ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ವಿಶೇಷ: ಪ್ರಕೃತಿಯೇ ತೋರಣ ಕಟ್ಟಿ ಸ್ವಾಗತಿಸುವ ಹಬ್ಬ

By ಶ್ರೀದೇವಿ ಹುಕ್ಕೇರಿ (ಸಿರಿಗಂಧ)
|
Google Oneindia Kannada News

ಪ್ರಕೃತಿಯ ಸಿರಿಮುಡಿಗೆ ಕಳೆ ಕಟ್ಟಿದೆ. ಹಸುರಿತ್ತಲ್, ಹಸುರತ್ತಲ್ ಎಂಬ ಭಾವ ಮೈ ಮನಗಳಲ್ಲಿ ಹಚ್ಚಹಸಿರಾಗಿದೆ. ನವೋಲ್ಲಾಸ, ನವ ಚೈತನ್ಯ ತುಂಬಿಕೊಂಡಿದೆ.ಇದಕ್ಕೆಲ್ಲಾ ಕಾರಣ ಹಬ್ಬಗಳ ರಾಜ ಯುಗಾದಿಯ ಆಗಮನ. ಎತ್ತನೋಡಿದರತ್ತ ಮಾವು ಬೇವುಗಳು ಹಚ್ಚ ಹಸಿರನ್ನು ಹೊತ್ತು ಸ್ವಾಗತ ಕೋರುತಿವೆ. ನವ ವಸಂತನ ಆಗಮನಕ್ಕೆ ದುಂಬಿಯು ಝೇಂಕಾರಗೈಯುತಿದೆ. ಪ್ರಕೃತಿಯೇ ತೋರಣ ಕಟ್ಟಿ ಸಜ್ಜಾಗಿ ನಿಂತಿದೆ.

ಭಾರತ ಬಹು ಸಂಸ್ಕೃತಿಗಳ ತವರೂರು. ಭಾರತೀಯ ಹಬ್ಬಗಳಲ್ಲಿ ಯುಗಾದಿಗೆ ವಿಶೇಷ ಸ್ಥಾನ. ವಸಂತ ಋತುವಿನ ಚೈತ್ರಮಾಸದಲ್ಲಿ ಮೈತಳೆದು ಬರುವ ಚಂದ್ರಮಾನ ಯುಗಾದಿಯು, ಇಡೀ ಸೃಷ್ಟಿಯಲ್ಲಿ ಹೊಸತನ ತುಂಬುವ ಹಬ್ಬ. ಅದರಲ್ಲೂ ಈ ವರ್ಷದ ಯುಗಾದಿ ಇನ್ನೂ ವಿಶಿಷ್ಟ. ಅರವತ್ತು ಸಂವತ್ಸರಗಳಲ್ಲಿ ಶಾರ್ವರಿಯೇ ಪ್ರಥಮ. ಹಾಗಾಗಿ ಶಾರ್ವರಿನಾಮ ಸಂವತ್ಸರದ ಯುಗಾದಿ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ.

ನವ ವಧುವಿನಂತೆ ಶೃಂಗಾರಗೊಂಡ ಇಡೀ ನಿಸರ್ಗವು ತನ್ನ ನಲ್ಲನಾದ ವಸಂತನ ಆಗಮನಕ್ಕೆ ಕಾಯ್ದು ಕುಳಿತ ಕಾಲ. ಸುಗ್ಗಿ ಮುಗಿಸಿದ ಅನ್ನದಾತನ ಮೊಗದಲ್ಲಿ ಮುಗುಳ್ನಗೆಯ ಹೊಂಬೆಳಕು ಚೆಲ್ಲುವ ಕಾಲ . ನೂತನ ವರ್ಷಾರಂಭದ ಶುಭ ಸಂದರ್ಭದಲ್ಲಿ ನಾವೀಣ್ಯತೆಯ ಸಿಹಿ ಸಿಂಚನ ಚೆಲ್ಲುವ ಈ ಯುಗಾದಿಯು, ನವ ಕನಸುಗಳಿಗೆ, ಭಾವನೆಗಳಿಗೆ ಪುಷ್ಪಗಳ ಮೃದುತ್ವವನ್ನು ಚಿಮುಕಿಸುತ್ತದೆ. ಈ ಯುಗಾದಿಯ ಸಂಭ್ರಮ ನಿಜಕ್ಕೂ ಅವರ್ಣನೀಯ ಅಲ್ಲವೇ?

ಯುಗಾದಿ ಇದರ ತದ್ಭವ ರೂಪವೇ ಉಗಾದಿ

ಯುಗಾದಿ ಇದರ ತದ್ಭವ ರೂಪವೇ ಉಗಾದಿ

ಯುಗಾದಿ ಇದರ ತದ್ಭವ ರೂಪವೇ ಉಗಾದಿ.ಇದು ಮೂಲತಃ ಸಂಸ್ಕೃತ ಭಾಷೆಯ ಯುಗ ಮತ್ತು ಆದಿ ಎಂಬೆರಡು ಶಬ್ದಗಳಿಂದ ಉತ್ಪನ್ನ ವಾದದ್ದು. 'ಯುಗ' ಎಂದರೆ ಸೃಷ್ಟಿ ಅಥವಾ ಕಾಲಘಟ್ಟ, 'ಆದಿ' ಎಂದರೆ ಪ್ರಾರಂಭ. ಯುಗಾದಿ ಇದರ ಅರ್ಥ ಸೃಷ್ಟಿಯ ಅಥವಾ ನೂತನ ಕಾಲಘಟ್ಟದ ಪ್ರಾರಂಭ ಎಂದಾಗುತ್ತದೆ.

ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರುವ ಭಾರತದೇಶದಲ್ಲಿ ಯುಗಾದಿ ಹಬ್ಬವನ್ನು ಬೇರೆ ಬೇರೆ ಕಡೆಯಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತದೆ.ಅಷ್ಟೇ ಅಲ್ಲದೇ ವಿಶಿಷ್ಟವಾಗಿ ಹಾಗೂ ವಿಭಿನ್ನವಾಗಿ ಯುಗಾದಿಯನ್ನು ಆಚರಿಸುವುದು ವಾಡಿಕೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ನಾವು 'ಯುಗಾದಿ' ಅಥವಾ ಉಗಾದಿ ಎಂದು ಕರೆದರೆ, ಮಹಾರಾಷ್ಟ್ರದಲ್ಲಿ' ಗುಡಿಪಾಡ್ವ'ಎಂಬ ಹೆಸರಿನಿಂದ ಕರೆಯುತ್ತಾರೆ. ಉತ್ತರಭಾರತದಲ್ಲಿ ಇದೇ ಹಬ್ಬವನ್ನು'ಬೈಸಾಕಿ'ಎಂಬ ವಿಶಿಷ್ಟ ನಾಮದೊಂದಿಗೆ ಗುರುತಿಸಲಾಗುತ್ತದೆ. ವೈವಿಧ್ಯತೆಯ ಆಚರಣೆಗಳೊಂದಿಗೆ ಎಲ್ಲರೂ ಸೇರಿ ಭೇದಭಾವವನ್ನು ಮರೆತು ಸಂಭ್ರಮಾಚರಣೆಯಲ್ಲಿ ಮೈಮರೆಯುತ್ತಾರೆ.

ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತವೆ

ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತವೆ

ತ್ರಿಮೂರ್ತಿಗಳಲ್ಲಿ ಒಬ್ಬನಾದ ಸೃಷ್ಟಿಕರ್ತ ಬ್ರಹ್ಮದೇವನು, ಬ್ರಹ್ಮಾಂಡವನ್ನು ಸೃಷ್ಟಿಸಿದ ಅದ್ಭುತ ಸುದಿನವೇ ಈ ಯುಗಾದಿ. ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನು ಲಂಕಾಧೀಶ ರಾವಣನನ್ನು ತನ್ನ ದಿವ್ಯ ಸಾಮರ್ಥ್ಯದಿಂದ ಸಂಹರಿಸಿ, ಸೀತಾಮಾತೆಯ ಸಮೇತರಾಗಿ ಅಯೋದ್ಯೆಗೆ ಆಗಮಿಸಿ, ಮರು ಪಟ್ಟಾಭಿಷಕ್ತನಾದ ಅಮೃತಗಳಿಗೆಯೇ ಈ ಯುಗಾದಿ ಹಬ್ಬ. ನಮ್ಮ ಹಿಂದೂ ಪಂಚಾಂಗ ಮತ್ತು ಶಾಸ್ತ್ರಗಳ ಪ್ರಕಾರ ಯಾವುದೇ ಮಂಗಳ ಕಾರ್ಯಗಳನ್ನು ಮಾಡಲು ಮುಹೂರ್ತಗಳನ್ನು ನೋಡುವುದು ವಾಡಿಕೆ. ಆದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ, ಹಾಗೂ ಅಕ್ಷಯ ತೃತೀಯ ದಿನಗಳಂದು ಮೂರೂವರೆ ಮುಹೂರ್ತಗಳಲ್ಲಿ ಕೈಗೊಳ್ಳುವ ಯಾವುದೇ ಶುಭಕಾರ್ಯ ಮತ್ತು ಮಂಗಳ ಕಾರ್ಯಗಳು ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತವೆ ಎಂಬ ನಂಬಿಕೆ ಪೂರ್ವಜರ ಕಾಲದಿಂದಲೂ ಅಸ್ತಿತ್ವದಲ್ಲಿದೆ.

ಚೈತ್ರಮಾಸದ ಮೊದಲ ದಿನವಾದ ಯುಗಾದಿ

ಚೈತ್ರಮಾಸದ ಮೊದಲ ದಿನವಾದ ಯುಗಾದಿ

ಚೈತ್ರಮಾಸದ ಮೊದಲ ದಿನವಾದ ಯುಗಾದಿಯಂದು ಮನೆಮಂದಿಯಲ್ಲಾ ನಸುಕಿನಲ್ಲಿ ಎದ್ದು ಎಣ್ಣೆ ಹಾಗೂ ಬೇವಿನೆಲೆಗಳನ್ನು ಸ್ನಾನದ ನೀರಿಗೆ ಹಾಕಿಕೊಂಡು ಅಭ್ಯಂಜನ ಮಾಡುವುದು ಅದೆಂತಹಾ ಸುಖಾನುಭವ ಅಂತೀರಿ!!. ಹಬ್ಬಕ್ಕೆಂದು ತಂದ ಹೊಸಬಟ್ಟೆ ತೊಟ್ಟು ಸೂರ್ಯನಮಸ್ಕಾರದೊಂದಿಗೆ ಇಷ್ಟ ದೇವರ ಪೂಜೆ ಪುನಸ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನೂತನ ವರ್ಷಾಚರಣೆಯ ಸ್ವಾಗತವನ್ನು ಮಾಡಿಕೊಳ್ಳಲಾಗುತ್ತದೆ.

ಸಂಬಂಧಿಕರು ಹಾಗೂ ಸ್ನೇಹಿತರಿಗೆ ಬೇವು-ಬೆಲ್ಲಗಳ ಸಮ್ಮಿಶ್ರಣವನ್ನು ಹಂಚುವ ಪದ್ಧತಿ ಈಗಲೂ ರೂಢಿಯಲ್ಲಿದೆ. ಅಷ್ಟೇ ಅಲ್ಲದೆ ಹುಣಸೆ, ಉಪ್ಪು, ಮೆಣಸು, ಮಾವಿನಕಾಯಿಗಳಿಂದ ತಯಾರಿಸಿದ ವಿಶಿಷ್ಟ ರುಚಿಯ ಚಟ್ನಿಯ ಸ್ವಾದವನ್ನು ಮರೆಯಲು ಸಾಧ್ಯವೇ? ಹಬ್ಬದ ದಿನದಂದು ವಿಶೇಷವಾಗಿ ಎಲ್ಲರ ಮನೆಗಳಲ್ಲಿ ಕಡಲೆ ಬೇಳೆಯ ಹೋಳಿಗೆ, ಹಾಗೂ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಪ್ರತಿ ಮನೆ ಮನೆಯ ಮುಂದೆ ಕಂಗೊಳಿಸುವ ಬಣ್ಣದ ಚಿತ್ತಾರದ ರಂಗೋಲಿ, ಬಾಗಿಲಿನಲ್ಲಿ ನಲಿದಾಡುವ ಮಾವಿನೆಲೆ ಮತ್ತು ಬೇವಿನೆಲೆಗಳ ತೋರಣ ನೋಡುವುದೇ ಕಣ್ಮನಗಳಿಗೆ ಸೊಗಸಿನ ಆನಂದಾನುಭವ.

ನೂತನ ವರ್ಷದ ಪ್ರಾರಂಭ ಯುಗಾದಿ ಹಬ್ಬ

ನೂತನ ವರ್ಷದ ಪ್ರಾರಂಭ ಯುಗಾದಿ ಹಬ್ಬ

ಜನವರಿ ಒಂದನ್ನು ಹ್ಯಾಪಿ ನ್ಯೂ ಇಯರ್ ಎಂದು ಕುಣಿದು, ಕಿರುಚಾಡಿ ಹುಚ್ಚು ಹೊಳೆಯಲ್ಲಿ ತೇಲಾಡುವ ಈಗಿನ ತಲೆಮಾರುಗಳಿಗೆ ವಾಸ್ತವವಾಗಿ ನಮ್ಮ ನೂತನ ವರ್ಷದ ಪ್ರಾರಂಭ ಯುಗಾದಿ ಹಬ್ಬ ಎನ್ನುವ ಸತ್ಯಾಂಶದ ಅರಿವು ಅತಿ ಅಗತ್ಯವಾಗಿರಬೇಕು. ಪಾಶ್ಚಿಮಾತ್ಯರ ಅಂಧಾನುಕರಣೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ನಮ್ಮನ್ನ ದೂರಸರಿ ಸುತ್ತಿರುವುದು ದುರಂತವೇ ಸರಿ. ಬಾಲ್ಯದ ನಮ್ಮ ದಿನಗಳನ್ನು ಒಮ್ಮೆ ಮೆಲುಕು ಹಾಕಿ ನೋಡಿ, ಇಡೀ ಮನೆಯಲ್ಲಿ ಹಬ್ಬದ ಪೂರ್ವ ತಯಾರಿಗಳು, ಹಬ್ಬದ ದಿನ ಬಂಧುಬಾಂಧವರ ಸಮಾಗಮ, ಮುಂಜಾನೆಯಿಂದಲೇ ಹೊಸಬಟ್ಟೆ ತೊಟ್ಟು ಕುಣಿದು ಸಂಭ್ರಮಿಸುವ ಯುಗಾದಿ ಮರೆತೆನೆಂದರೂ ಮರೆಯಲಾಗದಂತದ್ದು.

ಯುಗಾದಿ ದಿನವು ಬದಲಾವಣೆ ಮತ್ತು ಹೊಸತನದ ಸಂಕೇತ. ಅಂದು ಪ್ರಕೃತಿಯಲ್ಲಿ, ಸಂವತ್ಸರದಲ್ಲಿ, ಋತುವಿನಲ್ಲಿ ಮತ್ತು ಮಾಸದಲ್ಲಿ ಬದಲಾವಣೆ ಅಥವಾ ಹೊಸತನ‌ ಕಾಣುತ್ತೇವೆ. ಬೇವು-ಬೆಲ್ಲಗಳನ್ನು ಹಂಚಿ ತಿನ್ನುವುದರ ಮುಖೇನ ಜೀವನ ಸಂದೇಶವನ್ನು ಹೊರಹಾಕುತ್ತೇವೆ. ಒಟ್ಟಾರೆ ಯುಗಾದಿಯು ಜೀವನದ ಅತ್ಯಮೂಲ್ಯವಾದ ಅದ್ಭುತ ಪಾಠವನ್ನೇ ನಮಗೆ ಮನದಟ್ಟು ಮಾಡಬಲ್ಲದು. ಜೀವನವೆಂದರೆ ಬರೀ ಸಂತೋಷ ,ಆನಂದ ,ನಲಿವುಗಳ ಕೂಟವಲ್ಲ. ಹಾಗೆಯೇ ನೋವು ದುಃಖಗಳ ಕೂಪವು ಅಲ್ಲ. ಅದು ಅವೆರಡರ ಸುಂದರ ರಸಪಾಕ. ಒಂದೇ ನಾಣ್ಯದ ಎರಡು ಮುಖಗಳಂತೆ ಪ್ರತಿಯೊಬ್ಬರ ಬದುಕಿನಲ್ಲಿ ಕಷ್ಟ-ಸುಖಗಳು, ನೋವು ನಲಿವುಗಳು, ಅಳುವು-ನಗುವುಗಳು ಸಾಮಾನ್ಯ ಎಂಬ ಅದ್ಭುತ ಸಂದೇಶ ಇದರಲ್ಲಡಗಿದೆ.

ಬೇವು ಬೆಂದ ಮನಕೆ ತಂಪೆರೆವ

ಬೇವು ಬೆಂದ ಮನಕೆ ತಂಪೆರೆವ

ಬೆಲ್ಲವು ಶಾಖ ವಾಹಕವಾಗಿ ಕಾರ್ಯನಿರ್ವಹಿಸಿದರೆ, ಬೇವು ಬೆಂದ ಮನಕೆ ತಂಪೆರೆವ ಅದ್ಭುತ ಅಮೃತ ವೆಂಬ ಸತ್ಯಸಂಗತಿ ಯುಗಾದಿಯ ದಿನ ನೆನಪಾಗದೆ ಇರದು. ಚಳಿಗಾಲದಲ್ಲಿ ತನ್ನೆಲ್ಲ ಎಲೆಗಳನ್ನು ಉದುರಿಸಿ ಬರಡು ಬೋಳಾದ ಗಿಡಮರಗಳು ವಸಂತ ಋತುವಿನ ಚೈತ್ರಮಾಸದಲ್ಲಿ ಮತ್ತೆ ಮರು ಜೀವದೊಂದಿಗೆ ಜೀವನದ ಶಾಶ್ವತತೆ ಮತ್ತು ಭರವಸೆಯ ಆಶಾಕಿರಣವನ್ನು ಹೊತ್ತು ತರುತ್ತದೆ. ಕಾಲಚಕ್ರದ ಗತಿಯಲ್ಲಿ ಸಹನೆ ತಾಳ್ಮೆಯಿಂದ ಇದ್ದು, ಗೆದ್ದು ತೋರಿಸಬೇಕೆಂಬ ಸಂದೇಶವನ್ನು ಪ್ರಕೃತಿಮಾತೆ ರವಾನಿಸುವಂತಿದೆ. ಬಾಹ್ಯರೂಪದಿಂದ ಆನಾಕರ್ಷಕ ಎನಿಸಿದರೂ, ಆಂತರಂಗಿಕವಾಗಿ ತನ್ನ ಇಂಪಾದ ಕಂಪಿನ ಕೊರಳಿನಿಂದ ಪ್ರಕೃತಿಯ ಚಿಗುರೆಲೆಗಳನ್ನು ಸಂತಸದಿ ತಿಂದು ಹಾಡುವ ಕೋಗಿಲೆಯ ನಾದಕ್ಕೆ ಮನಸೋಲದವರು ಉಂಟೆ!???..

ನೇರ ಸೂರ್ಯರಶ್ಮಿಯ ಬಿಸಿಲಿನ ಝಳ

ನೇರ ಸೂರ್ಯರಶ್ಮಿಯ ಬಿಸಿಲಿನ ಝಳ

ಮೈ ನಡುಗುವ ಚಳಿಯ ಕುಳಿರ್ಗಾಳಿಯಿಂದ ನೇರ ಸೂರ್ಯರಶ್ಮಿಯ ಬಿಸಿಲಿನ ಝಳ ನಿಧಾನವಾಗಿ ಏರುವ ಈ ಸಂದರ್ಭದಲ್ಲಿ, ಪ್ರಕೃತಿಯಲ್ಲಾಗುವ ಗಣನೀಯ ಪರಿವರ್ತನೆ ಹಾಗೂ ಬೇವು-ಬೆಲ್ಲಗಳ ಸಮ್ಮಿಶ್ರಣಗಳು ರೋಗನಿರೋಧಕ ಶಕ್ತಿಯ ವರ್ಧಕಗಳಾಗಿವೆ. ಬೇಸತ್ತ ಮನಸ್ಸುಗಳಿಗೆ ಪ್ರೀತಿಯ ಸಾಂತ್ವನ ಹಾಗೂ ಚೈತನ್ಯದ ಹೊಳೆಯನ್ನೇ ಯುಗಾದಿ ಹಬ್ಬ ಹರಿಸುತ್ತದೆ. ತನ್ನೊಂದಿಗೆ ಸಾಲು ಸಾಲು ಹಬ್ಬಗಳನ್ನು ಹೊತ್ತು ತರುವ ಯುಗಾದಿ ಹಬ್ಬಕ್ಕೆ ಈ ವರ್ಷವೂ ಕೊರೋನಾದ ಕಾರ್ಮೋಡ ಕವಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸುರಕ್ಷಿತ ಅಂತರ ಹಾಗೂ ಸ್ವಚ್ಛತೆಯ ಸ್ವ ಅರಿವಿನೊಂದಿಗೆ ನೂತನ ವರ್ಷಾಚರಣೆಯ ಸವಿಯುಗಾದಿಯನ್ನು ಸಂಭ್ರಮಿಸೋಣ ಅಲ್ಲವೇ!????.
ಪ್ಲವ ಸಂವತ್ಸರದ ಚಾಂದ್ರಮಾನ ಯುಗಾದಿಗೆ ತಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು...

English summary
Ugadi Special: Welcome the first festival in nature's annual cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X