರ್ಕಾರ ಪ್ರಕೃತಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ

ಬಿಜೆಪಿ ಸರ್ಕಾರ ಪ್ರಕೃತಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ

'ಅಭಿವೃದ್ಧಿಯೇ ಆಡಳಿತ ಮಂತ್ರ' ಎಂಬ ಧ್ಯೇಯದೊಂದಿಗೆ ಎರಡು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪ್ರಕೃತಿ ವಿಕೋಪ, ಕೋವಿಡ್ ಸಾಂಕ್ರಾಮಿಕಗಳಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಇದೇ ಜುಲೈ 28 ರಂದು ಅಧಿಕಾರ ಸ್ವೀಕರಿಸಿದ್ದೇನೆ. ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರಿಯುವ ಸಂಕಲ್ಪ ಮಾಡಿದ್ದೇನೆ. ಸರ್ಕಾರ ಒಂದು ನಿರಂತರ ಪ್ರಕ್ರಿಯೆ. ಅದರಲ್ಲಿ ಪಾತ್ರಧಾರಿಗಳು ಬದಲಾದರೂ, ಆಡಳಿತ ಯಂತ್ರ ನಿಲ್ಲಬಾರದು. ಅದರಂತೆ ಅಭಿವೃದ್ಧಿ ಚಕ್ರವನ್ನೂ ಮುನ್ನಡೆಸಬೇಕಾಗಿದೆ. ವಿಶ್ವಾಸಾರ್ಹ, ದಕ್ಷ, ಪ್ರಾಮಾಣಿಕ, ಪಾರದರ್ಶಕ, ಜನಸ್ನೇಹಿ ಆಡಳಿತ ನೀಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.


ನಿಗದಿತ ಅವಧಿಯೊಳಗೆ ಯೋಜನೆಗಳ ಅನುಷ್ಠಾನ, ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನಮ್ಮ ಸರ್ಕಾರದ ಧ್ಯೇಯವಾಗಿದೆ. ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯದೆ, ಸಮರ್ಪಕವಾಗಿ ಮತ್ತು ಸಕಾಲದಲ್ಲಿ ಅನುಷ್ಠಾನಗೊಂಡು ಅವುಗಳ ಪ್ರತಿಫಲ ಜನತೆಗೆ ತಲುಪಬೇಕು ಎಂಬುದು ನಮ್ಮ ಕಾಳಜಿಯಾಗಿದೆ.


ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಕೋವಿಡ್ 19 ಸಾಂಕ್ರಾಮಿಕದ ಪರಿಣಾಮವಾಗಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಭಾರತ ದೇಶ ಮತ್ತು ಕರ್ನಾಟಕ ರಾಜ್ಯವೂ ಇದಕ್ಕೆ ಹೊರತಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ದೃಢ ಸಂಕಲ್ಪದ ಪರಿಣಾಮವಾಗಿ ಕೋವಿಡ್ 19 ಸೋಂಕನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಕರ್ನಾಟಕ ರಾಜ್ಯದಲ್ಲೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವು ಈ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಜೀವ ಹಾಗೂ ಜೀವನ ಇವೆರಡರ ಸಮತೋಲನ ಕಾಪಾಡಲು ಕ್ರಮ ಕೈಗೊಂಡಿದ್ದೇವೆ. ಕೋವಿಡ್ 19ರ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ವಿವಿಧ ವಲಯಗಳಿಗೆ 7422 ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಪರಿಹಾರ ಪ್ಯಾಕೇಜ್ ಹಾಗೂ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಮೂಲಕ ಭರವಸೆ ಮೂಡಿಸಿದ್ದೇವೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ಆಕ್ಸಿಜನೇಟೆಡ್ ಬೆಡ್‍ಗಳು, 4 ಸಾವಿರಕ್ಕೂ ಹೆಚ್ಚು ವೆಂಟಿಲೇಟರುಗಳ ಸೌಲಭ್ಯ ಒದಗಿಸಲಾಗಿದೆ. ಆರೋಗ್ಯ ವಲಯದ ಮೂಲಸೌಕರ್ಯದಲ್ಲಿ ಕೋವಿಡ್ ಪೂರ್ವದಲ್ಲಿದ್ದ ಸೌಕರ್ಯಗಳಿಗಿಂತ ಕೋವಿಡ್ ನಂತರ ಹೆಚ್ಚು ಸೌಲಭ್ಯಗಳು ಈಗ ರಾಜ್ಯದಲ್ಲಿ ಲಭ್ಯವಿದೆ.


ಕೋವಿಡ್‍ನಿಂದ ಜನತೆಯನ್ನು ರಕ್ಷಿಸಲು ಲಸಿಕೆ ಕಾರ್ಯಕ್ರಮವನ್ನು ಸಹ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈವರೆಗೆ 3.5 ಕೋಟಿಗೂ ಅಧಿಕ ಡೋಸ್‍ಗಳ ಲಸಿಕೆ ನೀಡಲಾಗಿದೆ. ಮೆಡಿಕಲ್ ಆಕ್ಸಿಜನ್ ಬೇಡಿಕೆ ದಿಢೀರನೆ ಏರಿಕೆಯಾದಾಗ, ಕೊರತೆ ನೀಗಿಸಲು ಕೂಡಲೇ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ತಜ್ಞರ ಕಾರ್ಯಪಡೆಯ ಸಲಹೆಗಳನ್ವಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗುತ್ತಿದೆ. ಆರೋಗ್ಯ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಐಸಿಯು ಸೌಲಭ್ಯವನ್ನು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಅಪೌಷ್ಟಿಕತೆ ಹಾಗೂ ಕುಂಠಿತ ಬೆಳವಣಿಗೆಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅಪೌಷ್ಟಿಕತೆ ನಿವಾರಣೆಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುತ್ತಿದೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ನಾನು ಈಗಾಗಲೇ ಗಡಿ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ.

ನಾಡಿನ ಜನರು ಕೋವಿಡ್ ಸೂಕ್ತ ನಡವಳಿಕೆ ಅಳವಡಿಸಿಕೊಳ್ಳಿ

ನಾಡಿನ ಜನರು ಕೋವಿಡ್ ಸೂಕ್ತ ನಡವಳಿಕೆ ಅಳವಡಿಸಿಕೊಳ್ಳಿ

ಸರ್ಕಾರದ ಪ್ರಯತ್ನಗಳು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ನಾಡಜನರು ಕೋವಿಡ್ ಸೂಕ್ತ ನಡವಳಿಕೆಗಳನ್ನು ಅಂದರೆ ಮಾಸ್ಕ್ ಧಾರಣೆ, ಭೌತಿಕ ಅಂತರ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ.

ಕೋವಿಡ್‍ನ ಸಮರ್ಥ ನಿರ್ವಹಣೆಯೊಂದಿಗೆ ಕಳೆದ ಮೂರು ಮಳೆಗಾಲಗಳಿಂದ ಎದುರಾಗುತ್ತಿರುವ ಪ್ರವಾಹ ಪರಿಸ್ಥಿತಿಯನ್ನೂ ಸಹ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಕೇಂದ್ರ ಸರ್ಕಾರದ ಸಕಾಲಿಕ ನೆರವಿನೊಂದಿಗೆ ರಕ್ಷಣೆ ಹಾಗೂ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಂಡು, ಜನರ ಬೆಂಬಲಕ್ಕೆ ನಿಂತಿದ್ದೇವೆ. ನಾನೂ ಅಧಿಕಾರ ಸ್ವೀಕರಿಸಿದ ಮರುದಿನವೇ ಪ್ರವಾಹದಿಂದ ತೀವ್ರ ಹಾನಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದೇನೆ. ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪರಿಹಾರ ಸೌಲಭ್ಯಗಳನ್ನು ಸಂತ್ರಸ್ತರಿಗೆ ತ್ವರಿತವಾಗಿ ಒದಗಿಸುವಂತೆ ಸೂಚಿಸಿದ್ದೇನೆ.

ಪ್ರವಾಹದಿಂದ ಸಂತ್ರಸ್ತರಾದವರಿಗೆ ತಕ್ಷಣದ ಪರಿಹಾರವಾಗಿ 10,000 ರೂ, ಅಲ್ಪಹಾನಿಯಾದ ಮನೆಗಳಿಗೆ 50,000 ರೂ, ಭಾಗಶ: ಹಾನಿಯಾದ ಮನೆಗಳಿಗೆ 3 ಲಕ್ಷ ರೂ. ಮತ್ತು ಪೂರ್ಣ ಹಾನಿ ಪ್ರಕರಣಗಳಲ್ಲಿ 5 ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾ ಆಡಳಿತಗಳಿಗೆ ಸೂಚನೆ ನೀಡಿದ್ದೇನೆ. ಇದು ಎನ್‍ಡಿಆರ್‍ಎಫ್ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರವಾಗಿರುತ್ತದೆ. ಕೋವಿಡ್, ಪ್ರವಾಹ ಮತ್ತಿತರ ಸವಾಲುಗಳ ನಡುವೆಯೂ ದಕ್ಷ, ಜನಸ್ನೇಹಿ ಆಡಳಿತ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ನನ್ನ ಆದ್ಯತೆಯಾಗಿದೆ.


ದೇಶದಲ್ಲಿ ಅತ್ಯಂತ ಪ್ರಗತಿಪರ ರಾಜ್ಯವೆಂದು ನಮ್ಮ ಕರ್ನಾಟಕ ಮನ್ನಣೆ ಪಡೆದಿದೆ. ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಮ್ಮ ಆದ್ಯತೆಯ ವಲಯಗಳು. ಜನರ ಬದುಕನ್ನು ಸುಗಮಗೊಳಿಸಲು ನಗರಾಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಮಾನ ಮಹತ್ವ ನೀಡಲಾಗುತ್ತಿದೆ.

ಕೃಷಿಕರ ಅಭ್ಯುದಯದ ಕುರಿತು ಕಳಕಳಿ ಹೊಂದಿರುವ ನಮ್ಮ ಸರ್ಕಾರ ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ವಾರ್ಷಿಕ 2500 ರೂ. ಗಳಿಂದ 11 ಸಾವಿರ ರೂ. ಗಳವರೆಗೆ ವಿವಿಧ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಈಗಾಗಲೇ ಸರ್ಕಾರಿ ಆದೇಶ ಹೊರಡಿಸಿದೆ. ಈ 'ರೈತ ವಿದ್ಯಾನಿಧಿ' ಯೋಜನೆಗೆ 1000 ಕೋಟಿ ರೂ.ಗಳನ್ನು ನಿಗದಿ ಮಾಡಿದ್ದು, 17 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ರೈತರ ಆದಾಯ ದುಪ್ಪಟ್ಟುಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಆಶಯವನ್ನು ಸಾಕಾರಗೊಳಿಸಲು ಕೇಂದ್ರದೊಂದಿಗೆ ರಾಜ್ಯ ಸರ್ಕಾರವೂ ಕೈಜೋಡಿಸಿದೆ. ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರದ 6 ಸಾವಿರ ರೂ. ಗಳೊಂದಿಗೆ ರಾಜ್ಯ ಸರ್ಕಾರವೂ ವಾರ್ಷಿಕ 4 ಸಾವಿರ ರೂ. ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ಈವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಒಟ್ಟು 10,812 ಕೋಟಿ ರೂ. ನೆರವು ರಾಜ್ಯದ ರೈತರಿಗೆ ದೊರೆತಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ಸೌಲಭ್ಯ ವಿಸ್ತರಿಸಲು ಒತ್ತು ನೀಡಲಾಗುತ್ತಿದೆ.

ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವುದಿಲ್ಲ!

ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವುದಿಲ್ಲ!

ರಾಜ್ಯದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನದ ಮೂಲಕ ನಮಗೆ ಹಂಚಿಕೆಯಾಗಿರುವ ನದಿಗಳ ನೀರಿನ ಸಮರ್ಥ ಬಳಕೆ ಮಾಡಿಕೊಳ್ಳುವ ಸಂಕಲ್ಪ ನಮ್ಮದು. ಮೇಕೆದಾಟು ಯೋಜನೆಯ ಡಿ.ಪಿ.ಆರ್. ಗೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ದೊರೆಯುವ ನಿರೀಕ್ಷೆ ಇದ್ದು, ಕಾವೇರಿ ಜಲವಿವಾದ ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳನ್ವಯ ರಾಜ್ಯಕ್ಕೆ ಹಂಚಿಕೆಯಾಗಿರುವ ಹೆಚ್ಚುವರಿ ನೀರಿನ ಸದ್ಬಳಕೆಗೆ ಈ ಯೋಜನೆ ಸಹಕಾರಿಯಾಗಲಿದೆ. ನೆರೆಯ ರಾಜ್ಯ ಅಡ್ಡಿಯಾದರೂ ಕೂಡ ಮೇಕೆದಾಟು ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಈ ಯೋಜನೆಯ ಅನುಷ್ಠಾನದಿಂದ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ.

ಮಹಾತ್ಮಾ ಗಾಂಧೀಜಿಯವರ ಆಶಯದಂತೆ ಗ್ರಾಮಸ್ವರಾಜ್ಯ ನಿರ್ಮಿಸುವ ದಿಸೆಯಲ್ಲಿ ಜನರ ಪರಿಣಾಮಕಾರಿ ಸಹಭಾಗಿತ್ವವನ್ನು ಖಾತರಿಪಡಿಸಲು ಜನರಿಂದ ಜನರಿಗಾಗಿ ಯೋಜನೆಗಳನ್ನು ರೂಪಿಸುವ 'ಜನರ ಯೋಜನೆ' ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುವುದು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರೊಂದಿಗೆ ಮೂಲಸೌಲಭ್ಯ ಅಭಿವೃದ್ಧಿಗೆ ಹಾಗೂ ಆಸ್ತಿ ಸೃಜನೆಗೆ ಅವಕಾಶ ನೀಡಲಾಗಿದೆ. ರೈತರಿಗೆ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗೆ ಪೂರಕ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಹ ಇದರಲ್ಲಿ ಅವಕಾಶ ಒದಗಿಸಲಾಗಿದೆ. ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ತಮ್ಮ ಗ್ರಾಮಗಳಿಗೆ ಹಿಂದಿರುಗಿದ ಕಾರ್ಮಿಕರಿಗೆ ಈ ಯೋಜನೆ ಸಂಜೀವಿನಿಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 91 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಜಲ ಜೀವನ್ ಮಿಷನ್' ಯೋಜನೆಯನ್ನು 'ಮನೆ ಮನೆಗೆ ಗಂಗೆ' ಎಂಬ ಕಾರ್ಯಕ್ರಮದಡಿ ಜಾರಿಗೊಳಿಸಲಾಗುತ್ತಿದೆ. ಈ ವರ್ಷ ಈ ಯೋಜನೆಯಡಿ 25 ಲಕ್ಷ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲಾಗುವುದು.

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಲಭ್ಯಗಳ ವಿಸ್ತರಣೆ ಹಾಗೂ ನಿರ್ವಹಣೆ ಮಾಡುವ ಗುರಿ ನಮ್ಮದಾಗಿದೆ. ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯ ಸವಾಲನ್ನು ಸಮರ್ಥವಾಗಿ ಎದುರಿಸಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರು ಸಮೀಪದ ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ಈ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿದೆ. ಬೆಂಗಳೂರು ವಿಶ್ವಮಾನ್ಯ ನಗರವಾಗಿದೆ. ಉತ್ತಮ ಹವಾಗುಣ, ಶೈಕ್ಷಣಿಕ ಸೌಲಭ್ಯಗಳು, ಬೆಳೆಯುತ್ತಿರುವ ಕೈಗಾರಿಕೋದ್ಯಮಗಳು ಜಾಗತಿಕ ಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟಿವೆ. ಈ ಹೆಗ್ಗಳಿಕೆಗೆ ತಕ್ಕಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಿ, ಜೀವನಮಟ್ಟವನ್ನು ಉನ್ನತೀಕರಿಸಲು ಆದ್ಯತೆ ನೀಡಲಾಗಿದೆ. ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು ಯೋಜನೆಗಳನ್ನು ಚುರುಕುಗೊಳಿಸಿದ್ದು, ನಗರದ ರಸ್ತೆ, ಮಳೆ ನೀರು ಚರಂಡಿ ಮತ್ತಿತರ ಮೂಲಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ 8343.87 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಮೃತ ಮಹೋತ್ಸವ ನಗರೋತ್ಥಾನ ಯೋಜನೆಯನ್ನು ಮೂರನೇ ಹಂತದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕೈಗಾರಿಕಾ ವಲಯದಲ್ಲಿಯೂ ಕರ್ನಾಟಕ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಹೂಡಿಕೆಯಲ್ಲಿ 2016 ರಿಂದ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ನೂತನ ಕೈಗಾರಿಕಾ ನೀತಿ 2020-25 ಅನುಷ್ಠಾನಗೊಂಡಿದ್ದು, ಈ ಅವಧಿಯಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹೊಂದಿದ್ದೇವೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿರುವುದು ಆಶಾದಾಯಕ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಲು ಕರ್ನಾಟಕ ಅನೇಕ ಕ್ರಮಗಳನ್ನು ಕೈಗೊಂಡಿದೆ. ನೀತಿ ಆಯೋಗದ ನಾವಿನ್ಯತಾ ಸೂಚ್ಯಂಕದಲ್ಲಿ ಸತತ ಎರಡು ಬಾರಿ ಮೊದಲ ಸ್ಥಾನ ಪಡೆದಿದ್ದು, ನಾವಿನ್ಯತೆಯನ್ನು ಉತ್ತೇಜಿಸಲು ನಾವಿನ್ಯತಾ ಪ್ರಾಧಿಕಾರವನ್ನು ಸಹ ಸ್ಥಾಪಿಸಲಾಗಿದೆ. 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಸುಲಲಿತ ವ್ಯವಹಾರ ನಡೆಸಲು ಅನುವಾಗುವಂತೆ ಕೈಗಾರಿಕೋದ್ಯಮಗಳ ಅನುಮೋದನಾ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಫಿಡವಿಟ್ ಆಧಾರಿತ ಅನುಮೋದನೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ.

ನಮ್ಮ ಯುವಜನತೆ ಕಲಿಕೆಗೆ ತಕ್ಕಂತೆ ಸ್ವ ಉದ್ಯೋಗ ಕೈಗೊಳ್ಳಲು ಅಥವಾ ಬೇರೆಡೆ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಕೌಶಲ್ಯದ ಪಾತ್ರ ಮಹತ್ವದ್ದು. ಆದ್ದರಿಂದ ರಾಜ್ಯದ 150 ಸರ್ಕಾರಿ ಐಟಿಐಗಳನ್ನು 4,636.5 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಸರ್ಕಾರದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ 2,500 ತರಗತಿಗಳನ್ನು ಸ್ಮಾರ್ಟ್ ಕ್ಲಾಸ್‍ಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. 1.55 ಲಕ್ಷ ಮಂದಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಲಿಕೆಯ ಮೇಲಿನ ದುಷ್ಪರಿಣಾಮ ತಗ್ಗಿಸುವಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾಗಮ ಹಾಗು ಡಿಜಿಟಲ್ ಮಾಧ್ಯಮಗಳ ಬಳಕೆಯ ಮೂಲಕ ಕಲಿಕೆಯ ನಿರಂತರತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಫಲಿತಾಂಶ ಪ್ರಕಟಿಸಲಾಗಿದೆ.

ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಬೋಧನೆ

ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಬೋಧನೆ

ಪ್ರಧಾನಿ ನರೇಂದ್ರ ಮೋದಿಜೀಯವರು ಘೋಷಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನಕ್ಕೆ ನಮ್ಮ ಸರ್ಕಾರ ಮುಂದಾಗಿದ್ದು, ಈಗಾಗಲೇ ಈ ಕುರಿತ ಆದೇಶ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಹಲವು ಇಂಜಿನಿಯರಿಂಗ್ ಕಾಲೇಜುಗಳು ಕನ್ನಡವನ್ನು ಬೋಧಿಸಲು ಮುಂದಾಗಿರುವುದು ಶ್ಲಾಘನೀಯ.


ಬಂಧುಗಳೆ, ನಾಡಿನ ಮೂಲಸೌಲಭ್ಯ ಸುಧಾರಣೆ ಹಾಗೂ ಆರ್ಥಿಕ ಅಭಿವೃದ್ಧಿಗಳೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಯೋಗಕ್ಷೇಮವೂ ನಮ್ಮ ಕಳಕಳಿಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿರಿಸಿದ ಅನುದಾನ ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಬಳಕೆಯಾಗಬೇಕೆಂಬ ಆಶಯ ನಮ್ಮ ಸರ್ಕಾರದ್ದು. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ.

ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನವನ್ನು 1000 ರೂ.ನಿಂದ 1,200 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ 35.98 ಲಕ್ಷ ಫಲಾನುಭಗಳಿಗೆ ಅನುಕೂಲವಾಗಲಿದೆ. ವಿಧವಾ ವೇತನವನ್ನು 600 ರೂ.ನಿಂದ 800 ರೂ.ಗಳಿಗೆ ಹೆಚ್ಚಿಸಲಾಗಿದ್ದು, 17.25 ಲಕ್ಷ ಫಲಾನುಭವಿಗಳಿಗೆ ನೆರವಾಗಿದೆ. ಅಂಗವಿಕಲರ ಮಾಸಾಶನವನ್ನೂ ಕೂಡ 600 ರೂ.ನಿಂದ 800 ರೂ.ಗಳಿಗೆ ಹೆಚ್ಚಿಸಿದ್ದು, 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಜಿ ಸಲ್ಲಿಸದೆಯೇ ಸರ್ಕಾರವೇ ಫಲಾನುಭವಿಗಳನ್ನು ಗುರುತಿಸಿ ಸವಲತ್ತು ವಿತರಿಸಲು ಮುಂದಾಗಿದ್ದೇವೆ. ನವೋದಯ ಆ್ಯಪ್ ಮುಖಾಂತರ ಅರ್ಹ ಫಲಾನುಭವಿಗಳನ್ನು ಗುರುತಿಸುವುದರೊಂದಿಗೆ ಅನರ್ಹರಿಗೆ ಸೌಲಭ್ಯ ರದ್ದುಪಡಿಸುವ ಕ್ರಮಕ್ಕೂ ಚಾಲನೆ ನೀಡಲಾಗಿದೆ.

ಸರ್ಕಾರದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಆರ್ಥಿಕ ನೆರವು ಹಾಗೂ ವಿವಿಧ ಇಲಾಖೆಗಳು ನೀಡುವ ವಿದ್ಯಾರ್ಥಿ ವೇತನಗಳನ್ನು ಡಿಬಿಟಿ ವೇದಿಕೆಯ ಮುಖಾಂತರ ನೇರವಾಗಿ ಫಲಾನುಭವಿಗಳ ಆಧಾರ್ ಜೋಡಣೆ ಹೊಂದಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಸೌಲಭ್ಯಗಳು ತ್ವರಿತವಾಗಿ, ಪಾರದರ್ಶಕವಾಗಿ ಹಾಗೂ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿವೆ. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ಸರ್ಕಾರ ಘೋಷಿಸಿದ ಆರ್ಥಿಕ ನೆರವನ್ನು ಡಿಬಿಟಿ ಮುಖಾಂತರವೇ ವರ್ಗಾಯಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನೆರವನ್ನು ಡಿಬಿಟಿ ಮುಖಾಂತರ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳನ್ನು ಡಿಬಿಟಿ ವೇದಿಕೆಯ ವ್ಯಾಪ್ತಿಗೆ ತರಲಾಗುವುದು.

ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದರೊಂದಿಗೆ ಎಲ್ಲ ರೀತಿಯ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರ ಸಜ್ಜಾಗಿದೆ. ಮಾದಕ ದ್ರವ್ಯ ಪಿಡುಗನ್ನು ಮಟ್ಟ ಹಾಕಲು ಎಲ್ಲ ಜಿಲ್ಲೆಗಳಲ್ಲಿ ಕ್ರಮ ವಹಿಸಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ದುಷ್ಟ ಶಕ್ತಿಗಳ ದಮನ ಕಾರ್ಯದಲ್ಲಿ ಯಾವುದೇ ರಾಜಿ ಇಲ್ಲ. ಅಂತೆಯೇ ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಯ ವಿಷಯದಲ್ಲಿ ನಮ್ಮ ಬದ್ಧತೆ ಪ್ರಶ್ನಾತೀತ. ನಮ್ಮ ಹಕ್ಕಿನ ನೀರು ಪಡೆಯಲು, ಕಾನೂನಿನಡಿ ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನೂ ನಾವು ಕೈಗೊಳ್ಳಲಿದ್ದೇವೆ.

ಪ್ರಧಾನ ಮಂತ್ರಿ ನರೇಂದ್ರ ಮೋದೀಜೀಯವರು ಜನಾಭಿಪ್ರಾಯಕ್ಕೆ ಹೆಚ್ಚು ಮನ್ನಣೆ ನೀಡುವ ನಾಯಕ. ಅವರ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸ್ತರಗಳ ಜನರ ಜೊತೆ ಸಂವಾದ, ಸಾಧನೆಗಳ ಉಲ್ಲೇಖ, ಉತ್ಸಾಹದ ಮತ್ತು ಪ್ರೋತ್ಸಾಹದ ಮಾತುಗಳು ಇದಕ್ಕೆ ಸಾಕ್ಷಿ. ಪದ್ಮ ಶ್ರೇಣಿಯ ಪ್ರಶಸ್ತಿಗಳ ಆಯ್ಕೆಯಲ್ಲಿಯೂ ಮಾನ್ಯ ಪ್ರಧಾನಿಯವರು ಜನಾಭಿಪ್ರಾಯಕ್ಕೆ ಮನ್ನಣೆ ನೀಡಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಮೋದೀಜೀಯವರು ಪ್ರಧಾನಿಯಾದ ನಂತರವೇ ಸಾಮಾನ್ಯರಲ್ಲಿ ಸಾಮಾನ್ಯರು, ಎಲೆ ಮರೆ ಕಾಯಿಯಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಪದ್ಮ ಪ್ರಶಸ್ತಿಗೆ ಭಾಜನರಾಗಲು ಸಾಧ್ಯವಾಗಿದೆ. ಈ ವರ್ಷ ಪದ್ಮ ಶ್ರೇಣಿಯ, ಪದ್ಮಶ್ರೀ, ಪದ್ಮ ಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ನಾಗರಿಕರೇ ತಮ್ಮ ಆಯ್ಕೆಯ ಪ್ರತಿಭೆಗಳನ್ನು ಸೂಚಿಸುವಂತೆ ಕರೆ ನೀಡಿ ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಾಜದ ಸಾಮಾನ್ಯರಿಂದ ಹಿಡಿದು ಅಸಾಮಾನ್ಯ ವ್ಯಕ್ತಿಗಳವರೆಗೆ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಲು ಅವಕಾಶ ನೀಡಿದ್ದಾರೆ. ಪ್ರಧಾನಿಯವರ ಪ್ರೋತ್ಸಾಹದ ನುಡಿಗಳು ದೇಶದ ನಾಗರೀಕರನ್ನು ಯಾವುದೇ ರೀತಿಯ ಹಿಂಜರಿಕೆಗಳಿಂದ ಮುಕ್ತರಾಗಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಭೂಮಿಕೆ ಸೃಷ್ಟಿಸಿವೆ.

ಕರ್ನಾಟಕ ಮೊದಲಿನಿಂದಲೂ ಚಲನಶೀಲ ಮತ್ತು ಪ್ರಗತಿಪರ ನಿಲುವುಗಳಿಗೆ ಹೆಸರಾದ ರಾಜ್ಯವಾಗಿದೆ. ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದೆ. ತನ್ನ ದೂರಗಾಮಿ ನೀತಿ ಹಾಗೂ ದಿಟ್ಟ ಕ್ರಮಗಳಿಂದ ಯಶಸ್ಸಿನ ಮೇಲೆ ಯಶಸ್ಸನ್ನು ಸಾಧಿಸುತ್ತಾ ರಾಷ್ಟ್ರದ ಗಮನ ಸೆಳೆದಿದೆ. ಈ ಯಶಸ್ಸುಗಳ ಪ್ರಖರತೆಯನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸಮಗ್ರ ಕರ್ನಾಟಕವನ್ನು ಸಮೃದ್ಧಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಕೇವಲ ರಾಜಧಾನಿ ಬೆಂಗಳೂರು ಬೆಳೆದರೆ ಸಾಲದು, ಎರಡನೇ ಹಂತದ ನಗರಗಳೂ ಬೆಳೆಯಬೇಕು. ಬೆಂಗಳೂರಿನಲ್ಲಿ ಕಾಣಬರುವ ಅಭಿವೃದ್ಧಿಯ ವೇಗ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಧ್ವನಿಸಬೇಕು. ಅಂದರೆ ಪ್ರಾದೇಶಿಕ ಅಸಮತೋಲನ ನಿವಾರಣೆಗೊಂಡು ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಭಿವೃದ್ಧಿ ಚಿತ್ರಣ ಕಣ್ಣಿಗೆ ಕಾಣುವಂತೆ ಇರಬೇಕು. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿಯ ಫಲ ಪ್ರತಿಫಲಿಸಬೇಕು. ಆದ್ದರಿಂದ ಭಾರಿ ಯೋಜನೆಗಳಷ್ಟೇ ಕಿರುಯೋಜನೆಗಳಿಗೂ ಕೂಡ ಸರ್ಕಾರ ಗಮನ ನೀಡಲಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ವಿಶೇಷ ಕಾರ್ಯಕ್ರಮಗಳು

ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ವಿಶೇಷ ಕಾರ್ಯಕ್ರಮಗಳು

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮ ಸರ್ಕಾರ ಈ ಕೆಳಕಂಡ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುವುದು.

ಅಮೃತ ಗ್ರಾಮೀಣ ವಸತಿ ಯೋಜನೆ: ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ವಸತಿರಹಿತ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸಲಾಗುವುದು.

ಅಮೃತ ರೈತ ಉತ್ಪಾದಕ ಸಂಸ್ಥೆಗಳು: ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ ನೀಡಲಾಗುವುದು.

ಅಮೃತ ನಿರ್ಮಲ ನಗರ: ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಅಮೃತ ಶಾಲಾ ಸೌಲಭ್ಯ ಯೋಜನೆ: ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು.


ಅಮೃತ ಅಂಗನವಾಡಿ ಕೇಂದ್ರಗಳು: ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ 7.5 ಕೋಟಿ ರೂ. ಹಣ ವಿನಿಯೋಗಿಸಲಾಗುವುದು.

ಅಮೃತ ಸ್ವಸಹಾಯ ಕಿರು ಉದ್ದಿಮೆಗಳು: ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ (ಒiಛಿಡಿo ಇಟಿಣeಡಿಠಿಡಿises) ರೂಪಿಸಲು ತಲಾ 1 ಲಕ್ಷ ರೂ. ನಂತೆ 75 ಕೋಟಿ ರೂ. ಬೀಜ ಧನವನ್ನು (ಸೀಡ್‍ಮನಿ) ಒದಗಿಸಲಾಗುವುದು.

ಅಮೃತ ಸಮುದಾಯ ಅಭಿವೃದ್ಧಿ ಯೋಜನೆ: ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುವುದು.

ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ: ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ ಮಾಡಲಾಗುವುದು.

ಅಮೃತ ಕೌಶಲ್ಯ ತರಬೇತಿ ಯೋಜನೆ: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಯನ್ನು 112 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.


ಅಮೃತ ಕ್ರೀಡಾ ದತ್ತು ಯೋಜನೆ: ಟೋಕಿಯೋ ಒಲಂಪಿಕ್ಸ್‍ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾ ಪಟುಗಳ ಸಾಧನೆ ಗಮನಾರ್ಹವಾದುದು. ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನಗೊಳಿಸಲಾಗುವುದು.

ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಸ್ಮಿತೆಯನ್ನು ಕಾಪಾಡಲು ನಾವು ಶಕ್ತರಿದ್ದೇವೆ. ಗಡಿ, ನುಡಿ, ನೆಲ ಮತ್ತು ಜಲದ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲ. ಸಂವಿಧಾನದ ಆಶಯಗಳ ಪಾಲನೆಯ ಜೊತೆಗೆ ಒಕ್ಕೂಟ ತತ್ವದ ಆಧಾರದಲ್ಲಿ ನೆರೆ ರಾಜ್ಯಗಳೊಡನೆ ಸುಮಧುರ ಬಾಂಧವ್ಯ ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ. ಸ್ವಸ್ಥ, ಸಮೃದ್ಧ ಕರ್ನಾಟಕ ನಿರ್ಮಾಣದ ಕನಸು ಸಾಕಾರಗೊಳಿಸುವತ್ತ ನಮ್ಮ ನಡೆ ಸಾಗಿದೆ. ಇದರಲ್ಲಿ ನಿಮ್ಮ ಸಹಯೋಗ ಅತಿ ಮುಖ್ಯ. ಬನ್ನಿ, ನಾವು ನೀವೆಲ್ಲರೂ, ಜೊತೆಯಾಗಿ ತಂಡ ಸ್ಫೂರ್ತಿಯಿಂದ ನಾಡ ಕಟ್ಟುವ ಕಾಯಕದಲ್ಲಿ ನಿರತರಾಗುವ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡೋಣ ಎಂದು ಆಶಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮಗೆಲ್ಲರಿಗೂ ಸಮೃದ್ಧಿಯ ಅಮೃತವನ್ನೇ ಉಣಿಸಲಿ ಎಂದು ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್, ಜೈ ಕರ್ನಾಟಕ!

English summary
OneIndia Kannada brought full text of the speech made by Chief Minister Basavaraj Bommai in Manekshaw parade ground after the Independence Day Flag hoisting. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X