ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಜ್ಞಾನಿಕ ತಳಹದಿಯಲ್ಲಿ ಮಹಾಶಿವರಾತ್ರಿ ಜಾಗರಣೆ

By Staff
|
Google Oneindia Kannada News

Significance of Mahashivratri
ಹಿಂದೂಗಳ ನಂಬಿಕೆಯ ರೀತ್ಯ ದೇವತೆಗಳಲ್ಲಿ ಸರ್ವ ಶ್ರೇಷ್ಠರೆಂದರೆ ತ್ರಿಮೂರ್ತಿಗಳು. ಸೃಷ್ಟಿ, ಸ್ಥಿತಿ, ಲಯಗಳನ್ನು ನಿಯಂತ್ರಿಸುವವರೇ ಇವರು. ಬ್ರಹ್ಮದೇವ ಸೃಷ್ಟಿಕರ್ತನಾದರೆ, ಸ್ಥಿತಿ ಸ್ಥಾಪಕತ್ವದ ದೃಷ್ಟಿಯಿಂದ ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆ ಮಾಡುವಾತ ಶ್ರೀಮನ್ನಾರಾಯಣ. ಇನ್ನು ಲಯದ ಹೊಣೆ ಶಿವನದು.

ಪ್ರತಿ ತಿಂಗಳೂ ಚತುರ್ದಶಿಯಂದು ಮಾಸ ಶಿವರಾತ್ರಿ. ಆದರೆ, ಮಾಘ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿ. ಮಹಾಶಿವರಾತ್ರಿಯಂದು ಲಯಕರ್ತನಾದ ಶಿವ ಹುಟ್ಟಿದನೆಂಬ ನಂಬಿಕೆ ಕೆಲವರದು. ಇಲ್ಲ ಇಲ್ಲ, ಸಮುದ್ರ ಮಂಥನ ಕಾಲದಲ್ಲಿ ಶಿವನು ಹಾಲಾಹಲ ಕುಡಿದ ದಿನವೇ ಶಿವರಾತ್ರಿ ಎಂಬುದು ಇನ್ನು ಕೆಲವರ ವಾದ. ಮತ್ತೆ ಕೆಲವರು ಶಿವ - ಪಾರ್ವತಿಯನ್ನು ವರಿಸಿದ ದಿನ ಶಿವರಾತ್ರಿ ಎನ್ನುತ್ತಾರೆ. ಆದರೆ, ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಇದಕ್ಕೆ ಬೇಡರ ಕಣ್ಣಪ್ಪನ ತ್ಯಾಗದ ಕತೆಯೂ ಪೂರಕವಾಗಿದೆ.

ಜಾಗರಣೆ - ವೈಜ್ಞಾನಿಕ ವಿಶ್ಲೇಷಣೆ : ಮಾನವನ ಬದುಕಿನ ಚಕ್ರ ಸೃಷ್ಟಿ, ಸ್ಥಿತಿ ಹಾಗೂ ಲಯಗಳನ್ನು ಅವಲಂಬಿಸಿದೆ. ಜಲ, ನೆಲ, ಗಾಳಿ, ಬೆಂಕಿ, ಆಕಾಶಗಳೆಂಬ ಪಂಚಭೂತಗಳಿಂದ ಆದ ಮಾನವ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದ್ದಾನೆ. ಪ್ರಕೃತಿಗೂ ಒಂದು ನಿಯಮಿತ ನಿಯಮ- ಚಲನೆ ಇದೆ.

ಭೂಮಿಯ ಸುತ್ತ ಚಲಿಸುವ ಚಂದ್ರ ಒಂದು ದಿನದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದಕ್ಕೆ ತಿಥಿ (ಪಾಡ್ಯ, ಬಿದಿಗೆ.....) ಎನ್ನುತ್ತಾರೆ. ಭೂಮಿಯ ಒಂದು ನಿಗದಿತ ಕೋನಕ್ಕೆ ಚಂದ್ರನು ಬಂದಾಗ ಆತನ ಪ್ರಭಾವ ಹೆಚ್ಚಾಗಿರುತ್ತದೆ. ಚಂದ್ರನು ಭೂಮಿಯ 180 ಡಿಗ್ರಿ ಕೇಂದ್ರ- ಕೋನಕ್ಕೆ ಬಂದಾಗ ಆಕರ್ಷಣೆ ಅಧಿಕವಾಗಿರುತ್ತದೆ. ಹೀಗಾಗೇ ಸಮುದ್ರದ ಅಲೆಗಳ ಮೊರೆತವೂ ಹೆಚ್ಚುತ್ತದೆ. ಮಿಗಿಲಾಗಿ ಶೇಕಡಾ 80ರಷ್ಟು ಜಲವರ್ಗಕ್ಕೆ ಸೇರಿದ ಮನುಷ್ಯನ ಮೆದುಳು, ಜೀರ್ಣಾಂಗ, ಪಿತ್ತಕೋಶ ಹಾಗೂ ಮೂತ್ರ ಜನಕಾಂಗಳ ಮೇಲೂ ಚಂದ್ರನ ಪ್ರಭಾವ ಈ ಅವಧಿಯಲ್ಲಿ ತೀಷ್ಣವಾಗಿರುತ್ತದಂತೆ. ಅದಕ್ಕೆ ಅಮಾವಾಸ್ಯೆ ಮತ್ತು ಪೂರ್ಣಿಮೆಯಲ್ಲಿ ಮಾನಸಿಕ ರೋಗಿಗಳಿಗೆ ಉದ್ರೇಕ ಹೆಚ್ಚುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಮಾಘ ಮಾಸದ ಚತುರ್ದಶಿಯಂದು ಕ್ಷೀಣ ಚಂದ್ರನ ಪ್ರಭಾವ ಇರುವುದರಿಂದ ಅಂದು ಜಾಗರೂಕರಾಗಿದ್ದು, ಜಾಗರಣೆ ಮಾಡಿದರೆ (ನಿದ್ದೆ ಮಾಡದೆ ಎಚ್ಚರ ಸ್ಥಿತಿ) ಮಾನವನಲ್ಲಿ ಉತ್ಸಾಹ ಹೆಚ್ಚಿ, ಆತನ ಚಿಂತನೆ ವೃದ್ಧಿಸುತ್ತದೆ ಎಂಬ ವೈಜ್ಞಾನಿಕ ಕಾರಣವನ್ನೂ ಜ್ಯೋತಿ-ಷ್ಕ-ರು ಹಾಗೂ ಅಳಲೇಕಾಯಿ ಪಂಡಿತರು ನೀಡುತ್ತಾರೆ.

ಆಚರಣೆ: ಆರೋಗ್ಯದ ದೃಷ್ಟಿಯಿಂದ ನೀವು ಜಾಗರಣೆ ಮಾಡಿ ಎಂದರೆ ಯಾರೂ ಮಾಡರು, ಹೀಗಾಗೇ ಶಾಸ್ತ್ರದ ಕಟ್ಟಳೆಯಂತೆ. ರಾತ್ರಿ ನಿದ್ದೆ ಮಾಡದೇ ಇರಬೇಕಾದರೆ, ಹೊಟ್ಟೆ ಹಸಿದಿರಬೇಕು ಎಂಬ ತತ್ವ ಇದೆ. ಇದಕ್ಕಾಗೇ ಮಹಾ ಶಿವರಾತ್ರಿಯ ದಿನ ಉಪವಾಸ ಇರಬೇಕು ಎಂಬ ನಿಯಮವಂತೆ. ಯಾರು ಒಪ್ಪಲಿ ಬಿಡಲಿ, ಅನಾದಿ ಕಾಲದಿಂದಲೂ ಈ ಆಚರಣೆ ಅನೂಚಾನವಾಗಿ ನಡೆದು ಬಂದಿದೆ. ನಡೆಯುತ್ತಲೇ ಇದೆ.

ಮಹಾ ಶಿವರಾತ್ರಿಯ ರಾತ್ರಿ ರಾಜ್ಯದ ಚಲನಚಿತ್ರ ಮಂದಿರಗಳು ಮಧ್ಯರಾತ್ರಿಯ ವಿಶೇಷ ಚಲನಚಿತ್ರ ಪ್ರದರ್ಶನವನ್ನೂ ಏರ್ಪಡಿಸುತ್ತವೆ. ದೂರದರ್ಶನ, ಟಿ.ವಿ. ಚಾನೆಲ್‌ಗಳಲ್ಲಿ ಜಾಗರಣೆ ನಿಮಿತ್ತ ಚಲನಚಿತ್ರ ಪ್ರದರ್ಶನವೂ ಇರುತ್ತದೆ. ಮನೆಯಲ್ಲಿ ಅಜ್ಜಿ ಶಿವಪೂಜೆ ಮಾಡಿ, ಅಳುಗುಳಿ ಮನೆ, ಚೌಕಾಬಾರಾ ಆಡಿ ಜಾಗರಣೆ ಮಾಡಿದರೆ, ಮೊಮ್ಮಕ್ಕಳು ರಾತ್ರಿಯಿಡೀ ಹೊನಲು ಬೆಳಕಿನಲ್ಲಿ ಕ್ರಿಕೆಟ್‌ ಆಡಿ ಜಾಗರಣೆ ಮಾಡುತ್ತಾರೆ. ಶಿವಾಲಯಗಳಲ್ಲಿ ಪ್ರತಿ ಜಾವವೂ ವಿಶೇಷ ಪೂಜೆ, ಭಜನೆ, ಶಿವಕತೆಗಳು ನಡೆಯುತ್ತವೆ. ಪಾನಕ - ಕೋಸಂಬರಿಯನ್ನೂ ಕೆಲವರು ಹಂಚುತ್ತಾರೆ. ಇನ್ನು ಕೆಲವರು ಅಂದು ಊಟ ಮಾಡದೆ, ಫಲಹಾರ ಮಾತ್ರ ಸೇವಿಸುತ್ತಾರೆ. ನೀವು ಏನು ಮಾಡುತ್ತೀರಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X