ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ ಮಾಸ 2021: ಮಹತ್ವ, ಜಪಿಸಬೇಕಾದ ಮಂತ್ರಗಳು, ಹಬ್ಬಗಳು

|
Google Oneindia Kannada News

ಭೀಮನ ಅಮಾವಾಸ್ಯೆ ಮುಗಿಯುತ್ತಿದ್ದಂತೆ ಹಬ್ಬಗಳ ಸರಮಾಲೆ ಶುರುವಾಗುತ್ತದೆ. ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ, ಸಾತ್ವಿಕ ಮಾತುಗಳ ಸಂಭ್ರಮದ ಮಾಸ. ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾದುದು. ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೇ ಆಚರಿಸಲ್ಪಡುತ್ತದೆ. ಏನೇ ಮಾಡು, ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂದು ಹೇಳುವುದುಂಟು.

ಮನುಷ್ಯರಷ್ಟೇ ಅಲ್ಲ, ಪ್ರಕೃತಿ ಮಾತೆ ಕೂಡ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತಾಳೆ. ಹಾಗಾಗಿ ಶ್ರಾವಣ ಮಾಸ ಎಂದರೆ ಎಲ್ಲೆಡೆ ಒಂದು ರೀತಿಯ ಸಂಭ್ರಮ.

ಈ ತಿಂಗಳಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ.. ಹೀಗೆ ಹಬ್ಬದ ಸಂಭ್ರಮ. ಈ ತಿಂಗಳು ಪೂರ್ತಿ ಮನೆಯ ಮುಂಬಾಗಿಲಿನಲ್ಲಿ ಹಸಿರ ತೋರಣ ಕಂಗೊಳಿಸುತ್ತಿರುತ್ತದೆ. ಮಹಿಳೆಯರು ಹಬ್ಬದ ಸಂಭ್ರಮ, ಹಬ್ಬದೂಟದ ತಯಾರಿಯಲ್ಲಿ ಮೈಮರೆಯುತ್ತಾರೆ. ಮಂಗಳಗೌರಿ ವ್ರತ, ನಾಗಚತುರ್ಥಿ, ನಾಗರಪಂಚಮಿ, ಬಸವ ಪಂಚಮಿ, ಶುಕ್ರಗೌರಿ ಪೂಜೆ, ಶ್ರಾವಣ ಶನಿವಾರದ ಪೂಜೆ, ಶ್ರೀ ವರಮಹಾಲಕ್ಷ್ಮೀ ವ್ರತ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಶ್ರೀ ಕೃಷ್ಣಜನ್ಮಾಷ್ಠಮಿ, ರಕ್ಷಾಬಂಧನ... ಹೀಗೆ ಶ್ರಾವಣ ಮಾಸದಲ್ಲಿ ಹಬ್ಬಗಳು ಸಾಲು ಸಾಲು.

 Shravan Maas 2021: Dates, Puja Vidhi, Rituals and Significance

ಹಾಗಾಗಿ ಒಂದು ರೀತಿಯಲ್ಲಿ ಶ್ರಾವಣ ಅಂದರೆ ಸಂಭ್ರಮವೇ ಹೌದು. ಒಂದೆಡೆ ಮನೆಮನೆಗಳಲ್ಲಿ ಹಬ್ಬದ ಸಂಭ್ರಮವಿದ್ದರೆ, ಮತ್ತೊಂದೆಡೆ ಪ್ರಕೃತಿ ಮಾತೆಗೂ ಹಬ್ಬದ ಸಂಭ್ರಮ. ಎಲ್ಲೆಡೆ ಹಸಿರ ಹೊದಿಕೆಯನ್ನೇ ಹಾಸಿಕೊಂಡಂತೆ ಕಾಣುವ ಪ್ರಕೃತಿ ತನ್ನೊಳಗೆ ಸಂಭ್ರಮಿಸುತ್ತಾಳೆ.

ಶ್ರಾವಣ ಮಾಸದಲ್ಲಿ ಹೂಗಳು ಜಾಸ್ತಿಯಾಗುವುದರಿಂದ ಈ ಮಾಸದಲ್ಲಿಯೇ ಚೂಡಿಪೂಜೆ (ಹೂವಿನ ಪೂಜೆ) ನಡೆಯುತ್ತದೆ. ಚೂಡಿ ಪೂಜೆಗೆ 11 ಬಗೆಯ ಹೂಗಳನ್ನು ಬಳಸುತ್ತಾರೆ. ಶ್ರಾವಣ ಮಾಸದಲ್ಲಿ ಈ ಚೂಡಿಯ ತುಳಸಿಗೆ ಪೂಜೆ ಮಾಡುವುದರಿಂದ ಸರ್ವ ಕಷ್ಟವೂ ದೂರವಾಗುತ್ತದೆ, ಸರ್ವರೋಗ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ. ಆಷಾಢ ಮಾಸದಲ್ಲಿ ಸಂಪ್ರದಾಯದ ಪ್ರಕಾರ ದೂರ ಆಗಿರುವ ದಂಪತಿ ಒಂದಾಗುತ್ತಾರೆ.

ಆಷಾಢದ ನಂತರ ಬರುವ ಶ್ರಾವಣದಲ್ಲಿ ಸೂರ್ಯ ಪ್ರಖರತೆ ಹೊಂದದೆ ನವಿರಾದ ಹೂಬಿಸಿಲಿನೊಂದಿಗೆ ನೆರಳಿನಾಟನಾಡುವನು, ಆಗಾಗ ತುಂತುರು ಮಳೆಯ ತುಷಾರ ಸಿಂಚನ, ತುಂಬಿ ಹರಿಯುವ ನದಿ ತೊರೆಗಳ ಜುಳು ಜುಳು ನಿನಾದ, ಸಂಪಿಗೆ-ಕೇದಿಗೆ ಸೇವಂತಿಗೆ, ಸುಮಧುರ ವಾಸನೆಯೊಂದಿಗೆ ಭೂದೇವಿಯು ಹೊಸ ಉಡುಗೆ ಉಟ್ಟು ನಲಿಯುವಂತೆ ಭಾಸವಾಗುವ ಕಾಲ ಧಾರ್ಮಿಕವಾಗಿಯೂ ಬಹಳ ಮಹತ್ವದ್ದು. ಹಿಂದೂ ಪಂಚಾಂಗದ ಪ್ರಕಾರ ಇದು ಐದನೆ ಮಾಸ.

ಆಧ್ಯಾತ್ಮಿಕ ಪರ್ವಗಳಷ್ಟೆ ಅಲ್ಲದೆ ಹೋರಾಟ- ತ್ಯಾಗ ಬಲಿದಾನಗಳ ನೆನಪಿಸುವ ಸ್ವಾತಂತ್ರದಿನವೂ ಶ್ರಾವಣದಲ್ಲೆ , ಇಂದು ನಾವೆಲ್ಲರೂ ನಿರಮ್ಮಳವಾಗಿರುವಂತೆ ಅನುಕೂಲ ಮಾಡಿಕೊಟ್ಟವರ ಸ್ಮರಣೆ. ಮೇಲು-ಕೀಳು ಎನ್ನುವ ಭೇದಗಳಿಗೆ ಬೇಕಾದಷ್ಟು ಕಾರಣಗಳು ದೊರೆಯುವ ಕಾಲವಿದು .ಇಂತಹ ಕಾಲದಲ್ಲಿ ಸಾಮಾಜಿಕ ಜೀವನದ ಸೊಬಗಿನಲ್ಲಿ ಮಾನವೀಯತೆ ಪ್ರಧಾನವಾಗಬೇಕು ಎನ್ನುವ ಆಶಯ ಬಿತ್ತಿದ ಮಹರ್ಷಿ ಅರವಿಂದರ ಜನ್ಮದಿನ ಈ ಮಾಸದಲ್ಲೆ. ಹಾಗಾಗಿ ಶ್ರಾವಣ ಮಾಸ ಅತ್ಯಂತ ಶ್ರೇಷ್ಠ.

ಶ್ರವಣ ನಕ್ಷತ್ರ ವಿಷ್ಣುವಿನ ಜನ್ಮನಕ್ಷತ್ರವಂತೆ, ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಇಡೀ ಮಾಸಕ್ಕೆ ಪಾವಿತ್ರ್ಯ ಬಂತು ಎನ್ನುತ್ತಾರೆ. ಕೇರಳದಲ್ಲಿ ಅದರಲ್ಲಿನ ಶ್ರ ಕಳೆದು ವಣಂ ಮಾತ್ರ ಉಳಿಯಿತು.ಅದು ಅನಂತಶಯನನಾದ ಶ್ರೀ ವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ) ವೋಣಂ ಆಯ್ತು. ಬಲಿ ಚಕ್ರವರ್ತಿ ಮತ್ತು ವಿಷ್ಣುವಿನ ವಾಮನಾವತಾರದ ನಡುವಿನ ಕತೆಯೂ ಇದರೊಂದಿಗೆ ಹೊಂದುಕೊಂಡಿದೆ.

ವಾಲ್ಮಿಕಿಯ ಅವತಾರವೆನ್ನುವ ಹನುಮಾನ್ ಚಾಲೀಸ ರಚಿಸಿದ ತುಲಸೀದಾಸರು ಕೂಡ ಹುಟ್ಟಿದ ತಿಂಗಳು ಇದುವೇ. ಕಾರ್ತೀಕದಲ್ಲಿ ಸೋಮವಾರ, ಮಾರ್ಗಶಿರದಲ್ಲಿ ಗುರುವಾರ ಮತ್ತು ಮಾಘದಲ್ಲಿ ಭಾನುವಾರ ಶ್ರೇಷ್ಟವಾದರೆ ಶ್ರಾವಣದಲ್ಲಿ ಮಾತ್ರ ಶುಕ್ರವಾರ, ಶನಿವಾರ, ಮಂಗಳವಾರ ಶ್ರೇಷ್ಠ.

ನಮ್ಮ ಬಹುತೇಕ ಜನರು ಪೂಜ್ಯಮನಸ್ಕರು ಮತ್ತು ಪುರಾಣವತ್ಸಲರು,ಶ್ರಾವಣ ದಲ್ಲಿ ಇದರ ನೆಪ ಮಾಡಿ ಪುಣ್ಯ ಸಂಚಯಕ್ಕೆ ವೇದಿಕೆಯಾಗಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಶ್ರಾವಣ ಮಾಸಕ್ಕೆ ಪ್ರತಿಸ್ಪರ್ಧೆಯೇ ಇಲ್ಲ ,ಹಾಗೆಯೆ ನಾವು ಬರಿ ವ್ರತ ಅನುಷ್ಠಾನಕ್ಕೆ ಮೀಸಲಾಗಿರಿಸದೆ ಸಾಧನಾಮಾಸವನ್ನಾಗಿ ಪರಿವರ್ತಿಸಬೇಕು.

ಶ್ರಾವಣಮಾಸದ ಮಹತ್ವ: ಶ್ರಾವಣ ಮಾಸ ಅತ್ಯಂತ ಪ್ರಮುಖವಾದುದ್ದು ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಮಂಥನದ ಸಮಯದಲ್ಲಿ ಸುಮಾರು 14 ವಿವಿಧ ರತ್ನಗಳು ಹೊರಹೊಮ್ಮುತ್ತದೆ ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು.

ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ. ಇದನ್ನು ಗಮನಿಸಿದ ಪಾರ್ವತಿಯು ಓಡಿ ಬಂದು ತನ್ನ ಪತಿಯ ಗಂಟಲನ್ನು ಬಿಗಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಕಂಠದಲ್ಲೇ ಉಳಿದುಕೊಳ್ಳುತ್ತದೆ ಅಂದಿನಿಂದ ಶಿವನನ್ನು ನೀಲಕಂಠ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಶ್ರಾವಣ ಮಾಸದಲ್ಲಿ ಜಪಿಸಬೇಕಾದ ಮಂತ್ರ: ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರಗಳನ್ನು ಜಪಿಸಬೇಕು. 108 ಬಾರಿ ಈ ಮಂತ್ರಗಳನ್ನು ಅಥವಾ ಇದಕ್ಕೂ ಹೆಚ್ಚು ಬಾರಿ ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.

ಓಂ ನಮಃ ಶಿವಾಯ ||

ಮಹಾಮೃತ್ಯುಂಜಯ ಮಂತ್ರ: ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ || ಊರ್ವಾವರ್ಕಮೀವ ಬಂಧಂ ಮೃತ್ಯೊರ್ ಮೋಕ್ಷಂ ಅಮೃತಃ

ರುದ್ರ ಗಾಯತ್ರಿ ಮಂತ್ರ:

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ

ತನ್ನೋ ರುದ್ರ ಪ್ರಚೋದಯಾತ್‌ ||

ಶ್ರಾವಣ ಸೋಮವಾರ ಉಪವಾಸದ ಉಪಯೋಗ: ಶಿವ ಪುರಾಣದಲ್ಲೂ ಕೂಡ ಶ್ರಾವಣ ಮಾಸದ ಉಪವಾಸವನ್ನು ಉಲ್ಲೇಖಿಸಲಾಗಿದೆ. ಶಿವ ಪುರಾಣದ ಪ್ರಕಾರ, ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುವುದರಿಂದ ನಿಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಮತ್ತು ಶಿವನ ಆಶೀರ್ವಾದವು ನಿಮ್ಮದಾಗುತ್ತದೆ. ಶಿವ ಭಕ್ತರಿಗೆ ಶ್ರಾವಣ ಸೋಮವಾರ ಪ್ರಮುಖವಾದ ದಿನವಾಗಿದೆ. ಶ್ರಾವಣ ಸೋಮವಾರದ ಉಪವಾಸ ಇದ್ದು. ಇನ್ನು ಕೆಲವರು ಉಪವಾಸದೊಂದಿಗೆ ಮೌನ ವ್ರತವನ್ನು ಕೂಡ ಮಾಡಿದರೆ ಕೋರಿದ ಇಷ್ಟಾರ್ಥಗಳು ಲಭಿಸುತ್ತದೆ.

Recommended Video

ದರ್ಶನ್ ಜೊತೆಗೆ ತಿರುಪತಿಯಲ್ಲಿ ಕಾಣಿಸಿಕೊಂಡ ಅಂಬಿ ಕುಟುಂಬ | Oneindia Kannada

ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು: ಮಂಗಳಗೌರಿ ವ್ರತ, ನಾಗರಪಂಚಮಿ, ಶ್ರಾವಣ ಏಕಾದಶಿ ವ್ರತ, ವರಮಹಾಲಕ್ಷ್ಮೀ ವ್ರತ, ಓಣಂ, ಋಗ್ ಉಪಾಕರ್ಮ, ಯಜುರುಪಾಕರ್ಮ, ರಕ್ಷಾ ಬಂಧನ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಸಂಕಷ್ಟ ಚತುರ್ಥಿ, ಕೃಷ್ಣ ಜನ್ಮಾಷ್ಠಮಿ.

English summary
While the Northern states in India are already in the middle of the of Shravan month, which commenced in certain states on July 25, the auspicious Shravan Maas in the Southern and Western parts of the country, including Maharashtra, will begin from today (August 9).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X