• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳ್ಳಿಕಡೆ ಒಂದು ಬಾರಿ ಪಿಕ್ನಿಕ್ಕಿಗೆ ಹೋಗಿಬನ್ನಿ

By ಪ್ರಸಾದ ನಾಯಿಕ
|

ದಕ್ಷಿಣಾಯಣ ಮುಗಿದು ಉತ್ತರಾಯಣ ಪುಣ್ಯಕಾಲ ಪ್ರಾರಂಭದ ದಿನ ಮಾಗಿಯ ಚಳಿ ಮುಗಿದು ಸೂರ್ಯ ತನ್ನ ಅಧಿಪತ್ಯವನ್ನು ಸ್ಥಾಪಿಸುವ ದಿನ. ಹಿಂದೂ ಧಾರ್ಮಿಕರಲ್ಲಿ ಭಾರೀ ಸಡಗರದ ಸಂಭ್ರಮದ ದಿನ. ಮನೆಮನೆಗಳಲ್ಲಿ ದೇವರ ಪೂಜೆ ಇತ್ಯಾದಿ ಮುಗಿಸಿ ಭರ್ಜರಿಯಾಗಿ ಹುಗ್ಗಿಯ ಊಟ ಹೊಡೆದು ಪುಟಾಣಿ ಹೆಣ್ಣುಮಕ್ಕಳಿಗೆ ಜರಿ ಲಂಗ ತೊಡಿಸಿ ಸಡಗರದಿಂದ ಎಳ್ಳು ಬೆಲ್ಲ ಬೀರಲು ಕಳಿಸುವ ತವಕ. ಅಂಗಡಿಯಿಂದ ತಂದ ಕಬ್ಬಿನ ಜಲ್ಲೆ, ಬೆಂಡು ಬತ್ತಾಸು, ಚುರುಮುರಿ, ಕುಸುರೆಳ್ಳು, ಸಕ್ಕರೆ ಅಚ್ಚು ಬಂಧುಬಾಂಧವರಿಗೆ ನೀಡುತ್ತ 'ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ' ಎಂದು ಹೇಳುವುದು ಹೇಳಿಸಿಕೊಳ್ಳುವುದು ಅಚ್ಚುಮೆಚ್ಚು.

ನಗರಗಳಲ್ಲಿನ ಆಚರಣೆ ಇಷ್ಟಕ್ಕೆ ಮುಗಿದೇ ಹೋಗಿಬಿಡುತ್ತದೆ. ಇನ್ಮೇಲಿಂದ ಬಿಸಿಲು ಶುರುವಪ್ಪಾ ಅಂತ ಗೊಣಗಾಡುತ್ತ ಫ್ಯಾನು ತಿರುವಿಕೊಳ್ಳುವರೇ ಎಲ್ಲ. ಅವರೆ ಹುಗ್ಗಿ ಸಖತ್ತಾಗಿತ್ತಪ್ಪ ಬ್ಯಾಡ ಅಂದ್ರೂ ಹೆಂಡತಿ ಎರಡು ತುತ್ತು ಜಾಸ್ತಿನೇ ಹಾಕಿದಳು ಅನ್ನುತ್ತಾ ನಿಬ್ಬರಾದ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ಬನೀನಿಲ್ಲದ ಮೈಯನ್ನು ತಂಪು ನೆಲಹಾಸಿನ ಮೇಲೆ ಚೆಲ್ಲುವವರೇ ಜಾಸ್ತಿ. ಸಂಕ್ರಾಂತಿ ದಿನ ಎಂತೆಂಥಾ ಸಿನೆಮಾ ಹಾಕಿದ್ದಾರೆ ಗೊತ್ತಾ... ರಜೆ ಹಾಕಿದ್ದೂ ಚೆನ್ನಾಗಾಯ್ತು... ಹೆಂಗಳೆಯರಿಗೆ ಅದೇ ಧ್ಯಾನ. ತಾವೂ ಊಟ ಮುಗಿಸಿ ಎಲೆ ಬಿಸಾಕಿ, ಅಡುಗೆ ಮನೆ ಈಗ್ಯಾವಳು ಕ್ಲೀನ್ ಮಾಡ್ತಾಳೆ ಅಂತ ಉಸ್ಸಂತ ಪಿಚ್ಚರು ನೋಡಲು ಕುಳಿತುಕೊಳ್ಳುವವರೇ.

ಇರಲಿ, ರಜೆಗಳಿರುವುದೇ ಸಖತ್ತಾಗಿ ದೇವರ ಪೂಜೆ ಮಾಡಿ, ಊಟ ಜಡಿದು, ನೆಂಟರಿಷ್ಟರೊಡನೆ ನಲಿದು ಕಾಲಕಳೆಯೋದಕ್ಕೇ. ರೇಷ್ಮೆ ಸೀರೆ ಹಬ್ಬಕ್ಕೆ ತೊಗೊಂಡ್ಯಾ? ಚೆನ್ನಾಗಿದೆ ಕಣೆ... ಇಲ್ಲ ಕಣೆ ಕಳೆದ ಬಾರಿ ತೊಗೊಂಡಿದ್ದು... ಈ ಸತಿ ತೊಗೊಳ್ಳೋದು ಯಜಮಾನ್ರು ಬ್ಯಾಡಂದ್ರು ಅಂತ ಉಭಯ ಕುಶಲೋಪರಿ ಮಾತನಾಡುತ್ತಾ ಕಾಲ ಕಳೆಯೋರೆ ಎಲ್ಲಾ.

ಇದೆಲ್ಲಾ ಸರಿ. ಆದರೆ, ಇಳೆ ತುಂಬ ನಳನಳಿಸುವ ಬತ್ತದ ಹೊದಿಕೆಯನ್ನು ತುಂಬಿಸುವ, ಗಿಡಮರಗಳಿಗೆಲ್ಲಾ ಕೆಂಜಿಗುರು ಬಣ್ಣದ ಓಕುಳಿ ತುಂಬಿಸುವ ಭೂತಾಯಿಯನ್ನು, ಬೀಸುವ ಗಾಳಿಗೆ ತೂಗಾಡುತ್ತಾ ನಲಿದಾಡುವ ತೆನೆಗಳಿಗೆ ಹೊಂಬಣ್ಣದ ರಂಗನ್ನು ತುಂಬುವ ನೇಸರನನ್ನು, ಚಳಿ ಗಾಳಿಯನ್ನು ಲೆಕ್ಕಿಸದೆ ನೇಗಿಲನ್ನು ಎಳೆದೆಳೆದು ಜಗತ್ತಿಗೆ ತುತ್ತನ್ನು ನೀಡುವ ನೇಗಿಯ ಯೋಗಿಯನ್ನು, ನೇಗಿಲ ಯೋಗಿಗೆ ಹೆಗಲನ್ನು ನೀಡುವ ಎತ್ತುಗಳನ್ನು ಪೂಜಿಸುವವರು ಯಾರು? ಏನನ್ನೂ ಬೇಡದ ಅವುಗಳಿಗೆ ಅರಿಷಿಣ ಕುಂಕುಮ ಏರಿಸಿ, ನಾವೆಂದಿಗೂ ನಿಮ್ಮ ಜೊತೆಗಿದ್ದೇವೆ ಅಂತ ಭಕ್ತಿಯಿಂದ ಕೈಮುಗಿಯುವವರು ಯಾರು?

ಹಳ್ಳಿಗಳು ಇಂದು ಹಳ್ಳಿಗಳಾಗಿ ಉಳಿದಿಲ್ಲ. 'ಉಳುವ ಯೋಗಿಯ ನೋಡಲ್ಲಿ ಉಳುವ ಯೋಗಿಯ ನೋಡಲ್ಲಿ' ಅಂದವರು, ಇಂದು ನಗರಗಳಲ್ಲಿ ಮನೆ ತಾರಸಿಗೆ ಸಿಮೆಂಟು ಕಲಸಿ ಹಾಕುವ, ಮನೆ ಚಾಕರಿಗಳಲ್ಲಿ ನಿರತರಾಗಿರುವ, ರಸ್ತೆ ಡಿವೈಡರುಗಳಿಗೆ ಹಳದಿ ಕಪ್ಪು ಬಣ್ಣ ಬಳಿಯುವ, ಸೆಕ್ಯುರಿಟಿ ಗಾರ್ಡ್ ಆಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ, ಯಾವುದೋ ಕಂಪನಿಗೆ ಪ್ಯೂನ್ ಆಗಿರುವ ಯೋಗಿಯನ್ನು ತೋರಿಸುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಂತೂ ಇದು ಅಕ್ಷರಶಃ ಸತ್ಯ. ಉತ್ತರ ಕರ್ನಾಟಕದ ಅನೇಕ ರೈತ ಕುಟುಂಬಗಳು ಗುಳೆಎದ್ದು ಬೆಂಗಳೂರಿಗೆ ಬಂದಿವೆ. 'ದುಡಿಮೆಯೆ ಬಡತನ ಅಳಿಸಲು ಸಾಧನ' ಅಂತ ಹಾಡಿದ ರೈತ ಹಳ್ಳಿಯಲ್ಲಿ ಅನುಭವಿಸಿದ ಬಡತನ ಅಳಿಸಿಹಾಕಲು ನಗರಕ್ಕೆ ಬಂದು ಕುಳಿತಿದ್ದಾನೆ. ಹೆಂಡತಿ ಮನೆಗೆಲಸ ಮಾಡಿ ಸಾವಿರದೈನೂರು ಎರಡುಸಾವಿರ ಗಳಿಸುತ್ತಾಳೆ. ಗಂಡ ಅದೂ ಇದೂ ಚಾಕರಿ ಮಾಡಿ ಏನಿಲ್ಲವೆಂದರೂ ಐದಾರು ಸಾವಿರ ಗಳಿಸುತ್ತಾನೆ. ಹಳ್ಳಿಯಲ್ಲಿದ್ದರೆ ಇದು ಸಾಧ್ಯವಿತ್ತಾ? ಮಕ್ಕಳನ್ನು ಶಾಲೆಗೆ ಕಳಿಸುವುದು ಶಕ್ಯವಿತ್ತಾ? ಗದ್ದೆಗಳಲ್ಲಿ ದುಡಿಯದಿದ್ದರೇನಾಯಿತು ನಗರ ಕೈತುಂಬ ಕಾಸು ನೀಡಿದೆ ಎಂದು ತರ್ಕಬದ್ಧವಾಗಿ ಮಾತಾಡಲು ಶುರು ಮಾಡಿದ್ದಾನೆ ರೈತ.

ರೈತನ ಜೀವನ ಹೇಗೋ ಏನೋ ಒತ್ತಟ್ಟಿಗಿರಲಿ, ಇಂದಿನ ಪೀಳಿಗೆಯ ನಗರದ ಮಕ್ಕಳಿಗೆ, ನಗರದಲ್ಲೇ ಬೆಳೆದು ದೊಡ್ಡವರಾದ ದೊಡ್ಡವರಿಗೆ ನಾಡಿನ ಜೀವನಾಡಿಯಾಗಿರುವ ಉಳುಮೆ, ಬಿತ್ತನೆ, ರೈತನ ದುಡಿಮೆ, ಹೊಲ-ಗದ್ದೆ ಇವುಗಳ ಬಗ್ಗೆ ಕಲ್ಪನೆಯಾದರೂ ಎಷ್ಟಿದೆ? ಬಸ್ಸಿನಲ್ಲೋ ರೈಲಿನಲ್ಲೋ ಹೋಗುವಾಗ ಮತ್ತು ಟಿವಿಗಳಲ್ಲಿ ನೋಡಿದ್ದೆಷ್ಟೋ ಅಷ್ಟು. ಹಳ್ಳಿಯಲ್ಲಿದ್ದ ಅಜ್ಜ ಅಜ್ಜಿಯರೇ ಪಟ್ಟಣ ಬಂದು ಸೇರಿಯಾದ ಮೇಲೆ ಮೊಮ್ಮಕ್ಕಳು ಹಳ್ಳಿಗೆ ಹೋಗಿಯಾದರೂ ಏನು ಮಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬಲು ಕಷ್ಟ.

ನಗರದ ಮಕ್ಕಳಿಗೆ ಶಾಲಾ ಅಧ್ಯಯನ ಪ್ರವಾಸ ಕೈಗೊಳ್ಳುವ ಶಿಕ್ಷಕರು ಯಾವುದೋ ಊರು, ಯಾವುದೋ ಫ್ಯಾಕ್ಟರಿ, ಯಾವುದೋ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುವ ಬದಲು ಹಳ್ಳಿಗಳಿಗೆ ಏಕೆ ಕರೆದುಕೊಂಡು ಹೋಗಬಾರದು? ಅಲ್ಲಿನ ಹೊಲಗಳು, ರೈತರು, ಅವರ ಜೀವನ, ಗದ್ದೆಯ ಮೊಣಕಾಲುದ್ದ ಕೆಸರಿನಲ್ಲಿ ನಾಟಿ ಮಾಡುವುದನ್ನು, ಬೆಳೆದ ಬೆಳೆ ಸಂಸ್ಕರಿಸುವುದನ್ನು, ಹಳ್ಳಿಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯ ಏಕೆ ಮಾಡಿಕೊಡಬಾರದು? ಇಂಥದೊಂದು ಪ್ರಯೋಗವನ್ನು ಸರ್ಕಾರವೇ ಮಾಡಬೇಕು. ನಗರದ ಟೆಕ್ಕಿಗಳಾದರೂ ಅಷ್ಟೇ, ವೀಕೆಂಡು ಬಂದರೆ ಟ್ರೆಕ್ಕಿಂಗು, ಸರ್ಫೀಂಗು, ಸೈಟ್ ಸೀಯಿಂಗು ಅಂತ ಹೆಂಡತಿ ಮಕ್ಕಳೊಡನೆ ತಿರುಗಾಡುವ ಬದಲು ಹಳ್ಳಿ ಜೀವನದ ಪರಿಚಯ ಮಾಡಿಕೊಳ್ಳಬಾರದೇಕೆ? ಮಡಿಕೇರಿಗಳಲ್ಲಿನ ಹೋಂಸ್ಟೇ ತರಹ ಹಳ್ಳಿಜೀವನದ ಪರಿಕಲ್ಪನೆಗೆ ಮುನ್ನುಡಿ ಹಾಡಬಾರದೇಕೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How About a picnic to the farmers yard? An article by Prasad Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more