ಬೆಂಗಳೂರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸುಗ್ಗಿ: ಹೂ,ಹಣ್ಣುಗಳ ದರ ಹೇಗಿದೆ?
ಬೆಂಗಳೂರು, ಜನವರಿ 13: ಬೆಂಗಳೂರಿನ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸುಗ್ಗಿ ಆರಂಭವಾಗಿದೆ. ಕೊರೊನಾವನ್ನು ಲೆಕ್ಕಿಸದೆ ಹಬ್ಬದ ತಯಾರಿಯಲ್ಲಿ ಜನರು ತೊಡಗಿದ್ದಾರೆ.
ಜನವರಿ 14 ರಂದು ಸಂಕ್ರಾಂತಿ ಹಬ್ಬ, ಹೀಗಾಗಿ ಮಾರುಕಟ್ಟೆಗಳು ಸೇರಿದಂತೆ ಎಲ್ಲೆಲ್ಲೂ ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿ, ಹೂವುಗಳ ರಾಶಿ ಕಂಡುಬರುತ್ತಿದೆ.
ಎಲ್ಲೆಡೆ ಖರೀದಿಯ ಸಂಭ್ರಮ ಮನೆಮಾಡಿದೆ. ಕೊರೊನಾದಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿರುವ ವ್ಯಾಪಾರಿಗಳು ಹಬ್ಬದ ನೆಪದಲ್ಲಿ ಸ್ವಲ್ಪ ಬೆಲೆ ಏರಿಸಿದ್ದಾರೆ.
ಬೆಲೆ ಏರಿಕೆ ನಡುವೆಯೂ ಗ್ರಾಹಕರು ತಂತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಖರೀದಿಯಲ್ಲಿ ತೊಡಗಿದ್ದಾರೆ.

ಎಲ್ಲೆಲ್ಲೂ ಕಬ್ಬಿನ ರಾಶಿ
ಹಬ್ಬದ ಹಿನ್ನಲೆ ಮಾರುಕಟ್ಟೆಗಳಿಗೆ ಟನ್ ಗಟ್ಟಲೆ ಕಬ್ಬು ಬಂದಿದೆ. ಹೀಗಾಗಿ ಎಲ್ಲಾ ಮಾರುಕಟ್ಟೆಗಳಲ್ಲಿ ಕಬ್ಬಿನ ಕಾರುಬಾರು ಜೋರಾಗಿದೆ. ಎಳ್ಳು-ಬೆಲ್ಲದ ಜತೆ ಕಬ್ಬನ್ನೂ ಕುಂಕುಮದ ಜತೆ ನೀಡುತ್ತಾರೆ. ಕೆಲವರು ಸಮೃದ್ಧಿಯ ಸಂಕೇತವೆಂದು ಕಬ್ಬಿನ ಜಿಲ್ಲೆಗಳನ್ನು ಬಾಗಿಲು ಮುಂದೆ ಕಟ್ಟಿ ಸಂಕ್ರಾಂತಿಯ ಸಡಗರವನ್ನು ಹೆಚ್ಚಿಸುತ್ತಾರೆ. ಸಗಟು ದರದಲ್ಲಿ ಬಿಳಿ ಕಬ್ಬು ಒಂದು ಜಿಲ್ಲೆಗೆ 30-40 ರೂ, ಕರಿಕಬ್ಬು40-50 ರೂ ನಿಗದಿಯಾಗಿದೆ. ಚಿಲ್ಲರೆ ಮಾರಾಟಗಾರರು ಗುಣಮಟ್ಟದ ಆಧಾರದ ಮೇಲೆ ಪ್ರದೇಶವಾರು ಒಂದು ಕಬ್ಬಿನ ಜಿಲ್ಲೆಗೆ 10 ರಿಂದ 30 ರೂ. ಹೆಚ್ಚಿನ ದರದಲ್ಲಿ ಮಾರುತ್ತಿದ್ದಾರೆ.

ಕೆಆರ್ ಮಾರುಕಟ್ಟೆ ಹೂವಿನ ದರ
ಕನಕಾಂಬರ 800-1200 ರೂ.
ನೀಲಾಂಬರ 400-600 ರೂ.
ಕಾಕಡ 350-500 ರೂ.
ಸೇವಂತಿ 160-200 ರೂ.
ಬಟನ್ಸ್ ಹೂವು 100-160 ರೂ.
ಬಿಡಿ ಗುಲಾಬಿ 180-150 ರೂ.
ಹಣ್ಣುಗಳ ದರ
ಸೇಬು 100-120 ರೂ.
ಮೂಸಂಬಿ 80-100 ರೂ.
ಸಪೋಟ 60 ರೂ.
ದಾಳಿಂಬೆ 180-200 ರೂ.
ಕಪ್ಪು ದ್ರಾಕ್ಷಿ 60-70 ರೂ.
ಬಿಳಿ ದ್ರಾಕ್ಷಿ 120-140 ರೂ.

ಕನಕಾಂಬರ ಕೆಜಿಗೆ 1000 ರೂ.
ಸಗಟು ಮಾರುಕಟ್ಟೆಯಲ್ಲಿ ಕನಕಾಂಬರ ಕೆಜಿ 800-1000 ರೂ.ಗೆ ಮಾರಾಟವಾಗುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಸೇವಂತಿ, ಗುಲಾಬಿ ಹೂವು ಕೆಜಿ 120-150 ರೂ. ನಿಗದಿಯಾಗಿದೆ. ಆದರೆ, ಚಿಲ್ಲರೆ ದರ ಕೆಜಿ 200-250 ರೂ.ಗೆ ಖರೀದಿಯಾಗುತ್ತಿದೆ. ಕಾಕಡ 300 ರೂ. ಚೆಂಡುಹೂವು 30-40 ರೂ., ಸುಗಂಧರಾಜ 90-100 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು ದುಪ್ಪಟ್ಟು ದರದಲ್ಲಿ ಮಾಡುತ್ತಿದ್ದಾರೆ. ಕೆಲವು ಹಣ್ಣುಗಳ ದರವೂ ಏರಿಕೆಯಾಗಿದೆ. ಮೂರು ದಿನಗಳ ಹಿಂದೆ ಕಿತ್ತಳೆ ಹಣ್ಣು 40 ರೂ ಇದ್ದಿದ್ದು, 80 ರೂ,ಗೆ ಏರಿಕೆಯಾಗಿದೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ, ಬೆಳೆಯೂ ಚೆನ್ನಾಗಿದೆ
ರಾಜ್ಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಬೆಳಯೂ ಚೆನ್ನಾಗಿದೆ. ಹೀಗಾಗಿ ಸುಗ್ಗಿ ಹಬ್ಬಕ್ಕೆ ಎಲ್ಲಾ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಇನ್ನೊಂದೆಡೆ ಸಗಟು ದರ ಕಡಿಮೆ ಇದ್ದರೂ ಚಿಲ್ಲರೆ ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.