ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಸ್ಕರಿಸಬೇಕಾದ ಗುರುವಿನ ಗೌರವ ಕುಸಿಯಲು ಕಾರಣವೇನು?

By ವಿವೇಕ ಬೆಟ್ಕುಳಿ, ಕುಮಟಾ, ಉತ್ತರ ಕನ್ನಡ
|
Google Oneindia Kannada News

25-30 ವರ್ಷದ ಹಿಂದಿನ ಮಾತು. ಹಳ್ಳಿಗಳಲ್ಲಿ ಯಾವುದೇ ರೀತಿಯ ಕಾರ್ಯಕ್ರಮದಲ್ಲಿ ಗೌರವಾನ್ವಿತ ಹುದ್ದೆ ಶಿಕ್ಷಕರಿಗೆ ಸಲ್ಲುತ್ತಿತ್ತು. ಹಳ್ಳಿಯಲ್ಲಿ ನಡೆಯುವ ನಾಟಕ, ಊರಿನ ಜಾತ್ರೆ, ಕಬ್ಬಡಿ ಪಂದ್ಯಾವಳಿ, ಈ ಎಲ್ಲದರ ಪ್ರಚಾರದ ಹ್ಯಾಂಡಬಿಲ್ ಗಳಲ್ಲಿ ಆ ಊರಿನ ಶಾಲೆಯ ಶಿಕ್ಷಕರ ಹೆಸರು ಕಾಣುತ್ತಿತ್ತು.

ಊರಿನ ಹಬ್ಬಹರಿದಿನಗಳಂದು ಶಿಕ್ಷಕರ ಮನೆಗೆ ಹಬ್ಬಕ್ಕೆ ತಯಾರಿಸಿದ ತಿಂಡಿ ತಿನಿಸುಗಳ ರಾಶಿಯೇ ಬಂದು ಸೇರುತ್ತಿತ್ತು. ಪ್ರತಿ ಮನೆಯಲ್ಲಿ ನಡೆಯುವ ಕಾರ್ಯಗಳಿಗೆ ಆ ಊರಿನ ಶಾಲೆಯ ಶಿಕ್ಷಕರ ಮನೆಮಂದಿಯೆಲ್ಲಾ ವಿಶೇಷ ಆಹ್ವಾನಿತರಾಗಿದ್ದರು.

ಒಟ್ಟಾರೇ ಆ ಊರನ್ನು ಪ್ರತಿನಿಧಿಸುವ ಪಂಚಾಯಿತಿ ಸದಸ್ಯ, ಅನಾದಿ ಕಾಲದಿಂದ ಊರಿನ ಪ್ರಮುಖರಾಗಿದ್ದ ಪಟೇಲರು/ಗೌಡರ ಮನೆತನದವರು ಎಲ್ಲರೂ ತಮ್ಮ ಊರಿನ ಶಾಲೆಯ ಶಿಕ್ಷಕರನ್ನು ತಮ್ಮ ಊರಿಗೆ ದಾರಿ ತೋರುವ ಗುರುವಿನಂತೆ ಗೌರವಿಸುತ್ತಿದ್ದರು. ಶಿಕ್ಷಕರ ಮತ್ತು ಊರಿನವರ ಸಂಬಂಧ ಭಾವನಾತ್ಮಕವಾಗಿತ್ತು. ಶಿಕ್ಷಕರಾಗಿದ್ದವರು ಸಹಾ ಅದೇ ಹಳ್ಳಿಗಳಲ್ಲಿ ತಮ್ಮ ಕುಟುಂಬ ಸಮೇತ ವಾಸಿಸುತ್ತಿದ್ದರು. ವರ್ಷಕ್ಕೆ ಒಂದೆರಡು ಬಾರಿ ರಜೆಯ ಅವಧಿಯಲ್ಲಿ ತಮ್ಮ ಮೂಲ ಊರುಗಳಿಗೆ ಹೋಗಿ ಬರುತ್ತಿದ್ದರು. ಶಿಕ್ಷಕರ ಮಕ್ಕಳು ಸಹಾ ಅದೇ ಊರಿನ ಶಾಲೆಯಲ್ಲಿ ಹಳ್ಳಿಯ ಮಕ್ಕಳೊಂದಿಗೆ ಓದುತ್ತಿದ್ದರು. ಈ ಕಾರಣಕ್ಕಾಗಿ ಶಿಕ್ಷಕರು ಮತ್ತು ಊರಿನ ನಡುವ ತಾವೆಲ್ಲರೂ ಒಂದೇ ಎಂಬ ಭಾವನೆ ಇತ್ತು.

ಶಿಕ್ಷಕರ ದಿನಾಚರಣೆ: ಸರ್ಕಾರ ಪ್ರಶಸ್ತಿ ಘೋಷಿಸಿದ್ದು ಯಾರ್ಯಾರಿಗೆ? ಶಿಕ್ಷಕರ ದಿನಾಚರಣೆ: ಸರ್ಕಾರ ಪ್ರಶಸ್ತಿ ಘೋಷಿಸಿದ್ದು ಯಾರ್ಯಾರಿಗೆ?

ಇಂತಹ ಭಾವನಾತ್ಮಕ ಸಂಬಂಧದ ಶಿಕ್ಷಕರ ಹುದ್ದೆ ಕಾಲಕ್ರಮೇಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಬಂದಿರುವುದು ಶೋಚನೀಯ. ಆಧುನಿಕತೆ ಬೆಳೆದಂತೆ ಇಂದು ಶಿಕ್ಷಕರ ಹುದ್ದೆಯ ಗೌರವ ದಿನೇ ದಿನೇ ಕಡಿಮೆಯಾಗುತ್ತಾ ಇದೆ. ಸಮಾಜ ಶಿಕ್ಷಕರನ್ನು ಆದರ್ಶವಾಗಿ ನೋಡಲು ಬಯಸಿದರೆ, ಆದರೇ ಶಿಕ್ಷಕರಾದವರು ಬದಲಾಗುತ್ತಿರುವ ಸಮಾಜದಂತೆ ತಾವು ಬದಲಾಗುತ್ತಿದ್ದಾರೆ. ಈ ಬದಲಾವಣೆಯ ನಾಗಾಲೋಟದಲ್ಲಿ ಶಿಕ್ಷಕ ಹುದ್ದೆಯ ಗೌರವ ಕುಸಿಯುತ್ತಿರುವುದನ್ನು ಕಾಣಬಹುದು. ಅದಕ್ಕೆ ಪ್ರಮುಖವಾಗಿ ಈ ಕೆಳಕಂಡಂತೆ ಕಾರಣಗಳನ್ನು ಗುರುತಿಸಬಹುದಾಗಿದೆ.

ಹಳ್ಳಿಗಳಲ್ಲಿ ಇಂದು ಶಿಕ್ಷಕರು ವಾಸಿಸುತ್ತಿಲ್ಲ

ಹಳ್ಳಿಗಳಲ್ಲಿ ಇಂದು ಶಿಕ್ಷಕರು ವಾಸಿಸುತ್ತಿಲ್ಲ

ಇಂದು ಹೆಚ್ಚಿನ ಶಿಕ್ಷಕರು ತಾವು ಪಾಠ ಮಾಡುವ ಹಳ್ಳಿಗಳಲ್ಲಿ ವಾಸ ಮಾಡುತ್ತಿಲ್ಲ. ಬದಲಾಗಿ ಪಟ್ಟಣಗಳಿಂದ ಓಡಾಡುತ್ತಿದ್ದಾರೆ. ಸಹಜವಾಗಿ ಈ ಕಾರಣದಿಂದ ಸಮುದಾಯ ಮತ್ತು ಶಿಕ್ಷಕರ ನಡುವೆ ಅನ್ಯೋನ್ಯ ಸಂಬಂಧವೇ ಇಲ್ಲವಾಗಿದೆ. ಶಾಲೆ ಬಿಟ್ಟ ತಕ್ಷಣ ಮನೆಗೆ ಓಡುವ, ಬೆಳಿಗ್ಗೆ ವೇಳೆಗೆ ಸರಿಯಾಗಿ ಶಾಲೆಗೆ ಬಂದು ತನ್ನ ಕಾರ್ಯ ಮುಗಿಸುವ ಒತ್ತಡದಲ್ಲಿ ಶಿಕ್ಷಕರು ಇರುವರು. ಸಮುದಾಯದೊಂದಿಗೆ ಸ್ಪಂದಿಸಲು ಮಾತನಾಡಲು ವೇಳೆಯೇ ಇಲ್ಲವಾಗಿದೆ.

ಶಿಷ್ಯನ ಗೆಲುವನ್ನು ನಿಸ್ವಾರ್ಥವಾಗಿ ಸಂಭ್ರಮಿಸುವವನು 'ಗುರು' ಶಿಷ್ಯನ ಗೆಲುವನ್ನು ನಿಸ್ವಾರ್ಥವಾಗಿ ಸಂಭ್ರಮಿಸುವವನು 'ಗುರು'

ಪಾರ್ಟ್ ಟೈಮ್ ಉದ್ಯೋಗವಾಗಿದೆ

ಪಾರ್ಟ್ ಟೈಮ್ ಉದ್ಯೋಗವಾಗಿದೆ

ಶಿಕ್ಷಕರಾದವರ ಜೀವನ ತೆರೆದ ಪುಸ್ತಕದಂತೆ ಇರಬೇಕು, ಅವರು ಸಮಾಜಕ್ಕೆ ಮಾದರಿಯಾಗಿರಬೇಕು ಎಂಬೆಲ್ಲಾ ಮಾತುಗಳು ಇಂದು ಅಪ್ರಸ್ತುತವಾಗುತ್ತಿವೆ. ಶಿಕ್ಷಕ ವೃತ್ತಿ ಎಂಬುದು ಕೇವಲ 6-8 ತಾಸಿನ ಒಂದು ಪಾರ್ಟ್ ಟೈಮ್ ಉದ್ಯೋಗದಂತೆ ಆಗಿರುವುದು. ಊಳಿದ ಸಮಯದಲ್ಲಿ ಗಣಿಗಾರಿಕೆ, ರಿಯಲ್ ಎಸ್ಟೇಟ್ ದಂಧೆ, ಗುತ್ತಿಗೆ ಕೆಲಸ, ಮರ ಕಡಿಯುವುದು ಇಂತಹ ಕಾರ್ಯಗಳಲ್ಲಿ ಕೆಲವೊಂದು ಶಿಕ್ಷಕರು ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಭಾಗಿಯಾಗಿರುವುದು ಹುದ್ದೆಯ ಗೌರವ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.

ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ

ಶಿಕ್ಷಕರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ

ಶಿಕ್ಷಕರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ

ಹಿಂದಿನ ದಿನಕ್ಕೆ ಹೋಲಿಸಿದರೆ ಇಂದು ಶಿಕ್ಷಕರಿಗೆ ಉತ್ತಮವಾಗಿ ವೇತನ ಸಿಗುತ್ತಿದೆ. ಈ ಕಾರಣದಿಂದಲೇ ಎಲ್ಲರೂ ಉತ್ತಮ ಗುಣಮಟ್ಟದ ಜೀವನ ಶೈಲಿಯ ಹೆಸರಿನಲ್ಲಿ ಪಟ್ಟಣಗಳಲ್ಲಿ ಇರಲು ಬಯಸುವುದು ಸ್ವಾಭಾವಿಕವಾಗಿದೆ. ಅದೇ ರೀತಿ ಶಿಕ್ಷಣದ ಗುಣಮಟ್ಟದ ವಿಚಾರವಾಗಿದೆ. ಆಧುನಿಕತೆ ಕಡೆಗೆ ಓಡುತ್ತಿರುವ ಸಮಾಜದಂತೆ ಶಿಕ್ಷಕರು ಸಹಾ ತಮ್ಮ ಮಕ್ಕಳನ್ನು ಬೇರೆ ಮಾಧ್ಯಮ (ಇಂಗ್ಲಿಷ್), ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾ ಇದ್ದಾರೆ. ಈ ವರ್ತನೆ ಸಹಜವಾಗಿ ಸಮಾಜ ಶಿಕ್ಷಕರ ಬಗ್ಗೆ ನಕಾರಾತ್ಮಕವಾಗಿ ಚಿಂತಿಸುವಂತೆ ಮಾಡಿದೆ.

ಶಿಕ್ಷಕರ ದಿನ: ಗುರುನಮನ ಸಲ್ಲಿಸಿದ ಟ್ವಿಟ್ಟಿಗರು ಶಿಕ್ಷಕರ ದಿನ: ಗುರುನಮನ ಸಲ್ಲಿಸಿದ ಟ್ವಿಟ್ಟಿಗರು

ವೇತನ, ರಜಾ, ವರ್ಗಾವಣೆಯದ್ದೇ ಚರ್ಚೆ

ವೇತನ, ರಜಾ, ವರ್ಗಾವಣೆಯದ್ದೇ ಚರ್ಚೆ

ಇಂದು ಹತ್ತಾರು ಶಿಕ್ಷಕರು ಸೇರುವ ಬಸ್ ನಿಲ್ದಾಣವಾಗಲಿ, ಪ್ರಯಾಣಿಸುವ ಯಾವುದೇ ವಾಹನವಾಗಲಿ, ಟ್ರೇನಾಗಲಿ, ಒಂದು ಕಡೆ ಸೇರುವ ಹೋಟೆಲಿನಲ್ಲಾಗಲಿ, ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳವಾಗಲಿ ಎಲ್ಲಾ ಕಡೆಗಳಲ್ಲಿಯೂ ಸಾರ್ವಜನಿಕರು ಎಲ್ಲರಂತೆ ಶಿಕ್ಷಕರನ್ನು ಗಮನಿಸುತ್ತಾ ಇರುತ್ತಾರೆ. ಆದರೆ ಬಹುತೇಕ ಎಲ್ಲ ಕಡೆಯೂ ಚಚೆ೯ ಒಂದೇ ರೀತಿಯದಾಗಿರುತ್ತದೆ. ಮಕ್ಕಳ ಕಲಿಕೆ, ಶಿಕ್ಷಣದ ಗುಣಮಟ್ಟ, ತರಬೇತಿ ಈ ಬಗ್ಗೆ ಅತಿ ಕಡಿಮೆ ಶಿಕ್ಷಕರು ಮಾತನಾಡುತ್ತಾ ಇರುತ್ತಾರೆ. ಹೆಚ್ಚಾಗಿ ವೇತನ, ರಜಾ, ಟ್ರಾನ್ಸ್ಪರ್, ಬಡ್ತಿ, ಸಿಗುವ ಇತರೇ ಸೌಲಭ್ಯ ಇವುಗಳ ಬಗ್ಗೆಯೇ ಹೆಚ್ಚಿನ ಚಚೆ೯ ಇರುವುದು. ಈ ಕಾರಣಕ್ಕಾಗಿ ಸಹಾ ದಿನೇ ದಿನೇ ಶಿಕ್ಷಕ ಹುದ್ದೆಯ ಗೌರವ ಕುಸಿಯುತ್ತಿರುವುದನ್ನು ಕಾಣಬಹುದಾಗಿದೆ.

ಕಡಿಮೆಯಾಗುತ್ತಿರುವ ಶಿಕ್ಷಕರ ಕಾರ್ಯದಕ್ಷತೆ

ಕಡಿಮೆಯಾಗುತ್ತಿರುವ ಶಿಕ್ಷಕರ ಕಾರ್ಯದಕ್ಷತೆ

ಕಾರ್ಯನಿರತ ಶಿಕ್ಷಕರ ತರಬೇತಿಯನ್ನು ಕಾಲ ಕಾಲಕ್ಕೆ ಮಾಡುವ ಹೊಣೆಯನ್ನು ಹೊತ್ತಿರುವ ಡಯೆಟ್ಗಳನ್ನು ಯಾವ ಶಿಕ್ಷಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ಆಡಳಿತಾತ್ಮಕ ಅಧಿಕಾರ ಕೇಂದ್ರಿಕೃತವಾಗಿರುವ ಡಿಡಿಪಿಐ ಕಾರ್ಯಲಯ ಮತ್ತು ತಾಲ್ಲೂಕಿನಲ್ಲಿ ಬಿಇಓ ಕಛೇರಿ ಇವುಗಳು ಮಾತ್ರ ಸದಾಕಾಲ ಚಟುವಟಿಕೆಯಿಂದ ಕೂಡಿರುವುದು. ಗುಣಮಟ್ಟದ ಶಿಕ್ಷಣ, ಶಿಕ್ಷಕರ ಕಾರ್ಯದಕ್ಷತೆ ಹೆಚ್ಚಿಸುವುದು, ಇತರೆ ತರಬೇತಿಗಳ ಜವಾಬ್ದಾರಿ ಇರುವ ಡಯೆಟ್ಗಳು ಹಾಗೂ ಹೀಗೂ ಮಾಡಿ ಪ್ರತಿ ವರ್ಷದ ತಮ್ಮ ಟಾರ್ಗೆಟನ್ನು ಮುಗಿಸುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಶಿಕ್ಷಕ ವೃತ್ತಿಯ ಗೌರವವನ್ನು ಹೆಚ್ಚಿಸುವ ರೀತಿ ಕಾರ್ಯನಿರ್ವಹಿಸಬೇಕಾದ ಡಯೆಟ್ ಅಧಿಕಾರದ ಮಿತಿಯಿಂದ ನಿಸ್ತೇಜವಾಗಿದೆ. ಸಾರ್ವಜನಿಕರಿಗೆ ಡಯೆಟ್ ಮತ್ತು ಅದರ ಕಾರ್ಯಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಎಷ್ಟು ಉಪಯುಕ್ತ ಎಂಬುದರ ಬಗ್ಗೆ ಕಡಿಮೆ ಮಾಹಿತಿ ಇರುತ್ತದೆ.

ಇಲಾಖೆಯ ಪೋಸ್ಟ್ ಮ್ಯಾನ್ ನಂತಾಗಿದ್ದಾರೆ

ಇಲಾಖೆಯ ಪೋಸ್ಟ್ ಮ್ಯಾನ್ ನಂತಾಗಿದ್ದಾರೆ

ಶಿಕ್ಷಣ ಇಲಾಖೆಯು ಸೃಷ್ಟಿಸುವ ಸಿ.ಆರ್.ಪಿ (ಕ್ಲಸ್ಟರ್ ರಿಸೋರ್ಸ್ ಪರ್ಸನ್) ಗುಚ್ಚ ಸಂಪನ್ಮೂಲ ವ್ಯಕ್ತಿ ಹುದ್ದೆಯ ಮುಖ್ಯ ಕಾರ್ಯವೇ ಶಿಕ್ಷಕರಿಗೆ ಕಲಿಕಾ ಕಾರ್ಯಕ್ಕೆ ಬೆಂಬಲ ನೀಡುವುದಾಗಿರುವುದು. ಅಂದರೆ ಶಿಕ್ಷಕರ ತರಗತಿಯನ್ನು ಅವಲೋಕಿಸಿ ಅಗತ್ಯ ಸಹಕಾರ ನೀಡುವುದು ಆಗಿರುವುದು. ಆಮೂಲಕ ಗುಣಮಟ್ಟದ ಕಲಿಕೆಯನ್ನು ಖಾತ್ರಿ ಪಡಿಸುವ ಜವಾಬ್ದಾರಿಯೂ ಅವರದ್ದಾಗಿರುತ್ತದೆ. ಆದರೆ ದುರಾದೃಷ್ಟವಶಾತ್ ಸಿ.ಆರ್.ಪಿ ಆದವರು ಇಂದು ಇಲಾಖೆಯ ಪೋಸ್ಟ್ ಮ್ಯಾನ್ ಅಥವಾ ಕಛೇರಿ ಸಹಾಯಕರಾಗಿ, ಟೈಪಿಂಗ್ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿರುವುದು.

ಶಿಕ್ಷಕರಿಗೇ ಬೇಕಾಗಿದೆ ಗುಣಮಟ್ಟದ ಶಿಕ್ಷಣ

ಶಿಕ್ಷಕರಿಗೇ ಬೇಕಾಗಿದೆ ಗುಣಮಟ್ಟದ ಶಿಕ್ಷಣ

ಶಿಕ್ಷಕ ಸಂಘಟನೆಗಳು ಮುಖ್ಯವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಸುತ್ತಿವೆ. ಆದರೆ ಹುದ್ದೆಯ ಗೌರವವನ್ನು ಉಳಿಸಿಕೊಳ್ಳುವುದು, ಜೊತೆಗೆ ಸಮುದಾಯದೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೆಚ್ಚಿಸಿಕೊಳ್ಳುವುದರಲ್ಲಿ, ಶಿಕ್ಷಣದ ಗುಣಮಟ್ಟದ ಬಗ್ಗೆ ಶಿಕ್ಷಕರ ತರಬೇತಿಯ ಬಗ್ಗೆ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಇಂದಿನ ಶಿಕ್ಷಕರಿಗೇ ಬೇಕಾಗಿದೆ ಗುಣಮಟ್ಟದ ಶಿಕ್ಷಣ. ಪ್ರಮುಖವಾಗಿ ಸಂಘಟನೆಯ ಪದಾಧಿಕಾರಿಗಳು ಬಿಇಓ ಕಛೇರಿಯಲ್ಲಿ ಅಧಿಕಾರಿಗಳ ಹಿಂದೆ ಸುತ್ತುತ್ತಾ ಇರುವರು. ಈ ವರ್ತನೆ ಸಂಪೂರ್ಣ ಶಿಕ್ಷಕ ಸಮುದಾಯದ ಬಗ್ಗೆಯೇ ವಿಶ್ವಾಸವನ್ನು ಕಡಿಮೆಗೊಳಿಸುತ್ತಾ ಇರುತ್ತದೆ.

ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗಲು ಇವೇ ಕಾರಣಗಳು

ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗಲು ಇವೇ ಕಾರಣಗಳು

ಶಿಕ್ಷಣದಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಒತ್ತುಕೊಟ್ಟು ಶಾಲಾ ಅಭಿವೃದ್ಧಿ ಮತ್ತು ಮೇಲ್ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿರುವುದು. ಸಮಿತಿಯ ಉದ್ದೇಶ ಅತಿ ಉತ್ತಮವಾದದ್ದಾಗಿರುತ್ತದೆ. ಕೆಲವೊಂದು ಕಡೆ ಈ ಸಮಿತಿಗಳ ಕಾರಣದಿಂದಲೇ ಅತಿ ಉತ್ತಮವಾದ ರೀತಿಯಲ್ಲಿ ಶಾಲಾಭಿವೃದ್ಧಿ ಕಾರ್ಯಗಳು ನಡೆಯುತ್ತಿರುತ್ತದೆ. ಆದರೆ ಕೆಲವೊಂದು ಸಮಿತಿಗಳು ಕೇವಲ ಉಸ್ತುವಾರಿಯನ್ನು ಮಾತ್ರ ಮಾಡಿದರೆ, ಇನ್ನೂ ಕೆಲವೊಂದು ಸಮಿತಿಗಳು ಕೇವಲ ನಾಮಕಾವಸ್ತೆಗೆ ಮಾತ್ರ ಸಮಿತಿಯಾಗಿರುವುದು. ಇಂತಹ ಸಮಿತಿಗಳಿಂದ ಸಹಾ ಶಿಕ್ಷಕ ಹುದ್ದೆಯ ಗೌರವ ಕಡಿಮೆಯಾಗುತ್ತಿರುವುದು.

ಈ ಎಲ್ಲಾ ಕಾರಣಗಳನ್ನು ನಾವು ಶಿಕ್ಷಕ ಹುದ್ದೆಯ ಗೌರವ ಕಡಿಮೆಯಾಗಲು ಎಂದು ಭಾವಿಸಬಹುದು. ಆದರೆ ಮುಖ್ಯವಾಗಿ ನಾನು ಬದಲಾಗುತ್ತೇನೆ ಆ ಮೂಲಕ ಸಮಾಜವನ್ನು ಬದಲು ಮಾಡುತ್ತೇನೆ ಎಂಬ ಭಾವನೆ ನಮ್ಮಲ್ಲಿ ಬರಬೇಕಾಗಿದೆ.

ಒಟ್ಟಾರೆ ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂತೆ ಆಧುನಿಕ ಶಿಕ್ಷಕರ ಕಾರ್ಯ ವೈಖರಿಯೂ ಬದಲಾಗಿದೆ. ಕಾನೂನು ನೀತಿ ನಿಯಮದಿಂದ ಗೌರವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಕಾರ್ಯನಿರ್ವಹಿಸುವ ಶಾಲಾ ವ್ಯಾಪ್ತಿಯ ಜನತೆ ಮತ್ತು ಫಲಾನುಭವಿ ಮಕ್ಕಳೊಂದಿಗೆ ಉತ್ತಮ ಸಂಬಂಧ, ತಾಳ್ಮೆ, ನೈತಿಕತೆ, ಕೆಲಸದ ಬಗ್ಗೆ ತುಡಿತ, ಕಲಿಯುವ ಹಂಬಲ ಇರುವ ಶಿಕ್ಷಕರು ಇಂದಿಗೂ ಸಹಾ ಆದರ್ಶ ವ್ಯಕ್ತಿಗಳಾಗಿರುವರು. ಈ ಸಂಖ್ಯೆ ಕಡಿಮೆ ಇರಬಹುದು. ಆದರೆ ಇದನ್ನು ಹೆಚ್ಚು ಮಾಡುವ ಎಲ್ಲಾ ಸಾಧ್ಯತೆಗಳು ನಮ್ಮ ಕೈಯಲ್ಲಿಯೇ ಇರುವುದು.

English summary
Teachers Day Special : Why the value of teacher is coming down? Analysis by Vivek Betkuli, Kumata, Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X