ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ರ ಎಂಬ ರತ್ನವನ್ನು ಯಾರು ಸೃಷ್ಟಿಸಿದರೋ‌..

By ತೇಜಶಂಕರ ಸೋಮಯಾಜಿ. ಕೆ.ಎಲ್.
|
Google Oneindia Kannada News

ಮೊನ್ನೆ 'ಹುಟ್ಟು' ಎಂಬ ವಿಷಯವನ್ನು ಕುರಿತು ಬರೆಯುವಾಗ ಒಂದು ಹುಟ್ಟಿನ ಜೊತೆಗೆ ನೂರಾರು ಸಂಬಂಧಗಳು ಹುಟ್ಟುತ್ತದೆ ಅನಿಸಿತು. ಅದು ಸತ್ಯವೂ ಕೂಡ. ಆ ಸಂಬಂಧಗಳು ನಾವು ಬೇಡವೆಂದರೂ ಸಾಮಾಜಿಕವಾಗಿ ಬರುವಂಥದ್ದು ಮತ್ತು ಆ ಸಂಬಂಧಗಳಿಗೂ ನಮ್ಮ ಜನನ ಸಮಯಕ್ಕೂ ಸಾಮ್ಯವಿರುತ್ತದೆ. ಅಪ್ಪ ಅಮ್ಮ ಅಣ್ಣ ತಮ್ಮ ಇವು ಈ ಸಾಲಿನವುಗಳು. ಇನ್ನು ಕೆಲವು ಸಂಬಂಧಗಳು ಸಾಂದರ್ಭಿಕವಾಗಿ ಸೃಷ್ಟಿಯಾಗುತ್ತದೆ. ಒಂದು ಮದುವೆಯಾದರೆ ಪತಿ- ಪತ್ನಿಯರ, ಭಾವ ಮೈದುನರ ಅತ್ತಿಗೆ ನಾದಿನಿಯರ ಸಂಬಂಧ ಜನಿಸುತ್ತದೆ. ಇದಕ್ಕಿಂತಲೂ ಹೊರತಾದದ್ದು ಇನ್ನೊಂದು ಸಂಬಂಧವಿದೆ ಅದೇ ಗೆಳೆತನ.

ಕಥೆ: ಗೆಳೆಯ 'ಮುಖ' ಪರಿಚಯ ಮಾಡಿಸಿದ ಫೇಸ್ ಬುಕ್ಕಥೆ: ಗೆಳೆಯ 'ಮುಖ' ಪರಿಚಯ ಮಾಡಿಸಿದ ಫೇಸ್ ಬುಕ್

ನಾನು ಖಂಡಿತವಾಗಿ ಹೇಳುತ್ತೇನೆ. ನಾನು ಅಂದಿನಿಂದ ಗೆಳೆಯ ಎಂದು ಯಾರೊಬ್ಬನೂ ಹೇಳಲಾಗದು. ನಾನು ಮತ್ತು ಅವನು ಗೆಳೆಯರು ಎಂದರೆ ಅದು ಕೇವಲ ಅವರಿಬ್ಬರ ಗೆಳೆತನ ಸೂಚಿಸುತ್ತದಷ್ಟೇ. ಆದರೆ ಅವರಿಬ್ಬರೂ ಇನ್ಯಾರಿಗೋ ಇನ್ನಾವುದೋ ಸಮಯದಲ್ಲಿ ಗೆಳೆಯರಾಗಿರುತ್ತಾರೆ. ಹಾಗೆಯೇ ಆ ದಿನದಿಂದ ಅಲ್ಲಿ ಆ ಕಾರಣದಿಂದ ನಾವು ಗೆಳೆಯರಾದೆವು ಎನ್ನುವುದಿದೆಯಲ್ಲ ಅದು ಕೇವಲ ಒಂದು ಭೇಟಿಯಷ್ಟೆ. ಹೆಚ್ಚೆಂದರೆ ಅದು ಪರಿಚಯವಾಗಿರಬಹುದು. ಗೆಳೆತನವಂತು ಅಲ್ಲ. ಏಕೆಂದರೆ ಸಮಯ - ಸಂದರ್ಭ - ದೇಶ - ಭಾಷೆ - ಧರ್ಮ ಇವೆಲ್ಲವನ್ನು ಮೀರಿದ ನಿಷ್ಕಲ್ಮಷ ಮನಸುಗಳ ಬಂಧವೇ ಈ ಸ್ನೇಹ. ಇದು ಇಂತಹ ಸಮಯ ಇಂತಲ್ಲೇ ಇಂಥ ಕಾರಣದಿಂದ ಹುಟ್ಟಬೇಕೆಂದಿಲ್ಲ. ಎಲ್ಲಿ ಯಾವಾಗ ಯಾರಲ್ಲಿ ಜನಿಸುತ್ತದೆಯೋ . ಜನಿಸಿದ ಮೇಲೆ ಮನಸ್ಸು ಕೆಡದೆ ಇದ್ದರೆ ಅದು ನಿತ್ಯವಾಗಿರುವಂಥದ್ದು.

ನಾನು ಒಂದು ದಿನ ನನ್ನ ಗೆಳೆಯರೆನ್ನೆಲ್ಲ ಪಟ್ಟಿ ಮಾಡಬೇಕು ಅಂತ ಅಂದುಕೊಂಡೆ. ಗೆಳೆಯರ ಪಟ್ಟಿ ಮಾಡುವ ಮೊದಲು ಗೆಳೆಯ ಎಂದರೇನು ಎಂದು ತಿಳಿಯಲು ಒಂದು ಶ್ಲೋಕವನ್ನು ನೋಡಿದೆ.

Who is a true friend? What is the definition of friendship?

ಪಾಪಂ ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ || ಎಂಬ ಶ್ಲೋಕ ಅದು.

ಅಂದರೆ ಒಬ್ಬ ಗೆಳೆಯ ತಪ್ಪು ಕೆಲಸ ಮಾಡುವುದನ್ನು ತಪ್ಪಿಸುತ್ತಾನೆ. ಒಳ್ಳೆಯ ಕೆಲಸ ಮಾಡಿಸುತ್ತಾನೆ. ನಮ್ಮ ಗುಟ್ಟನ್ನು ನಮ್ಮಲ್ಲೇ ಬಚ್ಚಿಟ್ಟಿರುತ್ತಾನೆ. ನಮ್ಮ ಒಳ್ಳೆಯ ಪ್ರತಿಭೆಗಳನ್ನು ಬೆಳೆಸುತ್ತಾನೆ. ಕಷ್ಟದಲ್ಲಿ ಜೊತೆಯೇ ಇರುತ್ತಾನೆ ಮತ್ತು ಬೇಕಾದ ಸಮಯದಲ್ಲಿ ಬೇಕಾದ್ದು ಕೊಡುತ್ತಾನೆ ಎಂದು. ನಂತರ ಪಟ್ಟಿ ಬರೆದು ಮುಗಿಸಿದರೆ ಬಹಳ ಆಶ್ಚರ್ಯವಾಗಿತ್ತು. ಕಾರಣವಿಷ್ಟೇ....

ಸ್ನೇಹಿತನ ಸಂಕಷ್ಟ ಹಂಚಿಕೊಂಡ ಇವರು ನಿಜವಾದ ಗೆಳೆಯರು!ಸ್ನೇಹಿತನ ಸಂಕಷ್ಟ ಹಂಚಿಕೊಂಡ ಇವರು ನಿಜವಾದ ಗೆಳೆಯರು!

ನಾನು ಹುಟ್ಟಿದಾಗಿನಿಂದ ನನ್ನೊಡನೆ ಇದ್ದ ಅವರು ಈ ಸಾಲಿನಲ್ಲಿ ಮೊದಲಿದ್ದರು. ನನ್ನೆಲ್ಲ ತಪ್ಪನ್ನು ತಿದ್ದಿದ, ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟಿ ಹುರಿದುಂಬಿಸಿದ, ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್ ಎಂದು ತಿಳಿದು ಅವರೇ ನನ್ನನ್ನು ಗೆಳೆಯನಂತೆ ನೋಡುವಾಗ ನನ್ನ ಶಕ್ತಿಯಾಗಿ ನನ್ನ ಜೊತೆಗಿರುವ ಅವರ ಹೆಸರು ಬರೆಯದೇ ಇರಲಾಗಲಿಲ್ಲ. ಹೌದು.. ನಿಮ್ಮ ಊಹೆ ಸರಿ ನಾನು ಬರೆದ ಪದ ಅಪ್ಪ. ಅವರ ಪ್ರೀತಿ ಕಾಳಜಿ ಜವಾಬ್ದಾರಿಗಳ ಮಧ್ಯೆ ಸ್ನೇಹ ಮರೆಯಾಗಿದೆ ಅಷ್ಟೇ. ತೆರೆ ಕಳಚಿ ನಾನು ನೋಡಬೇಕಷ್ಟೇ.

ನನಗೆ ಪ್ರಪಂಚ ಪರಿಚಯಿಸಿದ 'ಅಪ್ಪ' ಎಂಬ ಮೊದಲ ಗೆಳೆಯನಿಗೆ ಸರಿಸಮನಾಗಿ ನನ್ನನ್ನು ಪ್ರಪಂಚಕ್ಕೆ ಪರಿಚಯಿಸಿದ ನನ್ನನ್ನೇ ಪ್ರಪಂಚವಾಗಿಸಿಕೊಂಡ ಒಬ್ಬಳು ಗೆಳತಿ ಇದ್ದಾಳೆ. ಆಕೆ ನನಗೆ ಹಸಿವಾಗದಂತೆ, ನಾನೆಂದೂ ನೋವನ್ನು ಅನುಭವಿಸದಂತೆ ಕಾಲಕಾಲಕ್ಕೆ ಕೊಡಬೇಕಾದ ಎಲ್ಲವನ್ನು ಕೊಟ್ಟಿದ್ದಾಳೆ. ನನ್ನನ್ನು ಪೋಷಿಸಿದ್ದಾಳೆ. ಇವಳಿಗಿಂತ ಇನ್ನಾವ ಗೆಳತಿ ಹೀಗೆ ಮಾಡಿಯಾಳು..? ನನ್ನ ಮುಖದ ಮೊದಲ ಮಂದಹಾಸಕ್ಕೆ ಕಾರಣಳಾದ 'ಅಮ್ಮ' ಎಂಬ ಎರಡಕ್ಷರದ ಈಕೆ ನನ್ನ ಮೊದಲ ಗೆಳತಿ.

ನನ್ನ ಜೊತೆಜೊತೆಗೆ ಬೆಳೆಯುತ್ತಾ ನನ್ನ ಭಾವ ಹಂಚಿಕೊಂಡ ನನ್ನ ಸೋದರರಿದ್ದಾರೆ ನೋಡಿ, ನಂತರದ ಸ್ಥಾನ ಅವರಿಗೆ. ಬೇರೆಬೇರೆ ಭಾವನೆಗಳಿದ್ದರೂ ದಿನದ ಬಹಳಷ್ಟು ಸಮಯ ಒಟ್ಟಿಗೆ ಕಳೆಯುವುದರಿಂದ ಭಾವನೆಗಳ ಹಂಚಿಕೆಗೆ ಅವಕಾಶ ಮತ್ತು ಅನಿವಾರ್ಯತೆ ಎರಡೂ ಇರುತ್ತದೆ. ತಪ್ಪು - ಒಪ್ಪುಗಳ, ಬೇಕು - ಬೇಡಗಳ ಹಂಚಿಕೆಗೆ ಇದಕ್ಕಿಂತ ಉತ್ತಮರಾದವರು ಇರಲಾರರು. ನಮ್ಮ ಎಷ್ಟೋ ಚೇಷ್ಟೆಗಳನ್ನು ಗುಟ್ಟಾಗಿಡುವ, ಅಪ್ಪ - ಅಮ್ಮ ಮಾಡುವ ಕ್ಷಣಿಕ ಕೋಪದ ದಾಳಿಯಿಂದ ಕಾಪಾಡುವ ಇವರು ನಿಜವಾಗಿಯೂ ಗೆಳೆಯರಾಗುತ್ತಾರಲ್ಲವೇ?

ರಕ್ತಸಂಬಂಧಿಗಳಂತೆ ಮಾನಸಿಕವಾಗಿ ಸಂಬಂಧಿಗಳಾದವರು ಅನೇಕರು ಇರುತ್ತಾರೆ. ಪಕ್ಕದ ಮನೆಯಿಂದ ಹಿಡಿದು ಅದೆಷ್ಟೋ ಜನರ ಪರಿಚಯವಾಗುವ, ಬಾಳಿನ ಬೀದಿಯಲ್ಲಿ ಎಂದೂ ಮರೆಯಲಾರದಂತೆ ಕೆಲವರು ಉಳಿದು ಬಿಡುತ್ತಾರೆ. ಪಾಠಯಲ್ಲಿ ಜೊತೆಯಾದವರು, ಆಟದಲ್ಲಿ ಕೂಡಿಕೊಂಡವರು, ಕಣ್ಣೀರ ಹನಿಗಳ ಕಾಣದಂತಾಗಿಸಿದವರು, ಬಿದ್ದಾಗ ಮೇಲೆತ್ತಿದವರು, ಮನದ ಪ್ರತಿ ಭಾವನೆಯ ಪಾಲುದಾರರು ಹೀಗೆ ನನ್ನ ಜೀವನದ ಪ್ರತಿ ಸನ್ನಿವೇಶಗಳಲ್ಲೂ ಇರುವವರು ನನ್ನ ಆ ಸಂಬಂಧಿಗಳು. ಅವರೆಲ್ಲರೂ ಆ ಪಟ್ಟಿಯಲ್ಲಿ ಮೂಡುತ್ತಾ ಹಾಳೆ ಪೂರ್ತಿಯಾಯಿತು.

ಆಗ ತಿಳಿಯಿತು ಅಂಥವರಿಗೂ ನಮಗೂ ಇರುವ ಸಂಬಂಧ ಇದೇ ಗೆಳೆತನವೆಂದು ಮತ್ತು ಹೇಗೆ ಅವರ ಹೆಸರು ಖಾಲಿ ಹಾಳೆಯಲ್ಲೆಲ್ಲ ತುಂಬಿತೋ ಹಾಗೆ ನನ್ನ ಆ ಗೆಳೆಯರೆಲ್ಲ ನನ್ನ ಬದುಕನ್ನು ತುಂಬಿಕೊಂಡಿದ್ದಾರೆಂದು. ನಿಮಗೂ ಹೀಗೆ ಅನೇಕರಿರುತ್ತಾರೆ. ಏಕೆಂದರೆ ಅನಾಥನಲ್ಲೂ ಬೆಳೆಯುವ ಬಂಧ ಈ ಸ್ನೇಹ.

ಬಹಳಷ್ಟು ಜನರು ಗೊಂದಲಗೊಳ್ಳುವ ವಿಷಯವೊಂದಿದೆ. ನನ್ನ ಮತ್ತು ಅವರ ಮಧ್ಯೆ ಇರುವ ಬಂಧ ಪ್ರೀತಿಯೋ ಅಥವಾ ಸ್ನೇಹವೋ ಎಂದು. ಆದರೆ ನನ್ನ ಪ್ರಕಾರ, ಪ್ರೀತಿಯಿಲ್ಲದ ಸ್ನೇಹವಿಲ್ಲ. ಅದರಂತೆಯೇ ಸ್ನೇಹವಿರದ ಪ್ರೀತಿಯಿಲ್ಲ. ಗಂಡು - ಹೆಣ್ಣಿನ ನಡುವೆ ಎಲ್ಲಾ ವಯಸ್ಸಿನಲ್ಲೂ ಇರಬಹುದಾದದ್ದು ಈ ಗೆಳೆತನವೊಂದೆ. ಮನುಷ್ಯನು ತಂದೆ ತಾಯಿಯಿಂದ ಆರಂಭಿಸಿ ಎಲ್ಲಿಯತನಕ ಬಾಂಧವ್ಯ ಬೆಳೆಸುತ್ತಾನೋ ಅಲ್ಲೆಲ್ಲ ಮೊದಲ ಉದಯ ಗೆಳೆತನದ್ದೇ. ಅಂಥ ಗೆಳೆಯನದಿಂದಲೇ ಕುಚೇಲ ಕೃಷ್ಣನನ್ನು ಪಡೆದ. ದುಷ್ಟ ದುರ್ಯೋಧನ ಕೂಡ ಕರ್ಣನನ್ನು ಪಡೆದ. ಅದು ಸ್ನೇಹಕ್ಕಿರುವ ತಾಕತ್ತು. ಗಂಡ - ಹೆಂಡತಿಯಾಗಲಿ, ಅಣ್ಣ -ತಮ್ಮ -ಅಕ್ಕ -ತಂಗಿಯರಾಗಲಿ, ತಂದೆ- ತಾಯಿ- ಮಕ್ಕಳೇ ಆಗಲಿ ಎಲ್ಲರನ್ನು ಬೆಸೆಯುವ ತಾಕತ್ತು ಗೆಳೆತನದ್ದು.

ಕೊನೆಯ ಮಾತು...

ಕೇನ ರತ್ನಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಂ ಎಂಬಂತೆ ಮಿತ್ರ ಎಂಬ ರತ್ನವನ್ನು ಯಾರು ಸೃಷ್ಟಿಸಿದರೋ‌.. ನಿಜವಾಗಿಯೂ ಅವರಂಥ ಮಿತ್ರರು ಮನುಕುಲಕ್ಕೆ ಇನ್ನೊಬ್ಬರಿಲ್ಲ. ಪ್ರಪಂಚ ಇಂದು ಆಧುನಿಕತೆಯ ಪರದೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ ಸೀಮಿತವಾಗುತ್ತಾ ಕಿರಿದಾಗುತ್ತಿದೆ. ಪಕ್ಕದ ಮನೆಯವರೂ ಅಪರಿಚಿತರಾಗುತ್ತಿದ್ದಾರೆ. ಮೊಬೈಲ್ ಟಿವಿ ಮುಂತಾದ ಆವಿಷ್ಕಾರದಿಂದ ಸಂಬಂಧಗಳು ಆವಿಯಾಗುತ್ತಿರುವಾಗಲೂ ಬಾಧೆಗೊಳಗಾಗದ ಬಂಧವೇ ಈ ಸ್ನೇಹ. ಫೇಸ್ ಬುಕ್ - ವಾಟ್ಸಪ್ ಎಂಬಂಥ ಅದೆಂಥ ಮಹಾನ್ ಆವಿಷ್ಕಾರಕ್ಕೆ ಹೋದರೂ ಅಲ್ಲಿ ಸಿಗುವುದು ಅದೇ ಗೆಳೆತನ. ಗೆಳೆತನಕ್ಕಾಗಿ ಅಲ್ಲೆಲ್ಲೋ ಇರುವ ಸೂರ್ಯ ಕಮಲವ ಅರಳಿಸುವಂತೆ ಅಳಿಸಲಾಗದ ಈ ಸಂಬಂಧ ನಮ್ಮೆಲ್ಲರನ್ನು ಬೆಳೆಸಲಿ.

ರಾಮನವಮಿ ಕೃಷ್ಟಾಷ್ಟಮಿಯಂತೆ, ಕ್ರಿಸ್ ಮಸ್ ನಂತೆ ಅಥವಾ ಬಕ್ರೀದ್ ನಂತೆ 'ಗೆಳೆತನ ದಿನ' ಎಂಬುದು ಆಚರಿಸಲಾಗದು. ಗೆಳೆಯರು ಗೆಳೆತನಕ್ಕೆ ಬೆಲೆಕೊಟ್ಟು ಗೆಳೆತನವ ಉಳಿಸುವುದೇ ನಿಜವಾದ ಆಚರಣೆ. ಸರ್ವಥಾ ಸುಕರಂ ಮಿತ್ರಂ ದುಷ್ಕರಂ ಪರಿಪಾಲನಂ ಎಂಬಂತೆ ಗೆಳೆತನದ ಪಾಲನೆ ಅತಿಕಷ್ಟ. ಶುದ್ಧಮನಸ್ಸು ಗೆಳೆತನವ ಕಾಪಾಡುತ್ತದೆ. ಆ ಶುದ್ಧ ಮನಸ್ಸು ನಮ್ಮ ಗೆಳೆತನವ ಕಾಪಾಡಲಿ. ಗೆಳೆತನದಿನದ ಶುಭಾಶಯಗಳು.

English summary
Who is a true friend? What is the definition of friendship? It is very difficult to defint the definition of friendship. And it is difficult to maintain good friendship too. There cannot be better friends than father and mother. Happy friendship day. ಮಿತ್ರ ಎಂಬ ರತ್ನವನ್ನು ಯಾರು ಸೃಷ್ಟಿಸಿದರೋ‌..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X