• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವ

By ವಿಶ್ವಾಸ್ ಸೋಹೋನಿ
|
Google Oneindia Kannada News

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ. ನಾಗಚತುರ್ಥಿ, ನಾಗಪಂಚಮಿ, ಶ್ರಾವಣ-ಸೋಮವಾರ, ಶ್ರಾವಣ-ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ, ಹೀಗೆ ಪ್ರತಿದಿನವೂ ಹಬ್ಬ. ಈ ಎಲ್ಲ ಹಬ್ಬಗಳಲ್ಲಿ 'ನೂಲಹುಣ್ಣಿಮೆ' ಅಥವಾ 'ರಕ್ಷಾಬಂಧನ' ಒಂದು ಪ್ರಮುಖ ಹಬ್ಬ.

ಈ ಹಬ್ಬವು ಹಿಂದೂ, ಜೈನ, ಸಿಖ್ ಧರ್ಮದವರು ಭಾರತ, ಮಾರಿಷಿಯಸ್, ನೇಪಾಳ, ಪಾಕಿಸ್ತಾನ್‍ದ ಕೆಲವು ಪ್ರದೇಶಗಳಲ್ಲಿ ಮತ್ತು ವಿಶ್ವದಾದ್ಯಂತ ಭಾರತೀಯರು ತಾವಿರುವ ಸ್ಥಳಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದ ಕರಾವಳಿಯಲ್ಲಿ ಈ ದಿನ 'ಕೊಳಿ' ಸಮಾಜದವರು ಸಾಗರಕ್ಕೆ ತೆಂಗಿನಕಾಯಿ ಅರ್ಪಿಸಿ, ಪೂಜೆಯನ್ನು ಮಾಡಿ ಮೀನುಗಾರಿಕೆಯನ್ನು ಮತ್ತೆ ಪ್ರಾರಂಭಿಸುತ್ತಾರೆ. ಅಲ್ಲಿ ನೂಲಹುಣ್ಣಿಮೆಯನ್ನು 'ನಾರಳಿಪೂರ್ಣಿಮಾ' ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ 'ಜನೆವು ಪೂರ್ಣಿಮಾ' ಎಂದು ಹೇಳುತ್ತಾರೆ.

ರಕ್ಷಾಬಂಧನವೆಂಬ ಪವಿತ್ರ ಬೆಸುಗೆ: ಏನಿದರ ಮಹತ್ವ? ರಕ್ಷಾಬಂಧನವೆಂಬ ಪವಿತ್ರ ಬೆಸುಗೆ: ಏನಿದರ ಮಹತ್ವ?

ಈ ದಿನ ಹಳೆಯ ಜನಿವಾರವನ್ನು ಬದಲಿಸಿ ಹೊಸ ಜನಿವಾರ ಧರಿಸುತ್ತಾರೆ. ರಕ್ಷಾಬಂಧನ ಹಬ್ಬವು ಕೇವಲ ಸಹೋದರ-ಸಹೋದರಿಯರಿಗಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬ ಸ್ತ್ರೀ-ಪುರುಷರ ನಡುವೆ ಇರುವ ಪ್ರೀತಿ, ವಾತ್ಸಲ್ಯ, ಜವಾಬ್ದಾರಿ ಮತ್ತು ಕರ್ತವ್ಯದ ಪ್ರತೀಕವಾಗಿದೆ. ರಜಪೂತ ರಾಣಿಯರು ತಮ್ಮ ನೆರೆಯ ರಾಜ್ಯದ ರಾಜನಿಗೆ ರಾಖಿಯನ್ನು ಸಹೋದರತ್ವದ ಭಾವನೆಯಿಂದ ಕಳುಹಿಸುತಿದ್ದರು. ಈ ಹಬ್ಬವು ಪುರಾತನ ಕಾಲದಿಂದ ನಡೆದು ಬಂದಿದ್ದು ಪ್ರೀತಿ, ಸ್ನೇಹ, ಪವಿತ್ರತೆ, ಸಾಮರಸ್ಯದ ಸಂಕೇತವಾಗಿದೆ. ರಾಖಿಯು ಸಾಧಾರಣ ನೂಲಿನಿಂದ, ದಾರದಿಂದ ಮಾಡಲಾಗುತ್ತದೆ. ಇಂದಿನ ದಿನಗಳಲ್ಲಿ ಬೆಳ್ಳಿ, ಬಂಗಾರದ ಬ್ರಾಸ್ ಲೆಟ್, ರಿಸ್ಟ್ ವಾಚ್ ಗಳನ್ನು ರಾಖಿಯ ಬದಲಾಗಿ ಬಳಸಲಾಗುತ್ತದೆ.

ಸಹೋದರತ್ವದ ಸಂಕೇತವಾದ ರಕ್ಷಾಬಂಧನ ಆಚರಣೆ ಏಕೆ?ಸಹೋದರತ್ವದ ಸಂಕೇತವಾದ ರಕ್ಷಾಬಂಧನ ಆಚರಣೆ ಏಕೆ?

ರಕ್ಷಾಬಂಧನದ ಹಬ್ಬದಂದು ಬೆಳಗ್ಗೆ ಸಹೋದರಿ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಸಹೋದರನಿಗೆ ಆರತಿ ಬೆಳಗಿಸಿ, ಹಣೆಯಲ್ಲಿ ತಿಲಕವನ್ನಿಟ್ಟು ರಾಖಿ ಕಟ್ಟುವ ಪದ್ಧತಿ ಇದೆ. ಸಹೋದರಿ ಕೊಟ್ಟಿರುವ ಸಿಹಿ ತಿಂದ ನಂತರ ಸಹೋದರನು ಆಶಿರ್ವಾದ ಮಾಡಿ, ಬಟ್ಟೆ, ಅಭರಣಗಳು ಮುಂತಾದಗಳನ್ನು ಸ್ನೇಹ ರೂಪದಲ್ಲಿ ಕಾಣಿಕೆ ನೀಡುತ್ತಾನೆ.
ನಮ್ಮ ಪುರಾಣ ಮತ್ತು ಇತಿಹಾಸದಲ್ಲಿ ರಕ್ಷಾಬಂಧನದ ಪುರಾವೆಗಳು ಇವೆ.

ಯುದ್ಧ ಗೆದ್ದ ಇಂದ್ರ

ಯುದ್ಧ ಗೆದ್ದ ಇಂದ್ರ

ದೇವತೆ ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದ ಸಮಯದಲ್ಲಿ, ಇಂದ್ರನನ್ನು ದೈತ್ಯ ಬಲಿ ಸೋಲಿಸುತ್ತಾನೆ. ಅವನ ಪತ್ನಿ ಸಾಚಿ ವಿಷ್ಣು ಕೊಟ್ಟಿರುವ ನೂಲಿನ ಕಂಕಣವನ್ನು ಸಲಹೆಯಂತೆ ಇಂದ್ರನ ಕೈಗೆ ಕಟ್ಟಿ ವಿಜಯಶಾಲಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಾಳೆ. ಇಂದ್ರನು ಯದ್ಧದಲ್ಲಿ ವಿಜಯಶಾಲಿಯಾಗಿ ಮತ್ತೆ ಅಮರಾವತಿಯ ರಾಜ್ಯವನ್ನು ಮರಳಿ ಪಡೆಯುತ್ತಾನೆ. ಆ ಕಾಲದಲ್ಲಿ ಯುದ್ಧಕ್ಕೆ ಹೋಗುವಾಗ ನಾರಿಯರು ಸೈನಿಕರಿಗೆ ಕಂಕಣ ಕಟ್ಟುವ ಪದ್ಧತಿ ಇತ್ತು. ಹಾಗಾಗಿ ರಕ್ಷಣೆಯು ಸಹೋದರ-ಸಹೋದರಿಯರಿಗೆ ಮಾತ್ರವಲ್ಲ, ವಿಶ್ವದ ನರ ನಾರಿಯರಿಗೂ ಬೇಕಾಗಿದೆ.

ತನ್ನ ಕಿಡ್ನಿಯನ್ನೇ ನೀಡಿ ತಮ್ಮನ ಪ್ರಾಣಕ್ಕೆ ರಕ್ಷೆಯಾದ ಅಕ್ಕತನ್ನ ಕಿಡ್ನಿಯನ್ನೇ ನೀಡಿ ತಮ್ಮನ ಪ್ರಾಣಕ್ಕೆ ರಕ್ಷೆಯಾದ ಅಕ್ಕ

ಬಲಿ ಚಕ್ರವರ್ತಿ ಮತ್ತು ಲಕ್ಷ್ಮೀ

ಬಲಿ ಚಕ್ರವರ್ತಿ ಮತ್ತು ಲಕ್ಷ್ಮೀ

ವಿಷ್ಣು ಬಲಿ ಚಕ್ರವರ್ತಿಯ ಮೇಲೆ ವಿಜಯ ಪಡೆದು ಮೂರು ಲೋಕಗಳ ಮಾಲೀಕನಾಗುತ್ತಾನೆ. ಬಲಿ ಚಕ್ರವರ್ತಿಯು ವಿಷ್ಣುವಿಗೆ ತನ್ನ ಅರಮನೆಯಲ್ಲಿ ಇರಲು ವಿನಂತಿಸುತ್ತಾನೆ. ಆದರೆ ಲಕ್ಷ್ಮಿಗೆ ಬಲಿ ಚಕ್ರವರ್ತಿಯ ಸ್ನೇಹ ಮತ್ತು ಅರಮನೆಯಲ್ಲಿ ಇರುವುದು ಇಷ್ಟವಾಗುವುದಿಲ್ಲ. ಅವಳು ಬಲಿ ಚಕ್ರವರ್ತಿಗೆ ರಾಖಿಯನ್ನು ಕಟ್ಟಿ ಸಹೋದರನನ್ನಾಗಿ ಮಾಡಿಕೊಳ್ಳುತ್ತಾಳೆ. ವಿಷ್ಣು ಮತ್ತು ತಾನು ವೈಕುಂಠಕ್ಕೆ ಮರಳಿ ಹೋಗಬೇಕೆಂದು ಬಲಿ ಚಕ್ರವರ್ತಿಗೆ ವಿನಂತಿಸುತ್ತಾಳೆ. ಬಲಿ ಚಕ್ರವರ್ತಿಯು ಲಕ್ಷ್ಮಿಯನ್ನು ಸಹೋದರಿ ಎಂದು ಒಪ್ಪಿಕೊಂಡು, ವಿನಂತಿಯನ್ನು ಮಾನ್ಯ ಮಾಡುತ್ತಾನೆ.

ರಕ್ಷಾಬಂಧನಕ್ಕೆ ಚಿನ್ನದ ಸ್ವೀಟು! ಕೆಜಿಗೆ ಬರೋಬ್ಬರಿ 9000 ರೂ.!ರಕ್ಷಾಬಂಧನಕ್ಕೆ ಚಿನ್ನದ ಸ್ವೀಟು! ಕೆಜಿಗೆ ಬರೋಬ್ಬರಿ 9000 ರೂ.!

ಸಂತೋಷಿ ಮಾತೆ

ಸಂತೋಷಿ ಮಾತೆ

ಗಣೇಶನಿಗೆ ಎರಡು ಮಕ್ಕಳು 'ಶುಭ' ಮತ್ತು 'ಲಾಭ' ರಕ್ಷಾಬಂಧನದ ದಿನ ಗಣೇಶನ ಸಹೋದರಿಯು ಬಂದು ಅವನಿಗೆ ರಾಖಿ ಕಟ್ಟುತ್ತಾಳೆ. ಎರಡು ಮಕ್ಕಳಿಗೆ ಅದನ್ನು ನೋಡಿ ತಮಗೆ ಸಹೋದರಿ ಇಲ್ಲವೆಂದು ತುಂಬಾ ಬೇಸರವಾಗುತ್ತದೆ. ಆಗ ತಂದೆಯ ಹತ್ತಿರ ಹೋಗಿ ತಮಗೆ ಸಹೋದರಿ ಬೇಕೆಂದು ಹಠ ಮಾಡುತ್ತಾರೆ. ಕೊನೆಗೆ ನಾರದಮುನಿ ಬಂದು ಗಣೇಶನಿಗೆ ವಿನಂತಿ ಮಾಡಿ, ಅವರಿಗೆ ತಂಗಿ ಕೊಡು, ಅದರಿಂದ ನಿನಗೆ ಮತ್ತು ಮಕ್ಕಳಿಗೆ ಶುಭವಾಗುವುದು ಎಂದು ಹೇಳುತ್ತಾರೆ. ಗಣೇಶನಿಗೆ ತನ್ನ ಪತ್ನಿಗಳಾದ ರಿದ್ಧಿ ಮತ್ತು ಸಿದ್ಧಿಯಿಂದ ಮಂತ್ರಾಗ್ನಿ ಮೂಲಕ ಕನ್ಯಾರತ್ನ ಪ್ರಾಪ್ತವಾಗುತ್ತದೆ. ಅವಳ ಹೆಸರೇ ಸಂತೋಷಿ ಮಾತೆ. ತದನಂತರ ಶುಭ, ಲಾಭರಿಗೆ ತಂಗಿ ಸಂತೋಷಿ ಮಾತೆಯು ರಾಖಿ ಕಟ್ಟಿ ಅವರಿಂದ ರಕ್ಷಣೆ ಪಡೆಯುತ್ತಾಳೆ.

ಕೃಷ್ಣ ಮತ್ತು ದ್ರೌಪದಿ

ಕೃಷ್ಣ ಮತ್ತು ದ್ರೌಪದಿ

ಕೃಷ್ಣನ ಕೈಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಆಗ ಕೃಷ್ಣ ಅವಳಿಗೆ ಸಮಯ ಬಂದಾಗ ಈ ಉಪಕಾರವನ್ನು ತೀರಿಸುತ್ತೇನೆ ಎಂದು ವಾಗ್ದಾನ ನೀಡಿ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುತ್ತಾನೆ. ದುಶ್ಶಾಸನ ವಸ್ತ್ರಾಪಹರಣ ಮಾಡುವಾಗ ಕೃಷ್ಣ ಅವಳಿಗೆ ಸೀರೆಗಳನ್ನು ನೀಡುತ್ತಾನೆ. ಮಹಾಭಾರತದಲ್ಲಿ ದ್ರೌಪದಿ ಕೃಷ್ಣನಿಗೆ ರಾಖಿ ಕಟ್ಟಿದರೆ, ಕುಂತಿ ತನ್ನ ಮೊಮ್ಮಗ ಅಭಿಮನ್ಯುವಿಗೆ ಯುದ್ಧಕ್ಕೆ ಹೋಗುವಾಗ ಕಂಕಣ ಕಟ್ಟುತ್ತಾಳೆ.

ಯಮ ಮತ್ತು ಯಮುನಾ

ಯಮ ಮತ್ತು ಯಮುನಾ

ಮೃತ್ಯು ದೇವತೆ ಯಮ ತನ್ನ ಸಹೋದರಿ ಯಮುನಾಳನ್ನು 12 ವರ್ಷಗಳಿಂದ ನೋಡಿರುವುದಿಲ್ಲ. ಅವಳು ಇದರಿಂದ ತುಂಬಾ ದುಃಖಿಯಾಗಿರುತ್ತಾಳೆ. ಗಂಗೆಗೆ ಈ ವಿಷಯವನ್ನು ತಿಳಿಸಿ ಅಣ್ಣನಿಗೆ ತನ್ನನ್ನು ಭೇಟಿ ಮಾಡಲು ತಿಳಿಸು ಎಂದು ಹೇಳುತ್ತಾಳೆ. ಗಂಗಾನದಿ ಯಮನಿಗೆ ಈ ವಿಷಯ ತಿಳಿಸುತ್ತಾಳೆ. ಆಗ ಯಮನು ಯಮುನಾಳನ್ನು ಭೇಟಿ ಮಾಡುತ್ತಾನೆ. ಅವಳಿಗೆ ತನ್ನ ಅಣ್ಣನನ್ನು ಕಂಡು ತುಂಬಾ ಸಂತೋಷವಾಗುತ್ತದೆ. ಯಮನು, ಯಮುನಾಳು ಮಾಡಿದ ಮೃಷ್ಟಾನ್ನ ಭೋಜನವನ್ನು ಸವಿದು ಖುಷಿಯಿಂದ ವರವನ್ನು ಕೇಳು ಎಂದು ಹೇಳುತ್ತಾನೆ. ಅವಳು ಯಾವುದೇ ಬೇರೆ ವರವನ್ನು ಕೇಳದೇ ಪುನಃ ಬಾರಿ-ಬಾರಿಗೂ ಭೇಟಿಮಾಡಲು ಮಾತ್ರ ಹೇಳುತ್ತಾಳೆ. ಯಮನು ಇದನ್ನು ಒಪ್ಪಿಕೊಂಡು ಅಮರಳಾಗುವ ವರದಾನ ಕೊಡುತ್ತಾನೆ.

ಇತಿಹಾಸದ ಪುಟಗಳಲ್ಲಿ ರಾಖಿ

ಇತಿಹಾಸದ ಪುಟಗಳಲ್ಲಿ ರಾಖಿ

ರಾಜ ಅಲೆಕ್ಸಾಂಡರ್ ಮತ್ತು ರಾಜ ಪುರುಷರು: ಅಲೆಕ್ಸಾಂಡರ್ ಭಾರತದ ಮೇಲೆ ಕ್ರಿ.ಪೂ. 326 ರಲ್ಲಿ ದಾಳಿ ಮಾಡಿದಾಗ ಅವನ ಪತ್ನಿ ರುಕ್ಸಾನ(ರೊಶನಕ್) ರಾಜ ಪೊರಸ್ ನಿಗೆ ಪವಿತ್ರ ಕಂಕಣ ಕಳುಹಿಸಿ ತನ್ನ ಪತಿಯ ಮೇಲೆ ಯುದ್ಧಭೂಮಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಬಾರದು ಎಂದು ಪ್ರಾರ್ಥಿಸುತ್ತಾಳೆ. ರಾಜ ಪೊರಸ್ ನು ಧಾರ್ಮಿಕ ಸಂಪ್ರದಾಯದಂತೆ ರಾಖಿಯನ್ನು ಸ್ವೀಕರಿಸಿ ಕಟ್ಟಿಕೊಳ್ಳುತ್ತಾನೆ. ರಣರಂಗದಲ್ಲಿ ಕೊನೆಯ ಬಾಣ ಬಿಡುವಾಗ ತನ್ನ ಕೈಯಲ್ಲಿ ಇರುವ ರಾಖಿಯನ್ನು ನೋಡಿ ದಾಳಿ ಮಾಡದೇ ಸುಮ್ಮನಿರುತ್ತಾನೆ.

ರಾಣಿ ಕರ್ಣಾವತಿ ಮತ್ತು ಹುಮಾಯೂನ್

ರಾಣಿ ಕರ್ಣಾವತಿ ಮತ್ತು ಹುಮಾಯೂನ್

ಚಿತ್ತೋರ್ ನ ರಾಣಿ ಕರ್ಣಾವತಿ, ಗುಜರಾತ್ ನ ಬಹದ್ದೂರ್ ಶಾ ನ ವಿರುದ್ಧ ತಾನು ಒಂಟಿಯಾಗಿ ದಾಳಿಮಾಡಲು ಸಾಧ್ಯವಿಲ್ಲವೆಂದು ಯೋಚಿಸಿ ಹುಮಾಯೂನನಿಗೆ ರಾಖಿ ಕಳುಹಿಸಿ ಯುದ್ಧದಲ್ಲಿ ಸಹಾಯ ಮಾಡಲು ಪ್ರಾರ್ಥಿಸುತ್ತಾಳೆ. ಆದರೆ ಹುಮಾಯೂನನು ತಡವಾಗಿ ಬಂದಿದ್ದರಿಂದ ರಾಣಿ ಯುದ್ಧದಲ್ಲಿ ಸೋಲುತ್ತಾಳೆ.

ಬಂಗಾಳ ವಿಭಜನೆ ಸಮಯದಲ್ಲಿ ರಕ್ಷಾಬಂಧನ

ಬಂಗಾಳ ವಿಭಜನೆ ಸಮಯದಲ್ಲಿ ರಕ್ಷಾಬಂಧನ

ರಾಷ್ಟ್ರಕವಿ ರವಿಂದ್ರನಾಥ ಟಾಗೋರರು ರಾಖಿಯು ಹಿಂದೂ-ಮುಸ್ಲಿಂ ಜನಾಂಗದಲ್ಲಿ ಪ್ರೀತಿ, ಬಂಧುತ್ವದ ಸಂಕೇತ ಎಂದು ಹೇಳಿದ್ದಾರೆ. ಅವರು ಬಂಗಾಳದ ವಿಭಜನೆಯ ಸಮಯದಲ್ಲಿ ರಕ್ಷಾಬಂಧನದ ಕಾರ್ಯಕ್ರಮಗಳನ್ನು ಆಯೊಜಿಸಿದ್ದರು. ಹಿಂದೂ-ಮುಸ್ಲಿಂಮರು ಏಕತೆಯನ್ನು ಕಾಪಾಡಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿ ಎಂಬುದು ಅವರ ಪ್ರಯತ್ನವಾಗಿತ್ತು. ಆದರೆ ಕೊನೆಗೂ ಬಂಗಾಳವು ವಿಭಜನೆಯಾಯಿತು. ನಾವು ಭಾರತೀಯರು ವಿದೇಶಿಯರನ್ನು ಅನುಕರಿಸುತ್ತಾ ನಮ್ಮ ನಿಜವಾದ ಸಂಸ್ಕೃತಿಯನ್ನು ಮರೆತು ಸ್ನೇಹ ಆತ್ಮೀಯತೆಯಿಂದ ದೂರ ಹೋಗುತ್ತಿದ್ದೇವೆ. ಇಂದಿನ ಯುವ ಪೀಳಿಗೆ 'ಪ್ರೇಮಿಗಳ ದಿನ'ಕ್ಕೆ ನೀಡುವುದಕ್ಕಿಂತ ಹೆಚ್ಚಿನ ಮಹತ್ವವನ್ನು ರಕ್ಷಾಬಂಧನಕ್ಕೆ ನೀಡಬೇಕಿದೆ.

English summary
Raksha Bandhan, or Rakhi is a Hindu festival, celebrated in many parts of the Indian subcontinent, notably India and Nepal. Raksha bandhan means "bond of protection". This festival falls on full moon day of Shravan month(this year August 26). Here is a story on historical and mythological importance of Raksha Bandhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X