ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಬಾಕು ಬೇಕಿದ್ರೆ ಸೇವಿಸಿ, ದುಷ್ಪರಿಣಾಮ ನೀವೇ ಅನುಭವಿಸಿ!

By ಡಾ. ವಿನೋದ.ಜಿ.ಕುಲಕರ್ಣಿ
|
Google Oneindia Kannada News

ಕಾಲ ಕೂಡಿ ಬಂದಿದೆ. ಇಂದೇ ಸಂಕಲ್ಪ ಮಾಡಿ,,, ತಂಬಾಕನ್ನು ತ್ಯಜಿಸಿ, ಈ ಮಾತನ್ನು ಪ್ರತಿವರ್ಷ ಹೇಳುತ್ತಲೇ ಬಂದಿದ್ದೇವೆ. ಆದರೆ ತಂಬಾಕು ಸೇವನೆ ಮತ್ತು ಮಾರಾಟಕ್ಕೆ ಕಡಿವಾಣವೇನೂ ಬಿದ್ದಿಲ್ಲ. ನಾವು ಇಲ್ಲಿ ಯಾವ ಸಲಹೆಯನ್ನು ನೀಡಲು ಹೋಗುವುದಿಲ್ಲ. ತಂಬಾಕು ಸೇವನೆ ಮತ್ತು ಅದರ ಪರಿಣಾಮಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಅಷ್ಟೇ!

ಅಮೆರಿಕನ್ನರು, ಕೋಲಂಬಸ್ ಗೆ ಈ ತಂಬಾಕಿನ-ಎಲೆಯ ರುಚಿ, ಹಾಗೂ ಅದರಿಂದ ಆಗುವ ಮತ್ತುಗಳನ್ನು ಪರಿಚಯಿಸಿದ್ದರು. ತಂಬಾಕಿನಲ್ಲಿ "ನಿಕೋಟಿನ್" ಎಂಬ ಅಪಾಯಕಾರಿ ಪದಾರ್ಥವೇ ಚಟ ಹತ್ತಿಕೊಳ್ಳಲು ಕಾರಣವಾಗುತ್ತದೆ. [ಸಿಗರೇಟ್ ಬಿಡಲು 10 ಕಾರಣಗಳು]

ನಾವು ತಂಬಾಕನ್ನು ಸುಟ್ಟಾಗ (ಸಿಗರೇಟ್ ಇಲ್ಲವೇ ಬೀಡಿ ಸೇದುವ ಮೂಲಕ), ನಾವು ನಮಗರಿವಿಲ್ಲದಂತೆ, ಆ ಹೊಗೆಯಲ್ಲಿ ನಿಕೋಟಿನ್ ಹಾಗೂ ಇನ್ನಿತರ 4000 ವಿಷಕಾರಿ ಪದಾರ್ಥಗಳನ್ನು ನಮ್ಮ ಶ್ವಾಸನಾಳ ಒಳ ಹೀರುತ್ತವೆ. ಸಿಗರೇಟಿನ ಹೊಗೆಯಲ್ಲಿ, ಕ್ಯಾನ್ಸರ್ ಉಂಟು ಮಾಡುವಂಥಹ ಅಪಾಯಕಾರಿ ವಿಚಿತ್ರ ಶಕ್ತಿಗಳು, ಇರುತ್ತವೆ.

tobacco

ಅವುಗಳಿಗೆ ವೈದ್ಯರು ಕೊಡುವ ಹೆಸರುಗಳು ಇಂತಿವೆ. ಟಾರ್, ಪಾಲಿನ್ಯೂಕ್ಲಿಯರ್ ಏರೋಮ್ಯಾಟಿಕ್ ಹೈಡ್ರೋ ಕಾರ್ಬನ್ಸ್- ಬೇಟಾ ನ್ಯಾಫ್ ಥಿಲ್ಅಮೈನ್, ಬೆಂಜೋ ಪೈರಿನ್, ಟ್ರೇಸ್ ಮೆಟಲ್ಸ್, ನಿಕೆಲ್, ಆರ್ಸೆನಿಕ್, ಇತರ ವಸ್ತುಗಳಾದ ಫೇನೊಲ್, ಕೆಸೊಲ್, ಕ್ಯಾಟಿಕೋಲ, ಇಂಡೋಲ ಹಾಗೂ ಕಾರ್ಬಜಾಲ.

ಸಿಗರೇಟ್ ಸೇದುವವರು, ಒಂದು ವಾರಕ್ಕೆ ಒಂದು ದಿನದ ಆಯುಷ್ಯನ್ನು ಕಳೆದುಕೊಳ್ಳುತ್ತಾರೆಂದು ತಜ್ಙರು ಎಚ್ಚರಿಕೆ ಹೇಳುತ್ತಾರೆ. ತಂಬಾಕು ಸೇವಕರು ಅದರ ಗುಲಾಮರಾಗಲು, ಕಾರಣಗಳು ಹಲವಾರು.

tobacco

ಇತ್ತೀಚಿಗೆ, ಒಂದು ಪ್ರಬಲವಾದ "ಜೀನ್ಸ್" (ವಂಶವಾಹಿನಿಗಳು), ಕೂಡಾ, ವಂಶಪಾರಂಪರತೆಯಿಂದ ತಂಬಾಕಿನ ಮೇಲೆ ಅವಲಂಬನೆ ಉಂಟು ಮಾಡುವದೆಂದು ಒಂದು ಸಮೀಕ್ಷೆ ತಿಳಿಸಿದೆ. ಇನ್ನೊಂದು ಕಾರಣ ಅಂದರೆ "ಐಡೆಂಟಿಫೀಕೇಶನ್"!.

ಸಿನಿಮಾಗಳಲ್ಲಿ ಪ್ರಸಿದ್ಧ ತಾರೆಯರು, ಸಿಗರೇಟ್ ಸೇದುವ ಶೈಲಿಯನ್ನು, ಹಲವಾರು ಯುವಕರು ಅನುಕರಣೆ ಮಾಡಿ, ತಾವೂ ಸಿಗರೇಟ್ ಸೇವನೆಯನ್ನು ಪ್ರಾರಂಭಿಸುವರು. ಕ್ರಮೇಣ ಅದರ ಮೋಜಿಗೆ ಬಲಿಯಾಗಿ ಎಷ್ಟೇ ಯೋಜನೆ ಹಾಕಿಕೊಂಡರೂ, ಅದರ ಗೋಜು ಬಿಡಲು ಅವರಿಗೆ ಅಸಾಧ್ಯ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಇನ್ನು ಕೆಲವರು, ತಮ್ಮ ಆತಂಕ, ಖಿನ್ನತೆಯನ್ನು ನಿವಾರಿಸಿಕೊಳ್ಳಲು ತಂಬಾಕು ಸೇವನೆ ಪ್ರಾರಂಭಿಸುವರು. ಮಾನಸಿಕ ಕಾಯಿಲೆಯಾದ "ಮೇನಿಯಾ" ದಲ್ಲಿ ರೋಗಿಗಳು ದಿನಕ್ಕೆ 50 ರಿಂದ 60 ಸಿಗರೇಟ್ ಸೇದಬಲ್ಲರು. ಸಿಗರೇಟ್ ಅಥವಾ ತಂಬಾಕು ಸೇವನೆಯಿಂದ ಶೀಘ್ರವಾಗಿ ಕಂಡುಬರುವ ಕೆಲವು ಶಾರೀರಿಕ ಪರಿಣಾಮಗಳು ಈ ಕೆಳಗಿನಂತಿವೆ.

ರಕ್ತದೊತ್ತಡ ಹೆಚ್ಚುವದು. ಹೃದಯದ ಬಡಿತ ತೀವೃಗೊಳ್ಳುವದು. ಹೃದಯದ ಮಾಂಸಖಂಡದ ಅಕುಂಚನಾ ಶಕ್ತಿ ವೃದ್ಧಿ. ಹೃದಯದ ಮುಖ್ಯ ರಕ್ತನಾಳಗಳ "ಕರೋನರಿ" ರಕ್ತನಾಳಗಳಲ್ಲಿ ಅಧಿಕ ರಕ್ತ ಸಂಚಾರ.[ವಿದ್ಯಾರ್ಥಿಗಳೆ, ಸಿಗರೇಟ್ ಕೊಲ್ಲಲ್ಲ, ಕ್ಯಾನ್ಸರ್ ಕೊಲ್ಲತ್ತೆ!]

tobacco

ತಂಬಾಕು ಸೇದುವವರು ಒಂದು ವಿಶಿಷ್ಟ ವರ್ಗಕ್ಕೆ ಇಲ್ಲವೇ ವ್ಯಕ್ತಿತ್ವಕ್ಕೆ ಸೇರಿರುತ್ತಾರೆಯೇ? ಹೌದು ಎನ್ನುತ್ತದೆ ಕೆಲವೊಂದು ಸಂಶೋಧನೆಗಳು. ಇವರು ಬೇರೆಯವರಿಗಿಂತ ಹೆಚ್ಚು ಕಾಫೀ, ಚಹಾ ಇಲ್ಲವೇ ಮದ್ಯವನ್ನು ಸೇವಿಸುವರು. ಸಿಗರೇಟ್ ಸೇದುವ ಮಹಿಳೆಯರಲ್ಲಿ, ಋತುಸ್ರಾವ ಬೇಗನೇ ಕೊನೆಗೊಳ್ಳುವದು. ಸಿಗರೇಟ್ ಸೇದುವವರು ಹೆಚ್ಚಿಗೆ ವ್ಯಾಯಾಮ ಮಾಡಲಾರರು. ಸ್ವಲ್ಪ ವ್ಯಾಯಾಮ ಮಾಡಿದರೆ ಅವರಿಗೆ ದಣಿವು ಶೀಘ್ರವೇ ಆಗಬಲ್ಲದು. ರಕ್ತದಲ್ಲಿ ಎಚ್. ಡಿ. ಎಲ್. ಹಾಗೂ ಎಲ್. ಡಿ. ಎಲ್. ಕೊಲೆಸ್ಟ್ರಾಲದ ಸರಾಸರಿ ಪ್ರಮಾಣ ಕುಂಠಿತಗೊಳ್ಳುವದು.

ಸಿಗರೇಟ್ ಸೇವನೆ ಹಾಗೂ ಹೃದಯಾಘಾತ:
ಸಿಗರೇಟ್ ಸೇದುವ ಪುರುಷರು ಸೇದದವರಿಗಿಂತ, ಹೆಚ್ಚಿನ ಪ್ರಮಾಣದಲ್ಲಿ, ಕರೋನರಿ ರಕ್ತನಾಳದ ಕಾಯಿಲೆಗೆ ತುತ್ತಾಗುವರು. (ಸುಮಾರು 60-70% ಜಾಸ್ತಿ ಪ್ರಮಾಣದಲ್ಲಿ). ಶೀಘ್ರ ಸಾವು ಅಥವಾ "ಸಡನ್ ಡೆತ್" ಸೇದದೇ ಇರುವವರಿಗಿಂತ 2-4 ಪಟ್ಟು ಹೆಚ್ಚು. ಮಹಿಳೆಯರೂ ಕೂಡಾ ಸಿಗರೇಟ್ ಸೇವನೆಯನ್ನು ಮುಂದುವರೆಸಿದರೆ ಅವರೂ ಹೃದಯದ ಕಾಯಿಲೆಗಳಿಗೆ ತುತ್ತಾಗಬಲ್ಲರು. ಅವರು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿ, ಸಿಗರೇಟ ಸೇದುತ್ತಿದ್ದರೆ ಈ ಸಂಭವ ಇನ್ನೂ ಜಾಸ್ತಿ.

tobacoo

ಸಿಗರೇಟ್ ಸೇವನೆ ಹಾಗೂ ಕ್ಯಾನ್ಸರ್:
ಇತಿ ಮಿತಿ ಇಲ್ಲದ ಸಿಗರೇಟ್ ಸೇವನೆ, ದೇಹದ ವಿವಿಧ ಭಾಗಗಳ "ಕ್ಯಾನ್ಸರ್" ರೋಗವನ್ನುಂಟು ಮಾಡಿ ವ್ಯಕ್ತಿಯ ಜೀವನವನ್ನೇ "ಕ್ಯಾನ್ಸಲ್" ಮಾಡುತ್ತದೆ ಎಂದರೆ ಉತ್ಪ್ರೇಕ್ಷೆ ಆಗಲಾರದು. ಬಾಯಿ, ಲ್ಯಾರಿಂಕ್ಸ್, ಪುಪ್ಪಸ, ಅನ್ನನಾಳ, ಹೊಟ್ಟೆ, ಪ್ಯಾಂಕ್ರಿಯಾಸ್, ಮೂತ್ರಕೋಶ, ಮೂತ್ರ ಶೇಖರಿಸುವ ಚೀಲ (ಯುರಿನರಿ ಬ್ಲ್ಯಾಡರ್), ಹೆಣ್ಣು ಮಕ್ಕಳಲ್ಲಿ ಗರ್ಭಾಶಯದ ತುದಿ, (ಸರ್ವಿಕ್ಸ್) ಮುಂತಾದ ಅವಯವಗಳು, ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಬೇನೆಗೆ ಗುರಿ ಆಗಬಲ್ಲವು. ರಕ್ತದ ಕ್ಯಾನರ್ ಕೂಡಾ, ಸಿಗರೇಟ್ ಇಲ್ಲವೇ ತಂಬಾಕು ಸೇವನೆಯಿಂದ ಆರಂಭಗೊಳ್ಳುವದು.

ಸ್ಮೋಕಿಂಗ್ ಇನ್ಡೆಕ್ಸ್ ಅಥವಾ ಸೇದುವ ಸೂಚ್ಯಂಕ:

ಎಸ್. ಐ. = ದಿನಂಪ್ರತಿ ಸೇದುವ ಸಿಗರೇಟುಗಳು ಇದನ್ನು ಎಕ್ಸ್ = ಸೇದಿದ ವರುಷಗಳು ಇದರಿಂದ ಗುಣಾಕಾರ ಮಾಡಿದರೆ ನಾವು ಎಸ್. ಐ. ಎಷ್ಟೆಂದು ಅರಿತುಕೊಳ್ಳಬಲ್ಲೆವು!
tobacoo


ಏನಿದರ ಪ್ರಾಮುಖ್ಯತೆ?

ಎಸ್. ಐ.- 100 ರಗಿಂತ ಕೆಳಗಿದ್ದರೆ, ಅವನು "ಸೌಮ್ಯ ಸೇದುವವ" (ಮೈಲ್ಡ ಸ್ಮೋಕರ್). ಎಸ್. ಐ.- 101 ರಿಂದ 300 ಇದ್ದರೆ ಅವನು ಮಧ್ಯಮ ವರ್ಗದ ಸೇದುವವ (ಮೋಡರೇಟ್ ಸ್ಮೋಕರ್). ಎಸ್. ಐ.- 300 ಕ್ಕೂ ಅಧಿಕವಾಗಿದ್ದರೆ ಅವನು ಅತೀಯಾಗಿ ಸೇದುವವನೆಂದು ವಿಂಗಡಿಸುತ್ತಾರೆ. (ಹೆವಿ ಸ್ಮೋಕರ್).

ಸೇದುವ ಸೂಚ್ಯಂಕ 300 ಗಿಂತ ಅಧಿಕವಾಗಿದ್ದರೆ, ಅವರು ಪುಪ್ಪಸ ಕ್ಯಾನ್ಸರದಿಂದ ಬಳಲುವ ಸಂಭವ ಗಣನೀಯ ಪ್ರಮಾಣದಲ್ಲಿ ಜಾಸ್ತಿ ಆಗುವದು. ದಿನಂಪ್ರತಿ 40 ಸಿಗರೇಟಿನಂತೆ 20 ವರ್ಷ ಸೇದುವವರಲ್ಲಿ ಪುಪ್ಪಸ ಕ್ಯಾನ್ಸರ್ ಬರುವ ಸಂಭವ 40 ಪಟ್ಟು ಜಾಸ್ತಿ. ಇನ್ನು ಸಿಗರೇಟ್ ಸೇವೆನೆಯಿಂದ ಶ್ವಾಸನಾಳದ ಕಾಯಿಲೆಗಳಾದ ನ್ಯೂಮೋಥಾರೆಕ್ಸ್, ಹೊಟ್ಟೆಯ ಅಲ್ಸರ್ ಅಥವಾ ಹಣ್ಣುಗಳು, ತೂಕ ಕಡಿಮೆ ಆಗುವದು, ಟಿ. ಎ. ಒ. ಮುಂತಾದ ರೋಗಗಳು ಉಂಟಾಗುವವು.

ಇನ್ನು ಚಿಕಿತ್ಸೆ?: ಚಿಕಿತ್ಸೆಗೆ ಒಂದು ಪ್ರಬಲವಾದ, ಸಹಾಯಕಾರಿ ಅಂಶವೆಂದರೆ, ವ್ಯಕ್ತಿಯ "ಮನೋನಿರ್ಧಾರ" ಅಥವಾ "ಮೋಟಿವೇಷನ್". ಇದರ ಜೊತೆಗೆ ಹಲವಾರು ಚಿಕಿತ್ಸೆಗಳು ಲಭ್ಯವಿದೆ.

1) ನಿಕೋಟಿನ್ ಗಮ್: ಇದು ಒಂದು ತರಹದ ಬಾಯಲ್ಲಿ ಆಡಿಸುವ "ಅಂಟು" (ಚೂಯಿಂಗ್ ಗಮ್). ಈ ಅಂಟಿನಲ್ಲಿ 2 ರಿಂದ 4 ಗ್ರಾಂ. ನಿಕೋಟಿನ್ ಮಿಶ್ರಣ ಮಾಡಿದ್ದು, ಇದನ್ನು ವ್ಯಕ್ತಿಗಳು ಬಾಯಲ್ಲಿ ಇಟ್ಟುಕೊಂಡು, ಆಡಿಸುತ್ತಿರಬೇಕು. ಇದರ ರುಚಿ ಸಿಹಿ ಆಗಿದ್ದರಿಂದ ಇದು- ಮನಕ್ಕೆ ಕಹಿ ಆಗದು. ಸಣ್ಣ ಪ್ರಮಾಣದಲ್ಲಿ, ಹಾಗೂ ನಿಧಾನವಾಗಿ ಈ "ಗಮ್" ನಿಂದ ನಿಕೋಟಿನ್ ಸ್ರವಿಸುವದರಿಂದ, ವ್ಯಕ್ತಿಗೆ ಹೆಚ್ಚಿನ ಅಪಾಯವೆಸಗದು.

2) ನಿಕೋಟಿನ್ ನಾಸಲ್: ಮೂಗಿನ ಹೊರಳಗಳಲ್ಲಿ, ಈ ಔಷಧಿಯನ್ನು ಹೊಡೆದುಕೊಳ್ಳಬೇಕು. ದಿನಕ್ಕೆ 20-30 ಬಾರಿ ಇದನ್ನು ಸ್ಪ್ರೇ ಮಾಡಿಕೊಂಡು ಕ್ರಮೇಣ ಕಡಿಮೆ ಮಾಡಿಕೊಳ್ಳುವದು. ತದನಂತರ ಇದರ ಉಪಯೋಗವನ್ನು ಸಂಪೂರ್ಣ ನಿಲ್ಲಿಸತಕ್ಕದ್ದು.

3) ನಿಕೋಟಿನ್ ಇನ್ಹೇಲರ್ಸ್: ನಾವು ಅಸ್ಥಮಾ ಕಾಯಿಲೆಗೆ ಹೇಗೆ ಇನ್ಹೇಲರ್ ಉಪಯೋಗಿಸುತ್ತೇವೆಯೋ, ಅದೇ ರೀತಿ ನಿಕೋಟಿನ್ವುಳ್ಳ ಇನ್ಹೇಲರ್ ಲಭ್ಯವಿರುತ್ತದೆ. ಕ್ರಮೇಣ ಇದರ ಸೇವನೆಯನ್ನು ಕುಂಠಿತಗೊಳಿಸಬೇಕು.

4) ನಿಕೋಟಿನ್ ಪ್ಯಾಚಸ್: ಚರ್ಮದ ಮೇಲೆ ಇಡುವ ಪಟ್ಟಿಗಳು. ಇದು ನಿಕೋಟಿನ್ ಮಿಶ್ರಿತವಾಗಿರುತ್ತದೆ. ರೋಗಿಯ ಅತಿಯಾದ ಆಸಕ್ತಿಗೆ ಸ್ಪಂದಿಸುತ್ತದೆ. ಕ್ರಮೇಣ ಇದನ್ನು ತ್ಯಜಿಸಬೇಕು. ನಮ್ಮ ದೇಶದಲ್ಲಿ ಒಂದೆರಡು ಔಷಧ ಕಂಪನಿಗಳು ಮೊದಲು ಇವುಗಳನ್ನು ತಯಾರಿಸುತ್ತಿದ್ದರು. ಈಗ ಇದು ಮಾರುಕಟ್ಟೆಯಲ್ಲಿ ಅಲಭ್ಯ.

ಪಾಶ್ಚಾತ್ಯ ದೇಶಗಳಲ್ಲಿ ಈ ನಿಕೋಟಿನ್ ಚರ್ಮದ ಪಟ್ಟಿಗಳು ಈ ಕೆಳಗಿನ ಹೆಸರಿನಲ್ಲಿ ಲಭ್ಯವಿರುತ್ತದೆ. ಉದಾ: ನಿಕೋಡರ್ಮ್, ಹೆಬಿಟ್ರಾಲ್ ಪ್ರೋಸ್ಟೇಪ್, ನಿಕೋಟ್ರಾಲ್. ಇನ್ನು ಮನೋವೈದ್ಯರು ಇತರ ಔಷಧಗಳಾದ ಬ್ಯೂಪ್ರೋಪಯಾನ್, ಕ್ಲೋನಿಡಿನ್ ಹಾಗೂ ನಾರ್ಟ್ರಿಪ್ಟಿಲೀನ್ ಮೊದಲಾದ ಔಷಧಿಗಳನ್ನು ಕೊಟ್ಟು, ನಿಮ್ಮನ್ನು, ಸಿಗರೇಟ್ ಇಲ್ಲವೇ ತಂಬಾಕು ಸೇವನೆಯಿಂದ ಮುಕ್ತಗೊಳಿಸಲು, ಪ್ರಯತ್ನಿಸುವರು. ಇದರ ಜೊತೆಗೆ ಇನ್ನಿತರ ವಿಧಾನಗಳಾದ ಅವರ್ಶನ್ ಚಿಕಿತ್ಸೆ, ಬಯೋಫೀಡ್ ಬ್ಯಾಕ್, ಮನೋವಿಶ್ಲೇಷಣೆ, ಹಿಪ್ನಾಟಿಸಂ, ಆಪ್ತ ಸಮಾಲೋಚನೆ, ನಾರ್ಕೋಥೆರಪಿ, ಮೊದಲಾದ ಚಿಕಿತ್ಸಾ ಪ್ರಕ್ರಿಯೆಗಳಿಂದ ಸಹಾಯ ಮಾಡುವರು.

ಗಮನಿಸಿರಿ:
ತಂಬಾಕು ಅಥವಾ ಸಿಗರೇಟು ಸೇವನೆ ನಿಮ್ಮ ದೇಹ, ಮನ, ಮೌನ, ಹಣ, ಹಸಿವು ಎಲ್ಲವನ್ನೂ ಹಾಳುಮಾಡಿ, ನಿಮ್ಮ ಬಾಳನ್ನು ಗೋಳಿಗೆ ಹಾಕುವದು. ಇಂದೇ, ಅಲ್ಲ, ಅಲ್ಲ, ಈ ಕ್ಷಣವೇ ಪ್ರತಿಜ್ಞೆ ಮಾಡಿ, "ನಾವು ಸಿಗರೇಟು ತಂಬಾಕು ಸೇವಿಸುವದಿಲ್ಲ" ಎಂದು. ಮನಸ್ಸು ಮಾಡಿದರೆ, ಜೀವನದಲ್ಲಿ ಯಾವುದೂ ಅಸಾಧ್ಯವಿಲ್ಲ. "ಮನಸ್ಸಿದ್ದರೆ ಮಾರ್ಗ". ನಿಮ್ಮ ಮನವು ಹಿಮಾಲಯ ಪರ್ವತದಂತೆ ಗಟ್ಟಿ ಆಗಿರಲಿ, ಅದನ್ನು ಯಾರೂ ಹೇಗೆ ಅಳಿಸಲಾರರೋ, ಹಾಗೆಯೇ ನಿಮ್ಮ ನಿರ್ಧಾರವು ಅಚಲವಾಗಿರಲಿ, ಇಂದೇ ಎಚ್ಚೆತ್ತುಕೊಳ್ಳಿರಿ. [ವಿದ್ಯಾರ್ಥಿಗಳೆ, ಸಿಗರೇಟ್ ಕೊಲ್ಲಲ್ಲ, ಕ್ಯಾನ್ಸರ್ ಕೊಲ್ಲತ್ತೆ!]

ಚಿಂತಿಸದಿರಿ:

ಚಿಂತೆಯೇ ಮುಪ್ಪು, ಸಂತೋಷವೇ ಯೌವನ. ನೀವು ಒಬ್ಬರೇ ಅಲ್ಲ, ನಿಮ್ಮೊಟ್ಟಿಗೆ ಸಾವಿರಾರು ಜನರು, ಈ ದಿನದಿಂದಲೇ ಸಿಗರೇಟ್, ತಂಬಾಕು ತ್ಯಜಿಸಲು ಸಮರ್ಥರು. ಸ್ನೇಹಿತರೆ, ಸಿಗರೇಟ್ ಎಂಬ ಸಹಚರನನ್ನು ಬಿಡಿ, ನಿಮ್ಮ ಪತ್ನಿಯ ಸಿಂಧೂರ ಗಟ್ಟಿ ಮಾಡಿ. ನಿಮ್ಮ ಸ್ಥೈರ್ಯದಿಂದ ಸ್ಥಿರ ಜೀವಿ ಆಗಿ ಬಾಳಿ. ಸಿಗರೇಟ್ ಸೇದುವವರಿಗೆ ಇಂದೇ ಹೇಳಿ "ಸ್ವಲ್ಪ ತಾಳಿ, ಸ್ವಲ್ಪ ತಾಳಿ".[ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]

ಮೇ 31, 2016ರ ವಿಶ್ವ ತಂಬಾಕು ರಹಿತ ದಿನಾಚರಣೆಗೆ ಘೋಷಣೆ ಹೀಗಿದೆ-" ತಯಾರಾಗಿರಿ, ಘೋಷಣೆ ರಹಿತ ಪ್ಯಾಕಿಂಗ್ ಗೆ. - ಅಂದರೆ, ಸಿಗರೇಟು ಅಥವಾ ಗುಟ್ಕಾ ಪ್ಯಾಕೇಟ್ ಮೇಲಿನ ಘೋಷಣೆಗಳಿಗೆ ವಿರಾಮ ನೀಡಿರಿ ಎಂಬುದಾಗಿ!. ಈ ತಂಬಾಕು ವಸ್ತುಗಳ ಪ್ಯಾಕಿಂಗ್ ಗಳ ಮೇಲೆ, ಅತಿಯಾದ ಘೋಷಣೆಗಳಿಂದಲೇ, ಕುತೂಹಲ ದ್ವಿಗುಣಗೊಂಡು, ಅದನ್ನು ಸೇವಿಸಿಯಾರು!

* ಡಾ. ವಿನೋದ.ಜಿ.ಕುಲಕರ್ಣಿ, ಹಿರಿಯ ಮನೋರೋಗ ತಜ್ಞರು, ಅಧ್ಯಕ್ಷರು ಐಎಂಎ, ಹುಬ್ಬಳ್ಳಿ.

English summary
World No Tobacco Day 2016: Tobacco kills nearly six million people every year, according to the World Health Organisation(WHO). In India, over one million annual deaths are the result of smoking-related illnesses, not to mention the fact that smoking dramatically increases the risk of getting all kinds of cancer. Here is the causes and effects of smoking and chewing tobacco A Special article by Dr. Vinod Kulakarni, Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X