ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?

ಯಾವ ವಸ್ತು ಅಥವಾ ದ್ರವ್ಯದಲ್ಲಿ ಶಿವಲಿಂಗದ ರಚನೆ ಮಾಡಬೇಕು ಹಾಗೂ ಅದೇ ವಿಧಾನದಲ್ಲಿ ಲಿಂಗ ತಯಾರಿಸಿ ಪೂಜಿಸಿದರೆ ಏನು ಲಭಿಸುತ್ತದೆ ಎಂದು ನಮಗೆ ನಮ್ಮ ಶಾಸ್ತ್ರಗಳು ಬಿಡಿಸಿ ಹೇಳಿವೆ. ಅದರ ವಿವರ ಜ್ಯೋತಿಷಿ ವಿಠ್ಠಲ್ ಭಟ್ ಅವರು ನೀಡಿದ್ದಾರೆ.

By ವಿಠ್ಠಲ್ ಭಟ್, ನೆಲಮಂಗಲ
|
Google Oneindia Kannada News

ಶಿವರಾತ್ರಿ ಪ್ರತಿ ತಿಂಗಳೂ ಸಹ ಬರುತ್ತದೆ. ಆದರೆ ಮಾಘ ಮಾಸದಲ್ಲಿ ಬರುವ ಶಿವರಾತ್ರಿ ಮಾತ್ರ ವಿಶೇಷ ಫಲವನ್ನು ಕೊಡುತ್ತದೆ ಎಂದು ಶಾಸ್ತ್ರ ನಮಗೆ ತಿಳಿಸುತ್ತದೆ. ಇಂತಿರುವಾಗ ಅಂತಹ ಪರಶಿವನನ್ನು ಹೇಗೆ ಪೂಜಿಸಬೇಕು ಎಂಬ ವಿಚಾರಗಳನ್ನು ತಿಳಿದಿರಬೇಕು.

ಮೊದಲು ನಾವು ತಿಳಿಯಬೇಕಾದ ವಿಚಾರ ಎಂದರೆ ಶಿವನನ್ನು ನಾವು ಯಾವಾಗಲೂ ಸಹ ಲಿಂಗ ಸ್ವರೂಪದಲ್ಲಿಯೇ ಆರಾಧಿಸಬೇಕು! ಶಿವ ಪುರಾಣ, ಶಿವರಹಸ್ಯ ಇತ್ಯಾದಿ ಶಿವನ ಸಂಬಂಧಿತ ವಿಚಾರಗಳನ್ನು ಒಳಗೊಂಡ ಗ್ರಂಥಗಳನ್ನು ನಾವು ಪರಿಶೀಲಿಸಿದರೆ ಪರಮ ಮಂಗಲಪ್ರದವಾದ ಆ ಲಿಂಗ ಸ್ವರೂಪ ಸ್ವಾಮಿಗೆ ಎಂದೆಂದಿಗೂ ಸಹ ಅಚ್ಚು ಮೆಚ್ಚು!

ದ್ವಾದಶ ಜ್ಯೋತಿರ್ಲಿಂಗಗಳಲ್ಲೇ ಆಗಲಿ ಅಥವಾ ಸ್ವತಃ ತನ್ನ ಆತ್ಮಲಿಂಗದ ಸ್ವರೂಪದಲ್ಲಿ ಆಗಲಿ ಶಿವ ಮಾತ್ರ ಲಿಂಗ ಸ್ವರೂಪದಲ್ಲಿಯೇ ನೆಲೆಸಿರುವುದನ್ನು ನಾವು ಕಾಣಬಹುದು. ಆದುದರಿಂದ ಮಹಾ ಶಿವರಾತ್ರಿಯ ಈ ದಿವ್ಯ ದಿನದಂದು ನಾವು ಶಿವನನ್ನು ಆ ಸ್ವಾಮಿಗೇ ಪ್ರೀತಿಯಾದ ಲಿಂಗ ಸ್ವರೂಪದಲ್ಲಿಯೇ ಆರಾಧನೆ ಮಾಡುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಗಣಕಯಂತ್ರಗಳನ್ನು ಬಳಸಿ ಚಿತ್ರ ವಿಚಿತ್ರ ಶಿವನ ಭಂಗಿಗಳನ್ನು ಬಿಡಿಸಿ ಅದನ್ನು ಮುದ್ರಿಸಿ ಆ ಕಾಗದದ ಮುದ್ರಣಕ್ಕೆ ನಾವು ಹೆಚ್ಚಿನ ಪ್ರಾಧಾನ್ಯತೆ ನೀಡಿ ಅದನ್ನು ಪೂಜಿಸುತ್ತಿರುವುದರಿಂದ ಈ ವಿಚಾರವನ್ನು ತಿಳಿಸಿದ್ದೇನೆ. [ಶಿವನ ಸತ್ಯ ಪರಿಚಯ, ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ]

ಇನ್ನು ಲಿಂಗಗಳನ್ನು ತಯಾರಿಸಿ, ಅದರಲ್ಲಿಯೇ ಸ್ವಾಮಿ ಆರಾಧನೆಯನ್ನು ಕೆಲವರು ಮಾಡುತ್ತಾರೆ. ಆದರೆ ಅದರಲ್ಲಿಯೂ ಸಹ ಕೆಲ ತಪ್ಪುಗಳನ್ನು ಮಾಡುತ್ತಾರೆ. ಅದು ಹೇಗೆ ಅಂದರೆ, ಕಾಗದದಲ್ಲಿ ಟೊಳ್ಳು ಶಿವಲಿಂಗಗಳನ್ನು ಮಾಡಿ ಅದಕ್ಕೆ ಪೂಜಿಸುವುದು ಅಥವಾ ಸಿಮೆಂಟ್ ಅಥವಾ ಪ್ಲಾಸ್ಟ್ ಆಫ್ ಪ್ಯಾರಿಸ್ ನಲ್ಲಿ ಶಿವ ಲಿಂಗಗಳನ್ನು ಮಾಡಿ ಅದನ್ನು ಪೂಜಿಸುವುದು ಇತ್ಯಾದಿ. ಆದರೆ ಲಿಂಗ ತಯಾರು ಮಾಡಿದ ದ್ರವ್ಯ ಶುದ್ದಿ ಇರದ ಕಾರಣ ಅಲ್ಲಿ ಪಾಪ ಆಗುತ್ತದೆ.

ಹಾಗಾದರೆ ಯಾವ ವಸ್ತು ಅಥವಾ ದ್ರವ್ಯದಲ್ಲಿ ಶಿವಲಿಂಗದ ರಚನೆ ಮಾಡಬೇಕು ಹಾಗೂ ಅದೇ ವಿಧಾನದಲ್ಲಿ ಲಿಂಗ ತಯಾರಿಸಿ ಪೂಜಿಸಿದರೆ ಏನು ಲಭಿಸುತ್ತದೆ ಎಂದು ನಮಗೆ ನಮ್ಮ ಶಾಸ್ತ್ರಗಳು ಬಿಡಿಸಿ ಹೇಳಿವೆ. ಈ ಲೇಖನವನ್ನು ಧರ್ಮಸಿಂಧು ಗ್ರಂಥವನ್ನು ಆಧರಿಸಿ ಬರೆಯಲಾಗಿದೆ. [ಶಿವರಾತ್ರಿಯಲ್ಲಿ 'ರಾತ್ರಿ' ಎಂಬ ಶಬ್ದದ ಪ್ರತೀಕಾರ್ಥ]

ವಜ್ರ ಮುತ್ತು ರತ್ನದಲ್ಲಿ ಶಿವಲಿಂಗ

ವಜ್ರ ಮುತ್ತು ರತ್ನದಲ್ಲಿ ಶಿವಲಿಂಗ

ಶಾಸ್ತ್ರಗಳ ಪ್ರಕಾರ ವಜ್ರ, ಮುತ್ತು ವೈಢೂರ್ಯ ಇತ್ಯಾದಿ ರತ್ನಗಳಲ್ಲಿ ಶಿವ ಲಿಂಗವನ್ನು ಕೆತ್ತಿಸಿ ಅಂತಹ ಲಿಂಗಗಳಿಗೆ ಪೂಜಿಸಿದರೆ, ಪೂಜಿಸಿದವರ ಸಕಲ ಶತ್ರುಗಳು ಹಾಗು ರೋಗ ಬಾಧೆ ನಾಶವಾಗಿ ಆಯಸ್ಸು ವೃದ್ಧಿಸುತ್ತದೆ. ಯಾರಿಗೆ ಸಾಧ್ಯವಾಗುತ್ತದೋ ಅವರು ಹೀಗೆ ಪೂಜಿಸುವುದು ಒಳಿತು.

ಬೆಳ್ಳಿಯಲ್ಲಿ ತಯಾರಿಸಿದ ಲಿಂಗದ ಪೂಜೆ

ಬೆಳ್ಳಿಯಲ್ಲಿ ತಯಾರಿಸಿದ ಲಿಂಗದ ಪೂಜೆ

ಬೆಳ್ಳಿಯಲ್ಲಿ ಲಿಂಗವನ್ನು ತಯಾರಿಸಿ ಕ್ರಮಬದ್ಧವಾಗಿ ಪೂಜಿಸುವವರಿಗೆ ರಾಜಕೀಯದಲ್ಲಿ ಯಶಸ್ಸು ಸಿಕ್ಕು, ಕುಟುಂಬದಲ್ಲಿ ಇರುವ ಎಲ್ಲ ವಿಧದ ಪಿತೃ ದೋಷಗಳು ನಿವಾರಣೆಯಾಗಿ ಪಿತೃಗಳಿಗೆ ಮುಕ್ತಿ ಲಭಿಸುತ್ತದೆ. ಉಳ್ಳವರು ಹೀಗೆ ಮಾಡಲು ಅಡ್ಡಿಯಿಲ್ಲ.

ತಾಮ್ರದಿಂದ ಲಿಂಗ ತಯಾರಿಸಿ

ತಾಮ್ರದಿಂದ ಲಿಂಗ ತಯಾರಿಸಿ

ಹಾಗೆಯೇ ತಾಮ್ರದಿಂದ ಲಿಂಗವನ್ನು ತಯಾರಿಸಿ ಪೂಜಿಸಿದರೂ ಶ್ರೇಷ್ಠವೇ. ಇಂಥ ತಾಮ್ರದಿಂದ ತಯಾರಿಸಲಾದ ಲಿಂಗವನ್ನು ಪೂಜಿಸಿದರೆ ಪುಷ್ಟಿ ಹೆಚ್ಚಾಗಿ ಅಪಮೃತ್ಯು ಪರಿಹಾರವಾಗಿ ದೀರ್ಘ ಆಯಸ್ಸು ಹೆಚ್ಚುತ್ತದೆ ಎಂದು ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಶ್ರೀಗಂಧದ ಕೊರಡಿನಿಂದ ಶಿವಲಿಂಗ

ಶ್ರೀಗಂಧದ ಕೊರಡಿನಿಂದ ಶಿವಲಿಂಗ

ಅಂಗಡಿಯಲ್ಲಿ ಸಿಗುವ ಶ್ರೀಗಂಧದ ಕೊರಡು ಒಂದು ತಂದು ಶುಚಿರ್ಭೂತರಾಗಿ, ಸಾಣೆಕಲ್ಲಿನ ಮೇಲೆ ಗಂಧವನ್ನು ತೆಯ್ದು ತೆಗೆದು, ಆ ಗಂಧದಲ್ಲಿ ಈಶ್ವರನ ಸುಂದರವಾದ ಲಿಂಗ ಮಾಡಿ ಪೂಜಿಸಿದರೆ ಸೌಭಾಗ್ಯ ಪ್ರಾಪ್ತಿ ಆಗುತ್ತದೆ. ಇದನ್ನು ತಯಾರಿಸುವ ವಿಧಾನವೂ ಸರಳ.

ಅಕ್ಕಿ ಹಿಟ್ಟು ಅಥವಾ ಬೆಲ್ಲದಲ್ಲಿ ಶಿವಲಿಂಗ

ಅಕ್ಕಿ ಹಿಟ್ಟು ಅಥವಾ ಬೆಲ್ಲದಲ್ಲಿ ಶಿವಲಿಂಗ

ಅದೇ ವಿಧದಲ್ಲಿ ಅಕ್ಕಿ ಹಿಟ್ಟಿನಲ್ಲಿ ಶಿವ ಲಿಂಗವನ್ನು ತಯಾರಿಸಿ ಪೂಜಿಸಿದರೆ ರೋಗ ನಾಶವಾಗಿ ಸುಖಪ್ರಾಪ್ತಿ ಆಗುತ್ತದೆ. ಮನೆಯಲ್ಲಿ ಧವಸ ಧಾನ್ಯ ಇತ್ಯಾದಿಗಳ ಕೊರತೆ ಇದ್ದರೆ ಬೆಲ್ಲದಲ್ಲಿ ಶಿವ ಲಿಂಗವನ್ನು ತಯಾರಿಸಿ ಪೂಜಿಸಬೇಕು. ಆಗ ದಾರಿದ್ರ್ಯ ನಿವಾರಣೆ ಆಗಿ ಮನೆಯಲ್ಲಿ ಸಮೃದ್ಧಿ ಆಗುತ್ತದೆ.

ಗೋಮಯದಿಂದ ಶಿವ ಲಿಂಗ ತಯಾರಿಸಿ

ಗೋಮಯದಿಂದ ಶಿವ ಲಿಂಗ ತಯಾರಿಸಿ

ಗೋಮಯ (ನಾಟಿ ಹಸುವಿನ ಸಗಣಿ) ದಿಂದ ಶಿವ ಲಿಂಗ ತಯಾರಿಸಿ ಅದನ್ನು ಪೂಜಿಸಿದರೆ ಆರೋಗ್ಯ ಬಾಧೆ ನಿವಾರಣೆ ಆಗುತ್ತದೆ. ಇನ್ನು ಮಕ್ಕಳಿಲ್ಲದವರು ಬಿದಿರಿನ ಮೊಳಕೆಯಲ್ಲಿ ಶಿವ ಲಿಂಗ ಮಾಡಿ ಪೂಜಿಸಿದರೆ ಅವರಿಗೆ ಸಂತಾನವಾಗಿ ಅವರ ವಂಶ ಅಭಿವೃಧ್ಧಿ ಆಗುವುದು.

ಹುತ್ತದ ಮಣ್ಣಿನಲ್ಲಿ ಮಾಡಿದ ಲಿಂಗವೇ ಶ್ರೇಷ್ಠ

ಹುತ್ತದ ಮಣ್ಣಿನಲ್ಲಿ ಮಾಡಿದ ಲಿಂಗವೇ ಶ್ರೇಷ್ಠ

"ದ್ವಾಪರೇ ಪಾರದಂ ಶ್ರೇಷ್ಠಂ ಮೃಣ್ಮಯಂತು ಕಲಿಯುಗೇ" ಎಂದು ಶಾಸ್ತ್ರದಲ್ಲಿಯೇ ಬರುವ ಒಂದು ಉಕ್ತಿಯಂತೆ ಕಲಿಯುಗದಲ್ಲಿ ಮಣ್ಣಿನಲ್ಲಿ ಮಾಡಿದ ಲಿಂಗವೇ ಶ್ರೇಷ್ಠವು ಹಾಗೂ ಶ್ರೀಮಂತರಿಂದ ಬಡವರ ತನಕ ಎಲ್ಲರೂ ಸುಲಭವಾಗಿ ತಯಾರಿಸಿ ಪೂಜಿಸುವಂಥದ್ದು. ಆ ಮಣ್ಣಿನಲ್ಲಿಯೂ ಸಹ ವಲ್ಮೀಕ ಅಂದರೆ ಹುತ್ತದ ಮೆಣ್ಣಿನಿಂದ ತಯಾರಿಸಿದ ಲಿಂಗ ಸರ್ವಶ್ರೇಷ್ಠ ಎಂಬುದನ್ನು ನಾವು ತಿಳಿಯಬೇಕು!

ಅಭಿಷೇಕ ಪ್ರಿಯೋ ಶಿವ

ಅಭಿಷೇಕ ಪ್ರಿಯೋ ಶಿವ

ಇನ್ನು ಪೂಜೆಯ ವಿಚಾರಕ್ಕೆ ಬಂದರೆ 'ಅಭಿಷೇಕ ಪ್ರಿಯೋ ಶಿವ' ಎಂದು ಹೇಳುತ್ತಾರೆ. ಅಂದರೆ ಅಭಿಷೇಕ ಮಾಡುವುದರಿಂದ ಪರಮಶಿವ ಪ್ರಸನ್ನನಾಗುತ್ತಾನೆ. ಅದರಲ್ಲಿಯೂ ಸಹ ವಿಶೇಷವಾಗಿ ಪರಿಶುದ್ದ ಗಂಗಾ ನದಿಯ ನೀರಿನಿಂದ ಸ್ವಾಮಿಗೆ ಅಭಿಷೇಕ ಮಾಡಿದರೆ ಉತ್ತಮ.

ರುದ್ರ ಮಂತ್ರಗಳ ಸರಿಯಾದ ವಿಧಿವಿಧಾನ

ರುದ್ರ ಮಂತ್ರಗಳ ಸರಿಯಾದ ವಿಧಿವಿಧಾನ

ಅಲ್ಲಿಯೂ ಸಹ ರುದ್ರ ಮಂತ್ರಗಳ ಸರಿಯಾದ ವಿಧಿವಿಧಾನದಲ್ಲಿ ಹೇಳುತ್ತಾ ಅಭಿಷೇಕ ಮಾಡಿಸುವುದು ಅತ್ಯುತ್ತಮ. ಅಂತಹ ರುದ್ರವನ್ನು ಹನ್ನೊಂದು ಜನ ಪುರೋಹಿತರ ತಂಡ ರಚಿಸಿ, ಅವರಿಂದ ರುದ್ರವನ್ನು ಪ್ರತಿ ಒಬ್ಬರಿಂದ ಪ್ರತ್ಯೇಕವಾಗಿ ಹನ್ನೊಂದು ಸಲ ರುದ್ರವನ್ನು ಹೇಳಿಸಿ, ಹನ್ನೊಂದು ಕಲಶಗಳನ್ನು ಸ್ಥಾಪಿಸಿ, ಆ ಕಲಶಗಳಲ್ಲಿ ಹನ್ನೊಂದು ವಿಧದ ರುದ್ರದೇವರುಗಳನ್ನು ಆವಾಹನೆ ಮಾಡಿ, ಶತರುದ್ರಾದಿಗಳಿಂದ ಅಭಿಷೇಕ ಮಾಡಿಸಿ ನಂತರ ಪರಿಶುದ್ಧವಾದ ಹಸುವಿನ ತುಪ್ಪವನ್ನು ಕರೀ ಎಳ್ಳು ಹಾಗು ಭತ್ತಕ್ಕೆ ಮಿಶ್ರಣ ಮಾಡಿ ರುದ್ರ ಮಂತ್ರಗಳಿಂದ ಹವನ ಮಾಡಿಸಿದರೆ ಅತ್ಯುತ್ತಮ.

ಶಿವರಾತ್ರಿಗೆ ಎಂಥ ದಾನ ಅತ್ಯಂತ ಶ್ರೇಷ್ಠ

ಶಿವರಾತ್ರಿಗೆ ಎಂಥ ದಾನ ಅತ್ಯಂತ ಶ್ರೇಷ್ಠ

ಶಿವರಾತ್ರಿಯಂದು ದಾನ ಮಾಡುವುದಕ್ಕೆ ಅತ್ಯಂತ ಹೆಚ್ಚಿನ ಪುಣ್ಯ ಪ್ರಾಪ್ತಿ ಎಂದು ಶಾಸ್ತ್ರಗಳಲ್ಲಿ ತಿಳಿಸುತ್ತಾರೆ. ಕೇವಲ ದಾನ ಮಾಡುವುದರಿಂದ ನಿಮ್ಮ ಎಷ್ಟೆಷ್ಟೋ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಶಿವರಾತ್ರಿಯ ದಿನ ಉಡಲು ಯೋಗ್ಯವಾದ ಬಿಳಿಯ ವಸ್ತ್ರ (ಪಂಚೆ ಇತ್ಯಾದಿ) ಕರಿಯೆಳ್ಳು, ಕಬ್ಬಿಣ ನುಚ್ಚಿಲ್ಲದ ಅನ್ನ ಮಾಡಿ ನೈವೇದ್ಯ ಮಾಡಲು ಯೋಗ್ಯವಾದ ಅಕ್ಕಿ ಇತ್ಯಾದಿಗಳನ್ನು ದಾನ ಮಾಡಬೇಕು. ಹತ್ತಿರದ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವ ಅನಾಥರಿಗೆ ಕಂಬಳಿ ಇತ್ಯಾದಿಗಳನ್ನು ದಾನ ಮಾಡುವುದು ಶ್ರೇಷ್ಠ.

English summary
How to worship Shiva on Maha Shivaratri festival? Astrologer Vittal Bhat has explained how Shiva linga can be prepared and by which method the lord Shambho Shankara has to be worshipped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X