ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಮಹಾಲಕ್ಷ್ಮಿಗೆ ಆರತಿ ಬೆಳಗಿರೆ ನಾರಿಯರು ಬೇಗ

By Staff
|
Google Oneindia Kannada News

Varamahalakshmi (photo : meerasubbarao.wordpress.com)
ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಯನ್ನು, ಜರತಾರಿ ಸೀರೆಯಿಂದ ಸಾಲಂಕೃತಳಾದ ಶ್ರೀವಲ್ಲಭೆಯನ್ನು ಭಕ್ತಿಭಾವದಿಂದ ಮುತ್ತೈದೆಯರು 'ಆರತಿ ಬೆಳಗಿರೆ ನಾರಿಯರು ಬೇಗ..' ಅಂತ ಆರತಿ ಬೆಳಗಿ ಪೂಜಿಸಿದರೆ ವರ ಕೊಡದೇ ಇರುತ್ತಾಳೆಯೇ? ಖಂಡಿತ ಕೊಟ್ಟೇ ಕೊಡುತ್ತಾಳೆ.

ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆಗಳಿಂದ ಜೀವನ ಸಂಕಷ್ಟಮಯವಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಬೆಲೆಯನ್ನು ಕೇಳುವುದಕ್ಕೇ ಹೆದರಿಕೆ, ತಿಂಗಳು ತಿಂಗಳು ತರುತ್ತಿದ್ದ ಮೂರು ಕೇಜಿ ತೊಗರಿ ಬೇಳೆ ಒಂದೂಮುಕ್ಕಾಲಿಗಿಳಿದಿದೆ. ಕೆಲಸಕ್ಕೆಂದು ಮನೆಬಿಡುವಾಗ ಪ್ರತಿದಿನ ಮುಡಿಗೇರಿರುತ್ತಿದ್ದ ಮೊಳ ಘಮಿಘಮಿಸುವ ಮಲ್ಲಿಗೆ ಹೂ ಚೋಟುದ್ದವಾಗಿದೆ. ಇನ್ನು ಹಣ್ಣುಗಳಂತೂ ತಿಂಗಳ ಮೊದಲೇ ಹುಳಿ ದ್ರಾಕ್ಷಿಯಂದಾಗಿವೆ. ಜೀವನೋತ್ಸಾಹವೇ ಅರ್ಧಕ್ಕಿಳಿದುಬಿಟ್ಟಿದೆ, ಕಾರಣ, ಸಂಬಳವೇ ಅರ್ಧಕ್ಕರ್ಧ ಕಟ್ಟಾಗಿದೆ. ಆರ್ಥಿಕ ಸ್ಥಿತಿ ಚಿಗಿತುಕೊಳ್ಳುತ್ತದೆಂಬ ಆಶಾಭಾವನೆಯಿದ್ದರೂ ಕೆಲಸ ಗಿಟ್ಟುತ್ತಿಲ್ಲ.

ಇಂಥ ಸಂದರ್ಭದಲ್ಲಿಯೇ ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಮಹಿಳೆಯರು ಎಂದಿನ ಜಡತೆ ಕೊಡವಿಕೊಂಡು ಹರ್ಷಚಿತ್ತರಾಗಿ ಹಬ್ಬವನ್ನು ಎದಿರುನೋಡುತ್ತಿದ್ದಾರೆ. ಸರ್ವಾಲಂಕಾರಭೂಷಿತೆ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜೆ ಮಾಡಿ ಒಲಿಸಿಕೊಳ್ಳಬೇಕಾದ ವರಗಳು ಮನತುಂಬ ತುಂಬಿಕೊಂಡಿವೆ. ಶ್ರದ್ಧೆಯಿಂದ ದೇವಿಯನ್ನು ಪೂಜಿಸಿ ಕುಟುಂಬದ ಎಲ್ಲರ ಸಂಕಷ್ಟಗಳನ್ನು ದೂರಮಾಡಿಕೊಳ್ಳಲು ಸುಸಮಯ.

ದಟ್ಸ್ ಕನ್ನಡದ ಎಲ್ಲ ಓದುಗರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಆರತಿ ಹಾಡು

ಆರತಿ ಬೆಳಗಿರೆ ನಾರಿಯರು ಬೇಗ
ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ||

ವಿಳ್ಳೆ ಕಾಲುಂಗುರ ಋಲ್ಲುರುಳಿ ಪೈಜಣ
ಘಲ್ಲುಘಲ್ಲೆಂದು ಹೆಜ್ಜೆಯನಿಡುತ
ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ ||

ಜರದ ಪೀತಾಂಬರ ನಿರಿಗೆಗಳೆಳೆಯುತ
ಝಗಝಗಿಸುತ ತಾ ಹೊಳೆಯುತಲಿ
ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ
ಬೆಟ್ಟದ ವೆಂಕೋಬನ ಪ್ರಿಯಳಿಗೆ ||

ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ
ಬುಗುಡಿ ಬಾವುಲಿ ಹೊಳೆಯುತಲಿ
ಸಡಗರದಿಂದಲಿ ತುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ||

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X