• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗೇಶ್ವರ, ಕಾಶಿ ವಿಶ್ವನಾಥ ಪೌರಾಣಿಕ ಹಿನ್ನೆಲೆ

By ನಾಗನೂರಮಠ ಎಸ್.ಎಸ್.
|

ದಾರುಕಾವನದಲ್ಲಿರುವ ನಾಗೇಶ್ವರ, ನಾಗನಾಥ್ ಜ್ಯೋತಿರ್ಲಿಂಗವು ಮಹಾಶಿವನು ಪ್ರತ್ಯಕ್ಷನಾದ ಸ್ದಳ ಎಂಬ ನಂಬಿಕೆ ಶಿವಭಕ್ತರದು. ಪಶ್ಚಿಮ ಸಮುದ್ರ ತೀರದಲ್ಲಿದ್ದ ದ್ವಾರಕಾ ಪಟ್ಟಣವು ಸುತ್ತಮುತ್ತಲೂ ದಟ್ಟಾರಣ್ಯದಿಂದ ಆಗಿನ ಕಾಲದಲ್ಲಿ ಕೂಡಿತ್ತು. ಆ ದಟ್ಟ ಕಾಡನ್ನು ಅಸಂಖ್ಯಾತ ರಾಕ್ಷಸರು ತಮ್ಮ ನೆಲೆ ಮಾಡಿಕೊಂಡು ಅಲ್ಲಿಯೇ ಬೀಡು ಬಿಟ್ಟಿದ್ದರು. ಕಾಡು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದ ರಾಕ್ಷಸರು ಕಾಡಿನಲ್ಲಿ ಸಂಚರಿಸುವ ಮನುಷ್ಯರನ್ನೂ ತಿನ್ನಲು ಆರಂಭಿಸಿದರು. ಹೀಗಾಗಿ ಜನರು ಆ ಕಾಡಿನ ಅಕ್ಕಪಕ್ಕವೂ ಸುಳಿಯುತ್ತಿರಲಿಲ್ಲ. ರಾಕ್ಷಸರಿಗೆ ದಾರುಕ ಮತ್ತು ದಾರುಕಾ ಎಂಬ ಅಣ್ಣ-ತಂಗಿಯರು ನಾಯಕರಾಗಿದ್ದರು.

ದಾರುಕಾಳು ಭವಾನಿದೇವಿಯನ್ನು ಆರಾಧಿಸಿ ವಿಶಿಷ್ಟವಾದ ವರ ಪಡೆದುಕೊಂಡಿದ್ದಳು. ಆ ವಿಚಿತ್ರ ವರದಿಂದ ದಾರುಕಾಳು ತಾನಿದ್ದ ಕಾಡನ್ನು ತನಗೆ ಬೇಕೆಂದಲ್ಲಿ ಒಯ್ಯಬಹುದಿತ್ತು. ಇಡೀ ರಾಕ್ಷಸ ಸಂಕುಲವೇ ಕಾಡಿನಲ್ಲಿದ್ದರಿಂದ ಎಲ್ಲರೂ ದಾರುಕಾಳ ವರದಿಂದ ಕುಣಿದು ಕುಪ್ಪಳಿಸುತ್ತಿದ್ದರು. ಏಕೆಂದರೆ ಜನಜಂಗುಳಿ ಇರುವಲ್ಲಿ ದಾರುಕಾ ಕಾಡನ್ನು ಮಾಯೆಯಿಂದ ತೆಗೆದುಕೊಂಡು ಹೋಗುತ್ತಿದ್ದಳು. ರಾಕ್ಷಸರು ಅಲ್ಲಿ ಮನಬಂದಂತೆ ಮನುಷ್ಯರನ್ನು ತಿಂದು ತೇಗುತ್ತಿದ್ದರು.

ಹೀಗಿರುವಾಗ, ಕಾಡಿನ ಮೂಲ ನೆಲೆಯ ಹತ್ತಿರದಲ್ಲಿ ಊರ್ವನೆಂಬ ಋಷಿ ವಾಸವಾಗಿದ್ದನು. ಜನರೆಲ್ಲರೂ ಮಹಾನಶಿವಭಕ್ತನಾಗಿದ್ದ ಊರ್ವನಿಗೆ ರಾಕ್ಷಸರಿಂದಾಗುತ್ತಿರುವ ಅನಾಚಾರದಿಂದ ನಮ್ಮನ್ನು ಕಾಪಾಡಿ ಎಂದು ವಿಷಯ ತಿಳಿಸಿದರು. ಜನರಿಂದ ರಕ್ಕಸ ದಾರುಕನ ಕ್ರೌರ್ಯತೆಯನ್ನು ಅರಿತುಕೊಂಡ ಊರ್ವ ಋಷಿಯು ದಾರುಕನೇನಾದರೂ ಈ ಕಾಡಿನಲ್ಲಿ ಪ್ರವೇಶಿಸಿದರೆ ಅವನ ಎರಡೂ ಕಾಲುಗಳು ಮುರಿದು ತುಂಡಾಗುತ್ತವೆ ಎಂದು ತಾವು ಶಾಪವಿತ್ತ ವಿಚಾರ ಜನರಿಗೆ ತಿಳಿಸಿದರು.

ಇಷ್ಟಕ್ಕೂ ಸುಮ್ಮನಾಗದ ಜನರು ಅವರನ್ನಾಳುವ ರಾಜನ ಬಳಿ ಊರ್ವ ಋಷಿಗಳ ಶಾಪದ ವಿಷಯ ತಿಳಿಸಿದರು. ಅದೇ ಸಮಯಕ್ಕೆ ದಾರುಕನು ಕಾಡಿನಲ್ಲಿ ಕಾಲಿಟ್ಟು ಕಾಲು ಕಳೆದುಕೊಂಡ. ಕೂಡಲೇ ರಾಜನ ಸೇನೆ ರಾಕ್ಷಸರ ಸೇನೆಯನ್ನು ಹೊಡೆದುರುಳಿಸಿತು. ಅಣ್ಣನೊಂದಿಗೆ ಕಂಗೆಟ್ಟ ದಾರುಕಾಳು ಸಮುದ್ರ ತೀರದ ಮಧ್ಯದಲ್ಲಿ ಕಾಡನ್ನು ಒಯ್ದಳು.

ಸಮುದ್ರ ಮಧ್ಯದಲ್ಲಿದ್ದ ಕಾಡಿನಲ್ಲಿ ರಾಕ್ಷಸರ ಸಂತತಿ ಹೆಚ್ಚಿ ಸಮುದ್ರ ಪ್ರಯಾಣಿಕರು ಕೊಂದು ತಿನ್ನಲಾರಂಭಿಸಿದರು. ಕೆಲವರು ದೂರದಲ್ಲೆಲ್ಲೋ ಇದ್ದಂತಹ ಹಡಗನ್ನು ದೊಡ್ಡ ದೊಡ್ಡ ಅಲೆಗಳನ್ನು ಸೃಷ್ಟಿಸಿ ತಮ್ಮ ಕಾಡಿನತ್ತ ಹಡಗು ಬರುವಂತೆ ಮಾಡುತ್ತಿದ್ದರು. ಹೀಗೆ ಬಂದ ಹಡಗಿನಲ್ಲಿ ವಸ್ತು ಮತ್ತು ಮನುಷ್ಯರನ್ನು ಅಪಹರಿಸುತ್ತಿದ್ದರು. ಮನುಷ್ಯರನ್ನು ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಂಡು ನಂತರ ಅವರನ್ನು ತಿಂದು ಬಿಡುತ್ತಿದ್ದರು.

ಒಂದೊಮ್ಮೆ, ಶಿವಭಕ್ತರ ದೊಡ್ಡ ದಂಡೊಂದು ಹಡಗಿನಲ್ಲಿ ಹೊರಟಿತ್ತು. "ವಿನಾಶ ಕಾಲೇ ವಿಪರೀತ ಬುದ್ಧಿ" ಎಂಬಂತೆ ರಾಕ್ಷಸರು ಆ ಹಡಗಿನಲ್ಲಿದ್ದ ಜನರನ್ನು ಬಂಧಿಸಿ ಕಾಡಿನಲ್ಲಿಟ್ಟುಕೊಂಡರು. ಆ ಭಕ್ತರ ಗುಂಪಿನಲ್ಲಿ ಸುಪ್ರಿಯನೆಂಬುವನು ಶಿವಪೂಜೆ ಸಲ್ಲಿಸದೇ ಅನ್ನಾಹಾರ ಸೇವಿಸುತ್ತಿರಲಿಲ್ಲ. ತನ್ನೊಂದಿಗೆ ಬಂಧನದಲ್ಲಿದ್ದ ಜನರಿಗೂ ಶಿವನಿಗೆ ಮಾನಸ ಪೂಜೆ ಮಾಡಿಕೊಳ್ಳಿ ಅಂದರೆ ನಾವು ಇಲ್ಲಿಂದ ಪಾರಾಗಬಹುದು ಎಂದು ಶಿವಮಹಿಮೆಯನ್ನು ತಿಳಿಸಿದ್ದನು.

ಬಂಧನದಲ್ಲಿದ್ದವರು ಮಹಾಶಿವನಿಗೆ ಪೂಜೆ ಸಲ್ಲಿಸುತ್ತಿರುವ ವಿಷಯ ದಾರುಕಾಳಿಗೆ ಗೊತ್ತಾಯಿತು. ಅದಕ್ಕವಳು ಎಲ್ಲ ಶಿವಭಕ್ತರಿಗೂ ಮದ್ಯ, ಮಾಂಸದೂಟವನ್ನು ನೀಡಲು ಹೇಳಿದಳು. ಬದುಕಬೇಕೆಂದರೆ ನಾನು ಕೊಟ್ಟಿದ್ದನ್ನು ಎಲ್ಲರೂ ತಿನ್ನಲೇಬೇಕು. ಆವಾಗ ಮಾಂಸಾಹಾರಿಗಳಾಗಿ ಇವರೆಂಗೆ ಶಿವಪೂಜೆ ಸಲ್ಲಿಸುತ್ತಾರೋ ನೋಡಿಕೊಂಡು ಬನ್ನಿ ಎಂದಳು ತನ್ನ ರಾಕ್ಷಸರಿಗೆ.

ಆದರೆ ಅನಿವಾರ್ಯವಾಗಿ ಶಿವಭಕ್ತರು ದಾರುಕಾಳು ಕೊಟ್ಟಿದ್ದನ್ನು ತಿನ್ನುತ್ತಿದ್ದರು. ಹೀಗಿದ್ದಾಗ ಸುಪ್ರಿಯನಿಗೆ ಶಿವನೊಮ್ಮೆ ಪ್ರತ್ಯಕ್ಷನಾಗಿ ಆದಷ್ಟು ಬೇಗ ನಿಮ್ಮನ್ನು ಇಲ್ಲಿಂದ ಪಾರು ಮಾಡುತ್ತೇನೆ ಎಂದಿದ್ದನು. ಕೆಲ ದಿನಗಳ ನಂತರ ದಾರುಕಾಳು ತನ್ನ ಅಣ್ಣನೊಂದಿಗೆ ಶಿವಭಕ್ತರಿದ್ದ ಸ್ಥಳಕ್ಕೆ ಬಂದು ಶಿವಪೂಜೆ ಮಾಡುತ್ತಿರುವ ನಿಮ್ಮನ್ನು ಕೊಲ್ಲುವುದೇ ಉತ್ತಮವೆಂದು ಅವರನ್ನು ಕೊಲ್ಲಲು ಮುಂದಾದರು. ಆಗ ಮಹಾಶಿವನು ಪ್ರತ್ಯಕ್ಷನಾಗಿ ರಾಕ್ಷಸ ದಾರುಕನನ್ನು ತನ್ನ ಹಣೆಯ ಮೇಲಿನ ಕಣ್ಣು ತೆರೆದು ಸುಟ್ಟು ಬೂದಿ ಮಾಡಿದನು.

ದಾರುಕಾಳು ಓಡಿ ಬಂದು ಶಿವನಿಗೆ ಶರಣಾಗಿ ಮಾಡಿದ ತಪ್ಪನ್ನು ಮನ್ನಿಸೆಂದು ಪರಿಪರಿಯಾಗಿ ಬೇಡಿಕೊಳ್ಳಲಾರಂಭಿಸಿದಳು. ಜೀವದಾನ ಮಾಡಿದ ಮಹಾಶಿವನು ಇನ್ನೊಮ್ಮೆ ಶಿವಭಕ್ತರಿಗೆ ತೊಂದರೆಯಾಗದಂತೆ ನೀನಿರಬೇಕೆಂದನು. ಸುಪ್ರಿಯನು ಮಹಾಶಿವನಿಗೆ, ಮಹಾದೇವ ನೀನು ಇನ್ಮುಂದೆ ಇಲ್ಲೇ ವಾಸಿಸಿ ಶಿವಭಕ್ತರ ಇಷ್ಟಾರ್ಥ ಈಡೇರಿಸು ಎಂದು ಕೇಳಿಕೊಂಡನು. ಆ ಪ್ರದೇಶದಲ್ಲಿರುವ ಶಿವಲಿಂಗವೇ ಜ್ಯೋತಿರ್ಲಿಂಗವಾಗಿದೆ. ಇಂದಿಗೂ ಲಕ್ಷಾಂತರ ಭಕ್ತರು ಈ ಪ್ರದೇಶಕ್ಕೆ ಭೇಟಿ ನೀಡಿ ಜ್ಯೋತಿರ್ಲಿಂಗದ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಕಾಶಿ ವಿಶ್ವನಾಥ : ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಎಲ್ಲರಿಗೂ ಚಿರಪರಿಚಿತ. ಎಷ್ಟೋ ಜನ ಗಂಡು ಮಗುವಾಗಲೆಂದು ಈ ಜ್ಯೋತಿರ್ಲಿಂಗಕ್ಕೆ ಬೇಡಿಕೊಂಡಿರುತ್ತಾರೆ. ಮಹಾಶಿವನ ಆಶೀರ್ವಾದದಿಂದ ಜನಿಸಿದ ತಮ್ಮ ಮಗುವಿಗೆ ವಿಶ್ವೇಶ್ವರ ಎಂದು ಹೆಸರಿಟ್ಟಿರುತ್ತಾರೆ. ಆದರೆ ಈ ಹೆಸರು ಇಟ್ಟುಕೊಂಡಿರುವ ಕೆಲ ಜನರು ಇಂದು ಅನೇಕ ಅನಾಚಾರದ ಕೆಲಸ ಮಾಡುತ್ತ, ತಮ್ಮ ಆಟಿಟ್ಯೂಟ್ ಸರಿಯಿಟ್ಟುಕೊಳ್ಳದೇ ನಿಷ್ಠಾವಂತ, ನ್ಯಾಯವಂತ, ಪ್ರಾಮಾಣಿಕ, ಧರ್ಮವಂತ ಜನರಿಗೆ ನಿಮ್ಮ ಆಟಿಟ್ಯೂಟ್ ಸರಿಯಿಲ್ಲ ಎಂದು ಬೊಗಳುತ್ತಿರುತ್ತಾರೆ.

ಇಂಥಹ ಕೆಲ ಕಲಿಯುಗದ ರಾಕ್ಷಸ ಗುಣಗಳುಳ್ಳ ಜನರಿಂದ ಕಾಶಿ ವಿಶ್ವೇಶ್ವರನ ಹೆಸರು ಕೆಡುತ್ತಿದೆ. ಆದರೆ ಉಪ್ಪು ತಿಂದವನು ನೀರು ಕುಡಿಯಲೇಬೇಕಲ್ಲ. ಇಂಥಹವರ ಪಾಪದ ಕೊಡ ತುಂಬಿ ತುಳುಕಿ ಕಡೆಗೆ ಉರುಳಿ ರಾಕ್ಷಸತನದಿಂದ ಮೆರೆದಾಡುತ್ತಿರುವ ಇವರ ಅಂತ್ಯವನ್ನು ಮಹಾಶಿವನೆ ಮಾಡುತ್ತಾನೆ. ಆದರೆ ಆ ಸಮಯಕ್ಕೆ ಕಾಯಬೇಕಷ್ಟೇ ಇಂಥಹವರಿಂದ ಅನ್ಯಾಯಕ್ಕೊಳಗಾದವರು. ದೇವರಿದ್ದಾನೆ ಎಂಬುದು ಅನ್ಯಾಯ ಮಾಡಿದವರ ಅಂತ್ಯವಾದಾಗ ಎಲ್ಲರಿಗೂ ಗೊತ್ತಾಗೋದು.

ಹಿಮಾಲಯದ ತಪ್ಪಲಿನಲ್ಲಿ ಕಾಶಿ ಕ್ಷೇತ್ರದಲ್ಲಿರುವ ವಿಶ್ವನಾಥ ಜ್ಯೋತಿರ್ಲಿಂಗದ ಪೌರಾಣಿಕ ಹಿನ್ನೆಲೆಯು ತುಂಬಾ ಮಹತ್ವದ್ದುಳ್ಳದ್ದಾಗಿದೆ. ಶಂಭೋಲಿಂಗನು ತನ್ನ ಕೈಲಾಸ ಪರ್ವತದಿಂದ ದೇವಿ ಪಾರ್ವತಿಯೊಂದಿಗೆ ಲೋಕಸಂಚಾರಕ್ಕೆ ಹೊರಟನು. ಸ್ವರ್ಗಲೋಕ, ಪಾತಾಳಲೋಕ, ಮೃತ್ಯುಲೋಕ ಸಂಚರಿಸುತ್ತ ಬ್ರಹ್ಮಲೋಕಕ್ಕೆ ಶಿವದಂಪತಿಗಳು ಬಂದರು.

ಪಂಚಮುಖಿಯಾಗಿದ್ದ ಬ್ರಹ್ಮದೇವನು ಶಂಭೋಲಿಂಗನನ್ನು ಬ್ರಹ್ಮಲೋಕಕ್ಕೆ ಸ್ವಾಗತಿಸಿ, ಸತ್ಕರಿಸಿ ಪೂಜಿಸಿದನು. ಬ್ರಹ್ಮನು ತನ್ನ ನಾಲ್ಕು ಮುಖಗಳಿಂದ ಮಹಾಶಿವನನ್ನು ಧ್ಯಾನಿಸುತ್ತಾನೆ. ಆದರೆ, ತನ್ನೈದನೇಯ ಮುಖದಿಂದ ಶಿವನನ್ನು ಅಕಾರಣದಿಂದ ನಿಂದಿಸುತ್ತಾನೆ. ಇದರಿಂದ ಗೊಂದಲಕ್ಕೊಳಗಾದ ಮಹಾಶಿವನು ಈ ತರಹ ನಿಂದನೆ ತರವಲ್ಲ ಎಂದು ಬ್ರಹ್ಮನಿಗೆ ಬುದ್ಧಿ ಮಾತು ಹೇಳಿದನು. ಆಗ ಬ್ರಹ್ಮನು ಇವು ನನ್ನಿಷ್ಟದಂತೆ ಬಂದ ನಿಂದೆ ಮಾತುಗಳಲ್ಲ. ಈ ಹಿಂದೆ ಸರಸ್ವತಿಯು ನನ್ನ ಐದನೇ ಮುಖದಿಂದ ನಿಂದಾಮಾತುಗಳು ಬರಲೆಂದು ಶಾಪವಿತ್ತಿದ್ದಾಳೆ. ಹೀಗಾಗಿ ಈ ರೀತಿಯ ನಿಂದೆಗಳು ಬಂದವು ಎಂದನು ಬ್ರಹ್ಮ. ಮಗಳ ಸಮಾನಳಾದ ಸರಸ್ವತಿಯನ್ನು ನಾನು ಮೋಹಿಸಿದ್ದಕ್ಕೆ ಈ ಶಾಪ ಎಂದು ನಡೆದ ಕಥೆಯನ್ನು ಹೇಳಿದನು.

ಆಗ ನಿಂದಾತ್ಮಕ ಮಾತುಗಳು ಬರುವ ಐದನೇ ಮುಖವನು ಮಹಾಶಿವನು ತಿರುವಿ ಕೈಯಿಂದ ಕಿತ್ತನು. ಕಾಶಿ ಕ್ಷೇತ್ರದಲ್ಲಿಯೇ ಈ ಪೌರಾಣಿಕ ಕಥೆಯು ನಡೆದಿದೆ ಎಂಬ ಪ್ರತೀತಿ ಇದೆ. ಬ್ರಹ್ಮನ ಮುಖವನ್ನು ಕಿತ್ತಿದ್ದಕ್ಕೆ ಶಿವನಿಗೆ ಬ್ರಹ್ಮಹತ್ಯೆಯ ಶಾಪ ತಗುಲಿತು. ಆಗ ಬ್ರಹ್ಮನ ರುಂಡವು ಕಪಾಲಿಯಾಗಿ ಮಹಾಶಿವನಿಗೆ ತೊಂದರೆ ನೀಡಲಾರಂಭಿಸಿತು.

ಮಹಾಶಿವನು ಮರಳಿ ಕಾಶಿ ಕ್ಷೇತ್ರಕ್ಕೆ ಬಂದು ಅಲ್ಲಿಯೇ ನೆಲೆ ನಿಂತನೆಂದು ನಂಬಿಕೆ ಭಕ್ತರದು. ಅಂದಿನಿಂದ ಇಲ್ಲಿರುವ ಶಿವಲಿಂಗವನ್ನು ವಿಶ್ವನಾಥನೆಂದು ಜ್ಯೋತಿರ್ಲಿಂಗ ಸ್ವರೂಪವಾಗಿ ಭಕ್ತರು ಪೂಜಿಸುತ್ತಾರೆ.

"ಗೋದಾವರಿ ತ್ರ್ಯಯಂಬಕೇಶ್ವರ" ಎಂಬುದು ಮುಂದಿನ ಲೇಖನದಲ್ಲಿ (ಒನ್ ಇಂಡಿಯಾ)

ಶಿವರಾತ್ರಿ ಟಿಪ್ಸ್ : ಗದ್ದಲದಲ್ಲಿದ್ದಾಗ ಮಹಾಶಿವನಿಗೆ ಮಾನಸ ಪೂಜೆ ಮಾಡುವುದು ತುಂಬಾ ಶ್ರೇಷ್ಠಕರ.

ಶಿವಕೃಪೆಗೆ : ಮಹಾಶಿವನು ಅದ್ಧೂರಿತನವನ್ನು ಯಾವತ್ತೂ ಬಯಸುವುದಿಲ್ಲ. ವಿಪರೀತ ದುಡ್ಡು ಖರ್ಚು ಮಾಡಿ ಮಹಾಶಿವನಿಗೆ ಅಲಂಕಾರ ಮಾಡಿಸುವ ಅವಶ್ಯಕತೆಯಿಲ್ಲ. ಶ್ರದ್ಧೆಯುಳ್ಳ ಭಕ್ತಿ ತೋರಿದರೆ ಸಾಕು ಮಹಾಶಿವ ಕೃಪೆ ಪಡೆದುಕೊಳ್ಳಲು.

English summary
Mahashivaratri will be celebrated all over Karnataka and India on February 27 by devotees of Lord Shiva. Shivaratri is considered as Shiva's birthday. Astrologer S.S. Naganurmath writes about Shivaratri : Nageshwar and Kashi Vishwanath. It is considered as one of 12 jyotirlingas in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more