• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಕೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ

By ವನಿತ ವೈ.ಜೈನ್
|

ನಾನೊಬ್ಬ ಗೃಹಿಣಿ. ನಾನು ಯಾವಾಗ ಈ ಪದವಿ ಪಡೆದೆನೋ ಅಂದೇ ನನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನೆಲ್ಲಾ ಆಕಾಶದ ಬುಟ್ಟಿಯಲ್ಲಿ ಇಟ್ಟಾಯಿತು. ಗಂಡ, ಮನೆ ಮಕ್ಕಳು, 'ನನ್ನ ಸಂಸಾರ, ಆನಂದ ಸಾಗರ' ಎಂಬ ಹೊತ್ತಿಗೆ ಬಿಚ್ಚಿಟ್ಟಾಯಿತು. ಈ ಅಧ್ಯಾಯ ಆರಂಭಿಸಿ 25 ವರ್ಷಗಳು ಸಂದಿವೆ ಯಾವುದೇ ಹೊಸ ಅಧ್ಯಾಯದ ಕಡೆ ಕಣ್ತೆರೆದೂ ನೋಡದೆ. ನನಗೆ ಈ ಅಧ್ಯಾಯವನ್ನು ಮುಂದುವರೆಸಲೂ ಮನಸಿಲ್ಲ, ಮುಚ್ಚಿಡಲೂ ಮೊದಲೇ ಸಾಧ್ಯವಾಗುತ್ತಿಲ್ಲ. ಇದು ನನ್ನ ಪಾಡು.

ತಂದೆ ತಾಯಿಯರ ಮುದ್ದಿನ ಮಗಳಾಗಿ ಹಾಡು ಹಸೆ, ಕುಣಿತ ಎಂದು ಬೆಳೆದ ನನಗೆ ಮದುವೆ ಎಂಬ ಮೂರು ಅಕ್ಷರದ ಮಾಲೆಯನ್ನು 20ರ ಹರೆಯದಲ್ಲಿಯೇ ತೊಡಿಸಿದರು. ಮದುವೆಯ ದಿನ ಕರುಳು ಹಿಂಡುವ ಸಂಕಟ. ಹೇಳಲಾಗದ, ಬಿಕ್ಕಿ ಬಿಕ್ಕಿ ಅಳಲೂ ಸಾಧ್ಯವಾಗದ ದಿನವದು. ತಂದೆ-ತಾಯಿಯ ಬಾಂಧವ್ಯವನ್ನು ಕಳಚುವ ಆ ದಿನ ಕೆಲವರಿಗೆ ಸಂಭ್ರಮ. ನನಗೆ ಮಾತ್ರ ಬದುಕಿನಲ್ಲಿ ಮರೆಯಲಾಗದ ನೋವಿನ ದಿನವದು.[ಮಹಿಳಾ ದಿನಾಚರಣೆ ಬಗ್ಗೆ ಮಹಿಳೆಯರಿಗೆಷ್ಟು ಗೊತ್ತು?]

ಮದುವೆಗೆಂದು ಮನೆಯಿಂದ ತೆರಳುವ ಮುನ್ನ ಇದು ತವರು ಮನೆಯ ಕೊನೆಯ ಹಾಲು ಎಂದು ಸೂಕ್ಷ್ಮವಾಗಿ ಹೇಳುತ್ತಾ ಅಮ್ಮ ಹಾಲು ಕೊಡುವ ಕ್ಷಣ ಹೆಣ್ಣು ಮಕ್ಕಳ ಜೀವನದ ಬಹಳ ನೋವಿನ ದಿನ. ಮದುವೆ ಮಂಟಪದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಪುರೋಹಿತರು ಹೇಳುವ 'ನಿನ್ನ ತವರಿನ ಹಾಲಿನ ಋಣ ತೀರಿತು ಎಂದಾಗ?' ಜೀವನವೇ ಬೇಡ ಎನಿಸಿಬಿಡುತ್ತದೆ. ಅಳುತ್ತಾ ನಿಂತಾಗ ಮದುವೆ ಹುಡುಗನ ಕಡೆ ಕೈ ತೋರಿಸಿ ಇನ್ನು ಮುಂದೆ ಇದೇ ನಿನ್ನ ಪ್ರಪಂಚ ಹೇಳಿದಾಗ ಅಂದಿನಿಂದ ಬದುಕಿನ ಎರಡನೇ ಅಧ್ಯಾಯ ಆರಂಭ.

ಮದುವೆ ಎಂಬ ಎರಡನೇ ಅಧ್ಯಾಯದಲ್ಲಿ ನನಗೆ ಎಲ್ಲವೂ ಹೊಸತು. ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ. ಇಲ್ಲಿಂದಲೇ ಗೃಹಿಣಿ ಎಂಬ ಕಿರೀಟ ಧರಿಸಿ ನಾಲ್ಕು ಗೋಡೆಯ ನಡುವೆಯೇ ಪ್ರಪಂಚ ಕಾಣುವ ಕ್ಷಣಗಳು ಆರಂಭವಾದವು. ಆದರೆ ಗೃಹಿಣಿ ಎನಿಸಿಕೊಂಡು ಗಂಡ, ಅತ್ತೆ, ಮಾವನ ಮಾತಿಗೆ ಒಗ್ಗಿಕೊಂಡು ಬದುಕುವುದು ನನಗೇನೂ ಕಷ್ಟವಾಗಲಿಲ್ಲ. ಏಕೆಂದರೆ ನನಗೆ ಗಂಡ ಮತ್ತು ಮಕ್ಕಳ ಹೊರತಾಗಿ ಬೇರೆ ಪ್ರಪಂಚವಿರಲಿಲ್ಲವಲ್ಲ ಇಂದಿನ ಮಹಿಳೆಯರಿಗಿರುವಂತೆ.

ಗಂಡ ಕೊಡಿಸೋ ಪ್ರತಿಯೊಂದು ವಸ್ತುವೂ ಬಂಗಾರವೇ ಆಗಿತ್ತು. ಅತ್ತೆ ಮಾವನ ಮಾತೇ ವೇದವಾಕ್ಯವಾಗಿತ್ತು. ಹಾಗೆಂದ ಮಾತ್ರಕ್ಕೆ ಇದು ನನ್ನ ದೌರ್ಬಲ್ಯವಲ್ಲ. ನಾನು ಇದನ್ನು ಕುಟುಂಬ, ಸಮಾಜದ ಶಕ್ತಿ ಎಂದು ತಿಳಿದೆ. ಹಾಗಾಗಿ ಎಲ್ಲಾ ಕ್ಷಣವೂ ಖುಷಿದಾಯಕ. ಒಟ್ಟಿನಲ್ಲಿ 'ಆಡಿಸಿದಾತನ ಕೈ ಚಳಕದಲ್ಲಿ ಎಲ್ಲ ಅಡಗಿದೆ' ಎಂಬ ವಾಕ್ಯ ಮಾತ್ರ ನನ್ನ ಬದುಕಿಗೆ ಶತಸಿದ್ದ ಎನಿಸಿದರೂ ಗೃಹಿಣಿಯ ಆಲಯ ಯಾರು ಒಡೆಯಲಾಗದ ಪ್ರೀತಿ ಪ್ರೇಮದ ಗೃಹ ಎಂದು ಹೇಳಲು ನಾನು ಖಂಡಿತಾ ಮರೆಯುವುದಿಲ್ಲ.[ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು]

ಹೆಣ್ಣು ಮಕ್ಕಳು ಬಾಹ್ಯಾಕಾಶ ನೋಡಿ ಬಂದಿದ್ದಾರೆ, ವಿಮಾನ ಹಾರಿಸಿದ್ದಾರೆ, ರೈಲು ಓಡಿಸಿದ್ದಾರೆ, ಜಗದಗಲ ಓಡಾಡಿ ದೇಶಕ್ಕೆ ಹೆಸರು ತಂದಿದ್ದಾರೆ ನಾನು ಇದನ್ನು ಒಪ್ಪಿಕೊಳ್ತೇನೆ. ಆದರೆ ಅಡುಗೆಮನೆ ಕಡೆ ಮುಖ ಮಾಡದೆ ಅವರು ಇರುವರೇ. ಚಂದದ ಅಡುಗೆ ಮಾಡಿ ಮನೆಮಂದಿಗೆಲ್ಲಾ ಬಡಿಸದೇ ಇರುವರೇ?. ಅದರ ಆನಂದವನ್ನು ಸವಿಯದೇ ಇರುವರೇ? ಈ ಎಲ್ಲಾ ಮಾತುಗಳನ್ನು ಹೇಳುವ ನಾನು ಪುರುಷರ ಎಲ್ಲಾ ತಪ್ಪು-ಒಪ್ಪುಗಳನ್ನು ಒಪ್ಪಿ ತಲೆಬಾಗಿ ನಡೆಯುತ್ತೇನೆಂದು ಭ್ರಮಿಸಬೇಡಿ. ಅಂದರೆ ನಾನು ಇಡೀ ಕುಟುಂಬದ ಸಹನೆಯ ಕಟ್ಟೆ ಒಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳ ಬಯಸುತ್ತೇನೆ.

ನನ್ನ ಮಾತು ಇಷ್ಟೇ...ಯಾರೋ ಒಬ್ಬ ಮಹಿಳೆ ನಾನು ಗೃಹಿಣಿ ಎಂದಾಕ್ಷಣ ಮೂಗು ಮುರಿಯಬೇಡಿ. ಆಕೆಗೂ ಸಾಧನೆಯ ಹಂಬಲವಿದೆ. ಜ್ಞಾನದ ಒಡಲಿದೆ ಎಂಬುದನ್ನು ಅರಿಯಿರಿ. ಗೃಹಿಣಿ ಎಂಬುದು ಕೇವಲ ಮೂರೇ ಅಕ್ಷರ ಎನಿಸಬಹುದು. ಅದರಲ್ಲಿ ಸುಖ, ಸಂತೋಷ, ನೆಮ್ಮದಿ, ತಾಳ್ಮೆಯ ತೆಕ್ಕೆಯಿದೆ, ಬೇಸರವಾದಾಗ ಸಾಂತ್ವನ ಹೇಳುವ ಮನಸ್ಸಿದೆ, ತಪ್ಪು ಮಾಡಿದಾಗ ತಿದ್ದಿ ತೀಡುವ ಹೃದಯವಿದೆ. ಎಡವಿದಾಗ ಕೈ ಹಿಡಿದು ನಡೆಸುವ ಧೈರ್ಯದ ಮನಸ್ಸಿದೆ.[ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ: ಸಮಗ್ರ ನೋಟ]

ಗೃಹಿಣಿ ಎಂದಾಕ್ಷಣ ಆಕೆ ಎಲ್ಲವನ್ನು ಕಳೆದುಕೊಂಡವಳಲ್ಲ. ಆಕೆಯೂ ಎಲ್ಲವನ್ನು ಪಡೆದುಕೊಂಡವಳು ಪ್ರೀತಿ ಪ್ರೇಮದ ಹಾದಿಯಲ್ಲಿ. ಸಮತೋಲನದ ಬದುಕಿನಲ್ಲಿ ಗೃಹಿಣಿಯೇ ಪ್ರಥಮ. ಆಕೆಯ ಸ್ಥಾನವನ್ನು ಮತ್ತೊಬ್ಬರು ತುಂಬಲು ಸಾಧ್ಯವೇ ಇಲ್ಲ. ದುಡಿಯುವ ಮಹಿಳೆಯ ಜೊತೆ, ಗೃಹಿಣಿಯನ್ನು ಗೌರವಿಸಿ, ಗೃಹಿಣಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯ ಹೇಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Women's Day Special Story : A housewife is no less than any woman working. In fact, her responsibilities are more than anyone. She balances everything in her family with dedication, sacrifice, love, commitment. The housewife deserves all the respect and affection. Without her the world is incomplete.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more