ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!

By ಸ. ರಘುನಾಥ
|
Google Oneindia Kannada News

ತಿಂಡಿ, ತಿನಿಸು, ಊಟವೆಂದರೆ ಭೋಜನಪ್ರಿಯರಿರಲಿ, ಯೋಗಿಯೂ ಕೊಂಚ ರುಚಿ ನೋಡಿಬಿಡುವ ಅಂದುಕೊಳ್ಳುವುದುಂಟು. ಅವುಗಳ ಗಮ್ಮತ್ತೇ ಅಂಥದ್ದು. ಭೋಜನವೂ ಒಂದು ಸಂಸ್ಕೃತಿ, ಸಂಪ್ರದಾಯ, ಆಚಾರ. ರುಚಿಯಂತೆ ಶುಚಿಯೂ ಆರೋಗ್ಯಕ್ಕೆ ಪೂರಕ.

ಪ್ರೊ. ಹುಚ್ಚೂರಾಯ ಸಿನೆಮಾದಲ್ಲಿ '..ಖಾರದ ಅಡುಗೆ ಏನೇ ಮಾಡಲಿ ಕಾಯ್ತುರಿ ಹುಳಿ ಮುಂದಿರಬೇಕು, ರುಚಿಯೂ ಬೇಕು, ಶುಚಿಯೂ ಬೇಕು' ಎಂಬ ಹಾಡಿದೆ. ಮಾಯಾಬಜಾರ್, ಸತ್ಯಹರಿಶ್ಚಂದ್ರ ಸಿನೆಮಾಗಳಲ್ಲಿ ಕನ್ನಡ ನಾಡಿನ ಅಡುಗೆಗಳ ಪಟ್ಟಿಯೇ ಇದೆ.

ಕವಿ ಮಂಗರಸ ತನ್ನ 'ಸೂಪಶಾಸ್ತ್ರ' ಕಾವ್ಯವನ್ನು ಅಡುಗೆಗಳಿಗಾಗಿಯೇ ಮೀಸಲಿಟ್ಟು, ನೂರಾರು ಪದಾರ್ಥಗಳನ್ನು ವಿವರಿಸಿದ್ದಾನೆ. ಕನ್ನಡದವರ ಊಟೋಪಚಾರಗಳು ಆರೋಗ್ಯದ ಗುಣಗಳನ್ನೂ ಹೊಂದಿವೆ. ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿರುವ ನವೆಂಬರ್ ತಿಂಗಳಿನಲ್ಲಿ ಸಾಧ್ಯವಾಗುವ ಉಣಿಸುಗಳನ್ನು ತಯಾರಿಸಿ, ಉಂಡು, ಬೇಕಾದವರಿಗೂ ಕೊಟ್ಟು ಆನಂದಿಸಿ ಸುಖಿಸಬಹುದಲ್ಲವೆ?

ಉಪ್ಪಿಟ್ಟು, ದೋಸೆ, ಇಡ್ಲಿ, ಚಿತ್ರಾನ್ನ

ಉಪ್ಪಿಟ್ಟು, ದೋಸೆ, ಇಡ್ಲಿ, ಚಿತ್ರಾನ್ನ

ಉಪಾಹಾರ, ನಾಸ್ಟ, ತಿಂಡಿಯಿಂದ ನಮ್ಮ ದಿನದ ಉಣ್ಣಿಕೆ ಪ್ರಾರಂಭ. ಇಲ್ಲಿ ನಮ್ಮ ಉಣಿಸುಗಳಾಗಿ ಇದ್ದವು(ಕೆಲವು ಇಂದೂ ಇವೆ); ಉಪ್ಪಿಟ್ಟು, ದೋಸೆ, ಇಡ್ಲಿ, ಚಿತ್ರಾನ್ನ, ಒಗ್ಗರಣೆ ಅನ್ನ ಮಾಮೂಲು. ಉಪ್ಪಿಟ್ಟೆಂದರೆ ರವೆ, ಅಕ್ಕಿತರಿಯದು. ರಾಗಿ ಉಪ್ಪಿಟ್ಟು ಮರೆತೇ ಹೋಗಿರುವಂಥದು.

ಇದು ರುಚಿಗೆ ರುಚಿ, ದೇಹಕ್ಕೆ ತಂಪು

ಇದು ರುಚಿಗೆ ರುಚಿ, ದೇಹಕ್ಕೆ ತಂಪು

ಹಸಿಹಿಟ್ಟನ್ನು ಮಜ್ಜಿಗೆ ಅಥವಾ ಮೊಸರಿನಲ್ಲಿ ನೆನಸಿಟ್ಟು, ಒಗ್ಗರಣೆ ಮಾಡಿ, ಕಲೆಸಿಟ್ಟ ಹಿಟ್ಟನ್ನು ಹಾಕಿ. ಬೇಕಿದ್ದರೆ ನಾಲ್ಕು ಕಾಳು ಜೀರಿಗೆ ಹಾಕಿ. ಕೊತ್ತಂಬರಿ ಸೊಪ್ಪನ್ನೂ ಹಾಕಬಹುದು. ಮಜ್ಜಿಗೆ ಇಲ್ಲವೆ ಮೊಸರಿನಲ್ಲಿ ಕಲೆಸಿ ತಿನ್ನಬಹುದು. ಇದು ರುಚಿಗೆ ರುಚಿ, ದೇಹಕ್ಕೆ ತಂಪು. ಇನ್ನು ಸಾದಾ, ಮಸಾಲೆ, ಬೆಣ್ಣೆ, ನೀರುದೋಸೆಗಳು ಯಾವ ಕನ್ನಡಿಗನಿಗೆ ಪರಿಚಯವಿಲ್ಲ?

ತಿಂದವರಷ್ಟೇ ಬಲ್ಲರು ‘ತಂಗಳರುಚಿ'ಯನ್ನು

ತಿಂದವರಷ್ಟೇ ಬಲ್ಲರು ‘ತಂಗಳರುಚಿ'ಯನ್ನು

ಬೆಳಗಿನ ಆಹಾರವನ್ನು ತಂಗಳು ಎಂಬುದು ರೂಢಿ. ಇದು ರಾತ್ರಿ ಉಳಿದದ್ದು. ಅದಕ್ಕೇ ಇದು ತಂಗಳು. ತಂಗಳುಮುದ್ದೆ, ಅನ್ನಕ್ಕೆ ತಂಗಳು ಬಸಿದಸಾರು, ಕಾಳುಹುಳಿ, ಸೊಪ್ಪಿನಸಾರು ಹೆಸರಾದುದು. ತಂಗಳಿಗೆ ಅದರದೇ ಆದ ಪರಿಮಳ, ರುಚಿಗಳುಂಟು. ಇದನ್ನು ತಿಂದವರಷ್ಟೇ ಬಲ್ಲರು 'ತಂಗಳರುಚಿ'ಯನ್ನು. ಸಾರು ಕೊಂಚವೇ ಕೊಂಚ ಹಳಸಿದ್ದರಂತೂ ಅದರ ಮಜವೇ ವರ್ಣನಾತೀತ!

ಮುದ್ದೆಗೆ ‘ಹಸಿಗೊಜ್ಜು' ಮಹಾದ್ಭುತ

ಮುದ್ದೆಗೆ ‘ಹಸಿಗೊಜ್ಜು' ಮಹಾದ್ಭುತ

ಈ ತಂಗಳನ್ನ, ಮುದ್ದೆಗೆ 'ಹಸಿಗೊಜ್ಜು' ಮಹಾದ್ಭುತ. ನಿಂಬೆ ಗಾತ್ರದ ಹುಣಿಸಿಹಣ್ಣು(ಟೊಮೆಟೊ), ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಇಷ್ಟೇ. ತಯಾರಿಸಲು ಐದು ನಿಮಿಷವೂ ಜಾಸ್ತಿ. ಅನ್ನಕ್ಕೆ ಬಸಿದ ಗಂಜಿ, ಈರುಳ್ಳಿ ಒಗ್ಗರಣೆ ಹಾಕಿ ಜುರಿಯುತ್ತ ತಿನ್ನುತ್ತಿದ್ದರೆ... ಮಾತೇಕೆ ತಿಂದು ನೋಡಿ. ಇದೂ ದೇಹಕ್ಕೆ ತಂಪೀಯುತ್ತದೆ.

ರಾತ್ರಿ ಮುದ್ದೆ ಮಾಡುವಾಗ ಅಡಿಸೀದರೆ ನೆನೆಸಿಟ್ಟು

ರಾತ್ರಿ ಮುದ್ದೆ ಮಾಡುವಾಗ ಅಡಿಸೀದರೆ ನೆನೆಸಿಟ್ಟು

ರಾತ್ರಿ ಮುದ್ದೆ ಮಾಡುವಾಗ ಅಡಿಸೀದರೆ ನೆನೆಸಿಟ್ಟು, ಕೆರೆದು ಹಸಿ ತ್ಯಾಜಮಾಡುವ ಬದಲು ಅದನ್ನು ಹಾಗೇ ಬಿಟ್ಟರೆ ನಾವು ತಟ್ಟಲಾಗದಷ್ಟು ತೆಳ್ಳಗೆ ಏಳುತ್ತದೆ. ಅದಕ್ಕೆ ಈರುಳ್ಳಿ ನೆಂಜಿಕೊಂಡು ತಿಂದರೆ ಖಮ್ಮಗಿರುವುದಲ್ಲದೆ, ಹೊಟ್ಟೆಯೂ ತುಂಬುತ್ತದೆ. ತ್ಯಾಜ್ಯವೂ ಕಡಿಮೆಯಾಗುತ್ತದೆ. ಬಿಸಿ ಅನ್ನ ಮಾಡಿದರೆ, ಬೇಕಷ್ಟು ಖಾರಕ್ಕೆ ಮೆಣಸಿನಪುಡಿ, ಉಪ್ಪು, ಈರುಳ್ಳಿ, ಕೊತ್ತಂಬರಿಸೊಪ್ಪು, ಕೊಂಚ ಎಣ್ಣೆ, ಅಥವಾ ತುಪ್ಪ ಹಾಕಿ ಕಲೆಸಿ ತಿನ್ನಿ. ಅದರ ರುಚಿಯ ಸ್ವರ್ಗ ಸುಖ ಅನುಭವಿಸಿ.

ಮಾಡಬಹುದಾದದ್ದು ಈ ಗೊಜ್ಜುಗಳು

ಮಾಡಬಹುದಾದದ್ದು ಈ ಗೊಜ್ಜುಗಳು

ಮಧ್ಯಾಹ್ನದ ಊಟವೆಂದರೆ ಅನ್ನ, ಮುದ್ದೆ, ಸಾರು, ಇತ್ಯಾದಿ. ವಾರಕ್ಕೆರಡು ದಿನವಾದರೂ ಹುಳಿ, ಸಾರಿಗೆ ಬದಲು ಮಾಡಬಹುದಾದದ್ದು ಈ ಗೊಜ್ಜುಗಳು: ಒಂದೆರಡು ಬದನೇಕಾಯಿ, ಬೆಂಡೆಕಾಯಿ, ಆಲೂಗೆಡ್ಡೆ, ಹಸಿಮೆಣಸಿನಕಾಯನ್ನು ಸುಟ್ಟು(ಬೇಯಿಸಲೂ ಬಹುದು) ಹುಣಿಸೆಹಣ್ಣಿನ ನೀರಿನಲ್ಲಿ ಕಿವುಚಿ. ಹೀರೇಕಾಯಿಯನ್ನೂ ಹೀಗೆ ಮಾಡಬಹುದು.

ಚಪಾತಿ, ರೊಟ್ಟಿಗೆ ಒಳ್ಳೆಯ ವ್ಯಂಜನ

ಚಪಾತಿ, ರೊಟ್ಟಿಗೆ ಒಳ್ಳೆಯ ವ್ಯಂಜನ

ಇದೇ ರೀತಿ ಹುರುಳಿ, ಮೆಣಸಿನಕಾಯನ್ನು ಬೇಯಿಸಿ ರುಬ್ಬಿದರೆ ಚಟ್ನಿಯಾಗುವುದು. ಕೊಂಚ ನೀರು ಹಾಕಿದರೆ ಬಜ್ಜಿಯಾಗುತ್ತೆ. ಇದನ್ನು ಹಳ್ಳಿಗಳಲ್ಲಿ 'ನೂರುಸಾರು' ಅನ್ನುವರು. ಹುರುಳಿ ಹುರಿದು, ಮಂದವಾದ ಹುಣಿಸೆನೀರಿನಲ್ಲಿ ಬೇಯಿಸಿ. ಬೇಯಿಸುವಾಗಲೇ ಒಣಮೆಣಸಿನಕಾಯನ್ನು ಮುರಿದು ಹಾಕಿ. ಜೊತೆಗೆ ಬೆಳ್ಳುಳ್ಳಿ. 'ಗೊಜ್ಜುಹುರುಳಿ' ತಯಾರು. ಚಪಾತಿ, ರೊಟ್ಟಿಗೆ ಒಳ್ಳೆಯ ವ್ಯಂಜನ.

‘ಸಿರಿಧಾನ್ಯ'ವೇ ‘ತೃಣಧಾನ್ಯ'

‘ಸಿರಿಧಾನ್ಯ'ವೇ ‘ತೃಣಧಾನ್ಯ'

ಈಗ ಪ್ರಚಾರಕ್ಕೆ ತಂದು, ಲಾಭ ಮಾಡಿಕೊಳ್ಳುತ್ತಿರುವ 'ಸಿರಿಧಾನ್ಯ'ವೇ 'ತೃಣಧಾನ್ಯ'. ಸಾಮೆ, ಬರುಗು, ನವಣೆ, ಸಜ್ಜೆ, ಹಾರಕ, ಸಾಮೆ(ಹರಿಸಾಮೆ, ಕರಿಸಾಮೆ), ನವಣೆ ಇತ್ಯಾದಿ. ಇವುಗಳಿಂದ ಅನ್ನ, ರೊಟ್ಟಿ, ಉಪ್ಪಿಟ್ಟು, ಹುಗ್ಗಿ, ಸ್ಯಾವಿಗೆ ಮಾಡುವರು. ಇವು ಕೊಂಚ ಮಂದ(ಮಲಬದ್ಧತೆ) ಉಂಟು ಮಾಡುವುದನ್ನು ಅರಿತ ಜಾನಪದರು ಆ ಅಡ್ಡಪರಿಣಾಮದ ನಿವಾರಣೆಗೆ ಮಜ್ಜಿಗೆ, ಮೊಸರನ್ನು ಹೆಚ್ಚಾಗಿ ಬಳಸುವರು. ಗಿಣ್ಣು ಮಾಡುವಾಗ ನವಣೆ, ಸಾಮೆ ಅಕ್ಕಿಯನ್ನು ಬಳಸಿದರೆ ಒಳ್ಳೆಯದು.

ಹಸಿಮೆಣಸಿನಕಾಯಿ ಹಾಕಿ ನೀರೊಟ್ಲು

ಹಸಿಮೆಣಸಿನಕಾಯಿ ಹಾಕಿ ನೀರೊಟ್ಲು

ಸಂಜೆ ತಿಂಡಿಗೆ ಗೋಧಿ, ರಾಗಿ ಹಾಲಿನಿಂದ ತಯಾರಿಸಿದ ಹಾಲ್‍ಬಾಯಿ ಎಲ್ಲರಿಗೂ ಒಳ್ಳೆಯದು. ಸಿಹಿ ಬಾಯಿಗೆ ಖಾರಕ್ಕಾಗಿ ಕಾರದವಲಕ್ಕಿ, ಮಂಡಕ್ಕಿ, ಅಕ್ಕಿಚಕ್ಕುಲಿ, ನಿಪ್ಪಟ್ಟು ಆಯಿತು. ಇಡ್ಲಿ ಹಿಟ್ಟು ಉಳಿದಿದ್ದರೆ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ನೀರೊಟ್ಲು ಅಥವಾ ಪುಟ್ಟು ಮಾಡಿಕೊಂಡರೆ ಚೆನ್ನ.

ಒತ್ತು ಸ್ಯಾವಿಗೆ ಮಾಡಬಹುದಲ್ಲ?

ಒತ್ತು ಸ್ಯಾವಿಗೆ ಮಾಡಬಹುದಲ್ಲ?

ರಾತ್ರಿ ಊಟಕ್ಕೆ ಚಪಾತಿ ಅನ್ನುವ ಬದಲು ಒತ್ತು ಸ್ಯಾವಿಗೆ ಮಾಡಬಹುದಲ್ಲ? ಮಕ್ಕಳು ಟಿವಿ, ಮೊಬೈಲು ಅಂತ ಕೂರುವ ಬದಲು ಸ್ಯಾವಿಗೆ ಒತ್ತಬಹುದು. ಹಾಗೆ ಒತ್ತುವಾಗ ಬರುವ 'ಪಿರ್, ಪುರ್‍ಉಸ್ಕ್' ನಾದವನ್ನು ಖುಷಿಯಿಂದ ಅನುಭವಿಸುವರು. ಒತ್ತುವುದೂ ಒಂದು ಆಟವಾಗದಿರದು. ಅವರು ಮುಕ್ಕಿಮುಕ್ಕಿ ಒತ್ತುವಾಗ ನಿಮಗೆ ನಗೆ ಬರದಿರದು. ಅಂಥ ನಗು 'ಒತ್ತಡ'ಗಳನ್ನು ನಿವಾರಿಸುತ್ತದೆ. ಮಕ್ಕಳಲ್ಲಿ ಒತ್ತುವ ಪೈಪೋಟಿಯೂ ಇರುತ್ತದೆ.

‘ಬಿಗುವು'ಗಳನ್ನು ನಿವಾರಿಸಿಕೊಳ್ಳಿ

‘ಬಿಗುವು'ಗಳನ್ನು ನಿವಾರಿಸಿಕೊಳ್ಳಿ

ತಾವು ತಯಾರಿಸಿದ್ದೆಂಬ ಅಭಿಮಾನದಲ್ಲಿ ತಿನ್ನಲು ಹಟಮಾಡದೆ ತಿನ್ನುವ ಅವಕಾಶವಿದೆ. ಇಂಥ ಹಾಸ್ಯ ಪ್ರಸಂಗಗಳಿಗೆ ಬರವಿರದು. ಇದನ್ನು ಅಡುಗೆ ಮನೆಯ ಹಾಸ್ಯವೆಂದು ಗೆಳೆಯರೊಂದಿಗೆ ಹಂಚಿಕೊಂಡು ನಗಿರಿ, ನಗಿಸಿರಿ. 'ಬಿಗುವು'ಗಳನ್ನು ನಿವಾರಿಸಿಕೊಳ್ಳಿ. ಕೂಡಿ ಮಾಡುವುದು, ಉಣ್ಣುವುದಕ್ಕಿಂತಲೂ ಬೇರೊಂದು ಸುಖವಿರದು. ರಾತ್ರಿ ಹೊತ್ತು ಮನೆಮಂದಿ ಕೂತು 'ಕೈತುತ್ತು' ಉಣ್ಣುವುದು ಅಪ್ಯಾಯತೆಗೆ ದಾರಿ. ತಟ್ಟೆ ತೊಳೆಯುವಷ್ಟಾದರೂ ನೀರಿನ ಉಳಿತಾಯವಾಗುತ್ತದೆ.

ಕನ್ನಡ ರಾಜ್ಯೋತ್ಸವವನ್ನು ಆಚರಿಸಬಹುದಲ್ಲವೆ?

ಕನ್ನಡ ರಾಜ್ಯೋತ್ಸವವನ್ನು ಆಚರಿಸಬಹುದಲ್ಲವೆ?

ಈಗ 'ನಮ್ಮ ಸಂಸಾರ ಆನಂದ ಸಾಗರ' ಎಂಬುದು ಬರೀ ಹಾಡಷ್ಟೇ ಆಗಿರದು. ಅದಕ್ಕೆ 'ನಮ್ಮ ಊಟ ಸುಖದಾನಂದಕಾರಕ' ಎಂದು ವೃಂದಗಾನ ಹಾಡುತ್ತ ಕನ್ನಡ ರಾಜ್ಯೋತ್ಸವವನ್ನು ಆಚರಿಸಬಹುದಲ್ಲವೆ?

English summary
Kannada Rajyotsava is not just about talking in Kannada or remembering the people who had fought for Karnataka Ekikarana. It is all about remembering, savouring the local food with Kannada flavour. Sa Raghunatha from Kolar takes you all to the new world of food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X