ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡ್ಡಿನ ದೇವತೆಗೆ ಶೃಂಗಾರ ಮಾಡುವ ಪರಿ ಹೀಗೆ

|
Google Oneindia Kannada News

Varamahalakshmi idol
ಇಂದು ವರಮಹಾಲಕ್ಷ್ಮಿ ವ್ರತ. ಹಬ್ಬದ ಆಚರಣೆ ಈ ಬಾರಿ ನಮ್ಮ ಮನೆಯಲ್ಲಿ ತುಂಬಾ ಜೋರಿರಬೇಕು ಅಂತ ಎಲ್ಲರೂ ಅಂದುಕೊಳ್ತಾರೆ. ಅದರಲ್ಲೂ ಹೆಂಗಳೆಯರಿಗೆ ಲಕ್ಷ್ಮಿಗೆ ಅಲಂಕಾರವನ್ನ ಕಣ್ಣು ತುಂಬುವಂತೆ ಮಾಡಬೇಕು ಅನ್ನೋ ಆಸೆ ಇರುತ್ತೆ.

ರಂಗೋಲಿ ಬಿಡಿಸಿ ತೋರಣ ಕಟ್ಟಿ ಹೊಸ ಸೀರೆ, ಒಡವೆ ತೊಟ್ಟು ದೇವಿಗೆ ಅಲಂಕರಿಸಿ ಪೂಜೆ ಮಾಡಿ ಅರಿಶಿನ ಕುಂಕುಮ ಕೊಟ್ಟು ಅಕ್ಷತೆ ಹಾಕಿಸಿಕೊಂಡರೆ ಸಮಾಧಾನ. ಈ ಎಲ್ಲ ಕಾರ್ಯಗಳನ್ನು ಒಪ್ಪವಾಗಿ ಮಾಡಿದರೆ ಹಬ್ಬಕ್ಕೆ ಸಾರ್ಥಕ. ಲಕ್ಷ್ಮಿಯನ್ನು ಯಾವ ರೀತಿ ಸಿಂಗಾರಗೊಳಿಸಿ ಇನ್ನಷ್ಟು ಕಂಗೊಳಿಸುವಂತೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ:

ಲಕ್ಷ್ಮಿ ಅಲಂಕಾರಕ್ಕೆ ಬೇಕಾಗುವ ಸಾಮಾನುಗಳು:
* ಲಕ್ಷ್ಮಿ ಮುಖವಾಡ
* ಸೀರೆ, ಬ್ಲೌಸ್ ಪೀಸ್
* ಆಭರಣಗಳು
* ದೊಡ್ಡ ಕಲಶದ ಬಿಂದಿಗೆ
* ದುಂಡಗಿನ ತೆಂಗಿನಕಾಯಿ
* ಮಾವಿನ ಎಲೆಗಳು
* ವಿಧ ವಿಧವಾದ ಹೂವುಗಳು
* ಪೇಂಟ್, ದಾರ, ನ್ಯೂಸ್ ಪೇಪರ್, ಫೆವಿಕಾಲ್

ಸಿಂಗಾರಗೊಳಿಸುವ ವಿಧಾನ:
1. ಮೊದಲು ಕಲಶದ ಬಿಂದಿಗೆಯನ್ನು ಚೆನ್ನಾಗಿ ತೊಳೆದು ಮಾವಿನ ಎಲೆಯನ್ನು ಒಪ್ಪವಾಗಿ ಇಟ್ಟು ತೆಂಗಿನ ಕಾಯಿಯನ್ನು ಕಲಶದ ಮೇಲೆ ಇಡಬೇಕು.

2. ಸರಿಯಾಗಿ ಕೂರಿಸಿದ ತೆಂಗಿನಕಾಯಿಗೆ ಲಕ್ಷ್ಮಿಯ ಮುಖವಾಡವನ್ನು ಎರಡೂ ಕಡೆ ಗಟ್ಟಿಯಾಗಿ ಕಟ್ಟಬೇಕು. ಹೂವನ್ನು ಮುಡಿಸುವುದಕ್ಕಾಗಿ ಕಲಶದ ಹಿಂದೆ ಸಣ್ಣದೊಂದು ತಂತಿಯನ್ನೂ ಅಡ್ಡಲಾಗಿ ಕಾಯಿಯ ಜುಟ್ಟಿಗೆ ಕಾಣದಂತೆ ಕಟ್ಟಬೇಕು.

3.ಲಕ್ಷ್ಮಿ ಮುಖವಾಡ ಕಲಶದ ಬಿಂದಿಗೆಯ ಕೊರಳಿನ ಮೇಲೆ ಸರಿಯಾಗಿ ಕೂತಿರಬೇಕು.

4. ಬಿಂದಿಗೆಯ ಕೊರಳಿಗೆ ದಾರ ಕಟ್ಟಿ ಸೀರೆಯನ್ನು ನೆರಿಗೆ ಮಾಡಿಕೊಂಡು ಅಳತೆಗೆ ತಕ್ಕಂತೆ ಸುತ್ತಲೂ ಉಡಿಸಿ ದಾರಕ್ಕೆ ಸಿಕ್ಕಿಸಬಹುದು. ಸೀರೆಗೆ ಹೊಂದಿಕೊಳ್ಳುವ ರವಿಕೆಯನ್ನು ಸುತ್ತಿ ಕಲಶವನ್ನು ಬಳಸಿ ಇಡಬೇಕು.

5. ಈಗ ಕಲಶಕ್ಕೆ ಆಭರಣ ಮತ್ತು ಹೂವನ್ನು ಅಲಂಕರಿಸಬೇಕು. ಬಗೆಬಗೆ ಬಣ್ಣದ ದಿಂಡುಗಳು, ಹೂವುಗಳು ಇದ್ದರೆ ಚೆಂದ. ಕಮಲವನ್ನು ಎರಡೂ ಬದಿಯಲ್ಲಿ ಕುಂಡದಲ್ಲಿ ನೀರಿಟ್ಟು ಇಡಬೇಕು. ಬಿಂದಿಗೆಯ ಕೊರಳಿಗೆ ಕಟ್ಟಿದ್ದ ದಾರ ಕಾಣದಂತೆ ಮಾಡಲು ಮಲ್ಲಿಗೆ ಹೂವಿನ ದಿಂಡನ್ನು ಸುತ್ತಿ.

6. ಬೇಕೆಂದರೆ ನ್ಯೂಸ್ ಪೇಪರ್ ಬಳಸಿಕೊಂಡು ಕಲಶಕ್ಕೆ ಕೈಕಾಲುಗಳನ್ನೂ ಮಾಡಬಹುದು. ನೀರು ಮಿಶ್ರಿತ ಫೆವಿಕಾಲ್ ನೊಂದಿಗೆ ಪೇಪರನ್ನು ಸುರಳಿ ಸುತ್ತಿ ಕೈಕಾಲುಗಳಂತೆ ಆಕಾರ ನೀಡಿ ಸ್ವಲ್ಪ ಆರಲು ಬಿಟ್ಟು ಸೆಲ್ಲೋಟೇಪ್ ಸಹಾಯದೊಂದಿಗೆ ಬಿಂದಿಗೆಗೆ ಅಂಟಿಸಬಹುದು. ಆ ಪೇಪರಿಗೆ ಮೈಬಣ್ಣ ಹೋಲುವ ಬಣ್ಣ ಹಚ್ಚಿ.

7. ಬಳೆಗಳನ್ನು ಕೈಗಳಿಗೆ ಅಥವಾ ರವಿಕೆಗೆ ತೊಡಿಸಬಹುದು.

8. ದೀಪಗಳನ್ನು ಎರಡು ಬದಿಗಿಟ್ಟು, ಅರಿಶಿನ ಕುಂಕುಮ, ಹೂವು, ಅಕ್ಷತೆ, ತಿಂಡಿ ತಿನಿಸು, ನೈವೇದ್ಯ ಎಲ್ಲವನ್ನು ಸಿದ್ಧಗೊಂಡ ಕಲಶದ ಮುಂದೆ ಇಡಬೇಕು.

9. ಲಭ್ಯವಿರುವ ಇನ್ನೂ ಅನೇಕ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಿಕೊಂಡು ದೇವಿಯನ್ನು ಸಿಂಗಾರಗೊಳಿಸಿಕೊಳ್ಳಬಹುದು. (ವರಮಹಾಲಕ್ಷ್ಮಿ ಪೂಜಾ ವಿಧಾನ)

English summary
On the varamahalakshmi festival, women clean and deck up homes with rangolis and thoranas. They wear beautiful sarees and jewellery and then perform the poojas as lakshmi is wealth. With a well decorated pooja room, place the kalash with the lakshmi's vigraham or mukavada of the goddess. Today, we will tell on how to decorate varamahalakshmi idol for the lakshmi festival. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X