ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Madikeri Dasara 2022: ಮಡಿಕೇರಿ ದಸರಾಕ್ಕೆ ಮೆರಗು ನೀಡುವ ದಶಮಂಟಪಗಳು...

By ಬಿಎಂ ಲವಕುಮಾರ್
|
Google Oneindia Kannada News

ಸದಾ ಮಳೆ, ಚಳಿಯಲ್ಲಿಯೇ ಕೃಷಿ, ಇನ್ನಿತರ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೊಡಗಿನ ಜನ ಮೈಕೊಡವಿಕೊಂಡು ಮೇಲೇಳುವುದು ದಸರಾದ ಸಮಯದಲ್ಲಿ... ಎಲ್ಲರೂ ಒಂದೆಡೆ ಸೇರಿ ದಸರಾದ ಸಡಗರ, ಸಂಭ್ರಮದಲ್ಲಿ ಭಾಗಿಯಾಗಿ ಬಳಿಕ ಮನೆಯತ್ತ ಸುಂದರ ನೆನಪುಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಬೇರೆಡೆಗಳಲ್ಲಿ ಆಚರಿಸಲ್ಪಡುವ ದಸರಾಕ್ಕೆ ಹೋಲಿಸಿದರೆ ಮಡಿಕೇರಿಯಲ್ಲಿ ನಡೆಯುವ ದಸರಾ ವಿಭಿನ್ನವಾಗಿದೆ. ಇಲ್ಲಿನ ದಸರಾದಲ್ಲಿ ನಗರದ ವಿವಿಧೆಡೆ ಇರುವ ಹತ್ತು ದೇವಾಲಯಗಳಿಂದ ಹೊರಡುವ ಮಂಟಪಗಳೇ ಪ್ರಮುಖ ಆಕರ್ಷಣೆಯಾಗಿವೆ. ಈ ದಶಮಂಟಪಗಳು ಮಡಿಕೇರಿ ದಸರಾದ ಸಾರಥಿಗಳಾಗಿ ಮುನ್ನಡೆಯುತ್ತಿವೆ. ಈ ದಶಮಂಟಪಗಳ ಬಗ್ಗೆ ತಿಳಿಯುತ್ತಾ ಹೋದಂತೆ ಮಡಿಕೇರಿ ದಸರಾದ ವಿಶೇಷತೆ ಅರ್ಥವಾಗುತ್ತಾ ಹೋಗುತ್ತದೆ.

ಶ್ರೀರಂಗಪಟ್ಟಣಕ್ಕೂ ಮೈಸೂರು ದಸರಾಕ್ಕೂ ಇರುವ ನಂಟೇನು?ಶ್ರೀರಂಗಪಟ್ಟಣಕ್ಕೂ ಮೈಸೂರು ದಸರಾಕ್ಕೂ ಇರುವ ನಂಟೇನು?

ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳುವ ದಶಮಂಟಪಗಳು ದಶ ದೇವಾಲಯಗಳನ್ನು ಪ್ರತಿನಿಧಿಸುತ್ತವೆ. ಪ್ರತಿ ದೇವಾಲಯಗಳು ಕೂಡ ಧಾರ್ಮಿಕ ಹಿನ್ನಲೆಯನ್ನು ಹೊಂದಿದ್ದು, ಈ ದೇಗುಲಗಳ ಕಾರ್ಯಕರ್ತರು ಹಗಲಿರುಳು ಎನ್ನದೆ ಬೆವರು ಸುರಿಸಿ ಶ್ರಮಪಟ್ಟು ನಿರ್ಮಿಸಿದ ಮಂಟಪಗಳೇ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿವೆ. ಈ ದೇವಾಲಯಗಳ ಕಾರ್ಯಕರ್ತರ ಶ್ರಮದ ಪ್ರತಿಫಲದಿಂದ ದಸರಾ ದಿನದಂದು ಮಡಿಕೇರಿ ಝಗಝಗಿಸುವ ಬೆಳಕಿನ ನಗರವಾಗಿ ಸ್ವರ್ಗಲೋಕವೇ ಧರೆಗಿಳಿದು ಬಂದಂತೆ ಗೋಚರಿಸುತ್ತದೆ.

ದಸರಾ ಆರಂಭವಾಗಲು ಮೂರ‍್ನಾಲ್ಕು ತಿಂಗಳು ಇರುವಂತೆಯೇ ದಶದೇಗುಲದ ಮಂಟಪಗಳ ಸಮಿತಿಯ ಸದಸ್ಯರು ಮಂಟಪವನ್ನು ಅದ್ಧೂರಿಯಾಗಿ ತಯಾರು ಮಾಡುವ ಸಿದ್ಧತೆಯಲ್ಲಿ ತೊಡಗುತ್ತಾರೆ. ಊರೂರು ಸುತ್ತಿ ಜನರಿಂದ ತನು ಮನ ಧನದ ಸಹಾಯ ಪಡೆಯುತ್ತಾರೆ. ಬಳಿಕ ಪೌರಾಣಿಕ ಕಥಾ ಹಂದರದಲ್ಲಿ ದೇವರ ಹಾಗೂ ದಾನವರ ಕಲಾಕೃತಿಗಳನ್ನು ಸಂಬಂಧಿಸಿದ ನುರಿತ ಕಲಾವಿದರಿಂದ ತಯಾರು ಮಾಡುತ್ತಾರೆ. ಆ ನಂತರ ಅದಕ್ಕೆ ಬೇಕಾದ ಚಲನವಲನಕ್ಕೋಸ್ಕರ ತಂತ್ರಜ್ಞರ ಸಹಾಯ ಪಡೆಯುತ್ತಾರೆ.

Navratri 2022 Mantra : 9 ದಿನಗಳ ಉತ್ಸವಕ್ಕಾಗಿ ದೇವಿ ಮಂತ್ರಗಳು, ಅವುಗಳ ಅರ್ಥ ಮತ್ತು ಮಹತ್ವNavratri 2022 Mantra : 9 ದಿನಗಳ ಉತ್ಸವಕ್ಕಾಗಿ ದೇವಿ ಮಂತ್ರಗಳು, ಅವುಗಳ ಅರ್ಥ ಮತ್ತು ಮಹತ್ವ

ದೂರದ ದಿಂಡಿಗಲ್‌ನಿಂದ ಲೈಂಟಿಂಗ್, ಕೇರಳದ ಪೂಕೋಡಿನಿಂದ ಬ್ಯಾಂಡ್‌ನ್ನು ಕರೆಸಲಾಗುತ್ತದೆ. ಹೀಗೆ ಲಕ್ಷಾಂತರ ರೂ. ವೆಚ್ಚದಲ್ಲಿ ತಯಾರಾದ ಮಂಟಪಗಳು ದಸರಾ ದಿನದಂದು ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ ಅದನ್ನು ಹತ್ತಿರದಿಂದ ವೀಕ್ಷಿಸಿದ ಪ್ರತಿಯೊಬ್ಬರಿಗೂ ದೇವಲೋಕವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸವಾಗದಿರದು. ಇನ್ನು ದಶ ಮಂಟಪಗಳನ್ನು ತಯಾರು ಮಾಡುವ ದೇಗುಲಗಳ ಬಗ್ಗೆ ಹೇಳಲೇ

 ಎರಡು ಶತಮಾನಗಳ ಇತಿಹಾಸ

ಎರಡು ಶತಮಾನಗಳ ಇತಿಹಾಸ

ಮಡಿಕೇರಿ ನಗರದ ಕಾಲೇಜು ರಸ್ತೆಯಿಂದ ಹಿಲ್ ರಸ್ತೆಗೆ ಹೊಂದಿಕೊಂಡಂತೆ ಹೃದಯ ಭಾಗದಲ್ಲಿರುವ ಪೇಟೆ ಶ್ರೀರಾಮಮಂದಿರವು ಸುಮಾರು ಎರಡು ಶತಮಾನಗಳ ಇತಿಹಾಸವನ್ನು ಹೊಂದಿದೆ. 1824ರಲ್ಲಿ ನವರಾತ್ರಿ ಸಂದರ್ಭ ಕರಗವನ್ನು ಹೊರಡಿಸಲು ವಿಷ್ಣು ದೇವಾಲಯವಿಲ್ಲದ ಸಂದರ್ಭ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಪೂಜಾಮಂದಿರವನ್ನು ಕಟ್ಟಲಾಗಿದ್ದು. ಅಂದು ಶ್ರೀ ರಾಮನ ಚಿತ್ರಪಟವನ್ನಿಟ್ಟು ಪೂಜಿಸಲಾಗಿತ್ತು. (ಆ ಪಟ ಈಗಲೂ ಇಲ್ಲಿರುವುದನ್ನು ಕಾಣಬಹುದು.)

ದಸರಾ ಆಚರಣೆಗೆಂದು ನಿರ್ಮಾಣಗೊಂಡ ಪೂಜಾ ಮಂದಿರ 1930ರವರೆಗೂ ಭಜನಾಮಂದಿರವಾಗಿಯೇ ಮುಂದುವರೆದಿತ್ತು. ಆ ದಿನಗಳಲ್ಲಿ ಇದನ್ನು ಶ್ರೀರಾಮ ಭಜನಾ ಮಂದಿರ ಎಂದೇ ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಪೇಟೆಯ ಮಧ್ಯದಲ್ಲಿದ್ದುದರಿಂದಲೋ ಏನೋ ಪೇಟೆ ರಾಮಮಂದಿರ ಎಂದೇ ಹೆಸರಾಯಿತು. ಕ್ರಮೇಣ ಅಭಿವೃದ್ಧಿಯಾಗುತ್ತಾ ಸಾಗಿದೆ.

1942ರಲ್ಲಿ ಭಕ್ತಾಧಿಯೊಬ್ಬರು ಇಲ್ಲಿಗೆ ರಂಗೂನ್‌ನಿಂದ ತಂದ ಬುದ್ದನ ವಿಗ್ರಹವೊಂದನ್ನು ಅರ್ಪಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಸ್ಥಾಪಿತಗೊಂಡಿರುವ ವಿಗ್ರಹ ಅಮೃತಶಿಲೆಯಲ್ಲಿ ಸ್ಥಾಪಿತಗೊಂಡಿದೆ. 1967ರಲ್ಲಿ ದೇವಾಲಯಕ್ಕೆ ಭವ್ಯವಾದ ಗೋಪುರವನ್ನು ನಿರ್ಮಿಸಲಾಯಿತು. ಮಂದಿರದ ದೇಖಾರೇಖಿಯ ಜವಾಬ್ದಾರಿಯನ್ನು ನಾಯ್ಡು ಮತ್ತು ಮೊದಲಿಯಾರ್ ಕುಟುಂಬಸ್ಥರು ನಿರ್ವಹಿಸುತ್ತಾ ಬಂದಿದ್ದಾರೆ.

ದಸರಾ ದಿನದಂದು ಇಲ್ಲಿನ ದೇವಾಲಯದಲ್ಲಿ ಪೂಜಿಸಲ್ಪಟ್ಟ ಕಳಶ ಮೆರವಣಿಗೆ ಹೊರಡುವುದರೊಂದಿಗೆ ದಸರಾ ಶೋಭಾಯಾತ್ರೆಗೆ ಚಾಲನೆ ದೊರೆಯುತ್ತದೆ. ಇಲ್ಲಿಂದ ಹೊರಡುವ ಪೇಟೆ ಶ್ರೀ ರಾಮಮಂದಿರದ ಮಂಟಪ ನಾಲ್ಕು ಕರಗಗಳ ದೇವಾಲಯಗಳಿಗೆ ಸಾಗಿ ಪೂಜೆ ಸ್ವೀಕರಿಸಿ ಕರಗಗಳೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿಕಡಿಯಲಾಗುತ್ತದೆ.

 ಶ್ರೀ ರಾಮ ವಿದ್ಯಾಗಣಪತಿ ದೇವಸ್ಥಾನ

ಶ್ರೀ ರಾಮ ವಿದ್ಯಾಗಣಪತಿ ದೇವಸ್ಥಾನ

ದೇಚೂರು ಶ್ರೀ ರಾಮಮಂದಿರಕ್ಕೆ ಶತಮಾನಗಳ ಇತಿಹಾಸವಿದೆ. ರಾಮಾಂಜನೇಯ ಸೇರಿದಂತೆ ಹಲವು ದೇವರ ಪಟಗಳೊಂದಿಗೆ ಭಜನಾ ಮಂದಿರವಾಗಿದ್ದುದನ್ನು ಅಭಿವೃದ್ಧಿಗೊಳಿಸಲಾಗಿದೆ. ಪ್ರಸ್ತುತ ಶ್ರೀ ರಾಮ ವಿದ್ಯಾಗಣಪತಿ ದೇವಸ್ಥಾನ ಎಂದು ಕರೆಯಲಾಗುತ್ತಿದೆ. ಈ ದೇವಾಲಯದಿಂದ ಮೊದಲ ಬಾರಿಗೆ 12 ಅಥವಾ 16 ಕಂಬಗಳ ಮಣಿಮಂಟಪಗಳೊಂದಿಗೆ ದಸರಾ ಮಂಟಪವನ್ನು ಹೊರಡಿಸಲು ಆರಂಭಿಸಲಾಯಿತು.

ಸುಂದರ ಕೆತ್ತನೆಯ ಕಂಬಗಳಿಗೆ ಮದ್ರಾಸ್‌ನಿಂದ ತರಲಾಗುತ್ತಿದ್ದ ನೀಲಿ, ಹಸಿರು, ಬಿಳಿ ಮಣಿಗಳನ್ನು ಪೋಣಿಸಿ ಮಂಟಪವನ್ನು ನಿರ್ಮಿಸಲಾಗುತ್ತಿತ್ತು. ಅಲ್ಲದೆ ಮಂಟಪದ ನಾಲ್ಕು ಮೂಲೆಗಳಿಗೆ ತಂಡಮಾಲೆಗಳನ್ನು ಅಲಂಕರಿಸಲಾಗುತ್ತಿತ್ತು. ಈ ಸುಂದರ ಮಂಟಪದೊಳಗೆ ದೇವರ ಪಟವನ್ನಿಟ್ಟು ಹಾಗೂ ಚಾಮರ ಬೀಸಲು ಪುಟಾಣಿ ಬಾಲಕಿಯರನ್ನು ಕೂರಿಸಿ ಎಂಟು ಮಂದಿ ಮಂಟಪವನ್ನು ಹೊತ್ತು ಸಾಗುತ್ತಿದ್ದರು.

 ಕೊಡಗಿನ ರಾಜರು ಪ್ರತಿಷ್ಠಾಪಿಸಿರುವ ದಂಡಿನ ಮಾರಮ್ಮ

ಕೊಡಗಿನ ರಾಜರು ಪ್ರತಿಷ್ಠಾಪಿಸಿರುವ ದಂಡಿನ ಮಾರಮ್ಮ

ಸುಮಾರು 175ವರ್ಷಗಳ ಇತಿಹಾಸ ಹೊಂದಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯವು ಮಡಿಕೇರಿ ಕೋಟೆಯ ಬಲಭಾಗದಲ್ಲಿದೆ. ಇದು ಕೊಡಗಿನ ರಾಜರು ಪ್ರತಿಷ್ಠಾಪಿಸಿದ್ದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾಗಿದೆ. ಶ್ರೀ ಮಾರಿಯಮ್ಮ 1836ರಲ್ಲಿ ಪ್ರತಿಷ್ಠಾಪನೆಗೊಂಡಳೆಂದು ಹೇಳಲಾಗುತ್ತದೆ. ಹಿಂದೆ ರಾಜನ ಕಾಲದಲ್ಲಿ ದಂಡಿಗೆ (ಯುದ್ದಕ್ಕೆ) ಹೊರಡುವಾಗಿ ಈ ದೇವಿಯ ಅಪ್ಪಣೆ ಪಡೆದು ಹೊರಡುತ್ತಿದ್ದನೆಂದು ಅದರಿಂದ ಈ ದೇವಿಗೆ ದಂಡಿನಮಾರಿಯಮ್ಮ ಎಂಬ ಹೆಸರು ಬಂದಿದೆ.

ಪಾರ್ವತಿ ಸ್ವರೂಪಿಯಾದ ದೇವಿಯು ಕೈಯ್ಯಲ್ಲಿ ತ್ರಿಶೂಲ ಮತ್ತು ಡಮರುಗ ಇನ್ನಿತರ ಆಯುಧಗಳನ್ನು ಕೈಯ್ಯಲ್ಲಿಡಿದುಕೊಂಡು ಶೋಭಿಸುತ್ತಿದ್ದಾಳೆ. ಈ ದೇವಾಲಯವನ್ನು ದಶಕಗಳ ಹಿಂದೆ ಅಭಿವೃದ್ಧಿಗೊಳಿಸಲಾಗಿದೆ.

 ನವವಿಗ್ರಹಗಳಿರುವ ಕೊಡಗಿನ ಏಕೈಕ ದೇವಾಲಯ

ನವವಿಗ್ರಹಗಳಿರುವ ಕೊಡಗಿನ ಏಕೈಕ ದೇವಾಲಯ

ಇಲ್ಲಿ ನವಶಕ್ತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನವವಿಗ್ರಹಗಳಿರುವ ಕೊಡಗಿನ ಏಕೈಕ ದೇವಾಲಯ ಇದಾಗಿದೆ. ಅಲ್ಲದೆ ಗರ್ಭಗುಡಿಯು ಕ್ರಿಯಾ ಶಕ್ತಿ, ಜ್ಞಾನ ಶಕ್ತಿ, ವಿದ್ಯಾಶಕ್ತಿ ಎಂಬ ತ್ರಿಶಕ್ತಿಗಳಿಂದ ಆವೃತ್ತವಾಗಿರುವುದರಿಂದ ಮಹಾಪೂಜೆ ವೇಳೆಗೆ ಗರ್ಭಗುಡಿಗೆ ಪ್ರದಕ್ಷಿಣೆಯನ್ನು ಇಲ್ಲಿ ಹಾಕುವಂತಿಲ್ಲ. ದೇಗುಲದ ನಿತ್ಯ ಪೂಜೆಗಳನ್ನು ಯಾದವ ಜನಾಂಗದ ಅರ್ಚಕರೇ ನಡೆಸಿಕೊಂಡು ಬರುತ್ತಿದ್ದಾರೆ.

ಈ ದೇಗುಲದಿಂದ ಭವ್ಯ ಮಂಟಪ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತದೆ. ಇಲ್ಲಿನ ಕರಗವು ನಗರ ಪ್ರದಕ್ಷಿಣೆ ಹಾಕಿ ದಸರಾ ದಿನದಂದು ಪೇಟೆ ಶ್ರೀ ರಾಮಮಂದಿರದ ಮಂಟಪಕ್ಕೆ ಪೂಜೆ ಸಲ್ಲಿಸಿದ ನಂತರ ಬನ್ನಿ ಮಂಟಪಕ್ಕೆ ತೆರಳುತ್ತದೆ.

 ನಾಲ್ಕು ಕರಗಗಳಿಗೆ ಇಲ್ಲಿ ಪೂಜೆ

ನಾಲ್ಕು ಕರಗಗಳಿಗೆ ಇಲ್ಲಿ ಪೂಜೆ

ಮಡಿಕೇರಿಯ ಮಾರುಕಟ್ಟೆ ಬಳಿಯಿರುವ ಶ್ರೀ ಚೌಡೇಶ್ವರಿ ದೇವಾಲಯವನ್ನು ಕೊಡಗಿನ ರಾಜನಾಗಿದ್ದ ಲಿಂಗರಾಜನು ನಿರ್ಮಿಸಿದನು ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇವಾಲಯದ ಪ್ರವೇಶ ದ್ವಾರಗಳ ಬಳಿಯಿರುವ ಮೆಟ್ಟಿಲುಗಳ ಮೇಲೆ 'ಲಿ' ಎಂಬ ಕೆತ್ತನೆಯಿದೆ. ಈ ದೇವಾಲಯವನ್ನು ಮೊದಲು ಶಂಕರಗುಡಿ ಎಂದು ಕರೆಯಲಾಗುತ್ತಿತ್ತಂತೆ. 1964ರಲ್ಲಿ ದೇವಾಲಯದಲ್ಲಿ ಮೂಲವಿಗ್ರಹ ಪ್ರತಿಷ್ಠಾಪನೆಗೊಂಡಿತು.

1966ರಲ್ಲಿ ಚೌಡೇಶ್ವರಿ ವಿಗ್ರಹದೊಂದಿಗೆ ಗರ್ಭಗುಡಿಗೆ ಹೊಂದಿಕೊಂಡಂತೆ ಎಡ-ಬಲಗಳಲ್ಲಿ ರಾಮ ಮತ್ತು ಸತ್ಯನಾರಾಯಣ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ನವರಾತ್ರಿಯ ಮೊದಲ ದಿನ ಪಂಪಿನಕೆರೆಯಿಂದ ಹೊರಟ ನಾಲ್ಕು ಕರಗಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಮುಂದೆ ಸಾಗುವುದು ಪ್ರತೀತಿಯಾಗಿದೆ. ಶ್ರೀ ಚೌಡೇಶ್ವರಿ ಬಾಲಕ ಭಕ್ತಮಂಡಳಿ ವತಿಯಿಂದ 1962ರಿಂದ ದಸರಾ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದೆ.

 264 ವರ್ಷಗಳ ಇತಿಹಾಸ ಇರುವ ಕಂಚಿಕಾಮಾಕ್ಷಿಯಮ್ಮ ದೇವಾಲಯ

264 ವರ್ಷಗಳ ಇತಿಹಾಸ ಇರುವ ಕಂಚಿಕಾಮಾಕ್ಷಿಯಮ್ಮ ದೇವಾಲಯ

ಮಡಿಕೇರಿಯ ಗೌಳಿಬೀದಿಯಲ್ಲಿರುವ ನಾಲ್ಕು ಕರಗ ದೇವಾಲಯಗಳ ಪೈಕಿ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯವೂ ಒಂದಾಗಿದೆ. ದೇವಿಯು ಇಲ್ಲಿ ಸೌಮ್ಯ ಹಾಗೂ ಉಗ್ರ ರೂಪಿಣಿಯಾಗಿ ನೆಲೆ ನಿಂತಿದ್ದಾಳೆ. ಈ ದೇವಾಲಯಕ್ಕೆ ಸುಮಾರು 264 ವರ್ಷಗಳ ಇತಿಹಾಸವಿದೆ. ಕೊಡಗಿನ ರಾಜರಿಂದ ನೆಲೆನಿಂತ ಶಕ್ತಿ ದೇವತೆ ಇದಾಗಿದೆ. ಹಿಂದೆ ತಮಿಳುನಾಡಿನಿಂದ ಗೌಳಿ ಜನಾಂಗದವರು ಮಡಿಕೇರಿಗೆ ಬಂದು ನೆಲೆಸಿದಾಗ ಅವರೊಂದಿಗೆ ಬಂದು ಶ್ರೀ ಕಂಚಿಕಾಮಾಕ್ಷಿಯಮ್ಮ ನೆಲೆನಿಂತಳು ಎಂದು ಹೇಳಲಾಗುತ್ತದೆ.

ಮೊದಲಿಗೆ ಈ ದೇವಾಲಯವು ಪುಟ್ಟ ಗುಡಿಸಲಾಗಿ ಮಣ್ಣಿನಗೋಡೆಯಿಂದ ಕೂಡಿತ್ತು. ನಂತರದ ದಿನಗಳಲ್ಲಿ ದೇವಾಲಯ ಹಲವು ಮಾರ್ಪಾಡುಗಳನ್ನು ಕಂಡಿದ್ದು, ರಾಜಗೋಪುರ ನಿರ್ಮಾಣ ಮಾಡಲಾಗಿದ್ದು, ಈ ಗೋಪುರ ಹೊಯ್ಸಳ ಶೈಲಿಯಲ್ಲಿದೆ. ಇತ್ತೀಚೆಗೆ ದೇಗುಲದಲ್ಲಿ ಕಂಚಿಕಾಮಾಕ್ಷಿಯಮ್ಮ ಹಾಗೂ ಉಗ್ರರೂಪಿ ಮುತ್ತುಮಾರಿಯಮ್ಮನಿಗೆ ಪ್ರತ್ಯೇಕ ಗರ್ಭಗುಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿಯೂ ಕೂಡ ಯಾದವ ಜನಾಂಗದವರೇ ಪೂಜೆ ಪುರಸ್ಕಾರವನ್ನು ನೆರವೇರಿಸುತ್ತಿದ್ದಾರೆ. ಈ ದೇವಾಲಯದಿಂದ ಕರಗ ಹಾಗೂ ಮಂಟಪವನ್ನು ಹೊರಡಿಸಲಾಗುತ್ತದೆ.

 ನಾಡನ್ನು ರಕ್ಷಿಸಲು ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಪ್ರತಿಷ್ಠಾಪನೆ

ನಾಡನ್ನು ರಕ್ಷಿಸಲು ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಪ್ರತಿಷ್ಠಾಪನೆ

ಮಡಿಕೇರಿಯ ರಾಜಾಸೀಟ್ ಬಳಿಯಿರುವ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯವು ಕೊಡಗಿನ ಅರಸರ ಕಾಲದಲ್ಲಿ ಯಾವುದೇ ರೀತಿಯ ರೋಗ ರುಜಿನ, ಅನಿಷ್ಟ, ವಿಪತ್ತುಗಳು ಸಂಭವಿಸದಂತೆ ನಾಡನ್ನು ರಕ್ಷಿಸಲು ನಾಲ್ಕು ಶಕ್ತಿದೇವತೆಗಳ ಪೈಕಿ ಹಿರಿಯಳಾದ ಶ್ರೀ ಚೌಟಿ ಮಾರಿಯಮ್ಮಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಹಿಂದೆ ರಾಜನ ಕಾಲದಲ್ಲಿ ವೀರನೂ ಸೇನಾಧಿಪತಿಯೂ ಆಗಿದ್ದ ಅಪ್ಪಚ್ಚಿರ ಮಂದಣ್ಣ ಎಂಬಾತ ಈ ದೇವಾಲಯದ ಮೂಲಕ ಹಾದು ಹೋಗುವಾಗ ದೇವರನ್ನು ಓಡಿಸಿ ದೇವರಿಗೆ ಅರ್ಪಿಸಿದ ನೈವೇದ್ಯ ಹಾಗೂ ಎಡೆಯನ್ನು ತಿನ್ನುತ್ತಿದ್ದನಂತೆ. ಈತನ ಉಪಟಳದಿಂದ ಮುಕ್ತಿ ಹೊಂದಲು ದೇವಿ ಪಕ್ಷಿಯ ರೂಪ ತಾಳಿ ಆತನನ್ನು ಸಂಹರಿಸಿದಳು ಎಂಬ ರೊಚಕ ಕಥೆಯೂ ಇದೆ.

ಈ ದೇವಾಲಯದಲ್ಲಿಯೂ ಯಾದವಕುಲದವರೇ ಪೂಜೆ ಪುರಸ್ಕಾರ ನೆರವೇರಿಸುತ್ತಾ ಬಂದಿದ್ದಾರೆ. ದೇವಾಲಯದಿಂದ ಕರಗ ಹಾಗೂ ಮಂಟಪ ಎರಡನ್ನೂ ಹೊರಡಿಸಲಾಗುತ್ತಿದ್ದು, ದಸರಾ ದಿನದಂದು ಪೇಟೆ ಶ್ರೀ ರಾಮಮಂದಿರದಿಂದ ಕಳಶ ಹೊತ್ತ ಮಂಟಪ ಮೊಟ್ಟ ಮೊದಲ ಬಾರಿಗೆ ಈ ದೇವಾಲಯಕ್ಕೆ ಆಗಮಿಸಿ ಕಳಶಕ್ಕೆ ಪೂಜೆ ಸಲ್ಲಿಸಿದ ಬಳಿಕ ಇತರೆ ದೇವಾಲಯಕ್ಕೆ ತೆರಳುತ್ತದೆ.

 ಕಂಚಿಕಾಮಾಕ್ಷಿ

ಕಂಚಿಕಾಮಾಕ್ಷಿ

ಮಲ್ಲಿಕಾರ್ಜುನ ನಗರದಲ್ಲಿರುವ ಶ್ರೀ ಕೋದಂಡರಾಮ ಮಂದಿರವು ಕೆ.ಎನ್.ಬೋಪಯ್ಯನವರ ಮಾರ್ಗದರ್ಶನದಲ್ಲಿ ನಿಂಗಪ್ಪ, ದೊಡ್ಡಯ್ಯ, ಕದರಯ್ಯ, ನಿಂಗಯ್ಯ, ನಾಗಯ್ಯ ಮುಂತಾದ ಹಿರಿಯರು ಒಂದೆಡೆ ಸೇರಿ ಇಲ್ಲಿನ ಜನತೆಗೆ ಪೂಜೆ ಪುರಸ್ಕಾರವನ್ನು ನೆರವೇರಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರ್ಮಿಸಿದ ದೇವಾಲಯವಾಗಿದೆ. ಆದರೆ ಈ ದೇವಾಲಯ ನಿರ್ಮಾಣದ ಹಿಂದೆ ಮಡಿಕೇರಿಯ ತೋಟಗಾರಿಕಾ ಇಲಾಖೆಯಲ್ಲಿ ಫೀಲ್ಡ್ ಅಸಿಸ್ಟೆಂಟ್ ಆಗಿದ್ದ ನಿಂಗಪ್ಪನವರ ಶ್ರಮ ಇರುವುದನ್ನು ನಾವು ಕಾಣಬಹುದು.

1977ರಲ್ಲಿ ಈ ದೇವಾಲಯ ನಿರ್ಮಾಣವಾದಾಗ ಚಿತ್ರಪಟವನ್ನಿಟ್ಟುಕೊಂಡು ಪೂಜೆ ನೆರವೇರಿಸಲಾಗುತ್ತಿತ್ತು. ಬಳಿಕ ಮೈಸೂರಿನ ಆಲನಹಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿ ರಾಮ ಜೊತೆಗೆ ಸೀತಾ, ಲಕ್ಷ್ಮಣ, ಆಂಜನೇಯ ಅಲ್ಲದೆ ವಿನಾಯಕನ ವಿಗ್ರಹವನ್ನು ಕಪ್ಪು ಕಲ್ಲಿನಿಂದ ನಿರ್ಮಿಸಿ ಪ್ರತಿಷ್ಠಾಪಿಸಲಾಯಿತು. ಅಲ್ಲದೆ ಅದೇ ವರ್ಷವೇ ದಸರಾ ಶೋಭಯಾತ್ರೆಯಲ್ಲಿ ದೇವಾಲಯದಿಂದ ಮಂಟಪ ಹೊರಡಿಸಲು ಆರಂಭಿಸಲಾಯಿತು.

 ಎರಡು ಶತಮಾನಗಳ ಇತಿಹಾಸವಿರು ಕೋಟೆ ಮಾರಿಯಮ್ಮ

ಎರಡು ಶತಮಾನಗಳ ಇತಿಹಾಸವಿರು ಕೋಟೆ ಮಾರಿಯಮ್ಮ

ಕೋಟೆಯ ರಕ್ಷಣೆಗೆ ನಾಲ್ಕು ದಿಕ್ಕಿನಲ್ಲಿ ರಾಜರ ಕಾಲದಲ್ಲಿ ಪ್ರತಿಷ್ಠಾಪಿಸಲಾದ ನಾಲ್ಕು ಶಕ್ತಿ ದೇವತೆಗಳಲ್ಲಿ ಪೆನ್ಸನ್ ಲೈನ್‌ನಲ್ಲಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯವೂ ಒಂದಾಗಿದೆ. ಲಕ್ಷ್ಮಿ, ಸರಸ್ವತಿ, ಪಾರ್ವತಿ ಹಾಗೂ ದುರ್ಗಿಯೂ ಆಗಿರುವ 'ಶ್ರೀ ಕೋಟೆ ಮಾರಿಯಮ್ಮ' ದೇವಾಲಯಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು.

ರಾಜನ ಕಾಲದಲ್ಲಿ ಆಸ್ಥಾನ ದೇವತೆಯಾಗಿದ್ದ ದಿಂಡಿಗಲ್ ಮೂಲದ ಕೋಟೆ ಮಾರಿಯಮ್ಮನೊಂದಿಗೆ ಸಮಾಲೋಚಿಸಿ ಕಾರ್ಯ ನಿರ್ವಹಿಸಲಾಗುತ್ತಿತ್ತಂತೆ. ಆದರೆ ರಾಜ ದುರಾಡಳಿತ ನಡೆಸಿ ಅನಾಚಾರಗಳು ಎಲ್ಲೆ ಮೀರಿದಾಗ ದೇವಿ ರಾಜನ ಬಗ್ಗೆ ಕೋಪಗೊಂಡಳಂತೆ ಇದರಿಂದ ದೇವಿ ಬಗ್ಗೆ ಸಿಟ್ಟಾದ ರಾಜ ದೇವಿಯ ವಿಗ್ರಹವನ್ನು ಭಗ್ನಗೊಳಿಸಿ ಕೋಟೆಯ ಹಿಂಬದಿಯಲ್ಲಿರುವ ಬಾವಿಗೆ ಎಸೆದು ಬಿಟ್ಟನಂತೆ.

ಆದರೆ ಕೋಟೆ ಮಾರಿಯಮ್ಮ ದೇವಿಯ ಭಕ್ತರಾಗಿದ್ದ ಮುತ್ತು ದಂಪತಿಗಳಿಗೆ ದೇವಿ ಕನಸಿನಲ್ಲಿ ಕಾಣಿಸಿಕೊಂಡು ನನ್ನ ವಿಗ್ರಹ ಬಾವಿಯಲ್ಲಿದ್ದು ಅದನ್ನು ಹೊರ ತೆಗೆದು ಪೂಜಿಸುವಂತೆ ತಿಳಿಸಿದಳಂತೆ ಅದರಂತೆ ಆ ದಂಪತಿಗಳು ಬಾವಿಯಿಂದ ವಿಗ್ರಹವನ್ನು ಹೊರತೆಗೆದು ಕೋಟೆಯ ಬಳಿಯೇ ಪ್ರತಿಷ್ಠಾಪಿಸಲು ಮುಂದಾದರಂತೆ ಆದರೆ ದೇವಿ ಮಾತ್ರ ಕೋಟೆಯಿಂದ ಹೊರಗಟ್ಟಿದ ರಾಜನ ಬಳಿ ತಾನು ತಿರುಗಿಯೂ ನೋಡುವುದಿಲ್ಲ ಆದ್ದರಿಂದ ಕೋಟೆಗೆ ವಿರುದ್ಧ ದಿಕ್ಕಿನಲ್ಲಿ ಅಂದರೆ ಈಗಿರುವ ಸ್ಥಳದಲ್ಲಿ ಉತ್ತರಾಭಿಮುಖವಾಗಿ ನೆಲೆ ನಿಂತಳು ಎನ್ನಲಾಗಿದೆ.

ದೇವಾಲಯವು ಆಡಳಿತ ಮಂಡಳಿಯ ಮುತುವರ್ಜಿಯಿಂದ ಹಲವು ರೀತಿಯಲ್ಲಿ ಅಭಿವೃದ್ಧಿ ಕಂಡಿದೆ. ಇಲ್ಲೂ ಕೂಡ ಯಾದವ ಜನಾಂಗದವರೇ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬಂದಿದ್ದು, ಈ ದೇಗಲದಿಂದ ಕರಗ ಹಾಗೂ ಭವ್ಯ ಮಂಟಪವನ್ನು ದಸರಾ ಸಂದರ್ಭ ಹೊರಡಿಸುತ್ತಾ ಬರಲಾಗುತ್ತಿದೆ.

 ಶ್ರೀ ಕರವಲೆ ಬಾಡಗದ ಭಗವತಿ

ಶ್ರೀ ಕರವಲೆ ಬಾಡಗದ ಭಗವತಿ

ಮಡಿಕೇರಿಗೆ ಸಮೀಪದ ಕರವಲೆ ಬಾಡಗ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಕರವಲೆ ಭಗವತಿ ಮಹಿಷಾಮರ್ಧಿನಿ ದೇವಾಲಯಕ್ಕೆ ಐದಾರು ಶತಮಾನಗಳ ಇತಿಹಾಸವಿದೆ. ದೇವಾಲಯದಲ್ಲಿ ಮಹಿಷಾಮರ್ಧಿನಿ ಹಾಗೂ ಭಗವತಿ ದೇವರು ಜೊತೆಯಾಗಿ ಪ್ರತಿಷ್ಠಾಪನೆಗೊಂಡಿದ್ದಾರೆ. ಗ್ರಾಮಸ್ಥರ ಪ್ರಕಾರ ಮೊದಲು ಮಹಿಷಾಮರ್ಧಿನಿ ದೇವತೆಯನ್ನು ಮಾತ್ರ ಪ್ರತಿಷ್ಠಾಪಿಸಲಾಗಿತ್ತಂತೆ ಬಳಿಕ ಕರವಲೆ ಬಾಡಗದ ಎರಡು ಕುಟುಂಬಸ್ಥರು ಗಾಳಿಬೀಡಿನಲ್ಲಿದ್ದ ಭಗವತಿ ದೇವರನ್ನು ರಾತ್ರಿ ವೇಳೆ ತಂದು ಮಹಿಷಾಮರ್ಧಿನಿ ದೇಗುಲದಲ್ಲಿ ದೇವಿಯ ಎಡಭಾಗದಲ್ಲಿ ಪ್ರತಿಷ್ಠಾಪಿಸಿದರಂತೆ.

ಅಲ್ಲಿಂದ ಶ್ರೀ ಕರವಲೆ ಬಾಡಗದ ಭಗವತಿ ಮಹಿಷಾಮರ್ಧಿನಿ ದೇವಾಲಯ ಎಂದೇ ಕರೆಯಲ್ಪಡುತ್ತಿದೆ. ಕರವಲೆ ಬಾಡಗದಲ್ಲಿ ಅಯ್ಯಪ್ಪ, ಅಜ್ಜಪ್ಪ, ವಿಷ್ಣುಮೂರ್ತಿ, ಪಡಮಟ್ಟೆ ಚಾಮುಂಡಿ, ಭದ್ರಕಾಳಿ ಮೈಲತಪ್ಪ ದೇವಾಲಯಗಳು ಕೂಡ ಇವೆ. ಕಳೆದ ಎರಡು ದಶಕದಿಂದ ಈ ದೇವಾಲಯದ ಮಂಟಪ ದಸರಾ ಶೋಭಯಾತ್ರೆಯಲ್ಲಿ ಸಾಗುತ್ತಿದೆ.

 ಗಣಪತಿ ದೇವರ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಮಂಟಪ

ಗಣಪತಿ ದೇವರ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಮಂಟಪ

ಮಡಿಕೇರಿ ಅರಮನೆ ಸಮೀಪದ ಶ್ರೀ ಕೋಟೆ ಗಣಪತಿ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿಸಲ್ಪಟ್ಟ ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ದೇವಾಲಯ ಹಾಗೂ ಗೋಪುರ ಚಿಕ್ಕದಾಗಿದ್ದರೂ ಶಕ್ತಿ ಮಾತ್ರ ದೊಡ್ಡದಾಗಿದೆ. ಇಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಇಲ್ಲಿ ಹರಕೆಯಾಗಿ ಈಡುಗಾಯಿಯನ್ನು ಸಲ್ಲಿಸಲಾಗುತ್ತದೆ. ಕೋಟೆ ಗಣಪತಿ ದಸರಾ ಸಮಿತಿಯು ಗಣಪತಿ ದೇವರ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಕಲಾಕೃತಿಗಳ ಮಂಟಪವನ್ನು ನಿರ್ಮಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದೆ.

English summary
Madikeri dasara history, Information about 10 Mantapas which build by Various Temple of kodagu district for Madikeri Dasara Procession,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X