• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಗಾದಿ ಕೇವಲ ಹಬ್ಬವಲ್ಲ, ಅದು ಬದಲಾವಣೆಯ ಪ್ರತೀಕ

By ತೇಜಶಂಕರ ಸೋಮಯಾಜಿ ಕಮ್ಮರಡಿ
|

ನಮ್ಮ ಸಂಸ್ಕೃತಿಯೇ ಹಾಗೆ, ಪ್ರತಿಯೊಂದು ಆಚರಣೆಯನ್ನು ನಾನಾವಿಧವಾದ ಪ್ರಯೋಜನಗಳ ದೃಷ್ಟಿಯಲ್ಲಿ ವಿಮರ್ಶಿಸಿ ವಿಧಿಸಿರುತ್ತದೆ. ಈ ಆಚರಣೆಗಳು ಏನೇನು, ಯಾಕೆ ಆಚರಿಸುತ್ತೇವೆ ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು , ಆದರೆ ಅದರ ಉಪಯೋಗವಿಲ್ಲ ಎಂದೇನಿಲ್ಲ. ಉದಾಹರಣೆಗೆ ಯುಗಾದಿಯ ಎಳ್ಳು-ಬೆಲ್ಲ , ಏಕಾದಶಿಯ ಉಪವಾಸ, ಧನುರ್ಮಾಸದ ಹುಗ್ಗಿ (ಪೊಂಗಲ್) ಹೀಗೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಆಯಾ ಕಾಲಕ್ಕೆ ಅತ್ಯುತ್ತಮ. ದೀಪಾವಳಿಯ ಗೋಪೂಜೆ, ನವರಾತ್ರಿಯ ಗಜಾಶ್ವಾದಿಗಳ ಪೂಜೆಗಳು ಮನುಷ್ಯ ಮತ್ತು ಪ್ರಾಣಿಗಳ ನಡುವೆ ಬಾಂಧವ್ಯವನ್ನು ಧೃಡಗೊಳಿಸಲು ಸಹಾಯಕ. ಹೀಗೆ ಎಲ್ಲ ಆಚರಣೆಗಳೂ ಒಂದು ವೈಶಿಷ್ಟ್ಯಪೂರ್ಣವಾದ ಗಂಭೀರವಾದ ಅರ್ಥವನ್ನು ಹೊಂದಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದರಂತೆ ನಮ್ಮ ನವವರ್ಷವಾದ ಯುಗಾದಿಯೂ ಒಂದು ವಿಶಿಷ್ಟವಾದ ಆಚರಣೆ. ಜನವರಿ ಒಂದರಂದು ಹೊಸವರ್ಷವೆನ್ನಲು ಬದಲಾಗುವುದು ಕ್ಯಾಲೆಂಡರ್ ಒಂದೇ. ಆದರೆ ಯುಗಾದಿಯಂದು ಹಾಗಲ್ಲ. ಪೂರ್ಣಪ್ರಕೃತಿಯು ಮಾಗಿಯ ಚಳಿಗೆ ನಿರಾಭರಣೆಯಾಗಿ ನಂತರದ ವಸಂತಕ್ಕೆ ಹಸಿರ ಸಿರಿಯ ಹೊದ್ದು ಅಲಂಕೃತಳಾಗುವ ಸಮಯ. ಮಾವಿನ ಚಿಗುರಿನ ತೋರಣ, ಕೋಗಿಲೆಯ ಪಂಚಮದ ದನಿಯ ಸುಪ್ರಭಾತ ಒಂದು ಹೊಸಪ್ರಪಂಚವನ್ನೇ ಸ್ವಾಗತಿಸುತ್ತದೆ. ಅಂತಹ ಯುಗಾದಿಯ ಸಮಯವಲ್ಲವೇ ಹೊಸವರ್ಷ.

ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

ನಿಜವಾಗಿಯೂ ಒಬ್ಬ ನೈಸರ್ಗಿಕ ವಾತಾವರಣವನ್ನು ಅನುಭವಿಸುವವನು ಆರಾಧಿಸುವವನು ಹೊಸ ಚೈತನ್ಯದೊಂದಿಗೆ ಈ ಯುಗಾದಿಯನ್ನೇ ಹೊಸವರ್ಷವೆಂದು ಸ್ವಾಗತಿಸಲು ಉತ್ಸುಕನಾಗಿರುತ್ತಾನೆ. ಒಂದು ಸಂವತ್ಸರ ಚಕ್ರವು ಮುಗಿದು ಹೊಸ ವರ್ಷಪ್ರಾರಂಭವಾಗುವ ಸಮಯವೇ ಯುಗಾದಿ. ಹಾಗಾಗಿ ಯುಗಾದಿ ಹಬ್ಬವು ಸಂವತ್ಸರಾರಂಭ, ನವವರ್ಷಪ್ರತಿಪದಾ ಎಂಬ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ.

ಪ್ರಾಪ್ತೇ ನೂತನವತ್ಸರೇ ಪ್ರತಿಗೃಹಂ ಕುರ್ಯಾದ್ಧ್ವಜಾರೋಪಣಂ

ಸ್ನಾನಂ ಮಂಗಲಮಾಚರೇತ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ |

ದೇವಾನಾಂ ಗುರುಯೋಷಿತಾಂ ಚ ಶಿಶವೋsಲಂಕಾರವಸ್ತ್ರಾದಿಭಿಃ

ಸಂಪೂಜ್ಯಾ ಗಣಕಃ ಫಲಂ ಚ ಶೃಣುಯಾತ್ತಸ್ಮಾಚ್ಚ ಲಾಭಪ್ರದಂ ||

ಈ ಶ್ಲೋಕವು ಹೊಸವರ್ಷದ ಆರಂಭದಲ್ಲಿ ನಾವು ಆಚರಿಸಬೇಕಾದ ವಿಧಿಗಳನ್ನು ತಿಳಿಸುತ್ತದೆ. ಪ್ರತಿ ಮನೆಯನ್ನೂ ತಳಿರು ತೋರಣಗಳಿಂದ ಅಲಂಕರಿಸಬೇಕು. ಪ್ರತಿಯೊಬ್ಬನು ಅಭ್ಯಂಜನವನ್ನು ಮಾಡಿಕೊಳ್ಳಬೇಕು. ವಿಪ್ರರೊಡನೆ ಪೂಜೆಗಳನ್ನು ಉತ್ಸವಗಳನ್ಮು ಆಚರಿಸಬೇಕು. ದೇವ- ಗುರುಗಳಿಗೆ ನೂತನ ವಸ್ತ್ರಾದಿಗಳನ್ನು ಸಮರ್ಪಿಸುವುದರ ಜೊತೆಗೆ ಸ್ತ್ರೀ-ಮಕ್ಕಳಾದಿಯಾಗಿ ಎಲ್ಲರೂ ಹೊಸ ವಸ್ತ್ರಗಳನ್ನು ಧರಿಸಬೇಕು. ನಂತರ ತಿಥಿ ವಾರ ನಕ್ಷತ್ರ ಯೋಗ ಕರಣಗಳೆಂಬ ಪಂಚ ಅಂಶಗಳನ್ನೊಳಗೊಂಡ ಪಂಚಾಂಗವನ್ನು ಪೂಜಿಸಿ ವರ್ಷಫಲವನ್ನು ಶ್ರವಣ ಮಾಡಬೇಕು ಎನ್ನುವುದೇ ಇದರ ತಾತ್ಪರ್ಯ.

ಇದರ ಜೊತೆಗೆ ಬೇವುಬೆಲ್ಲದ ಸೇವನೆ ಎಲ್ಲರಿಗೂ ತಿಳಿದಿರುವ ಸಂಪ್ರದಾಯವೇ ಆಗಿದೆ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ

ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ || ಈ ಶ್ಲೋಕದ ತಾತ್ಪರ್ಯ ಹೀಗಿದೆ. 'ನೂರುವರ್ಷ ಅರೋಗಿಯಾಗಿ ಇರುವಂಥ ದೇಹ ಎಲ್ಲ ಸಂಪತ್ತುಗಳು ಮತ್ತು ಎಲ್ಲ ದುರಿತಗಳನ್ನು ನಾಶ, ಇವುಗಳು ಈ ಬೇವಿನೆಲೆಯ ಭಕ್ಷಣೆಯಿಂದ ದೊರೆಯುತ್ತದೆ. ಬೇವಿನ ಎಲೆಯು ನಮ್ಮ ದೇಹಕ್ಕೆ ಬಿಸಿಲಿನ ಬೇಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಲ್ಲವೂ ಆರೋಗ್ಯದಾಯಕ'.

ಶ್ರೀವಿಕಾರಿ ನಾಮ ಸಂವತ್ಸರದ ಯುಗಾದಿ ವರ್ಷ ಫಲ ತುಲಾದಿಂದ ಮೀನದ ತನಕ

ಇಂತಹ ಅತ್ಯುತ್ತಮ ಬೇವು-ಬೆಲ್ಲದ ಭಕ್ಷಣವು ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಮಾನಸಿಕವಾಗಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸುತ್ತದೆ. ಏರಿಳಿತದ ಜೀವನದಲ್ಲಿ "ಸುಖದುಃಖೇ ಸಮೇಕೃತ್ವಾ" ಎಂಬ ಗೀತಾವಾಕ್ಯದಂತೆ ಬದುಕಬೇಕು ಎನ್ನುವುದರ ದ್ಯೋತಕವೇ ಈ ಬೇವುಬೆಲ್ಲ. ಇಂತಹ ಬೇವುಬೆಲ್ಲದ ಹಬ್ಬವು ಎಲ್ಲರಿಗೂ ಶುಭಫಲಗಳನ್ನು ನೀಡಲಿ. ನೂತನ ವರ್ಷದಲ್ಲಿ ನೂತನ ಸತ್ಸಂಕಲ್ಪಗಳಿಂದ ಮುನ್ನೆಡೆಯುವಂತಾಗಲಿ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

English summary
Ugadi is new year for Hindus. This article focusing on why we celebrate Ugadi and how Ugadi should be celebrated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X