• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓಂಕಾರ ಮಮಲೇಶ್ವರ, ಪರಳಿ ವೈಜನಾಥ ಮಹಿಮೆ

By ನಾಗನೂರಮಠ ಎಸ್.ಎಸ್.
|

ಜ್ಯೋತಿರ್ಲಿಂಗಗಳಿಗೆ ನಮ್ಮ ಧರ್ಮದಲ್ಲಿ ತುಂಬಾ ಮಹತ್ವವಿದೆ. ಆದರೆ, ಎಷ್ಟೋ ಜನರಿಗೆ ಜ್ಯೋತಿರ್ಲಿಂಗಗಳೆಂದರೇನೆ ಇದೂವರೆಗೆ ಗೊತ್ತಿಲ್ಲ. ಶಿವಭಕ್ತರೆನಿಸಿಕೊಂಡವರು ಎಲ್ಲ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಲು ಪುಣ್ಯವಂತರಾಗಿರಬೇಕು. ಕನಿಷ್ಠ ಪಕ್ಷ ಜ್ಯೋತಿರ್ಲಿಂಗಗಳ ಪೌರಾಣಿಕ ಕಥೆ ಕೇಳಿ ಮತ್ತೊಬ್ಬರಿಗೆ ಹೇಳಿ ಶಿವಾನುಗ್ರಹ ಪಡೆದುಕೊಳ್ಳುವವರು ನಿಜವಾದ ಧರ್ಮಿಷ್ಠರೆನ್ನಬಹುದು.

ಓಂಕಾರದ ಮಮಲೇಶ್ವರನಿಗೆ "ಓಂಕಾರೇಶ್ವರ"ನೆಂದೂ ಭಕ್ತಿಯಿಂದ ಕರೆಯಲಾಗುತ್ತದೆ. ಇದು ನಾಲ್ಕನೇಯ ಜ್ಯೋತಿರ್ಲಿಂಗವಾಗಿದೆ. ಇದರ ಪೌರಾಣಿಕ ಹಿನ್ನೆಲೆಯಲ್ಲಿಯೂ ಮಹರ್ಷಿ ನಾರದರ ಪಾತ್ರ ಮಹತ್ವದ್ದಾಗಿದೆ. ಅದೇನೆಂಬುದು ನೋಡೋಣ.

ದೇವಲೋಕದಿಂದ ಬ್ರಹ್ಮರ್ಷಿ ನಾರದಮುನಿಗಳು ನಮ್ಮ ರಾಜ್ಯದ ಗೋಕರ್ಣಕ್ಕೆ ಬಂದು ಮಹಾಬಳೇಶ್ವರನನ್ನು ದರ್ಶಿಸಿದರು. ಅಲ್ಲಿಂದ ವಿಂಧ್ಯಾಚಲ ಪರ್ವತ ಪ್ರದೇಶಕ್ಕೆ ಹೋದರು. ಅಲ್ಲಿಯ ಪರ್ವತರಾಜ ವಿಂಧ್ಯನು ನಾರದರನ್ನು ಭಕ್ತಿಯಿಂದ ಸ್ವಾಗತಿಸಿ ಸತ್ಕರಿಸಿದನು.

ವಿಂಧ್ಯರಾಜನಿಗೆ ನಾರದರು, ನೀನೇನು ಮೇರು ಪರ್ವತದಷ್ಟು ದೊಡ್ಡವನಲ್ಲ. ಅವನ ಸಮಾನ ನೀನಲ್ಲ ಎಂದು ವ್ಯಂಗವಾಡಿದರು. ಇದರಿಂದ ಬೇಸರಗೊಂಡ ವಿಂಧ್ಯನು ನನ್ನ ವಿಂಧ್ಯಪರ್ವತವೇ ದೊಡ್ಡದು ಎಂದು ತಿಳಿದುಕೊಂಡಿದ್ದೆನು. ಬಾವಿಯೊಳಗಿನ ಕಪ್ಪೆಯಂತಾಗಿದೆ ನನ್ನ ಪರಿಸ್ಥಿತಿ. ಹೀಗಾಗಿ ನಾನೂ ಎತ್ತರ ಬೆಳೆದು ದೊಡ್ಡ ಪರ್ವತರಾಜನೆನಿಸಿಕೊಳ್ಳಬೇಕೆಂದು ಆಸೆ ವ್ಯಕ್ತಪಡಿಸಿದನು. ಆಗ ನಾರದರು ಬೇಡಿದ್ದನ್ನು ಬೇಗವಾಗಿ ಈಡೇರಿಸುವವನು ಮಹಾಶಿವನೊಬ್ಬನೆ. ಅವನನ್ನು ಒಲಿಸಿಕೊಂಡು ನಿನ್ನ ಇಷ್ಟಾರ್ಥ ತೀರಿಸಿಕೊಳ್ಳು ಎಂದು ನಾರದರು ಹೇಳಿ ಲೋಕಸಂಚಾರಕ್ಕೆ ಹೊರಟರು.

ವಿಂಧ್ಯರಾಜನು ಶಿವನ ಒಲಿಸಿಕೊಳ್ಳಬೇಕೆಂದು ದೃಢನಿರ್ಧಾರ ಮಾಡಿಕೊಂಡು ತಪಸ್ಸಿಗೆ ಕುಳಿತುಕೊಂಡನು. ಇವನ ತಪಸ್ಸಿನಿಂದ ಭೂಲೋಕದಲ್ಲೆಲ್ಲಾ ಅಲ್ಲೋಲಕಲ್ಲೋಲ ಆಗಲಾರಂಭಿಸಿತು. ಇದರಿಂದ ಭಯಭೀತರಾದ ಎಲ್ಲರೂ ವಿಂಧ್ಯನ ಶಿವಭಕ್ತಿಗೆ ಮನಸೋತರು. ಅಗಸ್ತ್ಯ ಮುನಿಗಳು ಅಘೋರ ತಪಸ್ಸು ಮಾಡುತ್ತಿದ್ದ ವಿಂಧ್ಯರಾಜನ ಬಳಿ ಬಂದು, ಸ್ವಲ್ಪ ಕಾಲ ತಪಸ್ಸನ್ನು ನಿಲ್ಲಿಸು, ನಿನ್ನ ತಪಸ್ಸಿನ ಕುರಿತು ನಾನು ಮಹಾಶಿವನಿಗೆ ಮನವರಿಕೆ ಮಾಡುತ್ತೇನೆ. ಅಲ್ಲದೇ ನಿನ್ನಾಸೆ ಈಡೇರಿಸುವಂತೆ ಮಹಾಶಿವನಿಗೆ ಅಜ್ಞಾಪೂರ್ವಕವಾಗಿ ಮನವಿ ಮಾಡುತ್ತೇನೆಂದರು.

ಅಗಸ್ತ್ಯರ ಮಾತಿಗೆ ಮನ್ನಣೆ ನೀಡಿದ ವಿಂಧ್ಯರಾಜನು ತಪಸ್ಸಿನ ಉಗ್ರತೆಯನ್ನು ಕಡಿಮೆ ಮಾಡಿ "ಓಂ ನಮಃ ಶಿವಾಯಃ" ಎಂದು ಪ್ರಾರ್ಥಿಸಲಾರಂಭಿಸಿದನು. ಅಗಸ್ತ್ಯರಿಂದ ನಡೆದ ವಿಷಯ ತಿಳಿದುಕೊಂಡು ಮಹಾಶಿವನು ವಿಂಧ್ಯರಾಜನ ಭಕ್ತಿಗೆ ಶರಣೆಂದು ಅಮರೇಶ್ವರದಲ್ಲಿ ವಿಂಧ್ಯರಾಜನಿಗೆ ಕಾಣಿಸಿಕೊಂಡನು. ಶಂಭೋಲಿಂಗನು ಪ್ರತ್ಯಕ್ಷವಾಗುವಾಗ ಆಕಾಶದಿಂದ ಕಣ್ಣು ಕುಕ್ಕುವಂತಹ ಜ್ಯೋತಿ ಬೆಳಗಿ ಇಡೀ ವಿಶ್ವವನ್ನೆಲ್ಲಾ ಆವರಿಸಿತ್ತಂತೆ.

ಶಿವನು ಪ್ರತ್ಯಕ್ಷಗೊಂಡ ಈ ಸ್ಥಳದಲ್ಲಿಯೇ ಮಹಾಶಿವನು ಲಿಂಗರೂಪಿಯಾಗಿ ಪೂಜಿಸಿಕೊಳ್ಳಬೇಕೆಂದು ವಿಂಧ್ಯರಾಜನು ಬೇಡಿಕೊಂಡನು. ತಥಾಸ್ತು ಎಂದ ಮಹಾಶಿವನು ಅಲ್ಲಿಯೇ ಸ್ಥಾಪಿತಗೊಂಡು "ಓಂ" ಎಂದು ನೆಲೆಸಿದನು. ಹೀಗಾಗಿ ಇಲ್ಲಿ ಮಹಾಶಿವನನ್ನು ಓಂಕಾರೇಶ್ವರನೆಂದೂ ಪೂಜಿಸುತ್ತಾರೆ.

ಇಲ್ಲಿ ಶಿವನನ್ನು ಭಕ್ತಿಯಿಂದ ಧರೇಶ್ವರ, ಅಮರೇಶ್ವರ, ಕರ್ದಮೇಶ್ವರ ಎಂಬುದಾಗಿ ಉಪನಾಮಗಳಿಂದ ಕರೆಯುತ್ತಾರೆ. ಇಲ್ಲಿರುವ ಮತ್ತೊಂದು ವಿಶೇಷತೆ ಏನೆಂದರೆ, ಪೂರ್ವಜನ್ಮದ ಕುರಿತು ಆಸಕ್ತಿ ಇದ್ದವರು ಓಂಕಾರೇಶ್ವರನ ದರ್ಶನ ಪಡೆದುಕೊಂಡಾಗ ಹಿಂದಿನದೆಲ್ಲವೂ ನೆನೆಪಿಗೆ ಬರುತ್ತದೆ ಎಂಬುದಾಗಿ ಪ್ರತೀತಿ ಇದೆ.

ಇಲ್ಲಿನ ಬಿಂದು ಸರೋವರದಲ್ಲಿ ಮಿಂದು ಭಕ್ತರು ಮಮಲೇಶ್ವರನೆಂದೂ ಕರೆಯಿಸಿಕೊಳ್ಳುವ ಓಂಕಾರೇಶ್ವನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸಾಕಷ್ಟು ರೀತಿಯಲ್ಲಿ ಈ ದೇವಸ್ಥಾನಕ್ಕೆ ಪರಕೀಯರು ದಾಳಿ ಮಾಡಿ ಹಾನಿ ಮಾಡಿದ್ದಾರೆ. ಆದರೆ ಗಟ್ಟಿಯಾಗಿ ನೆಲೆನಿಂತ ಓಂಕಾರೇಶ್ವರನನ್ನು ಯಾರಿಗೂ ಮುಟ್ಟಲಾಗಿಲ್ಲ ಎಂಬುದು ಶಿವಮಹಿಮೆಗೆ ಸಾಕ್ಷಿ.

ಪರಳಿ ವೈಜನಾಥ

ರಾಮಾಯಣದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪರಳಿ ವೈಜನಾಥ ಜ್ಯೋತಿರ್ಲಿಂಗದ ಪೌರಾಣಿಕ ಕಥೆ ರಾಮಾಯಣಕ್ಕೆ ಸಂಬಂಧಪಟ್ಟದ್ದಾಗಿದೆ. ಇದು ಐದನೇಯ ಜ್ಯೋತಿರ್ಲಿಂಗವಾಗಿದೆ. ರಾವಣಾಸುರನು ಇಡೀ ವಿಶ್ವಕ್ಕೆ ತಾನೇ ದೊಡ್ಡವನಾಗಿರಬೇಕು ಮತ್ತು ಶಕ್ತಿವಂತನಾಗಿರಬೇಕು ಎಂದು ಬಯಸಿದನು. ಮಹಾಶಿವನ ಕುರಿತು ಘೋರ ತಪಸ್ಸಿಗೆ ಕುಳಿತನು. ಹಲವಾರು ವರ್ಷಗಳ ಕಾಲ ತಪಸ್ಸಾಚರಿಸಿದರೂ ಮಹಾಶಿವನು ರಾವಣನಿದ್ದಲ್ಲಿಗೆ ಬರಲಿಲ್ಲ.

ಆದರೂ ಪಟ್ಟು ಬಿಡದ ಮಹಾನ್ ಹಠವಾದಿ ರಾವಣನು ಹಿಮಾಲಯದಲ್ಲಿನ ಕೈಲಾಸಪರ್ವತದಲ್ಲಿ ಶಿವನ ಕುರಿತು ತಪಸ್ಸು ಪ್ರಾರಂಭಿಸಿದನು. ಅಲ್ಲಿರುವ ಆಳವಾದ ತಗ್ಗಿನಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಹಾಕಿ ಅಗ್ನಿಸ್ಪರ್ಶ ಮಾಡಿದನು. ಅದರಲ್ಲಿಯೇ ಮಹಾಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಮತ್ತೆ ಉಗ್ರವಾದ ತಪಸ್ಸಿಗೆ ಕುಳಿತನು. ಇದಕ್ಕೂ ಶಿವನು ಕರುಣೆ ತೋರಿ ಪ್ರತ್ಯಕ್ಷನಾಗಲಿಲ್ಲ.

ಇದರಿಂದ ಮನನೊಂದ ರಾವಣಾಸುರನು ತನ್ನ ಜೀವವನ್ನೇ ಬಲಿ ನೀಡಲು ಮುಂದಾದನು. ತಾನೇ ಹೊತ್ತಿಸಿದ ಅಗ್ನಿಕುಂಡದಲ್ಲಿ ತನ್ನ ರುಂಡಗಳನ್ನು ಒಂದೊಂದಾಗಿ ಕತ್ತರಿಸಿ ಹಾಕಹತ್ತಿದನು. ಹೀಗೆ ಎಲ್ಲ ಒಂಬತ್ತು ತಲೆಗಳನ್ನು ಕತ್ತರಿಸಿ ಕಡೆಯ ತಲೆ ಕತ್ತರಿಸಲು ಕತ್ತಿ ಎತ್ತುತ್ತಿರುವತೆ ಮಹಾಶಿವನು ರಾವಣನೆದುರಿಗೆ ಪ್ರತ್ಯಕ್ಷನಾದನು. ರಾವಣನ ಭಕ್ತಿಯ ತಪಸ್ಸಿಗೆ ಮೆಚ್ಚಿದ ಮಹಾಶಿವನು ಅವನ ಬೇಡಿಕೆಯಂತೆ ಇಡೀ ವಿಶ್ವಕ್ಕೆ ಪರಾಕ್ರಮಿಯಾಗು ಎಂದು ವರವಿತ್ತನು. ಭಕ್ತರ ಇಷ್ಟಾರ್ಥ ಸಿದ್ಧಿಸಿಕೊಡುತ್ತ ತನ್ನನ್ನು ತಾನೇ ಮರೆಯುವ ಮಹಾಶಿವನಿಗೆ ಕೃತಾರ್ಥನಾದೆ ಎಂದು ರಾವಣನು ಸಂತಸದಿಂದ ನಮಸ್ಕರಿಸಿದನು.

ವರ ಪಡೆದು ತನ್ನಾಸ್ಥಾನಕ್ಕೆ ಹೊರಟಿದ್ದ ರಾವಣನನ್ನು ನಾರದ ಮುನಿಗಳು ಉದ್ದೇಶಪೂರ್ವಕವಾಗಿ ದಾರಿಯಲ್ಲಿ ಭೇಟಿಯಾದರು. ಈ ಮೊದಲೇ ದೇವಾನುದೇವತೆಗಳು ಮಹಾಶಿವನು ರಾವಣನಿಗೆ ಅಪ್ರತಿಮ ವರವಿತ್ತ ವಿಷಯವನ್ನು ನಾರದರಿಗೆ ತಿಳಿಸಿದ್ದರು. ಇದರಿಂದ ಏನಾದರೂ ಲೋಕಕ್ಕೆ ಕಂಟಕವಾಗಬಹುದೇನೋ ಎಂದು ದೇವತೆಗಳು ಭಯ ವ್ಯಕ್ತಪಡಿಸಿದ್ದರು. ಇದಕ್ಕಾಗಿ ತಾನೊಂದು ಉಪಾಯ ಮಾಡುವೆನೆಂದು ನಾರದರು ರಾವಣನನ್ನು ಭೇಟಿಯಾದರು.

ರಾವಣನಿಗೆ ನಾರದರು, ಮಹಾಶಿವನಿಂದ ವರಪ್ರಸಾದ ಪಡೆದುಕೊಂಡ ನೀನು ಆ ವರವನ್ನು ಪರೀಕ್ಷಿಸಿ ನೋಡು ಒಮ್ಮೆ ಎಂದರು. ತನ್ನಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಪರೀಕ್ಷಿಸುಬಹುದಲ್ವೇ ಎಂದುಕೊಂಡ ರಾವಣನು ಇಡೀ ಕೈಲಾಸ ಪರ್ವತವನ್ನೇ ಎತ್ತಿ ಹಿಡಿದನು. ಹೀಗೆ ಎತ್ತಿದಾಗ ಕೈಲಾಸ ಪರ್ವತವು ಎರಡು ಹೋಳಾಯಿತು. ಇದರಿಂದ ಭಯಗೊಂಡ ಕೈಲಾಸವಾಸಿಗಳಾದ ದೇವಾನುದೇವತೆಗಳು ಪಾರ್ವತಿಯ ಮೊರೆ ಹೋದರು.

ಭಕ್ತರಿಗೆ ಬೇಡಿದೆಲ್ಲ ವರವ ನೀಡುವ ಮಹಾಶಿವನನ್ನೇ ಈ ಬಗ್ಗೆ ತಾವೇ ವಿಚಾರಿಸಿಕೊಳ್ಳಿ ಎಂದು ದೂರವುಳಿದಳು. ಈ ಬಗ್ಗೆ ಮಹಾಶಿವನ ಮುಂದೆ ನಡೆದ ಘಟನೆಯನ್ನು ದೇವಾನುದೇವತೆಗಳು ವಿವರಿಸಿದರು. ಆಗ ಮಹಾಶಿವನು ಆ ಕೈಲಾಸ ಪರ್ವತವನ್ನು ತನ್ನ ಕಿರುಬೆರಳಿನಿಂದ ಒತ್ತಿದನು. ಕೈಲಾಸ ಪರ್ವತದಡಿ ಸಿಲುಕಿ ಒದ್ದಾಡಿದ ಅಸುರ ರಾವಣನು ನುಜ್ಜುಗುಜ್ಜಾದನು.

ಇದು ಮಹಾಶಿವನಿಂದಾದ ಶಿಕ್ಷೆ ನನಗೆ ಎಂದು ಕೂಡಲೇ ಅರಿತುಕೊಂಡ ರಾವಣನು ನನ್ನ ಸೊಕ್ಕು, ಅಹಂಕಾರವನ್ನ ಕ್ಷಮಿಸು ಎಂದು ಮತ್ತೆ ಶಿವನಲ್ಲಿ ಬೇಡಿಕೊಂಡನು. ಆಗ ಮಹಾಶಿವನು ಮತ್ತೊಬ್ಬರ ಮಾತು ಕೇಳಿ ಯಾವಾಗಲೂ ದುಡುಕಬಾರದೆಂದು ಬುದ್ಧಿಮಾತು ಹೇಳಿದನು. ಮಹಾಶಿವನು ಪ್ರತ್ಯಕ್ಷನಾದ ಆ ಸ್ಥಳದಲ್ಲಿಯೇ ಲಿಂಗರೂಪವಾಗಿ ನೆಲೆಸಿದ್ದಾನೆ. ಅದನ್ನೇ ಪರಳಿ ಪುಣ್ಯಕ್ಷೇತ್ರದ ವೈಜನಾಥೇಶ್ವರ ಎಂದು ಕರೆಯುತ್ತಾರೆ. ಭೂಕೈಲಾಸವೆಂದು ಕರೆಯಿಸಿಕೊಳ್ಳುತಿರುವ ಈ ವೈಜನಾಥೇಶ್ವರನು ಇಂದಿಗೂ ಭಕ್ತರ ಇಷ್ಟಾರ್ಥ ನಿವಾರಿಸುತ್ತಾನೆ ಎಂಬ ನಂಬಿಕೆ ಶಿವಭಕ್ತರದು.

"ಢಾಕಿನಿ ಭೀಮಾಶಂಕರ" ಎಂಬುದು ಮುಂದಿನ ಲೇಖನದಲ್ಲಿ (ಒನ್ ಇಂಡಿಯಾ)

ಶಿವರಾತ್ರಿ ಟಿಪ್ಸ್ : ಅಂದು ಜಾಗರಣೆ ಸ್ಥಳದಲ್ಲಿ ಅನುಕೂಲವಾದರೆ ಉಪಸ್ಥಿತರಿರಬೇಕು. ಶನಿದೇವರ ಕಾಡಾಟದಲ್ಲಿರುವವರು ಮಹಾಶಿವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು.

ಶಿವಕೃಪೆಗೆ : ಜ್ಯೋತಿರ್ಲಿಂಗಗಳ ಕುರಿತಾದ ಪೌರಾಣಿಕ ಕಥೆಗಳ ಬಗ್ಗೆ ಉಢಾಪೆಯ ಮಾತನ್ನಾಡಬಾರದು. ಮಾತನಾಡಿ ಶಿವನ ಸಿಟ್ಟಿಗೆ ಬಲಿಯಾಗಬೇಡಿ. ಆಡಂಬರದ ಅಲಂಕಾರ ಬಯಸುವವನು ಶಿವನಲ್ಲ. ಆದ್ದರಿಂದ ಶಿವಪೂಜೆಗೆ ಆಡಂಬರದಿಂದ ಹೋಗಿ ಶಿವನಿಂದನೆಗೆ ಗುರಿಯಾಗಬಾರದು.

English summary
Mahashivaratri will be celebrated all over Karnataka and India devotees of Lord Shiva. Shivaratri is considered as Shiva's birthday. Astrologer S.S. Naganurmath writes about Shivaratri : Omkar Mamaleshwar and Parali Vaijanath. It is considered as one of 12 jyotirlingas in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more