• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರಾಯಣದ ಹೆಬ್ಬಾಗಿಲ ತೋರಣ,ಮಕರ ಸಂಕ್ರಮಣ

|

ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಸಂಕ್ರಾಂತಿ. ಪ್ರತ್ಯಕ್ಷ ಭಗವಾನ್ ಸೂರ್ಯದೇವೇ ರಾಶಿಗತಿಯನ್ನು ಬದಲಿಸಿ ಜನಜೀವನ ರೀತಿ ನಿರ್ದೇಶಿಸುವ ಶುಭಗಳಿಗೆ.ಇದರಿಂದ ಹಗಲು ಹೆಚ್ಚಾಗಿ ಕತ್ತಲಿನ ಸಮಯ ಕಡಿಮೆ. ಕಾಡುವ ಹೇಮಂತ ಶಿಶಿರವ ಹಿಂದಿಕ್ಕಲು ಪ್ರಬಲವಾಗುತ್ತ ವಸುಂಧರೆಗೆ ಪ್ರಿಯನಾದ ಚೈತ್ರನನ್ನು ಕರೆತರಲು ಉದ್ಯುಕ್ತನಾಗುತ್ತಾನೆ ಸೂರ್ಯ. ಕೊಯ್ಲಿಗೆ ಸಿದ್ಧವಾದ ಪೈರಿನ ಕೆಲವು ತೆನೆಗಳನ್ನು ಸಾಂಕೇತಿಕವಾಗಿ ಕೊಯ್ದು ತಂದು ಕೆಲವು ಕಾಳುಗಳನ್ನು ಹಾಕಿ ಪಾಯಸ ಮಾಡಿದರೆ ಉಪಯೋಗಿಸುವ ಮುನ್ನ ಧಾನ್ಯ ಪೂಜೆ ನಡೆದಂತೆ ಎನ್ನುವ ನಂಬಿಕೆ.

ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ವಿಶೇಷಗಳನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಕೊಳ್ಳುವುದೇ ಹಬ್ಬಗಳ ಪರಮಾರ್ಥ.ಮಕರ ಸಂಕ್ರಾಂತಿ ಸೌರಮಾನದ ಹಬ್ಬ. ಧಾರ್ಮಿಕ ಮಹತ್ವದ ಉತ್ತರಾಯಣ ಪ್ರಾರಂಭ ದೇವತೆಗಳಿಗೆ ಅತ್ಯಂತ ಪ್ರಿಯವಾದ ಕಾಲ. ಮಂಗಳ ಕಾರ್ಯಗಳನ್ನು ಮಾಡಲು ಪ್ರಶಸ್ತ. ಪವಿತ್ರ ನದಿಗಳಲ್ಲಿ ಸ್ನಾನ ಅತಿ ಪುಣ್ಯಕರ. ಮುಂದಿನ ಆರು ಮಾಸಗಳು ಸ್ವರ್ಗದ ಬಾಗಿಲು ತೆರೆದಿರುವುದೆಂಬ ಅಮೋಘ ನಂಬಿಕೆ. ಈ ಕಾಲದಲ್ಲಿ ದೇಹತ್ಯಾಗ ಮಾಡಿದವರಿಗೆ ಮೋಕ್ಷಪ್ರಾಪ್ತಿ ಎನ್ನುವ ಅಚಲ ವಿಶ್ವಾಸ ಹಲವರದು. ದೈಹಿಕ ದೋಷಗಳೊಡನೆ ಮಾನಸಿಕ ದೋಷ ನಿವಾರಿಸುವ ಪರ್ವಸಮಯ. ರೈತರಿಗೆ ಶ್ರೇಷ್ಠವಾದ ದಿನ, ಗೋವುಗಳನ್ನು ಸಿಂಗರಿಸಿ ಪೂಜಿಸುತ್ತಾರೆ. ಕೊಂಬುಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಸಂಕೇತ. ಅಯನ ದೇವತೆಗಳ ವಾಸಸ್ಥಾನ. ಅವೆರಡರ ಸಂಧಿ ಕಾಲದ ಸೂಚನೆಯ ಪ್ರತೀಕ.

ಸಂಕ್ರಾಂತಿ ಸುಗ್ಗಿ ಹಬ್ಬ. ಸೂರ್ಯನ ಪಥ ಬದಲಾವಣೆಯಷ್ಟೇ ಅಲ್ಲ. ವರ್ಷಪೂರ್ತಿ ಮೈಮುರಿದು ದುಡಿದ ರೈತನ ಮೊಗದಲ್ಲಿ ಮಂದಹಾಸ ಮೂಡುವ ಸಡಗರದ ಸಂದರ್ಭ. ಆದರೆ ಹಿಂದಿನಂತೆ ಸಂಭ್ರಮದ ಬದಲಾಗಿ ಇಳಿಮುಖವಾಗಿರುವ ಇಳುವರಿ ವಿಷಾದ ಉಣಿಸುತ್ತಿದೆ. ಇದಕ್ಕೆ ಕಾರಣ ಅತಿವೃಷ್ಠಿ ಅನಾವೃಷ್ಠಿ ಒಂದು ಕಾರಣವಾದರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲು ಸರ್ಕಾರಗಳು ಹೆಚ್ಚು ಆಸಕ್ತಿ ವಹಿಸಿದ್ದರಿಂದ ಸಂಕ್ರಾಂತಿ ಸವಕಲಾಗುತ್ತಿದೆ ; ಅರ್ಥಹೀನವಾಗುತ್ತಿದೆ. ಸಂಕ್ರಾಂತಿ ಸಂಸ್ಕೃತಿ ಮಕರ ಸಂಕ್ರಾಂತಿ ದಿನದಿಂದ ಉತ್ತರಾಯಣವು ಆರಂಭವಾಗುವುದರಿಂದ ದಕ್ಷಿಣಾಯಣದಲ್ಲಿ ಹೆಚ್ಚಿಗೆ ವಿಸರ್ಜಿಸಲ್ಪಟ್ಟಿರುವ ಶರೀರದ ಉಷ್ಣದ ಕೊರತೆಯನ್ನು ನಿವಾರಿಸಲು ಉಷ್ಣ ಪದಾರ್ಥಗಳನ್ನು ತೆಗೆದುಕೊಳ್ಳಬೇಕಾದುದರಿಂದ ಎಳ್ಳು ಸೇವಿಸೆಂದು ಹಿರಿಯರು ಹೇಳಿದರು. ವೈದ್ಯ ಶಾಸ್ತ್ರ ಮತ್ತು ಆಹಾರ ಶಾಸ್ತ್ರ ಪ್ರಕಾರ ಚರ್ಮ, ನೇತ್ರ ಮತ್ತು ಎಲುಬು ಇವುಗಳ ಬೆಳವಣಿಗೆಗೆ ಮತ್ತು ಇವುಗಳು ಸರಿಯಾದ ಸ್ಥಿತಿಯಲ್ಲಿರುವುದಕ್ಕೆ "ಎ" ಮತ್ತು "ಬಿ" ಅನ್ನಾಂಗಗಳು ಅತ್ಯವಶ್ಯಕ. ತೈಲ ಧಾನ್ಯವಾದ ಎಳ್ಳಿನಲ್ಲಿ ಈ ಅನ್ನಾಂಗಗಳು ಬೇಜಾನ್ ಇವೆ.

ಸಾಮಾನ್ಯವಾಗಿ ಎಳ್ಳನ್ನು ಅಶುಭ ಕಾರ್ಯಗಳಲ್ಲಿ ಮಾತ್ರ ಉಪಯೋಗಿಸುವ ವಾಡಿಕೆಯಿದೆ. ಆರೋಗ್ಯ ದೃಷ್ಠಿಯಿಂದಲೂ ಇದನ್ನು ನೇರವಾಗಿ ಉಪಯೋಗಿಸಕೂಡದು. ನಾವು ಸೇವನೆ ಮಾಡುವ ಆಹಾರ ಮತ್ತು ತಿಂಡಿಗಳಲ್ಲಿ ಇದನ್ನು ಸೇರಿಸಿ ತಯಾರು ಮಾಡಲಾಗುತ್ತದೆ. "ತಿಲ"ದಿಂದ "ತೈಲ" ಅಡಿಗೆಗೆ, ದೇವರ ದೀಪಕ್ಕೆ ಬಳಸುವುದುತ್ತಮವೆಂದರು. ನವಗ್ರಹಗಳಿಗೆ ಹೇಳಿದ ನವಧಾನ್ಯಗಳಲ್ಲಿ ಎಳ್ಳು ಒಂದು. ಶನಿಗ್ರಹಕ್ಕೆ ಹೇಳಿರುವುದು ಎಳ್ಳು. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲ ಧಾನ್ಯ. ಉಳಿದ ಎಂಟು ಧಾನ್ಯಗಳಲ್ಲಿ ಯಾವುವೂ ತೈಲ ಧಾನ್ಯಗಳಲ್ಲ. ಕೇವಲ ಎಳ್ಳನ್ನು ತಿಂದರೆ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಪಿತ್ತ ಹೆಚ್ಚಾಗುತ್ತದೆ.

ಆದ್ದರಿಂದ ಪಿತ್ತಹರವಾದ ಬೆಲ್ಲವನ್ನು ಜೊತೆಯಲ್ಲಿ ತೆಗೆದುಕೊಂಡರೆ ಶರೀರದಲ್ಲಿ ಕೊರತೆ ಉಂಟಾಗಿರುವ ಕೊಬ್ಬಿನ ಅಂಶವು ಸರಿದೂಗಿಸಲ್ಪಡುತ್ತದೆ. ಬೆಲ್ಲವೂ ಪಿತ್ತಗುಣವುಳ್ಳದ್ದಾದರೂ ಎಳ್ಳಿನ ಜೊತೆ ಸೇರಿದಾಗ ಪಿತ್ತ ಶಮನವಾಗಿ ಸ್ಥಿಮಿತಕ್ಕೆ ಸಹಾಯವಾಗುತ್ತದೆ. "ಉಷ್ಣೇನ ಉಷ್ಣಂ ಶೀತಲಂ" ಎನ್ನುವಂತೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳು ಬೆಲ್ಲ. ಹಸಿ ಎಳ್ಳಿನಲ್ಲಿರುವ ದೋಷಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಹುರಿದ ಎಳ್ಳನ್ನು ಸೇವಿಸಬೇಕು. ಇದರ ಜೊತೆಗೆ ರುಚಿಗೋಸ್ಕರ ಮತ್ತು ಕೊಬ್ಬಿನ ಅಂಶವಿರುವ ಕಡಲೆಕಾಯಿ ಬೀಜ, ಕೊಬ್ಬರಿ ಇತ್ಯಾದಿಗಳನ್ನು ಬೆರೆಸಿ ತಿನ್ನುವಂತೆ ಏರ್ಪಾಡು ಮಾಡಿದ್ದಾರೆ. ಆಗಲಿ ಎಳ್ಳು ಬೆಲ್ಲದ ಹಬ್ಬ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X