ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಅಮ್ಮ ಲೀಲಾವತಿ

By Staff
|
Google Oneindia Kannada News

ಇದೇ ಮೊದಲ ಬಾರಿಗೆ ನನ್ನ ಅಮ್ಮನನ್ನು ಕುರಿತು ಲೇಖನವನ್ನು ಬರೆಯುತ್ತಿದ್ದೇನೆ. ಕರ್ನಾಟಕದ ಪ್ರಖ್ಯಾತ ಸುಗಮ ಸಂಗೀತ ಗಾಯಕಿ ಶ್ರೀಮತಿ ಎಚ್‌.ಆರ್‌. ಲೀಲಾವತಿ ಅವರನ್ನು ಕುರಿತು ಏನನ್ನೂ ಬರೆಯುತ್ತಿಲ್ಲ. ಅದೇ ವ್ಯಕ್ತಿಯನ್ನು ತಾಯಿಯಾಗಿ ಪಡೆದಿರುವ ನಾನು ಈ ಲೇಖನವನ್ನು ಬರೆಯುತ್ತಿದ್ದೇನೆ.

ಈಗಲೂ ನನಗಿನ್ನೂ ನೆನಪಿದೆ. ಪ್ರಾಯಶಃ ನನಗಾಗ ಮೂರೋ ನಾಲ್ಕೋ ವರ್ಷ. ಪ್ರತಿ ಸಂಜೆ ಸುಮಾರು ಐದೂವರೆಯ ಹೊತ್ತಿಗೆ ನಮ್ಮ ಮನೆಯ ಆಚೆ ನಿಂತಿರುತ್ತಿದ್ದೆ. ಆಗ ನಮ್ಮ ಮನೆಯ ಸುತ್ತ ಈಗಿನಷ್ಟು ಜನ ಸಂಚಾರ ಇರಲಿಲ್ಲ. ದೂರದಲ್ಲಿ ಯಾರಾದರೂ ನಡೆದುಕೊಂಡು ಬರುತ್ತಿದ್ದರೆ, ಮೊದಲೇ ಚುರುಕಾದ ನನ್ನ ಕಣ್ಣುಗಳು ಮತ್ತಷ್ಟು ಚುರುಕಾಗುತ್ತಿದ್ದವು. ಅದೇನಾದರೂ ನಮ್ಮಮ್ಮ ಅಂತ ಗೊತ್ತಾದರೆ, ಬುಡು ಬುಡು ಓಡುತ್ತಿದ್ದೆ. ಓಡಿ ಹೋಗಿ ಅಮ್ಮನನ್ನು ಜೋರಾಗಿ ತಬ್ಬಿಕೊಳ್ಳುತ್ತಿದ್ದೆ. ಚೋಟುದ್ದ ಇದ್ದ ನಾನು ಅಮ್ಮನ ಮಂಡಿಯ ಎತ್ತರಕ್ಕೆ ಬಂದರೆ ಹೆಚ್ಚು. ಆಗ ನನಗಾಗುತ್ತಿದ್ದ ಸಂತೋಷವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಅಮ್ಮ ಆಕಾಶವಾಣಿಗೆ ಕೆಲಸಕ್ಕೆ ಹೋಗಲು ನನ್ನ 'ಅನುಮತಿ" ಪೂರ ಇತ್ತು. ನಾನು ಒಂದಿಷ್ಟೂ ತಂಟೆ ಮಾಡುತ್ತಿರಲಿಲ್ಲ. ಆದರೆ, ಸಂಜೆ ಅಮ್ಮ ಕೆಲಸದಿಂದ ಮನೆಗೆ ಬಂದ ಮೇಲೆ ಮುಗಿಯಿತು. ಒಂದು ನಿಮಿಷವೂ ನಾನು ಅಮ್ಮನನ್ನು ಬಿಟ್ಟಿರುತ್ತಿರಲಿಲ್ಲ.

ಸಂಜೆ ಹೊತ್ತು ಮನೆಯಲ್ಲಿ ಭಾವಗೀತೆ ಪಾಠ ನಡೆಯುತ್ತಲೇ ಇತ್ತು. ಬೇಕಾದಷ್ಟು ವಿದ್ಯಾರ್ಥಿಗಳು ಬರುತ್ತಿದ್ದರು. ನಾನು ಇಂಥ ಸಂಗೀತಮಯ ವಾತಾವರಣದಲ್ಲೇ ಬೆಳೆದದ್ದು. ಅಮ್ಮ ಹಾಡುವ ಪ್ರತಿಯಾಂದು ಹಾಡೂ ನನಗೆ ಬರುತ್ತಿತ್ತು. ತೀರ ಅಪರೂಪಕ್ಕೆ ಅಮ್ಮ ಯಾವುದಾದರೂ ಕವಿತೆಯ ಸಾಹಿತ್ಯ ಮರೆತರೆ ನೆರವಿಗೆ ತಕ್ಷಣ ನಾನಿರುತ್ತಿದ್ದೆ. ಹೀಗಾಗಿ ಸಂಗೀತ ಹಾಗೂ ಸಾಹಿತ್ಯ ನನ್ನ ಜೀವನದ ಮುಖ್ಯ ಅಂಗಗಳಾಗಿದ್ದು ಆಶ್ಚರ್ಯಕರವೇನಲ್ಲ, ಅಲ್ಲವೆ?

ಬಲು ಇಷ್ಟ ಅಮ್ಮ ನೀನು ಕಥೆ ಹೇಳುವ ರೀತಿ : ಎಲ್ಲ ಮಕ್ಕಳಿಗೂ ಕಥೆಗಳು ಎಂದರೆ ಪಂಚಪ್ರಾಣ. ಅದರಲ್ಲೂ, ನನ್ನ ಉತ್ಸಾಹ ಒಂದು ಹೆಜ್ಜೆ ಮುಂದೇ. ಪ್ರತಿ ರಾತ್ರಿ ನಾನು ಮಲಗುವ ಮುನ್ನ ನಮ್ಮಮ್ಮ ನನಗೆ ಕಥೆ ಹೇಳಬೇಕು. ಅದೂ ಏನು, ಒಂದೋ ಎರಡೋ ಹೇಳಿದರೆ ಸಾಲದು. ಕನಿಷ್ಠ ಮೂರೋ ನಾಲ್ಕೋ ಹೇಳಬೇಕು. ಅದು ಸಾಲದು ಅಂತ, ಪ್ರತಿಯಾಂದು ಕಥೆಯೂ ಹೊಸ ಕಥೆಯಾಗಿರಬೇಕು ಎಂದು ನನ್ನ ಷರತ್ತು. ತುಂಬ ಹಿಂದೆ ಹೇಳಿದ ಯಾವುದೇ ಕಥೆಯಾದರೂ ನನಗೆ ಜ್ಞಾಪಕವಿರುತ್ತಿತ್ತು. ದೊಡ್ಡ ರಂಪ ಮಾಡಿ ಹೊಸ ಕಥೆ ಹೇಳು ಅಂತ ನಮ್ಮಮ್ಮನನ್ನು ಪೀಡಿಸುತ್ತಿದ್ದೆ. ನಮ್ಮಮ್ಮ ಹತ್ತಾರು ಪುಸ್ತಕಗಳನ್ನು ತಂದು ನೂರಾರು ಕಥೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದರ ಕಾರಣ ನಾನೇ ಎಂದು ಈಗ ನಿಮಗೆಲ್ಲಾ ಗೊತ್ತಾಯಿತಲ್ಲ. ಇಷ್ಟು ವರ್ಷಗಳ ನಂತರವೂ ನನಗೆ ನಮ್ಮಮ್ಮ ಹೇಳಿದ ಎಷ್ಟೋ ಕಥೆಗಳು ನೆನಪಿವೆ. ಅದರ ಸಾರಾಂಶ ಇಷ್ಟೇ - ನಮ್ಮಮ್ಮ ಕಥೆ ಹೇಳುವ ವಿಧಾನ ಅತ್ಯಮೋಘವಾದದ್ದು. ಈ ಕಥೆಯಲ್ಲಿ ನಾನು ಮುಳುಗಿ ಹೋಗುತ್ತಿದ್ದೆ.

ಕಥೆ ಕೇಳುತ್ತಾ ಕಥೆ ಓದುವ ಹವ್ಯಾಸವೂ ಶುರುವಾಯ್ತು. ಮನೆ ತುಂಬ ಕನ್ನಡ ಹಾಗೂ ಇಂಗ್ಲಿಷ್‌ ಪುಸ್ತಕಗಳು. ಅದು ಸಾಲದು ಅಂತ ಪ್ರತಿಯಾಂದು ವಾರಪತ್ರಿಕೆಯೂ ಮನೆಗೆ ಬರುತ್ತಿತ್ತು. ಪ್ರಜಾಮತ, ಸುಧಾ, ತರಂಗ ಎಲ್ಲದರ ಸಣ್ಣಕಥೆಗಳು ಹಾಗೂ ಧಾರಾವಾಹಿಗಳನ್ನು ಓದಿ ನಾನು ನಮ್ಮಮ್ಮ ಚರ್ಚೆ ಮಾಡಿದ್ದೇ ಮಾಡಿದ್ದು. ಸುಧಾದಲ್ಲಿ ಬರುತ್ತಿದ್ದ ಪದಬಂಧವನ್ನು ಒಟ್ಟಿಗೆ ಕುಳಿತು ಮುಗಿಸುತ್ತಿದ್ದೆವು.

ಸಮಯ ಕಳೆದಂತೆ ನಾನೂ ಹತ್ತಾರು ಕಥೆ, ಕವಿತೆಗಳನ್ನು ಗೀಚಲು ಪ್ರಾರಂಭಿಸಿದೆ. ಬರೆದ ತಕ್ಷಣ ನಮ್ಮಮ್ಮನಿಗೆ ತೋರಿಸುತ್ತಿದ್ದೆ. ಅಮ್ಮನ ಅಭಿಪ್ರಾಯ ನನಗೆ ಅತ್ಯಮೂಲ್ಯವಾದದ್ದು. ಅಮ್ಮನೂ ಹಾಗೆಯೇ. ಅಮ್ಮನ ಪ್ರತಿಯಾಂದು ಬರಹಕ್ಕೂ ನಾನೇ ಮೊಟ್ಟ ಮೊದಲ ವಿಮರ್ಶಕ. ನಾನು ನಮ್ಮಮ್ಮನ ಅದೆಷ್ಟು ಸಾಹಿತ್ಯ ಚರ್ಚೆ ಮಾಡಿದ್ದೇವೆ ಅಬ್ಬಬ್ಬಾ.

ಇದರ ಜತೆಗೆ ನ್ನು ಶಾಲೆಯಲ್ಲೂ ಮುಂದೆ ಇದ್ದೆ. ಓದುವುದರ ಜೊತೆಗೆ ನಾಟಕ, ಹಾಡು ಇತ್ಯಾದಿ. ಶಾಲೆಯಿಂದ ನಾನು ಮನೆಗೆ ಬರುವ ವೇಳೆಗೆ ಅಮ್ಮನ ಭಾವಗೀತೆ ಪಾಠ ನಡೆಯುತ್ತಿತ್ತು. ನಾನು ಬಂದ ತಕ್ಷಣ ಅಮ್ಮ ಪಾಠವನ್ನು ನಿಲ್ಲಿಸಿ, ಅಡಿಗೆಮನೆಗೆ ಬಂದು ನನಗೆ ತಿಂಡಿ, ಹಾಲು ಕೊಡುತ್ತಿದ್ದದ್ದು ಈಗಲೂ ನೆನಪಿದೆ. ಅಂದ ಹಾಗೆ, ನಾನು ಈಗಲೂ ಹಾಲೇ ಕುಡಿಯುವುದು. ನಮ್ಮಮ್ಮ ನನಗೆ ಕಾಫಿ ಅಭ್ಯಾಸ ಮಾಡಿಸಲೇ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X