ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಶಿವ’ನೆಂಬ ಅಂತಿಮ ನಿಲ್ದಾಣ

By Staff
|
Google Oneindia Kannada News

Shiva, the ultimate truth
ಆಕಾಶದಲ್ಲಿ ಹೊಳೆಯುವ ಮೂರು ನಕ್ಷತ್ರಗಳು ಒಂದೇ ಸರಳ ರೇಖೆಯಲ್ಲಿ ಇರುವುದನ್ನು ತೋರಿಸಿ ಅಮ್ಮ ಹೇಳುತ್ತಿದ್ದಳು- ಅದು ಬ್ರಹ್ಮ ವಿಷ್ಣು ಮಹೇಶ್ವರ...ಸೃಷ್ಟಿ ಸ್ಥಿತಿ ಮತ್ತು ಲಯ ಕರ್ತೃಗಳು.

ಈ ಕ್ಲಿಷ್ಟ ಶಬ್ದಗಳು ಮಗುವಿನ ಮನಸ್ಸಿಗೆ ಹೋಗುವುದಿಲ್ಲ . ಸರಳವಾಗಿ ಹೇಳುವುದಾದರೆ- ಹುಟ್ಟು, ಬದುಕು ಮತ್ತು ಸಾವು. ಹುಟ್ಟಿದ ನಂತರದ ಪಾಲನೆಯ ಜವಾಬ್ದಾರಿ ವಿಷ್ಣುವಿನದ್ದು, ಮುಕ್ತಾಯದ ಅಧಿಪತಿ ಈಶ್ವರ. ಈ ಅನುಕ್ರಮವನ್ನು ವಿಷ್ಣು ಬ್ರಹ್ಮ ಮಹೇಶ್ವರ ಎಂದಾಗಲೀ ಅಥವಾ ಮಹೇಶ್ವರ ಬ್ರಹ್ಮ ವಿಷ್ಣು ಎಂದಾಗಲೀ ಅದಲಿ ಬದಲಿ ಮಾಡುವ ಹಾಗಿಲ್ಲ. ಅದು ಬ್ರಹ್ಮಾಂಡದ ಅಲಿಖಿತ ನಿಯಮ. ಸೃಷ್ಟಿಯ ನಂತರ ಸ್ಥಿತಿ ಮತ್ತೆ ಲಯ. ಯಕ್ಷಗಾನದಲ್ಲಿ, ನಾಟಕಗಳಲ್ಲಿ , ಸಿನೆಮಾಗಳಲ್ಲಿ , ಗೋಡೆಯ ಪಟಗಳಲ್ಲಿರುವಂತೆ- ಮೊದಲು ಬ್ರಹ್ಮ ನಂತರ ವಿಷ್ಣು ; ಕೊನೆಯಲ್ಲಿ ಶಿವನಿರುತ್ತಾನೆ.

ಹಾಗಿದ್ದರೆ ನಾವೆಲ್ಲರೂ ಕೊನೆಯದಾಗಿ ತಲುಪಬೇಕಾಗಿರುವುದು ಶಿವನನ್ನೇನಾ ?

ಈ ಪ್ರಶ್ನೆಗೆ ಸಿದ್ಧ ಉತ್ತರವಿಲ್ಲ . ದಿನ ದಿನವೂ ಸಾಯುವ ಬದುಕು ಉತ್ತರವನ್ನು ನಿಧಾನವಾಗಿ ರೆಡಿ ಮಾಡುತ್ತದೆ... ಆ ಉತ್ತರದ ದಾರಿಯನ್ನು ವಿಶ್ಲೇಷಿಸುವುದಾದರೆ :

ತೆರೆದ ಮನಸ್ಸಿಗೆ, ನಿರೀಕ್ಷೆಯ ಕಣ್ಣುಗಳಿಗೆ ಇಷ್ಟವಾಗುವುದು ವಿಷ್ಣು. ಬದುಕಿಗೆ ಬೇಕಾದ ಸಕಲವನ್ನೂ ಕೊಡಲಿರುವಾತನ ಆಕರ್ಷಣೆಯೇ ಅಂತಹದು. ಈ ಜೀವನ ಸಾಗಬೇಕು ಎಂದರೆ ಹತ್ತು ಅವತಾರಗಳು ಬೇಕು. ನೂರು ಕುಟಿಲೋಪಾಯಗಳು ಬೇಕು. ಬೋಧನೆ, ಶಾಸ್ತ್ರ ಪುರಾಣಗಳು, ನೇಮ ಹೋಮಗಳು ಬೇಕಾಗುತ್ತವೆ. ಇವೆಲ್ಲ ಮುಗಿಯುತ್ತಲೇ ಅನುಭವದ ಗಂಟು ರೆಡಿಯಾಗುತ್ತದೆ. ಮತ್ತೇ ಅದೇ ಅನುಕ್ರಮಣಿಕೆ ನೆನಪಾಗುತ್ತದೆ. ವಿಷ್ಣುವನ್ನು ಪ್ರೀತಿಸದೆಯೇ, ಅನುಭವ ಪಾತ್ರೆಯನ್ನು ಭರ್ತಿ ಮಾಡಿಕೊಳ್ಳದೆಯೇ, ಕರ್ಮವನ್ನು ದಾಟದೆಯೇ ಶಿವನನ್ನು ತಲುಪುವುದಕ್ಕಾಗುವುದಿಲ್ಲ.

ಆದರೆ ಶಿವನ ತಲುಪಬೇಕೆಂಬುದು ಸುಳ್ಳಲ್ಲ... ಹೌದು, ಅಂತಿಮವಾಗಿ ನಮ್ಮ ಟಾರ್ಗೆಟ್‌ ಈಶ್ವರ !! ಶಿವ ಅಂತಿಮ ನಿಲ್ದಾಣ.

ವಿಷ್ಣು ಎಂದರೆ ಲೌಕಿಕ, ಶಿವನೆಂದರೆ ಮುಕ್ತಾಯ. ನಮ್ಮ ನಿಮ್ಮ ಜೀವನ ಮುಗಿಯುತ್ತಲೇ ಈ ದೇಹ ಸಾಗಿ ಮಸಣದಲ್ಲಿ ಮುಗಿದು ಹೋಗುತ್ತಿದ್ದರೆ, ಅಲ್ಲಿ ಆ ಮಸಣದಲ್ಲಿ ಇದೆ ನೋಡಿ ಶಿವನ ಮನೆ. ಆತ ಲೌಕಿಕ ಮತ್ತು ಅಲೌಕಿಕಗಳ ನಡುವಿನ ಸಂಕ್ರಮಣ ಸಮಯದ ಸಂಕೇತ.

ಈ ಜೀವನದಲ್ಲೋ ನೂರು ಆಕರ್ಷಣೆಗಳು. ಆಕರ್ಷಣೆಗಳ ಮೋಹಿಸುತ್ತಾ ಇಲ್ಲಿಯೇ ಕಳೆದು ಹೋಗುವುದಾದರೆ ಶಿವನು ನಿಮಗೆ ಗೋಚರಿಸಲಾರ. ಯಾಕೆಂದರೆ ಶಿವನೆಂದರೆ ಸತ್ಯ. ಆಕರ್ಷಣೆಗಳಲ್ಲಿ ಕಳೆದು ಹೋಗುವವರಿಗೆ ಸತ್ಯದ ತಿಳಿವು ಇರುವುದಿಲ್ಲ. ತಿಳಿವೆಂಬ ಶಿವನ ಸಾಕ್ಷಾತ್ಕಾರ ಸಾಧ್ಯವಾದರೆ- ಅಲ್ಲಿ ಕಾಣಿಸುತ್ತದೆ ಸೌಂದರ್ಯದ ಚಿಲುಮೆ.

ತಿಳಿವು ದೊರೆಯುತ್ತಲೇ ಹುಟ್ಟಿಕೊಳ್ಳುವುದು ಶಿವನೆಂಬ 'ಸಮಾರೋಪ"ವನ್ನು ತಲುಪುವ ಹಂಬಲ. 'ಕಾಮದಂ ಮೋಕ್ಷದಂ ಚ ಏವ ಓಂಕಾರಾಯ ನಮೋ ನಮ ಃ "

ಆತ ಬಯಲು

ಕಾರಣಗಳನ್ನು ಕೊಡುತ್ತಾ ಹೋಗುವುದಾದರೆ ಈಶ್ವರನ ಪ್ರೀತಿಸುವುದಕ್ಕೆ ಈ ಬದುಕು ಯಾವ ಕಾರಣವನ್ನೂ ಕೊಡುವುದಿಲ್ಲ . ಪುರಾಣಗಳಲ್ಲಿ ಅಸುರ ದೇವತೆಯಾಗಿ ಈಶ್ವರ ಗೋಚರಿಸುತ್ತಾನೆ. ಆದರೆ ಅಸುರರು ಆತನನ್ನು ಕಾಮರೂಪನನ್ನಾಗಿ ಮಾತ್ರ ಭಜಿಸಿದರು. ಕೊನೆಯಾದರು.

Ardhanareeshwaraಶಿವ ಶರಣರು ಆತನನ್ನು ಬಚ್ಚ ಬರಿಯಚ್ಚ ಬಯಲು ಎಂದು ಕರೆದು ಲಿಂಗದ ಸಂಗದೊಂದಿಗೆ ಶೂನ್ಯವನ್ನು ಹಚ್ಚಿಕೊಂಡರು. ಈ ಮುಗಿವು, ಲಯ, ಖಾಲಿಗಳ ಅರಿತುಕೊಂಡು ಬಯಲಾಗುವ ಮಾರ್ಗ ಶಿವನೊಬ್ಬನೇ ಎಂದು ತಿಳಿದುಕೊಂಡರು. ಹಾಗೆ ಕಾಮವನ್ನು ಮರೆತು ಭಜಸಿದವರು ಬಯಲಾದರು. ಒಬ್ಬೊಬ್ಬರದು ಒಂದೊಂದು ರೀತಿ.

ಈ ಬದುಕಿನ ಪ್ರೀತಿ, ಮೋಹದ ಕಾರಣಗಳ ಎದುರು ಈಶ್ವರ ಪ್ರತಿಪಾದಿಸುವ ಸಾಂಕೇತಿಕ ಮೌಲ್ಯಗಳು ಅಷ್ಟೇ ಭಾರದವು. ಹೆಣ್ಣು ಎಂಬ ಪ್ರಕೃತಿಯನ್ನು ಸೃಷ್ಟಿಯ ರಹಸ್ಯ, ಮೂಲ ಮತ್ತು ಆದಿ ಎಂದೆಲ್ಲ ಬಣ್ಣಿಸುವ ಪುರಾಣಗಳಲ್ಲಿ ದೇವರು ಹೆಂಡತಿಯನ್ನು ಗಂಡನ ಪಕ್ಕದಲ್ಲೋ, ಕಾಲ ಬುಡದಲ್ಲಿಯೋ ಹೆಚ್ಚೆಂದರೆ ತೊಡೆಯ ಮೇಲೋ ಕೂರಿಸಿಕೊಂಡರೆ ಶಿವ ಪ್ರತಿಪಾದಿಸಿದ್ದು ಅರ್ಧನಾರೀಶ್ವರ ಎಂಬ ತೀರಾ ಪ್ರಾಕ್ಟಿಕಲ್‌ ಮತ್ತು ಅಖಂಡ ಕಲ್ಪನೆಯನ್ನು. ಶಿವನಿಗೊಲಿದ ಶಕ್ತಿ , ಪಾರ್ವತಿಯೂ ಗಂಡನಿಗೆ ತಕ್ಕ ಹೆಂಡತಿ. ಲಯಕರ್ತೃ ರುದ್ರನೇ ಗಂಡನಾಗಬೇಕು ಎಂದು ತಪಸ್ಸಿಗೆ ಗಂಟು ಬಿದ್ದ ಜಾಣೆ.

ತ್ರಿಮೂರ್ತಿಗಳ ವೇಷ ವನ್ನಾದರೂ ಗಮನಿಸಿದ್ದೀರಾ... ಬ್ರಹ್ಮ ಬಿಳಿ ಗಡ್ಡ ಬಿಟ್ಟುಕೊಂಡು ಹಿರಿತನದ ಗೆಟಪ್‌ನಲ್ಲಿ ಇದ್ದರೆ ವಿಷ್ಣು ಯಾವತ್ತೂ ಶೈನಿಂಗ್‌ ಗೆಟಪ್‌. ಕ್ಷೀರ ಸಾಗರ, ಪಕ್ಕದಲ್ಲೇ ಕನಕವೃಷ್ಟಿ ಸುರಿಸುವ ಲಕ್ಷ್ಮಿ. ಆದರೆ ಶಿವ ?

ಪರಿಧಿಯಿಲ್ಲದ ಬೆಂಕಿ ಹಣೆಗಣ್ಣಿನಲ್ಲಿ, ತಲೆ ಮೇಲೆ ಜೀವ ಗಂಗೆ, ಸುತ್ತಿಕೊಳ್ಳಲು ಹುಲಿ ಚರ್ಮ. ಬೂದಿ ಬಳಿದು ಕೊಂಡ, ಹಾವು ಸುತ್ತಿಕೊಂಡವ, ಬುರುಡೆಯ ಬಟ್ಟಲಾಗಿ ಹಿಡಿದವ, ನಿರಾಕರ್ಷಣೆಯ, ನಿರಾಸಕ್ತಿಯನ್ನು ಹುಟ್ಟಿಸುವ ರೂಪ ಹೊತ್ತ ವ ಈ ಶಿವ. ಹಾಗೆ ನಿರ್ಲಿಪ್ತನಾಗಿದ್ದರಿಂದಲೇ ಸಮುದ್ರ ಮಥನದ ಸಂದರ್ಭದಲ್ಲಿ ಹಿಂದು ಮುಂದು ನೋಡದೆ ವಿಷ ಕುಡಿಯಲು ಸಾಧ್ಯವಾಯಿತು. ನೀಲಕಂಠನಾದ ನಂತರದ ಕಥೆಯೇನೇ ಇರಲಿ, ಮೋಹಗಳ ವಾಸನೆಯೇ ಇಲ್ಲದ ಶಿವ ಖಾಲಿಯಾಗಿದ್ದರಿಂದಲೇ ತನ್ನೊಳಗಿನ ಸಾಮರ್ಥ್ಯದ ತಿಳಿವಿನಿಂದ ವಿಷ ಕುಡಿದ.

ಹೌದು. ಶಿವನೆಂದರೆ 'ಖಾಲಿ"ಯೇ. ಶಿವನ ತಲುಪಬೇಕೆಂದರೆ- ಜೀವನದಲ್ಲಿ ಅಂಟಿಸಿಕೊಂಡ ಎಲ್ಲ ಬೇಕು ಬೇಡಗಳನ್ನು ಬಿಟ್ಟು ಖಾಲಿಯಾಗಿಯೇ ಹೋಗಬೇಕು... ಅದಕ್ಕೇ ಶಿವರೂಪವೇನಿದ್ದರೂ ಕಟ್ಟ ಕಡೆಗೆ ಗೋಚರಿಸುವ ಕಟು ಸತ್ಯದ ಪ್ರತಿಬಿಂಬ.

ಅಲ್ಲಿ ತಣ್ಣಗೆ ಕೊರೆಯುವ ಹಿಮಾಚಲದಲ್ಲಿ , ಕೈಲಾಸವೆಂಬ ಲೋಕದಲ್ಲಿ ಶಿವನಿರುತ್ತಾನೆ ಎನ್ನುತ್ತಾರೆ. ಈ ವಿಶಾಲ ಜಗತ್ತಿನ ಯಾವ ಕಣದಲ್ಲಿ ಶಿವನಿಲ್ಲ ಹೇಳಿ. ಆ ಬೆಳಕು, ಈ ಕತ್ತಲು, ಮತ್ತೆ ಈ ಜಗದೊಳಗಿನ ಜಂಜಡ ಮೊಳಗಿಸುವ ಡಮರಿನ ಶಬ್ದ, ಅಲ್ಲೆಲ್ಲೋ ಬೇಸರ -ನಿರಾಳ-ಮೌನದಲ್ಲಿಯೂ ಶಿವಲಿಂಗದ ಇರವಿಲ್ಲ ಎನ್ನುತ್ತೀರಾ....?

ಶಿವಪದ
ಮಧುರ ಅಮರವೀ ಶಿವ ಗಾನಾಮೃತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X