ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳಿಗಾಗಿ ಮಾತ್ರ : ಆ ಐನೂರು ರೂಪಾಯ್ ನಿನ್ನನ್ನೇ ನೋಡ್ತಾ ಇದೆ!

ನಿನ್ನ ನೋಟನ್ನು ಮೊನ್ನೆವರ್ಗೂ ಜೋಪಾನವಾಗಿ ಇಟ್ಕೊಂಡಿದ್ದೆ ಕಣೇ. ಯಾವಾಗ ಡಿಮಾನೆಟೈಜೇಷನ್ ಘೋಷಣೆಯಾಯ್ತೋ ಕಂಗಾಲಾಗಿಬಿಟ್ಟೆ. ಬದಲಾಯಿಸುವ ಹಾಗೂ ಇಲ್ಲ, ಸುಮ್ನೆ ಇಟ್ಕೊಂಡ್ರೂ ಅಪರಾಧ. ದಿಕ್ಕು ತೋಚದೇ ಆತಂಕದಲ್ಲಿ ಮುಳುಗಿದ್ದಾಗ ದೇವರೇ ದಾರಿ ತೋರಿದ.

By ಗವಿ ಸ್ವಾಮಿ, ಚಾಮರಾಜನಗರ
|
Google Oneindia Kannada News

ಆವತ್ತು ಕಾಲೇಜಿನಲ್ಲಿ ಫೇರ್ವೆಲ್ ಡೇ. ಕಾಲೇಜಿನ‌ ಮುಂದಿದ್ದ ಛತ್ರಿಮರದ ಕೆಳಗೆ ಪ್ರೇಮಿಗಳಿಬ್ಬರು ನಿಂತಿದ್ದರು. ಕಾಲೇಜಿನ ಸಭಾಂಗಣದಿಂದ -ಚಲ್ತೆ ಚಲ್ತೆ ಕಭಿ ಅಲ್ವಿದಾ ನಾ ಕೆಹನಾ- ಹಾಡು ಕೇಳಿಬರುತ್ತಿತ್ತು. ಟೆನಿಸ್ ಮ್ಯಾಚಿನ ಸುದೀರ್ಘ ರ್ಯಾಲಿಯಂತೆ ಬೆಳೆಯುತ್ತಿದ್ದ ಮೌನಕ್ಕೆ ಕೊನೆಗೂ ಬ್ರೇಕ್ ಬಿತ್ತು. ಆತನೇ ಸೋತು ತುಟಿ ಬಿಚ್ಚಿದ.

"ಇವತ್ತೇ ಕೊನೇನಾ , ನನಗೆ ಇನ್ಯಾವತ್ತೂ ಸಿಗಲ್ವಾ ನೀನು?" ದುಃಖ ತಡೆದುಕೊಂಡು ಕೇಳಿದ.

"ಹೌದು ಕಣೋ, ಇವತ್ತೇ ಕೊನೆ. ಮನೇಲಿ ನನಗೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ. ನನ್ನನ್ನ ನೋಡೋಕೆ ನಾಡಿದ್ದು ಗಂಡು ಬರುತ್ತಂತೆ." [ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

Lovers last gift and five hundred rupees note

"ಅಯ್ತುಬಿಡು ನಿನ್ನ ಹೆಸರು ನನ್ನ ಹಣೇಲಿ ಬರೆದಿಲ್ದಿದ್ರೆ ಯಾರು ತಾನೆ ಏನ್ ಮಾಡಕಾಗುತ್ತೆ? ನಾನು ಪಡ್ಕೊಂಡು ಬಂದಿದ್ದೇ ಇಷ್ಟು."

"ನನ್ನ ಬಗ್ಗೆ ತಪ್ಪು ತಿಳೀಬೇಡ್ವೋ, ನನ್ನನ್ನು ಕ್ಷಮಿಸಿಬಿಡು.''

"ಆಯ್ತು ಮಾರಾಯ್ತಿ ನಿನ್ನ ನೆನಪಿಗೋಸ್ಕರ ಏನಾದ್ರೂ ಕೊಟ್ಟು ಹೋಗು." ಆಕೆ ಏನು ಕೊಡಬೇಕೆಂದು ತೋಚದೆ ಗಲಿಬಲಿಗೊಳಗಾದಳು.

"ಯಾಕೆ ಗಾಬರಿಯಾಗ್ತೀಯಾ, ನಿನ್ನ ಕಿವಿಲೀರೋ ಜುಮ್ಕಿಯಂತೂ ಬೇಡ, ಕೊನೆಪಕ್ಷ ನಿನ್ನ ಕೈಲಿರೋ ನೋಟ್ಬುಕ್ಕಾದ್ರೂ ಕೊಡು. ನಿನ್ನ ಹಸ್ತಾಕ್ಷರಗಳನ್ನು ನೋಡ್ತಾ ಇದ್ದುಬಿಡ್ತೀನಿ."

"ಅದೆಲ್ಲ ಬೇಡ, ಈ ಐನೂರು ರೂಪಾಯಿ ನೋಟ್ ಇಟ್ಕೋ. ನೋಡೋಣ ನನ್ನ ನೆನಪಿನಲ್ಲಿ ಇದನ್ನ ಎಷ್ಟ್ ದಿವ್ಸ ಇಟ್ಕೊತೀಯಾ ಅಂತ.. ನಾನು ಸಿಗಲ್ಲ ಅಂತ ಗೊತ್ತಾಗಿ ಇತ್ತೀಚೆಗೆ ಕುಡಿಯೋದು ಬೇರೆ ಶುರು ಮಾಡಿದೀಯಾ ಅಂತ ಕೇಳ್ಪಟ್ಟೆ.. ಇವತ್ತು ನೈಟೇ ಇದನ್ನ ಬಾರಿನವನ ಬಾಯಿಗೆ ಹಾಕ್ತೀಯಾ ಬಿಡು, ನೀನೆಲ್ಲಿ ಇಟ್ಕೊತೀಯಾ?"

"ಖಂಡಿತ ಹಾಗೆ ಮಾಡಲ್ಲ ಮಾರಾಯ್ತಿ, ಇದನ್ನ ಭದ್ರವಾಗಿ ಕಾಪಾಡ್ತೀನಿ." [ಲೈಫ್ ಎಂಜಾಯ್ ಮಾಡೋಕೆ, ವೈಫ್ ಜಗಳ ಆಡೋಕೆ!]

***
ಹತ್ತು ವರ್ಷಗಳ ನಂತರ. ಅದೇ ಕಾಲೇಜು, ಅದೇ ಛತ್ರಿಮರ, ಅದೇ ಜೋಡಿ. ಆವತ್ತು ಹಳೇ ವಿದ್ಯಾರ್ಥಿಗಳ ಗೆಟ್ ಟುಗೆದರ್.. ಕಾಲೇಜಿನ ಸಭಾಂಗಣದಿಂದ- ಸವಿಸವಿ ನೆನಪು ಸಾವಿರ ನೆನಪು- ಹಾಡು ಕೇಳಿಬರುತ್ತಿತ್ತು. ಆವತ್ತು ಮೌನಕ್ಕೆ ಅವಕಾಶವೇ ಇರಲಿಲ್ಲ.

"ತುಂಬಾ ಬದಲಾಗಿದ್ದೀಯಾ ಕಣೋ ನೀನು!'' ಆಕೆ ಬೆರಗಿನಿಂದ ನುಡಿದಳು.

"ಬದಲಾಗಲೇಬೇಕಾದ ಅನಿವಾರ್ಯತೆ ಇರುತ್ತಲ್ಲ, ಕಾಲ-ದೇಶ ನಮಗೆ ಕಾಯಲ್ವಲ್ಲ, ನಿಂತಲ್ಲೇ ನಿಂತ್ರೆ ಮೂಲೆಗುಂಪಾಗ್ತೀವಿ.''

"ಓಹ್ ವೇದಾಂತ ಹೇಳೋಕೆ ಶುರು ಮಾಡಿದೀಯಾ, ಬೇಷ್! ನನ್ನ ನೆನಪಲ್ಲಿ ಕುಡ್ದೂ ಕುಡ್ದೂ ದೇವ್ದಾಸ್ ಆಗ್ಬಿಡ್ತಿಯೇನೋ ಎಂದು ಹೆದರಿಕೊಂಡಿದ್ದೆ, ನೀನು ಸುಳ್ಳು ಮಾಡ್ಬಿಟ್ಟೆ. ಶೂ ಹಾಕೋದನ್ನು ಕಲ್ತಿದೀಯಾ, ಇನ್ಷರ್ಟ್ ಬೇರೆ ಮಾಡಿದೀಯಾ, ಯಾವತ್ತೂ ಕೆರೆಯದಿದ್ದ ಗಡ್ಡ ಇವತ್ತು ನುಣ್ಣಗೆ ಕಾಣ್ತಿದೆ, ಬೇಷ್! ಅದಿರಲಿ ಐನೂರ್ ರೂಪಾಯ್ ಕಥೆ ಏನಾಯ್ತಪ್ಪಾ ದೊರೆ?"

"ಅದೂ ಅದೂ ....''

''ನನಗ್ ಗೊತ್ತು ನೀನ್ ಖರ್ಚ್ ಮಾಡ್ಕೊಂಡಿದೀಯಾ ಅಂತ, ಹೋಗ್ಲಿಬಿಡು ನಾನು ಬೇಜಾರ್ ಮಾಡ್ಕೊಳ್ಳಲ್ಲ."

"ಆ ಐನೂರ್ ರೂಪಾಯ್ ಈಗ ನಿನ್ನನ್ನ ನೋಡ್ತಾ ಇದೆ."

"ವಾಟ್?! ನನ್ನನ್ನ ನೋಡ್ತಾ ಇದೆಯಾ? ಎಲ್ಲಿ? ಯೂಮೀನ್ ನಿನ್ನ ಜೇಬಿನಿಂದ? ಅಲ್ಲಿ ನೋಡಿದ್ರೆ ಗುಲಾಬಿ ಬಣ್ಣದ ಎರಡು ಸಾವಿರದ ನೋಟ್ ಕಾಣ್ತಿದೆ!"

"ರಿಲ್ಯಾಕ್ಸ್ , ನಿನ್ನ ನೋಟನ್ನು ಮೊನ್ನೆಮೊನ್ನೆವರ್ಗೂ ಜೋಪಾನವಾಗಿ ಇಟ್ಕೊಂಡಿದ್ದೆ ಕಣೇ. ಯಾವಾಗ ಡಿಮಾನೆಟೈಜೇಷನ್ ಘೋಷಣೆಯಾಯ್ತೋ ನಾನು ಕಂಗಾಲಾಗಿಬಿಟ್ಟೆ. ಈ ಕಡೆ ಬದಲಾಯಿಸುವ ಹಾಗೂ ಇಲ್ಲ, ಸುಮ್ನೆ ಇಟ್ಕೊಂಡ್ರೂ ಅಪರಾಧ. ದಿಕ್ಕು ತೋಚದೇ ಆತಂಕದಲ್ಲಿ ಮುಳುಗಿದ್ದಾಗ ಆ ದೇವ್ರೇ ಒಂದು ದಾರಿ ತೋರಿಸಿದ. ನನ್ನ ಕನ್ನಡಕ ಜಾರಿ ಬಿದ್ದು ಎಡಭಾಗದ ಲೆನ್ಸ್ ಒಡೆದು ಹೋಯ್ತು. ಅದೇ ಐನೂರ್ರೂಪಾಯಿಯನ್ನು ಬ್ಯಾಂಕಿನಲ್ಲಿ ಎಕ್ಸಚೇಂಜ್ ಮಾಡಿ ಅದರಲ್ಲೇ ಹೊಸ ಲೆನ್ಸ್ ಹಾಕಿಸ್ದೆ, ಈಗ ನನ್ನ ಹೃದಯದ ನೇರಕ್ಕೆ ಇರುವ ಕಣ್ಣಿನಿಂದ ಆ ಐನೂರು ರೂಪಾಯ್ ನಿನ್ನನ್ನು ನೋಡ್ತಾ ಇದೆ. ನೀನು ಎದುರಿಗೆ ಇರಲಿ ಇರದೇ ಇರಲಿ, ಸದಾ ನೆನಪಿನಲ್ಲಿ ನೋಡ್ತಾ ಇರುತ್ತೆ."

ಅವಳು ಕೆನ್ನೆಗೆ ಎರಡು ಕೈಗಳನ್ನೂ ಒತ್ತಿಕೊಂಡು ದಿಗ್ಮೂಢಳಾಗಿ ನೋಡುತ್ತಾ ನಿಂತುಬಿಟ್ಟಳು!

English summary
Both lovers could not continue their affair as girl's parents were looking for a groom. Mutually they got separated. She gave him five hundred rupeed as memory. What did he do with that note? A lovely write up Gavi Swamy from Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X