ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಮೊಳಗುತ್ತಿರುವ ಓಂ ನಮಃ ಶಿವಾಯ

By Super
|
Google Oneindia Kannada News

ಬೆಂಗಳೂರು : ಶಿವ ಶಿವ ಎಂದರೆ, ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ... ಶಿವಭಕ್ತನಿಗೆ ನರಕಾ ಇಲ್ಲ... ಶಿವನಾಮ ಜಪಿಸುವ ಭವಭಾರ ಹರಿಸಿಕೊಳ್ಳುವ ಧಾರ್ಮಿಕ ದಿನ ಶಿವರಾತ್ರಿ ಮತ್ತೆ ಬಂದಿದೆ. ಜೊತೆಗೇ ಕಣ್ಣಪ್ಪ , ಸಿರಿಯಾಳ, ಮಾರ್ಕಾಂಡೇಯ, ಕೊಡಗೂಸು ಮುಂತಾದ ಶಿವಭಕ್ತರ ನೆನಪುಗಳೂ. ಬೇಸಿಗೆ ಜೋರಿರುವುದರಿಂದ ಕೋಸಂಬರಿ, ಪಾನಕಗಳ ಗಮಲು ಮತ್ತಷ್ಟು ಹೆಚ್ಚಲಿದೆ. ಇಷ್ಟಕ್ಕೂ ಪಾನಕ ಪನಿವಾರವಿಲ್ಲದೆ ಶಿವರಾತ್ರಿ ಎಂತು ಪೂರ್ಣಗೊಳ್ಳಲು ಸಾಧ್ಯ.

ರಾಜ್ಯಾದ್ಯಂತ ಎಲ್ಲ ಶಿವ ದೇಗುಲಗಳಲ್ಲೂ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ನಡೆಯಲಿದೆ. ನಮ್ಮ ಬಾತ್ಮೀದಾರರು ಕಳುಹಿಸಿರುವ ವರದಿಗಳನ್ನಾಧರಿಸಿ- ರಾಜ್ಯದಲ್ಲಿ ಏರ್ಪಾಟಾಗಿರುವ ಕೆಲವು ಶಿವಪೂಜಾ ಕಾರ್ಯಗಳು ನಿಮ್ಮ ಗಮನಕ್ಕೆ.

ಗವಿಪುರಂನ ಗವಿ ಗಂಗಾಧರೇಶ್ವರ : ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರನಿಗೆ ವಿಶೇಷ ಪೂಜೆ- ಉತ್ಸವ ಏರ್ಪಡಿಸಲಾಗಿದೆ. ನಾಗಶೆಟ್ಟಿ ಹಳ್ಳಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲೂ ಪೂಜೆ ಹಾಗೂ ಅಖಂಡ ಜಾಗರಣೆ ಏರ್ಪಡಿಸಲಾಗಿದೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಹಾಗೂ ದಕ್ಷಿಣಮುಖಿ ನಂದಿ ದೇವಸ್ಥಾನಗಳಲ್ಲೂ ಶಿವರಾತ್ರಿಯ ಸಂಭ್ರಮ ಕಾಣಿಸಿಕೊಂಡಿದೆ.

ಏರ್‌ಫೋರ್ಟ್‌ ರಸ್ತೆಯಲ್ಲಿ ಜ್ಯೋತಿರ್ಲಿಂಗಗಳಿಗೆ ವಿಶೇಷ ಪೂಜೆ : ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬೃಹತ್‌ ಶಿವ ಪ್ರತಿಮೆ ಹಾಗೂ 12 ಜ್ಯೋತಿರ್ಲಿಂಗಗಳಿಗೆ (ಸೌರಾಷ್ಟ್ರದ ಸೋಮನಾಥ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲ, ಕಾಶಿಯ ವಿಶ್ವನಾಥ, ದ್ವಾರಕದ ನಾಗೇಶ್ವರ, ರಾಮೇಶ್ವರದ ರಾಮನಾಥ, ಹಿಮಾಲಯ ತಪ್ಪಲಿನ ಅಮರನಾಥ, ಢಾಕಿನಿ ಮಹಾಬಲೇಶ್ವರ, ನಾಸಿಕದ ತ್ರಿಯಂಬಕೇಶ್ವರ, ಕೇದಾರದ ಕೇದಾರೇಶ್ವರ, ಓಂಕಾರದ ಮಮಲೇಶ್ವರ, ಬಿಹಾರದ ವಿದ್ಯಾನಾಥ) ವಿಶೇಷ ಶಿವರಾತ್ರಿ ಪೂಜೆ ನಡೆಸಲಾಗುವುದು.

ಭಕ್ತ ಮಾರ್ಕಂಡೇಯನಿಗೆ ನಮಸ್ಕಾರ : ಬುಲ್‌ಟೆಂಪಲ್‌ ರಸ್ತೆಯ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಭಕ್ತ ಮಾರ್ಕಂಡೇಯ ದೇವಸ್ಥಾನದಲ್ಲಿ ವಿಶೇಷ ಶಿವರಾತ್ರಿ ಪೂಜೆ ಹಾಗೂ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತುಮಕೂರಿನ ಸೋಮೇಶ್ವರ : ನಗರದ ಪ್ರಮುಖ ಸ್ಥಾನದಲ್ಲಿರುವ ಸೋಮೇಶ್ವರನಿಗೆ ಶಿವರಾತ್ರಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಹಳ್ಳಿಖೇಡದಲ್ಲಿ ಭಾರತದ ಅತಿದೊಡ್ಡ ಶಿವ ಪ್ರತಿಮೆ : ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲ್ಲೂಕಿನ ಹಳ್ಳಿಖೇಡ ಗ್ರಾಮದ ಕೈಲಾಸನಾಥ ದೇವಾಲಯದಲ್ಲಿ ಪ್ರಥಮ ಶಿವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಉತ್ಸವ ಸಮಿತಿ ಸಜ್ಜಾಗಿದೆ.

ಸುಂದರ ಪರಿಸರದ ನಡುವೆ ದೇಶದಲ್ಲೇ ಅತ್ಯಂತ ಬೃಹತ್ತಾದುದೆಂದು ಹೇಳಲಾಗಿರುವ 70 ಅಡಿ ಎತ್ತರದ ಏಕಶಿಲಾ ಶಿವನ ವಿಗ್ರಹವನ್ನು ಶಿವರಾತ್ರಿಯಂದು ಅನಾವರಣ ಮಾಡಲಾಗುವುದು. 500 ಟನ್‌ ಭಾರವಿರುವ ಶಿವನ ಮೂರ್ತಿ 20 ಕಿಮೀ ದೂರದಿಂದಲೇ ಭಕ್ತರಿಗೆ ಗೋಚರಿಸುತ್ತದೆ. ಹಳ್ಳಿಖೇಡ ಪ್ರದೇಶವನ್ನು ಕೈಲಾಸನಾಥೇಶ್ವರ ದೇವಸ್ಥಾನವೆಂದು ಕರೆಯಲಾಗುತ್ತಿದ್ದು , ಶಿವರಾತ್ರಿಯಂದು ದೇಶ ವಿದೇಶಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ದಿಬ್ಬೂರಿನಲ್ಲಿ ಸಂಗೀತ ಶಿವರಾತ್ರಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ದಿಬ್ಬೂರು ವೀರಪ್ಪ ನಂಜಮ್ಮ ಎಂಡೋಮೆಂಟ್‌ ಟ್ರಸ್ಟ್‌ , ಭಾರತ ಯಾತ್ರಾ ಕೇಂದ್ರ ಹಾಗೂ ಶ್ರೀ ವಿನಾಯಕ ಸೇವಾ ಸಮಿತಿಯ ಸಹಯೋಗದಲ್ಲಿ ಜಯನಗರದ ಎಂಟನೇ ಬ್ಲಾಕ್‌ನ ಒಂದನೇ ಮುಖ್ಯರಸ್ತೆಯಲ್ಲಿರುವ ಶಿವರಾತ್ರೀಶ್ವರ ಕೇಂದ್ರದಲ್ಲಿ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಗೀತ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಪ್ರಸಿದ್ಧರಾಗಿರುವ ಸೋಮನಾಥ ಮರಡೂರ, ರವೀಂದ್ರನಾಥ ಹಂದಿಗನೂರ, ರಘುಪತಿ ಹೆಗಡೆ, ವಿ.ಎಂ. ನಾಗರಾಜ್‌, ನಾಗಲಿಂಗಯ್ಯ ಹಾಗೂ ವಸ್ತ್ರದ ಮಠ ಭಾಗವಹಿಸುವರು.

ದೀಪಾಂಜಲಿನಗರದ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ : ಮೈಸೂರು ರಸ್ತೆಯಲ್ಲಿರುವ ದೀಪಾಂಜಲಿ ನಗರದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಫೆ. 19 ರಿಂದ ಫೆ. 23 ರವರೆಗೆ ವಿಶೇಷ ಪೂಜಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಫೆ. 21 ರ ಬುಧವಾರ, ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಶನೇಶ್ವರ ಬ್ರಹ್ಮ ರಥತ್ಸವ ಹಾಗೂ ವಿಶೇಷ ಮಹಾ ಶಿವರಾತ್ರಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.

ಮನೆ ಮನೆಯಲ್ಲಿ ಶಿವಭಕ್ತ ಕಣ್ಣಪ್ಪ : ಮಹಾ ಶಿವರಾತ್ರಿ ಪ್ರಯುಕ್ತ ಈ ಟಿವಿ ಕನ್ನಡ ವಾಹಿನಿಯು ಫೆ. 21 ರ ರಾತ್ರಿ 10.05 ಕ್ಕೆ ಭಾರ್ಗವ ನಿರ್ದೇಶನದ ಶಿವಭಕ್ತ ಕಣ್ಣಪ್ಪ ಟೆಲಿ ಚಿತ್ರವನ್ನು ಪ್ರಸಾರ ಮಾಡುವುದು. ಆನಂತರ ಎಂ.ಎಂ. ಕೀರವಾಣಿ ಅವರ ವಚನಗಾಯನ ಹಾಗೂ ಪಿ.ಆರ್‌. ಕೌಂಡಿಣ್ಯ ನಿರ್ದೇಶನದ ಶಿವರಾತ್ರಿ ಮಹಾತ್ಮೆ ಸಿನಿಮಾ ಪ್ರಸಾರವಾಗುವುದು. ಡಾ. ರಾಜ್‌ಕುಮಾರ್‌, ಲೀಲಾವತಿ, ಅಶ್ವಥ್‌, ನರಸಿಂಹರಾಜು ತಾರಾಗಣದಲ್ಲಿದ್ದಾರೆ.

ನಟರಾಜ ನಿನಗೆ ವಂದನೆ : ಬೆಂಗಳೂರಿನ ಶಿವಪ್ರಿಯ ನೃತ್ಯಶಾಲೆ ಶಿವರಾತ್ರಿ ಸಂಜೆ 6 ರಿಂದ ರಾತ್ರಿ 8 ರವರೆಗೆ ನಟರಾಜ ವಂದನ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ. ಕಾರ್ಯಕ್ರಮ ನಡೆಯುವ ಸ್ಥಳ : ಮಹಾನ್‌ ಶ್ರೀ ಒಡಕುತ್ತೂರ್‌ ಸ್ವಾಮಿಗಳ್‌ ಸಮಿತಿ, ನಂ. 13, ಗಂಗಾಧರ ಚೆಟ್ಟಿ ರಸ್ತೆ .

ಪೊಳಲಿಯ ಅಖಿಲೇಶ್ವರನಿಗೆ ವಿಶೇಷ ಪೂಜೆ : ಮಂಗಳೂರಿನ ಪೊಳಲಿಯ ಅಖಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಶಿವರಾತ್ರಿ ಪೂಜೆ ಏರ್ಪಾಟಾಗಿದೆ. ಕರಂಗಲ್‌ಪಾಡಿಯ ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಶರವು ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಾಟಾಗಿದೆ.

ಶಿರಾದ ಈಶ್ವರ, ಕಾಳಿಕಾದೇವಿ ದೇಗುಲಗಳಲ್ಲಿ ಶಿವಪೂಜೆ : ತುಮಕೂರು ಜಿಲ್ಲೆಯ ಶಿರಾದ ಶಿವದೇಗುಲ ಹಾಗೂ ಕಾಳಿಕಾದೇವಿ ದೇವಸ್ಥಾನಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಉತ್ಸವ ನಡೆಯಲಿವೆ.

ತುರುವೇಕೆರೆಯಲ್ಲಿ ವಿಶೇಷ ಪೂಜಾ ಉತ್ಸವ : ಪಟ್ಟಣದ ಗಂಗಾಧರೇಶ್ವರ ಹಾಗೂ ಮೂಲೆ ಶಂಕರೇಶ್ವರ ಸ್ವಾಮಿ ಸನ್ನಿಧಿಗಳಲ್ಲಿ ಶಿವರಾತ್ರಿ ಪ್ರಯುಕ್ತ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಅರಿಷಿಣಕುಂಟೆಯ ಮುಕ್ತನಾಥೇಶ್ವರನಿಗೆ ಶರಣು : ಹೊಯ್ಸಳರ ಕಾಲದ ಇತಿಹಾಸವುಳ್ಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಬಳಿಯಿರುವ ಮುಕ್ತನಾಥೇಶ್ವರನಿಗೆ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಸಲಾಗುವುದು.

ರಾಜ್ಯಾದ್ಯಂತ ಆಚರಣೆ : ಮುರ್ಡೇಶ್ವರ, ಗೋಕರ್ಣ, ಕುಕ್ಕೆ, ಘಾಟಿ, ಧರ್ಮಸ್ಥಳ, ಹೊರನಾಡು, ನಂಜನಗೂಡು, ಶಿವಗಂಗೆ, ಸಿದ್ಧಗಂಗೆ, ಕುಷ್ಟಗಿಯ ಭೂಕೈಲಾಸ ಕೋಟಿಲಿಂಗೇಶ್ವರ, ಹಂಪೆ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಪುಣ್ಯಕ್ಷೇತ್ರಗಳ ದೇಗುಲಗಳಲ್ಲೂ (ಶನೇಶ್ವರ ದೇಗುಲಗಳು ಸೇರಿದಂತೆ) ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಉತ್ಸವಗಳನ್ನು ಏರ್ಪಡಿಸಲಾಗಿದೆ.

English summary
Shiva Temples perform special pooja on the occassion of Shivarathri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X