ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೆ ಆಮಿಷವಿಲ್ಲದ ನಿಷ್ಕಲ್ಮಷ ಮಗುವಿನ ಮನಸು!

By ತೇಜಾಶಂಕರ ಸೋಮಯಾಜಿ
|
Google Oneindia Kannada News

ನನಗೆ ಸರಿಯಾಗಿ ನೆನಪಿದೆ.. ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನವೆಂಬರ್ ಬಂತೆಂದರೆ ಕನ್ನಡ ರಾಜ್ಯೋತ್ಸವದ ತಯಾರಿ. ಜೈ ಭಾರತ ಜನನಿಯ ತನುಜಾತೇ ಎಂಬ ನಾಡಗೀತೆಯನ್ನು ವೇದಿಕೆಯಲ್ಲಿ ಹೇಳುವ ನಾಲ್ಕು ಜನರಲ್ಲಿ ನಾನೂ ಒಬ್ಬನಾಗಿ ಇರಬೇಕೆಂಬ ಆಸೆಯೊಂದಿಗೆ ಬಹಳ ಉತ್ಸುಕತೆಯಿಂದ ಅಭ್ಯಾಸ. ಯಾರೋ ನಾಲ್ಕು ಜನರಿಂದ ನಾಡಗೀತೆ ಹಾಡಿಸಿ, ಮುಖ್ಯಾತಿಥಿಗಳ ಸಭಾಧ್ಯಕ್ಷರ ಭಾಷಣ ಮುಗಿತು ಅಂತಾಗಿ ಚಪ್ಪಾಳೆ ಮುಗಿಯುವಷ್ಟರಲ್ಲಿ ನಿದ್ದೆ ಮಂಪರಿನಲ್ಲಿರುತ್ತಿದ್ದ ನಮಗೆ ಎಚ್ಚರಾಗುತ್ತಿತ್ತು.

ಅದು ಕಳೆದು ನಾಲ್ಕಾರು ದಿನಗಳಲ್ಲೇ ನವೆಂಬರ್ 14, ಮಕ್ಕಳ ದಿನಾಚರಣೆ. ಬೇರೆ ಏನಲ್ಲದಿದ್ದರೂ ಅವತ್ತು ಟೀಚರ್ ಹೊಡೆಯುವುದಿಲ್ಲ ಎನ್ನುವುದೇ ದೊಡ್ಡ ಆಸೆ. ಪ್ರಾರ್ಥನೆ ಆದ ನಂತರ ನೀಡುವ ಚಾಕ್ಲೇಟ್, ಇದೇ ನಮಗೆ ದೊಡ್ಡ ಉಡುಗೊರೆ. ಮಕ್ಕಳ ದಿನಾಚರಣೆ ಅಂತ ಅದೊಂದು ದಿನ ಯಾವುದೇ ವಾರವಾದರೂ ಸರಿ ಸಮವಸ್ತ್ರಕ್ಕೆ ಬ್ರೇಕ್. ನವರಾತ್ರಿಯದೋ ದೀಪಾವಳಿಯದೋ ಒಂದು ಹೊಸ ಬಟ್ಟೆ ಹಾಕಿಕೊಂಡು ಶಾಲೆಗೆ ಹೊರಟರೆ ನಮಗೆ ನಾವೇ ರಾಜರು. ದಾರಿಯಲ್ಲಿ ಯಾರಾದರೂ ಮಕ್ಕಳ ದಿನಾಚರಣೆಯ ಶುಭಾಶಯ ಎಂದರೆ ನಮಗಾಗುತ್ತಿದ್ದ ಸಂತೋಷಕ್ಕೆ ಮಿತಿಯಿಲ್ಲ. ಜೊತೆಗೆ ಅದೇ ಖುಷಿಯಲ್ಲಿ ಏನು ಹೇಳಬೇಕೋ ತಿಳಿಯದೆ same to you ಅಂತ ಹೇಳಿ ಅವರು ನಕ್ಕಿದ್ದಕ್ಕೆ ಮತ್ತಷ್ಟು ಖುಷಿಪಟ್ಟು ಚಾಕ್ಲೆಟ್ ಕೊಡಿಸ್ಲಿಲ್ಲ ಅಂತ ಬೇಜಾರೂ ಮಾಡ್ಕೊಂಡ್ ಹೋಗ್ತಿದ್ವಿ.

Wish, I go back to beautiful childhood days again

ಶಾಲೆಯಲ್ಲಿ ನೆಹರು ಅವರ ಬಗ್ಗೆ ಕಂಠಪಾಠ ಮಾಡಿ ನಮ್ಮಲ್ಲೆ ಒಬ್ಬ ಭಾಷಣ ಮಾಡಿದಾಗ ಅಥವಾ ಬೇರೆಯಾರದ್ದೋ ಭಾಷಣ ಕೇಳಿ ನಮಗೆ ಅರ್ಥ ಆಗ್ತಾ ಇದ್ದಿದ್ ಎರಡೇ. ಒಂದು ಅವರ ಜೇಬಲ್ಲಿ ಗುಲಾಬಿ ಇರ್ತಿತ್ತು ಅಂತ, ಮತ್ತೊಂದು ಚಾಚಾ ಅಂತ ಅವರನ್ನ ಕರಿತಿದ್ರು ಅಂತ‌. ಉಳಿದಿದ್ದೆಲ್ಲ ಹೇಳಿದ್ದು ಆ ಕಿವಿಯಿಂದ ಈ ಕಿವಿಗೆ ಅಷ್ಟೇ. ಆದರೂ ಅಲ್ಲಿ ಭಾಗವಹಿಸುವಿಕೆ ಇತ್ತು.

ಮಕ್ಕಳ ದಿನಾಚರಣೆ : ಮಕ್ಕಳೊಂದಿಗೆ ಮಗುವಾದ ಯದುವೀರ್ ಒಡೆಯರ್ಮಕ್ಕಳ ದಿನಾಚರಣೆ : ಮಕ್ಕಳೊಂದಿಗೆ ಮಗುವಾದ ಯದುವೀರ್ ಒಡೆಯರ್

ಇದನ್ನೆಲ್ಲ ಮುಗಿಸಿ ಪ್ರೌಢ ಶಿಕ್ಷಣ ಅಂತ ಹೊರಟಾಗ ಇದರ ಆಚರಣೆಯೇ ಬೇರೆ ತರ. ಟೀಚರ್ ಎಲ್ಲರೂ ಸೇರಿ ಅದೂ ಇದೂ ಅಂತ ಆಟಗಳನ್ನಾಡಿಸಿ ಏನೋ ಒಂದು ಸಿಹಿ ಹಂಚಿ ಒಂದು ಸಭೆ ಮಾಡುತ್ತಿದ್ದರು. ಏನೊ ಒಂದಷ್ಟು ಮಾಡೋವಾಗ ಆಸಕ್ತಿ ಇದ್ದ ನಾಲ್ಕಾರು ಜನ ಅಲ್ಲೇ ಇರ್ತಿದ್ರು. ಅವಾಗ ನಮಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ನಮದೇ ಬೇರೆಯ ಪ್ರಪಂಚ. ಕಾಲೇಜಿಗೆ ಹೋದ ಮೇಲಂತೂ ನಮಗೆ ಸ್ವಾತಂತ್ರ್ಯ ದಿನಾಚರಣೆಯೂ ಬೇಡವಾಗಿದೆ.

ಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲ

ಸಾಧಾರಣವಾಗಿ ನಾವು ಬೆಳೆಯುತ್ತಾ ಹೋದಂತೆ ಕೆಲವು ನಮ್ಮ ಬಾಲ್ಯದ ವಿಚಾರಗಳಲ್ಲಿದ್ದ ಅಭಿಪ್ರಾಯಗಳು ಬದಲಾಗುತ್ತದೆ. ಅಮ್ಮನ ಕೈಯನ್ನೇ ಹಿಡಿದು ರಸ್ತೆ ದಾಟುತ್ತಿದ್ದ ನಾವು ಇಂದು ಅಮ್ಮನ ಜೊತೆ ಹೊರಗೆ ಕಾಲಿಡಲಾರೆವು. ಅಮ್ಮನ ಕೈತುತ್ತಿನ ಬದಲು ಇಂದು ಕಾಲೇಜು ಕ್ಯಾಂಟೀನ್ ಕೈ ಬೀಸಿ ಕರೆಯುತ್ತದೆ. ಮಡಿಲಲ್ಲೆ ನಿದ್ರಿಸಿದ ನಮ್ಮನ್ನು ಅರ್ಧ ರಾತ್ರಿ ಅರಚಿದ ನಮ್ಮನ್ನು ಮಲಗಿಸಿ, ಹೊದಿಕೆ ಹೊಚ್ಚಿ ಹೋಗುತ್ತಿದ್ದ ಅಮ್ಮನೇ ಇಂದು ನಮ್ಮ ರೂಮಿಗೆ ಕೇಳಿ ಕಾಲಿಡಬೇಕು.

ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತುಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು

ಅಜ್ಜ ನೀಡುತ್ತಿದ್ದ ಸಿಹಿಯ ಕಲ್ಲುಸಕ್ಕರೆ ಇಂದು ಆತ ಮೇಲೇಳಲು ಕೈ ಹಿಡಿ ಬಾ ಎಂದರೆ ಕಹಿಯಾಗುತ್ತದೆ. ಯಾವ ತಂದೆ ನಮಗೆ ಹೀರೋ ಆಗಿ ಕಾಣುತ್ತಿದ್ದನೋ ಆತ ಇಂದು ವಿಲನ್. ಕಾರಣ ಒಂದು ಬೈಕ್ ಕೊಡಿಸಿಲ್ಲ. ಮೊಬೈಲ್ ಕೊಡಿಸಿಲ್ಲ ಮನಗೆ ಲೇಟಾಗಿ ಬಂದರೆ ಬಯ್ಯುತ್ತಾನಲ್ಲ?! ಅಣ್ಣನ ಅಂಗಿಯನ್ನು ಕದ್ದು ಹಾಕುತ್ತಿದ್ದಾಗ ಇಲ್ಲದ ಸ್ವಾವಲಂಬನೆ ಇಂದು ಅವನು ಮೊಬೈಲ್ ಹಿಡಿದರೆ ತಮ್ಮನಿಗೆ ನೆನಪಾಗುತ್ತದೆ.

ಅಮ್ಮ ಇಲ್ಲದ ವೇಳೆ ಜಡೆ ಹಾಕಿದ ಅಕ್ಕ ಇಂದು ತನ್ನೆಲ್ಲ ಗುಟ್ಟನ್ನು ಅಮ್ಮನಿಗೆ ಹೇಳುವ ಚಾಡಿಬುರಕಿ. ರಸ್ತೆಯಲ್ಲಿ ಸೈಕಲ್ ನಿಂದ ಬಿದ್ದಾಗ ಎತ್ತಿ ಮನೆವರೆಗೂ ತಂದು ಬಿಟ್ಟಿದ್ದ ಅದೇ ಪಕ್ಕದ ಮನೆಯವರು ಇಂದು ಪಕ್ಕದ ಬೀದಿಯಲ್ಲಿ ಕಂಡರೆ ಪಾಕಿಸ್ತಾನದವರನ್ನು ಕಂಡಂತೆ. ಶಾಲೆಯ ರಜೆಯಲ್ಲಿ ಅಜ್ಜನ ಮನೆಯಲ್ಲಿಯೇ ಇರುತ್ತಿದ್ದ ನಮಗೆ ಅಜ್ಜನ ಮನೆಯಿಂದ ಮಾವನೋ ಅತ್ತೆಯೋ ಬಂದರೆ ಮಾತನಾಡಿಸಲೂ ಅಗದಂತಹ ಗಡಿಬಿಡಿ.

ಇದೆಲ್ಲ ನೋಡಿ ನನಗೆ ಮೂಡುವ ಪ್ರಶ್ನೆ ನಾನು ಸ್ವಾವಲಂಬಿಯಾಗುತ್ತಿದ್ದೇನಾ ಅಥವಾ ನನ್ನದೇ ಭ್ರಮೆಯ ಪ್ರಪಂಚದಲ್ಲಿ ಒಬ್ಬಂಟಿಯಾಗಿ ಸಾಗುತ್ತಿದ್ದೇನಾ? ಎಂದು. ಒಮ್ಮೊಮ್ಮೆ ಯೋಚಿಸಿದಾಗ ಹೌದು ನಾನು ಸ್ವಾವಲಂಬಿಯಾಗಿ ಬದುಕುತ್ತಿದ್ದೇನೆ ಎಂದೆನಿಸಿದರೂ, ಹಲವು ಬಾರಿ ಎಲ್ಲರಿದ್ದೂ ಅನಾಥನಂತಾಗುತ್ತಿದ್ದೇನೆ ಎಂದೆನಿಸುತ್ತದೆ. ಬಹುಷಃ ಇದು ನನ್ನೊಬ್ಬನ ಪಾಡಲ್ಲ. ಎಲ್ಲರೂ ಹೀಗೆಯೇ ಯೋಚಿಸಿರಬಹುದು.

ಅಮ್ಮನ ಕೈತುತ್ತು ಸಿಗದಿದ್ದರೂ ಅಮ್ಮನ ಕೈಅಡಿಯಲ್ಲಿ ಬಾಳಲು ಬಯಸುವಂಥ, ಅಪ್ಪನ ಆಸೆಗಳನೆಲ್ಲ ಪೂರೈಸದಿದ್ದರೂ ಆತನ ಕಷ್ಟಗಳನ್ನು ಅರಿತುಕೊಳ್ಳುವಂಥ, ಅಜ್ಜ- ಅಜ್ಜಿಯರ ಮುದುಡಿದ ಕೈಗಳಿಗೆ ಆಸರೆಯಾಗಿ ಜೊತೆಗೆ ನಾಲ್ಕಾರು ಮಾತನಾಡುವಷ್ಟು ತಾಳ್ಮೆ ಇರುವಂಥ, ಅಕ್ಕಪಕ್ಕದವರೊಡನೆ ಆತ್ಮೀಯತೆ ಅನುರಾಗಗಳಿರುವಂಥ ಮುಗ್ಧತೆಯೊಡನೆ ನಿಷ್ಕಲ್ಮಷವಾದ ನಂಬಿಕೆಯ ಹೊತ್ತಿರುವಂಥ ಮನಸ್ಸು ನನಗೆ ಬೇಕೆನಿಸುತ್ತಿದೆ.

ಅದು ಮಗುವ ಮನಸು. ಆ ಮಗುವ ಮನದಲ್ಲಿ ಪ್ರೀತಿ-ಪ್ರೇಮಗಳಿವೆ, ನಂಬಿಕೆಯಿದೆ ಆಸೆ ಇದೆ. ಆದರೆ ಆಮಿಷವಿಲ್ಲ. ನಮ್ಮನ್ನು ನಂಬಿದ ಮಗು ನಾವು ಕೈಬಿಟ್ಟು ಹಾರಿಸಿದರೂ ನಮ್ಮನ್ನು ನೋಡಿ ನಗುತ್ತದೆ ಆ ನಂಬಿಕೆ ಬೇರೆಲ್ಲೂ ಸಿಗದು. ಅಂತಹ ಪ್ರಾಕೃತಿಕ ಭಾವನೆಗಳ ಆಗರವಾದ ಮುಗ್ಧ ಮನಸಿನ ಮಕ್ಕಳ ದಿನ ಇಂದು. ಅಂತಹ ಮನಸಿಗೆ ಹಾತೊರೆದು ನಾನೂ ಮಗುವಾಗಿರಬೇಕಿತ್ತು ಎಂದು ಅಂದುಕೊಳ್ಳುವ ಎಲ್ಲರಿಗೂ ಮಕ್ಕಳ ದಿನದ ಶುಭಾಶಯಗಳು.

English summary
Wish, I go back to beautiful childhood days again. Why have I lost the innocense of a child? Why am I forgetting all the relationships, friendships? I want to go back to goodold days. Writes Thejashankar Somayaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X