• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

By Staff
|

ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ, ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಇಂದು ಸೌರಮಾನ ಯುಗಾದಿಯ ಸಂಭ್ರಮ.

* ವಾಣಿ ರಾಮದಾಸ್, ಸಿಂಗಪುರ

ಬೆಳಿಗ್ಗೆ ಶಾಲೆಯ ಬಳಿ ಸಿಕ್ಕ ಅನುಪಮಾ ಘೋಷ್ "ನಬ ಬರ್ಶ್" ಶುಭಾಶಯ ಕೋರಿದಳು. ಆಗ ನೆನಪಾದದ್ದು ಇಂದು ಸೌರಮಾನ ಯುಗಾದಿ. ಸರ್ವಧರ್ಮ ಸಮನ್ವಯ ಪಾಲಿಸುವ ಸಿಂಗಪುರದಲಿ ದೀಪಾವಳಿಯಂದು ಎಲ್ಲರಿಗೂ ರಜೆ. ಅದೊಂದೇ ನಾವು ಮಾಡುವ ಬೆಳಗಿನ ಹಬ್ಬ. ನಮ್ಮ ಗಣಪತಿ, ಯುಗಾದಿ, ಗೋಕುಲಾಷ್ಟಮಿ, ದಸರಾ ಎಲ್ಲ ಹಬ್ಬಗಳೂ ನಮಗೀಗ ಸಂಜೆ ಹಬ್ಬ. ಅಯ್ಯೋ ಊರಲ್ಲಿದ್ದರೆ ಎಂದು ಆ ಹಬ್ಬದ ದಿನಗಳಲಿ ತೌರೂರ ನೆನಪು ಬಲು ಜೋರು. ಉದರ ನಿಮಿತ್ತಂ...ಊರು ಬಿಟ್ಟು ಬಂದರೂ ಸಂಸ್ಕೃತಿ ಸಂಪ್ರದಾಯದ ಬೇರನ್ನು ತಾವಿದ್ದಲ್ಲಿಗೆ ಹೊತ್ತೊಯ್ದವರು ಭಾರತೀಯರು.

ಮೇಷ ಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ವೈಷಾಖಿ ಅಥವಾ ಬೈಸಾಕಿ ಸಿಖ್‌ರಿಗೆ ಶುಭವಾದ ದಿನ. ಹಿಮಾಚಲ ಪ್ರದೇಶದಲಿ ಹೊಸ ವರುಷ ಜ್ವಾಲಾಮುಖಿ ದೇವಿಗೆ ಪೂಜೆ ಸಲ್ಲಿಸುವ ದಿನ. ರಂಗೋಲಿ ಬಿಹು ಅಸ್ಸಾಂ. ವಿಧ ವಿಧವಾದ ರಂಗೊಲಿ ಎಳೆಗಳು ಹೊಸ ಹೊಸ ಬಾಂಧವ್ಯಗಳನು ಬೆಳೆಸಲಿ ಎಂಬ ಸಂಕೇತವಿದು. ನಬ ಬರ್ಶ್ ಬಂಗಾಳಿಗಳಿಗೆ, ಪುತ್ತಾಂಡ್ ತಮಿಳುನಾಡು, ವಿಷು ಕೇರಳ, ಉತ್ತರಾಂಚಲ್, ಹರಯಾಣಿಗರಿಗೂ ಇಂದು ಹೊಸ ವರುಷ ಹೊಸ ಹರುಷ.

ಸೌರಮಾನ ಪಂಚಾಂಗ ಸೂರ್ಯನ ಚಲನೆಯಾಧಾರಿತ. ಎಲ್ಲಾ ವಿರೋಧಗಳನ್ನೂ ಮೆಟ್ಟಿ ನಿಂಟು ಹೊಸ ವರುಷಕೆ ನವ ಚೈತನ್ಯ ತುಂಬುವ, ವಿರೋಧಿನಾಮ ಸಂವತ್ಸರ ಸ್ವಾಗತಿಸುವ "ಬಿಸು ಪರ್ಬ" ಇಂದು. ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಈ ಪಂಚಾಂಗಗಳ ಅನುಕರಣೆ ಪ್ರಾಯಶಃ ನಮ್ಮಲ್ಲಿದ್ದ ರಾಜ್ಯ ವಿಂಗಡಣೆ ಕಾರಣವಾಗಿರಬಹುದೋ ಏನೋ?

ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇತ್ತು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ.

ಕೇರಳದಲೂ ಇದೇ ರೀತಿ ಖಣಿ ಇಡುವ ಪದ್ದತಿ. ಕೇರಳದಲಿ ಅಡಿಕೆ ಹೂವು, ಅರಿಶಿನ ಕೊಂಬು, ಮಾವು, ಹಲಸು, ಕೊಬ್ಬರಿ ಎಲ್ಲವನೂ ಅಗಳ ಬಾಯಿರುವ ಪಂಚಲೋಹದ ಪಾತ್ರೆಯಲಿ ಇಡುತ್ತಾರೆ. ಇದನ್ನು ಮನೆಯ ಹಿರಿಯ ಹೆಂಗಸು ಹಿಂದಿನ ರಾತ್ರಿ ದೇವರ ಮುಂದೆ ಇಡುತ್ತಾರೆ. ಇದರ ಪಕ್ಕದಲಿ ನೀಲ ವಿಳಕ್ಕು( ದೀಪ) ಹಚ್ಚುತ್ತಾರೆ. ಖಣಿ ಎಂದರೆ ನೋಡುವುದು ಎಂದರ್ಥ. ವಿಷುಖನಿ ಎಂದರೆ ಮೊದಲು ನೋಡುವುದು. ಬೆಳಿಗ್ಗೆ ಮಕ್ಕಳನು ಎಬ್ಬಿಸಿ ಅವರ್ ಕಣ್ ಮುಚ್ಚಿ ಮೊದಲು ಖಣಿ ತೋರಿಸಿ ಆನಂತರ ಸೂರ್ಯ ದರುಶನ ಮಾಡುವ ಪದ್ದತಿ. ಕೇರಳದ ದೇಗುಲಗಳಲಿ ರಾಮಾಯಣ ವಾಚನ. ಖಣಿಯಲಿ ತುಂಬಿದೆ ದೇವರು, ಧನ, ಧಾನ್ಯ, ವಸ್ತ್ರ, ಒಡವೆ. ವರುಷ ಪ್ರಾರಂಭದ ಇವನ್ನು ನೋಡಿದರೆ ವರುಷವಿಡೀ ಇವೆಲ್ಲವೂ ಸಮೃದ್ಧಿಯಾಗಿ ದೊರಕುವುದೆಂಬಬುದು ಇದರ ಸಂಕೇತ. ಶ್ರೀಲಂಕ ತಮಿಳರಿಗೆ ಹೊಸವರುಷದಂದು ಹೊಸ ಲೆಕ್ಕ. ರಾಮಾಯಣ ಪಾರಾಯಣ ಹಿಂದೂ ದೇಗುಲಗಳಲ್ಲಿ. ಕೈ-ವಿಷೇಶಮ್ ಇದು ಹಿರಿಯರು ಕಿರಿಯರಿಗೆ ನೀಡುವ ಕಾಣಿಗೆ. ವಿಶು ಎಂದರೆ ಸಮ.

ಎಲ್ಲ ಹಬ್ಬಕ್ಕೂ ಒಂದು ವಿಶೇಷತೆ ಇದೆ. ಎಲ್ಲ ಹಬ್ಬಗಳೂ ಎಲ್ಲವನೂ ದೇವರಿಗೆ ಪ್ರಕೃತಿ ಪೂಜೆಗೆ ಅರ್ಪಿಸುವ, ಕೃತಜ್ಞತೆ ಸಲ್ಲಿಸುವ ದಿನಗಳು. ಜೀವನದ ಜಗ್ಗಾಟದಲಿ, ಯಾಂತ್ರಿಕ ಬದುಕಿನಲಿ ಹಬ್ಬ, ಹರಿದಿನಗಳು ಪಾಲಿಸುವುದು ಹೊಸ ಚೈತನ್ಯ, ಹೊಸ ಹುರುಪು ತರುತ್ತದೆ. ಹಬ್ಬಗಳಂದು ವಿಧವಿಧ ಪಕ್ವಾನ್ನಗಳು, ಹಸಿರು, ಪೂಜೆ, ಹೊಸ ಬಟ್ಟೆ, ಹಿರಿಯರ ಭೇಟಿ ಇವು ಉಲ್ಲಾಸ ನೀಡುತ್ತದೆ.

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು

ಹಳದೆಂದು ನೀನದನು ಕಳೆಯುವೆಯ, ಮರುಳೆ?

ತಳಹದಿಯದಲ್ತೆ ನಮ್ಮೆಲ್ಲ ಹೊಸತಿಳಿವಿಂಗೆ

ಹಳೆ ಬೇರು ಹೊಸ ತಳಿರು-ಮಂಕುತಿಮ್ಮ ''

ಯುಗಾದಿಯಂತೆಯೇ ಎಲ್ಲ ಹಬ್ಬಗಳ ಚಕ್ರಗಳು ತಿರುಗುತ್ತಲೇ ಇರುತ್ತದೆ. ಹೊಸ ಹರುಷವ ತರುತ್ತಲೇ ಇರುತ್ತದೆ. ವಿರೋಧಿ ನಾಮ ಸಂವತ್ಸರ ಎಲ್ಲೆಡೆಯಲಿ ಎಲ್ಲರಿಗೂ ಹೊಸ ಸಂತಸ, ಶಾಂತಿ, ಸಮಾಧಾನಗಳು ತರಲಿ ಎಂದು ಶುಭ ಹಾರೈಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X